ಭಕ್ತರು ಕರೆದರೆ ಓಡಿ ಬರುವ ದಿನ ಕೃಷ್ಣ ಜನ್ಮಾಷ್ಟಮಿ. ನಾಡಿನ ಸಮಸ್ತ ಜನತೆಗೂ ಕೃಷ್ಣಾಷ್ಟಮಿ ಶುಭಾಶಯಗಳು – ರಾಘವೇಂದ್ರ ಪಿ ಅಪರಂಜಿ , ತಪ್ಪದೆ ಓದಿ …
ಕೃಷ್ಣನ ಕಥೆಗಳನ್ನು ಕೇಳುತ್ತಾ ಹೋದಂತೆ ಕಣ್ಣ ಮುಂದೆ ಮಹಾಭಾರತ ನಡೆಯುತ್ತಿದೆ ಏನೋ ಎಂಬಂತೆ ಭಾಸವಾಗುತ್ತದೆ. ಕೃಷ್ಣನ ಬಾಲ ಲೀಲೆ, ಆತನ ರಾಜಕೀಯ ಚತುರತೆ, ಆತನ ನಿಷ್ಕಲ್ಮಶ ಪ್ರೀತಿ, ಹೋರಾಟದ ತಂತ್ರಗಳು, ಮುಂದಾಲೋಚನೆ ತಿಳಿಯುತ್ತಾ ಹೋದಂತೆ ಆತ ನಮಗೆ ಇನ್ನು ಹತ್ತಿರವಾಗುತ್ತಾ ಹೋಗುತ್ತಾನೆ.
ಪಾಂಡವರ ವಿಜಯಕ್ಕೆ ಕಾರಣನಾದ, ಕೌರವರ ಅಧರ್ಮಕ್ಕೆ ಪಾಠ ಕಲಿಸಿದ, ನಂಬಿಕೆಗೆ ಇನ್ನೊಂದು ಹೆಸರೆ ಕೃಷ್ಣ ಎನ್ನುವುದನ್ನು ತೋರಿಸಿಕೊಟ್ಟ ಭೂಮಿಗೆ ಬಂದ ಭಗವಂತನೀತ ಎನ್ನುವುದು ಭಕ್ತರಿಗೆ ಮಾತ್ರ ಅನುಭವಕ್ಕೆ ಬರಬಲ್ಲದು ಎಂದು ಹೇಳಬಹುದು. ಹೀಗೆ ಕೃಷ್ಣನ ಬಗ್ಗೆ ಓದುತ್ತಾ ಹೋದಾಗ ಒಂದು ಪ್ರಸಂಗ ಮನಮುಟ್ಟಿಬಿಟ್ಟತು.
ರಾಘವೇಂದ್ರ ಪಿ ಅಪರಂಜಿ ಅವರ ಮಗಳು ಕೃಷ್ಟನ ವೇಷ ಧರಿಸಿದ ವಾರುಣಿ ಅಪರಂಜಿ
ಮಹಾಭಾರತದ ಯುದ್ಧವೆಲ್ಲ ಮುಗಿದ ಮೇಲೆ ಯುಧಿಷ್ಠಿರ ಪೂಜೆಯೊಂದನ್ನು ಹಮ್ಮಿಕೊಂಡಿರತ್ತಾನೆ. ಮರುದಿನ ಕೃಷ್ಣನೊಂದಿಗೆ ಕುಳಿತು ಊಟ ಮಾಡಬೇಕು ಎಂದು ಯೋಚಿಸಿ ಹಸ್ತಿನಾವತಿಗೆ ಕೃಷ್ಣನನ್ನು ಕರೆದುಕೊಂಡು ಬರಲು ತಿಳಿಸುತ್ತಾನೆ. ಆದರೆ ಆಗಿನ ಕಾಲದಲ್ಲಿ ಹಸ್ತಿನಾವತಿಯಿಂದ ದ್ವಾರಕೆಗೆ ಕುದುರೆ ತೆಗೆದುಕೊಂಡು ಹೋದರೂ ಕನಿಷ್ಠ ಎಂಟುದಿನ ಬೇಕಾಗಿರುತ್ತದೆ. ಹೀಗಾಗಿ ಯಾರೂ ಕೂಡಾ ಇದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ. ಆದರೆ ಭೀಮ ತಾನು ಕರೆದುಕೊಂಡು ಬರುವುದಾಗಿ ಹೇಳುತ್ತಾನೆ. ಎಲ್ಲರಿಗೂ ಆಶ್ಚರ್ಯ ವಾಗುತ್ತದೆ. ಒಂದೇ ದಿನದಲ್ಲಿ ಈತ ಹೇಗೆ ಕೃಷ್ಣನನ್ನು ಕರೆತರತಾನೆ ಅಂತ. ಅಂದು ರಾತ್ರಿಯಾಗುತ್ತೆ. ಯುಧಿಷ್ಠಿರನಿಗೆ ತಳಮಳ, ನಾಳೆ ಕೃಷ್ಣ ಬರತಾನೋ ಇಲ್ಲೋ ಎನ್ನುವ ಆತಂಕ. ಭೀಮ ಕೃಷ್ಣನನ್ನು ಕರೆಯಲು ಹೋಗಿದ್ದಾನೆಯೇ ನೋಡಿಕೊಂಡು ಬನ್ನಿ ಎಂದು ದ್ವಾರಪಾಲಕರಿಗೆ ಹೇಳಿ ಕಳಸ್ತಾನೆ. ದ್ವಾರಪಾಲಕರು ಭೀಮನ ಕೋಣೆಗೆ ಹೋಗಿ ನೋಡಿದ್ರೆ ಆತ ಗಡದ್ದಾಗಿ ನಿದ್ದೆ ಮಾಡತಿರತಾನೆ. ಈ ವಿಷಯ ತಿಳಿದ ಯುಧಿಷ್ಟರ ನಾಳೆ ಕೃಷ್ಣನ ಜತೆ ತನ್ನ ಊಟ ಅಸಾಧ್ಯ ಅಂತ ಭಾವಿಸ್ತಾನೆ. ಮರುದಿನ ಬೆಳಗ್ಗೆ ಸ್ನಾನ, ಪೂಜೆ ಆದ ಮೇಲೆ ಊಟದ ಸಮಯವಾಗತದ. ಆಗ ಯುಧಿಷ್ಠಿರ ಭೀಮನ ಕಡೆ ನೋಡತಾನೆ. ಭೀಮ ತನ್ನ ಕೈಯಲ್ಲಿದ್ದ ಗದೆಯನ್ನು ಮೇಲಕ್ಕೆಸೆದು, ನಾನು ನಿನ್ನ ಭಕ್ತ, ನೀನೇ ನನ್ನ ರಕ್ಷಣೆ ಮಾಡಬೇಕು ಅಂತ ತಲೆ ಬಾಗಿಸ್ತಾನೆ. ಮೇಲಕ್ಕೆ ಹೋದ ಗದೆ ಕೆಳಗೆ ಬೀಳುವುದರೊಳಗೆ ಕೃಷ್ಣ ಪ್ರತ್ಯಕ್ಷ ನಾಗಿ ಅದನ್ನು ತಡೆಯುತ್ತಾನೆ. ಕೃಷ್ಣನನ್ನು ಕಂಡ ಯುಧಿಷ್ಠಿರ ಸಂತುಷ್ಟನಾಗುತ್ತಾನೆ.
- ರಾಘವೇಂದ್ರ ಪಿ ಅಪರಂಜಿ