ಅರ್ಜುನನಿಗೆ ಬೋಧಿಸಿದ ಗೀತೆಯಲ್ಲಿ ಆತ್ಮಸಾಕ್ಷಾತ್ಕಾರಗೊಳಿಸಲು ಪ್ರತಿಯೊಬ್ಬರಿಗೂ ಜ್ಞಾನ, ಭಕ್ತಿ, ಕರ್ಮ ಮಾರ್ಗಗಳನ್ನು ತಿಳಿಸಿ ನಿಮ್ಮ ಶಕ್ತಿ ಸಾಮರ್ಥ್ಯಗಳಿಗನುಗುಣವಾಗಿ, ಯಾವುದು ಸಾಧ್ಯವೂ ಅದೇ ಮಾರ್ಗ ಹಿಡಿಯಿರಿ ಎಂದಿರುವ ಕೃಷ್ಣ. ಶ್ರೀಕೃಷ್ಣನ ಕುರಿತು ಸೌಮ್ಯ ಸನತ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…
ಶ್ರೀಮನ್ನಾರಾಯಣನ ಒಂಬತ್ತನೇ ಅವತಾರ ಶ್ರೀ ಕೃಷ್ಣಾವತಾರ. ಮನುಷ್ಯ ರೂಪದಲ್ಲಿ ಅವತರಿಸಿ ಎಲ್ಲರಂತೆ ತಾನೂ ಮನುಷ್ಯನಂತೆಯೇ ವರ್ತಿಸಿ “ಪುರುಷೋತ್ತಮ” ಎನಿಸಿಕೊಂಡವನು ಈತ. “ಕೃಷ್ಣಃ (ಆ)ಕರ್ಷಣಂ ಕರೋತಿ ಇತಿಃ” ಅರ್ಥಾತ್ ಆಕರ್ಷಿಸುವನು. ಕರ್ಷತಿ ಆಕರ್ಷತಿ ಇತಿಃ ಕೃಷ್ಣಃ. ಯಾರು ಸೆಳೆಯುತ್ತಾನೋ, ಆಕರ್ಷಿಸಿಕೊಳ್ಳುತ್ತಾನೆಯೋ ಅವನೇ “ಕೃಷ್ಣ “. ಶ್ರೀಕೃಷ್ಣ ಜನನ ಅಷ್ಟಮಿ ದಿನವಾದ ಹಿನ್ನೆಲೆಯಲ್ಲಿ ಸಂಖ್ಯಾ ಶಾಸ್ತ್ರದಲ್ಲಿ ಅಷ್ಟಮಿ ಎಂಟರ ಸಂಖ್ಯೆ ಕ್ರಾಂತಿಕಾರಿ ಎನಿಸಿದೆ. ಏಕೆಂದರೆ ಕೃಷ್ಣನ ಜೀವನವು ಒಂದು ಕ್ರಾಂತಿಪರ್ವ.
ಶ್ರೀಮುಖನಾಮ ಸಂವತ್ಸರದ ದಕ್ಷಿಣಾಯನ ವಸಂತ ಋತು ಶ್ರಾವಣ ಬಹುಳ ಅಷ್ಟಮಿ, ರೋಹಿಣಿ ನಕ್ಷತ್ರ ನಾಲ್ಕನೇ ಪಾದ ಬುಧವಾರ ಮಧ್ಯರಾತ್ರಿ ಸಮಯದಲ್ಲಿ ವಸುದೇವ ದೇವಕಿಯರ ಗರ್ಭದಲ್ಲಿ ಶ್ರೀ ಕೃಷ್ಣನ ಜನನವಾಯಿತು ಎಂಬುದಾಗಿ ಬ್ರಹ್ಮ ಮಹಾಪುರಾಣದಲ್ಲಿದೆ. ಶ್ರೀ ಕೃಷ್ಣನ ಬಾಲ್ಯ ನಂದನಹಳ್ಳಿಯಲ್ಲಿ ಕೆಲ ಕಾಲ ಕಳೆಯಿತು. ಆಗಲೇ, ತನಗೆ ವಿಷಪೂರಿತ ಹಾಲು ಕುಡಿಸಲು ಯತ್ನಿಸಿದ ಎಂಬ ಕಾರಣದಿಂದ ಪೂತನಿಯೆಂಬ ರಾಕ್ಷಸಿಯನ್ನು, ಜನರಿಗೆ ಹಿಂಸೆ ಕೊಟ್ಟ ಶಕಟಾಸುರ, ತೃಣಾವರ್ತನನೆಂಬ ರಾಕ್ಷಸರನ್ನು ಶ್ರೀ ಕೃಷ್ಣ ಸಂಹರಿಸಿದನು. ನಂತರದಲ್ಲಿ ಶ್ರೀ ಕೃಷ್ಣ ಬೃಂದಾವನದಲ್ಲಿ ನೆಲೆಸಿದಾಗ, ಗೊಲ್ಲರ ಮನೆಗಳ ಹಾಲು, ಮೊಸರು, ಬೆಣ್ಣೆಗಳನ್ನು ತನ್ನ ಗೆಳೆಯರೊಂದಿಗೆ ಸವಿದು, ಆ ದೋಷಣೆಯನ್ನು ಗೋಪಿಯರ ಮೇಲೆ ಹೊರೆಸಿದ್ದು, ಗೋವುಗಳಿಗೆ ಕಾಟ ಕೊಡುತ್ತಿದ್ದ ಕಾಳಿಂಗ ಸರ್ಪವನ್ನು ಯಮುನಾ ನದಿಯಲ್ಲಿ ಮರ್ಧಿಸಿದ್ದು, ತನ್ನವರನ್ನು ರಕ್ಷಿಸಲು ಗೋವರ್ಧನಗಿರಿಯನ್ನು ಎತ್ತಿ ಹಿಡಿದಿದ್ದು, ಕುಬ್ಜೆಯ ಆಥಿತ್ಯ ಸ್ವೀಕರಿಸಿ ಆಕೆಯನ್ನು ಅನುಗ್ರಹಿಸಿದ್ದು, ಜನರಿಗೆ ಹಿಂಸೆ ಕೊಟ್ಟ ಕುವಲಾಯಪಿ ಎಂಬ ಆನೆಯನ್ನು ಸಂಹರಿಸಿದ್ದು, ಮಲ್ಲ ಚಾಣಾಕ್ಷ ಎಂಬ ವೀರರನ್ನು ಕುಸ್ತಿಯಲ್ಲಿ ಸೋಲಿಸಿ ಅವರ ಅಹಂಕಾರ ಅಡಗಿಸಿದ್ದು, ಮುಂತಾದವುಗಳು ಕೃಷ್ಣನ ಬಾಲ್ಯದ ಲೀಲಾ ವಿನೋದಿಗಳಲ್ಲಿ ಕೆಲವಾಗಿವೆ. ತನಗೆ ಮಾವನಾದರೂ ಇವನು ಸೋದರಳಿಯೆನೆಂಬ ವಿಶ್ವಾಸವಿಡದೆ ಜನನ ಕಾಲದಲ್ಲಿ ಕೊಲ್ಲತ್ನಿಸಿದ ದುಷ್ಟ ಸಹೋದರ ಮಾವ ಕಂಸನನ್ನು ಕೃಷ್ಣನು ಸಂಹರಿಸಿ ತಾತ ಉಗ್ರಸೇನರಾಯನಿಗೆ ರಾಜ್ಯಭಾರ ವಹಿಸಿದ್ದು ಇತ್ಯಾದಿಗಳು ಕೃಷ್ಣನ ವೀರಗಾಥೆಗಳಲ್ಲಿ ಕೆಲವಾಗಿದೆ.
ಮುಂದೆ ಕೃಷ್ಣನು ಸಾಂದೀಪ ಮುನಿಯ ಬಳಿ ಸೇರಿ ವೇದಾದ್ಯಯನ ಧನುರ್ ವೇದ ರಾಜ ನೀತಿಗಳನ್ನು ಕಲಿತು ಗುರುದಕ್ಷಿಣೆಯಾಗಿ ಗುರುಪುತ್ರನನ್ನು ಬದುಕಿಸಿದನು. ಸದಾ ಪ್ರಜಾಕಂಟಕನಾಗಿ ದುಷ್ಟಶಕ್ತಿ ಗಳಿಗಾಗಿ, ಕೃಷ್ಣನನ್ನು ದೂಷಿಸುತ್ತಿದ್ದ ಶಿಶುಪಾಲ ಜರಾಸಂಧನನ್ನು ವಧಿಸಿದನು. ಕೃಷ್ಣನ ವಿವಾಹಕ್ಕೆ ಸಂಬಂಧಪಟ್ಟಂತೆ ತಿಳಿದುಬರುವ ವಿಷಯಗಳೆಂದರೆ ರುಕ್ಮಿಣಿಯೊಡನೆ ಕಲ್ಯಾಣ, ಸ್ಯಮಂತಕ ಮಣಿಯನ್ನು ಪಡೆಯುವ ಪ್ರಯತ್ನದಲ್ಲಿ ಜಾಂಬುವಂತನ ಮಗಳು ಜಾಂಬವತಿಯೊಡನೆ ವಿವಾಹ, ಸ್ಯಮಂತಕಮಣಿಯನ್ನು ಸತ್ರಾಜಿತನಿಗೆ ಹಿಂದಿರುಗಿಸಿ ಆತನ ಮಗಳು ಸತ್ಯಭಾಮೆಯೊಡನೆ ವಿವಾಹ, ನರಕಾಸುರನನ್ನು ಸಂಹರಿಸಿ ಅವನು ಬಂಧನದಲ್ಲಿಟ್ಟಿದ್ಧ ಹಲವಾರು ಕನ್ಯೆಯರನ್ನು ವರಿಸಿದ್ದು, ಹೀಗೆ, ಹಲವಾರು ಪುರಾಣ ಕಥೆಗಳು ಕೇಳಿಬರುತ್ತವೆ.
ಫೋಟೋ ಕೃಪೆ : google
ಶ್ರೀಕೃಷ್ಣನ ಪ್ರತಿ ನಡೆ, ನುಡಿ, ಲೀಲೆಯಲ್ಲಿ, ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಜ್ಞಾನೋಪದೇಶ ನೀಡಿದ್ದಾನೆ ಎಂಬುದು ಆತನನ್ನು ಬಲು ಸೂಕ್ಷ್ಮವಾಗಿ ಜಾಗರೂಕತೆಯಿಂದ ಗಮನಿಸಿದಾಗ ತಿಳಿದು ಬರುತ್ತದೆ. “ಬಾಲ ಕೃಷ್ಣ ಮಣ್ಣು ತಿಂದ” ಎಂದು ಗೋಪಿಯರು ಯಶೋಧಯ ಬಳಿ ದೂರಿದಾಗ ಅದು ಸುಳ್ಳು ಎಂದು ತೋರಿಸಲು ಬಾಯಿ ತೆರೆದ, ತನ್ಮೂಲಕವಾಗಿ ಯಶೋದೆಯಾದಿಯಾಗಿ, ಎಲ್ಲರಿಗೂ ವಿಶ್ವ ರೂಪದರ್ಶನ ನೀಡಿ, ತಾನು ಸಾಮಾನ್ಯನಲ್ಲವೆಂಬುದನ್ನು ಅಂದೇ ತೋರ್ಪಡಿಸಿದನು.
ಮಹಾಭಾರತ ಯುದ್ಧ ಸಮಯದಲ್ಲಿ ಶ್ರೀ ಕೃಷ್ಣನ ಕೆಲವು ನಡೆ-ನುಡಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನಾ ಪಾಂಡವರ ಪಕ್ಷ ಸೇರಿದ್ದು ಕಂಡು ಆತ ಪಾಂಡವ ಪಕ್ಷಪಾತಿ ಎಂದಿನಿಸುತ್ತದೆ. ಪಾಂಡವರ ಪದ ಸತ್ಯ ಧರ್ಮದ ಪಥವಾಗಿತ್ತು. ಅಸತ್ಯ ಅಧರ್ಮ ವಿವೇಕಿತನ ದುರಾಸೆ ಅಹಂಕಾರಗಳಿಂದ ಕೂಡಿದ ಕೌರವರು ಪಾಂಡವರಂತ ಸಜ್ಜನರಿಗೆ ಕಿರುಕುಳ ಮೋಸ ನಾಶಕ್ಕೆ ಪ್ರಯತ್ನಿಸಿದ ಕಾರಣ ಕೌರವರೆಂಬ ದುರ್ಜನರನ್ನು ನಾಶ ಮಾಡಿ ಸಜ್ಜನರಿಗೆ ರಕ್ಷಣೆ ನೀಡಲು ಪಾಂಡವರ ಪಕ್ಷವಹಿಸಿ ಅರ್ಜುನನಿಗೆ ಸಾರಥಿಯಾದ, ಪಾರ್ಥಸಾರಥಿ ಎನಿಸಿಕೊಂಡನು.
ಎಲ್ಲಿ ಸತ್ಯ, ನ್ಯಾಯ, ಧರ್ಮಗಳಿವೆಯೋ ಅಲ್ಲಿ ನಾನಿರುವೆ ಎಂಬ ಕೃಷ್ಣನ ಮಾತಿನಂತೆ ಪಾಂಡವರ ಬಂಧು, ಸಲಹೆಗಾರ, ಆಪ್ತಮಿತ್ರ, ಸಖನಾಗಿ ಶಾಂತಿದೂತನಾಗಿ, ಸಮಯೋಚಿತ ಬುದ್ಧಿ ಮಾತುಗಳನ್ನು ಅರ್ಜುನನಿಗೆ ಉಪದೇಶಿಸಿ ಆತನಲ್ಲಿ ಕರ್ತವ್ಯ ಪ್ರಜ್ಞೆ ಮೂಡಿಸಿ ಕಾರ್ಯಯೋನ್ಮುಖನಾಗಿಸಿದ. “ಕರ್ಮಣ್ಯೇ ವಾದಿಕಾರಷ್ಟೇ ಮಾಫಲೇಶು ಕದಾಚನ” ನಾವು ಮಾಡುವ ಕೆಲಸಕ್ಕೆ ಫಲಾಫೇಕ್ಷೆ ಇಲ್ಲದೆ ಮಾಡುವ, ಅದು ಭಗವಂತನ ಪೂಜೆ ಎಂಬ ಬುದ್ಧಿಯಿಂದ ಮಾಡಿದರೆ ಕೆಲಸಕ್ಕೆ ತಕ್ಕ ಫಲ ಸಿಗುತ್ತದೆ ಎಂಬ ಪ್ರೋತ್ಸಾಹದ ನುಡಿಗಳಾಡಿದ. ಅರ್ಜುನನಿಗೆ ಗೀತೋಪದೇಶ ಮಾಡಿ “ಗೀತಾಚಾರ್ಯ ” ಎನಿಸಿಕೊಂಡ ಈ ಕೃಷ್ಣ.
ತಾಯಿಗೆ ಬಾಯಲ್ಲಿ ಬ್ರಹ್ಮಾಂಡವನ್ನು ತೋರಿದ ಮಾಯಾವಿ, ರಾಧೆಗೆ ಮೋಹದ ಮಾಧವ, ದ್ರೌಪದಿಗೆ ಸಖ, ಗೋಪಿಯರಿಗೆ ಸಖ, ಪ್ರಿಯತಮ ಪರಮಾತ್ಮನಾದ. ಅರ್ಜುನನಿಗೆ ಬೋಧಿಸಿದ ಗೀತೆಯಲ್ಲಿ ಆತ್ಮಸಾಕ್ಷಾತ್ಕಾರಗೊಳಿಸಲು ಪ್ರತಿಯೊಬ್ಬರಿಗೂ ಜ್ಞಾನ, ಭಕ್ತಿ, ಕರ್ಮ ಮಾರ್ಗಗಳನ್ನು ತಿಳಿಸಿ ನಿಮ್ಮ ಶಕ್ತಿ ಸಾಮರ್ಥ್ಯಗಳಿಗನುಗುಣವಾಗಿ, ಯಾವುದು ಸಾಧ್ಯವೂ ಅದೇ ಮಾರ್ಗ ಹಿಡಿಯಿರಿ ಎಂದಿರುವ ಕೃಷ್ಣ. ಮುರುಳಿಧರನಾಗಿ ಕೈಲಿ ಮುರಳಿ ಹಿಡಿದ ಈತ, ಮನುಷ್ಯನು ಕೊಳಲಿನಂತೆ ಟೊಳ್ಳಾಗಿರಬೇಕು, ಅರ್ಥಾತ್ ಅಹಂಕಾರ ರಹಿತನಾಗಿರಬೇಕು, ನಮ್ಮಿಂದ ಜ್ಞಾನವೆಂಬ ಸುಮಧುರ ರಾಗ ಹೊರಹೊಮ್ಮಬೇಕು ಎಂದು ತೋರಿಸಿದ್ದಾನೆ.
ಫೋಟೋ ಕೃಪೆ : google
ಹೆತ್ತ ಮಾತಾಪಿತರು ದೇವಕಿ ವಸು ದೇವರು, ಬೆಳೆದದ್ದು ನಂದ – ಯಶೋಧೆಯರಲ್ಲಿ. ಈ ಇಬ್ಬರಿಗೂ ಸರಿಸಮನಾದ ಪ್ರೀತಿ ವಿಶ್ವಾಸ ಗೌರವಗಳನ್ನು ಸಲ್ಲಿಸಿದ ಆದರ್ಶಪುತ್ರ . ಶ್ರೀಕೃಷ್ಣ ಸಕಲ ಯಾದವರಲ್ಲೂ ಬಂಧು ವರ್ಗದವರಲ್ಲೂ ಬಂಧು ಪ್ರೇಮ, ನಿಸ್ವಾರ್ಥ ಸತ್ಯ, ಧರ್ಮಗಳ ಪರವಾಗಿ ನಿಂತವನು. ಕೃಷ್ಣ ಎಂದೊಡನೇ ನಮ್ಮ ಕಣ್ಮುಂದೆ ಬಂದು ನಿಲ್ಲುವ ಚಿತ್ರವೆಂದರೆ ಯಶೋಧ ದೇವಿಯ ಸೊಂಟದಲ್ಲಿ ಕುಳಿತು ಆಕೆಯನ್ನು ತಬ್ಬಿ ಹಿಡಿದ ಸಂತಾನ ಗೋಪಾಲ. ಅಂಬೆಗಾಲಿನ ಕೃಷ್ಣ ಕಾಳಿಂಗನಾ ಹೆಡೆಯ ಮೇಲೆ ನಿಂತವ, ಗೋ ಸಂರಕ್ಷಣೆಗಾಗಿ ಗೋವರ್ಧನ ಪರ್ವತವನ್ನು ತನ್ನ ಕೈಯಿಂದ ಎತ್ತಿ ನಿಂತ ಗೋವರ್ಧನ ದಾರಿ, ರಾಧೆಯನ್ನು ಪಕ್ಕದಲ್ಲಿಟ್ಟುಕೊಂಡು ಮೋಹಕ ಮುರಳಿ ನುಡಿಸುವ ರಾಧಾಕೃಷ್ಣ, ರುಕ್ಮಿಣಿ ಸತ್ಯಭಾಮೆಯರ ನಡುವೆ ಮುರಳಿಯ ಪಿಡಿದು ನಿಂತ ಮುರುಳಿಧರ, ಹೀಗೆ ಹತ್ತು ಹಲವು ರೂಪ ಭಂಗಿಗಳಲ್ಲಿ ಈ ಕಾಣಿಸಿಕೊಳ್ಳುವ ಮೋಹಕ ಕೃಷ್ಣ. ಮಧುರೆಯಲ್ಲಿ ಒಬ್ಬ ಪ್ರಭುದ್ಧ ರಾಜಕಾರಣಿಯಾಗಿ ಸಮುದ್ರ ತಳದಲ್ಲಿ ಸುಂದರ ದ್ವಾರಕಾ ಪಟ್ಟಣ ನಿರ್ಮಿಸಿದ ಶ್ರೇಷ್ಠ ವಿಜ್ಞಾನಿಯಂತೆ ಕಂಡ. ಅವತಾರ ಪುರುಷನಾಗಿರುವ ಕೃಷ್ಣನನ್ನು ವಿಷ್ಣುವಿನಂತೆ ಪೂಜಿಸುವ ಪದ್ಧತಿ ನಮ್ಮಲ್ಲಿದೆ. ಶ್ರೀಕೃಷ್ಣನ ಕೈಯಲ್ಲಿ ಶಂಖ, ಚಕ್ರ, ಗಧಾ ಪದ್ಮಗಳೆಂಬ ನಾಲ್ಕು ಆಯುಧಗಳು ಕಂಡುಬರುತ್ತವೆ. ಈ ನಾಲ್ಕು ಆಯುಧಗಳು ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಪ್ರತಿನಿಧಿಸುತ್ತವೆ. ಚಕ್ರವು ಧರ್ಮವನ್ನು ಪ್ರತಿನಿಧಿಸಿ ಇದು ಕಾಲದ ಉರುಳಿವಿಕೆಯನ್ನು ತಿಳಿಸುತ್ತದೆ. ಇಲ್ಲಿ ಕಾಲವೆಂದರೆ ಬದುಕು ಸುಗಮವಾಗಿ ಜರುಗಬೇಕಾದ ಧರ್ಮ ಚಕ್ರ. ಬದುಕಿನಲ್ಲಿ ಧರ್ಮದ ನಡೆ ನುಡಿ ನಿರಂತರವಾಗಿರಬೇಕು ಎಂಬುದರ ಸಂಕೇತವನ್ನು ತಿಳಿಸುತ್ತದೆ ಈ ಚಕ್ರ. ಶಂಖ ಸಂಪತ್ತು ಅರ್ಥದ ಸಂಕೇತವಾಗಿದ್ದು ಲಕ್ಷ್ಮೀಯ ಸನ್ನಿಧಿ. ಗಧೆ ಕಾಮ ನಿಯಂತ್ರಣದ ಸಂಕೇತ. ಮುಂದಿನದು ಕಮಲ ಶಾಂತಿ, ಮೋಕ್ಷದ ಸಂಕೇತ. ಧರ್ಮ ಸಂಸ್ಥಾಪನೆಗಾಗಿ ಶ್ರೀಹರಿಯೇ ಮಾನವ ರೂಪದಲ್ಲಿ ಅವತರಿಸಿದ ಶ್ರೀ ಕೃಷ್ಣ ಪರಮಾತ್ಮನು ಜೀವ ಜಗತ್ತನ್ನು ಉದ್ದರಿಸಿದ. ಭಗವಂತನ ಸಾಕ್ಷಾತ್ಕಾರಕ್ಕೆ ಮಾರ್ಗ ತೋರಿಸಿದ ಕಾರಣ “ಶ್ರೀ ಕೃಷ್ಣಂ ವಂದೇ ಜಗದ್ಗುರುಂ” ಎಂದು ನಾವು ಆತನಿಗೆ ಶರಣಾಗಿ ತಲೆಬಾಗುತ್ತವೆ. ಈ ಪುಣ್ಯ ಮೂರ್ತಿಯನ್ನು ಶ್ರದ್ಧಾ ಭಕ್ತಿಗಳಿಂದ ಸ್ಮರಿಸುತ್ತೇವೆ. ಜಗತ್ತಿನ ಸಮಸ್ತ ಜೀವ ರಾಶಿಗಳಿಗೆ ಮಾರ್ಗದರ್ಶಕನಾಗಿ ಜೀವ ಜಗತ್ತಿನ ಉನ್ನತಿಗೆ, ಉದ್ದಾರಕ್ಕೆ, ಶ್ರೇಯಸ್ಸಿಗೆ ಮಾರ್ಗ ತೋರುವವನೇ ಗುರು, ಜಗದ್ಗುರು. ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಿದ ಮಹಾಮಹಿಮ.
“ಯದಾ ಯದಾಹಿ ಧರ್ಮಸ್ಯ” ಎಂಬ ಗೀತಾ ವಾಕ್ಯದಂತೆ ಶ್ರೀ ಕೃಷ್ಣನು ಭೂಲೋಕದಲ್ಲಿ ಮಾನವರೂಪಿಯಾಗಿ ಅವತರಿಸಿದ. ತನ್ನ ಒಂದೊಂದು ನಡೆಯ ಮೂಲಕವೂ ಒಂದೊಂದು ಸಂದೇಶವನ್ನು ಮನುಕುಲಕ್ಕೆ ನೀಡಿದ. ಈ ಸಂದೇಶಗಳ ಪರಾಕಾ ಪರಾಕಾಷ್ಟೆಯೇ ಭಗವದ್ಗೀತೆ. ಸಕಲಶಾಸ್ತ್ರ ಸಾರವೇ ಗೀತೆಯಾಯಿತು.
ಕೃಷ್ಣ ನಡೆದು ತೋರಿಸಿದ್ದನ್ನು ಗೀತೆಯಲ್ಲಿ ಹೇಳಿದ್ದಾನೆ ಗೀತೆಯಲ್ಲಿ ಹೇಳಿದ್ದನ್ನು ನಡೆದು ತೋರಿಸಿರುವ ಶ್ರೀ ಕೃಷ್ಣ ದೇವರ ದೇವ ದೇವದೇವೋತ್ತಮ.
ಶ್ರೀ ಕೃಷ್ಣ ಶರಣಂ ಮಮ
- ಸೌಮ್ಯ ಸನತ್