ನೆನಪು ಸಾವಿರಾರು…!
ಪ್ಯಾರೀಸಿನ ವಿಮಾನ ನಿಲ್ದಾನದಲ್ಲಿ ಲೇಡೀ ಪೋಲೀಸ ಇನಸ್ಪೆಕ್ಟರ್ ಕೇಳಿದ ಆ ಪ್ರಶ್ನೆ ನನ್ನ ಪಿತ್ತ ನೆತ್ತಿಗೇರಿಸಿತು. ಅವತ್ತು ನಾನು ಪ್ಯಾರೀಸಿನಲ್ಲಿ ಒಂದೂವರೆ ಗಂಟೆಗಳ ಕಾಲ ಅಕ್ಷರಶಃ ಪೋಲೀಸರ ಬಂಧಿಯಾಗಿದ್ದೆ.
‘ಪ್ಯಾರೀಸಿನಲ್ಲಿ ಒಂದು ಬೆಳಗು’ ಲೇಖನ – ಹೂಲಿ ಶೇಖರ್
ಬೆಳಗಿನ ಎಂಟು ಗಂಟೆಯ ಸಮಯ. ಹತ್ತು ಗಂಟೆಗಳ ದೀರ್ಘ ಪ್ರಯಾಣದ ನಂತರ ನಮ್ಮ ವಿಮಾನ ಇನ್ನೇನು ಪ್ಯಾರೀಸಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ‘ಡಿಗಾಲೆ’ ಯಲ್ಲಿ ಇಳಿಯಲಿತ್ತು. ಬೆಂಗಳೂರಲ್ಲಿ ನಾನು ಹತ್ತಿದ ‘ಏರ್ ಫ್ರಾನ್ಸ’ ಇನ್ನೇನು ತನ್ನ ಪ್ರಯಾಣ ಮುಗಿಸಲಿತ್ತು. ಆಗಲೇ ಒಂದಿಷ್ಟು ಪರಿಚಿತಳಾಗಿದ್ದ ಫ್ರೆಂಚ್ ಗಗನ ಸಖಿ ಫ್ರೆಶ್ ಆಗಲು ಸುವಾಸನೆ ಭರಿತ ಹಸಿಯಾದ ಟಿಶ್ಯೂ ಪೇಪರನ್ನು ಮುಖಕ್ಕೆ ಒರೆಸಿಕೊಳ್ಳಲು ಕೊಟ್ಟಳು. ನಾನು ವಿಮಾನದ ಕಿಟಿಕಿಯಲ್ಲಿ ತಲೆಯಿಟ್ಟು ನೋಡಿದೆ. ಕೆಳಗೆ ಪ್ಯಾರೀಸ ನಗರ ವಿಶಾಲವಾಗಿ ಹರಡಿಕೊಂಡು ತನ್ನ ಅಗಾಧತೆಯನ್ನು ತೋರಿಸಿತು. ಫ್ರಾನ್ಸನ್ನು ಆಳಿದ ಚಕ್ರವರ್ತಿ ‘ನೆಪೋಲಿಯನ್’, ಆಧುನಿಕ ಫ್ರಾನ್ಸಿನ ಅಧ್ಯಕ್ಷನಾಗಿ ದೀರ್ಘಕಾಲ ಆಳಿದ ‘ ಡಿಗಾಲೆ’, ಇಲ್ಲಿನ ಸುರಂಗ ಮಾರ್ಗದಲ್ಲಿ ಕಾರು ಅಪಘಾತದಲ್ಲಿ ಸತ್ತುಹೋದ ಮಹಾನ್ ಸುಂದರಿ ಇಂಗ್ಲೆಂಡಿನ ರಾಜಕುಮಾರ ಚಾರ್ಲ್ಸನ ಪ್ರಿಯ ಪತ್ನಿ ರಾಜಕುಮಾರಿ ಡಯಾನಾ ಹಾಗೂ ಫ್ರಾನ್ಸಿನಲ್ಲಿ ನೋಡಲೇಬೇಕಾದ ‘ಐಫನ್ ಟವರ್’ ನನ್ನ ಕಣ್ಣ ಮುಂದೆ ಹಾದು ಹೋದವು. ನೆದರ್‌ಲ್ಯಾಂಡಿಗೆ ಹೋದ ಮೇಲೆ ಒಮ್ಮೆ ಬಿಡುವು ಮಾಡಿಕೊಂಡು ಪ್ಯಾರೀಸಿಗೆ ಬಂದು ಹೋಗಬೇಕು. ವಾರಗಟ್ಟಲೆ ಇಲ್ಲಿದ್ದು ಎಲ್ಲವನ್ನೂ ನೋಡಬೇಕು. ಎಂದೆಲ್ಲಾ ಅಂದುಕೊಂಡೆ.
ಇಲ್ಲಿ ಇಳಿದು ಆಮಸ್ಟರ್‌ಡ್ಯಾಮಿಗೆ ವಿಮಾನ ಬದಲಿಸಬೇಕಾಗಿತ್ತು. ಅದಕ್ಕಾಗಿ ಕೆ.ಎಲ್.ಎಮ್. ಏರ್ ಲೈನ್ಸನಲ್ಲಿ ಟಿಕೆಟ್‌ನ್ನು ಕಾಯ್ದಿರಿಸಲಾಗಿತ್ತು. ಇಲ್ಲಿಂದ ಒಂದು ಗಂಟೆಯ ಪ್ರಯಾಣ. ವಿಮಾನ ಡಿಗಾಲೇ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಎರಡು ಸುತ್ತು ಹೊಡೆದು ಭೂಸ್ಪರ್ಶ ಮಾಡುತ್ತಿದ್ದಂತೆ ನನಗೆ ಧಾವಂತೆ ಹೆಚ್ಚಿತು. ನಾನು ಬದಲಿಸಬೇಕಾದ ವಿಮಾನ ಹೊರಡಲು ಇನ್ನೂ ಎರಡು ತಾಸು ಸಮಯವಿತ್ತು. ಅಷ್ಟರಲ್ಲಿ ಪ್ಯಾರೀಸ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್, ಸೆಕ್ಯೂರಿಟಿ ಚೆಕಿಂಗ್ ನಿಯಮಾವಳಿಗಳನ್ನು ಪೂರೈಸಿಕೊಂಡು ಮುಂದಿನ ವಿಮಾನದ ಗೇಟಿನತ್ತ ಓಡಬೇಕು. ದಡಬಡ ಇಳಿದು ವಿಮಾನ ಬದಲಿಸುವ ರೂಟ್‌ನಲ್ಲಿ ಹೊರಟೆ.
‘ಡಿಗಾಲೆ’ ವಿಮಾನ ನಿಲ್ದಾಣ ಜಗತ್ತಿನ ಅತಿ ದೊಡ್ಡ ನಿಲ್ದಾಣಗಳಲ್ಲಿ ಒಂದೆಂದು ಹೇಳುತ್ತಾರೆ. ಪ್ರಪಂಚದ ಎಲ್ಲಾ ದೇಶಗಳಿಂದಲೂ ಎಲ್ಲಾ ಪ್ರಮುಖ ನಗರಗಳಿಂದಲೂ ಇಲ್ಲಿಗೆ ವಿಮಾನಗಳು ಆಗಮಿಸುತ್ತವೆ ಮತ್ತು ನಿರ್ಗಮಿಸುತ್ತವೆ. ಅದಕ್ಕಾಗಿ ನೂರಕ್ಕಿಂತ ಹೆಚ್ಚು ವಿಮಾನ ಹತ್ತುವ ದ್ವಾರಗಳು [ ‘ಎಂಟ್ರಿ ಗೇಟು’ ಗಳು] ಇಲ್ಲಿವೆ.
ನಾನು ಇಷ್ಟು ದೊಡ್ಡ ವಿಮಾನ ನಿಲ್ದಾಣದೊಳಗೆ ಬಂದದ್ದು ಇದೇ ಮೊದಲ ಬಾರಿ ಆಗಿತ್ತು. [ಇದಕ್ಕೂ ಮೊದಲು ಸ್ವಿಝರ್‌ಲ್ಯಾಂಡಿನ ‘ ಝೂರಿಕ್’ ನಗರದ ಅಂತಃರಾಷ್ಟ್ರೀಯ ವಿಮಾನ ನಿಲ್ದಾಣ ನೋಡಿದ್ದೆ].
ವಿಮಾನ ಬದಲಿಸುವಾಗ ಇಮಿಗ್ರೇಶನ್, ಸೆಕ್ಯುರಿಟಿ ಚೆಕಿಂಗ್ ಮತ್ತೊಮ್ಮೆ ಆಗುತ್ತವೆ. ಈ ಕ್ರಮಕ್ಕೆ ಒಡ್ಡಿಕೊಳ್ಳುವುದು ಅನಿವಾರ್ಯ. ಇಮಿಗ್ರೇಶನ್ ಓಕೆ ಆದ ಮೇಲೆಯೇ ಸೆಕ್ಯುರಿಟಿ ಗೇಟ್ ಕಡೆಗೆ ಹೋಗಲು ಅವಕಾಶ. ಅದಕ್ಕಾಗಿ ನಾನು ಮೊದಲು ಇಮಿಗ್ರೇಶನ್ ಪ್ರಕ್ರಿಯೆ ನಡೆಯುವ ಕಡೆಗೆ ಓಡಿದೆ. ಅಲ್ಲಿ ಒಂದು ಟೇಬಲ್ ಹಾಕಿಕೊಂಡು ಇಬ್ಬರು ಫ್ರೆಂಚ್ ಮಹಿಳಾ ಅಧಿಕಾರಿಗಳು ಕೂತಿದ್ದರು. ಅಲ್ಲಿ ವಿಮಾನ ಬದಲಿಸುವವರ ಪಾಸಪೋರ್ಟಿಗೆ ಮುದ್ರೆ ಹಾಕಿ ಕಳಿಸಿಕೊಡುತ್ತಾರೆ. ಹೇಗೂ ಅಲ್ಲಿದ್ದ ಯಾವ ಪ್ರಯಾಣಿಕರೂ ಈ ದೇಶದಲ್ಲಿ ಪ್ರವೇಶಿಸುವವರಲ್ಲ. ಇಲ್ಲಿಳಿದು ಬೇರೆ ವಿಮಾನ ಹತ್ತುತ್ತಾರಷ್ಟೇ. ಸರತಿ ಸಾಲಿನಲ್ಲಿದ್ದ ವಿವಿಧ ದೇಶಗಳ ಪ್ರಯಾಣಿಕರು ಸೀಲು ಹಾಕಿಸಿಕೊಂಡು ಸೆಕ್ಯೂರಿಟಿ ಚೆಕ್ಕಿಂಗ್‌ಗಾಗಿ ಮುಂದಿನ ಸಾಲಿನಲ್ಲಿ ನಿಲ್ಲುತ್ತಿದ್ದರು.
ನನಗೆ ಧಾವಂತ ಹೆಚ್ಚಾಯಿತು. ಇಮಿಗ್ರೇಶನ್ ಪ್ರಕ್ರಿಯೆ ಮುಗಿದು ಸೆಕ್ಯೂರಿಟಿ ದಾಟಿದರೆ ನೂರಾ ಮೂರನೇ ಗೇಟಿನಲ್ಲಿರುವ ಆಮಸ್ಟರ್‌ಡ್ಯಾಮ್‌ಗೆ ಹೋಗುವ ವಿಮಾನ ಹತ್ತಬೇಕು. ನಾನು ಅಂದುಕೊಂಡಂತೆ ಇಲ್ಲಿ ಸಮಯ ಸಿಗುವುದಿಲ್ಲ. ಆಗಲೇ ಅರ್ಧ ಗಂಟೆ ಕಳೆದುಹೋಯಿತು. ಇನ್ನೂ ವಿಮಾನ ಹತ್ತುವ ಗೇಟಿನ ಹತ್ತಿರವೇ ಹೋಗಿಲ್ಲ. ಗಡಬಡಿಸಿ ಇಮಿಗ್ರೇಶನ್ ಅಧಿಕಾರಿ ಎದುರು ಹೋಗಿ ನಿಂತೆ.
ಸುರುವಾಯಿತು ನೋಡಿ. ‘ವಾಟ್ ಯು ಮೀನ್ ಬೈ ಕನ್ನಡಿಗಾ?…’
ಆರಡಿ ಎತ್ತರದ ಸುಮಾರು ಮೂವತ್ತು ವರ್ಷದ ಬಿಳೀ ಫ್ರೆಂಚ್ ಲೇಡಿ. ಪೋಲೀಸ ಯೂನಿಫಾರ್ಮನಲ್ಲಿದ್ದಳು. ಆಕೆ ನನ್ನನ್ನು ಒಮ್ಮೆ ನಖಶಿಖಾಂತ ನೋಡಿದಳು. ‘ಆರ್ ಯೂ ಫ್ರಮ್ ಇಂಡಿಯಾ?’ ಎಂದು ಆಗಲೇ ನನ್ನನ್ನು ಗುರುತಿಸಿದವಳಂತೆ ಪ್ರಶ್ನಿಸಿದಳು. ಹೌದೆಂದೆ. ‘ಯೂ ಆರ್ ತಮಿಳ್?’ ಎಂದು ಮತ್ತೆ ಕೇಳಿದಾಗ ಸಂದಿಗ್ಧಗೊಂಡೆ. ಈ ಫ್ರೆಂಚ್ ಮಹಿಳೆಗೆ ತಮಿಳು ಹೇಗೆ ಗೊತ್ತು ಎಂದು ಅಚ್ಚರಿಪಟ್ಟೆ. ನಾನು ಉತ್ತರಿಸುವ ಮೊದಲೇ ಟೇಬಲ್ ಮೇಲಿಟ್ಟ ನನ್ನ ಪಾಸಪೋರ್ಟ ಸಹಿತ ಎಲ್ಲ ದಾಖಲೆಗಳನ್ನು ಒಮ್ಮೆ ನೋಡಿದಳು. ನನಗೆ ನೆದರಲ್ಯಾಂಡ್ ಸರಕಾರ ಕೊಟ್ಟಿದ್ದ ಎನ್.ಓ.ಸಿ ಪತ್ರ ‘ಡಚ್ಚ ಭಾಷೆಯಲ್ಲಿತ್ತು. ಇನ್ವಿಟೇಶನ್ ‘ಜರ್ಮನಿ ಭಾಷೆ’ಯಲ್ಲಿತ್ತು. ಆಕೆ ನನ್ನನ್ನು ಮತ್ತೊಮ್ಮೆ ನೋಡಿದಳು. ನನ್ನದು ‘ಟೂರಿಸ್ಟ ವೀಸಾ’ ಆಗಿತ್ತು. ಆಕೆ ಅದನ್ನೂ ಅನುಮಾನದಿಂದ ನೋಡಿದಳು. ಇದರ ನಡುವೆ ನಾನು ತಮಿಳಿಗನಲ್ಲ. ಕನ್ನಡಿಗ. ಎಂದು ಹೇಳುತ್ತಿದ್ದೆ. ಆಕೆಯ ಅನುಮಾನ ಇನ್ನಷ್ಟು ಹೆಚ್ಚಿತೇನೋ. ‘ ವಾಟ್ ಯು ಮಿನ್ ಬೈ ಕನ್ನಡಿಗಾ? ವೇರ್ ಐಸ್ ಕನ್ನಡಿಗಾ ಇನ್ ಇಂಡಿಯಾ? ಯೂ ಕೇಮ್ ಫ್ರಮ್ ಬಂಗಲೂರು?” ಆಕೆಯ ಅಸಂಬದ್ಧ ಪ್ರಶ್ನೆಗಳು ನನಗೆ ವಿಚಿತ್ರ ಅನ್ನಿಸಿದವು. ಮತ್ತೆ ನನ್ನನ್ನು ದುರುದುರು ನೋಡಿದ ಆಕೆ ಮತ್ತೇನೂ ಹೇಳದೆ ‘ಫಾಲೋ ಮೀ…’ ಎಂದು ಹೇಳಿ ತನ್ನನ್ನು ಹಿಂಬಾಲಿಸುವಂತೆ ಸೂಚಿಸಿ ನನ್ನ ಪಾಸಪೋರ್ಟ ಮತ್ತು ಉಳಿದೆಲ್ಲ ದಾಖಲೆಗಳನ್ನು ಕೈಯಲ್ಲಿ ಹಿಡಿದುಕೊಂಡು ಪಕ್ಕಕ್ಕೆ ನಡೆದಳು. ಎಲ್ಲೋ ತಪ್ಪಾಗಿದೆ. ಇದೇನೋ ಗೊಂದಲವಾಯಿತು ಎಂದು ನನಗೆ ಮೊದಲ ಬಾರಿ ಅನ್ನಿಸಿ ಆಕೆಯನ್ನು ಹಿಂಬಾಲಿಸಿದೆ. ಅಲ್ಲಿಯೇ ಪಕ್ಕದಲ್ಲಿದ್ದ ಬಾಗಿಲೊಂದನ್ನು ನೂಕಿದಳು. ಆಕೆ ನೂಕುವವರೆಗೂ ಅಲ್ಲಿ ಬಾಗಿಲಿದೆಯೇಂದು ಯಾರಿಗೂ ಅನ್ನಿಸುವುದಿಲ್ಲ. ‘ಕಮ್…’ ಅಂದು ತಾನು ಬಾಗಿಲು ಹಿಡಿದು ನಿಂತಳು. ನಾನು ಆತಂಕದಿಂದ ಒಳಗೆ ಕಾಲಿಟ್ಟೆ. ನಂತರ ಆಕೆ ನನ್ನ ಬೆನ್ನ ಹಿಂದೆಯೇ ಬಂದಳು.
ಫ್ರೆಂಚರ ಪೋಲೀಸ ಠಾಣೆಯಲ್ಲಿ…!
ನನಗೆ ಆಶ್ಚರ್ಯ. ಅದು ವಿಮಾನ ನಿಲ್ದಾಣದ ಪೋಲೀಸ ಛಾಣೆಯಾಗಿತ್ತು. ಎದುರಿನಲ್ಲಿ ದೊಡ್ಡ ಚೇಬಲ್ ಹಾಕಿಕೊಂಡು ಮೂರು ಜನ ಪೋಲೀಸರು ಕೂತಿದ್ದರು. ಅದರಲ್ಲಿ ಒಬ್ಬ ಕರಿಯ [ಆಫ್ರಿಕಾ ಖಂಡದವನಿರಬೇಕು] ಪೋಲೀಸು. ನನ್ನನ್ನು ಕರೆದುಕೊಂಡು ಬಂದ ಆ ಮಹಿಳಾ ಅಧಿಕಾರಿ ನನ್ನ ಪಾಸಪೋರ್ಟು, ಇತರೆ ದಾಖಲೆಗಳನ್ನು ನನ್ನನ್ನೂ ಸೇರಿ ಅವರಿಗೆ ಒಪ್ಪಿಸಿ ಫ್ರಂಚಿನಲ್ಲಿ ಏನೇನೋ ಹೇಳಿ ನಂತರ ವಾಪಸು ಹೊರಗೆ ಹೋದಳು. ಅಲ್ಲಿದ್ದ ಪೋಲೀಸರು ನನ್ನನ್ನು ಶಂಕಿತ ಅಪರಾಧಿಯನ್ನು ನೋಡುವಂತೆ ಇಂಚಿಂಚು ನೋಡಿದರು. ನನ್ನನ್ನು ಇಲ್ಲಿ ಯಾಕೆ ಕರೆತಂದಿದ್ದೀರಿ? ನನಗೆ ಇಲ್ಲಿ ವಿಮಾನ ಬದಲಿಸುವುದಿದೆ. ‘ಆಮಸ್ಟರ್ ಡ್ಯಾಮಿ’ ಗೆ ಹೋಗುವುದಿದೆ. ಟಿಕೆಟ್ಟೂ ಬುಕ್ಕಾಗಿದೆ ನೋಡಿ ಇಲ್ಲಿ ಎಂದು ನಾನು ಆಮಸ್ಟರ್‌ಡ್ಯಾಮ್‌ಗೆ ಹೋಗಲು ಕಾದಿರಿಸಿದ ವಿಮಾನ ಟಿಕೆಟ್ಟನ್ನೂ ತೋರಿಸಿದೆ. ಅವರು ಏನೂ ಮಾತಾಡದೆ ಅದನ್ನೂ ನನ್ನ ಕೈಯಿಂದ ಕಿತ್ತುಕೊಂಡರು. ಒಂದು ಹಳದೀ ಬಣ್ಣದ ಟ್ರೇಯಲ್ಲಿ ಎಲ್ಲವನ್ನೂ ಹಾಕಿ ನನಗೆ ಅಲ್ಲಿಯೇ ಇದ್ದ ಬೆಂಚ್ ಮೇಲೆ ಕೂಡಲು ಹೇಳಿದರು. ಕೂಡಲು ಅಲ್ಲಿ ಬೇರೆ ಯಾವ ಖುರ್ಚಿಗಳನ್ನೂ ಇಟ್ಟಿರಲಿಲ್ಲ. ಪೋಲೀಸ ಸ್ಟೇಶನ್ನಿನಲ್ಲಿ ಎಷ್ಟಿರಬೇಕೋ ಅಷ್ಟು. ನೀರು ಬೇಕಾದರೆ ಒಂದು ಲೋಟ ಮತ್ತು ಒಂದು ನಲ್ಲಿ ಅಲ್ಲಿದ್ದವು. ಅವರು ಮತ್ತೆ ನನ್ನ ಪ್ರಶ್ನೆಗೆ ಉತ್ತರವನ್ನೂ ಕೊಡಲಿಲ್ಲ. ನನ್ನನ್ನು ಅಲ್ಲಿಗೆ ಕರೆತಂದ ಕಾರಣಗಳನ್ನೂ ಹೇಳಲಿಲ್ಲ.. ನನಗೂ ಗೊಂದಲ. ನಾನು ಇಲ್ಲಿಂದ ಹೋಗಬೇಕಾದ ವಿಮಾನ ತಪ್ಪಿದರೆ ಹೇಗೆ ಎಂಬ ಆತಂಕ ಸುರುವಾಯಿತು. ಇದು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಪೋಲೀಸ ವಿಚಾರಣಾ ಕೊಠಡಿ. ಇಲ್ಲಿ ಮೌನ ಮತ್ತು ಮಾತುಗಳಷ್ಟೇ ಚಲಾವಣೆಯಲ್ಲಿರುತ್ತವೆ.
ಅವಳ ಎರಡೂ ಕೈಗಳನ್ನು ಹಿಂದಕ್ಕೆ ತಿರುಗಿಸಿ ಕೋಳ ಹಾಕಲಾಗಿತ್ತು. ನಾನು ಕೂತಿದ್ದ ಬೆಂಚಿನ ಇನ್ನೊಂದು ತುದಿಯತ್ತ ಗಮನ ಹೋಯಿತು. ಸುಮಾರು ಇಪ್ಪತ್ತೈದರ ಪ್ರಾಯದ ಹುಡುಗಿಯೊಬ್ಬಳು ಕುಕ್ಕುರಗಾಲಲ್ಲಿ ಕೂತಿದ್ದಳು. ಪರಂಗಿಯವಳಿರಬೇಕು. ಕಡುಗೆಂಪು ಬಣ್ಣದ ಶಾರ್ಟ್ಸ್, ಮೇಲೆ ಒಂದಿಷ್ಟು ಬಿಳೀ ಬಣ್ಣದ ಟಾಪು ಹಾಕಿಕೊಂಡಿದ್ದಳು. ಅವಳ ಎರಡೂ ಕೈಗಳು ಬೆನ್ನ ಹಿಂದೆ ಇದ್ದವು. ನೋಡಿದರೆ ಅವಳ ಎರಡೂ ಕೈಗಳನ್ನು ಬೆನ್ನಿನ ಹಿಂದಕ್ಕೆ ತಿರುಗಿಸಿ ಮುಂಗೈಗಳನ್ನು ಸೇರಿಸಿ ಬೇಡಿ ಹಾಕಲಾಗಿತ್ತು. ಅತ್ತು-ಅತ್ತೂ ಆಗಲೇ ಅವಳ ಬಿಳಿಯ ಮುಖದ ಕಾಜಿನ ಕಣ್ಣುಗಳು ಕೆಂಪಗಾಗಿದ್ದವು. ಮುಖ ಮತ್ತಷ್ಟು ಬಿಳಚಿಕೊಂಡಿತ್ತು. ನೋಡಿ ಗಾಬರಿಯಾದೆ. ಇವಳಿಗೇಕೆ ಬೇಡಿ ಹಾಕಿದ್ದಾರೆ? ಇವಳೇನಾದರೂ ಲೇಡೀ ಕಿಲ್ಲರೋ, ಲೇಡೀ ಥ್ರಿಲ್ಲರೋ…? ಲೇಡೀ ಡಾನೋ…? ಒಂದೂ ಅರ್ಥವಾಗಲಿಲ್ಲ. ಇವಳೂ ತನ್ನಂತೆ ವಿಮಾನದಲ್ಲಿ ಪ್ರಯಾಣಿಕಳಾಗಿ ಪ್ಯಾರೀಸಿಗೆ ಬಂದಿದ್ದಾಳೆ. ನೋಡಿದರೆ ಅವಳೂ ಯುರೋಪಿಯನ್ನಳೆ. ಆದರೆ ಆಕೆಯನ್ನು ವಿಮಾನ ನಿಲ್ದಾಣದಲ್ಲಿ ಪೋಲೀಸರು ಹೀಗೆ ಹಿಡಿದು ಕೂಡಿಸುತ್ತಾರೆಂದರೆ…
ಕಸ್ಟಮ್ಸನಲ್ಲಿ ಸಿಕ್ಕುಬಿದ್ದ ಕಳ್ಳಸಾಗಾಣಿಕೆದಾರಳಿರಬೇಕು. ಇಲ್ಲ ಆಕೆಯ ಹತ್ತಿರ ಇದ್ದದ್ದು ನಕಲೀ ಪಾಸಪೋರ್ಟ ಆಗಿರಬೇಕು. ಕೆಲವರು ಚಿನ್ನ, ಗಾಂಜಾ, ಅಫೀಮು ಸಾಗಿಸಲು ಹೋಗಿ ಹೀಗೆ ಸಿಕ್ಕಿ ಹಾಕಿಕೊಳ್ಳುತ್ತಾರಂತೆ. ನನ್ನದು ಅಂಥದ್ದೇನೂ ಅಲ್ಲ. ನಾನು ಪರಿಶುದ್ಧ ಪಾಸಪೋರ್ಟು ಹೊಂದಿದ್ದೇನೆ. ನೆದರ್‌ಲ್ಯಾಂಡಿನಲ್ಲಿದ್ದ ಮಗ ‘ಇನ್ವಿಟೇಶನ್’ ಅನ್ನು ಕಾನೂನು ರೀತ್ಯ ಕಳಿಸಿದ್ದಾನೆ. ಅಲ್ಲಿಯ ಸರಕಾರ ನನಗೆ ‘ನೋ ಅಬ್ಜೆಕ್ಶನ್ ಸರ್ಟಿಫಿಕೇಟು’ ಕೊಟ್ಟಿದೆ. ಏನೋ ತಪ್ಪಾಗಿ ನನ್ನನ್ನು ಇಲ್ಲಿಗೆ ಕರೆತಂದಿದ್ದಾರೆ. ದಾಖಲೆ ನೋಡಿದರೆ ಇವರಿಗೇ ಗೊತ್ತಾಗುತ್ತದಲ್ಲ ಎಂದು ಯೋಚಿಸುತ್ತಿದ್ದಂತೆ ಆ ಹುಡುಗಿ ಕುಳಿತಲ್ಲಿಂದಲೇ ‘ಸರ್… ಸರ್…!’ ಎಂದು ದೀನ ದನಿಯಿಂದ ಅಲ್ಲಿದ್ದ ಪೋಲೀಸರಿಗೆ ಫ್ರೆಂಚಿನಲ್ಲಿ ಏನೋ ಹೇಳಿ ಗೋಗರೆಯುತ್ತಿದ್ದಳು. ಬಹುಶಃ ತನ್ನನ್ನು ಬಿಟ್ಟು ಬಿಡಿ ಎಂದು ಬೇಡಿಕೊಳ್ಳುತ್ತಿದ್ದಳೇನೋ. ಪೋಲೀಸನೊಬ್ಬ ಆಕೆಗೆ ಇನ್ನೇನೋ ಹೇಳುತ್ತ ಇನ್ನಷ್ಟು ಧಮಕಿ ಹಾಕುತ್ತಿದ್ದ. ‘ಡೋಂಟ್ ಸೇ’ ಎಂದು ಆಗಾಗ ಇಂಗ್ಲೀಷೂ ಸೇರಿಸುತ್ತಿದ್ದ. ಆ ಹುಡುಗಿಯ ಸ್ಥಿತಿಗೆ ನನಗೆ ಅಯ್ಯೋ ಅನಿಸಿತು. ಅಷ್ಟರಲ್ಲಿ ಅತ್ತ ಮೇಲಾಧಿಕಾರಿಯ ಕೊಠಡಿಯಿಂದ ನಲವತ್ತೈದು ಪ್ರಾಯದ ಗಂಡಸೊಬ್ಬನನ್ನು ಇಬ್ಬರು ಪೋಲೀಸರು ಎಳೆದುಕೊಂಡು ಹೊರಬಂದರು.
ಮೂರು ದಶಕಗಳ ಹಿಂದೆ ಕಾರವಾರ ಜೈಲಿನಲ್ಲಿದ್ದ ಅಂತರಾಷ್ಟ್ರೀಯ ಖದೀಮ ಶೋಭರಾಜ ನೆನಪಿಗೆ ಬಂದ ಆತ ಧಿಮಿ ಧಿಮಿ ಅಂತಿದ್ದ. ಪೋಲೀಸರ ವಿರುದ್ಧವೇ ಕೂಗಾಡಿದ್ದ ಅಂತ ಕಾಣುತ್ತಿದ್ದ. ಆದರೆ ಪೋಲೀಸರು ಸುಮ್ಮನೆ ಬಿಡುತ್ತಾರೆಯೇ. ಹಾಗೆ ನೋಡಿದರೆ ಆತನೂ ಇಲ್ಲಿಯ ಯುರೋಪಿಯನ್ನನೆ. ಕಡುಗೆಂಪು ಮೈಯ ಧಾಂಡಿಗ. ಬಾಯಿಯ ಎಡಗಡೆಯಿಂದ ರಕ್ತ ಸುರಿಯುತ್ತಿತ್ತು. ಆತನ ಮೈಮೇಲೆ ಬಟ್ಟೆಗಳಿರಲಿಲ್ಲ. ಹೊಳೆಯುತ್ತಿದ್ದ ಅವನ ನೀಲಿ ಕಣ್ಣುಗಳಲ್ಲಿ ರೋಷ ಉಕ್ಕುತ್ತಿತ್ತು. ಒಂದು ತಳ್ಳುವ ಟ್ರೇ ನಲ್ಲಿ ಆತ ತೊಟ್ಟಿದ್ದ ಕಂದು ಬಣ್ಣದ ಕೋಟು, ಪ್ಯಾಂಟು, ಬಿಳೀ ಶರ್ಟುಗಳನ್ನು ಗುಡ್ಡೆ ಹಾಕಿಕೊಂಡು ಒಬ್ಬ ಬಿಳಿಯ ಲೇಡೀ ಪೋಲೀಸು ಬರತ್ತಿದ್ದಳು. ನೋಡಿದರೆ ಅವನ ಎರಡೂ ಕೈಗಳನ್ನು ಹಿಂದಕ್ಕೆ ಸೇರಿಸಿ ಬೇಡಿ ಹಾಕಲಾಗಿತ್ತು. ಮೈಯ ರಕ್ತವೆಲ್ಲ ಅವನ ಮುಖಕ್ಕೇ ಚಿಮ್ಮಿತ್ತೇನೋ. ಕೆಂಪಗ ಕೆಂಡದಂತೆ ಕಾಣುತ್ತಿದ್ದ. ಮುಖದಲ್ಲಿ ಗಾಬರಿಯಿರಲಿಲ್ಲ. ಕ್ರೋಧವಿತ್ತು. ‘ ನಾನು ಇಂಥ ನೂರು ಪೋಲೀಸ್ ಸ್ಟೇಶನ್ ಹೊಕ್ಕು ಹೊರಬಂದಿದ್ದೇನೆ. ಇಡೀ ಪ್ರಪಂಚವನ್ನು ಸುತ್ತಾಡಿದ್ದೇನೆ. ಯಾರೂ ಹೀಗೆ ಅಪಮಾನ ಮಾಡಿರಲಿಲ್ಲ. ಐ ವಿಲ್ ಸೀ ಯೂ ಮಿಸ್ಟರ್ ಇನಸ್ಪೆಕ್ಟರ್…’ ಎಂದು ಕೂಗಾಡುತ್ತಿದ್ದ. ಈಗ ನನಗೆ ಅರ್ಥವಾಯಿತು. ಠಾಣಾದ ಹಿರಿಯ ಅಧಿಕಾರಿ ಇವನನ್ನು ವಿಚಾರಣೆಗೊಳಪಡಿಸಿರಬೇಕು. ಏನು ತಪ್ಪು ಮಾಡಿದ್ದಾನೋ. ನೋಡಿದ್ರೆ ಇವನು ಯಾವುದೋ ಗ್ಯಾಂಗ್ ಲೀಡರೇ ಇರಬೇಕು. ನನಗೊಂದೂ ಅರ್ಥವಾಗಲಿಲ್ಲ. ನಾನು ಪಕ್ಕದಲ್ಲಿ ಕೂತಿದ್ದ ಹುಡುಗಿಯತ್ತ ನೋಡಿದೆ. ಆಕೆ ಇನ್ನಷ್ಟು ಗಾಬರಿಯಾದಂತಿತ್ತು. ಕೋಳ ಹಾಕಿದ ಆ ವ್ಯಕ್ತಿಯನ್ನು ಪೋಲೀಸರು ಎದುರಿಗಿದ್ದ ಬಾಗಿಲ ಕಡೆಗೆ ಎಳೆದುಕೊಂಡು ಹೋದರು. ಈತ ದೊಡ್ಡ ಕ್ರಿಮಿನಲ್ಲೇ ಇರಬೇಕು. ರಹಸ್ಯವಾಗಿ ಪ್ರಯಾಣ ಮಾಡುವಾಗ ಸಿಕ್ಕು ಬಿದ್ದಿದ್ದಾನೆ. ನಾನು ಎದುರಿಗೆ ಕೂತಿದ್ದ ಮೂರು ಜನ ಪೋಲೀಸರತ್ತ ನೋಡಿದೆ. ಒಬ್ಬ ಕಂಪೂಟರ ಸ್ಕ್ರೀನ ಮೇಲೆ ಕಣ್ಣು ನೆಟ್ಟಿದ್ದ. ಇನ್ನೊಬ್ಬ ಕಚೇರಿ ಫೋನಿನಲ್ಲಿದ್ದ. ಆ ಕಪ್ಪು ಪೋಲೀಸು ಮಾತ್ರ ನಮ್ಮಿಬ್ಬರನ್ನೇ ನೋಡುತ್ತ ನಿಂತಿದ್ದ. ಅವನು ಒಳ್ಳೆಯವನಿರಬೇಕು ಅನಿಸಿತು.
ನನ್ನನ್ನು ಅಲ್ಲಿಗೆ ಕರೆತಂದು ಕೂಡಿಸಿ ಹೋದ ಆ ಮಹಿಳಾ ಅಧಿಕಾರಿ ಮತ್ತೆ ವಾಪಸು ಬರಲಿಲ್ಲ. ಈಗ ನನಗೆ ನನ್ನ ವಿಮಾನ ತಪ್ಪುವ ಆತಂಕ ಇಮ್ಮಡಿಯಾಯಿತು. ಮೆಲ್ಲನೆ ಟೇಬಲ್ ಬಳಿ ಎದ್ದು ಹೋದೆ. ನನ್ನನ್ನು ಬೇಗ ಬಿಡಿ. ನನ್ನ ವಿಮಾನ ತಪ್ಪುತ್ತದೆ ಎಂದು ಹೇಳಲು ಹೋದೆ. ಅಷ್ಟರಲ್ಲಿ ಒಳಗಿನಿಂದ ಬಂದ ಇನ್ನೊಬ್ಬ ಕೆಂಪು ಪೋಲೀಸ ನನ್ನನ್ನು ನೋಡಿದ. ‘ಯಾಕೆ ಎದ್ದು ಬಂದೆ?’ ಅಂದ ಗಡುಸಾಗಿ. ನಾನು ‘ಸಾರೀ’ ಎಂದೆ. ಅವನ ಕೈಯಲ್ಲಿ ನನ್ನ ಪಾಸಪೋರ್ಟ ಮತ್ತು ದಾಖಲೆಗಳಿದ್ದ ಟ್ರೇ ಇತ್ತು. ‘ಕಮ್ಮ ಇನ್ ಸೈಡ್…!’ ಅಂದನಾತ. ‘ಓಹ್. ಏನೋ ಒಂದಿಷ್ಟು ಪ್ರಶ್ನೆ ಕೇಳಿ ನಂತರ ಬಿಡುತ್ತಾರೆ’ ಎಂದುಕೊಂಡೆ. ಅಷ್ಟಕ್ಕೇ ಸಮಾಧಾನ ಪಟ್ಟುಕೊಂಡ ನಾನು ಒಂದಷ್ಟು ಖುಶಿಯಿಂದ ಅವನ ಹಿಂದಿನಿಂದ ಒಳಗೆ ಹೋದೆ. ಆ ಪೋಲೀಸನನ್ನು ಹಿಂಬಾಲಿಸುತ್ತ.
ವಿಮಾನ ನಿಲ್ದಾಣದಲ್ಲೂ ಜೈಲು ಖಾನಾ ಇರುತ್ತವೆಂದು ನನಗೆ ಇವತ್ತೇ ಗೊತ್ತಾದದ್ದು.
ನನ್ನನ್ನು ಒಂದು ಕೋಣೆಯತ್ತ ಕರೆದೊಯ್ದ ಆ ಪೋಲೀಸು ಎಚ್ಚರದಿಂದ ಇದ್ದ. ಆತ ನನ್ನ ಮೇಲೆ ಒಂದು ಕಣ್ಣಿಟ್ಟಿರುವಂತೆ ಭಾಸವಾಯಿತು. ಅಲ್ಲಿ. ಹಾದು ಹೋಗುವಾಗ ಇನ್ನಷ್ಟು ಪುಟ್ಟ ಪುಟ್ಟ ಕೋಣೆಗಳು ಸಾಲಾಗಿ ಇದ್ದದ್ದು ಕಂಡಿತು. ಅವು ಯಾವಕ್ಕೂ ಕಿಡಕಿಗಳಿರಲಿಲ್ಲ. ಅವು ಜೈಲು ಕೋಣೆಗಳೇ ಹೌದು. ಅಲ್ಲಿ ಒಂದೊಂದು ಕೋಣೆಯಲ್ಲೂ ಒಬ್ಬೊಬ್ಬರನ್ನು ಕೂಡಿ ಹಾಕಿದ್ದರು. ಅವರೆಲ್ಲರ ಕೈಗಳನ್ನು ಹಿಂದಕ್ಕೆ ಕಟ್ಟಿ ಕೋಳ ಹಾಕಲಾಗಿತ್ತು. ಅವರೆಲ್ಲರೂ ವಿಮಾನ ಪ್ರಯಾಣಿಕರೇ ಆಗಿದ್ದವರು. ಇಲ್ಲಿ ಬಂದು ಸಿಕ್ಕಿಕೊಂಡಿದ್ದಾರೆ. ಇಂಥವರ ಬಗ್ಗೆಯೂ ಕತೆ ಬರೆಯಬೇಕು ಎಂದು ಆಕ್ಷಣಕ್ಕೆ ಅನ್ನಿಸಿತು. ಆದರೆ ಅನ್ನಿಸಿದರೂ ನಾನೂ ಅಂಥ ಸ್ಥಿತಿಯಲ್ಲೇ ಇದ್ದೀನಲ್ಲ ಅನಿಸಿ ಬರವಣಿಗೆಯ ಉತ್ಸಾಹ ಠುಸ್ಸೆಂದಿತು. ಒಂದೆರಡು ಕೋಣೆಯಲ್ಲಿ ಹೆಂಗಸರೂ ಇದ್ದರು. ಅರೆಬರೆ ಬಟ್ಟೆ ತೊಟ್ಟ ಯುರೋಪ್ ಹೆಂಗಸರು. ಅವರ ಕೈಗಳನ್ನೂ ಹಿಂದಕ್ಕೆ ತಿರುಗಿಸಿ ಕೋಳ ಹಾಕಲಾಗಿತ್ತು. ಒಂದು ಕೋಣೆಯಲ್ಲಿ ಆ ವ್ಯಕ್ತಿಯೂ ಇದ್ದ. ಮುಖದ ರಕ್ತ ಇನ್ನೂ ಹಾಗೇ ಇತ್ತು. ಆತ ನನ್ನನ್ನು ನೋಡಿ ನಿನಗೂ ಕಾದಿದೆ ಹೋಗು ಅನ್ನುವಂತೆ ಒಮ್ಮೆಶುಷ್ಕವಾಗಿ ನಕ್ಕ.
ಎಲ್ಲಿಯ ಇಂಡಿಯಾ…!, ಎಲ್ಲಿಯ ಫ್ರಾನ್ಸು… !
ಈಗ ನಾನು ನಿಜಕ್ಕೂ ಬೆದರಿದೆ. ಅದೇನು ತಪ್ಪು ಕಲ್ಪನೆಯಾಗಿದೆಯೋ ಏನೋ. ನನ್ನನ್ನೂ ಇವರು ಯಾವುದೋ ಅಪರಾಧಿ ಎಂದೇ ಪರಿಗಣಿಸಿದ್ದಾರೆ. ತಕ್ಷಣಕ್ಕೆ ತಲೆ ಓಡಲಿಲ್ಲ. ಎಲ್ಲಿಯ ಭಾರತ. ಎಲ್ಲಿಯ ಫ್ರಾನ್ಸು. ಎಲ್ಲಿಯ ಬೆಂಗಳೂರು ಎಲ್ಲಿ ಪ್ಯಾರೀಸು. ನನಗೆ ಇಲ್ಲಿ ಯಾರು ಸಹಾಯ ಮಾಡುತ್ತಾರೆ. ತಕ್ಷಣ ತಲೆಗೆ ಏನೂ ಹೊಳೆಯಸಲಿಲ್ಲ. ನನ್ನನ್ನು ಕರೆದುಕೊಂಡು ಹೋದ ಪೋಲೀಸ ಒಂದು ಕೋಣೆಯ ಮುಂದೆ ನಿಂತು ನನಗೂ ಒಳಗೆ ಬರಲು ಸೂಚಿಸಿದ. ಅಲ್ಲಿ ಇನ್ನೊಬ್ಬ ಪೋಲೀಸನಿದ್ದ. ಅವನ ಯೂನಿಫಾರ್ಮ ಬೆಲ್ಟನಲ್ಲಿ ಒಂದು ಕಪ್ಪು ಬದನೆ ಬಡಿಗೆ. ಒಂದು ಪಿಸ್ತೂಲು, ಒಂದು ದೊಡ್ಡದಾದ ಕೋಳ ಸಿಕ್ಕಿಸಿಕೊಂಡಿದ್ದ. ಕೆಂಚು ಮೀಸೆ. ಕಾಜಿನ ಗುಂಡದಂಥ ಕಣ್ಣುಗಳು. ಅಸಲೀ ಫ್ರೆಂಚ್ ರೂಪ. ಅವರು ನನ್ನನ್ನು ಅಲ್ಲಿದ್ದ ಸ್ಟೂಲಿನ ಮೇಲೆ ಕೂಡಲು ಹೇಳಿದರು. ಕೂತೆ.
‘ಶರ್ಟು ತಗೆ…!’ – ಅಂದರು. ಮರು ಮಾತಾಡದೆ ತಗೆದೆ. ಪ್ಯಾಂಟಿನ ಬೆಲ್ಟು ತಗೆ ಅಂದರು. ಅದನ್ನೂ ತಗೆದೆ. ಎರಡನ್ನೂ ಅವರ ಕೈಗೆ ಕೊಡ ಹೋದೆ. ಅವರು ಅದನ್ನು ಕೈಯಿಂದ ಮುಟ್ಟಲ್ಲಿಲ್ಲ. ಕೋಲಿಂದ ಎತ್ತಿ ಸ್ಕ್ರೀನಿಂಗ ಮಶೀನಿಗೆ ಹಾಕಿದರು. ಕೊರಳಲ್ಲಿದ್ದ ಬಂಗಾರದ ಚೈನು, ಬಲಗೈ ಬೆರಳಲ್ಲಿದ್ದ ಎರಡು ಉಂಗುರಗಳನ್ನು, ಕೈಯ ವಾಚು, ಚಾಳೀಸು ತಗೆದು ಒಂದು ಚಿಕ್ಕ ಟ್ರೇಗೆ ಹಾಕಲು ಹೇಳಿದರು. ನನ್ನ ಪೆನ್ನು, ಮೊಬೈಲು, ಹಣದ ಪರ್ಸನ್ನೂ ಅದರಲ್ಲೇ ಹಾಕಲು ಹೇಳಿದರು. ಕೈಗೆ ಗ್ಲೋವ್‌ಸು ಧರಿಸಿದ್ದವನೊಬ್ಬ ಅದೆಲ್ಲವನ್ನು ತದುಕಿ-ತದುಕಿ ನೋಡಿದ. ಪರ್ಸು ತಗೆದು ಅದರಲ್ಲಿದ್ದ ಇಂಡಿಯನ್ ಮತ್ತು ಯೂರೋ ಕರೆನ್ಸಿಗಳನ್ನು ಎಣಿಸಿಕೊಂಡು ಬರೆದುಕೊಂಡ. ನಂತರ ‘ವೇರ್ ಆರ್ ಯುವರ್ ಕ್ರೆಡಿಟ್ ಅಂಡ್ ಡೆಬಿಟ್ ಕಾರ್ಡ್ಸ?’ ಎಂದು ಕೇಳಿದರು.
ಹೆಸರಿಗೆ ಟೂರಿಸ್ಟು. ಒಂದೂ ಡೆಬಿಟ್ ಕಾರ್ಡ ಇಲ್ಲ. why?
ನನ್ನ ಹತ್ತಿರ ಯಾವ ಕಾರ್ಡೂ ಇರಲಿಲ್ಲ. ಅವರ ಅನುಮಾನ ಇನ್ನೂ ಹೆಚ್ಚಾಯಿತೇನೋ. ಟೂರಿಸ್ಟು ಅಂತ ಬಂದವನ ಹತ್ತಿರ ಬ್ಯಾಂಕಿನ ಯಾವ ಕಾರ್ಡೂ ಇಲ್ಲ ಅಂದರೆ ನಂಬುವುದು ಹೇಗೆ. ಇಲ್ಲ !… ಇವನು ಇಲ್ಲಿ ಅನಿವಾಸಿಯಾಗಿ ವಾಸಿಸಲು ಬಂದ ಅಕ್ರಮ ವಲಸಿಗನಿರಬೇಕು ಎಂದು ಭಾವಿಸಿರಬೇಕು. ಕೂಡಲೇ ನನ್ನನ್ನು ಸಂಪೂರ್ಣ ತನಿಖೆ ಮಾಡಿದರು. ‘ಆಮಸ್ಟರ್ ಡ್ಯಾಮಿ’ನಲ್ಲಿ ನನ್ನ ಮಗ ಇದ್ದಾನೆ. ಆತನ ಬಳಿ ಹೋಗಿ ಉಳಿದುಕೊಂಡು ವೀಸಾ ಮುಗಿಯುತ್ತಲೂ ವಾಪಸಾಗುತ್ತೇನೆ. ನನ್ನೆಲ್ಲ ಖರ್ಚನ್ನೂ ಅವನೇ ವಹಿಸಿಕೊಂಡಿದ್ದಾನೆ. ಎಲ್ಲಕ್ಕೂ ಅವನೇ ವ್ಯವಸ್ಥೆ ಮಾಡಿದ್ದಾನೆ ಅಂದರೂ ಅವರು ನಂಬಲಿಲ್ಲ. ಅಷ್ಟಕ್ಕೂ ಇನ್ನೂ ಎಡವಟ್ಟು ಆದದ್ದೇನಂದರೆ. ಅವರು ಅಂದುಕೊಂಡದ್ದು ನಾನು ತಮಿಳು ಭಾಷೆಯವ. ನನ್ನ ಹೆಸರು ಹೂ.ಲೀ.ಶೇಖ್ ಎಂದು ಪ್ಯಾರೀಸಿನಲ್ಲಿ ಅಕ್ರಮವಾಗಿ ಬಂದು ಉಳಿದ ತಮಿಳರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ಇಲ್ಲಿ ಹೊಟೆಲ್ಲು, ಬೀದೀ ಮಾರಾಟ, ಇತ್ಯಾದಿ ಇತರೆ ಅನಧಿಕೃತ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕೊನೆಗೆ ಅನಿವಾಸಿಗಳಾಗಿ ಇಲ್ಲಿಯೇ ಉಳಿದು ಬಿಡುತ್ತಾರೆ. ಈಗಾಗಲೇ ಫ್ರಾನ್ಸ ಸರಕಾರಕ್ಕೆ ತಮಿಳರು ತಲೆಬೇನೆ ತಂದದ್ದೂ ನನಗೆ ಗೊತ್ತಿತ್ತು. ಅದೇ ನಿಟ್ಟಿನಲ್ಲಿಯೇ ನನಗೆ ಪ್ರಶ್ನೆಗಳು ಎದುರಾದವು. ಅವರ ಬಾಯಲ್ಲಿ ನನ್ನ ಹೆಸರು ಹೂ.ಲೀ.ಶೇಖ್ ಆಗಿತ್ತು. ಕನ್ನಡ ಅಂದರೆ ‘ವಾಟ್ ಈಜ್ ಕೆನ್ನಡಾ?’ ಎಂದೂ ಪ್ರಶ್ನಿಸಿದರು. ನಾನು ಕನ್ನಡಿಗ. ಕರ್ನಾಟಕದವ. ದಕ್ಷಿಣ ಭಾರತದಲ್ಲಿ ಕರ್ನಾಟಕ ದೊಡ್ಡ ರಾಜ್ಯ. ಬೇಕಾದ್ರೆ ಇಂಡಿಯಾದ ಮ್ಯಾಪ್ ನೋಡಿರಿ ಅಂದೆ.
ಅವರ ದೃಷ್ಟಿಯಲ್ಲಿ ಇಂಡಿಯಾದಲ್ಲಿ ಇರೋದು ಮೂರೇ ಭಾಷೆ!
ಅವರಿಗೆ ಅದ್ಯಾವುದೂ ಬೇಕಾಗಿರಲಿಲ್ಲ. ‘ಯುವರ್ ನೇಮ್ ಈಸ್ ಹೂ.ಲೀ. ಶೇಖ್. ಯು ಆರ್ ಫ್ರಮ್ ಹೈದರಾಬಾದ್. ಯೂ ಟೆಲುಗೂ…’ ಎಂದಾಗ ಇವರಿಗೆ ಏನು ಹೇಳಬೇಕೆಂದು ಒದ್ದಾಡಿದೆ. ನನ್ನ ಹೆಸರು ನನ್ನ ಮುಂದೆಯೇ ಅಪಭ್ರಂಶ ಆಗುತ್ತಿದೆ. ಶೇಖರ… ಶೇಖ್ ಆಗುತ್ತಿದೆಯಲ್ಲ. ಯುರೋಪಿನಲ್ಲಿ ತೆಲುಗು, ತಮಿಳು ಅಂದರೆ ಬೇಗ ಅರ್ಥವಾಗುತ್ತದೆ. ಕನ್ನಡ ಅಂದರೆ ಯಾಕೆ ಗೊತ್ತಾಗುವುದಿಲ್ಲ? ಅವರ ದೃಷ್ಟಿಯಲ್ಲಿ ಇಂಡಿಯಾದಲ್ಲಿ ಇರೋದು ಮೂರೇ ಭಾಷೆ. ಹಿಂದಿ. ತಮಿಳು,ತೆಲುಗು ಮಾತ್ರ. ಕನ್ನಡದ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿವೆ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ ಎಂದು ಇವರಿಗೆ ಹೇಗೆ ತಿಳಿಸಿ ಹೇಳುವುದು. ಇಂಥ ಸಂದರ್ಭದಲ್ಲೂ ತಮಿಳು ತೆಲುಗರ ಬಗ್ಗೆ ಹೆಮ್ಮೆ ಅನ್ನಿಸಿತು. ಹೇಗೋ ಏನೋ. ತಮ್ಮ ಭಾಷೆಯನ್ನು ಕಡಲಾಚೆಗೂ ಒಯ್ದಿದ್ದಾರೆ. ಅವರಿಗೆ ಸಾಧ್ಯವಾದದ್ದು ನಮ್ಮವರಿಗೆ ಯಾಕೆ ಆಗಿಲ್ಲ. ಏನು ಕಾರಣ ಎಂದೂ ಯೋಚಿಸಿದೆ.
ಹೊರಗಿನಿಂದ ಮತ್ತೊಬ್ಬ ಲೇಡೀ ಪೋಲೀಸು ಬಂದು ಫ್ರೆಂಚಿನಲ್ಲಿ ಏನೋ ಹೇಳಿದಳು. ‘ಯುವರ್ಸ ಪೋನ್ ಕಾಲ್. ಗೋ…ಗೋ.. ಫಾಸ್ಟ!’ ಅಂದರು ವಿಚಾರಿಸುತ್ತಿದ್ದ ಪೋಲೀಸು.
ನನಗೆ ಮುಜುಗುರ. ಕಳಚಿದ ಶರ್ಟು ಇನ್ನೂ ಪೋಲೀಸರ ವಶದಲ್ಲಿತ್ತು. ಅವರು ಅದನ್ನು ನನಗೆ ಕೊಡಲಿಲ್ಲ. ಬನಿಯನ್ನು ಮೇಲೆಯೇ ಆ ಲೇಡೀ ಪೋಲೀಸ ಜೊತೆ ಹೋದೆ. ಅದೊಂದು ಹಿರಿಯ ಪೋಲೀಸ ಅಧಿಕಾರಿಯ ಚೇಂಬರ್ ಆಗಿತ್ತು. ಪಕ್ಕದಲ್ಲಿ ಟೇಬಲ್ ಮೇಲೆ ತಗೆದಿಟ್ಟ ಪೋನು ರಿಸಿವರ್.ಅದು ನನಗಾಗಿ ಕಾಯುತ್ತಿತ್ತು. ಯಾರಿರಬೇಕು? ನೆದರಲ್ಯಾಂಡಿನಲ್ಲಿದ್ದ ಮಗ ಈಗ ಆಮಸ್ಟರ್ ಡ್ಯಾಮ್ ಏರ್‌ಪೋರ್ಟಿಗೆ ಬಂದು ಕಾಯುತ್ತಿದ್ದಾನೇನೋ ಎಂದು ಧಾವಿಸಿ ಪೋನು ಎತ್ತಿಕೊಂಡೆ. ಆ ಕಡೆಯಿಂದ ಒಂದು ಹೆಣ್ಣಿನ ದನಿ ಕೇಳಿ. ಮತ್ತಷ್ಟು ದಿಗಿಲಾಯಿತು.
ಯಾರು ಈ ರೋಹಿಣಿ?
‘ಹಲೋ ನಮಸ್ತೆ. ಮೈ ಇಧರಸೆ ರೋಹಿಣಿ ಬಾತ್ ಕರ್‌ರಹೀ ಹೂಂ…’
ಯಾರು ಈ ರೋಹಿಣಿ? ಎಲ್ಲಿಂದ ಮಾತಾಡುತ್ತಿದ್ದಾಳೆ? ಎಂದು ಗಲಿ ಬಿಲಿಗೊಂಡಾಗ ಅಲ್ಲಿಯ ಪೋಲೀಸ ಅಧಿಕಾರಿಯೊಬ್ಬ ಹೇಳಿದ. ‘ ಅವರು ದುಭಾಷಿ. ಇಂಗ್ಲೀಷ್ – ಹಿಂದೀ ಯಾವುದರಲ್ಲಾದರೂ ಮಾತಾಡು…’ ಅಂದರು. ನನಗೆ ದೊಡ್ಡ ಹೊರೆ ಇಳಿಸಿದಂತಾಯಿತು. ನನ್ನ ಎಲ್ಲಾ ಸಮಸ್ಯೆಗಳನ್ನು ಈಕೆಯ ಹತ್ತಿರ ಹೇಳಬೇಕು. ನಾನು ಕೂಡಲೇ ವಿಮಾನ ಬದಲಿಸಬೇಕಾಗಿದೆ ಎಂದು ಇವಳ ಮೂಲಕ ಇವರಿಗೆ ಮನವರಿಕೆ ಮಾಡಿಸಬೇಕು ಎಂದು ನಿರ್ಧರಿಸಿದೆ. ನಾನು ಹಿಂದಿಯಲ್ಲಿ ಎಲ್ಲ ಹೇಳಿದೆ. ಯಾಕಂದರೆ ಅಲ್ಲಿ ನನ್ನ ಮಾತೃಭಾಷೆ ಕನ್ನಡ ಉಪಯೋಗಕ್ಕೆ ಬಾರದು.
‘ ಜೀ…! ನಾನು ಕನ್ನಡಿಗ. ಕರ್ನಾಟಕದವ. ನನ್ನ ಹೆಸರು ಶೇಖ್ ಅಲ್ಲ. ಶೇಖರ್. ಅವರು ‘ರ’ ಕಾರ ಹೇಳುತ್ತಿಲ್ಲ. ಮಗನನ್ನು ನೋಡಲು ಟೂರಿಷ್ಟ ವೀಸಾದ ಮೇಲೆ ನೆದರಲ್ಯಾಂಡಿಗೆ ಹೋಗುತ್ತಿದ್ದೇನೆ. ನನಗೆ ಅವಕಾಶ ಮಾಡಿಕೊಡಿ’ ಎಂದು ಹೇಳಿದೆ. ಆಕೆ ಸಮಾಧಾನದಿಂದ ಎಲ್ಲವನ್ನೂ ಕೇಳಿದಳು. ಮಾತಾಡಿದಳು. ಇಲ್ಲಿಯ ಪೋಲೀಸರು ನನ್ನ ಬಗ್ಗೆ ತಾಳಿರುವ ಅನುಮಾನಗಳು ಏನು ಎಂದು ಹೇಳಿದಳು. ನಾನು ಶ್ರೀಲಂಕಾದಿಂದ ಓಡಿ ಬಂದ ತಮಿಳಿನವ ಎಂದು ಅವರು ಭಾವಿಸಿದ್ದರಂತೆ. ಅಲ್ಲಿ ಎಲ್.ಟಿ.ಟಿ.ಇ. ಪ್ರಭಾಕರನ್ ಸತ್ತು ಆರು ತಿಂಗಳಾಗಿತ್ತಷ್ಟೇ. ಅದರ ಹಿಂದೆಯೇ ಶ್ರೀಲಂಕಾದಿಂದ ತಮಿಳರನ್ನು ಓಡಿಸುವ ಕಾರ್ಯಕ್ಕೆ ಸಿಂಹಳೀಯರು ಕೈ ಹಾಕಿದ್ದರು. ಅಲ್ಲಿದ್ದ ತಮಿಳರು ಇಂಡಿಯಾಕ್ಕೆ ಬಂದರೆ ರಕ್ಷಣೆ ಸಿಗಲಾರದೆಂದು ಅವರೆಲ್ಲ ಪ್ಯಾರೀಸ ಮೂಲಕ ಯುರೋಪ್‌ನಲ್ಲಿ ನಿವಾಸಿಯಾಗಲು ಪ್ರಯತ್ನಿಸುತ್ತಿದ್ದರು. ಆ ಕಾರಣದಿಂದಲೇ ಫ್ರಾನ್ಸ ಸರಕಾರ ತಮಿಳರ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು. ನಾನೂ ‘ತಮಿಳಿಗ’ ಎಂದು ಊಹಿಸಿದ ಫ್ರೆಂಚ್ ಪೋಲೀಸರು ಇಷ್ಟೆಲ್ಲ ಹಗರಣಕ್ಕೆ ಕಾರಣರಾಗಿದ್ದರು. ನೀವು ತಮಿಳಿಗ ಅಲ್ಲ ಅನ್ನುವುದಕ್ಕೆ ಏನಾದರೂ ಫ್ರೂಫ್ ಇದ್ದರೆ ಕೊಡಿ ಅಂದಳು. ನನಗೆ ಆ ಕ್ಷಣ ನೆನಪಾದದ್ದು ನನ್ನ ಮೇಲ್ ನಲ್ಲಿದ್ದ ನನ್ನ ಬಯೋಗ್ರಫಿ. ಮತ್ತು ನನ್ನ ಕೈಚೀಲದಲ್ಲಿದ್ದ ನನ್ನದೊಂದು ಪ್ರಕಟಿತ ನಾಟಕ. ಮತ್ತು ಮೂಡಲಮನೆ ಧಾರಾವಾಹಿ ಪ್ರಸಾರವಾಗುತ್ತಿದ್ದಾಗ ನನ್ನ ಬಗ್ಗೆ ಬಂದಿದ್ದ ಒಂದು ಕೈಪಿಡಿ ಪುಸ್ತಕ. ಮತ್ತು ನನ್ನದೇ ಆದ ವೆಬ್ ಪೇಜ್. ಅಷ್ಟನ್ನೂ ಕೂಡಲೇ ಪೋಲೀಸರಿಗೆ ಒಪ್ಪಿಸಿದೆ.
ನನ್ನ ಪ್ರಕಟಿತ ಪುಸ್ತಕ ಮತ್ತು ನನ್ನ ಬಯೋಗ್ರಾಫಿಯನ್ನು ನೋಡಿದ ತಕ್ಷಣ ಅವರಿಗೇನನ್ನಿಸಿತೋ.ಹಿರಿಯ ಅಧಿಕಾರಿ ಫ್ರೆಂಚಿನಲ್ಲಿ ಏನೋ ಸೂಚಿಸಿದರು. ಕೂಡಲೇ ನನ್ನನ್ನು ಹೊರಗೆ ಕರೆದುಕೊಂಡು ಬಂದು ಮೊದಲು ಕೂತಿದ್ದ ಬೆಂಚ್ ಮೇಲೆ ಕೂಡಲು ಹೇಳಿ ಹೋದರು. ನನಗೆ ಇನ್ನೂ ಆತಂಕವಿತ್ತು. ಅವರು ಸ್ಪಷ್ಟವಾಗಿ ಏನೂ ಹೇಳಿರಲಿಲ್ಲ. ಅಲ್ಲಿದ್ದ ಕಪ್ಪು ಪೋಲೀಸನನ್ನು ಮಾತಾಡಿಸಿದೆ. ಆತ ಒಳ್ಳೆಯವನೆನಸಿದ. ‘ನಿನ್ನ ಅದೃಷ್ಟ ಚನ್ನಾಗಿಲ್ಲ. ಇವತ್ತು ರಾತ್ರಿಯ ಫ್ಲೈಟ್‌ಗೆ ನಿನ್ನನ್ನು ಬಂಗಲೂರಿಗೆ ವಾಪಸು ಕಳಿಸುತ್ತಾರೆ. ಅಲ್ಲಿಯ ತನಕ ಇಲ್ಲೇ ಜೈಲು ಕೋಣೆಯಲ್ಲಿ ಇರಬೇಕು. ನೋವನ್ ಅನದರ್ ವೇ…!’ ಅಂದ ಆತ. ನನ್ನ ಜಂಘಾಬಲವೇ ಉಡುಗಿತು. ಆಗಲೇ ನನ್ನ ವಿಮಾನ ಹೊರಡುವುದಕ್ಕೆ ಕೇವಲ ಹದಿನೈದು ನಿಮಿಷವಿತ್ತು. ಈಗಾಗಲೇ ಆ ವಿಮಾನದ ಪ್ರವೇಶ ದ್ವಾರ ಕ್ಲೋಜಾಗಿರಬೇಕು. ಏನು ಮಾಡುವುದೆಂದು ಗೊತ್ತಾಗದೇ ಕೋಳ ಹಾಕಿಸಿಕೊಂಡ ಹುಡುಗಿಯನ್ನು ನೋಡುತ್ತ ಕೂತೆ.
ವಿದೇಶದಲ್ಲಿ ಕನ್ನಡ ಬೆಳೆಸಬೇಕಾದವರು ಪಂಡಿತರಲ್ಲ. ಸಾಮಾನ್ಯ ಕನ್ನಡಿಗರು.
‘ಯೂ ಆರ್ ಲಕ್ಕೀ. ರಾತ್ರಿವರೆಗೆ ಅಷ್ಟೇ ನಿಮಗೆ ಜೇಲು ಕೋಣೆ. ನಾನು ಇಂಗ್ಲೆಂಡಿಗೆ ಹೋಗುವುದಿತ್ತು. ಇಲ್ಲಿ ಹಿಡಿದು ಕೂಡಿಸಿದ್ದಾರೆ’ ಎಂದು ಗಳಗಳ ಅತ್ತಳು. ಕೂಡಲೇ ನನಗೆ ಹಿಟ್ಲರ್ ನೆನಪಾದ. ವಿದೇಶ ಪ್ರಯಾಣ ಎಂದು ನಾವು ನಮ್ಮ ದೇಶದಲ್ಲಿ ತುತ್ತೂರಿ ಊದಿಕೊಂಡು ಬಂದಿರುತ್ತೇವೆ. ಇಲ್ಲಿ ಬಂದಾಗ ಇಂಥ ಘಟನೆಗಳು ನಡೆದಾಗ ನಮ್ಮ ಬೆನ್ನ ಹಿಂದೆ ಯಾರೂ ಇರುವುದಿಲ್ಲ. ಅಷ್ಟರಲ್ಲಿ ಇಮಿಗ್ರೇಶನ್‌ನಲ್ಲಿ ನನ್ನನ್ನು ಹಿಡಿದು ಹಾಕಿದ್ದ ಆ ಎತ್ತರದ ಲೇಡಿ ಇನೆಸ್ಪೆಕ್ಟರ್ ಧಾವಿಸಿ ಬಂದಳು. ಅವಳ ಕೈಯಲ್ಲಿ ನನ್ನ ಪಾಸಪೋರ್ಟ ಮತ್ತು ಎಲ್ಲ ದಾಖಲೆಗಳನ್ನಿಟ್ಟಿದ್ದ ಟ್ರೇ ಇತ್ತು. ನನ್ನ ಶರ್ಟು, ಬೆಲ್ಟು, ಚಾಳೀಸು, ಬಂಗಾರದ ಚೈನು, ಉಂಗುರ ಎಲ್ಲ ಇದ್ದವು.
‘ಕಮಾನ್. ಆಯ್ ಆಯ್ ಸಾರಿ. ನಾನು ನಿಮಗೆ ತೊಂದರೆ ಕೊಟ್ಟೆ. ಬೇಗ ಬಟ್ಟೆ ಹಾಕಿಕೊಳ್ಳಿ. ನಿಮ್ಮ ಆಮ್‌ಸ್ಟರ್ ಡ್ಯಾಮ್ ಫ್ಲೈಟ್‌ಗೆ ಕೇವಲ ಹತ್ತು ನಿಮಿಷವಿದೆ. ಯೂ ಹ್ಯಾವ್ ರಿಲೀಜ್ಡ…. ಕಂಮ್ ಫಾಸ್ಟ…’ ಅಂದಳು. ನನಗೆ ನಂಬಲು ಆಗಲೇ ಇಲ್ಲ. ರಿಜಿಸ್ಟರನಲ್ಲಿ ಸಹಿ ಮಾಡಿಸಿಕೊಂಡರು. ತಡಮಾಡದೆ ಬಟ್ಟೆ ಹಾಕಿಕೊಂಡೆ. ಬೆಲ್ಟು ಹಾಕಿಕೊಳ್ಳಲು ಸಮಯವಿರಲಿಲ್ಲ. ಎಲ್ಲವನ್ನೂ ಗುಡ್ಡೆ ಹಾಕಿಕೊಂಡು ಬ್ಯಾಗಿಗೆ ತುರುಕಿದೆ. ಕರಿಯ ಪೋಲೀಸ ನನ್ನನ್ನು ಹೊರಗೆ ಕರೆದುಕೊಂಡು ನಡೆದ. ಹೋಗುವಾಗ ಇನ್ನೂ ಬಂದಿಯಾಗಿ ಕೂತಿದ್ದ ಆ ಇಂಗ್ಲೆಂಡಿನ ಹುಡುಗಿಯನ್ನು ನೋಡಿದೆ. ಆಕೆ ತುಂಬಿದ ಕಣ್ಣಲ್ಲಿ ನನ್ನನ್ನೇ ನೋಡುತ್ತಿದ್ದಳು.
ಹೊರಗೆ ಒಂದು ಎಲೆಕ್ಟ್ರಿಕ್ ವಾಹನ ಸಿದ್ಧವಾಗಿತ್ತು. ವಾಚು ನೋಡಿಕೊಂಡೆ ವಿಮಾನ ಹೊರಡಲು ಕೇವಲ ಏಳು ನಿಮಿಷ. ವಾಹನ ಸುಯ್ ಅನ್ನುತ್ತ ಒಳ ಮಾರ್ಗದಲ್ಲಿ ನುಗ್ಗಿ ಎರಡೇ ನಿಮಿಷದಲ್ಲಿ ಗೇಟ್ ಬಳಿ ನಿಂತಿತ್ತು. ಪೋಲೀಸರಿಂದ ಪೈಲೆಟ್‌ಗೆ ಸೂಚನೆ ಹೋಗಿತ್ತಂತೆ. ನಾನು ವಿಚಾರಣೆ ಮುಗಿಸಿ ಬರುವ ತನಕ ಅಂದರೆ ಎರಡು ನಿಮಿಷ ಕಾಯಲು ಸೂಚನೆ ಹೋಗಿತ್ತಂತೆ.
ನನ್ನನ್ನು ಕಳಿಸಲು ಬಂದಿದ್ದ ಕಪ್ಪು ಪೋಲೀಸ ಅಲ್ಲಿನವರಿಗೆ ಫ್ರೆಂಚ್‌ನಲ್ಲಿ ಏನೋ ಹೇಳಿದ. ಕೂಡಲೇ ಅವರು ನನ್ನನ್ನು ಒಂದು ಸಲ ಚೆಕ್ ಮಾಡಿ ಒಳಗೆ ಬಿಟ್ಟರು. ಗೇಟಿನಲ್ಲಿ ನಾನೊಬ್ಬನೇ ಪ್ರವಾಸಿಗ. ಅಲ್ಲಿದ್ದ ಕೆ.ಎಲ್.ಎಮ್. ವಿಮಾನ ಸಿಬ್ಬಂದಿ ನನ್ನ ದಾರಿಯನ್ನೇ ನೋಡುತ್ತಿದ್ದರೇನೋ. ಕೈ ಹಿಡಿದು ಒಳಗೆ ಕರೆದುಕೊಂಡು ಹೋದರು. ಹಿಂದಿನಿಂದ ವಿಮಾನದ ಬಾಗಿಲೂ ಮುಚ್ಚಿಕೊಂಡಿತು. ನಾನು ಒಳಗೆ ಬರುತ್ತಿದ್ದಂತೆ ಒಮ್ಮೆ ಕಣ್ಣಾಡಿಸಿದೆ. ವಿಮಾನ ಭರ್ತಿಯಾಗಿತ್ತು. ವಿ.ಆಯ್.ಪಿ.ಗಾಗಿ ವಿಮಾನ ಕಾಯುವುದು ಕೇಳಿದ್ದೆ. ಈಗ ನಾನೂ ಅವರ ದೃಷ್ಟಿಯಲ್ಲಿ ವಿ.ಆಯ್.ಪಿಯಾಗಿದ್ದೆ ಅನಿಸಿತು.
ನಡೆದ ಘಟನೆಯನ್ನು ನೆನೆಯುತ್ತ ಕಣ್ಣು ಮುಚ್ಚಿದೆ. ಕನ್ನಡವು ಈ ನೆಲದಲ್ಲಿ ಅದೃಶ್ಯ. ಕನ್ನಡದ ಬಗ್ಗೆ ಏನೂ ಗೊತ್ತಿಲ್ಲ ಇಲ್ಲಿನವರಿಗೆ ತಮಿಳು, ತೆಲುಗಿನ ಅಸ್ತಿತ್ವ ಗೊತ್ತಿದೆ.
ತಮ್ಮ ಭಾಷೆಯನ್ನು ವಿದೇಶದ ನೆಲದಲ್ಲಿ ಪಸರಿಸಿದವರು ದೊಡ್ಡ ಲೇಖಕರೂ ಅಲ್ಲ. ದೊಡ್ಡ ಭಾಷಾ ಪಂಡಿತರೂ ಅಲ್ಲ. ಸಾಮಾನ್ಯ ಜನ ಅನ್ನುವುದು ಆಗಲೇ ನನ್ನ ಗಮನಕ್ಕೆ ಬಂದಿತ್ತು. ಅದಕ್ಕೆ ಕಾರಣಗಳು, ಸಂದರ್ಭಗಳು ಬೇರೆಯಾಗಿವೆ ಎಂದೂ ಯೋಚಿಸತೊಡಗಿದೆ. ವಿದೇಶಕ್ಕೆ ಹೋಗುವ ನಮ್ಮ ಕನ್ನಡ ಯುವಕರು ಅಲ್ಲಿದ್ದು ನೌಕರಿ ಮಾಡುವುದಷ್ಟೇ ತಮ್ಮ ಕೆಲಸವೆಂದು ಭಾವಿಸಬಾರದು. ಕನ್ನಡವನ್ನು ತಮಿಳರಂತೆ ವಿದೇಶದಲ್ಲಿ ಪಸರಿಸಿದಾಗಲೇ ಕನ್ನಡ ಅಲ್ಲಿನವರಿಗೆ ಗೊತ್ತಾಗುತ್ತದೆ.
ನಮ್ಮ ವಿಮಾನ ಆಗಲೇ ನಲವತ್ತು ಸಾವಿರ ಅಡಿ ಎತ್ತರಕ್ಕೆ ಚಿಮ್ಮಿ ನೆದರ್‌ಲ್ಯಾಂಡಿನತ್ತ ಹಾರುತ್ತಿತ್ತು. ಆಯಾಸವಾದಂತೆ ಅನಿಸಿತು. ಮೆಲ್ಲಗೆ ಸೀಟಿಗೊರಗಿ ಕಣ್ಣು ಮುಚ್ಚಿದೆ.
ಲೇಖನ- ಹೂಲಿಶೇಖರ್