ಪತ್ರೊಡೆ ನೋಡಲು, ತಿನ್ನಲು ಸುಲಭ. ಮಾಡುವ ವಿಧಾನ ಸ್ವಲ್ಪ ಕಷ್ಟ. ಆದರೆ ಚಂದ್ರಕಲಾ ಹೇಮರಾಜ್ ಅವರು ಕಲಿಸಲು ಸಿದ್ದ. ಕಲಿಯಿರಿ, ಸವಿಯಿರಿ ಮತ್ತು ನಿಮ್ಮ ಅಭಿಪ್ರಾಯ ತಿಳಿಸಲು ಮರೆಯದಿರಿ…
ಫೋಟೋ ಕೃಪೆ : happietrio
ಪತ್ರೊಡೆ ಮಾಡಲು ಬೇಕಾಗಿರುವ ಸಾಮಗ್ರಿಗಳು:
- ೭-೮ ಕೆಸುವಿನ ಎಲೆಗಳು
- ೨ ಲೋಟ ದೋಸೆ ಅಥವಾ ಇಡ್ಲಿ ಅಕ್ಕಿ
- ೧ ಲೋಟ ಹೆಸರು ಕಾಳು
- ೧ ಚಮಚ ದನಿಯಾ
- ೧/೨ ಚಮಚ ಜೀರಿಗೆ
- ೪-೫ ಬ್ಯಾಡಗಿ ಮೆಣಸು
- ೧/೪ ಚಮಚ ಮೆಂತ್ಯೆ
- ೧/೪ ಚಮಚ ಅರಿಶಿಣ
- ಉಪ್ಪು ರುಚಿಗೆ
- ಸ್ವಲ್ಪ ಹುಣಸೆ ಹಣ್ಣು
(ಕೆಲವರಿಗೆ ಕೆಸುವಿನ ಎಲೆಯಿಂದ ತುರಿಕೆ ಸಮಸ್ಯೆ ಬರಬಹುದು ಹಾಗಾಗಿ ತುರುಕೆ ಸಮಸ್ಯೆಯನ್ನು ನಿಯಂತ್ರಿಸಲು ಹುಣಸೆಹಣ್ಣನ್ನು ಬಳಸಲಾಗುವುದು).
ಕೆಸುವಿನ ಎಲೆಗಳನ್ನು ಸಣ್ಣದಾಗಿ ಕತ್ತರಿಸಿಕೊಂಡು ಉಳಿದ ಎಲ್ಲಾ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು (ಅಕ್ಕಿ ಮತ್ತು ಹೆಸರು ಕಾಳನ್ನು 3 ಗಂಟೆಗಳ ಕಾಲ ನೆನೆಸಿರಬೇಕು). ಈ ಮಸಾಲೆಗೆ ಸಣ್ಣಗೆ ಹೆಚ್ಚಿದ ಎಲೆಗಳನ್ನು ಸೇರಿಸಿ ದಪ್ಪ ದಪ್ಪ ಉಂಡೆಗಳನ್ನು ಮಾಡಿಕೊಂಡು ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಈ ಉಂಡೆಗಳನ್ನು ಬೇಯಿಸಿಕೊಳ್ಳಬೇಕು. ನಂತರ ಬೆಂದಿರುವ ಉಂಡೆಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು.
ಮಸಾಲೆಗೆ ಬೇಕಾಗಿರುವ ಸಾಮಗ್ರಿಗಳು :
- ೨ ಕಪ್ ತೆಂಗಿನ ತುರಿ
- ೧ ಚಮಚ ದನಿಯ
- ೧/೨ ಚಮಚ ಜೀರಿಗೆ
- ೧/೪ ಚಮಚ ಮೆಂತ್ಯ
- ೧/೨ ಈರುಳ್ಳಿ
- ೫ ಎಸಳು ಬೆಳ್ಳುಳ್ಳಿ
- ೬ ಒಣಮೆಣಸಿನಕಾಯಿ
ಮೇಲಿನ ಎಲ್ಲಾ ಮಸಾಲೆ ಪದಾರ್ಥಗಳನ್ನು ಹುರಿದು ಅರಶಿನ, ಹುಣಸೆಹಣ್ಣು, ಉಪ್ಪು ನೀರು ಸೇರಿಸಿ ರುಬ್ಬಿಕೊಳ್ಳಬೇಕು.
ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ರುಬ್ಬಿದ ಮಸಾಲೆ ಅರ್ಧ ಲೀಟರ್ ನಷ್ಟು ನೀರು ಸೇರಿಸಿ ಕುದಿಸಿ, ಕುದಿಯುವ ಮಸಾಲೆಗೆ ಸಣ್ಣದಾಗಿ ಕತ್ತರಿಸಿ ಕೊಂಡಿರುವ ಉಂಡೆಗಳನ್ನು ಸೇರಿಸಿ ೫ ನಿಮಿಷ ಬೇಯಿಸಿ.
ಇದನ್ನು ೨ ಗಂಟೆಗಳ ಕಾಲ ಹಾಗೆಯೇ ಉಂಡೆಗಳು ಮಸಾಲೆಯನ್ನು ಎಳೆದುಕೊಳ್ಳಲು ಬಿಡಬೇಕು. ೨ ಗಂಟೆಗಳ ನಂತರ ರುಚಿ ರುಚಿಯಾದ ಪತ್ರೊಡೆ ಸವಿಯಲು ಸಿದ್ಧ.
- ಕೈ ಚಳಕ : ಚಂದ್ರಕಲಾ ಹೇಮರಾಜ್
