ಮಾವಿನಹಣ್ಣಿಗೆ ತೆಂಗಿನಕಾಯಿ ತುರಿ, ಏಲಕ್ಕಿ, ಅನ್ನವನ್ನು ಸೇರಿಸಿದರೆ ರುಚಿ ಹೇಗಿರಬಹುದು ಊಹಿಸಿ ನೋಡಿ. ಲೇಖಕರಾದ ಹೆಚ್ ವಿ ಮೀನ ಅವರು ಹೊಸ ಸಿಹಿ ಪರಿಚಯಿಸಿದ್ದಾರೆ, ತಪ್ಪದೆ ಮುಂದೆ ಓದಿ…

ಬೇಕಾಗುವ ಸಾಮಗ್ರಿಗಳು:
- ತೆಂಗಿನಕಾಯಿ ತುರಿ – 1 ಬಟ್ಟಲು
- ಮಾವಿನ ಹಣ್ಣಿನ ಪೇಸ್ಟ್ – 1/2 ಬಟ್ಟಲು
- ಬೆಲ್ಲದ ಪುಡಿ – 1/2 ಬಟ್ಟಲು
- ಅನ್ನ – 3 -4 ಚಮಚ (ನಾರ್ಮಲ್ ಅಕ್ಕಿ ಅಥವಾ ಬಾಸುಮತಿ ಅಕ್ಕಿಯ ಅನ್ನ)
- ಏಲಕ್ಕಿ ಪುಡಿ – ಸ್ವಲ್ಪ
- ದ್ರಾಕ್ಷಿ, ಗೋಡಂಬಿ – 10-15
- ಕೇಸರಿ ದಳಗಳು – 6-7 ( ಬೇಕಿದ್ದಲ್ಲಿ)
- ತುಪ್ಪ – 3 ಚಮಚ

ಮಾಡುವ ವಿಧಾನ:
- ಮೊದಲಿಗೆ ತೆಂಗಿನಕಾಯಿ ತುರಿ, ಏಲಕ್ಕಿ ಹಾಗೂ ಬೆಲ್ಲವನ್ನು ನುಣ್ಣಗೆ ರುಬ್ಬಿ ಇಡಿ.
- ಮಾವಿನ ಹಣ್ಣನ್ನು ಕೂಡ ರುಬ್ಬಿಕೊಳ್ಳಿ.
- ಒಂದು ಬಾಂಡ್ಲಿಯಲ್ಲಿ 2 ಚಮಚ ತುಪ್ಪ ಬಿಸಿ ಮಾಡಿ ಅದರಲ್ಲಿ ದ್ರಾಕ್ಷಿ, ಗೋಡಂಬಿ ಹಾಕಿ ಹುರಿಯಿರಿ.
- ಅದಕ್ಕೆ ರುಬ್ಬಿದ ತೆಂಗಿನ ಹಾಗೂ ಬೆಲ್ಲದ ಮಿಶ್ರಣವನ್ನು ಹಾಕಿ ಒಂದೆರೆಡು ಬಾರಿ ಹುರಿದು ನಂತರ ಅದಕ್ಕೆ ಮಾವಿನ ಹಣ್ಣಿನ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಬೆರೆಸಿ ಹುರಿಯಬೇಕು.
- ಹುರಿಯುತ್ತಿದ್ದಾಗ ಮೃದುವಾದ ಅನ್ನವನ್ನ ಸೇರಿಸಿ ಹಾಗೂ ಹಾಲಿನಲ್ಲಿ ನೆನೆಸಿದ ಕೇಸರಿ ರಸವನ್ನು ಹಾಕಿ ಚೆನ್ನಾಗಿ ಹಲ್ವ ಹದಕ್ಕೆ ಹುರಿಯಿರಿ.
- ನಂತರ ಅದನ್ನು ಚಿಕ್ಕ ಚಿಕ್ಕ ಮಣ್ಣಿನ, ಸ್ಟೀಲ್, ಪಿಂಗಾಣಿ ಬಟ್ಟಲುಗಳಿಗೆ ಹಾಕಿ freezer ನಲ್ಲಿ 4-5 ಗಂಟೆ ಸಮಯ ಇಡಿ ನಂತರ ಸೇವಿಸಿ. ( ಬಿಸಿ ಇದ್ದಾಗಲೂ ಕೂಡ ಸೇವಿಸಬಹುದು). ಈ ಸಿಹಿಯನ್ನು ತಯಾರಿಸಲು ಬಹಳ ಸುಲಭ ಹಾಗೂ ಇದು ಮಕ್ಕಳಿಗೆ ಆರೋಗ್ಯಕರ ತಿನಿಸು.

ನಾವು ಚಿಕ್ಕವರಿದ್ದಾಗ ತೆಂಗಿನಕಾಯಿಯ ಚೂರು ಹಾಗೂ ಬೆಲ್ಲವನ್ನು ಜೊತೆ ಜೊತೆಯಾಗಿ ಸೇವಿಸುತ್ತಿದ್ದೆವು. ಈಗಿನ ಮಕ್ಕಳು ಬೆಲ್ಲ, ತೆಂಗಿನಕಾಯಿಯನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ದೇಹಕ್ಕೆ ಒಳ್ಳೆಯ ಕೊಬ್ಬು ಹಾಗೂ ಕಬ್ಬಿಣದ ಅಂಶ ಬಹಳ ಮುಖ್ಯ ಹಾಗಾಗಿ ಹಣ್ಣಿನ ಜೊತೆ ಬೆರೆಸಿ ಹೋಟೆಲ್ ಮಾದರಿ ರೂಪವನ್ನು ಕೊಟ್ಟರೆ ಖಂಡಿತ ಸೇವಿಸುತ್ತಾರೆ.
ಒಮ್ಮೆಈ ಸಿಹಿಯನ್ನ ಮಾಡಿ ನೋಡಿ.
- ಹೆಚ್ ವಿ ಮೀನ – ಬೆಂಗಳೂರು.
