ರೇಬಿಸ್ ಗೆ ತುತ್ತಾದ ಸಾಕು ನಾಯಿ ಕತೆ – ಡಾ.ಯುವರಾಜ್ ಹೆಗಡೆ



ರೇಬಿಸ್ ಗೆ ತುತ್ತಾದ ಸಾಕು ನಾಯಿಯ ದಾಳಿಯಿಂದ ಚೇತರಿಸಿಕೊಂಡ ಮಾಲೀಕನ ಮಗಳು, ಆ ಹಳೆಯ ದುರ್ಘಟನೆ ನೆನಪಾದಾಗ ಬೆವರಿ ಮತ್ತೆ ವಾಸ್ತವಕ್ಕೆ ಮರಳುತ್ತಾಳೆ. ತಮ್ಮ ಅನುಭವದ ಕತೆಯೊಂದನ್ನು ಡಾ.ಯುವರಾಜ್ ಹೆಗಡೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ…

ಅದು ನನ್ನ ಕಛೇರಿಯ ಕೂಗಳತೆ ದೂರದಲ್ಲಿದ್ದ ಕಾಲೋನಿ. ಅದರಲ್ಲಿ ಎಲ್ಲರೂ ಬದುಕಿಗಾಗಿ ದಿನಕೂಲಿಯನ್ನೇ ಅವಲಂಬಿಸಿದ್ದ ಕುಟುಂಬಗಳು, ಹಳ್ಳಿ ಮನೆಗಳು ಎಂದ ಮೇಲೆ ಮನೆಗಾವಲಿಗಾಗಿ #ಶ್ವಾನವೊಂದನ್ನು ಸಾಕುವುದು ಸಾಮಾನ್ಯ. ಅಲ್ಲಿದ್ದ ಹತ್ತಾರು ನಾಯಿಗಳ ಪೈಕಿ “ಸುಬ್ಬ” ಎಲ್ಲಿರಿಗೂ ಅಚ್ಚುಮೆಚ್ಚು. ಭಯಹುಟ್ಟಿಸುವ ನೋಟವಿದ್ದರೂ ಸೌಮ್ಯ ಸ್ವಭಾವದ, ಬಹಳ ನಿಯತ್ತಿನ ಶ್ವಾನ ಸುಬ್ಬ.ಕಾಲೋನಿಯ ಎಲ್ಲರ ಮನೆಗಳ ಮೇಲೂ ಹದ್ದಿನ ಕಣ್ಣಿಡುತ್ತಲೇ ಮನೆಮಂದಿಯೆಲ್ಲಾ ಕೂಲಿಗಾಗಿ ಹೊರ ಹೋಗಿದ್ದರೆ, ಬಾಗಿಲ ಬಳಿಯೇ ಕಾದಿದ್ದು ಊರವರು ಮತ್ತು ಯಜಮಾನನ ಮೆಚ್ಚುಗೆಗೆ ಪಾತ್ರನಾಗಿದ್ದ . ಆ ವರ್ಷ ಸುತ್ತ ಮುತ್ತಲ ಗ್ರಾಮಗಳಲ್ಲಿ ಹುಚ್ಚು ನಾಯಿಗಳ ಹಾವಳಿ ಅತಿಯಾಗಿತ್ತು. ಅವುಗಳ ಉಪಟಳ ನೀಡಿದ ಊರುಗಳಲ್ಲೆಲ್ಲಾ ಜಾನುವಾರು, ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿದ ನನಗೆ ಸಾಕಪ್ಪಾಸಾಕು ಎನ್ನುವಂತಾಗಿತ್ತು.

ಅಂದು ಯಾಕೋ ಸುಬ್ಬ ಎಂದಿನಂತಿರಲಿಲ್ಲ, ಆತನ ಸ್ವಭಾವದಲ್ಲುಂಟಾಗಿದ್ದ ಬದಲಾವಣೆಯನ್ನು ಯಜಮಾನ ಗಮನಿಸಿದ್ದ. ಅಕ್ಕಪಕ್ಕದ ಮನೆಯ #ನಾಯಿಗಳನ್ನು ಅಟ್ಟಾಡಿಸಿದ್ದ ಸುಬ್ಬನ ಗುಣದಲ್ಲಿನ ವ್ಯತ್ಯಾಸ ಕಂಡು ಸ್ವಲ್ಪ ಅನುಮಾನಕ್ಕೆ ಕಾರಣವಾಗಿ ಯಜಮಾನ ಅದನ್ನು ಹಿಡಿದು ಬಲವಾದ ಸರಪಳಿಯಲ್ಲಿ ಬಿಗಿದು, ಬೇಲಿ ಬದಿಯ ಗೊಬ್ಬರದ ಗಿಡದ ಗೂಟಕ್ಕೆ ಜಡಿದು ಕೆಲಸಕ್ಕೆ ನಡೆದ. ಮದ್ಯಾಹ್ನ ಎಂದಿನಂತೆ ಮನೆ ಮಗಳು ಸುಬ್ಬನಿಗೆ ಊಟ ನೀಡಲು ಬರುತ್ತಿದ್ದಂತೆ ರೌದ್ರಾವತಾರ ತಾಳಿದ್ದ ಸುಬ್ಬನ ಕಣ್ಣುಗಳು ಬೆಂಕಿಯುಂಡೆಯಂತೆ ಕಂಡು ಬರುತ್ತಿದ್ದವು.ಬಾಯಿಯಲ್ಲಿ ವಿಪರೀತ ಜೊಲ್ಲು “ ಅಯ್ಯೋ ಸುಬ್ಬ ನಿನ್ನನ್ನು ಅಪ್ಪಯ್ಯ ಕಟ್ಟಿ ಹಾಕಿದ್ದಾನಂತ ಸಿಟ್ಟು ಬಂತೇನೋ” ಎನ್ನುತ್ತಲೇ ನಾಯಿಗಡಿಗೆಗೆ ಗಂಜಿ ಸುರಿದಳು. ಪ್ರತಿದಿನ ಬಾಲ ಅಲ್ಲಾಡಿಸುತ್ತ ಗಂಜಿ ಸವಿಯುತ್ತಿದ್ದ ಸುಬ್ಬ. ಆದರೆ ಅಂದು ನಡೆದದ್ದೇ ಬೇರೆ, ತನ್ನನ್ನು ಕಟ್ಟಿದ್ದ ಸರಪಣಿಯನ್ನು ಕ್ಷಣಾರ್ಧದಲ್ಲಿ ತುಂಡರಿಸಿ ತನ್ನನ್ನು ಸಾಕಿಸಲುಹಿದ, ಬಿಗಿದಪ್ಪಿ ಮುದ್ದಾಡುತ್ತಿದ್ದ ಮನೆಮಗಳ ಮೇಲೆ ಏಕಾಏಕಿ ದಾಳಿಮಾಡಿದ. ದಾಳಿಯ ತೀವ್ರತೆಗೆ ಆಕೆ ಅಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದು ಬಿದ್ದಳು . ಪ್ರಜ್ಞಾಹೀನಳಾದ ಅವಳ ಮೇಲೆ ತನಗರಿವಿಲ್ಲದೇ ಮನ ಬಂದಂತೆ ದಾಳಿ ಇಟ್ಟ ಸುಬ್ಬ, ಗೊತ್ತು ಗುರಿಯಿಲ್ಲದೆ ಯಾವುದೋ ದಾರಿ ಹಿಡಿದು ಊರು ಬಿಟ್ಟ. ರೌದ್ರಾವತಾರ ತೋರುತ್ತಾ ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಾ ಊರೂರು ಅಲೆದು ಕೊನೆಗೆ ಸುಬ್ಬನಿಗೆ ಹುಚ್ಚು ಹಿಡಿದಿರುವುದು ಖಾತ್ರಿಯಾಗುತ್ತಿದ್ದಂತೆ ಶಿಕಾರಿ ಪ್ರವೀಣನೊಬ್ಬನ ನಾಡಕೋವಿಯ ಗುಂಡಿಗೆ ಬಲಿಯಾದ.

ಫೋಟೋ ಕೃಪೆ : health.clevelandclinic

ಇತ್ತ ಹುಡುಗಿಯ ನರಳಾಟ ದಾರಿಹೋಕರಿಗೆ ಕೇಳಿ ಮಂದಿ ಸೇರಿದರು . ಅವರ ಅಪ್ಪನಿಗೆ ವಿಷಯ ಮುಟ್ಟಿಸಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದರು.ಆಕೆಯ ದಯನೀಯ ಸ್ಥಿತಿಯನ್ನು ಕಂಡು ಮರುಗಿದ ವೈದ್ಯರು ಚಿಂತಾಕ್ರಾಂತರಾಗಿದ್ದರು. ತಲೆ, ಮುಖಕ್ಕೆ ರೇಬಿಸ್ ಪೀಡಿತ ನಾಯಿಗಳು ಕಚ್ಚಿದಾಗ ವೈರಾಣು ಶೀಘ್ರವಾಗಿ ಮೆದುಳು ಸೇರುವ ಸಾದ್ಯತೆ ಇರುವುದರಿಂದ ಅಗತ್ಯ ಆಂಟಿಸೀರ ( ರೋಗ ಪ್ರತಿರೋಧಕ) ತರಿಸುವ ವ್ಯವಸ್ಥೆಯನ್ನು ಮಾಡಬೇಕಾದಾಗ ನಾನು ಸಹಕರಿಸಿ ಅಗತ್ಯ ವ್ಯವಸ್ಥೆಗಳನ್ನು ಸಹ ಮಾಡಿಕೊಟ್ಟೆ. ವೈದ್ಯರು ಮುಂದಿನ ಚಿಕಿತ್ಸೆಯ ರೂಪು ರೇಶೆಗಳನ್ನು ಸಿದ್ದಪಡಿಸಿದರು. ಎಲ್ಲಾ ವ್ಯವಸ್ಥೆಗಳೂ ಸುಗಮವಾಗಿ ನಡೆದು ಸೂಕ್ತ ಚಿಕಿತ್ಸೆಯೂ ದೊರಕಿತು. ಘಟನೆ ನಡೆದ 2 ವಾರಗಳ ನಂತರ ನನ್ನನ್ನು ಹುಡುಕಿ ಬಂದ ಆಕೆ “ಸಾರ್ ನಾನು ಬದುಕುಳಿಯಬಹುದೆ?” ಎಂಬ ಪ್ರಶ್ನೆ ಮುಂದಿಟ್ಟಳು. ಆ ಸಮಯದಲ್ಲಿ ಆಕೆಗೆ ಬೇಕಾದದ್ದು ಸಾಂತ್ವನದ ಜೊತೆಗೆ ಆಕೆಯಲ್ಲಿ ಧೈರ್ಯ ತುಂಬುವ ನುಡಿಗಳು. ನಾನು ಅದನ್ನೇ ಮಾಡಿದೆ. ಇಂತಹ ಹಲವಾರು ಸಂದರ್ಬಗಳನ್ನು ನೋಡಿದ್ದು, ಎಲ್ಲರೂ ಶೀಘ್ರವಾಗಿ ಗುಣಮುಖರಾಗಿದ್ದಾರೆಂದು ತಿಳಿಸಿ, ನೀನು ಖಂಡಿತವಾಗಿ ಗುಣವಾಗುತ್ತೀಯ ಅನುಮಾನವೇ ಬೇಡ ಎಂದಾಗ ಅವಳು ಸಮಾದಾನದ ನಿಟ್ಟುಸಿರು ಬಿಟ್ಟಳು, ಅವಳಲ್ಲಿ ವಿಶ್ವಾಸ ಹೆಚ್ಚಿತು.

ಅವಳ ಎರಡನೆಯ ಪ್ರಶ್ನೆ, ನನ್ನ ಸುಬ್ಬ ಈಗ ಎಲ್ಲಿದ್ದಾನೆ? ನನಗೆ ಆತ ಬೇಕು. ಡಾಕ್ಟ್ರೆ ನೀವು ಹಳ್ಳಿ ಕಡೆ ಹೋಗುವಾಗ ಸುಬ್ಬನನ್ನು ಕಂಡರೆ ನನಗೆ ತಿಳಿಸಿ, ನಾನು ಸಮಾದಾನ ಮಾಡಿ ಅವನನ್ನು ಮನೆಗೆ ಕರೆತರುತ್ತೇನೆ. ಸುಬ್ಬ ಸತ್ತಿರುವ ವಿಚಾರ ಆಕೆಯ ಮುಗ್ಧ ಮನಸ್ಸಿಗೆ ತಿಳಿದಿರಲಿಲ್ಲ.ನಾನೂ ಅದನ್ನು ಆಕೆಗೆ ತಿಳಿಸಲು ಇಚ್ಛಿಸಲಿಲ್ಲ, ಖಂಡಿತ ತಿಳಿಸುತ್ತೇನೆ ಎಂದಷ್ಟೇ ಹೇಳಿದೆ. ನಂತರದ ದಿನಗಳಲ್ಲಿ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಪೂರ್ಣಗೊಳಿಸಿದ ಆಕೆ ಬದುಕುಳಿದಳು.




ಎರಡು ದಶಕಗಳೇ ಉರುಳಿವೆ, ಈಗಲೂ ಆಕೆಯ ಮನೆಯ ಬಳಿ ಹೋಗುವಾಗ ನನ್ನ ಕೆಂಪು ಬಣ್ಣದ ಹೆಲ್ಮೆಟ್ ಕಂಡೊಡನೆ ಓಡಿ ಬರುವ ಆಕೆ ಸಾರ್…. ಅರಾಮಿದೀರ, ಈಗ ಎಲ್ಲಿದೀರ, ಮನೆಯಲ್ಲಿ ಎಲ್ಲರೂ ಆರಾಮ ಮಕ್ಕಳು ಏನ್ಮಾಡ್ತಿದಾರೆ? ಎಂದೆಲ್ಲಾ ಒಂದೇ ಉಸಿರಿನಲ್ಲಿ ಕೇಳುವ ಆಕೆ ಕೆಲವೇ ಸೆಕೆಂಡುಗಳಲ್ಲಿ ಅಂದು ನಡೆದ ದುರ್ಘಟನೆಯ ನೆನಪುಗಳ ನೆನೆದು ಕ್ಷಣಕಾಲ ದೊಡ್ಡದಾಗಿ ಕಣ್ಣರಳಿಸಿ ನಿಂತಲ್ಲೇ ನಿಂತು ಬೆವೆತು ಹೋಗುವಳು. ಒಮ್ಮೆಲೆ ಚಳಿ ಹಿಡಿದು , ಮೈಕೊಡವಿದಂತಾಗಿ ವಾಸ್ತವಕ್ಕೆ ಮರುಳುವಳು. ಮತ್ತದೇ ನಗು ಮುಖದೊಂದಿಗೆ ಒಳ್ಳೇದಾಗಲಿ ಸಾರ್ , ಹೋಗ್ಬನ್ನಿ ಸಾರ್… ಎಂದು ಹಾರೈಸಿ ಬೀಳ್ಕೊಡುತ್ತಾಳೆ.


  • ಡಾ. ಯುವರಾಜ್ ಹೆಗಡೆ  (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW