ಹಾವಿನ ಬಗೆಗಿನ ಅಪೂರ್ವ ಮಾಹಿತಿ – ಬಾಹುಬಲಿ ಜಯರಾಜ್



ಈ ಜಗತ್ತಲ್ಲಿ 84 ಲಕ್ಷ ಜೀವರಾಶಿಗಳಿವೆ. ೩೦೦೦ ಕ್ಕೂ ಹೆಚ್ಚಿನ ಪ್ರಭೇದದ ಹಾವುಗಳಿವೆಯಂತೆ.ಭಾರತದಲ್ಲಿ ನಾಗರಹಾವಿನ ವಿಷವನ್ನು ಸಂಶೋಧನೆಗಳಲ್ಲಿ ನೋವು ನಿವಾರಕ ಔಷಧಿಗಳಲ್ಲಿ ಮತ್ತು ಕ್ಯಾನ್ಸರ್ ಔಷಧಗಳ ತಯಾರಿಕೆಯಲ್ಲಿ ಬಳಸುವುದುಂಟು.ಹಾವಿನ ಕುರಿತು ಇನ್ನಷ್ಟು ಸ್ವಾರಸ್ಯಕರ ವಿಷಯಗಳನ್ನು ಲೇಖಕ ಸಿ ವಿ ಬಾಹುಬಲಿ ಜಯರಾಜ್ ಅವರು ಓದುಗರಿಗೆ ಪರಿಚಯಿಸಿದ್ದಾರೆ. ಮುಂದೆ ಓದಿ…

ಈ ಜಗದಲ್ಲಿ ಒಟ್ಟು 84 ಲಕ್ಷ ಜೀವರಾಶಿಗಳಿವೆ ಎಂದು ಹೇಳುತ್ತಾರೆ. ಇವುಗಳಲ್ಲಿ ಕೆಲವು ದೈವದ ಸ್ಥಾನವನ್ನು ಪಡೆದಿದ್ದರೂ ದೇವತೆಗಳ ರಕ್ಷಕನಾಗಿ, ಒಂದು ಶಕ್ತಿಯಾಗಿ, ರೂಪಾತರ ಹೊಂದುವ ವಿದ್ಯೆಯಿಂದ ಮನುಷ್ಯ ರೂಪ ತಾಳಿ ಮನುಷ್ಯನೊಂದಿಗೆ ಸಂಬಂಧ ಬೆಳೆಸಿದ ಕಥೆಗಳುಳ್ಳ ಹಾವಿನಂತಹ ಇನ್ನೊಂದು ಪ್ರಾಣಿ ಇಲ್ಲವೇ ಇಲ್ಲ.

ಇಡೀ ಭೂಮಂಡಲದ ಮೇಲೆ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಪ್ರಭೇದದ ಹಾವುಗಳಿವೆಯಂತೆ. ಇವುಗಳಲ್ಲಿ ನಾಗರಹಾವಿಗಿಂತ ಭಯಂಕರ ಮತ್ತು ವಿಚಿತ್ರ ಹಾವುಗಳಿದ್ದರೂ ವಿಶೇಷ ಸ್ಥಾನಮಾನ ಗಳಿಸಿರುವುದು ಈ ನಾಗರಹಾವೇ. ನಾಗರಹಾವಿಗೆ ಹಿಂದೂ, ಜೈನ ಮತ್ತು ಬೌದ್ಧ ಮೂರು ಧರ್ಮಗಳಲ್ಲೂ ದೈವದ ಸ್ಥಾನವಿದೆ.

ನಾಗರಹಾವು ಶಿವನ ಕೊರಳಲ್ಲಿ ಮಾಲೆಯಾಗಿ, ಆತನ ಮಗ ಗಣೇಶನ ಹೊಟ್ಟೆಯ ಆಭರಣವಾಗಿ, ವಿಷ್ಣುವಿನ ಹಾಸಿಗೆಯಾಗಿ, ಇನ್ನೂ ಹಲವು ದೇವತೆಗಳ ಶಿರದ ಪ್ರಭಾವಳಿಯಾಗಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.

What was the symbol on the flag of Duryodhana? Was it an elephant or a serpent? - Quora

(ದುರ್ಯೋದನನ ರಥ ಬಾವುಟದ ಚಿಹ್ನೆ) ಫೋಟೋ ಕೃಪೆ : Quora

ರಾಮಾಯಣದಲ್ಲಿ ಇಂದ್ರಜಿತುವು ಸರ್ಪಾಸ್ತ್ರದಿಂದ ಶ್ರೀರಾಮ ಹಾಗೂ ಲಕ್ಷ್ಮಣನನ್ನು ಕಟ್ಟಿ ಹಾಕಿದರೆ, ಮಹಾಭಾರತದಲ್ಲಿ ಕರ್ಣನ ಬತ್ತಳಿಕೆಯಲ್ಲಿ ಅರ್ಜುನನ್ನು ಕೊಲ್ಲುವ ಬಾಣವಾಗಿತ್ತು.
ದುರ್ಯೋದನನ ರಥ ಬಾವುಟದ ಚಿಹ್ನೆ ಕೂಡ ನಾಗರಹಾವು.

ಈ ಎಲ್ಲಾ ಕಥೆಗಳಿಗಿಂತಲೂ ವಿಶೇಷ ಅನ್ನಿಸುವುದು ಮನುಷ್ಯ ಮತ್ತು ನಾಗಗಳ ನಡುವಿನ ವೈವಾಹಿಕ ಸಂಬಂಧದ ಹಲವು ಕಥೆಗಳು. ಇಂತಹ ಒಂದು ಕಥೆಗೆ ಉದಾಹರಣೆ ಅರ್ಜುನನು ಮಣಿಪುರದ ನಾಗಕನ್ಯೆ ಉಲೂಚಿಯನ್ನು ಪ್ರೀತಿಸಿ ವಿವಾಹವಾದನೆಂಬದು.

ಪರೀಕ್ಷಿತ ಮಹಾರಾಜನು ಸರ್ಪದ ಕಾರಣ ಮರಣ ಹೊಂದಿದ್ದರಿಂದ ಆತನ ಮಗ ಜನಮೇಜಯನು ಸರ್ಪಕುಲವನ್ನೇ ನಾಶಪಡಿಸುವಂತಹ “ಸರ್ಪಯಾಗ”ವನ್ನು ಮಾಡಿದ ಎಂಬ ಕಥೆಯೂ ಇದೆ.

ಜೈನ ತೀರ್ಥಂಕರ ಪಾರ್ಶ್ವನಾಥರ ಶಿರದ ಹಿಂಭಾಗ ಹೆಡೆ ಬಿಚ್ಚಿರುವ ನಾಗಗಳ ಪ್ರಭಾವಳಿಯನ್ನು ಕಾಣಬಹುದು.

ಬೌದ್ಧ ಧರ್ಮದಲ್ಲಿ ಮುಚಲಿಂದಾ ಎನ್ನುವ ನಾಗರಾಜನು ಸತತ ಏಳು ದಿನಗಳ ಕಾಲ ಧ್ಯಾನಾವಸ್ಥೆಯಲ್ಲಿದ್ದ ಬುದ್ಧನನ್ನು ಮಳೆಯಿಂದ ರಕ್ಷಿಸಲು ತನ್ನ ಹೆಡೆಯನ್ನು ಬಿಚ್ಚಿ ನಿಂತು ಸೇವೆಗೈದನು ಎಂಬ ಕಥೆಯಿದೆ.

ದ್ವಾಪರ ಯುಗ ಮುಗಿದು ಕಲಿಯುಗ ಆರಂಭವಾದ ಸಮಯದಲ್ಲಿ ಮನುಷ್ಯರು ವಿನಾಕಾರಣ ನಾಗರಹಾವುಗಳನ್ನು ಕೊಲ್ಲತೊಡಗಿದರಂತೆ. ಈ ಸಂದರ್ಭದಲ್ಲಿ ಸ್ಕಂದ ಎಂಬ ನಾಗರಹಾವು ತನ್ನ ಸಂತತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಮನುಷ್ಯರನ್ನು ಕಚ್ಚತೊಡಗಿದನು. ಆಗ ಮನುಷ್ಯರಿಗೆ ನಾಗರಹಾವುಗಳ ಬಗೆಗೆ ಭಯ ಹುಟ್ಟಿ ರಕ್ಷಣೆಗಾಗಿ ನಾಗಗಳ ಆರಾಧನೆ ಪ್ರಾರಂಭವಾಯಿತು ಎಂಬುದು ಕಥೆ. ಈ ರೀತಿಯಾಗಿ ಆರಂಭವಾದ ನಾಗನ ಸ್ತುತಿಗೆ “ನಾಗಮಂಡಲ”ವೆಂದು ಹೆಸರು. ಗಿಡ ಮರಗಳಿರುವ ತೋಪಿನಲ್ಲಿ ‘ನಾಗಶಿಲೆ’ಯನ್ನು ಪ್ರತಿಷ್ಠಾಪಿಸಿ ಆ ಜಾಗವನ್ನು ‘ನಾಗಬನ’ ಎಂದು ಕರೆಯಲಾಯಿತು.

ಫೋಟೋ ಕೃಪೆ : Karnataka tourism

ಕರ್ನಾಟಕದ ಕರಾವಳಿ ಪ್ರದೇಶದಾದ್ಯಂತ ಈ ನಾಗಮಂಡಲ ಆಚರಣೆ ಮತ್ತು ‘ನಾಗಬನ’ಗಳು ಕಂಡುಬರುತ್ತವೆ.

ನಾಗರಹಾವು ಕಡಿದು ಮೃತಪಟ್ಟ ಸಹೋದರನನ್ನು ಬದುಕಿಸಿಕೊಡುವಂತೆ ಹಾವಿನಲ್ಲಿ ಸಹೋದರಿಯೊಬ್ಬಳು ಪ್ರಾರ್ಥನೆ ಮಾಡಿ ತನ್ನ ಸಹೋದರನನ್ನು ಬದುಕಿಸಿಕೊಂಡ ದಿನ ಶ್ರಾವಣ ಮಾಸದ ಶುಕ್ಲ ಪಕ್ಷವಾಗಿತ್ತು, ಅಲ್ಲಿಂದ ಈ ದಿನವನ್ನು ಭಾತೃತ್ವದ ಸಂಕೇತವಾಗಿ ನಾಗರ ಪಂಚಮಿ ಎಂದು ಆಚರಿಸಲಾಗುತ್ತಿದೆ ಎಂಬ ನಂಬಿಕೆಯಿದೆ.

ಕರ್ನಾಟಕದ ಕುಕ್ಕೆ ಸುಬ್ರಮಣ್ಯ, ಶೃಂಗೇರಿಯ ಶಾರದಾ ಪೀಠ, ಕೇರಳದ ಅನಂತ ಪದ್ಮನಾಭ ದೇಗುಲಗಳ ನಿರ್ಮಾಣದ ಹಿಂದೆ ನಾಗರಗಳ ಹಿನ್ನೆಲೆ ಇವೆ. ಕೇರಳ ರಾಜ್ಯದ ಅತಿ ದೊಡ್ಡ ದೇವಾಲಯ ಮನ್ನಾರ್‍ಶಾಲ ಶ್ರೀ ನಾಗರಾಜ ದೇವಾಲಯ. ಈ ಮನ್ನಾರ್‍ಶಾಲ ದೇವಾಲಯದ ಹಾದಿ ಮತ್ತು ಮರಗಳ ನಡುವೆ ಸುಮಾರು 30,000 ಕ್ಕೂ ಅಧಿಕ ಹಾವುಗಳ ಮೂರ್ತಿಗಳನ್ನು ಕಾಣಬಹುದು.
ಭಾರತೀಯ ಶಿಲ್ಪಕಲೆಯಲ್ಲಿ ನಾಗರಶೈಲಿಯು ಅತ್ಯಂತ ಪ್ರಸಿದ್ಧವಾದುದು. ದೇಗುಲಗಳ ಶಿಲ್ಪರಚನೆಯಲ್ಲಿ ನಾಗರಹಾವುಗಳ ಚಿತ್ರಣವನ್ನು ಕಾಣಬಹುದು.

ಉಡುಪಿ ಜಿಲ್ಲೆಯಲ್ಲಿ ಸಾರ್ವಜನಿಕ ನಾಗರ ಪಂಚಮಿ ಆಚರಣೆಗೆ ಅವಕಾಶವಿಲ್ಲ: ಡಿಸಿ ಜಗದೀಶ್ | udayavani

ಫೋಟೋ ಕೃಪೆ : udayavani

ನಾಗರ ಕಲ್ಲನ್ನು ಪೂಜೆ ಮಾಡುವುದಲ್ಲದೆ ನಾಗರ ಪಂಚಮಿಯನ್ನು ಆಚರರಿಸುವುದಲ್ಲದೇ ದೇವರ ಮನೆಯಲ್ಲಿ ಬೆಳ್ಳಿ ನಾಗರನ್ನು ಇಟ್ಟು ಪೂಜೆ ಮಾಡುವವರೂ ಇದ್ದಾರೆ.ಭಾರತದ ವಿಷಯವನ್ನು ಇಷ್ಟಕ್ಕೇ ನಿಲ್ಲಿಸಿ ಸಮುದ್ರದಾಚೆಗೂ ಬಗ್ಗಿ ನೋಡಿದರೆ ಥೈಲ್ಯಾಂಡ್, ಕಾಂಬೋಡಿಯಾ, ಚೀನಾ ದೇಶದ ಜನರೂ ನಾಗಗಳ ಆರಾಧನೆ ಮಾಡುತ್ತಿದ್ದ ಕುರುಹುಗಳನ್ನು ಗಮನಿಸಬಹುದು.ನಮಗೆಲ್ಲರಿಗೂ ತಿಳಿದಿರುವಂತೆ ಸಿನಿಮಾ ಮತ್ತು ಸಿನಿಮಾಕ್ಕಿಂತಲೂ ಹೆಚ್ಚಾಗಿ ಕಿರುತೆರೆ ಎರಡರಲ್ಲೂ ಸರ್ಪದೋಷ, ಸರ್ಪ ಸಂಬಂಧ, ನಾಗಕನ್ಯೆ, ನಾಗಲೋಕ, ಹಾವಿನ ದ್ವೇಷ, ತನ್ನಿಚ್ಛೆಯ ದೇಹವನ್ನು ಧರಿಸುವ ನಾಗ, ನಾಗಿನಿಯರ ಕತೆಗಳು ಬಹಳಷ್ಟು ಬಂದಿವೆ.

ನಾಗರಹಾವು ಎಂಬ ಪ್ರಾಣಿ ಭಯ ಮತ್ತು ಭಕ್ತಿಯ ಕಾರಣವಾಗಿರುವುದರಿಂದ ಈ ಕಥೆಗಳು ಹಣ ಗಳಿಸುವ ಮೂಲವಾಗಿದೆ. ಹಾವನ್ನು ತೋರಿಸಿ, ಆಡಿಸಿ ಹಣ ಗಳಿಸಿರುವ ಹಾವಾಡಿಗರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.

ನಾಗರಹಾವು, ನಾಗದೇವತೆ, ನಾಗಕನ್ಯೆ, ನಾಗ ಕನ್ನಿಕೆ ಇವುಗಳು ದ್ವೇಷ, ಸೇಡನ್ನು ಪ್ರತಿಬಿಂಬಿಸಲು ಸಿನಿಮಾ ಮತ್ತು ಧಾರಾವಾಹಿಗಳ ಹೆಸರುಗಳಾದರೆ ನಾಗಲಕ್ಷ್ಮೀ, ನಾಗರಾಜ, ನಾಗರತ್ನ, ನಾಗಮಣಿ, ನಾಗಶ್ರೀ, ನಾಗೇಂದ್ರ, ನಾಗಕುಮಾರ, ನಾಗೇಶ, ನಾಗಪ್ಪ, ನಾಗಮ್ಮ ಎಂಬ ಮನುಷ್ಯರ ಹೆಸರುಗಳು ಮನುಷ್ಯರಿಗೆ ನಾಗರಹಾವಿನ ಮೇಲಿನ ಭಕ್ತಿಯನ್ನು ತೋರುತ್ತದೆ. ಹಲವು ಕಾದಂಬರಿ ಮತ್ತು ಹಾಡುಗಳಲ್ಲೂ ಸ್ಥಾನ ಪಡೆದಿದೆ ಈ ನಾಗರಹಾವು.

ನಾಗರ ಹಾವೇ,
ಹಾವೊಳು ಹೂವೇ
ಬಾಗಿಲ ಬಿಲದಲ್ಲಿ ನಿನ್ನ ಠಾವೆ..

ಇದು ಪಂಜೆ ಮಂಗೇಶರಾಯರ ಹಾವಿನ ಬಗೆಗಿನ ಒಂದು ಜನಪ್ರಿಯ ಕವಿತೆ.

ಭಯ ಮತ್ತು ಭಕ್ತಿ ಎರಡರ ಕಾರಣದಿಂದಲೂ ಮನುಷ್ಯ ಜೀವನದಲ್ಲಿ ಅಪಾರ ಪ್ರಭಾವವನ್ನು ಬೀರಿರುವ ಈ ನಾಗರಹಾವು ಜನಿಸಿದ ಮೂರ್ನಾಲ್ಕು ವರ್ಷದೊಳಗೆ‌ ಪ್ರೌಢಾವಸ್ಥೆಗೆ ಬಂದಾಗ ಮುಂಗಾರಿಗೆ ಮೊದಲು ಮಿಲನ ನಡೆಸುತ್ತದೆ. ನಾಗರಹಾವು ಕೇರೆಹಾವಿನೊಡನೆ ಪ್ರಣಯದಾಟ ಆಡುತ್ತದೆ ಎಂಬ ವಿಷಯವನ್ನು ಕೆಲವು ಜನ ನಂಬುತ್ತಾರಾದರೂ ನಿಜಸಂಗತಿ ಎಂದರೆ ನಾಗರಹಾವು ಮತ್ತು ಕೇರೆಹಾವು ಬೇರೆ ಬೇರೆ ಪ್ರಭೇದದ ಹಾವುಗಳಾಗಿರುವುದರಿಂದ ಇವುಗಳ ನಡುವೆ ಖಂಡಿತ ಪ್ರಣಯದಾಟ ನಡೆಯುವುದಿಲ್ಲ. ನಾಗರಹಾವುಗಳು ಕೂಡ ತಮ್ಮ ಪ್ರಣಯದ ಸಮಯದಲ್ಲಿ ಸಹಜವಾಗಿ ಯಾವುದೇ ಅಡೆತಡೆಯನ್ನು ಸಹಿಸಲಾರವು. ಇಂತಹ ವೇಳೆ ಅದರ ಬಳಿ ಸುಳಿಯುವುದು ಕೂಡ ಅಪಾಯಕ್ಕೆ ಆಹ್ವಾನ ಕೊಟ್ಟಂತೆಯೇ.

ಮಿಲನಕ್ಕೆ ತಾನು ಅಣಿಯಾಗಿರುವುದನ್ನು ಸೂಚಿಸಲು ಹೆಣ್ಣು #ನಾಗರಹಾವು ಶರೀರದ ತನ್ನ ಗ್ರಂಥಿಗಳಿಂದ ವಾಸನಾ ದ್ರವ್ಯವನ್ನು ಸ್ರವಿಸುತ್ತದೆ. ಈ ವಾಸನೆಯನ್ನು ‌ಗಾಳಿಯ‌ ಮೂಲಕ ಗ್ರಹಿಸುವ ಹಲವು ಗಂಡು ನಾಗರಹಾವುಗಳು ಹೆಣ್ಣು ನಾಗರಹಾವನ್ನರಸಿ ಬಂದಾಗ ಹೋರಾಟ ಮಾಡುವ ಪರಿಸ್ಥಿತಿ ಉಂಟಾಗುತ್ತದೆ. ಈ ಕದನದಲ್ಲಿ ಗೆದ್ದ ಗಂಡು ನಾಗರಹಾವು ಹೆಣ್ಣು ನಾಗರಹಾವನ್ನು ಸೇರುತ್ತದೆ. ಈ ಪ್ರಕ್ರಿಯೆಯಲ್ಲಿ ಗರ್ಭಧರಿಸಿದ ಹೆಣ್ಣು ಅರವತ್ತು ದಿನಗಳಲ್ಲಿ ಸುಮಾರು ನಲವತ್ತರಿಂದ ಐವತ್ತರಷ್ಟು ಮೊಟ್ಟೆಗಳನ್ನು ಇಲಿಯ ಬಿಲಗಳಲ್ಲಿ ಇಡುತ್ತದೆ. ಮೊಟ್ಟೆಯಿಟ್ಟ ತರುವಾಯ ಗಂಡು ಮತ್ತು ಹೆಣ್ಣು ಎರಡೂ ತಮ್ಮ ಸರದಿಯಲ್ಲಿ ಮೊಟ್ಟೆಗಳನ್ನು ಕಾಯ್ದು ಕಾವು ಕೊಟ್ಟು ಮರಿ ಮಾಡುತ್ತವೆ. ನಾಗರಹಾವುಗಳು ಒಮ್ಮೆಲೆ ಇಷ್ಟೊಂದು ಮೊಟ್ಟೆ ಇಟ್ಟು ಮರಿ ಮಾಡಿದರೂ ಉಳಿಯುವ ಹಾವುಗಳ ಸಂಖ್ಯೆ ಕಡಿಮೆ. ಇದಕ್ಕೆ ಒಂದು ಕಾರಣ ನಾಗರಹಾವುಗಳು ತನ್ನ ಮರಿಗಳಿಗೆ ಬದುಕುವ ಕಲೆ ಕಲಿಸುವುದಿಲ್ಲ. ಇನ್ನೊಂದು ಕಾರಣ ಮುಂಗುಸಿಗಳು, ಮೊಸಳೆಗಳು, ರಣಹದ್ದು ಮತ್ತು ಗಿಡುಗಗಳು ಹಾವುಗಳನ್ನು ಬೇಟೆಯಾಡುತ್ತವೆ. ಮತ್ತೊಂದು ಕಾರಣ ದೊಡ್ಡ ಹಾವುಗಳು ಕೂಡ ಹಾವಿನ ಮರಿಗಳನ್ನು ತಿನ್ನುತ್ತವೆ.

ದೊಡ್ಡ ಹಾವಿಗೆ ಸಹಜವಾಗಿ ತಾನು ಸಂಚರಿಸಬೇಕಾದ ಪ್ರದೇಶದ ಅರಿವಿರುತ್ತದೆ. ಆದರೆ ಆಗಷ್ಟೇ ಹುಟ್ಟಿದ ಮರಿಗಳಿಗೆ ಈ ಜ್ಞಾನ ಇರುವುದಿಲ್ಲ. ಅವು ತಮ್ಮ ಆಹಾರದ ಹುಡುಕಾಟದಲ್ಲಿ ತಮಗಿಷ್ಟ ಬಂದ ಕಡೆ ನುಗ್ಗುತ್ತವೆ. ಹೀಗಾಗಿಯೇ ಮೇ, ಜೂನ್‌ ತಿಂಗಳಲ್ಲಿ ಹಾವಿನ ಮರಿಗಳು ಹೆಚ್ಚು ಕಾಣುತ್ತವೆ. ಈ ಮರಿನಾಗರಗಳು ತಮ್ಮ ತಂದೆ ತಾಯಿಗಳಿಗಿಂತಲೂ ಹೆಚ್ಚು ಆಕ್ರಮಣ ಪ್ರವೃತ್ತಿಯುಳ್ಳವಲ್ಲದೇ ಈ ನಾಗರಹಾವಿನ ಮರಿಗಳಿಗೆ ತಮ್ಮ ದೇಹದಲ್ಲಿರುವ ವಿಷವನ್ನು ಯಾವಾಗ ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬ ಅರಿವು ಕೂಡ ಇರುವುದಿಲ್ಲ. ಹೀಗಾಗಿ ಅವುಗಳು ಗಾಬರಿಗೊಂಡು ಬಿಟ್ಟರೆ ತಮ್ಮ ಆತ್ಮರಕ್ಷಣೆಗಾಗಿ ಕಚ್ಚಿಬಿಡುತ್ತವೆ.

ಫೋಟೋ ಕೃಪೆ : somaga news

ನಾಗರಹಾವುಗಳು ಕೂಡ ಮನುಷ್ಯರು ಇರುವಲ್ಲಿ ಇರಲು ಇಷ್ಟಪಡುವುದಿಲ್ಲ. ಬಹುತೇಕ ಸಲ ಅವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಕಚ್ಚುವ ಮೂಲಕ ಎದುರಾಳಿಗೆ ಭಯ ಹುಟ್ಟಿಸುವ ಪ್ರಯತ್ನವನ್ನು ಮಾಡುತ್ತವೆ. ನಾಗರಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿಯು ಮೂವತ್ತು ನಿಮಿಷಗಳಲ್ಲಿ ಸಾಯಬಹುದು. ಕೆಲವೊಮ್ಮೆ ಎಷ್ಟೋ ಹಾವುಗಳು ಕಚ್ಚಿದರೂ ಅವು ವಿಷವನ್ನು ಕಕ್ಕುವುದಿಲ್ಲ. ಆದರೆ ಕಚ್ಚಿಸಿಕೊಂಡ ಗಾಬರಿಗೇ ಮನುಷ್ಯ ಸಾಯುತ್ತಾನೆ. ಅಲ್ಲದೇ ಅವಧಿಗೆ ಮುನ್ನ ಹುಟ್ಟಿದ ಹಾವುಗಳಲ್ಲಿ ವಿಷ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ವಿಷದ ಉತ್ಪಾದನೆ ಎಲ್ಲಾ ಹಾವುಗಳಲ್ಲೂ ಹೆಚ್ಚಾಗುತ್ತದೆ. ಭಾರತದಲ್ಲಿ ನಾಗರಹಾವಿನ ವಿಷವನ್ನು ಸಂಶೋಧನೆಗಳಲ್ಲಿ ನೋವು ನಿವಾರಕ ಔಷಧಿಗಳಲ್ಲಿ ಮತ್ತು ಕ್ಯಾನ್ಸರ್ ಔಷಧಗಳ ತಯಾರಿಕೆಯಲ್ಲಿ ಬಳಸುವುದುಂಟು.
ಇಲಿ, ಹೆಗ್ಗಣ, ಪಕ್ಷಿಗಳು, ಕಪ್ಪೆ, ಮೀನು, ಕೀಟ, ಸರೀಸೃಪಗಳು, ಹಾವಿನ ಆಹಾರ. ಆಹಾರವನ್ನು ಅಗಿದು ತಿನ್ನದ ನಾಗರಹಾವು ಬೇಟೆಯ ಸಂಪೂರ್ಣ ದೇಹವನ್ನೇ ನುಂಗಿ ಮೂಳೆಯ ಸಹಿತ ಆ ಜೀವಿಯ ಇಡಿ ದೇಹವನ್ನೇ ಜೀರ್ಣಿಸಿಕೊಳ್ಳುತ್ತದೆ. ತನ್ನ ಶರೀರದ ವ್ಯಾಸಕ್ಕಿಂತ ಹೆಚ್ಚು ಗಾತ್ರವುಳ್ಳ ಆಹಾರವನ್ನು ಕೂಡ ನುಂಗಬಲ್ಲುವ ಇದು ಸಾಮಾನ್ಯವಾಗಿ ಒಮ್ಮೆ ಆಹಾರವನ್ನು ತಿಂದ ಮೇಲೆ ಜಡವಾಗಿಬಿಡುತ್ತದೆ. ಆಹಾರ ಜೀರ್ಣಸಿಕೊಳ್ಳಲು ಹದಿನೈದು ದಿನ ಬೇಕು. ಹೀಗಾಗಿಯೇ ಸೋಮಾರಿಗಳನ್ನು `ಕಪ್ಪೆ ತಿಂದ ಹಾವಿನಂತೆ ಇದ್ದಾನೆ ಎಂದು ಹೇಳುವುದೂ ಉಂಟು.

ಮಳೆ ಬಂದಾಗ ಹಳ್ಳದಲ್ಲಿ ನಿಂತ ನೀರಿನಲ್ಲಿ ಕಪ್ಪೆಗಳು ತಮ್ಮ ಸಂತಾನದ ಅಭಿವೃದ್ಧಿ ಮಾಡುತ್ತವೆ. ಈ ಸಮಯದಲ್ಲಿ ಹಳ್ಳಗಳಲ್ಲಿ ಕಪ್ಪೆಯ ಮೊಟ್ಟೆಗಳು ಹೇರಳವಾಗಿ ಸಿಗುವುದರಿಂದ ಹಾವುಗಳು ತಮ್ಮ ಆಹಾರವಾದ ಕಪ್ಪೆಯನ್ನು ಮತ್ತು ಅವುಗಳ ಮೊಟ್ಟೆಯನ್ನು ಕಬಳಿಸಲು ಬಿಲದಿಂದ ಹೊರಬರುತ್ತದೆ. ಅಲ್ಲದೆ ಹಾವಿನ ಮೊಟ್ಟೆಗಳು ಕೂಡ ಈ ಮಳೆಗಾಳದಲ್ಲೇ ಹೊಡೆದು ಮರಿಹಾವುಗಳು ಹೊರಬಂದು ಕಪ್ಪೆ ಮರಿಗಳನ್ನು ಬೇಟೆಯಾಡುವುದರಿಂದ ಮಳೆಗಾಲದಲ್ಲಿ ಹಾವುಗಳು ಮತ್ತು ಮರಿಹಾವುಗಳು ಹೆಚ್ಚಾಗಿ ಕಂಡು ಬರುತ್ತವೆ.

ವಾತಾವರಣದ ಉಷ್ಣತೆಯಲ್ಲಿ ಏರಿಳಿತವಾದಂತೆ ಹಾವುಗಳ ದೇಹದ ಉಷ್ಣತೆಯಲ್ಲೂ ಏರಿಳಿತವಾಗುತ್ತದೆ. ಅತಿ ಚಳಿ ಅಥವಾ ಅತಿ ಉಷ್ಣ ಎರಡನ್ನೂ #ಹಾವು ತಡೆದುಕೊಳ್ಳಲಾರದು. ಆದ್ದರಿಂದ ಚಳಿಗಾಲದ ಎಳೆ ಬಿಸಿಲಿಗೆ ಆಗಾಗ್ಗೆ ಮೈಯೊಡ್ಡಿ ಮಲಗಿರುವುದುಂಟು. ಬೇಸಿಗೆಯಲ್ಲಿ ತಾಪದಿಂದ ತಪ್ಪಿಸಿಕೊಳ್ಳಲು ಹಗಲು ವೇಳೆ ಬಿಲಗಳನ್ನು ಸೇರಿಕೊಂಡು ರಾತ್ರಿ ವೇಳೆ ಬಿಲದಿಂದ ಹೊರಬರುತ್ತದೆ.
ಹಾವಿನ ರೆಪ್ಪೆಗಳು ಒಂದಕ್ಕೊಂದು ಕೂಡಿಕೊಂಡಿರುತ್ತವೆ. ಅವು ಅಲುಗಾಡುವುದಿಲ್ಲ. ಕಣ್ಣಿನ ಹೊರ ಭಾಗದಲ್ಲಿ ಪಾರದರ್ಶಕ ತೊಪ್ಪಿಯಂತಿರುವ ವಸ್ತು ಆವರಿಸಿರುತ್ತದೆ. ಹೀಗಾಗಿಯೇ ಹಾವು ಸದಾ ಕಣ್ಣು ತೆರೆದಿರುವಂತೆ ಭಾಸವಾಗುತ್ತದೆ. ಹೀಗಾಗಿ ಹಾವು ನಿದ್ರಿಸುತ್ತಿದೆಯೇ ಅಥವಾ ಎಚ್ಚರದಿಂದಿದೆಯೇ ಎಂಬುದು ತಿಳಿಯುವುದಿಲ್ಲ. ಹಾವುಗಳ ದೃಷ್ಟಿಯೂ ಮಂದ. ತನ್ನ ಮುಂದಿರುವ ವಸ್ತುಗಳನ್ನು ಅದು ಸರಿಯಾಗಿ ಗುರುತಿಸಲಾರದು ಮತ್ತು ಅದಕ್ಕೆ ಯಾವುದೇ ಬಣ್ಣಗಳ ವ್ಯತ್ಯಾಸ ತಿಳಿಯಲಾರದು.

ಫೋಟೋ ಕೃಪೆ : Newsweek

ನಾಗರಹಾವು ಆಗಾಗ ನಾಲಿಗೆಯನ್ನು ಹೊರಚಾಚುತ್ತಿರುತ್ತದೆ. ನಾಳಿಗೆಯಲ್ಲಿ ಎರಡು ಸೀಳುಗಳು ಕಾಣುವುದರಿಂದ ಹಾವಿಗೆ ಎರಡು ನಾಲಗೆಗಳಿವೆ ಎಂದು ತಪ್ಪಾಗಿ ಭಾವಿಸಲಾಗುತ್ತದೆ. ಹಾವುಗಳಿಗೆ ಈ ನಾಲಿಗೆಯು ಉತ್ತಮ ಗ್ರಂಥಿ ಆದರೆ ಇದು ರುಚಿ ತಿಳಿಸುವುದಿಲ್ಲ ನಾಲಿಗೆ ನಾಲಿಗೆಯಾಗಿ ಕೆಲಸ ಮಾಡದೇ ಮೂಗಿನಂತೆ ವಾಸನೆ ಪತ್ತೆ ಮಾಡುವ ಕೆಲಸ ಮಾಡುತ್ತದೆ. ತನ್ನ ಸಮೀಪ ಇರುವ
ಪ್ರಾಣಿ ಯಾವುದು, ಪಕ್ಷಿ ಯಾವುದು ಎಂದು ನಾಲಿಗೆ ಗುರುತಿಸುತ್ತದೆ. ಈ ನಾಲಿಗೆ ವಾತಾವರಣದಲ್ಲಿನ ಏರಿಳಿತವನ್ನು ಕೂಡ ಗ್ರಹಿಸುತ್ತದೆ.

ಹಾವುಗಳಿಗೆ ಪುಂಗಿಯ ನಾದ ಕೇಳಿಸುತ್ತದೆ ಎಂಬುದೇ ಒಂದು ದೊಡ್ಡ ಸುಳ್ಳು. ಏಕೆಂದರೆ ಹಾವುಗಳಿಗೆ ಕಿವಿಗಳೇ ಇಲ್ಲ.ಇವು ಹುಟ್ಟು ಕಿವುಡ ಪ್ರಾಣಿಗಳು. ಹಾವನ್ನು ಆಡಿಸುವ ಹಾವಾಡಿಗ ಯಾವ ಕುಚೇಷ್ಟೆಯನ್ನೂ ಮಾಡದೆ ಪುಂಗಿಯನ್ನು ಎಷ್ಟೇ ಚೆನ್ನಾಗಿ ಊದಿದರೂ ಅವು ಖಂಡಿತ ಹೆಡೆಯನ್ನು ಬಿಚ್ಚುವುದಿಲ್ಲ. ಹಾವುಗಳು ಭೂಮಿಯ ಮೇಲುಂಟಾಗುವ ಕಂಪನಗಳನ್ನು ಮಾತ್ರ ಗ್ರಹಿಸಬಲ್ಲವು.

ಹಾವಿನ ಮಿದುಳು ಕೇವಲ ಒಂದು ಉದ್ದಿನ ಕಾಳಿನಷ್ಟು ಗಾತ್ರವಿದು ಇದರ ಸಾಮರ್ಥ್ಯ ಕೇವಲ ಅದರ ಆಹಾರ ಮತ್ತು ಸಂತಾನೋತ್ಪತ್ತಿಗೆ ಮಾತ್ರ ಸೀಮಿತ. ಹಾವಿಗೆ ವಿವೇಚನೆಯಾಗಲೀ ಸ್ಮರಣಶಕ್ತಿಯಾಗಲೀ ಇಲ್ಲ. ನಾಗರಹಾವು ವ್ಯಕ್ತಿಯನ್ನು ಗುರುತಿಸುತ್ತದೆ ಮತ್ತು ದ್ವೇಷವನ್ನು ಸಾಧಿಸುತ್ತದೆ ಎಂಬುದೆಲ್ಲ ಸುಳ್ಳು. “ಹಾವಿನ ದ್ವೇಷ ಹನ್ನೆರಡು ವರ್ಷ” ಎಂಬುದು ಸತ್ಯವಲ್ಲ. ನಾಗರಹಾವನ್ನು ನಾವು ಆಕಸ್ಮಿಕವಾಗಿ ತುಳಿದಾಗ ಅಥವಾ ಸಾಯಿಸಲು ಹೊಡೆದಾಗ ಏಟು ತಿಂದ ಹಾವು ತನ್ನ ಹತ್ತಿರಕ್ಕೆ ಮನುಷ್ಯ ಬಂದಾಗ ಕಚ್ಚಲು ಯತ್ನಿಸುವುದು ಸಹಜ. ಆದರೆ ಈ ರೀತಿಯ ಕೋಪ ಹಾವಿಗೆ ಏಟು ತಿಂದ ಮೂರು ನಾಲ್ಕು ಗಂಟೆಗಳ ಕಾಲ ಮಾತ್ರ ಇರುತ್ತದೆ. ಅನಂತರ ತನ್ನ ದೇಹಕ್ಕೆ ಆದ ನೋವು ಕಡಿಮೆಯಾದಾಗ ತನ್ನ ಸೇಡನ್ನೂ ಮರೆತು ತನ್ನ ಪಾಡಿಗೆ ತಾನು ಹೊರಟುಹೋಗುತ್ತದೆ.

Hyderabad: Don't feed milk to snakes, plead activists

ಫೋಟೋ ಕೃಪೆ : The Hans India

ನಾಗರಹಾವು ಮಾತ್ರವಲ್ಲ ಯಾವ ಹಾವುಗಳು ಕೂಡ ಹಾಲು ಕುಡಿಯುವುದಿಲ್ಲ. ಹಾವಾಡಿಗರು ಅನೇಕ ದಿನಗಳವರೆಗೆ ಹಾವುಗಳಿಗೆ ನೀರು ಮತ್ತು ಆಹಾರ ಕೊಡದೇ ಇಟ್ಟಿರುತ್ತಾರಾದ್ದರಿಂದ ಹಲವಾರು ದಿನಗಳಿಂದ ನೀರನ್ನೂ ಕಾಣದೇ ಸುಸ್ತಾಗಿದ್ದ ಹಾವುಗಳು ಹಾವಾಡಿಗ ತನ್ನ ಮುಂದೆ ಹಾಲನ್ನು ಇಟ್ಟಾಗ ಅನಿವಾರ್ಯವಾಗಿ ಆ ಕ್ಷಣದ ತನ್ನ ಬಾಯಾರಿಕೆಯನ್ನು ಹೋಗಲಾಡಿಸಿಕೊಳ್ಳಲು ಕೇವಲ ಒಂದೆರಡು ಗುಟುಕು ಹಾಲನ್ನು ಕುಡಿಯಬಹುದಷ್ಟೇ.

ಪರಾಸ ಮಣಿ, ನೀಲಾ ಮಣಿ, ಕೌಸ್ತುಬ ಮಣಿ, ಚಂದ್ರಕಾಂತ ಮಣಿ, ಶಮಂತಕ ಮಣಿ, ಸ್ವಟಿಕ ಮಣಿ, ಘೃತ ಮಣಿ, ತೈಲ ಮಣಿ, ಭಿಷ್ಮಕ ಮಣಿ ಸೇರಿದಂತೆ ಇನ್ನೂ ಸಾಕಷ್ಟು ನಾಗಮಣಿಗಳ ಕುರಿತು ಪುರಾಣದ ಕಥೆಗಳಲ್ಲಿ ಸಾಕಷ್ಟು ವಿವರಣೆಗಳಿವೆ. ಆದರೆ ಇದು ಕತೆಯೇ ಹೊರತೂ ವಾಸ್ತವ ಅಲ್ಲ. ಇಂತಹ ಯಾವ ಮಣಿಯೂ ನಾಗರಹಾವಿನಲ್ಲಿ ಇಲ್ಲ. ಹಾವು ಬೆಳೆವಣಿಗೆಯಿಲ್ಲದ ತನ್ನ ಹೊರ ಚರ್ಮದ ಭಾಗವನ್ನು ಆಗಾಗ್ಗೆ ಕಳಚಿ ಹೊಸ ಚರ್ಮವನ್ನು ಪಡೆಯುತ್ತದೆ. ಇದನ್ನು ಪೊರೆ ಕಳಚುವುದು ಎನ್ನುತ್ತಾರೆ. ಹಾವು ಬೆಳೆಯುವ ವರ್ಷಗಳಲ್ಲಿ ಹೆಚ್ಚು ಬಾರಿ, ವೃದ್ಧಾಪ್ಯಕ್ಕೆ ಕಾಲಿರುಸುತ್ತಿದ್ದಂತೆ ಕಡಿಮೆ ಬಾರಿ ಪೊರೆ ಕಳಚುತ್ತದೆ.

ಪರಿಸರದ ಸಮತೋಲನ ಸಾಧಿಸುವಲ್ಲಿ ಹಾವುಗಳ ಪಾತ್ರ ತುಂಬಾನೇ ಮುಖ್ಯ. ರೈತನ ಬೆಳೆಗಳು ಇಲಿ, ಹೆಗ್ಗಣ, ಕೀಟ, ಪಕ್ಷಿಗಳ ಆಹಾರ. ರೈತನ ಬೆಳೆಯನ್ನು ನಷ್ಟ ಮಾಡುವ ಈ ಪ್ರಾಣಿಗಳನ್ನು ನೈಸರ್ಗಿಕವಾಗಿ ನಿಯಂತ್ರಿಸುವ ಶಕ್ತಿ ಹಾವುಗಳಿಗೆ ಮಾತ್ರ ಇದೆ. ಏಕೆಂದರೆ ಇವುಗಳು ಹಾವಿನ ಆಹಾರ. ಹೀಗಾಗಿ ಹಾವುಗಳು ರೈತನ ನಿಜವಾದ ಮಿತ್ರ ಕೂಡ. ರೈತ ಈ ಕಾರಣದಿಂದಲೇ ಹಾವನ್ನು ಹಾವಿನ ರಕ್ಷಣೆಗಾಗಿ ಪೂಜಿಸುವ ಪದ್ಧತಿ ಆರಂಭವಾಯಿತು ಎಂಬ ಕಥೆಗಳೂ ಇವೆ.



ಹಾವಿಗೂ ಮುಂಗಸಿಗೂ ಜಗಳವಾಗುವಾಗ ಮುಂಗಸಿ ಮುಂದೆ ಬಂದಂತೆ ನಟಿಸಿ, ಹಾವು ಕಚ್ಚಲು ಬಂದ ತಕ್ಷಣ ಹಿಂದಕ್ಕೆ ಹೊಗುತ್ತದೆ. ಹಾವು ರಭಸದಿಂದ ತಲೆಯನ್ನು ನೆಲಕ್ಕೆ ಅಪ್ಪಳಿಸಿದಾಗ, ಮುಂಗಸಿಯು ತಕ್ಷಣ ಮುಂದಕ್ಕೆ ಬಂದು ಹಾವಿನ ತಲೆಯನ್ನು ಹಿಡಿದುಕೊಂಡು ಕೊಲ್ಲುತ್ತದೆ. ಒಂದು ವೇಳೆ ಹಾವು ಮುಂಗಸಿಯನ್ನು ಕಚ್ಚಿದರೂ ಮುಂಗಸಿಯ ಮೈತುಂಬ ಒರಟಾದ ಕೂದಲು ಮತ್ತು ದಪ್ಪನೆಯ ಚರ್ಮವಿರುವುದರಿಂದ ವಿಷವು ಮುಂಗಸಿಯ ಶರೀರಕ್ಕೆ ನಾಟುವ ಸಾಧ್ಯತೆ ಕಡಿಮೆ. ಹಾವು ಮುಂಗಸಿ ಜಗಳದಲ್ಲಿ ಸಾಮಾನ್ಯವಾಗಿ ಮುಂಗಸಿ ಗೆಲ್ಲುತ್ತದೆ. ಆದರೆ ಹಾವು ಸರಿಯಾಗಿ ಕಚ್ಚಿದರೆ ಮುಂಗಸಿಯು ಖಂಡಿತ ಸಾಯುತ್ತದೆ.

ಹಾವುಗಳು ಸದಾ ಅಷ್ಟೇನೂ ಸ್ವಚ್ಛವಿರದ ಇಲಿ, ಕಪ್ಪೆ, ಅಳಿಲುಗಳು ಸಿಗುವ ವಿಶಾಲ ಬಯಲು ಪ್ರದೇಶಗಳಲ್ಲಿ ವಾಸಿಸುತ್ತವೆ. ಇಂತಹ ಸ್ಥಳಗಳಲ್ಲಿ ಹುತ್ತಗಳು ನಾಶವಾಗಿ ಹೊಸ ಮನೆಗಳ ಬಡಾವಣೆಗಳು ನಿರ್ಮಾಣವಾಗುವುದರಿಂದ ಹಾವುಗಳಿಗೆ ಎಲ್ಲಿಗೆ ಹೋಗಬೇಕು ಎಂಬುದು ತಿಳಿಯದೆ ಆ ಪ್ರದೇಶದ ಮನೆಗಳಿಗೇ ನುಗ್ಗುವ ಸಂಭವ ಹೆಚ್ಚು. ಇಂತಹ ಸಂದರ್ಭದಲ್ಲಿ ಅವುಗಳನ್ನು ಹಿಡಿದು ಸಾಯಿಸದೇ ದೂರ ಪ್ರದೇಶಕ್ಕೆ ಹೋಗಿ ಬಿಟ್ಟು ಬಂದರೂ ಅವು ಉಳಿಯುವ ಸಾಧ್ಯತೆ ಕಡಿಮೆ. ಅವು ಹೊಸ ಪ್ರದೇಶದಲ್ಲಿ ತನ್ನ ನೆಲೆಗಾಗಿ ಅಲ್ಲಿ ಬಹಳ ವರ್ಷಗಳಿಂದ ವಾಸವಿರುವ ಹಾವಿನೊಡನೆ ಕದನಕ್ಕೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಕದನ ಎಷ್ಟು ಭೀಕರವಾಗಿರುತ್ತದೆ ಎಂದರೆ ಎರಡರಲ್ಲಿ ಒಂದು ಹಾವು ಸಾಯುವವರೆಗೂ ಈ ಹೋರಾಟ ನಡೆಯುತ್ತದೆ. ಈ ಕಾಳಗದಲ್ಲಿ ಒಂದು ವೇಳೆ ಆ ಪ್ರದೇಶದಲ್ಲಿ ಬಹಳ ವರ್ಷಗಳಿಂದ ವಾಸವಿದ್ದ ಮೂಲ ಹಾವು ಸತ್ತು, ಹೊಸದಾಗಿ ಹೋದ ಹಾವು ಉಳಿದುಕೊಂಡರೂ ಅದಕ್ಕೆ ಹೊಸ ಪ್ರದೇಶದ ಪರಿಚಯವಿಲ್ಲದೇ ಅದಕ್ಕೆ ಆಹಾರ ಹುಡುಕುವುದು ಒಂದು ದೊಡ್ಡ ಸವಾಲೇ ಆಗುತ್ತದೆ. ಈ ಹುಡುಕಾಟದಲ್ಲಿರುವಾಗ ಆಗಾಗ್ಗೆ ಅದಕ್ಕೆ ಎದುರಾಗುವ ವೈರಿಗಳಿಂದ ತಪ್ಪಿಸಿಕೊಳ್ಳಲು ಸೂಕ್ತ ಜಾಗದ ಅರಿವಿಲ್ಲದೇ ನಿರಂತರ ಓಡಾಟದಲ್ಲಿ ವಿಶ್ರಾಂತಿಯ ನೆಲೆ ಸಿಗದೇ ಹೆಚ್ಚಿನ ಹಾವುಗಳು ಮಾನಸಿಕ ಒತ್ತಡಕ್ಕೊಳಕ್ಕಾಗಿ ಬಹುಬೇಗ ಸಾಯುತ್ತವೆ.

ಕೊನೆ ಹನಿ :

ಹಾವು ವೇಗವಾಗಿ ಒರಟಾದ ನೆಲದಲ್ಲಿ ಚಲಿಸುತ್ತದೆ. ಅದು ಎಂದೂ ನಯವಾದ ನೆಲವನ್ನು ಇಷ್ಟಪಡುವುದಿಲ್ಲ. ಹೀಗಾಗಿ ಮನೆಯ ಹೊರಗಿನಿಂದ ಒಳಗೆ ಬರುವ ಪ್ರದೇಶ ನಯವಾಗಿರುವುದು ಒಳ್ಳೆಯದು.


  • ಸಿ ವಿ ಬಾಹುಬಲಿ ಜಯರಾಜ್ (ಖ್ಯಾತ ಬರಹಗಾರರು )ಚಾಮರಾಜನಗರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW