‘ಮಳೆಯ ಕತೆ ಕೇಳಲು ಕಾತರಿಸಿವೆ, ತವಕವುಕ್ಕಿದ ಮನಸುಗಳ ಬಿಗಿದಿಟ್ಟ ಉಸಿರು!’ …ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಮಳೆಯ ಸೌಂದರ್ಯವನ್ನು ತಪ್ಪದೆ ಮುಂದೆ ಓದಿ…
ಅಯ್ಯಯ್ಯೋ ಮಳೆ ಮಳೆ
ಮಳೆ ಬಂತು ಮಳೆ
ಅಟ್ಟಿಬರುತಿದೆ ಮಳೆ ಹಿಂಡ
ಗಾಳಿಯ ಪಡೆ
ಸುಂಯ್ಗುಟ್ಟುತಿದೆ ಹೊರಲಾರದೆ
ದಪ್ಪದಪ್ಪನೆ ಹನಿಗಳ ಭಾರ
ಕೀರಲು ದನಿಗೈಯುತಿವೆ
ಹಕ್ಕಿಗಳ ಮೇಳ
ಸಿಕ್ಕಿತೋ ಇಲ್ಲವೋ ಉದರಕೆ ಅಶನ
ಹಾರಲಾಗದು,ಏರಲಾಗದು
ತಳ್ಳುತಿದೆ ಕೆಳಕೆ ಮಳೆಹನಿ
ಅದೇ ಮಳೆಗಾಲದ ವ್ಯಸನ
ಒರಗುತ್ತಿವೆ ಮರಗಳು ಧರೆಗೆ
ಬೇರುಗಳ ಮೇಲೆತ್ತಿ
ಸಂಚಾರಕೆ ತಡೆಯಾಗುತಿದೆ
ರಸ್ತೆಯಿಂದ ನೀರು ಮೇಲೆ ಹತ್ತಿ
ಉಸಿರಾಡಲು ನಿಲುದಾಣದ ವೇಳೆ
ಹೊರಬರುವ ನಿಟ್ಟುಸಿರು
ಮಳೆಯ ಕತೆ ಕೇಳಲು ಕಾತರಿಸಿವೆ
ತವಕವುಕ್ಕಿದ ಮನಸುಗಳ
ಬಿಗಿದಿಟ್ಟ ಉಸಿರು!
ವಿದ್ಯುತ್ತಿನ ಹರಿವನು ವ್ಯತ್ಯಯಗೊಳಿಸಿದೆ
ಹರಿದ ತಂತಿಯ ಸಾಲು
ಸರಿಪಡಿಸಲು ಮೇಲೇರಿದ
ಸಿಬ್ಬಂದಿಯ ಕಷ್ಟವ ನೆನೆ
ಬಲುಮೇಲು
ನಿಂತು ಹೊರಟಿದೆ ಮತ್ತೆ
ಮಳೆಹನಿಯ ಬಸ್ಸು
ಈಗ ಮೊದಲಿನ ಆವೇಗವಿಲ್ಲದೆ ಅದರ ಕಾಲು ಸೋತು ಸುಸ್ತು
ಬೆಟ್ಟ ಸಾಲಿಗೆ ತೆರೆಬಿದ್ದಿದೆ
ನಡೆದಿದೆ ಯಾವುದೋ ಸಂಚು
ಅವಗಣಿಸಲು ತೆರಬೇಕು ಬೆಲೆ ಬಹಳ
ಮನಸಾಗಿರಬೇಕು ಮಿಂಚು
ಹರಿದೋಡಿದೆ ತುಂಟ ಮಗುವಿನ ಕಾಲು ತಪ್ಪಿಸಿಕೊಳ್ಳುವಂತೆ ಪೆಟ್ಟು
ಹಿಂದೆ ನೋಡುತ ಮುಂದಾರಿಗೋ
ಢಿಕ್ಕಿಯಾಗುತ
ಸಿಡಿದಿದೆ ಜಲಕಾರಂಜಿಯ ಸಿಟ್ಟು
ಅಂಗಳದಲಿ ಹಾಸಿದೆ ಎಲೆಹೂಗಳ ಮೆಲ್ವಾಸು
ಜಲ ಬುದ್ಭುದಗಳಲಿ ತುಂಬಿದೆ
ಕ್ಷಣ ಬದುಕಿನ ನಿಷ್ಠುರ ಬೀಸು
ಮಳೆರಾಯ ಬರುವಾಗ ಏನಪ್ಪಾ ಇದು ಈ ಪರಿಹಾಸ
ಸುಮ್ಮನೆ ಬರಬಾರದೆ ಆರ್ಭಟಿಸದೆ
ಊಡುತ ಬಯಲಂಗಳಕೆ ದಿವಹಾಸ!
- ಶಿವದೇವಿ ಅವನೀಶಚಂದ್ರ, ನಿವೃತ್ತ ಶಿಕ್ಷಕರು, ಕವಿಯತ್ರಿ, ಲೇಖಕರು, ಕೊಡಗು.