‘ಪುನಶ್ಚೇತನ’ ಕತೆ – ಹರಿಹರ ಬಿ ಆರ್

ರಮೇಶ ಮತ್ತು ವಿಜಯಾ ಪ್ರೇಮಿಸಿ ಓಡಿ ಹೋಗಿ ಮದುವೆಯಾಗಿದ್ದರು, ಆದರೆ ಆ ಮದುವೆಯಿಂದ ರಮೇಶ ಖುಷಿಯಾಗಿದ್ದನೋ ಇಲ್ಲವೋ ಅನ್ನೋದನ್ನ ಕತೆಯನ್ನು ಓದಬೇಕು. ರಮೇಶ ಸಪ್ಪೆಯಾಗಿ ಕೂರಲು ಕಾರಣಗಳೇನು?…ವಿಜಯಾ ರಮೇಶನ ಜೊತೆ ಹೊಂದಿಕೊಳ್ಳಲ್ಲಿಲ್ಲವೇ? ಅಥವಾ ರಮೇಶನಿಗೆ ಮಂಕಾಗಲು ಬೇರೆ ಕಾರಣವಿತ್ತೇ?…ಹರಿಹರ ಬಿ ಆರ್ ಅವರ ಕತೆಯನ್ನು ತಪ್ಪದೆ ಮುಂದೆ ಓದಿ…

ರಮೇಶ ಕಾಲೇಜಿನಲ್ಲಿ ಓದುತ್ತಿದ್ದಾಗ ತಾನಿಷ್ಟ ಪಟ್ಟಿದ್ದ ವಿಜಯಾಳ ಜೊತೆ ಮನೆಯಿಂದ ಪಲಾಯನ ಮಾಡಿ ಮದುವೆಯಾಗಿ ಬೇರೆ ಮನೆ ಮಾಡಿದ್ದನಾದರೂ ಬಯಸಿದ್ದ ಸುಖ ಸಿಗಲಿಲ್ಲ. ಹೇಳದೆ ಕೇಳದೆ ಮನೆ ಬಿಟ್ಟು ಬಂದಿದ್ದರ ಪರಿಣಾಮವೋ ಅಥವಾ ಅಪ್ಪ ಅಮ್ಮಂದಿರ ಭಯವಿರಬಹುದೋ ಅಥವಾ ಮುಂದಿನ ಬಾಳು ಹೇಗಿರುತ್ತದೋ ಎಂಬ ಆತಂಕವೋ ತಿಳಿಯದು.
ಅವನು ಮಂಕಾಗಿದ್ದ ಕಾರಣ ಮಾತ್ರ ಅಸ್ಪಷ್ಟ. ಅಂದರೆ ರಮೇಶ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಪುಂಡನಂತೆ ಓಡಾಡುವಾಗ ಅನೇಕ ಹೊಸ ಹುಡುಗಿಯರ ಅದರಲ್ಲೂ ಚೆಲುವೆಯರ ಕೈ ಇರಲಿ ಅವರು ಹಾದು ಹೋಗುವಾಗ ಗಾಳಿ ತಗುಲಿದರೆ ಸಾಕು ಆಗುತ್ತಿದ್ದ ರೋಮಾಂಚನದ ರಸಾನುಭವ ಈಗಾಗುತ್ತಿರಲಿಲ್ಲ. ಆಗ ಆಡದ ಆಟಗಳಿಲ್ಲ. ಹುಡುಗಿಯರ ಕಾಲಿಗೆ ಅಡ್ಡ ಕೊಟ್ಟು ಬೀಳುವಂತೆ ಮಾಡುವುದು, ಜಡೆ ಹಿಡಿದು ಎಳೆಯುವುದು. ಇದೇ ರೀತಿಯ ಅನೇಕ ಚೇಷ್ಟೆಗಳನ್ನೂ ಮಾಡುತ್ತ ಅವರ ನಾಚಿಕೆಗಳನ್ನೂ ಆಡಿಕೊಳ್ಳುತ್ತಿದ್ದ. ಆಗಿದ್ದ ಹುಮ್ಮಸ್ಸು ಹುರುಪು ಅಸೆಗಳೆಂಬ ಗಾಳಿಗೋಪುರ ಎಲ್ಲವೂ ಈಗ ಒಮ್ಮೆಲೇ ಕಳಚಿ ಬಿದ್ದಂತಾಗಿತ್ತು. ರಮೇಶ ಸದಾ ಸಪ್ಪಗಾಗಿ ಕುಳಿತಿರುತ್ತಿದ್ದನಾದರೆ ವಿಜಯಾ ಮಾತ್ರ ಚಟುವಟಿಕೆಯಿಂದಲೇ ಇರುತ್ತಿದ್ದಳು. ರಮೇಶನ ಇತ್ತೀಚಿನ ವಿದ್ಯಮಾನಗಳನ್ನು ಗುರುತಿಸಿದ ವಿಜಯಾ ಹೇಗೋ ತನ್ನ ಅತ್ತೆ ಮಾವಂದಿರ ಜಂಗಮದ ಸಂಖ್ಯೆಯನ್ನು ಪಡೆದು ಅವರ ಬಿಡುವಾದ ಸಮಯ ತಿಳಿದುಕೊಂಡು ಭೇಟಿಯಾಗಿ “ಮೊದಲಿಗೆ ಅತ್ತೆ ಮಾವ ಎಂದು ಕರೆಯುತ್ತೇನೆ. ನಮಸ್ಕಾರಗಳು ಆಶೀರ್ವದಿಸಿ. ನಿಮ್ಮ ಭಾಗಕ್ಕೆ ನನ್ನ ಪ್ರೇಮಿ ತಪ್ಪು ಮಾಡಿರುವನು. ಇವನ ಒಳ್ಳೆಯ ಗುಣಕ್ಕೆ ಮಾರು ಹೋಗಿ ನಾನು ಇವನ ಜೊತೆ ಓಡಿಹೋದೆ. ಅಂದರೆ ಈ ತಪ್ಪಿನಲ್ಲಿ ನನ್ನದೂ ಪಾಲಿದೆ.” ಎಂಬ ವಿಜಯಾಳ ಪ್ರಾಥಮಿಕ ಸಂಭಾಷಣೆಯ ನಂತರ ಇಲ್ಲಿಯ ತನಕ ನಡೆದ ವಿಷಯಗಳೆಲ್ಲವನ್ನೂ ಸವಿವರವಾಗಿ ತಿಳಿಸಿ, “ಈಗ ಬಂದೊದಗಿರುವ ನನ್ನ ಪತಿಯ ಸಮಸ್ಯೆಯನ್ನು ಬಗೆಹರಿಸಿ ಹಾಗೂ ನನ್ನನ್ನು ತಮ್ಮ ಸೊಸೆಯನ್ನಾಗಿ ಸ್ವೀಕರಿಸಿ” ಎಂದು ಕೇಳಿಕೊಳ್ಳುತ್ತಾಳೆ.

ಫೋಟೋ ಕೃಪೆ : google

ಅತ್ತೆ ಮಾಲತಿಯವರು ಇದ್ದ ಒಬ್ಬನೇ ಮಗನು ಮಾಡಿದ ಗಾಂಧರ್ವ ವಿವಾಹದಂತಹ ಅಚಾತುರ್ಯದಿಂದ ಬೇಸರಗೊಂಡಿದ್ದರೂ, ಸುಗುಣವತಿಯಾದ ವಿಜಯಾಳನ್ನು ಅವಳ ಮಾತಿನಿಂದ, ನಿಲುವಿನಿಂದ, ಆತ್ಮಸ್ಥೈರ್ದಂತಹ ನುಡಿಗಳಿಂದ ಮತ್ತು ರಮೇಶನು ಮತ್ತೆ ಮಾಮೂಲಿನಂತಾದರೆ ಸಾಕೆಂದು ಅವನ ಅಪ್ಪ ಅಮ್ಮಂದಿರು ತಮ್ಮ ಅನುಮತಿಯೊಂದಿಗೆ ವಿಜಯಾಳನ್ನು ಸೊಸೆಯಾಗಿಯೇ ಸ್ವೀಕರಿಸಿದರು. ಇಷ್ಟಾದರೂ ಅವನಲ್ಲೇನೂ ಬದಲಾವಣೆ ಕಾಣದಾದಾಗ ತಂದೆ ವಿಷ್ಣುಶರ್ಮರು ತಮಗೆ ಗೊತ್ತಿರುವ ಸ್ನೇಹಿತ ಶ್ರೀನಿವಾಸರ ಬಳಿ ಎಲ್ಲರೊಟ್ಟಿಗೆ ಕರೆದುಕೊಂಡು ಹೋದರು. ಶ್ರೀನಿವಾಸರು ವೈದ್ಯರಾದರೆ ಅವರ ಪತ್ನಿ ಲಲಿತಾ ಮಹಾನ್ ಮನೋಶಾಸ್ತ್ರತಜ್ಞರಾಗಿದ್ದು ಅನೇಕರ ಮಾನಸಿಕ ಖಾಯಿಲೆಗಳನ್ನು ಗುಣಪಡಿಸಿ ಹೆಸರುವಾಸಿಯಾಗಿದ್ದವರು. ತಮ್ಮ ನಸುನಗುವಿನಿಂದಲೇ ಮನಸ್ಸನ್ನು ಹಗುರ ಮಾಡುವ ಕಲೆ ಅರಿತಿದ್ದವರು. ವಿಷ್ಣುಶರ್ಮರು ಮತ್ತು ಸೊಸೆ ವಿಜಯಾ ಇಬ್ಬರೂ ಸೇರಿ ರಮೇಶನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ.

ವೈದ್ಯರು ರಮೇಶನಿಗೆ ಚಿತ್ರಗಳ ಮೂಲಕ ಮತ್ತು ಸಂವಾದಗಳ ಮೂಲಕ ಪರೀಕ್ಷಿಸಿದರು. ನಂತರ ಒಬ್ಬೊಬ್ಬರನ್ನೇ ಅವನ ಜೊತೆಯಲ್ಲಿ ಕೂಡಿಸಿ ಮಾತನಾಡುವುದರ ಮೂಲಕ ಅನೇಕ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು. ಇದಲ್ಲದೆ ಇನ್ನೂ ಹತ್ತಾರು ವಿವಿಧ ಪರೀಕ್ಷೆಗಳಿಂದ ಸೂಕ್ಷ್ಮವಾಗಿ ಅವನ ಮಾನಸಿಕತೆಯನ್ನೆಲ್ಲ ಅರಿತುಕೊಂಡರು. ವೈದ್ಯರ ಪ್ರಕಾರ ರಮೇಶನಿಗೆ ಅವನಂದುಕೊಂಡಿದ್ದಂತೆ ಎಲ್ಲವೂ ಸಿಕ್ಕಿತು. ಆದರೆ ನಂತರ ಮುಂದೆ ಏನು ಮಾಡಬೇಕೆಂದು ತೋಚದೆ ಅವನ ಮನಸ್ಸು ಒಂದು ರೀತಿ ಖಾಲಿಯಾದಂತೆ ಆಗಿರುವುದನ್ನು ತಿಳಿದಿದ್ದರೂ ಮುಂದೆ ಹಲವಾರು ತೊಂದರೆಗಳಿಗೆ ದಾರಿಯಾಗುತ್ತದೆ ಎಂಬ ಕಾರಣದಿಂದ ವರದಿಯಿಂದ ಇದನ್ನು ಕೈಬಿಟ್ಟರು. ನಂತರ ವೈದ್ಯರು ಸಾಮೂಹಿಕವಾಗಿ ಎಲ್ಲರನ್ನೂ ಕೂರಿಸಿಕೊಂಡು, “ಅವನಿಗೆ ಏನೂ ತೊಂದರೆಯಿಲ್ಲ. ಇವನು ತನ್ನ ಅಮ್ಮ ಅಪ್ಪನೊಂದಿಗೆ ತುಂಬಾ ಮಾತನಾಡಲು ಮತ್ತು ಕೆಲವು ವಿಷಯಗಳನ್ನು ಹಂಚಿಕೊಳ್ಳಲು ಹವಣಿಸುತ್ತಿದ್ದಾನೆ. ಇದನ್ನು ಅವನ ಅಪ್ಪ ಅಮ್ಮಂದಿರಾದ ತಾವುಗಳು ಅವನೊಂದಿಗೆ ಪ್ರೀತಿಯಿಂದ ಸಹಮತದಿಂದ ಸಮಾಲೋಚಿಸಿದರೆ ಅವನು ಸರಿ ಹೋದರೂ ಹೋಗಬಹುದು” ಎಂದು ತಿಳಿಸಿ ವರದಿ ಸಮೇತ ದಾಖಲೆಗಳನ್ನು ಕೊಟ್ಟು ಎಲ್ಲರನ್ನೂ ಬೀಳ್ಕೊಟ್ಟರು.

ಸ್ನೇಹಿತ ಶ್ರೀನಿವಾಸರು ತಮ್ಮ ಜಂಗಮದಲ್ಲಿ ವಿಷ್ಣುಶರ್ಮರಿಗೆ ಪ್ರಯತ್ನಿಸಿದರು. ಕರೆಯಾದ ಕೂಡಲೇ “ಈಗ ನೀನು ನಿನ್ ಹೆಂಡ್ತಿ ಮಾತ್ರ ಇದೀರ? ಮಾತಾಡಬಹುದಾ?” ಎಂದು ಕೇಳಿದರು. “ಹಾ ಹೌದು, ಏನು ಹೇಳು ಸೀನಿ” ಎಂದು ಅವರ ಖಚಿತವಾದ ನಂತರ. “ವಿಷು ಇಲ್ಲಿ ಅಂದರೆ ಆಸ್ಪತ್ರೆಯಲ್ಲಿ ಹೇಳಲಾಗದ ಕೆಲವು ವಿಷಯಗಳನ್ನು ಹೇಳ್ತೀನಿ ಕೇಳು. ನಿನ್ನ ಮಗನಲ್ಲಿ ನೀವಿಬ್ಬರೂ ಇಟ್ಟಿರುವ ಪ್ರೀತಿ ಬಹಳಷ್ಟಿದೆ ಎಂಬುವುದನ್ನು ಅವನಿಗೆ ಆಗಾಗ ಹೇಳಿ ಹಳೆಯ ನೆನಪುಗಳನ್ನು ಅವನ ಮುಂದೆ ತರುತ್ತಿರಿ. ಅವನ ಗಮನ ಸೆಳೆದು ಅವನ ಒಳ್ಳೆಯ ಕೆಲಸಗಳಿಗೆ ಹುರಿದುಂಬಿಸಿ ಪ್ರೋತ್ಸಾಹಿಸುತ್ತಿರಿ. ಇಷ್ಟು ಮಾಡಿದರೆ ಖಚಿತವಾಗಿ ಮುಂದೆ ಸರಿ ಹೋಗುತ್ತಾನೆ.” ಎಂದು ತಿಳಿಸಿದರು.

ಫೋಟೋ ಕೃಪೆ : google

ಏಕಾಂಗಿಯಾಗಿದ್ದ ರಮೇಶ ಆಸ್ಪತ್ರೆಯಲ್ಲಿದ್ದಾಗ ವೈದ್ಯರು ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡಿದ್ದನ್ನು ನೆನಪಿಸಿಕೊಂಡು ‘ಹಾಗಾದರೆ ನನಗೇನಾಗಿದೆ? ಅಲ್ಲಿಂದ ಬರುತ್ತಿರುವಾಗ ಮತ್ತು ಮನೆಗೆ ಬಂದ ಮೇಲೆ ಅಪ್ಪ ಅಮ್ಮ ನನ್ನ ಮೇಲೆ ಅದೇಕೆ ಅಷ್ಟು ಪ್ರೀತಿಗಳನ್ನು ತೋರುತ್ತಿರುವರು? ವಿಜಯಾಳನ್ನು ಗಮನಿಸಿದ ಆದರೆ ಅವಳಲ್ಲಿ ಮಾತ್ರ ಅದೇ ಪ್ರೀತಿ ಅದೇ ವಾತ್ಸಲ್ಯವಿದೆ ಅವಳು ಬದಲಾಗಿಲ್ಲ.’ ಎಂದು ಯೋಚನಾಲಹರಿಯಲ್ಲಿ ಮುಳುಗಿದ.

ಇದನ್ನು ಗಮನಿಸಿದ ಅವನ ಅಮ್ಮ ಒಂದು ಕಟ್ಟು ಹಾಕಿಸಿದ್ದ ಹಳೆಯ ಪಟ ತಂದರು. ಅದರಲ್ಲಿ ಇವನ ಚಿಕ್ಕ ವಯಸ್ಸಿದ್ದಾಗ ತಂದೆ ತಾಯ್ಗಳೊಂದಿಗೆ ತೆಗೆದ ಚಿತ್ರವದಾಗಿತ್ತು. ಅದನ್ನು ರಮೇಶನ ಮುಂದೆ ಹಿಡಿದರು. ಅವನು ಅದನ್ನು ಹಿಡಿದು ಎಷ್ಟು ಹೊತ್ತಾದರೂ ನೋಡುತ್ತಲೇ ಇದ್ದ. ತಾನು ನಗತ್ತಾ ನಿಂತಿರುವ ಭಂಗಿ ಹಿಂದೆ ಅಪ್ಪ ಅಮ್ಮಂದಿರು ಪ್ರೀತಿಯಿಂದ ಅವನ ಬಳಸಿ ಹಿಡಿದಿದ್ದರು. ವಾಸ್ತವದಲ್ಲಿ ಅಮ್ಮನನ್ನು ಕಂಡ ಅದೇ ಪ್ರೀತಿಯಿತ್ತು. ಈಗಲೂ ಅವನ ತಲೆಯನ್ನು ಆಘ್ರಾಣಿಸಿ ಭುಜಗಳ ಮೇಲಿಂದ ಹಗುರವಾಗಿ ನೇವರಿಸಿ ತಮ್ಮ ತೊಡೆಯ ಮೇಲೆ ಮಲಗಿಸಿಕೊಳ್ಳುತ್ತ ಅವನ ತಲೆಯನ್ನು ಸವರುತ್ತಾ. “ನೀನು ಚಿಕ್ಕ ಹುಡುಗನಾಗಿದ್ದಾಗಿಂದಲೂ ಮಾಧ್ಯಮಿಕ ಶಾಲೆಯಲ್ಲಿಯ ತನಕ ನಿನ್ನದು ಅದೇನು ಆಟಗಳು ಪಾಠಗಳು ಎಲ್ಲರ ದೃಷ್ಟಿಯೂ ನಿನ್ನ ಮೇಲೆ ಬೀಳುತ್ತಿತ್ತು. ನೀನು ಓಡುವ ರೀತಿ ನಗುವ ರೀತಿ ಎಲ್ಲವೂ ಚೆಲುವೋ ಚೆಲುವು ಮುದ್ದಾಗಿದ್ದೆ. ನನ್ನನ್ನ ಬಳಸಿ ಇಟ್ಟುಕೊಳ್ಳುತ್ತಿದ್ದೆ. ನೀನು ಚಿಕ್ಕ ಹುಡುಗನಾಗಿದ್ದಾಗ ಅಮ್ಮ ಅಮ್ಮ ಅಂತ ನನ್ನ ಹಿಂದೆ ಮುಂದೆ ಯಾವಾಗ ನೋಡಿದರೂ ಓಡಾಡಿಕೊಂಡಿರ್ತಿದ್ದೆ. ಬೆಳಿತಾ ಬೆಳಿತಾ ನಿನಗೆ ಸ್ನೇಹಿತರು ಜಾಸ್ತಿಯಾದರು. ಮನೆಯಲ್ಲಿ ನೀನಿರುವ ಅವಧಿ ಕಡಿಮೆಯಾಗ್ತಾ ಬಂತು. ಅಮೇಲೆ ನಿನ್ನ ದರ್ಶನವಾಗುವುದು ಕ್ಷಣಿಕವಾಗತೊಡಗಿತು. ಅಂದೇ ನಮ್ಮಗಳ ಜೊತೇನೇ ಈಗ ಕೇಳುವಂತೆ ಆಗಲೇ ಕೇಳಿದ್ದರೆ ಚೆನ್ನಾಗಿರುತ್ತಿತ್ತು. ನಮ್ಮಿಬ್ಬರ ಮಧ್ಯೆ ನೀನಿದ್ದಿದ್ದರೆ ಪ್ರೀತಿ ನಿನಗೆ ಹೆಚ್ಚಾಗಿ ಸಿಗುತ್ತಿತ್ತು. ಹಾಗೆಂದು ಇಂದಿಗೂ ನಶಿಸಿಲ್ಲ. ಮುಂದೆಯೂ ಸಹ ಮನೆಯಲ್ಲಿದ್ದರೆ ಅದೇ ಪ್ರೀತಿ ಸಿಗತ್ತೆ.”

ಅವನು ಗಮನವಿಟ್ಟು ಕೇಳುತ್ತಿದ್ದ ರೀತಿ ನೋಡಿದರೆ ಪುಟ್ಟ ಬಾಲಕ ಅವರಮ್ಮ ಕಥೆ ಹೇಳುತ್ತಿರುವರೇ ಎನ್ನುವಂತಿತ್ತು. ಕಣ್ಮುಂದೆ ಅಮ್ಮ ಗೋಪಮ್ಮ ಸಂವಾದದಂತಿರುವ ಚಿತ್ರಪಟಲ ಕಣ್ಮುಂದೆ ಮೂಡಿತು. ಮತ್ತೆ ತಮ್ಮ ಜೋಡಿಯ ಪ್ರೀತಿಯ ಕಥೆ ಹೇಳಲುಪಕ್ರಮಿಸಿದರು.

“ಈಗ” ಎಂದು ಕೇಳಿದಾಕ್ಷಣ ಸಾವರಿಸಿಕೊಂಡು “ನಿನ್ನ ಹೆಂಡ್ತಿಯನ್ನು ಬಳಸ್ತಾ ಇದೀಯ ಅವಳನ್ನ ಪ್ರೀತಿಸ್ತಾ ಇದೀಯ” ಎಂದು ಹೇಳಿದರು.

“ಅಮ್ಮ ನೀವು ಗಂಡ ಹೆಂಡ್ತೀರಾದ ಮೇಲೆ ನಿಮ್ಮಿಬ್ಬರಿಗೂ ಪ್ರೀತಿ ಹುಟ್ಟಿತಾ ಅಥವಾ ಮುಂಚೇನೇ ಪ್ರೀತಿ ಹುಟ್ಟಿತಾ?”. ಅವನ ಪ್ರಶ್ನೆಯಿಂದ ವಿಚಲಿತರಾದರೂ ಅವನಿಗಾಗಿ ನಾಚಿಕೆಯನ್ನು ಬಿಟ್ಟು ಹೇಳತೊಡಗಿದರು.

“ಹುಡುಗಿ ಅಥವಾ ಹೆಂಗಸರಿಗೆ ಗೌರವ ಕೊಟ್ಟರೆ ಮದುವೆಯಾದ ಮೇಲೆ ಪ್ರೀತಿ ಧಾರಾಳವಾಗಿ ಸಿಗತ್ತೆ. ನಾನು ಕಾಲೇಜಿನಲ್ಲಿ ಓದುವಾಗ ಆಗಿನ ಪ್ರಿನ್ಸಿಪಾಲರು ತುಂಬಾ ಶಿಸ್ತಿನಿಂದಿದ್ದವರು. ಆಗೆಲ್ಲ ಹುಡುಗರ ತುಂಟಾಟಗಳು ಹೆಚ್ಚಿನ ಪ್ರಮಾಣದಲ್ಲಿರುತ್ತಿರಲಿಲ್ಲ. ಏನಿದ್ದರೂ ಕಾಲೇಜಿನ ಪ್ರಾಂಗಣದ ಆಚೆ. ಆದರೆ ನಾನು ಮಾತ್ರ ಆಚೆಯೂ ಇದಕ್ಕೆ ಹೆಚ್ಚು ಮಹತ್ವ ಕೊಡುತ್ತಿರಲಿಲ್ಲ. ನಮ್ಮ ಅಪ್ಪ ಅಮ್ಮನೇ ಮೊದಲ ಗುರು ಅವರದೇ ವೇದವಾಕ್ಯ ಅಂದರೆ ಓದುವಾಗ ಓದು ನಡೆಯುವಾಗ ನಡೆ ತಿನ್ನುವಾಗ ತಿನ್ನು ಈ ರೀತಿಯ ಶಿಸ್ತಿದ್ದುದರಿಂದಲೇ ಪ್ರೀತಿಯ ಬೆಲೆ ಈಗ ಗೊತ್ತಾಗ್ತಿದೆ. ನಾನು ನನ್ನ ತಂದೆ ತಾಯಿಯರು ಹುಡುಕಿದವನನ್ನು ಮದುವೆಯಾದೆ. ಅಂದರೆ ಪ್ರೀತಿ ಮಾಡಿದ್ದವರನ್ನು ಮದುವೆ ಆದರೂ ಪೋಷಕರ ಮುಖಾಂತರ ಹೋದರೂ ನಮ್ಮ ಜೀವನದಲ್ಲಿ ಋಣಾನುಬಂಧ ರೂಪೇಣ ಎನ್ನುವಂತೆ ಬರುವ ಗಂಡನೇ/ಹೆಂಡ್ತೀನೇ ಬರೋದು. ಅದಿರಲಿ ಮದುವೆಯಾದ ಮೇಲೆ ನಿಮ್ಮಪ್ಪನ ಪ್ರೀತಿಸಿ ಈಗಲೂ ಅದೇ ಪ್ರೀತಿ ಉಳಿಸ್ಕೊಂಡಿದೀನಿ. ನಿನ್ನನ್ನೂ ತುಂಬಾ ಪ್ರೀತಿಸ್ತೀನಿ.” ಎಂದು ಹೇಳುತ್ತಾ ಅವನ ಮುಖ ಗಮನಿಸಿದರು. ಕಣ್ಣುಗಳು ಕೆಂಪಾಗಿದ್ದನ್ನು ಕಂಡ ಕೂಡಲೇ “ಹೇ” ಎಂದು ಅವನ ತಲೆಯನ್ನು ಆಘ್ರಾಣಿಸಿ, ಮೃದುವಾಗಿ ನೇವರಿಸಿ “ಈಗಲೂ ಕಾಲ ಮಿಂಚಿಲ್ಲ ಬಾ ಇಲ್ಲಿ ನಿನಗೊಂದು ಗುಟ್ಟು ಹೇಳುತ್ತೇನೆ” ಎಂದು ಮುತ್ತು ಕೊಡುತ್ತಾ ಮೆಲ್ಲಗೆ ಹೇಳಿದರು. ಅದನ್ನು ಕೇಳಿದ ಮೇಲೆ ನಸುನಗುತ್ತ ಆಚೆಗೆ ಹೊರಟ.

ಫೋಟೋ ಕೃಪೆ : google

“ಅತ್ತೆ ನಾನೇನಾದರೂ ಅಡುಗೆ ಮನೆಯಲ್ಲೇನಾದರೂ ಸಹಾಯ ಮಾಡಬೇಕೇ?” ಎಂದು ವಿಜಯಾ ಕೇಳಿದಾಗ “ಬಾ” ಎಂದು ಕರೆದು ” ಇಲ್ಲಿರೋ ಎಲೆಕೋಸನ್ನ ತೊಳೆದು ಸಣ್ಣಗೆ ಹೆಚ್ಚಿಕೊಡು” ಎಂದಾಗ ಏನೊಂದೂ ಮರು ಮಾತಾಡದೆ ಅತ್ತೆ ಹೇಳಿದಂತೆ ಮಾಡಲನುವಾದಳು. ಹೀಗೆಯೇ ಇಬ್ಬರೂ ವಿಶ್ವಾಸದಲ್ಲಿ ಹತ್ತಿರಾಗುತ್ತಾ ಬಂದಿದ್ದರು. ಒಮ್ಮೆ ಸೊಸೆಗೆ ರಮೇಶನ ಬಳಿ ಇನ್ನು ಮುಂದೆ ಹೇಗೆ ನಡೆದುಕೊಳ್ಳಬೇಕೆಂದು ಸೂಕ್ಷ್ಮವಾಗಿ ತಿಳಿಸಿದರು. ಅಂದು ಸಂಜೆಯೇ ವಿಜಯಾಳಿಗೆ “ಇಂದು ಇದೆಲ್ಲ ನಾನು ನೋಡಿಕೊಳ್ಳುತ್ತೇನೆ. ನೀನು ರಮೇಶ ಕೆಲಸದಿಂದ ಬಂದ ಮೇಲೆ ಅವನ ಜೊತೆ ಹೊರಗೆ ಹೋಗಿ ಸುತ್ತಾಡಿ ಬಾ” ಎಂದರು. ಸರಿ ಅವರತ್ತೆ ಹೇಳಿದಂತೆಯೇ ವಿಜಯಾ ರಮೇಶನಿಗೆ ಕರೆ ಮಾಡಿ ತಿಳಿಸಿದಳು.

ಅವನ ಅಪ್ಪ ಮನೆಯಲ್ಲಿರುವಾಗ ಎಲ್ಲರ ಮುಂದೆ ರಮೇಶನ ವಿಷಯ ಉತ್ಸಾಹದಿಂದ ಹೇಳುತ್ತಾ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಿದ್ದರು ಮತ್ತು ಗುಣಗಾನ ಮಾಡುತ್ತಿದ್ದರು. ಎಲ್ಲರೂ ಸೇರಿ ಸಿಹಿಯೊಂದಿಗೆ ಅನಂದವನ್ನು ಹಂಚಿಕೊಳ್ಳುತ್ಯಿದ್ದರು.

ವಿಜಯಾ ತನ್ನ ಅತ್ತೆ ಹೇಳಿದ್ದಂತೆ ಸಂಜೆ ಇಬ್ಬರೂ ಸೇರಿದರು. ವಿಜಯಾಳ ಕೈ ರಮೇಶ ಹಿಡಿದರೆ ಅವಳದನ್ನು ಬಿಡಿಸಿಕೊಂಡು ನಾಚುತ್ತಾ ಮುಂದೆ ಸಾಗುವುದು. ಮತ್ತೆ ಬೇರೊಂದು ರೀತಿಯಲ್ಲಿ ಹತ್ತಿರ ಬರುವುದು. ಅವಳಿಗೆ ಅವನ ಮೇಲೆ ಪ್ರೀತಿ ಇರುವವಳಂತೆ ಅಭಿನಯಿಸುತ್ತಾ ಮುಂದೆ ಸಾಗುತ್ತಿದ್ದಳು. ವಿಜಯಾ ತನ್ನ ಅತ್ತೆ ಹೇಳಿಕೊಟ್ಟಂತೆ ಮಾಡಿದರೆ ಅದೇ ಅತ್ತೆ ಅಮ್ಮನಾಗಿ ಹೇಳಿಕೊಟ್ಟಂತೆ ರಮೇಶ ಮಾಡುತ್ತಿದ್ದ. ಅವಳ ನಡೆಯುವಾಗ ತೊಡರು ಕಾಲು ಕೊಟ್ಟು ತನ್ನ ಮೇಲೆ ಕೂಡುವಂತೆ ಮಾಡಿದ. ಹೀಗೆಯೇ ಮಂಚದ ಮೇಲೆ ಮಲಗುವ ತನಕ ಆಟ ಸಾಗುತ್ತಿತ್ತು. ಆದರೆ ಒಂದಾದಾಗ ಮಾತ್ರ ಸುಖಮಯ ರಾತ್ರಿಗಳನ್ನು ಸಮ ಸಮನಾಗಿ ಹಂಚಿಕೊಳ್ಳುತ್ಯಿದ್ದರು. ಇದೇ ರೀತಿ ಎರಡು ತಿಂಗಳಾಯ್ತು. ಮನೆಯಲ್ಲಿ ಅವಳು ವಾಂತಿ ಮಾಡಿಕೊಳ್ಳುತ್ತಿರುವಾಗ “ಅಮ್ಮಾ” ಎಂದು ಗಾಬರಿಯಿಂದ ಹಲವಾರು ಬಾರಿ ಕರೆಯುತ್ತಲೇ ಇದ್ದ. ಅವನ ‘ಅಮ್ಮ’ ಎಂಬ ಕೂಗಿಗೆ ಖುಷಿಯಾಗಿ ಕೂಗು ಬಂದೆಡೆ ಅರಸಿ ಸೊಸೆಯ ಜಾಗ ತಲುಪಿದರು. ತಕ್ಷಣ ಸನ್ನಿವೇಶವನ್ನು ಅರ್ಥ ಅವಳ ಬೆನ್ನು ಹಿತವಾಗಿ ಸವರುತ್ತಿದ್ದರು. “ಅಮ್ಮ ಏನಾಗಿದೆಯಮ್ಮ” ಎಂದು ಮತ್ತೆ ಗಾಬರಿಯಿಂದ ಕೇಳಿದ ಮಗನಿಗೆ “ಮಾಡೋದೆಲ್ಲ ಮಾಡ್ಬಿಟ್ಟು ನಾಕೇಟು ಕೊಡ್ತೀನಿ ಬಾ ಇಲ್ಲಿ” ಎಂದು ಹೇಳುತ್ತಾ ಅವನನ್ನು ಅಟ್ಟಿಸಿಕೊಂಡು ಹೋಗುವಂತೆ ಅಭಿನಯಿಸಿದರು. ಅವನು ಮತ್ತೆ “ಅಮ್ಮಾ ನಾನೇನ್” ಎಂದು ಅರ್ಧಕ್ಕೇ ತಡೆದು ವಿಜಯಾಳ ಕಡೆ ತಿರುಗಿ “ಹೌದಾ?” ಎಂದು ಹೆಂಡತಿಯನ್ನು ತಬ್ಬಿದ. ಮತ್ತೆ ಅವರಮ್ಮ ಅಡ್ಡ ಬಂದು “ಹೆಹೆಹೇ ಸಾಕು ಸಾಕು ಮಗಧೀರ” ಎಂದು ಆತ್ಮೀಯರಾಗಿ ನಗುತ್ತಿದ್ದಾಗ ಅಪ್ಪನ ಪ್ರವೇಶವಾಯ್ತು. “ಇದೆಲ್ಲ ಡಾಕ್ಟರ್ ಪ್ರಭಾವ ಎಲ್ಲರೂ ಸಿದ್ದರಾಗಿ ಅವರ ಹತ್ತಿರ ಹೋಗಿ ಧನ್ಯವಾದಗಳನ್ನು ಹೇಳಿ ಹಾಗೇ ಸೊಸೆಗೂ ತೋರಿಸ್ಕೊಂಡು ಬರೋಣ” ಎಂದರು.
(ಮುಗಿಯಿತು)


  • ಹರಿಹರ ಬಿ ಆರ್ (ಅಕ್ಷಂತಲ ಬರಹ)

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW