ಪ್ರಾಕೃತಿಕ ರಮ್ಯ ತಾಣ – ರಾಜಾ ಸೀಟ್

ಬೋಳು ಮಂಟಪವೇ  ‘ರಾಜಾಸೀಟ್’, ಇದನ್ನು ಜನ ಮಡಿಕೇರಿಯ ರಾಜ ಚಹರೆ ಎಂದೇ ಒಪ್ಪಿಕೊಂಡಿದ್ದಾರೆ. ಲೇಖಕ ಅಶೋಕ ವರ್ಧನ ಅವರು ಈ ರಾಜಾಸೀಟ್ ಕುರಿತು ಬರೆದ ಪುಟ್ಟ ಲೇಖನ ತಪ್ಪದೆ ಮುಂದೆ ಓದಿ…

“ಕೊಡಗಿನ ರಾಜರುಗಳಲ್ಲಿ ಲಿಂಗರಾಜ ಓರ್ವ ವೈಭವಶಾಲಿಯಾದ ಅರಸ. (ಆಳ್ವಿಕೆಯ ಕಾಲ ೧೭೭೪-೮೦) ಆತ ಮಡಿಕೇರಿಯಲ್ಲಿದ್ದಾಗ ಪ್ರತಿ ಸಾಯಂಕಾಲವೂ ರಾಜಠೀವಿಗೊಪ್ಪುವ ಉನ್ನತ ಅಶ್ವವನ್ನೇರಿ ವಾಯುವಿಹಾರಾರ್ಥ ಪಟ್ಟಣದ ದಕ್ಷಿಣ ಪ್ರಪಾತದಂಚಿಗೆ ಬಂದು ಪಶ್ಚಿಮಮುಖಿಯಾಗಿ ಕುಳಿತು, ದಿವ್ಯ ಸ್ವರ್ಗೀಯ ದೃಶ್ಯಾವಲೋಕನ ಮಾಡುತ್ತಿದ್ದನು.

ಬೆಟ್ಟಗಳ ಸಾಲಿನ ಮೇಲೆ ಸಂಜೆ ಸೂರ್ಯನ ಸವಾರಿ ಚೆಂಬೆಳಕಿನ ರಸವನ್ನೇ ಸುರಿಸುತ್ತಿತ್ತು. ಮೋಡಗಳ ಒಟ್ಟಣೆಯಲ್ಲಿ ಸೂರ್ಯ ಹುಗ್ಗಾಟವಾಡುತ್ತ ಜಾರುತ್ತಿದ್ದಂತೆ ಕಂಡಿ ಸಿಕ್ಕಲ್ಲೆಲ್ಲ ಕಿರಣಕುಂಚಗಳನ್ನು ತೂರಿ ಮೇಘಬಿತ್ತಿಗಳ ಮೇಲೆ ಪರಿಪರಿಯ ವರ್ಣಗಳನ್ನೂ ಸ್ವರೂಪಗಳನ್ನೂ ರಚಿಸುತ್ತಲೂ ಅಳಿಸುತ್ತಲೂ ಇದ್ದ. ವನರಾಶಿ ಜ್ಯೋತಿ ಸಮುದ್ರದಲ್ಲಿ ಮುಳುಗಿ ಮೂಕಾನಂದವನ್ನು ಅನುಭವಿಸುತ್ತಿತ್ತು.” ಹೀಗೆ ಸಾಗುತ್ತದೆ ಜಿಟಿನಾ ಅವರ ಕಥಾಸಂಕಲನ – ಕೊಡಗಿನ ಸುಮಗಳು, ಇದರ ಒಂದು ಕತೆ.

ಆ ರಾಜ ಪರಂಪರೆಯಲ್ಲಿ ಯಾರೋ ಸ್ಥಳದ ಆಕರ್ಷಣೆಗೆ ಸಾಂಕೇತಿಕವಾಗಿ ಕಟ್ಟಿಸಿದ ಪುಟ್ಟ ಚಚ್ಚೌಕ ಬೋಳು ಮಂಟಪವೇ – ರಾಜಾಸೀಟ್. ಇದನ್ನು (ಅಂತೆಯೇ ಗದ್ದುಗೆ, ಓಂಕಾರೇಶ್ವರ ದೇವಾಲಯಗಳನ್ನೂ) ಜನ ಎಂದೋ ಮಡಿಕೇರಿಯ ರಾಜಚಹರೆ ಎಂದೇ ಒಪ್ಪಿಯಾಗಿದೆ.

This slideshow requires JavaScript.

 

ನಿಜದಲ್ಲಿ ಪ್ರಾಕೃತಿಕ ಉನ್ನತ ನೆಲೆಗಳಿಂದ (ಆಗುಂಬೆ, ಬಿಸಿಲೆ, ಚಾರ್ಮಾಡಿ….) ಕೆಳಲೋಕವನ್ನು ನೋಡುವುದೆಂದರೆ, ವಿಸ್ತಾರಕ್ಕೆ ಬೆರಗು ಮತ್ತು ಹೋಲಿಕೆಯಲ್ಲಿ ನಮ್ಮ ಸ್ಥಾನಕ್ಕೆ ವಿನಯ ಅರಿಯುವ ಕ್ಷಣಗಳು. ಆದರೆ ವ್ಯತಿರಿಕ್ತವಾಗಿ ಇಂದು ರಾಜಾಸೀಟ್ ಆವರಣ ಪ್ರವಾಸೋದ್ದಿಮೆಯ ಹುಚ್ಚುಹೊಳೆಯಲ್ಲಿ ಪ್ರಕೃತಿಯನ್ನು ಸಣ್ಣ ಮಾಡಿ, ಮನುಷ್ಯ ಗರ್ವದ ಪ್ರದರ್ಶನವಾಗುತ್ತಿದೆ. ಪುಡಾರಿ ಮತ್ತು ಅಧಿಕಾರಶಾಹಿಗಳ ದುರಹಂಕಾರದಲ್ಲಿ ಯಂತ್ರ ಸಾಮರ್ಥ್ಯವೇ ಪರಮಶಕ್ತಿ ಎಂಬ ಭ್ರಮೆ ಇಲ್ಲೂ ಮೆರೆಯುತ್ತಿದೆ. ರಾಜಾಸೀಟ್ ಒಂದು ಬಿಡುಗಡೆಯ ಅವಕಾಶ ಎನ್ನುವುದನ್ನೇ ಮರೆತು, ಸಮೀಪದ ದಿಬ್ಬದಿಂದ ದಿಬ್ಬಕ್ಕೆ ಅಂತರ್ಲಾಕು, ಕಾಂಕ್ರೀಟುಗಳ ಪುಟ್ಟಪಥ, ಮೆಟ್ಟಿಲ ಸಾಲು, ದೀಪ, ಮಂಟಪ, ಅಲಂಕಾರಿಕ ಉದ್ಯಾನ, ನೃತ್ಯ ಕಾರಂಜಿ, ಮಕ್ಕಳ ರೈಲು ಎಂದೇನೇನೋ ವಿಹಾರ ಸೌಕರ್ಯಗಳ ಭಾರ ಹೇರುತ್ತಲಿದ್ದಾರೆ. ಈಗಾಗಲೇ ತಪ್ಪಲಿನಲ್ಲಿ ಹರಿಯುವ ಮಡಿಕೇರಿ – ಮಂಗಳೂರು ಹೆದ್ದಾರಿ ಕುಸಿದು, ಪೊಳ್ಳು ಬೆಟ್ಟದ ಒಳಒಳಗೆ ಬರುತ್ತಲೇ ಇದೆ. ಇನ್ನು ರಾಜಾಸೀಟ್ ಸುಂದರೀಕರಣದಲ್ಲಿ ಶಿರೋಭಾರ ಹೆಚ್ಚಿಸಿದಂತೆ ಎಲ್ಲವೂ ಕೆಟ್ಟು ಹೋಗುವ ದಿನಗಳು ದೂರವಿಲ್ಲ.

ಮೊದಲು ಹೇಳಿದ ಕತೆಯನ್ನೀಗ ನನ್ನ ಮಾತುಗಳಲ್ಲಿ ತುಸು ಮುಂದುವರಿಸುತ್ತೇನೆ:

ಲಿಂಗರಾಜನ ವಿಹಾರದ ಒಂದು ಸಂಜೆ, ಅಲ್ಲಿಗೊಬ್ಬ ಸುಂದರ ತರುಣಿ ಧಾವಿಸಿ ಬಂದು, ರಾಜ ಕಾರಣವಲ್ಲದ ಘನ ಸಾಮಾಜಿಕ ಫಿರ್ಯಾದು ಒಂದನ್ನು ಮಂಡಿಸುತ್ತಾಳೆ. ರಾಜ ನ್ಯಾಯಪರಿಪಾಲನೆಯನ್ನು ಸಮರ್ಥವಾಗಿ ಮಾಡುತ್ತಾನೆ. (‘ನ್ಯಾಯಪರಿಪಾಲನೆ ಎಂಬ ಆ ಪೂರ್ಣ ಕತೆಗೆ – https://www.athreebook.com/2014/02/blog-post_25.html#more). ಆದರೆ ಇಂದು ರಾಜಾಸೀಟ್ ಸೇರಿದಂತೆ ಕೊಡಗಿನ ಘಟ್ಟದ ವಲಯದಲ್ಲಾಗುತ್ತಿರುವ ಅಭಿವೃದ್ಧಿಯ ಮೂರ್ಖತನಕ್ಕೆ, ತೆರೆದುಕೊಳ್ಳಲಿರುವ ಭೀಕರ ಪಾರಿಸರಿಕ ದುರಂತಕ್ಕೆ ಸ್ವತಃ (ರಾಜನ ಸ್ಥಾನದಲ್ಲಿರುವ) ಸರಕಾರವೇ ಕಾರಣವಾಗಿರುವಾಗ ನ್ಯಾಯ ಕೇಳುವುದಾದರೂ ಎಲ್ಲಿ?


  • ಅಶೋಕ ವರ್ಧನ (ಅತ್ರಿ ಬುಕ್ ಸೆಂಟರ್ ನಿರ್ದೇಶಕರು, ಲೇಖಕರು) 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW