ರಾಷ್ಟ್ರದ ಗಣರಾಜ್ಯೋತ್ಸವ ಸಿದ್ಧತೆ ಹೀಗಿರುತ್ತದೆ …



ಗಣರಾಜ್ಯೋತ್ಸವದ ಸಿದ್ಧತೆ,ಭವ್ಯ ರಾಷ್ಟ್ರದ ಗಣರಾಜ್ಯೋತ್ಸವ ಹೇಗೆ ನಡೆಯುತ್ತದೆ… ಎನ್ನುವುದರ ಕುರಿತು ಲೇಖಕರಾದ ವಿಂಗ್ ಕಮಾಂಡರ್ ಸುದರ್ಶನ ಅವರು ಓದುಗರಿಗೆ ವಿವರವಾಗಿ ವಿವರಿಸಿದ್ದಾರೆ, ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು…

ದೆಹಲಿಯ ರಾಜಪಥ ಇರುವುದು ರಾಜಧಾನಿಯ ಮಧ್ಯಭಾಗದಲ್ಲಿರುವ ರಾಷ್ಟ್ರಪತಿ ಭವನ ಮತ್ತು ಮೂರು ಕಿಲೋಮೀಟರ್ ದೂರವಿರುವ ಇಂಡಿಯಾ ಗೇಟ್ ನಡುವೆ. ಡಿಸೆಂಬರ್ ತಿಂಗಳಿನಿಂದಲೇ ಇಲ್ಲಿ ಗಣರಾಜ್ಯೋತ್ಸವದ ಆಚರಣೆಗೆ ಸಂಬಂಧಿಸಿದಂತೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿ ಬಿಡುತ್ತವೆ.

ಫೋಟೋ ಕೃಪೆ : DNA india

ಈಗಿರುವ ರಾಷ್ಟ್ರಪತಿ ಭವನದ ಜಾಗದಲ್ಲಿ ಮುಂಚೆ ಒಂದು ಗುಡ್ಡವಿತ್ತು ಅಲ್ಲಿ ಸುಮಾರು ಮುನ್ನೂರು ಕುಟುಂಬಗಳ ಹಳ್ಳಿಯಿತ್ತು, ಆ ಹಳ್ಳಿಯ ಮತ್ತು ಬೆಟ್ಟದ ಹೆಸರು ರೈಸೀನಾ ಎಂದು. 1900 ರ ಸುಮಾರಿನಲ್ಲಿ ಎಡ್ವಿನ್ ಲುಟಿಯನ್ ಎನ್ನುವ ವಾಸ್ತುಶಿಲ್ಪಿ ತನ್ನ ತಂಡದೊಂದಿಗೆ ಈ ಗುಡ್ಡಕ್ಕೆ ಬಂದು ಬ್ರಿಟಿಷ್ ಸರ್ಕಾರದ ಕಟ್ಟಡಗಳು ಸಚಿವಾಲಯಗಳನ್ನು ನಿರ್ಮಿಸಲು ಇದೇ ಸೂಕ್ತ ಸ್ಥಳ ಎಂದು ನಿರ್ಧರಿಸಿ ಈಗಿನ ಸಂಸದ್ ಭವನ, ನಾರ್ತ ಬ್ಲಾಕ್, ಸೌತ್ ಬ್ಲಾಕ್ ಹಾಗೂ ರಾಷ್ಟ್ರಪತಿ ಭವನವನ್ನು ನಿರ್ಮಾಣ ಮಾಡುತ್ತಾನೆ. ಅನೇಕ ಸರ್ಕಾರಿ ಕಟ್ಟಡಗಳು, ಅಧಿಕಾರಿಗಳಿಗೆ ಇತರೆ ಸಿಬ್ಬಂದಿಗಳಿಗೆ ಕಟ್ಟಿಸಿರುವ ವಸತಿ ಸಮುಚ್ಛಾಯಗಳೂ ಇವೆ. ಇದನ್ನೆಲ್ಲಾ ನಿರ್ಮಿಸಿದ ವಾಸ್ತುಶಿಲ್ಪಿಯ ನೆನಪಿಗಾಗಿ ದೆಹಲಿಯ ಈ ಭಾಗವನ್ನು ‘ಲೂಟಿಯನ್ಸ್ ಡೆಲ್ಲಿ’ ಎಂದೂ ಕರೆಯುತ್ತಾರೆ.

ಫೋಟೋ ಕೃಪೆ : scroll.in

ಪ್ರಥಮ ವಿಶ್ವಯುದ್ಧದಲ್ಲಿ ಮತ್ತು ಅಫ್ಘಾನಿಸ್ತಾನದಲ್ಲಿ ನಡೆದ ಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರ ಸ್ಮರಣಾರ್ಥ1921ರಲ್ಲಿ ಇಂಡಿಯಾ ಗೇಟ್ ನಿರ್ಮಾಣ ಮಾಡಲಾಯಿತು. 1971 ರ ಭಾರತ ಪಾಕಿಸ್ತಾನದ ಯುದ್ಧದ ನಂತರ ಇಲ್ಲಿ ಒಂದು ಸ್ಮಾರಕವನ್ನು ನಿರ್ಮಾಣ ಮಾಡಲಾಯಿತು ಅದಕ್ಕೆ “ಅಮರ್ ಜವಾನ್ ಜ್ಯೋತಿ” ಎಂದು ಹೆಸರಿಸಲಾಯಿತು. ಈಗ ಆ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದೊಂದಿಗೆ ವಿಲೀನಗೊಳಿಸಲಾಗಿದೆ. ಈ ಎರಡು ಐತಿಹಾಸಿಕ ಸ್ಥಳಗಳ ನಡುವಿನ ಮೂರು ಕಿಲೋಮೀಟರ್ ಉದ್ದದ ವಿಶಾಲವಾದ ರಸ್ತೆಯನ್ನು ರಾಜಪಥವೆಂದು ಕರೆಯಲಾಗುತ್ತದೆ. ಇಲ್ಲೇ ನಡೆಯುವುದು ನಮ್ಮ ದೇಶದ ಹೆಮ್ಮೆಯ ಸೈನ್ಯದ, ಸಂಸ್ಕೃತಿಯ, ಕಲೆಯ ಮತ್ತು ಸಾಹಸದ ಪ್ರದರ್ಶನ…ಪ್ರತಿವರ್ಷ ಜನವರಿ 26ರಂದು ಆಚರಿಸುವ ಗಣರಾಜ್ಯೋತ್ಸವ ಅಂಗವಾಗಿ ನಡೆಯುವ ಅದ್ದೂರಿಯ ಸಂಭ್ರಮ. ಈ ವರ್ಷ ನೂತನವಾಗಿ ನಿರ್ಮಾಣಗೊಂಡಿರುವ Central Vista Avenue ದ ಉದ್ಘಾಟನೆಯೂ ನೆರವೇರಲಿದೆ.

ಫೋಟೋ ಕೃಪೆ : youtube

ಇದು ರಾಜಪಥದ ಪರಿಚಯವಾದರೆ ಇನ್ನು ಗಣರಾಜ್ಯೋತ್ಸವದ ಇತಿಹಾಸದ ಬಗ್ಗೆ ಒಂದಿಷ್ಟು ಮಾಹಿತಿ.. ಆಗಸ್ಟ್ 15 ರಂದು ನಮ್ಮ ದೇಶದ ಸ್ವಾತಂತ್ರ್ಯೋತ್ಸವ ಆಚರಿಸುತ್ತೀವಲ್ಲವೇ..ಮತ್ತೇಕೆ ಈ ಗಣರಾಜ್ಯೋತ್ಸವ? ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ Government of India Act 1935 ಎನ್ನುವ ಬ್ರಿಟಿಷರ ದಸ್ತಾವೇಜಿನ ಚೌಕಟ್ಟಿನಲ್ಲಿ ಆಡಳಿತ ನಡೆಸಲಾಗುತ್ತಿತ್ತು. ನಮ್ಮದೇ ಆದ ಸಂವಿಧಾನವನ್ನು ನಿರ್ಮಿಸಲು ಅಂಬೇಡ್ಕರರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ, ಆ ಸಮಿತಿ ಸಿದ್ಧಪಡಿಸಿದ ಸವಿಸ್ತಾರವಾದ ಸಂವಿಧಾನವನ್ನು ಅಳವಡಿಸಿ, ಭಾರತದ ಮೊಟ್ಟಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರರವರ ನೇತೃತ್ವದಲ್ಲಿ 26 ಜನವರಿ 1950 ಯಂದು ಮೊದಲಬಾರಿಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ನಮ್ಮ ಸಂವಿಧಾನದಡಿಯಲ್ಲಿ ರಾಷ್ಟ್ರಪತಿಯವರೇ ದೇಶದ ಸಮಸ್ತ ಸೈನ್ಯದ ಸರ್ವೋಚ್ಚ ದಂಡನಾಯಕರೆಂದು ಘೋಷಿಸಲಾಗಿದೆ ಹಾಗಾಗಿ ಗಣತಂತ್ರ ದಿನಾಚರಣೆಯ ಎಲ್ಲಾ ಕಾರ್ಯಕ್ರಮಗಳು ರಾಷ್ಟ್ರಪತಿಯವರ ಮುಖಂಡತ್ವದಲ್ಲಿ ನೆರವೇರುತ್ತವೆ. ಪ್ರತಿ ವರ್ಷ ಈ ಅದ್ಭುತ ಪ್ರದರ್ಶನವನ್ನು ವೀಕ್ಷಿಸಲು ಮಿತ್ರದೇಶದ ಪ್ರಧಾನಿ ಅಥವಾ ಅಧ್ಯಕ್ಷರನ್ನು ಆಹ್ವಾನಿಸಲಾಗುತ್ತದೆ.ಗಣರಾಜ್ಯೋತ್ಸವದ ಸಿದ್ಧತೆ ಹೇಗೆ ನಡೆಯುತ್ತದೆ? 26 ಜನವರಿಯಂದು ದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ, 29 ಜನವರಿಯಂದು ವಿಜಯ ಚೌಕದಲ್ಲಿ ನಡೆಯುವ Beating the Retreat ಸಮಾರಂಭಗಳು ಹಾಗೂ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರೋಹಗಳು ರಕ್ಷಣಾ ಮಂತ್ರಾಲಯದ ಆದೇಶದಡಿ ನೆರವೇರುತ್ತದೆ.

ಫೋಟೋ ಕೃಪೆ : indian tv news

ಪ್ರತಿ ಗಂಟೆಗೂ, ಪ್ರತಿ ನಿಮಿಷ ನಿಮಿಷಕ್ಕೂ ನಡೆಯುವ ಕಾರ್ಯಕ್ರಮದ ವಿವರಗಳನ್ನು ಹೊಂದಿರುವ ಕೈಪಿಡಿಯೊಂದನ್ನು ಸಿದ್ಧಪಡಿಸಿ ಇತರೆ ಹಲವಾರು ಮಂತ್ರಾಲಯಗಳಿಗೆ, ವಿಭಾಗಗಳಿಗೆ ವಿತರಿಸಲಾಗುತ್ತದೆ. ರಕ್ಷಣಾ ಮಂತ್ರಾಲಯದಲ್ಲೇ ಹಲವಾರು ಸಮಿತಿಗಳನ್ನು ನಿರ್ಮಿಸಿ ಅವರವರ ಜವಾಬ್ದಾರಿಗಳನ್ನು ಹಂಚಲಾಗುತ್ತದೆ.

ಗಣರಾಜ್ಯೋತ್ಸವದ ಸಮಾರಂಭದಲ್ಲಿ ದೇಶದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮತ್ತಿತರ ಗಣ್ಯರು ಒಂದೇ ಸ್ಥಳದಲ್ಲಿ ಉಪಸ್ಥಿತರಿರುವುದರಿಂದ ಕೆಲವು ವಿಧ್ವಂಸಕ ಶಕ್ತಿಗಳಿಂದ ಇವರನ್ನು ರಕ್ಷಿಸುವುದು ಅತ್ಯಂತ ಪ್ರಮುಖ ಜವಾಬ್ದಾರಿ. ಇದಕ್ಕೆಂದೇ ರಾಷ್ಟ್ರಪತಿ ಭವನ ಮತ್ತು ಆಸುಪಾಸಿನ ಪ್ರದೇಶವನ್ನು ಶಾಶ್ವತವಾಗಿ ನಿಷೇಧಿತ ಸ್ಥಳ ಎಂದು ಘೋಷಿಸಲಾಗಿದೆ. ಅಪ್ಪಿತಪ್ಪಿಯೂ ಇಲ್ಲಿನ ಮೇಲೆ ಯಾವ ವಿಮಾನವಾಗಲಿ, ಡ್ರೋನ್ ಗಳಾಗಲೀ ಹಾರುವಂತಿಲ್ಲ. ಹಾಗೇನಾದರೂ ಆದರೆ ಆ ವಿಮಾನವನ್ನು ಹೊಡೆದುರುಳಿಸಲು ಆಯಕಟ್ಟಿನ ಜಾಗಗಳಲ್ಲಿ ವಾಯು ರಕ್ಷಣಾ ತೋಪುಗಳನ್ನು ಇರಿಸಲಾಗಿದೆ. ಅನುಮಾನಾಸ್ಪದ ಸ್ಥಳಗಳ ಮೇಲೆ ಹೆಲಿಕಾಪ್ಟರುಗಳ ಗಸ್ತು ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲಾ ವೈರಲೆಸ್ ತರಂಗಾಂತರದ ಸಂಭಾಷಣೆಗಳನ್ನು ನಿರಂತರವಾಗಿ ಗಮನವಿಟ್ಟು ಕೇಳಲೆಂದೇ ಒಂದು ವಿಭಾಗಕ್ಕೆ ವಹಿಸಿಕೊಡಲಾಗುತ್ತದೆ. ಸಶ್ತ್ರಸಜ್ಜಿತರಾದ ಆದರೆ ಸಾದಾ ಬಟ್ಟೆಯಲ್ಲಿ ಅಲ್ಲಲ್ಲಿ ಪುರುಷ ಮತ್ತು ಮಹಿಳಾ ಕಮಾಂಡೋಗಳನ್ನು ಕೂರಿಸಲಾಗುತ್ತದೆ. ಗುಪ್ತಚರ ವಿಭಾಗದಿಂದ ಬಂದ ಮಾಹಿತಿಯ ಆಧಾರದ ಮೇಲೆ ಕ್ಷಿಪ್ರ ಆಕ್ರಮಣ ಪಡೆಯನ್ನು ಸಿದ್ಧಪಡಿಸಿ ಸುತ್ತಲೂ ಕಟ್ಟೆಚ್ಚರ ವಹಿಸಲಾಗುತ್ತದೆ.

ಇನ್ನು ಗಣತಂತ್ರ ದಿವಸದ ಪರೇಡಿನ ಸಿದ್ಧತೆಯ ವಿಷಯದ ಬಗ್ಗೆ ಹೇಳುವುದಾದರೆ ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಸಿದ್ಧತೆ ಸುಮಾರು ಆರು ತಿಂಗಳು ಮುಂಚೆನೇ ಪ್ರಾರಂಭವಾಗುತ್ತದೆ.
ಪ್ರಪಂಚದಲ್ಲಿ ಎರಡನೇ ಅತಿ ದೊಡ್ಡ ಭೂಸೇನೆ ನಮ್ಮದು.. ಹನ್ನೆರಡು ಲಕ್ಷ ಸೈನಿಕರ ಅಗಾಧ ಸೈನ್ಯ. ಈ ವರ್ಷ ಇಂತಿಂತ ರೆಜಿಮೆಂಟು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಆಯ್ಕೆಯಾಗಿದೆ ಎಂದರೆ ಅಲ್ಲಿನ ಸೈನಿಕರು ಹೆಮ್ಮೆಯಿಂದ ಬೀಗುತ್ತಾರೆ. ಈ ಬಟಾಲಿಯನ್ನಿನ ತೋಪುಗಳು ರಾಷ್ಟ್ರಪತಿಯವರು ಧ್ವಜಾರೋಹಣ ಮಾಡುವ ಸಮಯದಲ್ಲಿ 21 ಕುಶಾಲ ತೋಪಿನ ಸಲ್ಯೂಟ್ ಕೊಡಲು ಆಯ್ಕೆಯಾಯಿತೆಂದರೆ ಆ ತುಕಡಿಗೆ ಸಂದ ಗೌರವ. ಆಯ್ಕೆಯಾದ ಟ್ಯಾಂಕ್ ರೆಜಿಮೆಂಟು ತನ್ನ ಟ್ಯಾಂಕುಗಳನ್ನು ದೆಹಲಿಗೆ ಸಾಗಿಸುವ ಪ್ರಕ್ರಿಯೆ ಪ್ರಾರಂಭಿಸುತ್ತದೆ. ದೇಶದ ಮೂಲೆ ಮೂಲೆಯಿಂದ ಬಂದ ಈ ತುಕಡಿಗಳು ಡಿಸೆಂಬರ್ ಮೊದಲ ವಾರದಲ್ಲೇ ದೆಹಲಿಯ ದಂಡುಪ್ರದೇಶಕ್ಕೆ ಬಂದು ತಮ್ಮ ತಮ್ಮ ಟೆಂಟುಗಳ ಕ್ಯಾಂಪನ್ನು ಸ್ಥಾಪಿಸುತ್ತವೆ. ಗಣತಂತ್ರ ಪರೇಡಿನ ಅಡ್ಜುಟೆಂಟ್ ಇವರ ಎಲ್ಲಾ ಜವಾಬ್ದಾರಿ ವಹಿಸುತ್ತಾರೆ.

ಫೋಟೋ ಕೃಪೆ : askiadea.com

ಬೆಳಿಗ್ಗೆ ನಾಲ್ಕು ಗಂಟೆಗೇ ದೈಹಿಕ ದಂಡನೆಯಿಂದ ಇವರ ಚಟುವಟಿಕೆಗಳು ಪ್ರಾರಂಭ. ಅವರವರ ಬಟಾಲಿಯನ್ ಕಮಾಂಡರ ಆದೇಶದ ಮೇಲೆ ದಿನದ ಕಾರ್ಯಕ್ರಮ ನಿರೂಪಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಅವರ ಕಮಾಂಡಿಗ್ ಆಫೀಸರ್ ಬಂದು ತಮ್ಮ ತಂಡದ ಪ್ರಗತಿಯನ್ನು ನಿರೀಕ್ಷಣೆ ಮಾಡುತ್ತಾರೆ. ತಮ್ಮ ತಂಡವನ್ನು ಹುರಿದುಂಬಿಸುತ್ತಾರೆ…ಕೆಲವು ವಿಷಯಗಳನ್ನು ತಿದ್ದಿಕೊಳ್ಳುವ ಎಚ್ಚರಿಕೆಯನ್ನೂ ಕೊಡಲಾಗುತ್ತದೆ. ಗಣರಾಜ್ಯೋತ್ಸವ ಹತ್ತಿರ ಬರುತ್ತಿದ್ದ ಹಾಗೇ ಹೊಸ ಬಣ್ಣ ಬಳಿದುಕೊಂಡು ಮಿರಮಿರ ಮಿಂಚುತ್ತಿರುವ ಟ್ಯಾಂಕುಗಳು, ತೋಪುಗಳನ್ನು ಕೆಂಪುಕೋಟೆಯ ಆವರಣಕ್ಕೆ ರವಾನಿಸುತ್ತಾರೆ ಮತ್ತು ರಾಜಪಥದಲ್ಲಿ ತಾಲೀಮು ಪ್ರಾರಂಭವಾಗುತ್ತದೆ. ಅಷ್ಟೊತ್ತಿಗಾಗಲೇ ದೆಹಲಿಯಲ್ಲಿ ಚಳಿ, ಮಂಜಿನ ವಾತಾವರಣ, ಅದರಲ್ಲೂ ಧೃತಿಗೆಡದೆ ಹುರುಪಿನಿಂದ ಕೆಲಸಗಳು ನಡೆಯುತ್ತಿರುತ್ತವೆ…ಈ ಜೋಷ್ ಒಂಥರಾ ಸಾಂಕ್ರಾಮಿಕ.. ಎಲ್ಲಾ ಕಡೆ ಹರಡಿ ಬಿಡುತ್ತದೆ.

ಈ ಸಲ 75 ವಿಮಾನಗಳು ಭಾಗವಹಿಸಲಿವೆ!

ಇನ್ನು ವಾಯುಸೇನೆಯ ತಯಾರಿಯ ಬಗ್ಗೆ ಹೇಳಬೇಕೆಂದರೆ, ದೆಹಲಿಯ ಸಮೀಪದ ಹಿಂ ವಿಮಾನಗಳು ಡನ್ ವಾಯುನೆಲೆಯಲ್ಲಿ ಇವರ ಸಿದ್ಧತೆಗಳು ನಡೆಯುತ್ತವೆ. ಈ ಸಲದ ಗಣತಂತ್ರದ ಪರೇಡಿನಲ್ಲಿ #ರಫೇಲ್_ ಯುದ್ಧ_ವಿಮಾನಗಳು ಭಾಗವಹಿಸುತ್ತಿರುವುದು ಪ್ರಮುಖ ಆಕರ್ಷಣೆ. ವಾಯುಸೇನೆಯ ಪ್ರಮುಖ ಚಟುವಟಿಕೆ ಗಣರಾಜ್ಯೋತ್ಸವದ ಅಂತಿಮ ಹಂತದಲ್ಲಿ ನಡೆಯುವ ವಾಯು ಪ್ರದರ್ಶನ. ದೆಹಲಿಯ ಏರ್ಪೋರ್ಟಿನಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಂದು ಏರೋಪ್ಲೇನು ಲ್ಯಾಂಡ್ ಆಗುತ್ತದೆ ಮತ್ತೊಂದು ಗಗನಕ್ಕೆ ಹಾರುತ್ತದೆ ಆದರೆ ವಾಯು ಪ್ರದರ್ಶನ ಸಮಯದಲ್ಲಿ ಮತ್ತು ರಿಹರ್ಸಲ್ ಸಮಯದಲ್ಲಿ ನಾಗರೀಕ ವಾಯು ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಜನವರಿ 18 ರಿಂದಲೇ ಈ ಪ್ರಕ್ರಿಯೆ ಪ್ರಾರಂಭವಾಗಿ 26ಕ್ಕೆ ಅಂತ್ಯಗೊಳ್ಳುತ್ತದೆ. ಎಲ್ಲಾ ದೇಶವಿದೇಶಗಳಲ್ಲಿ ಏರ್ ಲೈನುಗಳಿಗೆ ಈ ಮಾಹಿತಿಯನ್ನು ತಲುಪಿಸುವ ಜವಾಬ್ದಾರಿ ಭಾರತೀಯ ನಾಗರಿಕ ವಿಮಾನ ಸಂಸ್ಥೆಯದ್ದು. ರಾಜಪಥದ ಸಮೀಪದಲ್ಲಿ ಒಂದು ವಾಯು ಸಂಚಾರ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಇಲ್ಲಿಂದಲೇ ವಾಯು ಪ್ರದರ್ಶನದಲ್ಲಿ ಪಾಲುಗೊಳ್ಳುವ ವಿಮಾನಗಳನ್ನು ನಿಯಂತ್ರಣ ಮಾಡಲಾಗುತ್ತದೆ. ಭಾರತೀಯ ಸ್ವರ್ಣಿಮ್ ಮಹೋತ್ಸವವನ್ನು ಆಚರಿಸಲು ಈ ಸಲದ ವಾಯುು ಪ್ರದರ್ಶನದಲ್ಲಿ ಎಪ್ಪತೈದು ವಿಮಾನಗಳು ಭಾಗವಹಿಸಲಿವೆ. ಈ ವಿಮಾನಗಳು ವಾಯುಸೇನೆಯ ಹಲವಾರು ವಾಯುನೆಲೆಗಳಿಂದ ನಿರ್ಗಮಿಸುತ್ತವೆ. ಅತಿ ವೇಗದ ಸುಖೋಯ್ ವಿಮಾನಗಳು ಗ್ವಾಲಿಯರಿನಿಂದ ನಿರ್ಗಮಿಸಿದರೆ, ಅತಿ ದೊಡ್ಡ ಗ್ಲೋಬ್ ಮಾಸ್ಟರ್ ವಿಮಾನ ಚಂಡೀಗಢದಿಂದ ನಿರ್ಗಮಿಸುತ್ತದೆ. ಒಂದು ನಿಗದಿತ ಸ್ಥಳದಲ್ಲಿ ಇವುಗಳ ಮಿಲನವಾಗುತ್ತದೆ. ರಾಜಪಥದ ಆಕಾಶದಲ್ಲಿ ಮೊದಲು ಕಾಣಿಸಿಕೊಳ್ಳುವುದು ಬೃಹದಾಕಾರದ ಗ್ಲೋಬ್ ಮಾಸ್ಟರ್ ವಿಮಾನ ಮತ್ತು ಅದರ ಇಬ್ಬದಿಯ ರೆಕ್ಕೆಗಳಿಗೆ ಅಂಟಿಕೊಂಡು ಬಣ್ಣದ ಹೊಗೆ ಸುರಿಸುತ್ತಾ ಹಾರುವ ವಿಮಾನಗಳು ಸುಖೋಯ್-31ಯುದ್ಧವಿಮಾನ. ಈ ವಿಮಾನಗಳ ನಿಯಂತ್ರಣ ಬಹಳ ಕರಾರುವಾಕ್ಕಾಗಿ ನಡೆಯಬೇಕು. ಅತಿಯಾಗಿ ಮಂಜು ಕವಿದ ವಾತಾವರಣವಿದ್ದರೆ, ತುಂಬಾ ಪಕ್ಷಿಗಳು ರಾಜಪಥದ ಆಸುಪಾಸಿನಲ್ಲಿ ಕಾಣಿಸಿಕೊಂಡರೆ ಸುರಕ್ಷಣೆಯ ದೃಷ್ಟಿಯಿಂದ ಈ ವಾಯು ಪ್ರದರ್ಶನ ನಡೆಸಬೇಕೇ ಅಥವಾ ರದ್ದು ಮಾಡಬೇಕೇ ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಲು ಅನುಭವಿ ಪೈಲಟ್ ಒಬ್ಬರು ವಾಯು ನಿಯಂತ್ರಣ ಕೇಂದ್ರದಲ್ಲಿ ಉಪಸ್ಥಿತರಿರುತ್ತಾರೆ.

ಇಷ್ಟೆಲ್ಲಾ ಗಣರಾಜ್ಯೋತ್ಸವದ ಸಿದ್ಧತೆಯ ಬಗ್ಗೆ ಹೇಳಿದ ಮೇಲೆ… ಬನ್ನಿ ಈಗ ನಮ್ಮ ಭವ್ಯ ರಾಷ್ಟ್ರದ ಗಣರಾಜ್ಯೋತ್ಸವ ಹೇಗೆ ನಡೆಯುತ್ತದೆ ಎಂದು ನೋಡೋಣ…

ಫೋಟೋ ಕೃಪೆ : dailyschool

26 ಜನವರಿಯಂದು ಬೆಳಿಗ್ಗೆ ಪ್ರಧಾನಮಂತ್ರಿಯವರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ನಡೆಸುವ ಯೋಧ ನಮನ ಕಾರ್ಯಕ್ರಮದಿಂದ ಸಮಾರಂಭಕ್ಕೆ ಚಾಲನೆ ನೀಡುತ್ತಾರೆ. #ರಕ್ಷಣಾ_ಮಂತ್ರಿಗಳು ಮತ್ತು ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮುಖ್ಯಸ್ಥರು ಪ್ರಧಾನಮಂತ್ರಿಯವರನ್ನು ಆಹ್ವಾನಿಸುತ್ತಾರೆ. ದೇಶಕ್ಕಾಗಿ ಜೀವದಾನ ಮಾಡಿದ ಹುತಾತ್ಮರಿಗೆ ಗೌರವ ಸಲ್ಲಿಸಿ ಎರಡು ನಿಮಿಷಗಳ ಮೌನಾಚರಣೆಯ ಗೌರವವನ್ನು ಸಲ್ಲಿಸಲಾಗುತ್ತದೆ.

ಇದೇ ಸಮಯದಲ್ಲಿ ರಾಜಪಥದ ಇನ್ನೊಂದು ಕಡೆ ರಾಷ್ಟ್ರಪತಿ ಭವನದಲ್ಲಿ ಏನಾಗುತ್ತದೆ ಎಂದು ನೋಡೋಣ. ರಾಷ್ಟ್ರಪತಿಯವರ ಅಂಗರಕ್ಷಕ ದಳ ಸುಮಾರು 250 ವರ್ಷಗಳ ಇತಿಹಾಸವಿರುವ ಭಾರತೀಯ ಸೇನೆಯ ವರಿಷ್ಠ ಮತ್ತು ವಿಶೇಷ ಅಂಗ. ಸುಮಾರು 85 ಕುದುರೆಗಳು ಮತ್ತು 160 ಅಶ್ವಾರೂಢರನ್ನು ಹೊಂದಿರುವ ಈ ಅಂಗದ ಕೆಲವು ಆಯ್ದ ಸದಸ್ಯರು ರಾಷ್ಟ್ರಪತಿಯವರ ಆಗಮನಕ್ಕಾಗಿ ಮುಖ್ಯದ್ವಾರದ ಮುಂದೆ ನಿಂತಿರುತ್ತಾರೆ. ರಾಷ್ಟ್ರಪತಿಯವರು ಅಂದಿನ ವಿದೇಶದ ವಿಶೇಷ ಅತಿಥಿಯವರೊಂದಿಗೆ ರಾಷ್ಟ್ರಪತಿ ಭವನದಿಂದ ಹೊರಬಂದು ಅಂಗರಕ್ಷಕರ ಗೌರವವನ್ನು ಸ್ವೀಕರಿಸಿ ರಾಜಪಥದ ಕಡೆ ಹೊರಡಲು ಅನುವಾಗುತ್ತಾರೆ. ಅಷ್ಟೊತ್ತಿಗಾಗಲೇ ಪ್ರಧಾನಮಂತ್ರಿಯವರು ಇಂಡಿಯಾ ಗೇಟಿನಿಂದ ರಾಜಪಥಕ್ಕೆ ಬಂದು ತಲುಪಿರುತ್ತಾರೆ…ಈಗ ರಾಷ್ಟ್ರಪತಿಯವರ ಮತ್ತು ವಿಶೇಷ ಅತಿಥಿಯ ಆಗಮನದ ನಿರೀಕ್ಷೆ. ಬೆಳಿಗ್ಗೆ ಎಂಟು ಗಂಟೆಯಿಂದ ಆರಂಭವಾದ ಸಭಿಕರ, ಅತಿಥಿಗಳ, ಗಣ್ಯರ ಆಗಮನ ಇಷ್ಟೊತ್ತಿಗೆ ಪೂರ್ಣಗೊಂಡು ರಾಜಪಥದ ಉದ್ದಗಲಕ್ಕೂ ಉತ್ಸಾಹದ ವಾತಾವರಣ ತುಂಬಿ ತುಳುಕುತ್ತದೆ.

ಫೋಟೋ ಕೃಪೆ : times of india

ಸ್ವಾಗತಂ…ಸುಸ್ವಾಗತಂ…ಈ ಹಿನ್ನಲೆಯ ಹಾಡಿನೊಂದಿಗೆ ಪ್ರಧಾನಮಂತ್ರಿಯವರು ರಾಷ್ಟ್ರಪತಿಯವರ ಮತ್ತು ವಿಶೇಷ ಅತಿಥಿಗಳನ್ನು ಸ್ವಾಗತಿಸುತ್ತಾರೆ. ಅವರು ವೇದಿಕೆ ತಲುಪುತಿದ್ದಂತೆಯೇ #ಧ್ವಜಾರೋಹಣದ ಸಮಾರಂಭ ನೆರವೇರುತ್ತದೆ. ಜನಗಣಮನ…ರಾಷ್ಟ್ರಗೀತೆಯ ಹಿನ್ನಲೆಯಲ್ಲೇ 21 ಕುಶಾಲ ತೋಪಿನ ಗೌರವವನ್ನೂ ಸಲ್ಲಿಸಲಾಗುತ್ತದೆ. ಅದೇ ಸಮಯಕ್ಕೆ ನಾಲ್ಕು ಹೆಲಿಕಾಪ್ಟರುಗಳು ಕೆಳಮಟ್ಟದಲ್ಲಿ ಹಾರುತ್ತಾ ತ್ರಿವರ್ಣಧ್ವಜ ಮತ್ತು ಸೇನೆಯ ಮೂರೂ ಅಂಗಗಳ ಧ್ವಜವನ್ನು ಹಾರಿಸಿಕೊಂಡು ವೇದಿಕೆಯ ಮುಂದೆ ಹಾಯ್ದು ಹೋಗುತ್ತವೆ. ಈಗ ಅಧಿಕೃತವಾಗಿ ಪರೇಡಿನ ಪ್ರಾರಂಭವಾಗುತ್ತದೆ.

ಈ ಪರೇಡಿನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಇದು ಒಂದು ಆಜೀವಪರ್ಯಂತ ಮರೆಯಲಾಗದ ಅನುಭವ. ಹಲವಾರು ತಿಂಗಳುಗಳ ನಿರಂತರ ಪರಿಶ್ರಮ ಇಂದು ಪ್ರದರ್ಶನದಲ್ಲಿ ಪರ್ಯಾಯಗೊಳ್ಳುತ್ತದೆ. ಅಲ್ಲಿ ನೆರದವರೆಲ್ಲರಲ್ಲೂ ಸಹಾ ನಮ್ಮ ದೇಶದ ಸಾಹಸಿಗಳ ಬಗ್ಗೆ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ, ಹೆಮ್ಮೆ ಉಕ್ಕಿ ಹರಿಯುವುದು ಸಹಜ. ವೇದಿಕೆಯ ಮುಂದೆ ಪರೇಡ್ ಕಮಾಂಡರ್ ಹಾಯ್ದು ಹೋದ ಹಿಂದೆಯೇ ಬರುತ್ತಾರೆ ಪರಮ ವೀರ ಚಕ್ರ ವಿಜೇತರು..ಹಾಗು ಇತರೆ ವೀರಚಕ್ರಧಾರಿಗಳು. ಹಿನ್ನಲೆಯಲ್ಲಿ ಅವರ ಸಾಹಸಗಳ ವರ್ಣನೆ ಕೇಳುತ್ತಲೇ ಸಭಿಕರ ಚಪ್ಪಾಳೆ ಮುಗಿಲು ಮುಟ್ಟುತ್ತದೆ.

ಇನ್ನು ಸೈನ್ಯದ ಶಕ್ತಿ ಪ್ರದರ್ಶನದ ಸಮಯ. ಇನ್ನು ಮೇಲೆ ಭೂಸೈನ್ಯದ, ವಾಯುಸೇನೆಯ, ನೌಕಾದಳದ ಪಥಚಲನೆಯ ದಳಗಳು ಒಂದರ ಹಿಂದೆ ಒಂದು…ಒಂದಕ್ಕಿಂತಲೂ ಮತ್ತೊಂದು ಉತ್ತಮ ಎನಿಸುವಂತಹ ಶಿಸ್ತಿನ ಮೆರವಣಿಗೆ. ಒಟ್ಟು ಹನ್ನೆರಡು ಸೇನೆಯ ತುಕಡಿಗಳ ನಂತರ ಬರುತ್ತವೆ NCC, NSS ಶಾಲಾಮಕ್ಕಳ ವಾದ್ಯವೃಂದ…ಸಾಹಸೀ ಮಕ್ಕಳ ಆನೆಯ ಮೇಲೆ ಮೆರವಣಿಗೆ…ಹೀಗೆ ನಿರಂತರ ಅನುಭೂತಿ.

ಈ ಬಾರಿ ಆಯ್ಕೆಯಾಗಿರುವ 22 ಸ್ತಿರಚಿತ್ರಗಳು ಪ್ರದರ್ಶನಕ್ಕೆ ಬರಲಿವೆ. ಇವುಗಳಲ್ಲಿ ಕರ್ನಾಟಕವೂ ಸೇರಿದಂತೆ 15 ರಾಜ್ಯಗಳ ಮತ್ತಿತರೆ ಸರಕಾರಿ ವಿಭಾಗಗಳ ಸ್ತಿರಚಿತ್ರಗಳು ಪ್ರದರ್ಶನಕ್ಕೆ ಬರಲಿವೆ.
ಈ ವರ್ಷದ ಕರ್ನಾಟಕದ ಸ್ತಬ್ಧಚಿತ್ರ “ ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು “ ಎನ್ನುವ ಸಂದೇಶವನ್ನು ಪ್ರತಿಪಾದಿಸುವ ಮಾದರಿ. ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಈ ಸಮಾರೋಹಕ್ಕೆ ಕರ್ನಾಟಕದ ಕೊಡುಗೆ ಏನೆಂದರೆ ಇಲ್ಲಿನ ಧ್ವಜಾರೋಹಣದಲ್ಲಿ ಹಾರಿಸುವ ಮತ್ತು ಗಾಳಿಯಲ್ಲಿ ಹೆಮ್ಮೆಯಿಂದ ಹಾರಾಡುವ ರಾಷ್ಟ್ರೀಯ ಧ್ವಜ ನಮ್ಮ ರಾಜ್ಯದ ಧಾರವಾಡ ಜಿಲ್ಲೆಯ ಬೆಣಗೇರಿ ಗ್ರಾಮದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಯುಕ್ತ ಸಂಘದವರಿಂದ ತಯಾರಿಸಿ ದೆಹಲಿಗೆ ಕಳುಹಿಸಲಾಗುತ್ತದೆ. ಇದು ಇಡೀ ಕರ್ನಾಟಕಕ್ಕೇ ಹೆಮ್ಮೆಯ ವಿಷಯವಲ್ಲವೇ!
ಇರಲಿ…



ಈಗ ಪರೇಡಿಗೆ ಮರುಳೋಣ ಸ್ತಬ್ಧ ಚಿತ್ರಗಳ ಪ್ರದರ್ಶನದ ನಂತರ ಪ್ರಾದೇಶಿಕ ಸಾಂಸ್ಕೃತಿಕ ತಂಡಗಳ ಆಗಮನ, ವರ್ಣಮಯ ನೃತ್ಯದ, ಗಾಯನದ ಕಣ್ಮನಗಳನ್ನು ತಣಿಸುವ ದೃಶ್ಯಗಳು. ಸುಮಾರು ಎರಡು ಗಂಟೆಗಳ ವಿವಿಧ ದೃಶ್ಯಗಳ ವೀಕ್ಷಣೆಯ ನಂತರ ಈಗೊಂದಿಷ್ಟು ಉತ್ತೇಜಕ ಕಾರ್ಯಕ್ರಮಗಳ ನಿರೀಕ್ಷೆ, ಅದನ್ನು ಪೂರೈಸಲು ಬರುತ್ತಾರೆ ಸೇನೆಯ ಮೈನವಿರೇಳಿಸುವ ಮೋಟರ್ ಸೈಕಲ್ ಸವಾರರು. ಉಸಿರುಗಟ್ಟಿ ನೋಡುತ್ತಿರುತ್ತಾರೆ ನೆರೆದವರೆಲ್ಲರು..ಎಲ್ಲಿ ಆಯತಪ್ಪಿ ಬಿದ್ದುಬಿಡುತ್ತಾರೆನೋ ಎನ್ನುವ ಹೆದರಿಕೆ…ಎವೆ ಇಕ್ಕಿದರೆ ಎಲ್ಲಿ ಏನಾದರೂ ಮಿಸ್ ಆಗಿಬಿಡುತ್ತೇನೋ ಎನ್ನುವ ರೋಮಾಂಚನ..ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡುತ್ತಿರುತ್ತಾರೆ. ಈ ವರ್ಷದ ವಿಶೇಷತೆ ಏನೆಂದರೆ ITBPನ ಮಹಿಳಾ ಪೋಲಿಸರ 145 ಸದಸ್ಯರ ತಂಡ ಈ ಮೋಟಾರ್ ಬೈಕುಗಳ ಸಾಹಸಕ್ಕೆ ಎಂಟ್ರೀ ಕೊಡುತ್ತಿದ್ದಾರೆ. ಇಲ್ಲೀವರೆಗೂ BSF ಮತ್ತು ಸೈನ್ಯದ ಮೋಟರ್ ಸೈಕಲ್ ತಂಡಕ್ಕೆ ಈಗ ವನಿತೆಯರು..ನಾವೂ ಏನೂ ಕಡಿಮೆ ಇಲ್ಲಾ.. ಎನ್ನುತ್ತಿರುವಂತಿದೆ.

ಒಂದು ಗರ್ಜನೆ ಮುಗಿಯುತ್ತಿದ್ದಂತೆಯೇ ಇನ್ನೊಂದು ಮಹಾಘರ್ಜನೆಯ ಪ್ರಾರಂಭ… ಈಗ ಎಲ್ಲರ ಚಿತ್ತ ಆಕಾಶದತ್ತ..ವಾಯುಸೇನೆಯ ಬಲಪ್ರದರ್ಶನದ ಸಮಯ. ಬೃಹದಾಕಾರದ ವಿಮಾನಗಳು ಒಂದಕ್ಕೊಂದು ಅಂಟಿಕೊಂಡಿರುವಂತೆ ಗೋಚರಿಸುತ್ತವೆ. ಹಿಂದೆಯೇ ಬಾಣದ ಆಕಾರದಲ್ಲಿ ಶರವೇಗದಲ್ಲಿ ಘರ್ಜಿಸಿ ಕ್ಷಣಾರ್ಧದಲ್ಲಿ ಮರೆಯಾಗುವ ಯುದ್ಧ ವಿಮಾನಗಳು. ಇನ್ನೊಂದು ರೌಂಡ್ ಮರಳಿ ಬರಬಾರದೇ ಎನ್ನಿಸುತ್ತದೆ. ಆಗ್ರಾ, ಚಂಡೀಗಢ, ಗ್ವಾಲಿಯರ್ ಮತ್ತು ಹಿಂಡನ್ ವಾಯುನೆಲೆಗಳಿಂದ ಬಂದ ಈ ವಿಮಾನಗಳಿಗೆ ರಾಜಪಥದ ಮೇಲೆ ಹಾರಾಡುವ ಅವಕಾಶ ಸಿಗುವುದು ಮಾತ್ರ ಕೆಲವು ಸೆಕೆಂಡುಗಳಷ್ಟು ಮಾತ್ರ. ಅಂತಿಮವಾಗಿ ಒಂದು ವಿಮಾನ ಆಕಾಶವನ್ನು ಭೇಧಿಸಿಕೊಂಡು ಮರೆಯಾಗುವುದನ್ನು ನೋಡುತ್ತಾ…ಓಹ್ ಮುಗಿದೇಹೋಯಿತೇ ಎಂದು ಕೊಳ್ಳುತ್ತಾ.. ನೋಯುತ್ತಿರುವ ಕತ್ತುಗಳನ್ನು ಒತ್ತಿಕೊಳ್ಳುತ್ತಾ, ಇದೆನೆಲ್ಲಾ ನೋಡಲು ಮತ್ತೊಂದು ವರ್ಷ ಕಾಯಬೇಕೇ ಎಂದುಕೊಳ್ಳುತ್ತಾ ಅತಿಥಿಗಳು, ಸಭಿಕರು ನಿರ್ಗಮಿಸಲು ಪ್ರಾರಂಭಿಸುತ್ತಾರೆ. ತಮ್ಮತಮ್ಮ ಮನೆಗಳ ಟಿವಿಯ ಮುಂದೆ ಕುಳಿತಿದ್ದ ಲಕ್ಷಾಂತರ ಭಾರತೀಯರಿಗೂ ಹಾಗೇ ಅನ್ನಿಸುತ್ತಿರಬಹುದು..ಆದರೆ ಪ್ರತ್ಯಕ್ಷವಾಗಿ ರಾಜಧಾನಿಯಲ್ಲಿ ನಡೆಯುವುದನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು ಈ ಜನವರಿ ಹಬ್ಬವನ್ನು.

ಇಂತಹ ಅದ್ಭುತವಾದ ಕಾರ್ಯಕ್ರಮ ಬರೀ ಮನೊರಂಜನೆಯ ದೃಷ್ಟಿಯಿಂದ ನೋಡದೆ ನಮ್ಮ ದೇಶದ ವೈವಿಧ್ಯಮಯ ಕಲೆಗಳ, ಸಾಂಸ್ಕೃತಿಕ ವಾತಾವರಣದ , ಅನೇಕತೆಯಲ್ಲೂ ಏಕತೆಯ, ನಮ್ಮ ಸಾಹಸೀ ಸೈನಿಕರ, ದೇಶರಕ್ಷಣೆ ಮಾಡುತ್ತಾ ಜೀವ ಬಲಿದಾನ ಮಾಡಿದವರ ತ್ಯಾಗಕ್ಕೆ ಕೃತಾರ್ಥಭಾವದಿಂದ ನಮಿಸಿ, ಇಂತಹ ದೇಶದಲ್ಲಿರುವ ನಾವೇ ಪುಣ್ಯವಂತರು ಎನ್ನುವ ಧನ್ಯತಾ ಭಾವನೆಯನ್ನು ಬೆಳಸಿಕೊಂಡು… ನಮ್ಮ ಕೈಲಾದಷ್ಟು ಸಮಾಜಕ್ಕೆ, ದೇಶಕ್ಕೆ ಒಳಿತು ಮಾಡುವ ಸಂಕಲ್ಪವನ್ನು ಧೃಡಪಡಿಸಿಕೊಳ್ಳುವ ಅವಕಾಶವೆಂದು ಭಾವಿಸಿದರೆ ಒಳಿತಲ್ಲವೇ?


  • ವಿಂಗ್ ಕಮಾಂಡರ್ ಸುದರ್ಶನ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW