ಗುಂಡ್ಲವದ್ದಿಗೇರಿ ಎನ್ನುವ ಪುಟ್ಟ ಗ್ರಾಮವಿದೆ, ಅಲ್ಲಿ ಪ್ರತಿವರ್ಷ ರಾಮನವಮಿ ಹಬ್ಬವನ್ನು ಅಲ್ಲಿಯ ಸ್ಥಳೀಯರು ಅದ್ದೂರಿಯಿಂದ ಆಚರಿಸುತ್ತಾರೆ. ಆ ದೇವಸ್ಥಾನದ ವಿಶೇಷತೆ, ಹಬ್ಬದ ಕುರಿತು ಸ್ಥಳೀಯರಲ್ಲಿ ಒಬ್ಬರಾದ ಪಾಂಡುರಂಗ ಕೆ ಎಸ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ….
ವಿಜಯನಗರ ಜಿಲ್ಲೆಯ ಹತ್ತಿರದಲ್ಲಿರುವ ಇರುವ ಪುಟ್ಟ ಗ್ರಾಮ ಗುಂಡ್ಲವದ್ದಿಗೇರಿ. ಸುತ್ತಮುತ್ತ ಹತ್ತೂರಿಗೆ ಆಧ್ಯಾತ್ಮಿಕ ಕೇಂದ್ರಬಿಂದುವೆಂದು ಹೆಸರುವಾಸಿಯಾಗಿದೆ. ಒಂದಷ್ಟು ರೋಚಕ ಇತಿಹಾಸವನ್ನು ತನ್ನೊಡಲಿನಲ್ಲಿರಿಸಿಕೊಂಡಿದೆ. ೧೯೭೫ ರಿಂದ ಪ್ರಾರಂಭಿಸಿ ಸತತವಾಗಿ ನಡೆಸಿಕೊಂಡು ಬಂದಿರುವ ಶ್ರೀ ರಾಮ… ಜಯ ರಾಮ… ಜಯ ಜಯ ರಾಮ… ತಾರಕ ಮಹಾಮಂತ್ರ ಸಪ್ತಾಹ ಭಜನೆಯ ಕಾರ್ಯಕ್ರಮವು ೪೮ ನೇಯ ವರ್ಷಕ್ಕೆ ಕಾಲಿಟ್ಟಿದೆ.
ಆಧ್ಯಾತ್ಮಿಕದಲ್ಲಿ ಆಳವಾದ ನಂಬಿಕೆ ಇದ್ದ ದಾಸಣ್ಣನವರ ಮನೆತನದಿಂದ ಮೊಟ್ಟಮೊದಲು ಈ ಕಾರ್ಯಕ್ರಮ ಪ್ರಾರಂಭಗೊಂಡು ಮುಂದಿನ ದಿನಗಳಲ್ಲಿ ಊರಿನ ಉದ್ದಗಲಕ್ಕೂ ಹಬ್ಬಿತು ಜೊತೆಗೆ ಅನೇಕರು ಕೈಜೋಡಿಸಿ ಉದಾತ್ತ ಮನೋಭಾವದಿಂದ ಆ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು ಅಷ್ಟಾದರೂ ಊರಿನಲ್ಲಿ ಸೀತಾರಾಮನ ದೇವಸ್ಥಾನ ಇದ್ದಿಲ್ಲ ಊರಿನ ಸಕಲ ಸಧ್ಬಕ್ತರು ಕೂಡಿ ತಮ್ಮ ತನುಮನ ಧನವನರ್ಪಿಸಿ ಊರಿನಲ್ಲಿ ಸೀತಾರಾಮನ ದೇವಸ್ಥಾನದ ಜೊತೆಗೆ ರುಕ್ಮಿಣಿಪಾಂಡುರಂಗನ, ದೇವಸ್ಥಾನವನ್ನು ಕಟ್ಟಿಸಿ ಈ ಕಾರ್ಯಕ್ರಮವನ್ನು ಇನ್ನೂ ವಿಜೃಂಭಣೆಯಿಂದ ಮುಂದುವರೆಸಿಕೊಂಡು ಬಂದರು. ಆ ಒಂದು ಸತತ ಪ್ರಯತ್ನಕ್ಕೆ ಮುಂದೆ ಶ್ರೀ ಕೃಷ್ಣನ ಮತ್ತು ಶಿವನ ದೇವಸ್ಥಾನವು ಕಟ್ಟಲಾಯಿತು ಬಹುಶಃ ನಮ್ಮೂರಿನಲ್ಲೆ ಒಂದೆ ಆಲಯದೊಳು ಒಂದೆ ಸಾಲಿನಲ್ಲಿ ಶಿವ,ರಾಮ,ಕೃಷ್ಣ,ಪಾಂಡುರಂಗರ ಮೂರ್ತಿಗಳ ಕಾಣಬಹುದು….
ಇನ್ನೂ ದಾಸೋಹದ ವಿಚಾರಕ್ಕೆ ಬಂದರೆ ಕಾರ್ಯಕ್ರಮ ಪ್ರಾರಂಭವಾದ ದಿನದಿಂದ ಕೊನೆಯಾಗುವ ದಿನದವರೆಗೂ ನಿರಂತರವಾಗಿ ದಾಸೋಹ ಇರುತ್ತದೆ. ಇಂದಿಗೂ ಈ ದಾಸೋಹ ಸಿದ್ದ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯಾರೊಬ್ಬರೂ ಹಣ ಪಡೆಯುವುದಿಲ್ಲ. ದಾಸೋಹಕ್ಕೆ ಇಂದಿಗೂ ಅಕ್ಕ ಪಕ್ಕದ ಊರುಗಳಿಂದಲೇ ದವಸ ಧಾನ್ಯಗಳನ್ನು ಕಾಣಿಕೆಯಾಗಿ ಕೊಡುತ್ತಾರೆ,
ಈ ಕಾಲಘಟ್ಟಕ್ಕೆ ಹೋಲಿಸಿ ನೋಡಿದರೆ ತೀರಾ ಕಡಿಮೆ ಖರ್ಚಿನಲ್ಲಿ ವಿಜೃಂಭಣೆಯಿಂದ ನಡೆಯುವ ಹಬ್ಬವಾಗಿದೆ.
ಈ ದೇವಸ್ಥಾನದ ಒಡನಾಟ ನಮಗೆ ಚಿಕ್ಕಂದಿನಿಂದಲೂ ಇದ್ದು ಆಧ್ಯಾತ್ಮಿಕದ ಕಡೆಗೆ ನಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಿದೆ. ದೇವಸ್ಥಾನದಲ್ಲಿ ಸಂಗೀತಾಭ್ಯಾಸ ಮಾಡುವ ಅವಕಾಶವಿದ್ದು ಎಲ್ಲರು ಸದುಪಯೋಗ ಪಡೆದುಕೊಳ್ಳಬಹುದು
ನನಗೂ ಒಂದೆರಡು ಬಾರಿ ಈ ದೇವಸ್ಥಾನ ಕಟ್ಟುವ ಬದಲು ಶಾಲೆ ಆಸ್ಪತ್ರೆ ಕಟ್ಟಿಸಿದ್ದರೆ ಅದೆಷ್ಟೊ ಜೀವ ಜೀವನಗಳು ಉಳಿದು ಬೆಳೆದು ಬಾಳುತ್ತಿದ್ದವು ಎಂದೆನಿಸಿದರೂ ಸಂಸ್ಕಾರಕ್ಕಿಂತ ಹಿರಿದಾದ್ದಿಲ್ಲ ಎಂಬ ಮನದಟ್ಟಾಗಲು ಈ ದೇವಸ್ಥಾನವೆ ಸಾಕ್ಷಿ, ಸಂಸ್ಕಾರವನ್ನು ಕಲಿತರೆ ವಿದ್ಯೆ, ವಿನಯ, ಗೌರವ, ಆರೋಗ್ಯ ಎಲ್ಲವನ್ನೂ ಪಡೆದುಕೊಳ್ಳಬಹುದೆಂದು ಪ್ರತಿಪಾದಿಸುವಷ್ಟು ಆಧ್ಯಾತ್ಮಿಕತೆ ಸೆಳೆದುಕೊಂಡಿದೆ….
(೪೮ನೇ ವರ್ಷದ ಈ ತಿಂಗಳ ದಿನಾಂಕ ೨೩-೦೩-೨೦೨೩ ರಿಂದ ೩೦-೦೩-೨೦೨೩ ರ ವರೆಗೆ ನಡೆಯುತ್ತಿರುವ ಶ್ರೀ ರಾಮನವಮಿಯ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ತುಂಬು ಹೃದಯದ ಸ್ವಾಗತ ಸುಸ್ವಾಗತ)…
- ಪಾಂಡುರಂಗ ಕೆ ಎಸ್ – ಸಮಾಜಸೇವಾ ಕಾರ್ಯಕರ್ತರು, ಗುಂಡ್ಲವದ್ದಿಗೇರಿ