ಹೋಳಿಹಬ್ಬಕ್ಕೆಂದೇ ವಿಶೇಷ ಈ ಬೇಡರ ವೇಷ

ಹೋಳಿ ಹಬ್ಬಕ್ಕೆ ನಾಲ್ಕು ದಿನ ಮೊದಲೇ ಪ್ರಾರಂಭವಾಗಿ ಹಬ್ಬದ ದಿನದಂದು ಮುಕ್ತಾಯಗೊಳ್ಳುವ ‘ಬೇಡರ ವೇಷ’ ಜಾನಪದ ನೃತ್ಯ ಹೋಳಿ ಹಬ್ಬಕ್ಕೆ ವಿಶೇಷ ಮೆರಗನ್ನು ನೀಡುತ್ತದೆ.ಇದರ ಕುರಿತು ಲೇಖಕ ಟಿ.ಶಿವಕುಮಾರ್ ಅವರು ಬರೆದಿರುವ ವಿಶೇಷ ಲೇಖನ ತಪ್ಪದೆ ಓದಿ….

ಹೋಳಿ ಹಬ್ಬ ಎಂದರೆ. ರತಿ-ಮನ್ಮಥರ ವಿಗ್ರಹ ಸ್ಥಾಪನೆ, ಹುಲಿವೇಷ, ಕಾಮದಹನ, ಹೀಗೆ ಇತ್ಯಾದಿ ಆಚರಣೆಗಳು ಇವೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳೊಂದಿಗೆ ಹೋಳಿ ಹಬ್ಬವನ್ನು ಇನ್ನು ವಿಶೇಷವಾಗಿ ಆಚರಿಸುತ್ತಾರೆ. ಹೋಳಿ ಹಬ್ಬಕ್ಕೆ ನಾಲ್ಕು ದಿನ ಮೊದಲೇ ಪ್ರಾರಂಭವಾಗಿ ಹಬ್ಬದ ದಿನದಂದು ಮುಕ್ತಾಯಗೊಳ್ಳುವ ‘ಬೇಡರ ವೇಷ’ ಜಾನಪದ ನೃತ್ಯ ಹೋಳಿ ಹಬ್ಬಕ್ಕೆ ವಿಶೇಷ ಮೆರಗನ್ನು ನೀಡುತ್ತದೆ.

ಬೇರೆ ಯಾವ ಪ್ರದೇಶದಲ್ಲೂ ಕಾಣದ ಹಾಗೂ ಶಿರಸಿ ಪಟ್ಟಣಕ್ಕೆ ಮಾತ್ರ ಸೀಮಿತವಾದ ವಿಶಿಷ್ಟ ಜಾನಪದ ನೃತ್ಯ. ಬೇಡರ ವೇಷಧಾರಿ ಕೆಂಪು ಬಣ್ಣದ ಉದ್ದ ತೋಳಿನ ಅಂಗಿ, ಮೊಳಕಾಲು ಮುಚ್ಚುವಷ್ಟು ಅದೇ ಬಣ್ಣದ ಚಡ್ಡಿ ಧರಿಸುತ್ತಾರೆ. ಕೆಂಪು, ಹಳದಿ, ಕಪ್ಪು ಬಣ್ಣಗಳಿಂದ ಮುಖವನ್ನು ಅಲಂಕರಿಸಲಾಗುತ್ತದೆ. ತಲೆಗೆ ಕೋಳಿ ಪುಕ್ಕದ ಅಲಂಕಾರ ಅಥವಾ ಬಿಳಿ ಕೋಡು, ಹಿಂಬದಿ ನವಿಲುಗರಿಯ ತಟ್ಟೆ, ಸೊಂಟಕ್ಕೆ ಮಾವಿನ ಎಲೆಯ ಮಾಲೆ, ಕೈಯಲ್ಲಿ ಲೋಹದ ಖಡ್ಗ, ಅದರ ತುದಿಗೆ ನಿಂಬೆಹಣ್ಣು, ಇನ್ನೊಂದು ಕೈಯಲ್ಲಿ ಢಾಲು ಇರುತ್ತದೆ. ದನದ ಅಥವಾ ಎಮ್ಮೆಯ ಚರ್ಮದಿಂದ ತಯಾರಿಸಿದ ‘ಹಲಗೆ’ ಯ ಲಯಬದ್ಧವಾದ ‘ದಡಕನಕನ್ ದಡಕನಕನ್ ದಡಕನ್ನ ದಡ್ ದಡಕನಕನ್’ ಬಡಿತಕ್ಕೆ ವಿಶಿಷ್ಟವಾದ ಹೆಜ್ಜೆ ಇಟ್ಟು ಗತ್ತಿನಿಂದ ಕುಣಿಯುತ್ತಾನೆ.’ಹೂಂ’ ಕರಿಸುತ್ತಾ ಅತಿ ಮುನ್ನುಗ್ಗುತ್ತಾನೆ. ಇಬ್ಬರು ಅಥವಾ ನಾಲ್ವರು ಆತನ ತೋಳಿಗೆ ಹಗ್ಗ ಹಾಕಿ ಹಿಡಿದಿರುತ್ತಾರೆ. ಬೇಡರ ವೇಷಧಾರಿಯ ಅಬ್ಬರ, ಆವೇಶ ಹೆಚ್ಚಾಗುತ್ತಾ ಹೆಜ್ಜೆಗತ್ತುಗಳಿಗೆ ರೋಮಾಂಚನಗೊಳ್ಳದಿರುವವರು ಯಾರೂ ಸಿಗಲಿಕ್ಕಿಲ್ಲ. ಹೋಳಿ ಹಬ್ಬದ ನಾಲ್ಕೂ ದಿನವೂ ಶಿರಸಿ ಜನ ಸಂಭ್ರಮೋಲ್ಲಾಸಗಳಿಂದ ಈ ನೃತ್ಯವನ್ನು ವೀಕ್ಷಿಸುತ್ತಾರೆ. ‘ಬೇಡರವೇಷ’ ದ ಇನೊಂದು ವಿಶೇಷ ‘ಬಂಡಿವೇಷ’ ಪೌರಾಣಿಕ ಹಾಗೂ ಚಾರಿತ್ರಿಕ ವ್ಯಕ್ತಿಗಳ ಅಥವಾ ಸನ್ನಿವೇಶ ವೇಷವನ್ನು ಟ್ರಕ್ ಅಥವಾ ಟ್ರ್ಯಾಕ್ಟರ್ ಗಳಲ್ಲಿ ಹೊರಡಿಸುವುದು. ಹಿಂದೆ ಚಕ್ಕಡಿ ಬಂಡಿಯಲ್ಲಿ ಈ ವೇಷ ಹೊರಡುತ್ತಿತ್ತು ಅದಕ್ಕೇ ಅದನ್ನು ಬಂಡಿವೇಷವೆಂದು ಕರೆದಿದು.್ದ ಇಂದಿಗೂ ಅದೇ ಹೆಸರೇ ಉಳಿದಿದೆ. ಬೇಡರ ವೇಷ ಮತ್ತು ಬಂಡಿವೇಷ ಒಂದೇ ವೇಳೆಗೆ ಹೊರಡುತ್ತವೆ.

ಈ ವೇಷಕ್ಕೆ ಒಂದು ಇತಿಹಾಸವಿದೆ. ಕ್ರಿ.ಶ.1569 ರಲ್ಲಿ ನಡೆದ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿತು. ವಿಜಯನಗರ ಸೈನ್ಯದಲ್ಲಿದ್ದ ಹಾವೇರಿಯ ಮಲ್ಲೇಶಿ ಎಂಬ ಬೇಡರ ಯುವಕ ಊರಿಗೆ ಮರಳಿದ. ವಿಜಯನಗರ ಪತನದಿಂದ ಉಂಟಾದ ಅರಾಜಕತೆಯಿಂದಾಗಿ ಶಿರಸಿಯ ಸುತ್ತ ದರೋಡೆಕೋರರ ಹಾವಳಿ ಹೆಚ್ಚಾದುದರಿಂದ ಅವರ ನಿಯಂತ್ರಣಕ್ಕಾಗಿ ಶಿರಸಿಯ ವರ್ತಕರು ಮಲ್ಲೇಶಿಯನ್ನು ನೇಮಿಸಿದರು. ತನ್ನೊಂದಿಗೆ ಬಂದ ಇತರ ಯೋಧರೊಂದಿಗೆ ಆ ಕೆಲಸವನ್ನು ನಿರ್ವಹಿಸುತ್ತಿದ್ದ ಮಲ್ಲೇಶಿಗೆ ಒಂದು ದೌರ್ಬಲ್ಯವಿತ್ತು. ಆತ ಸ್ತ್ರೀಲಂಪಟನಾಗಿದ್ದ. ಅಂದಿನ ಕಲ್ಯಾಣಪಟ್ಟಣ(ಶಿರಸಿ) ದಲ್ಲಿ ಮಲ್ಲಶೆಟ್ಟಿ ಎಂಬ ಗಣ್ಯವ್ಯಕ್ತಿಯಿದ್ದ. ಆತನ ಮಗಳು ಗಿರಿಜವ್ವ ಸುಂದರಿ. ಆಕೆಯ ಲಗ್ನ ನಿಶ್ಚಯವಾಗುವುದರಲ್ಲಿದ್ದಾಗ ಮಲ್ಲೇಶಿ ಆಕೆಯನ್ನು ತನ್ನ ಬಳಿ ಕಳಿಸಿಕೊಡಲು ಸುದ್ದಿ ಕಳುಹಿಸಿದ. ಸುದ್ದಿ ತಿಳಿದ ಮಲ್ಲಶೆಟ್ಟಿ ಕಂಗಾಲಾದ.

ವರ್ತಕರೆಲ್ಲಾ ಸೇರಿ ಪರಿಸ್ಥಿತಿಯ ಬಗ್ಗೆ ಚಿಂತಿಸಿದರು. ಊರ ರಕ್ಷಣೆಯ ಬಗ್ಗೆ ಬಂದ ವ್ಯಕ್ತಿಯೇ ಈಗ ತಲೆನೋವಾಗಿ ಪರಿಣಮಿಸಿದ್ದ. ಏನು ಮಾಡಬೇಕೆಂದು ತಿಳಿಯದೇ ಕಂಗಾಲಾಗಿದ್ದಾಗ ಗಿರಿಜವ್ವಳೇ ಪರಿಸ್ಥಿತಿಯನ್ನು ಅರಿತು ತಾನಾಗಿಯೇ ಆತನ ಬಳಿ ಹೋಗುವುದಾಗಿಯೂ ಹಾಗೂ ಆ ಮೂಲಕ ಊರನ್ನು ಆ ಫಟಿಂಗನಿಂದ ಉಳಿಸಲು ನಿರ್ಧರಿಸಿರುವುದಾಗಿಯೂ ತಿಳಿಸಿದಳು. ತನ್ನ ಪಾಲಕರನ್ನು ಒಪ್ಪಿಸಿ ಆಕೆ ಆತನನ್ನು ಲಗ್ನವಾದಳು. ಲಗ್ನವಾದರು ಆತನ ಲಂಪಟತನ ಮುಂದುವರಿಯಲು ಗಿರಿಜವ್ವ ವ್ಯಥೆಪಟ್ಟಳು. ಆತನ ಕೌರ್ಯ ಆತನ ಕಣ್ಣಲ್ಲಿರುವುದನ್ನು ಕಂಡಳು. ಊರಿನ ಹೆಣ್ಣುಮಕ್ಕಳಿಗೆ ಅಪಾಯಕಾರಿಯಾಗುತ್ತಿದ್ದ ಮಲ್ಲೇಶಿಯನ್ನು ಮುಗಿಸಲು ನಿರ್ಧರಿಸಿದಳು. ಒಂದು ದಿನ ಸಮಯ ಸಾಧಿಸಿ ಆತನ ಕಣ್ಣುಗಳನ್ನು ಇರಿದಳು. ಅಲ್ಲದೇ ಹೋಳಿ ಹುಣ್ಣಿಮೆಯ ದಿನ ಜನರು ಆತನನ್ನು ಮೆರವಣಿಗೆಯಲ್ಲಿ ಒಯ್ದು ಸಜೀವ ದಹನ ಮಾಡಿದರು ಎಂದು ಚರಿತ್ರೆಯಲ್ಲಿ ಹೇಳಲಾಗಿದೆ.ಊರಿನ ಒಳಿತಿಗಾಗಿ ಗಿರಿಜವ್ವಳ ತ್ಯಾಗ, ದುರಂತ ಅಂತ್ಯವನ್ನು ಕಂಡ ಮಲ್ಲೇಶಿಯ ದುಷ್ಟತನಗಳು ಬೇಡರ ವೇಷದ ಹಿನ್ನೆಲೆಯಾಗಿವೆ. ಇತ್ತೀಚಿನ ಕೆಲವು ವರ್ಷಗಳವರೆಗೂ ಬೇಡರ ವೇಷದ ಮುಂದೆ ಒಂದು ವಿಧವೆಯ ವೇಷಧಾರಿ ಬಾಯಿ ಬಡಿದುಕೊಳ್ಳುತ್ತ ಹೋಗುವ ಹಾಗೂ ಬೇಡರ ವೇಷ ಆಕೆಯ ಕಡೆ ನುಗ್ಗುವ ಹಾಗೂ ಬೇಡರ ವೇಷವನ್ನು ನಿಯಂತ್ರಿಸಲು ನಾಲ್ಕಾರು ಮಂದಿ ಜಗ್ಗುವುದು ರೂಢಿಯಲ್ಲಿತ್ತು.

ಹೋಳಿ ಹಬ್ಬಕ್ಕೆ ಒಂದು ತಿಂಗಳಿನಿಂದ ಬೇಡರ ಕುಣಿತ ‘ಹಲಗೆ’ ಬಡಿತದ ತಾಲೀಮು ದಿನಾ ರಾತ್ರಿ ನಡೆಯುತ್ತದೆ. ಶಿರಸಿಯ ಗಲ್ಲಿ ಗಲ್ಲಿಗಳಿಂದ ಹೋಳಿಯ ಹಬ್ಬದ ಮೂರಾಲ್ಕು ದಿನ ಮೊದಲು ಈ ಬೇಡರ ವೇಷ ಹೊರಡುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಬೇಡರ ಕುಣಿತ ಹಲವು ಉತ್ಸವಗಳಲ್ಲಿ ಭಾಗವಹಿಸಿ ವಿಶೇಷ ಮಹತ್ವ ದೊರಕಿದೆ.


  • ಚಿತ್ರ-ಲೇಖನ : ಟಿ.ಶಿವಕುಮಾರ್,  ಸರ್ಕಾರಿ ಹಿರಿಯ ಪ್ರಾಥಮಿಕ ಅರಳೇಶ್ವರ (ತಾ) ಹಾನಗಲ್ (ಜಿ) ಹಾವೇರಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW