ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಅನಾಮಿಕ 💯 ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಮುಂದೆ ಓದಿ…
ಹೆಣ್ಣು ನೀರಿನಂತೆ ಅಮೂಲ್ಯಳು,
ಬೆಂಕಿಯಷ್ಟೇ ಪವಿತ್ರಳು,
ಗಾಳಿ, ನೀರು, ಬೆಳಕು
ಉಚಿತವಾಗಿ ಸಿಗುವಂತೆ ಯಾವುದೇ ಸ್ವಾರ್ಥವಿಲ್ಲದೆ,
ಸೂರ್ಯ-ಚಂದ್ರರು
ತಮ್ಮ ಕೆಲಸವನ್ನ
ನಿಷ್ಠೆಯಿಂದ ಮಾಡುವಂತೆ,
ಹೆಣ್ಣು ಜವಾಬ್ದಾರಿಗಳನ್ನ ನಿರ್ವಹಿಸುವಳು,
ಕೆಲವು ಸಲ ಕಡಲ ಸೇರಲು
ಆತೊರೆದು ಓಡವಂತ ನದಿಯಂತೆ ಚಂಚಲಳು,
ಪ್ರೀತಿ ತೋರಿದರೆ
ಪುಷ್ಪವಾಗಿ ಕಾಲ ಕೆಳಗೂ ಇರುವಳು,
ನೋಯಿಸಿ ನಿಂದಿಸಿದರೆ
ಹೆಣದ ಮೇಲಿನ ಹಾರವಾಗುವಳು,
ಅವಳ ಮನ
ಫಲವತ್ತಾದ ಭೂಮಿ,
ಕೆಲವರು
ಉತ್ತಮ ಬೆಳೆ ಬೆಳೆಯುವರು,
ಕೆಲವರು
ಮುಳ್ಳು ಗಿಡಗಳನ್ನು ನೆಟ್ಟು
ಅದನ್ನು ಹಾಳು ಮಾಡುವರು.
ಅವಳು
ದಟ್ಟವಾಗಿ ಬೆಳೆದು ನೆರಳು ಕೊಡುವ ಮರ,
ತಾ ಶ್ರಮಿಸಿ
ಇತರರ ಕ್ಷೇಮವ ಬಯಸುವವಳು,
ಬದುಕಿನುದ್ದಕ್ಕೂ ತನ್ನ ಜೀವವ ತೇದು,
ಕೊನೆಗೆ ಚಿತೆಗೂ ಕಟ್ಟಿಗೆಯಾಗಿ ಇತರರಿಗೆ
ಉಪಯೋಗವಾಗುವ ಆ ಮರದಂತೆ
ಸಾಯುವಾಗಲೂ
ತನ್ನ ಮನೆಯ ಹರಸಿ ಹೋಗುವಳು.
- ಅನಾಮಿಕ 💯