
ಲೇಖನ : ಶ್ರೀಧರ್ ಕಾಡ್ಲೂರು
ಪರಿಚಯ : ಚಿತ್ರಕಲಾವಿದರ ಕುಟುಂಬದಲ್ಲಿ ಹುಟ್ಟಿದ ಶ್ರೀಧರ ಅವರು ಪ್ರಸ್ತುತ ಬೆಂಗಳೂರಿನ ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಕವನ, ಲೇಖನ ಬರೆಯುವುದು ಅವರ ಹವ್ಯಾಸಗಳಲ್ಲಿ ಒಂದು. ಅವರು ಅತ್ಯುತ್ತಮ ಚಿತ್ರಕಲಾವಿದರೂ ಆಗಿದ್ದಾರೆ. ಅವರ ಲೇಖನವನ್ನು ಓದಿ. ತಪ್ಪದೆ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. ಇನ್ನಷ್ಟು ಲೇಖನ ಬರೆಯುವಲ್ಲಿ ಪ್ರೋತ್ಸಾಹಿಸಿ.
29/04/2020 ಬುಧವಾರದ ದಿನ ಬೆಳಿಗ್ಗೆ ಆಸ್ಪತ್ರೆಯಲ್ಲಿ ಫೋನಾಯಿಸಿ ಒಮ್ಮೆ ಭೇಟಿ ಮಾಡಿ ಬರುವ ಅಂದು ಹೊರಟೆವು, ಡಾಕ್ಟರ ಕಂಡ ನಾವು ನನ್ನವಳ ಯೋಗ ಕ್ಷೇಮ ವಿಚಾರಿಸಿದೆ. ದೇವರ ದಯೆ ಎಲ್ಲವೂ ಸರಿಯಾಗಿತ್ತು. ಮನೆಗೆ ತಲುಪುವ ಹೊತ್ತಿಗೆ ಮಧ್ಯಾಹ್ನ ಸುಮಾರು ಒಂದು ಗಂಟೆ. ನನಗೋ ಈ ಲಾಕ್ ಡೌನ್ ಕಾರಣ ವರ್ಕ್ ಫ್ರ್ಂ ಹೋಮ್ ಕನ್ನಡದಲ್ಲಿ ಮನೆ ಕೆಲಸ ಅಂದರೆ ತಪ್ಪಾಗಬಹುದು 😅. ವಿಪರೀತ ಕೆಲಸದ ನಡುವೆ ಬಿಡುವು ಮಾಡಿಕೊಂಡು ಹೋಗಿ ಬಂದಿದ್ದೆ. ಬಂದವನೆ ಲ್ಯಾಪ್ ಟಾಪ್ ತೆಗೆದು ಕೆಲಸ ಪ್ರಾರಂಭಿಸಿದೆ, ಹತ್ತಾರು ಫೋನ್ ಕಾಲ್ ನಡುವೆ ಮಡದಿಯ ಮಾತನಾಡಿಸಲು ಬಿಡುವಾಗಲಿಲ್ಲ. ಊಟಕ್ಕೂ ಸಮಯ ಸಿಗಲಿಲ್ಲ. “ನಾವುಗಳು ಮನೆಯಲ್ಲೇ ಇದ್ದರು ಜೀವಂತ ಶವ ಆಗಿಬಿಡುತ್ತೇವೆ ಕೆಲವೊಮ್ಮೆ”ಈ ಐಟಿ ಜೀವನವೇ ಹೀಗೆ 🙃. ನೋಡ ನೋಡುತ್ತಿದ್ದಂತೆ ಸಂಜೆ ಸಮಯ ಒಂದು ಕಪ್ಪು ಚಹಾ ಹೀರಲೆಂದು ಹೊರಗೆ ಬಂದೆ, ಆಕೆ ಸಪ್ಪೆ ಮೋರೆ ಹಾಕಿ ಟಿವಿ ನೋಡುತ್ತಾ ಹೊಟ್ಟೆ ಕಿವುಚುತ್ತಾ ಕೂತಿದ್ದಳು, ನನಗೂ ಬೇಗ ತಿಳಿಯಲಿಲ್ಲ ಅದು ಹೆರಿಗೆ ನೋವೆಂದು. ಸ್ವಲ್ಪ ಹೊತ್ತು ಕುಳಿತು ಮಾತಾನಾಡಿಸಿದೆ. ಅಷ್ಟರೊಳಗೆ ನನ್ನತ್ತೆ ಆಸ್ಪತ್ರೆಗೆ ಹೋಗುವ ಬ್ಯಾಗು ತಯಾರು ಮಾಡಿಟ್ಟಿದ್ದರು. ನನಗೂ ಆತಂಕ, ಕೆಲಸದ ಒತ್ತಡ ತಲೆ ಬಿಸಿ ಆಗಿತ್ತು. ಒಮ್ಮೆ ಡಾಕ್ಟರಿಗೆ ಫೋನಾಯಿಸಿದೆ ವಿಷಯ ತಿಳಿಸಲು. ಬೆಳಿಗ್ಗೆ ಬನ್ನಿ ಎಂದರು. ನನ್ನವಳ ನೋವು ಒಂದೆಡೆ, ಖುಷಿ ಒಂದೆಡೆ, ಆತಂಕ ಒಂದೆಡೆ.
ನೋವು ತಿನ್ನುತ್ತಾ ನಾನಿದ್ದ ಕೋಣೆಯಲ್ಲಿ ಬಂದು ಮಲಗಿದಳು, ರಾತ್ರಿ ಊಟವು ಸರಿಯಾಗಿರಲಿಲ್ಲ. ಈ ಕಡೆ ಆಫೀಸಿನ ಕೆಲಸವೂ ಮುಗಿಯುತ್ತಿಲ್ಲ. ಎರಡೂ ಕಡೆ ಸಂಭಾಳಿಸಿಕೊಂಡು ಸಮಯ ತಳ್ಳಿದೆ. ಮಾತುಗಳು ನಡೆದೇ ಇದ್ದವು. ಇಬ್ಬರೂ ಮಲಗುವ ಹೊತ್ತಿಗೆ ಮಧ್ಯ ರಾತ್ರಿ ೩:೩೦. ನಾನು ನಿದ್ರೆಗೆ ಜಾರಿದೆ, ಅವಳಿಗೆ ನಿದ್ರೆ ಬರಲಿಲ್ಲ. ಹೇಗೋ ಮತ್ತೆರಡು ಗಂಟೆ ಕಳೆದವಳೆ ಎದ್ದು ತಯಾರಾಗಿದ್ದಳು. ನನ್ನನ್ನು ಎಬ್ಬಿಸಿ, ಲೇಟಾಯ್ತು ಕಾರು ತಗಿ ಹೋಗೋಣ ಅಂದಳು. ಗುರುವಾರ ಬೆಳಗ್ಗೆ ನಿದ್ದೆಗಣ್ಣಲ್ಲೇ ನಾನೂ ಎದ್ದು ತಯಾರಾಗಿ ಕಾರು ತೆಗೆದೆ. ನನ್ನತ್ತೆ ನಾನೂ ಅವಳು ಮೂರೇ ಜನ ಹೊರಟೆವು.
ಮನೆಯ ಮುಂದೆ Copper Pod ಹೂವಿನ ಮರವೂ ಶುಭ ನುಡಿದವು .
“ಪುಷ್ಪ ವೃಷ್ಟಿ ಹರಿಸಿದವು ದಾರಿಯಲ್ಲಿ ಮರಗಳು
ಸುರಿಸಿತು ಹನಿಯನು ಸಂತಸದಿ ಮೋಡಗಳು
ಕುಣಿಯುತಿತ್ತು ಕಾತುರದಿ ನೂರಾರು ಮನಗಳು
ಆರತಿಯಂತೆ ಆಗಮನಕೆ ಸಾಲು ಸಾಲು ದೀಪಗಳು”
ಮನೆಯಿಂದ ಸುಮಾರು ಮೂರು ಕಿ ಮಿ ದೂರದಲ್ಲಿರುವ ಆಸ್ಪತ್ರೆ ಅದು. ಐದು ನಿಮಿಷಗಳಲ್ಲಿ ನಾವಿಬ್ಬರು ತಲುಪಿದೆವು, ಅವರೂ ಸಹ ನಮ್ಮ ಹಾದಿ ಕಾಯುತ್ತಿದ್ದರು. ಎಲ್ಲಾ ಪೂರ್ವ ಸಿದ್ಧತೆ ನಡೆದಿತ್ತು.
ನಮಗಿಲ್ಲಿ ತರಾತುರಿ, ನನ್ನವಳು ನೋವಿನಲ್ಲೇ ನಗುತ್ತಾ OT ಕಡೆಗೆ ಹೊರಟಳು. ನಾನೊಂದು ಮೂಲೆಯಲ್ಲಿ ಮೊಬೈಲ್ ಹಿಡಿದು ರಾಯರ ಅಷ್ಟೋತ್ತರ ಪಠಿಸುತ್ತಾ ಕುಳಿತೆ. ಅವರೇ ಆಕೆಗೆ ಧೈರ್ಯ ತುಂಬಿರಬೇಕು, ಸಣ್ಣ ಗಾಯಕ್ಕೆ ಹೆದರುವವಳು ಆಪರೇಷನ್ ಥಿಯೇಟರ್ ಗೆ ನನಗೂ ಆಶ್ಚರ್ಯ!. ಸೆಕೆಂಡಿಗೆ ಒಮ್ಮೆ OT ಬಾಗಿಲು, ಗಡಿಯಾರ, ಮೊಬೈಲು ನೋಡುತ್ತಿದ್ದೆ. ಕಿಟಾರನೆ ಕಿರುಚಿದ ಶಬ್ದ ಕೇಳಿದವನೆ ಭಯಭೀತನಾದೆ, ನನ್ನತ್ತೆ ಕಣ್ಣಲ್ಲೂ ನೀರು.
“ನಸುಕಿನಲಿ ಹೊಂಬಿಸಿಲಿಗೆ ಗರಿಗೆದರಿ ಕರುಳು
ಪ್ರಥ್ವಿಯನು ಆವರಿಸಲು ಒಡಲು ನೂಕಿ ಬಂದಳು
ಬೆಳ್ಳಕ್ಕಿಯು ಕುಣಿದವು ಕೇಳಿ ಕಿರು ಧ್ವನಿಯ ಅಳು
ನಿನ್ನ ಜನನ ಹೆಚ್ಚಿಸಿದೆ ಮನ ಮನದಲಿ ಹೊನಲು”
ಎಂಟು ಗಂಟೆ ಸಮಯ, ಅದೇನೋ ಸಂತಸ, ಆತಂಕ ಒಳಗಿರುವ ಅವಳ ನೆನೆದು ಮರುಕ.
ಎಲ್ಲೋ ಓದಿದ ನೆನಪು, ಹೆರಿಗೆ ಆಗುವಾಗ ಮೈಯಲ್ಲಿರುವ ಎಲ್ಲಾ ಮೂಳೆಗಳು ಮುರಿದಂತಾಗುತ್ತದೆ ಎಂದು. ಅದು ಅವಳ ಚೀರಾಟ ಕೇಳಿ ನಿಜ ಅನ್ನಿಸಿತು. ಡಾಕ್ಟರ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದ ನಾವು, ತಂದರವರು ಸಂತಸದ ಸುದ್ದಿ.
“ಆಶೀರ್ವದಿಸಿ ನಮಗೆ ಹರಿವಾಯು ಗುರುಗಳು.
ಕರುಣಿಸಿದ ಉಡುಗೊರೆ ಮಗಳು”
ನನಗೂ ಮುಗಿಲು ಮುಟ್ಟುವಷ್ಟು ಆನಂದ,
ಮಡದಿ-ಮಗಳ ನೋಡುವ ಕಾತರ. ಬಂದೇಬಿಟ್ಟರು ಇಬ್ಬರು ಹೆಚ್ಚು ಕಾಯಿಸದೆ,
“ಮಂಪರಿನಲಿ ದಿಟ್ಟಿಸುತಿವೆ ನೂಪುರದಿ ಕಂಗಳು
ಅಭಿಜಾತ ಸೆಳೆತವು ಆ ಪುಟ್ಟ ಬೆರಳು
ಅಕ್ಕರೆಯ ಮಡಿಲು ನಿನ್ನಪ್ಪನ ನೆರಳು
ಕಮಲದ(ವಾರಿಜಾ) ಪಕಳೆಯೇ ನನ್ನ -ಮಗಳು”
ಇಂದಿಗೆ ಹತ್ತು ದಿನ ಕಳೆದಿವೆ. ಇಬ್ಬರು ಆರೋಗ್ಯಕರವಾಗಿದ್ದಾರೆ.
ಎಲ್ಲಾ ಮಹಿಳೆಯರಿಗೂ ❤️ವಿಶ್ವ ತಾಯಿಯರ ದಿನದ ಶುಭಾಶಯಗಳು ❤️