ಸರ್ವಮಂಗಳ ಜಯರಾಂ ಅವರು ಗೌರೀಬಿದನೂರಿನವರು. ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿರುವ ಇವರು ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ಸಕ್ರಿಯರನ್ನಾಗಿ ತೊಡಗಿಸಿಕೊಂಡಿದ್ದಾರೆ. ಆಕೃತಿ ಕನ್ನಡದಲ್ಲಿ ಅವರ ‘ಚೌ ಚೌ ಬಾತ್’ ಅಂಕಣ ಶುರುವಾಗಲಿದೆ, ತಪ್ಪದೆ ಮುಂದೆ ಓದಿ…
ಜೀವನ ಅನುಭವಗಳ ಆಗರ, ಹಲವು ಭಾವಗಳ ಸಂಗಮ, ಅಗೆದಷ್ಟು ಆಳ ಬಗೆದಷ್ಟು ಅಗಲ. ಪ್ರತಿಯೊಬ್ಬರ ಜೀವನದಲ್ಲೂ ಪ್ರತಿನಿತ್ಯ ಹಾದುಹೋಗುವ ಘಟನೆಗಳು ಹಲವಾರು. ಗತಿಸಿದ ಅಂತಹ ಘಟನೆಗಳು ಒಮ್ಮೊಮ್ಮೆ ಇದ್ದಕ್ಕಿದ್ದಂತೆ ನೆನಪಾಗಿ ನಮ್ಮಲ್ಲಿ ಅಳು, ನಗು,ನೋವು,ನಲಿವು, ದುಃಖ ಹತಾಶೆ ಮುಂತಾದ ಸಮ್ಮಿಶ್ರ ಭಾವಗಳನ್ನು ಒಡಮೂಡಿಸುತ್ತವೆ.
ನನಗಂತೂ ಈ ರೀತಿ ಅನಿರೀಕ್ಷಿತವಾಗಿ ಮೂಡಿ ಬರುವ ವಿಭಿನ್ನ ಲಹರಿಗಳನ್ನು ಅಕ್ಷರ ರೂಪದಲ್ಲಿ ಒಂದೆಡೆ ಬಂಧಿಸಿದಾಗಲೇ ನಿರಾಳತೆಯ ಭಾವ. ಜೀವನದ ಪ್ರತಿಕ್ಷಣವೂ ಅನುಭವಿಸಿದ, ಅನುಭವಿಸಿದ ಎದೆಯ ಹಾಡಿಲ್ಲಿ ಅಕ್ಷರದ ಸಖ್ಯ ಕಂಡಿವೆ. ಇಲ್ಲಿ ತಾಯಿಯ ಅಂತಃಕರಣವಿದೆ, ನವಿರು ಹಾಸ್ಯವಿದೆ,ಮಗುವಿನ ಮುಗ್ದತೆ, ಸಾಮಾಜಿಕ ಕಳಕಳಿ,ಇಂದಿನ ಜೀವನಶೈಲಿ ಹೀಗೆ ಹತ್ತು ಹಲವು ವಿಭಿನ್ನ ಭಾವಗಳ ಸಂಗಮವಾಗಿ ಚೌಚೌ ಬಾತ್ ನಿಮ್ಮ ಮುಂದಿದೆ. ಸಹೃದಯಿ ಓದುಗರು ಸವಿದು ಒಂದೆರಡು ಸಾಲುಗಳಲ್ಲಿ ಪ್ರತಿಕ್ರಿಸುವುದಾದರೆ ನನ್ನ ಶ್ರಮ ಸಾರ್ಥಕ. ಇದು ನನ್ನ ಎರಡನೇ ಪ್ರಬಂಧ ಸಂಕಲನವಾಗಿದ್ದು ಐದನೇ ಕೃತಿಯಾಗಿದೆ.ಸಂಕಲನಕ್ಕೆ ಅರ್ಥಪೂರ್ಣವಾದ ಹಾಗೂ ಸವಿಸ್ತಾರವಾದ ಮುನ್ನುಡಿಯನ್ನು ಬರೆದುಕೊಟ್ಟು ಹರಸಿರುವ ಹಿರಿಯ ಸಾಹಿತಿಗಳಾದ ಶ್ರೀಯುತ ಹರಿ ನರಸಿಂಹ ಉಪಾಧ್ಯಾಯರವರಿಗೆ ನಲ್ಮೆಯ ಧನ್ಯವಾದಗಳು.ಹಾಗೆಯೇ ಈ ಕೃತಿಗೆ ಸಂಕ್ಷಿಪ್ತ ಹಾಗೂ ಸಾರ್ಥಕ ಬೆನ್ನುಡಿಯನ್ನು ಬರೆದು ಕೊಟ್ಟಿರುವ ನಾಡಿನ ಖ್ಯಾತ ಸಾಹಿತಿ ಹಾಗೂ ಪ್ರಸಿದ್ಧ ವಿಮರ್ಶಕರಾದ ಶ್ರೀಯುತ ಡಾ. ಎಚ್.ಎಸ್. ಸತ್ಯನಾರಾಯಣ ಸರ್ ರವರಿಗೆ ಗೌರವ ಪೂರ್ವಕ ನಮನಗಳು. ನನ್ನೆಲ್ಲ ಲೇಖನಗಳನ್ನು ಓದಿ ಸದಾ ಪ್ರೋತ್ಸಾಹಿಸುತ್ತಿರುವ ಫೇಸ್ಬುಕ್ ನ ಆಪ್ತ ಸ್ನೇಹ ವಲಯಕ್ಕೂ ಹೃನ್ಮನದ ಧನ್ಯವಾದಗಳು.
ನನ್ನ ಸಾಹಿತ್ಯಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತು ಸದಾ ಪ್ರೋತ್ಸಾಹಿಸುವ ಬಾಳ ಸಂಗಾತಿ ಶ್ರೀಯುತ ಜಯರಾಮ್ ರವರಿಗೂ ಹಾಗೂ ಮಕ್ಕಳಾದ ಚಿ. ನಿತೀಶ್. ಜೆ ಮತ್ತು ಕು.ಲೇಖಾಶ್ರೀ.ಜೆ ರವರಿಗೂ ರಾಶಿ ರಾಶಿ ಪ್ರೀತಿ. ಕೃತಿಯನ್ನು ಅಂದವಾಗಿ ಹಾಗೂ ಆಕರ್ಷಕವಾಗಿ ಮುದ್ರಿಸಿ ಚಂದಗಾಣಿಸಿರುವ ಸಹನಾ ಪಬ್ಲಿಕೇಶನ್ಸ್ ನ ಪ್ರಕಾಶಕರಾದ ಶ್ರೀಯುತ ಶ್ರೀನಿವಾಸ್ ಸರ್ ಹಾಗೂ ಮುಖಪುಟ ವಿನ್ಯಾಸಗೊಳಿಸಿರುವ ಶ್ರೀಯುತ ಮೋನಪ್ಪರವರಿಗೂ ಹೃತ್ಪೂರ್ವಕ ಧನ್ಯವಾದಗಳು. ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ವಂದನೆಗಳು.

ಲೇಖಕರ ಪರಿಚಯ :
ಶ್ರೀಮತಿ ಸರ್ವಮಂಗಳ ಜಯರಾಂ ರವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಅರಳಾಪುರ ಗ್ರಾಮದಲ್ಲಿ ಜನಿಸಿದರು. ಎಂ.ಎ.ಬಿ.ಎಡ್ ಪದವೀಧರರಾಗಿ ಪ್ರಸ್ತುತ ಗೌರೀಬಿದನೂರಿನ S.S.E.A ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಉತ್ತಮ ಕಾರ್ಯ ನಿರ್ವಹಿಸುತ್ತ ಕಾಯಕದ ಜೊತೆ ಸಾಹಿತ್ಯ ಕೃಷಿಯಲ್ಲಿ ತೊಡಗಿ ಪ್ರಥಮವಾಗಿ 2020 ರಲ್ಲಿ “ಕಾವ್ಯ ಕುಸುರಿ” ಎಂಬ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಂತರ 2021 ರಲ್ಲಿ “ಕಥಾಸಿರಿ” ಎಂಬ ಕಥಾ ಸಂಕಲನ ಹೊರ ತಂದಿದ್ದಾರೆ. ಇವರ ಮೂರನೇ ಪುಸ್ತಕ ಗುಲ್ಮೊಹರ್ ( 2022) ಲೇಖನಗಳು ಹಾಗೂ ಅಂಕಣ ಬರಹಗಳನ್ನು ಒಳಗೊಂಡ ಪುಸ್ತಕ ಬಿಡುಗಡೆಯಾಗಿದೆ.
ಕೊಪ್ಪಳ ಜಿಲ್ಲೆಯ ಪ್ರಸಿದ್ಧ ‘ವಿನಯ ವಾಣಿ’ ಪತ್ರಿಕೆಗೆ ಅಂಕಣ ಬರಹಗಳ ರಚನೆಯಲ್ಲಿ ತೊಡಗಿರುವ ಇವರು ಸಾಮಾಜಿಕ ಕಳಕಳಿಯುಳ್ಳ ಬರಹಗಳ ಮೂಲಕ ಭರವಸೆಯ ಲೇಖಕಿಯಾಗಿ ಗುರ್ತಿಸಿಕೊಂಡಿದ್ದಾರೆ.ಇದೀಗ ( 2023 ) ಇವರ “ಮಾಧುರಿಯ ಮಿಡಿತಗಳು ” ಗಜ಼ಲ್ ಸಂಕಲನ ಲೋಕಾರ್ಪಣೆಗೊಂಡಿದ್ದು ಗಜ಼ಲ್ಕಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಇವರು ಕನ್ನಡ ಸಾಹಿತ್ಯ ಲೋಕದಲ್ಲಿ ಕವಯತ್ರಿಯಾಗಿ,ಕತೆಗಾರ್ತಿಯಾಗಿ, ಲೇಖಕಿಯಾಗಿ, ಗಜ಼ಲ್ಕಾರ್ತಿಯಾಗಿ ವಿಭಿನ್ನ ಆಯಾಮಗಳಲ್ಲಿ ಲೇಖನಗಳನ್ನು ರಚಿಸುತ್ತಾ ಸೃಜನಶೀಲ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಇವರು ಹಲವಾರು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಾ ಸದಾ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಾಹಿತ್ಯ ಸೇವೆಗಾಗಿ ” ಡಾ. ಎಸ್. ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿ “, “ಸಾಹಿತ್ಯೋತ್ಸವ ಪ್ರಶಸ್ತಿ ” , “ಯೋಗಿ ನಾರಾಯಣ ಪ್ರಶಸ್ತಿ”, “ವಾಗ್ದೇವಿಯ ವರಪುತ್ರಿಯ ಪ್ರಶಸ್ತಿ” ಕೆಂಪಮ್ಮ ಪುರಸ್ಕಾರ” ಮಹಿಳಾ ಚೈತನ್ಯ ರತ್ನ ಪ್ರಶಸ್ತಿ, ವೀರ ಕೇಸರಿ ರಾಷ್ಟ್ರೀಯ ಪ್ರಶಸ್ತಿ “ಪ್ರತಿಭಾ ಸಮ್ಮಾನ್ ಪುರಸ್ಕಾರ .” ಶಿಕ್ಷಕ್ ಸನ್ಮಾನ್ ” ಹೀಗೆ ಹಲವು ಪ್ರಶಸ್ತಿಗಳು ಇವರ ಸಾಹಿತ್ಯ ಸೇವೆಗೆ ಸಂದ ಗೌರವವಾಗಿದೆ.
****

ಶ್ರೀಮತಿ ಸರ್ವಮಂಗಳಾ ಜಯರಾಂ ಅವರ ಈ ಪ್ರಬಂಧಗಳಲ್ಲಿ ಪುಟಿಯುವ ಜೀವನೋತ್ಸಾಹ ಮತ್ತು ಜೀವನ ಪ್ರೀತಿಗಳೆರಡೂ ಹಾಯಿದೋಣಿಗಳಂತೆ ಬರೆಹವನ್ನು ಮುನ್ನಡೆಸಿವೆ. ನಿರೂಪಕಿ ಸ್ವತಃ ಒಬ್ಬ ಶ್ರದ್ಧಾವಂತ ಶಿಕ್ಷಿಕಿ, ವಾತ್ಸಲ್ಯಮಯಿ ತಾಯಿ, ಅಕ್ಕರೆಯ ಗೆಳತಿಯೂ ಆಗಿರುವುದರಿಂದ ಸ್ವಾನುಭವ ಬೆರೆತ ಇಲ್ಲಿನ ಪ್ರಬಂಧಗಳಿಗೊಂದು ಲವಲವಿಕೆಯ ಚಾಲಕ ಶಕ್ತಿಯಿದೆ. ಕುತೂಹಲದ ಕಣ್ಣಿಂದ ಎಲ್ಲ ಸಂಬಂಧಗಳ ಸತ್ವವನ್ನು ಶೋಧಿಸಬಲ್ಲ ಉಮೇದಿನ ಈ ಪ್ರಬಂಧಗಳು ನಮ್ಮ ಸುತ್ತಮುತ್ತಲನ್ನು ತೆರೆದ ಕಣ್ಣಿಂದ ನೋಡಿ ಪಡೆದ ದಿನನಿತ್ಯದ ಕಥನಗಳು. ತಮ್ಮ ಪರಿಧಿಗೆ ಲಭ್ಯವಾದ ಅನುಭವಗಳನ್ನು ರಸವತ್ತಾಗಿ ನಿರೂಪಿಸುವ ಮೂಲಕ ಓದುಗರ ಎದೆಯನ್ನು ಸರಾಗವಾಗಿ ತಟ್ಟಬಲ್ಲ ಇಲ್ಲಿನ ನಿರೂಪಣೆಯಲ್ಲಿ ಆಪ್ತತೆಯಿದೆ, ಪ್ರಾಮಾಣಿಕತೆಯಿದೆ ಮತ್ತು ಜೀವ ಪ್ರೀತಿಯ ಒಟ್ಟಿಲಿದೆ. ಪ್ರತಿಯೊಂದು ಸಂಬಂಧಗಳಿಂದಲೂ ತಾವು ಪಡೆದ ಸಿಹಿ,ಕಹಿ, ವಿನೋದ ಸಂಗತಿಗಳನ್ನು ಅರಿವಾಗಿ ಪರಿವರ್ತಿಸಲು ಪ್ರಯತ್ನಿಸುವ ಲೇಖಕಿಯ ನಿರೂಪಣೆಗೊಂದು ಸರಳವಾದ ಚೌಕಟ್ಟಿದೆ. ಬದುಕೆಂದರೆ ಅದೊಂದು ಸರಳರೇಖೆಯ ಸಿದ್ಧಾಂತದಂತಲ್ಲ, ಬದಲಿಗೆ ಸಮ್ಮಿಶ್ರ ಸಂಕೀರ್ಣ ಭಾವಗಳ ಕಟ್ಟು ಎಂಬುದನ್ನು ಪ್ರಸ್ತುತಪಡಿಸುವ ಇರಾದೆಯ ‘ಚೌ ಚೌ ಬಾತ್’ ವಿಭಿನ್ನ ಲಹರಿಯ ಭಾವನೆಗಳಿಗೆ ತೊಡಿಸಿದ ಪ್ರಬಂಧ ರೂಪವಾಗಿ ಗಮನ ಸೆಳೆಯುತ್ತದೆ.
– ಡಾ.ಎಚ್.ಎಸ್. ಸತ್ಯನಾರಾಯಣ