ಕಾಡುಪಾಪಗಳ ರಕ್ಷಣೆ ಬಗ್ಗೆ ಅರಣ್ಯ ಇಲಾಖೆ ಈಗಲೆ ಎಚ್ಚೆತ್ತುಕೊಳ್ಳಬೇಕಾಗಿದೆ. ಕರಡಿ, ಹುಲಿ, ಸಿಂಹ, ಚಿರತೆಗಳನ್ನಷ್ಟೆ ಉಳಿಸಲು ಹರಸಾಹಸ ಪಟ್ಟರೆ ಸಾಲದು. ಇಂತಹ ಎಷ್ಟೋ ಮುಗ್ಧ ಜೀವಿಗಳು ಇಂದು ನಾಶವಾಗುತ್ತಿವೆ. ಅಳುವಿನಂಚಿನಲ್ಲಿರುವ ಕಾಡುಪಾಪದ ಕುರಿತು ಲೇಖಕರಾದ ಲೇಖನ್ ನಾಗರಾಜ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ, ಕಾಡುಪಾಪವನ್ನು ಕಾಪಾಡುವಲ್ಲಿ ಕೈ ಜೋಡಿಸೋಣ…
ಕಾಡು, ನೂರಾರು ಜೀವ ಸಂಕುಲಗಳ ತಂಗುದಾಣ. ಹಲವಾರು ವೃಕ್ಷ ರಾಶಿಗಳ ಸುಂದರ ತಾಣ. ಕಾಡಿನ ಸಂಪತ್ತನ್ನು ಬಳಸಿಕೊಂಡವ್ರೆಷ್ಟೋ.? ಅಳಿಸಿದವರೆಷ್ಟೋ.? ದೋಚಿದವರೆಷ್ಟೋ.? ಒಟ್ಟಾರೆಯಾಗಿ ನಮ್ಮ ಭಾರತದಲ್ಲಿ ಭೌಗೋಳಿಕವಾಗಿ ಅರಣ್ಯ ಪ್ರದೇಶ ಶೇಕಡವಾರು ಕೇವಲ 23%, ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮ ಕರ್ನಾಟಕದಲ್ಲಿ ಬರಿ 21% ಇದೆ ಅಷ್ಟೆ. ಹೀಗೆ ಅರಣ್ಯ ನಾಶ ಮುಂದುವರೆದರೆ, ಮುಂದಿನ ದಿನಗಳಲ್ಲಿ ಮನುಷ್ಯನ ಪರಿಸ್ಥಿತಿ ಅದೋಗತಿಗೆ ಬರುವುದಂತು ಸತ್ಯ.
ಫೋಟೋ ಕೃಪೆ : google
ಅರಣ್ಯ ನಾಶದಿಂದ ಕಳ್ಕೊಂಡಿರೋದು ಬರಿ ಮರಗಳನ್ನಾ ಮಾತ್ರವಲ್ಲಾ. ಎಷ್ಟೋ ಜೀವಿಗಳನ್ನು ನಾವು ಇಂದು ನೆನಪಿನಲ್ಲಿಟ್ಟಿಕೊಳ್ಳುವ ಪರಿಸ್ಥಿತಿ ಬಂದಿದೆ. ಮುಂದೆ ಒಂದಿನ ಮಾನವನ ಸರದಿ ಬರುವುದರಲ್ಲಿ ಸಂದೇಹವಿಲ್ಲಾ. ಅರಣ್ಯ ನಾಶದಿಂದ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಾಲಿನಲ್ಲಿ ಸಿಗುವ ಒಂದು ಅಪರೂಪದ ಜೀವಿ ಕಾಡುಪಾಪ[Slender Loris.] ಕಾಡಿನ ಪ್ರಾಣಿಗಳಲ್ಲೆ ಅತ್ಯಂತ ಮುಗ್ಧ ಹಾಗೂ ನಿರಪಾಯಕಾರಿ, ಭಯ, ನಾಚಿಕೆ ಸ್ವಭಾವದ ಜೀವಿ ಎಂದರೆ ಕಾಡುಪಾಪ. ಇದರ ಮುಗ್ಧತೆಗೆ ಇನ್ನೊಂದು ಹೆಸರೆ ಕಾಡಿನ ಮಗು ಅಥವಾ ಅರಣ್ಯದ ಪಾಪು. ಇದನ್ನು ಇಂಗ್ಲೀಷ್‌ನಲ್ಲಿ ಸ್ಲೆಂಡರ್ ಲೋರಿಸ್ ಅಥವಾ ಸ್ಲೋ ಲೋರಿಸ್ ಎಂದು ಕರೆಯಲಾಗುತ್ತದೆ. ಇದರ ಬಗ್ಗೆ ಕೇಳಿದವರೆ ಹೆಚ್ಚು ಹೊರತು ಅಧ್ಯಯನ ಮಾಡಿದವರು ಕಡಿಮೆ ಎಂದೆ ಹೇಳಬಹುದು. ಈ ಜೀವಿಗಳ ವಿಷಯವಾಗಿ ಅಷ್ಟಾಗಿ ಅನ್ವೇಷಣೆಗಳೇನು ನಡೆಯದ ಕಾರಣ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಜನರಿಗೆ ತಿಳಿದಿಲ್ಲಾ. ಇಂದು ಈ ಜೀವಿ ಕಣ್ಣಿಗೆ ಕಾಣುವುದು ಅಪರೂಪವಾಗಿದೆ. ಸುಮಾರು ವರ್ಷಗಳ ಹಿಂದೆ ಒಮ್ಮೆ ನಮ್ಮ ಕಾಡಿನಲ್ಲಿ ದಿಕ್ಕು ತಪ್ಪಿ ಒಬ್ಬರ ಮನೆಯ ತೋಟಕ್ಕೆ ಬಂದಿತ್ತು. ಆಗ ನೋಡಿದ ನೆನಪು. ನನ್ನ ಕಲ್ಪನಾ ಶಕ್ತಿಯನ್ನು ಸೇರೆ ಹಿಡಿದಂತ ಜೀವಿಯಾಗಿ ಕಾಣಿಸಿತ್ತು. ಭಯದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಮನುಷ್ಯನಂತೆ ಕಣ್ಣೀರನ್ನು ಹಾಕುತ್ತಾ ನಿಂತಿತ್ತು. ಎಲ್ಲೋ ದಿಕ್ಕು ತಪ್ಪಿದ ಮಗುವಿನಂತೆ ಅಳುತ್ತಿತ್ತು. ಕೊನೆಗೆ ತೋಟದ ಕೆಲಸಗಾರನ್ನೊಬ್ಬ ಧೈರ್ಯ ಮಾಡಿ ಅದನ್ನು ಹಿಡಿದ. ಆಗಲೂ ಅದು ಭಯದಲ್ಲಿ ಚಿಕ್ಕ ಮಕ್ಕಳಂತೆ ವರ್ತಿಸುತ್ತಿತ್ತು. ಆಮೇಲೆ ಅದನ್ನು ಕಾಡಿಗೆ ಬಿಟ್ಟು ಬಂದಿದ್ದರು. ನಂತರ ಅದರ ವೈಶಿಷ್ಟ್ಯಗಳ ಬಗ್ಗೆ ಕೇಳಿದ್ದೇನೆ ಹೊರತು ಮತ್ತೆ ನೋಡಲು ಸಾಧ್ಯವಾಗಲಿಲ್ಲಾ. ಇಂದು ಅದರ ಬಗ್ಗೆ ಮಾತನಾಡುವವರು ಬಹಳ ಕಡಿಮೆಯೇ. ಬರಿ ಫೋಟೊದಲ್ಲಿ ನೋಡುವ ಪರಿಸ್ಥಿತಿ ನಮ್ಮದಾಗಿದೆ.
ಫೋಟೋ ಕೃಪೆ : google
ಕಾಡು ಪಾಪ ಆಕಾರದಲ್ಲಿ ಮನುಷ್ಯನ ಪೂರ್ವಜರ ಹಾಗೆ ಇರುತ್ತದೆ. ಮಂಗನ ರೂಪದ ಲಕ್ಷಣಗಳು ಕಾಣಿಸುತ್ತದೆ. ಬಾಲವಿರುವುದಿಲ್ಲಾ. ಪಾಪೆ[ಗೊಂಬೆಯಂತೆ] ದೊಡ್ಡ ಕಣ್ಣುಗಳು, ಎತ್ತರ 25 ರಿಂದ 35 ಸೆಂ. ಮೀ ಇರುತ್ತದೆ. ತೂಕ ಸರಿ ಸುಮಾರು ಎರಡರಿಂದ ಎರಡುವರೆ ಕೆ.ಜಿಯಷ್ಟಿರುತ್ತದೆ. 15 ರಿಂದ 20 ವರ್ಷಗಳ ಕಾಲ ಬದುಕುತ್ತದೆ. ತನ್ನದೆ ಆದ ಒಂದು ಚಿಕ್ಕ ಬಳಗದಲ್ಲಿ ಇದು ವಾಸಿಸುತ್ತದೆ. ಹೆಚ್ಚಾಗಿ ಏಕಾಂತ ಪ್ರಿಯ ಜೀವಿಗಳು ಇವು. ಮುಂಗೈನಿಂದ ಮರದ ಕೊಂಬೆಗಳನ್ನು ಬಲವಾಗಿ ಹಿಡಿಯುತ್ತಾ, ಮರದಿಂದ ಮರಕ್ಕೆ ಸಂಚಾರ ಮಾಡುತ್ತದೆ. ಇವುಗಳ ಲೈಂಗಿಕ ಕ್ರಿಯೆ ಮನುಷ್ಯರಂತೆ ಸಂಗಾತಿಯೊಡನೆ ಇರುತ್ತದೆ. ಮಗು ಹುಟ್ಟಿದ ಎರಡರಿಂದ ಮೂರು ವಾರಗಳ ಕಾಲ ತನ್ನ ತಾಯಿಯನ್ನು ತಬ್ಬಿಕೊಂಡು ಬೆಳೆಯುತ್ತದೆ. ವಾಲಿಬಾಲ್ ಚೆಂಡಿನಂತೆ ತಮ್ಮನ್ನು ತಾವು ಸುತ್ತಿಕೊಂಡು ನಿದ್ರೆ ಮಾಡುತ್ತದೆ. ಕಾಡುಪಾಪದ ಸಂತತಿ ಪ್ರಪಂಚದಲ್ಲಿ ಹೆಚ್ಚಾಗಿ ಶ್ರೀಲಂಕಾ, ಜಾವಾ, ಮಲಯ ಪರ್ಯಾಯ ದ್ವೀಪಗಳಲ್ಲಿ ಕಂಡುಬರುತ್ತದೆ. ನಮ್ಮ ಭಾರತದಲ್ಲಿ ಹೆಚ್ಚಾಗಿ ಕಂಡು ಬರುವುದೇ ನಮ್ಮ ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಫೋಟೋ ಕೃಪೆ : google
ಮಲೆನಾಡು ಪ್ರದೇಶಗಳಾದ, ಚಿಕ್ಕಮಗಳೂರು, ಚಾರ್ಮುಡಿ ಘಾಟ್, ಶಿರಸಿ, ಸಿದ್ಧಾಪುರ, ಕಾರವಾರ, ಶಿವಮೊಗ್ಗದಂತಹ ಕಾಡುಗಳಲ್ಲಿ ಹೆಚ್ಚಾಗಿ ಕಾಣ ಸಿಗುತ್ತದೆ. ಇವುಗಳು ಅಪೇಕ್ಷೆಯಿಲ್ಲದೆ ಬದುಕಬಲ್ಲ ಜೀವಿಗಳು. ಒಂದು ಮರ ತಮಗೆ ಆಹಾರ ಆಶ್ರಯ ಕೊಡುತ್ತದೆ ಎಂದು ಗೊತ್ತಾದರೆ, ತಮ್ಮ ಜೀವಾತವಧಿಯನ್ನಾ ಆ ಮರದಲ್ಲೆ ಕಳೆಯುತ್ತದೆ. ಇವುಗಳ ವಾಸಸ್ಥಳ ನೀಲಿಗಿರಿ, ಆಲದ ಮರ, ಅರಳಿ ಮರ, ಹುಣಸೇ ಮರಗಳಲ್ಲಿ, ಬೀದಿರು ಹಿಂಡುಗಳ ಮಧ್ಯದಲ್ಲಿ ವಾಸಿಸುತ್ತವೆ. ಇವುಗಳ ಆಹಾರ, ಹಣ್ಣು, ಹಂಪಲು, ಕಾಯಿ, ಕೀಟಗಳು, ಜೀರುಂಡೆ, ಮಿಡತೆ, ಹಲ್ಲಿ. ಸುಲಭವಾಗಿ ಕೈಗೆ ಸಿಗುವಂತಹದನ್ನೆಲ್ಲಾ ಹಿಡಿದು ತಿನ್ನುತ್ತವೆ. ಇವುಗಳಿಂದ ಮನುಷ್ಯನಿಗೆ ಯಾವುದೇ ಹಾನಿ ಇಲ್ಲಾ. ರೈತರಿಗೆ ಇವುಗಳಿಂದ ಲಾಭವಿದೆ. ಹಾನಿಕಾರಕ ಕೀಟ, ಇಲಿಗಳನ್ನಾ ಇವುಗಳು ಹಿಡಿದು ತಿನ್ನುವುದರಿಂದ ಬೆಳೆಗಳಿಗೆ ಸಹಾಯಕಾರಿ ಜೀವಿಗಳು. ಮಾನವನಿಗೆ ನಿರುಪದ್ರವಿ ಜೀವಿಯೆಂದೆ ಹೇಳಬಹುದು. ಇವುಗಳು ಸರ್ವಹಾರಿಯಾದ್ದರಿಂದ ಬೆಕ್ಕಿನಂತೆ ಮನೆಯಲ್ಲಿ ಸಾಕಲು ಯೋಗ್ಯವಾದ ಪ್ರಾಣಿ ವರ್ಗ. ಕಾಡುಪಾಪಗಳನ್ನು ನಿಶಾಚರಿ ಜೀವಿಗಳು ಎಂದು ಕರೆಯಲಾಗುತ್ತದೆ. ರಾತ್ರಿ ಸಮಯದಲ್ಲಿ ಮಾತ್ರ ಸಂಚಾರ ಮಾಡುತ್ತವೆ. ಹಗಲಿನಲ್ಲಿ ಇವುಗಳು ಕಣ್ಣಿಗೆ ಬೀಳದೆ ಇರುವುದರಿಂದ ರಹಸ್ಯಮಯ ಜೀವಿಗಳು ಎಂದು ಹೇಳುತ್ತಾರೆ. ಒಂದೊಂದು ಪ್ರದೇಶಗಳಲ್ಲಿ ಇವುಗಳನ್ನು ಬೇರೆ ಬೇರೆ ಹೆಸರಿನಿಂದ ಗುರುತಿಸುವುದು ಇದೆ. ಕೆಲವು ಕಡೆ ಕಾಡು ಪಾಪ, ಅರಣ್ಯ ಪಾಪು, ಕಾಡಿನ ಮಗು ಎಂದು ಕರೆಯುತ್ತಾರೆ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವನಮಗ, ವನಮನುಷ್ಯ,ಅಡವಿ ಪಾಪ ಎಂದು ಕರೆಯುವುದುಂಟು. ನಮ್ಮ ಕಡೆ ಇದರ ಆಕಾರ, ಗಾತ್ರವನ್ನು ನೋಡಿ ಒಣಮನುಷ್ಯ, ಒಣಮಾನವ ಎಂದು ಕರೆಯುತ್ತಾರೆ. ಜನಪದ ಕಲೆಯಲ್ಲಿ ಇದಕ್ಕೆ “ಬಿದಿರಮೇಗಳ ಚದುರೆ” ಎಂದು ಕರೆದಿದ್ದಾರೆ.
ಫೋಟೋ ಕೃಪೆ : google
ಕಾಡುಪಾಪಗಳು ಮುಗ್ಧತೆಯಂತೆ ಬುದ್ಧಿ ಜೀವಿಗಳು ಹೌದು. ತಮ್ಮ ರೋಗಗಳಿಗೆ ತಾವೆ ಔಷೋಧೋಪಚಾರ ಪರಿಹಾರವನ್ನು ಕಂಡುಕೊಳ್ಳುತ್ತವೆ. ದೇಹಕ್ಕೆ ಗಾಯವಾದರೆ ಸೊಪ್ಪಿನ ರಸವನ್ನು ಹಾಕಿ ಗಾಯವನ್ನು ಗುಣಪಡಿಸಿಕೊಳ್ಳತ್ತವೆ. ಅಪಾಯ ಕಾರಿ ಕೀಟಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ರಾತ್ರಿ ಸಮಯದಲ್ಲಿ ಸ್ವ ಮೂತ್ರವನ್ನು ತಮ್ಮ ದೇಹಕ್ಕೆ ಬಳಿದುಕೊಳ್ಳುತ್ತವೆ. ಮನುಷ್ಯರು ಕೊಬ್ಬರಿ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಳ್ಳುವಂತೆ, ಇವುಗಳು ತಮ್ಮ ಮೂತ್ರವನ್ನು ಕೈಗಳಿಂದ ಕಾಲು ಮತ್ತು ಮುಖಕ್ಕೆಲ್ಲಾ ಹಚ್ಚಿಕೊಂಡು ಅಪಯಕಾರಿ ಕೀಟಗಳ ಕಡಿತದಿಂದ ರಕ್ಷಿಸಿಕೊಳ್ಳುತ್ತವೆಯಂತೆ. ಇವುಗಳ ಮುಗ್ಧತೆಗೆ ಇನ್ನೊಂದು ಉದಾಹರಣೆಯೆಂದರೆ, ಅಪಾಯ ಎದುರಾಗಿದೆ ಎಂದು ಗೊತ್ತಾದಾಗ. ನಾವು ನಿಸ್ಸಹಾಯಕರು ಎಂದು ತಿಳಿದ ಕೂಡಲೆ ತಮ್ಮ ಎರಡು ಕೈಗಳನ್ನು ತಲೆಗಿಂತ ಮೇಲಕ್ಕೆ ಎತ್ತಿ ಅಸಹಾಯಕರಾಗಿ ನಿಂತುಕೊಳ್ಳುತ್ತವೆಯಂತೆ. ಈ ವಿಷ್ಯವನ್ನು ಬೇಟೆಯಾಡಲು ಕಾಡಿಗೆ ಹೋದ ಕೆಲವರು ಹೇಳಿದ್ದನ್ನು ನಾನು ಕೇಳಿದ್ದೇನೆ. ರಾತ್ರಿ ಸಮಯದಲ್ಲಿ ತಮ್ಮ ಕಣ್ಣಿಗೆ ಬೆಳಕು ಬಿದ್ದ ಕೂಡಲೆ ಇವುಗಳ ಮೊದಲ ಕೆಲಸ ತಮ್ಮ ಕೈಯನ್ನು ಮೇಲಕ್ಕೆ ಎತ್ತಿ ಹ್ಯಾಂಡ್‌ಸಪ್ ಸ್ಟೈಲ್‌ನಲ್ಲಿ ನಿಂತು, ನಾವು ಮುಗ್ಧ ಜೀವಿಗಳು ಎಂದು ತೋರ್ಪಡಿಸಿವುದು. ಈ ಹ್ಯಾಂಡ್‌ಸಪ್ ಸ್ಟೈಲ್‌ನ್ನೂ ಇಂದು ನಾವು ಎಷ್ಟೋ ಚಲನಚಿತ್ರಗಳಲ್ಲಿ ನೋಡಿರುತ್ತೇವೆ. ಇವುಗಳಿಗೆ ಕ್ರೂರ ಪ್ರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮೊಣಕೈನಲ್ಲಿ ಒಂದು ವಿಷದ ಮಚ್ಚೆ ಇರುತ್ತದೆ. ಪ್ರಾಣಿಗಳು ತಮ್ಮ ಮೇಲೆ ಎಗರಿದ ಕೂಡಲೆ ಆ ವಿಷದ ಮಚ್ಚೆಯನ್ನು ಬಾಯಲ್ಲಿ ಕಚ್ಚಿ ಹಲ್ಲಿನ ಮೂಲಕ ಎದುರಾಳಿಗೆ ಕಚ್ಚುತ್ತವೆ. ಹೀಗೆ ತಮ್ಮ ಪ್ರಾಣವನ್ನು ತಾವು ರಕ್ಷಿಸಿಕೊಳ್ಳುತ್ತವೆ.
ಆದರೆ, ಇಂದು ಎಲ್ಲಾ ಬದಲಾಗಿದೆ. ಕಾಡುಪಾಪದ ಸಂತತಿ ಸರ್ವನಾಶದಲ್ಲಿದೆ. ಸರ್ಕಾರದ ವಿವಿಧ ಯೋಜನೆಗಳು, ರಸ್ತೆ, ವಿದ್ಯುತ್ ಕಂಬಗಳ ನಿರ್ಮಾಣದಿಂದ ಇವು ನಶಿಸಿ ಹೋಗುತ್ತಿದೆ. ಮನುಷ್ಯನ ಮೂಢ ನಂಬಿಕೆಗಳಿಂದ ಬಲಿಯಾಗುತ್ತಿದೆ. ಇವುಗಳ ರಕ್ತವನ್ನು ಮಾಟ ಮಂತ್ರಕ್ಕೆ ಬಳಸುವ ಮುನುಷ್ಯನ ಕೆಟ್ಟ ಆಲೋಚನೆಗಳಿಂದ, ವಿಕೃತ ಮನಸ್ಸನಿಂದ ಕಾಡುಪಾಪಗಳು ಅಳಿವಿನಂಚಿನಲ್ಲಿದೆ. ಇಪ್ಪತ್ತು ವರ್ಷಗಳ ಹಿಂದೆ ಕಾಡುಪಾಪಗಳು ಹೆಚ್ಚಾಗಿ ಜನರ ಕಣ್ಣಿಗೆ ಕಾಣ ಸಿಗುತ್ತಿದ್ದವು. ಇಂದು ಕಳ್ಳಬೇಟೆಯಿಂದ ಇತಿಹಾಸದ ಪುಟ ಸೇರುವ ಸ್ಥಿತಿಯಲ್ಲಿದೆ.
ಫೋಟೋ ಕೃಪೆ : yovizag
ಯೂ ಟ್ಯೂಬ್ ಚಾನಲ್‌ನಲ್ಲಿ “The cry of the paaapa [ಕಾಡು ಪಾಪದ ಕರೆ.]” ಎಂಬ ಚಿಕ್ಕ ಸಾಕ್ಷ್ಯ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದಾಗ ಕಾಡುಪಾಪಗಳ ಜೀವನ ನಮಗೆ ಕಣ್ಣೀರನ್ನು ತರಿಸುತ್ತದೆ. ಕಾಡುಪಾಪಗಳ ರಕ್ಷಣೆ ಬಗ್ಗೆ ಅರಣ್ಯ ಇಲಾಖೆ ಈಗಲೆ ಎಚ್ಚೆತ್ತುಕೊಳ್ಳಬೇಕಾಗಿದೆ. ಕರಡಿ, ಹುಲಿ, ಸಿಂಹ, ಚಿರತೆಗಳನ್ನಷ್ಟೆ ಉಳಿಸಲು ಹರಸಾಹಸ ಪಟ್ಟರೆ ಸಾಲದು. ಇಂತಹ ಎಷ್ಟೋ ಮುಗ್ಧ ಜೀವಿಗಳು ಇಂದು ನಾಶವಾಗುತ್ತಿವೆ. ಅವುಗಳನ್ನು ರಕ್ಷಿಸುವ ಹೊಣೆ ಹೊರಬೇಕಾಗಿದೆ. ಇದು ಬರಿ ಇಲಾಖೆಗೆ ಅಷ್ಟೆ ಸಂಬಂಧಪಟ್ಟ ಕೆಲಸವಲ್ಲಾ. ಮಾನವನು ಜವಬ್ದಾರನಾಗಬೇಕಾಗಿದೆ. ಮಾನವನ ವಿಕಾಸಕ್ಕೆ ಮಾದರಿಯಾದ ಜೀವಪ್ರಭೇದಗಳು ಕಾಡುಪಾಪಗಳು. ಮಾನವನು ಈ ಜೀವಿಗಳಿಗೆ ಋಣಿಯಾಗಿರಬೇಕೆ ಹೊರತು ಹಾನಿಯಾಗಿರಬಾರದು. ದಿನನಿತ್ಯದ ಜಂಜಾಟದಲ್ಲಿ ಅಪ್ಡೇಟ್ ಆಗುತ್ತಿರುವ ನಾವುಗಳು ಅಳವಿನಂಚಿನಲ್ಲಿರುವುದನ್ನು, ಮುಂದೆ ಅಳಿಯುವುದನ್ನು ತಡೆಯುವ ಸಾಮರ್ಥ್ಯ ಹೊಂದಿದ್ದೇವೆ. ಸರಿ ಪಡಿಸುವ ಬುದ್ಧೀ ನಮ್ಮಲ್ಲಿ ಖಂಡಿತ ಇದೆ. ಇದಕ್ಕೆ ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ. ಇಷ್ಟಪಟ್ಟು ಮನಸ್ಸು ಮಾಡಿದರೆ, ಜನರಲ್ಲಿ ಜಾಗೃತಿ ಮೂಡಿಸಿದರೆ ಇದೆಲ್ಲಾ ಖಂಡಿತ ಸಾಧ್ಯ. ಇಂದು ಬೋಶ್[BOSCH], ಟಾಟಾ[TATA], ಟೋಯೋಟಾ[TOYOTA], ಹೋಂಡಾ[HONDA] ದಂತಹ ದೊಡ್ಡ ದೊಡ್ಡ ಉತ್ಪಾದನಾ ಕಂಪನಿಗಳು ಪರಿಸರ ಸಂರಕ್ಷಣೆ ಹಾಗೂ ಅಳವಿನಂಚಿನಲ್ಲಿರುವ ಜೀವಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ನಾವು ಕೈ ಜೋಡಿಸೋಣಾ.
ಬೀದಿಗೆ ಬಂದು ಹೋರಾಟ ಮಾಡುವ ಅವಶ್ಯಕತೆಯಿಲ್ಲಾ. ನಮಗೆ ತಿಳಿದಿರುವ ಮಾಹಿತಿಯನ್ನು ಹೆಚ್ಚು ಹೆಚ್ಚು ಶೇರ್ ಮಾಡಿ ಜನರಿಗೆ ತಲುಪಿಸುವಂತೆ ಮಾಡೋಣಾ. ಅರಣ್ಯ ಇಲಾಖೆ ಎಚ್ಚೆತ್ತುಕೊಂಡು, ಇದರ ಬಗ್ಗೆ ಕಾಳಜಿ ವಹಿಸುವಂತೆ ಮಾಡೋಣಾ. ನಮ್ಮಿಂದ, ನಶಿಸುತ್ತಿರುವ ಒಂದು ಪ್ರಾಣಿ ಸಂಕುಲವಾದರೂ ಉಳಿದರೆ ಅದೇ ಸಂತೋಷ. ಪರಿಸರ ಹಾಗೂ ಜೀವಸಂಕುಲಗಳ ರಕ್ಷಣೆ ನಮ್ಮೆಲ್ಲರ ಹೊಣೆ.
- ಲೇಖನ್ ನಾಗರಾಜ್, ಹೊನ್ನಾವರ.