ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ಲೇಖಕರು, ಗೆಳೆಯರ ಮಾತಿಗೆ ಬದ್ಧವಾಗಿ ಒಂದು ಸ್ಕ್ರಿಪ್ಟ್ ಅನ್ನು ರೆಡಿ ಮಾಡುತ್ತಾರೆ. ಇವರು ಬರೆದ inding ಸೀತಾ ಕಥೆಯನ್ನು ಸಿನಿಮಾ ಮಾಡುವ ಆಲೋಚನೆ ಬರುತ್ತದೆ. ಆದರೆ,ಅದು ತಡವಾಗುತ್ತಿರುವ ಕಾರಣ ಆ ಕಥೆಗೆ ಕಾದಂಬರಿ ರೂಪವನ್ನು ನೀಡಿ ಈ ಪುಸ್ತಕವನ್ನು ಪ್ರಕಟಿಸಿ ನಮ್ಮ ಮುಂದಿರಿಸಿದ್ದಾರೆ. ಕೃತಿಯ ಕುರಿತು ರಮ್ಯಾ ರಾಜ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕದ ಹೆಸರು – Finding ಸೀತಾ
ಲೇಖಕರು – ಶಿವಾಗ್
ಪ್ರಕಾಶಕರು – ಪಿನಾಕಿ ಪುಸ್ತಕ ಬೆಂಗಳೂರು
ಮೊಬೈಲ್ ಸಂಖ್ಯೆ – 9739998917
ಪ್ರಥಮ ಮುದ್ರಣ – 2024
ಪುಟಗಳ ಸಂಖ್ಯೆ – 120
ಬೆಲೆ – 150
****
ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವವಿರುವ ಲೇಖಕರು, ಗೆಳೆಯರ ಮಾತಿಗೆ ಬದ್ಧವಾಗಿ ಒಂದು ಸ್ಕ್ರಿಪ್ಟ್ ಅನ್ನು ರೆಡಿ ಮಾಡುತ್ತಾರೆ. ಇವರು ಬರೆದ ಈ ಕಥೆಯನ್ನು ಸಿನಿಮಾ ಮಾಡುವ ಆಲೋಚನೆ ಬರುತ್ತದೆ. ಆದರೆ,ಅದು ತಡವಾಗುತ್ತಿರುವ ಕಾರಣ ಆ ಕಥೆಗೆ ಕಾದಂಬರಿ ರೂಪವನ್ನು ನೀಡಿ ಈ ಪುಸ್ತಕವನ್ನು ಪ್ರಕಟಿಸಿ ನಮ್ಮ ಮುಂದಿರಿಸಿದ್ದಾರೆ.
ಈ ಕಾದಂಬರಿಯು ಶುರುವಿನಲ್ಲಿ ಅಷ್ಟಾಗಿ ಹಿಡಿಸಿರಲಿಲ್ಲ. ಅಯ್ಯೋ! ಇದೇನಪ್ಪ ಹೀಗಿದೆ ಈ ಪುಸ್ತಕ ಅನ್ನಿಸಿದುಂಟು. ಮಧ್ಯೆ, ಮಧ್ಯೆಯಲ್ಲಿ ಯಾವ್ಯಾವ್ದೋ ವಿಷಯವನ್ನು ತುರುಕಿದ್ದಾರಲ್ಲ ಅಂದುಕೊಂಡೆ ಓದ ತೊಡಗಿದೆ. ಆದರೆ ಯಾವಾಗ ಸೀತಾ ಕಾಣೆಯಾದಳೋ ಅಲ್ಲಿಂದ ಗೊತ್ತಾಯ್ತು ನೋಡಿ ಈ ಕಾದಂಬರಿಯ ಗತ್ತು ಗಮ್ಮತ್ತು. ಎಷ್ಟು ಒಳ್ಳೆಯ ಕಾದಂಬರಿಯನ್ನು ಬರೆದಿದ್ದಾರಲ್ಲ, ನಾನೇ ತಪ್ಪು ನಿರ್ಧಾರಕ್ಕೆ ಬಂದಿದ್ದೆನಲ್ಲ ಅನ್ನಿಸಿಬಿಟ್ಟಿತು.

ಅಂದು ಸೀತಾಳ ತಂದೆ ನೇಮಿಸಿದ್ದ ಕಾರಿನ ಡ್ರೈವರ್ , ಅವಳನ್ನು ಟ್ಯೂಷನ್ ನಿಂದ ಮನೆಗೆ ಕರೆ ತರಲು ಹೋಗಿರುತ್ತಾನೆ.ಅಲ್ಲಿ ನೋಡಿದರೆ ಸೀತಾ ಇಂದು ಟ್ಯೂಷನ್ ಗೆ ಬಂದೇ ಇಲ್ಲ ಎಂದು ಹೇಳುತ್ತಾರೆ ಅವಳ ಟೀಚರ್. ಈ ವಿಷಯ ಗೊತ್ತಾದೊಡನೆ ಎಲ್ಲಾ ಕಡೆ ವಿಚಾರಿಸುತ್ತಾರೆ ಎಲ್ಲಿಯೂ ಸಿಗುವುದಿಲ್ಲ. ಪೊಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ನೀಡಿ ಪ್ರಥಮ ಹಂತದ ವಿಚಾರಣೆ ನಡೆಸಿದರೂ ಸಹ ಉಪಯುಕ್ತ ಫಲಿತಾಂಶವೇನೂ ದೊರೆಯುವುದಿಲ್ಲ. ಆಗ ಸೀತಾಳ ತಂದೆ ಕೃಷ್ಣಸ್ವಾಮಿ ಅವರೇ ಪತ್ತೇದಾರಿ ಕೆಲಸವನ್ನು ಶುರು ಮಾಡುತ್ತಾರೆ.
ಅವರು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅನುಮಾನ ಪಟ್ಟಾಗಲು .. ಓ!! ಇನ್ನೇನು ಸಿಕ್ಕೇ ಬಿಟ್ಟ, ಸೀತಾಳನ್ನು ಕಿಡ್ನ್ಯಾಪ್ ಮಾಡಿರುವನು ಇವನೇ ಇರಬೇಕು ಅನ್ನಿಸುವಷ್ಟು ರೋಚಕವಾಗಿ ಈ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ.

ಮಗಳ ಶೋಧನೆಗಾಗಿ ಕೃಷ್ಣಸ್ವಾಮಿ ಅವರು ಮಾಡುವ ಕಸರತ್ತುಗಳನ್ನು ಓದುವಾಗ, ಓದುಗರಾದ ನಮಗೆ ಒಂದಷ್ಟು ಮಾಹಿತಿಗಳು ದೊರೆಯುತ್ತಾ ಹೋಗುತ್ತವೆ.ಅದು ಕೂಡ ಈ ಕಾದಂಬರಿಯ ಬಹುಮುಖ್ಯ ಅಂಶವಾಗಿದೆ. ಹೀಗೆ ಸೀತಾ ಹುಡುಕಾಟದಲ್ಲಿದ್ದ ಕೃಷ್ಣಸ್ವಾಮಿ ಅವರು ಅನಾರೋಗ್ಯ ಸಮಸ್ಯೆಯಿಂದಾಗಿ ಕೋಮಾಗೆ ಹೋಗಿ ಬಿಡುತ್ತಾರೆ. ಈ ವಿಷಯವನ್ನು ಓದುವ ನಮಗೆ ಅಯ್ಯೋ !!!ಈಗಾಗಬಾರದಾಗಿತ್ತು… ಮುಂದೇನು?? ಎಂಬ ಕುತೂಹಲಕಾರಿ ಅಂಶ ಕಾಡತೊಡಗುತ್ತದೆ.
ಆಗ ಮತ್ತೆ ಅಕಾಡಕ್ಕೆ ಇಳಿಯುವವರೇ ಎಸ್. ಐ ವಿಶಾಲ್ ಕುಮಾರ್. ಇವರ ಜೊತೆಗೆ ಬೆನ್ನೆಲುಬಾಗಿ ನಿಂತವರು ಅವರ ತಂದೆ ವೆಂಕೋಬರಾವ್ . ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿಯರ ಪಾತ್ರ ಹೇಗಿರಬೇಕು ಎಂಬುದನ್ನು ಕೂಡ ವೆಂಕೋಬ್ ರಾವ್ ಮುಖಾಂತರ ತಿಳಿಸಿಕೊಟ್ಟಿದ್ದಾರೆ ಲೇಖಕರು. ಈ ಒಂದು ಅಂಶವು ಬಹಳ ಇಷ್ಟವಾಗುತ್ತದೆ.
‘ಥರ್ಡ್ ಡಿಗ್ರಿ ಬರ್ನ್ಸ್ ‘ ಬಗ್ಗೆ , ಲ್ಯೂಮಿನಲ್ ಟೆಸ್ಟ್ ಬಗ್ಗೆ ತಿಳುವಳಿಕೆ ನೀಡಿರುವುದು ಹಾಗೂ ಫೋರೆನ್ಸಿಕ್ ಇಲಾಖೆಯಲ್ಲಿ ಇರುವವರು ಎಷ್ಟು ಎಚ್ಚರದಿಂದ ಇರಬೇಕು ಎಂಬೆಲ್ಲಾ ಉಪಯುಕ್ತ ಮಾಹಿತಿಗಳನ್ನು ಈ ಪುಸ್ತಕದಿಂದ ನಾವೆಲ್ಲ ತಿಳಿಯಬಹುದಾಗಿದೆ. ಈ ಕಾದಂಬರಿಯು ಪ್ರತಿಯೊಂದು ಘಟ್ಟದಲ್ಲೂ ಕುತೂಹಲವನ್ನು ಕಾಯ್ದುಕೊಂಡೆ ಸಾಗುತ್ತದೆ.
ಸೀತಾ ಹೇಗೆ ಸಿಗಬಹುದು?? ಎಲ್ಲಿ ಸಿಗಬಹುದು?? ಇದಕ್ಕೆ ಕಾರಣರ್ಯಾರು?? ಎಂಬ ಪ್ರಶ್ನೆಗಳನ್ನೊತ್ತೆ ಪುಸ್ತಕವನ್ನು ಬಿಡದೆ ಓದುವ ನಮಗೆ ಕೊನೆಯಲ್ಲಿ to be continued… ಎಂಬ ಸಾಲು ಬೇಸರವನ್ನುಂಟು ಮಾಡುತ್ತದೆ. ಈ ಪುಸ್ತಕದಲ್ಲೇ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು ಅನ್ನುವಷ್ಟು ಈ ಕಾದಂಬರಿ ಆಪ್ತವಾಗಿಬಿಡುತ್ತದೆ.ರಮ್ಯ ರಾಜ್
ಒಟ್ಟಿನಲ್ಲಿ ಎಲ್ಲರೂ ಇಷ್ಟಪಟ್ಟು ಓದುವ ಪುಸ್ತಕ ಇದಾಗಿದೆ.
- ರಮ್ಯಾ ರಾಜ್
