ಎಸೆಸೆಲ್ಸಿ ಒಂದಿಷ್ಟು ನೆನಪು – ವಸಂತ ಗಣೇಶ್ಬೇರೆ ಶಾಲೆಯ ವಿದ್ಯಾರ್ಥಿಗಳು ನಮ್ಮಿಬ್ಬರನ್ನು ಹೇಗೆ ನೋಡುತ್ತಿದ್ದರು ಎಂದರೆ ನಾವೇ ಏನೋ ಮಾಡಬಾರದ ಕೆಲಸ ಮಾಡುತ್ತಿದ್ದೇವೆ ಅನ್ನುವಂತೆ ನೋಡುತ್ತಿದ್ದರು ಹಾಗೂ ದ್ವೇಷಿಸಲು ಆರಂಭಿಸಿದ್ದರು. ಮುಂದೇನಾಯಿತು ಲೇಖಕಿ ವಸಂತ ಗಣೇಶ ಅವರ ಎಸೆಸೆಲ್ಸಿ ಫಲಿತಾಂಶ, ಮುಂದೆ ಓದಿ…

ಈ ಬಾರಿ Sslc ನಲ್ಲಿ 145 ಮಕ್ಕಳು 625ಕ್ಕೆ 625 ಅಂಕಗಳನ್ನು ತೆಗೆದುಕೊಂಡ ವಿಷಯ ಎಲ್ಲೆಡೆ ಮಾತಿಗೆ ಗ್ರಾಸವಾಗಿದೆ. ಹೇಗೆ? ಎನ್ನುವುದು ಕೆಲವರ ಪ್ರಶ್ನೆ. ಈಗಿನ ಮಕ್ಕಳಿಗೆ ವಿದ್ಯೆಯ ಅವಶ್ಯಕತೆ ಚೆನ್ನಾಗಿ ಅರ್ಥವಾಗಿದೆ ಮತ್ತು ಅದಕ್ಕೆ ತಕ್ಕಂತೆ ಪೋಷಕರ ಬೆಂಬಲ ಹಾಗೂ ಗುರುಗಳಿಂದ ತರಬೇತಿ ಎರಡೂ ಸಿಗುವುದರಿಂದ ಈಗ out of out ಮಾರ್ಕ್ಸ್ ತೆಗೆಯುವುದು ಬುದ್ದಿವಂತ ವಿದ್ಯಾರ್ಥಿಗಳಿಗೆ ಕಷ್ಟವೇನಲ್ಲ.

ಇದೆಲ್ಲ ನೋಡುವಾಗ ನಾನು Sslc ಪರೀಕ್ಷೆ ಬರೆದ ಸಮಯ ನೆನಪಾಯಿತು. ಪರೀಕ್ಷೆ ಬರೆದದ್ದು 1988 ರಲ್ಲಿ. ಆಗ ನಾವು ಓದುತ್ತಿದ್ದ ಶಾಲೆಯಲ್ಲಿ Sslc ಪರೀಕ್ಷಾ ಸೆಂಟರ್ ಇರಲಿಲ್ಲ. ಅಲ್ಲಿಂದ ಹತ್ತು ಕಿಲೋಮೀಟರ್ ದೂರದ ಊರಿಗೆ ಹೋಗಬೇಕಿತ್ತು. ಆ ಸೆಂಟರ್ ಆದರೂ ನಕಲು ಮಾಡಲು ಉತ್ತಮವಾದದ್ದು ಎಂದು ಕಾಪಿ ಸೆಂಟರ್ ಎಂದೇ ಹೆಸರಾಗಿತ್ತು. ಪರೀಕ್ಷಾ ದಿನಗಳೂ ಬಂತು. ಎಲ್ಲರನ್ನೂ ಶಾಲೆಯ ಗುರುಗಳೇ ಕರೆದುಕೊಂಡು ಪರೀಕ್ಷಾ ಕೇಂದ್ರ ಇದ್ದ ಊರಿಗೆ ಬಂದರು.

ಫೋಟೋ ಕೃಪೆ : deccanherald

ಮೊದಲನೆಯ ದಿನ ಪರೀಕ್ಷಾ ಕೇಂದ್ರಕ್ಕೆ ಹೋಗಿ ನಮ್ಮ ನಮ್ಮ ನಂಬರ್ ಹುಡುಕಿ ಪರೀಕ್ಷೆ ಬರೆಯಲು ಕುಳಿತಿದ್ದಾಯಿತು. ಪ್ರಶ್ನೆ ಪತ್ರಿಕೆ ಉತ್ತರ ಪತ್ರಿಕೆ ಎಲ್ಲ ಕೊಟ್ಟ ಕೊಠಡಿಯ ಮೇಲ್ವಿಚಾರಕರು ಅತ್ತಿತ್ತ ಓಡಾಡುತ್ತಾ ಇದ್ದರು. ಒಂದರ್ಧ ಘಂಟೆ ಕಳೆಯುವ ವೇಳೆಗೆ ಅಲ್ಲಲ್ಲಿ ಗುಸು ಗುಸು ಪಿಸು ಪಿಸು ಶುರುವಾಗಿತ್ತು. ಯಾರನ್ನೋ ಉತ್ತರ ಕೇಳುವವರು ಕೆಲವರಾದರೆ ಸಣ್ಣ ಸಣ್ಣ ಚೀಟಿಗಳನ್ನು ತೆಗೆದು ಬರೆಯುತ್ತಿದ್ದವರು ಕೆಲವರು. ಇದೆಲ್ಲ ನೋಡುತ್ತಿದ್ದರೂ ಯಾವುದೂ ಸಂಬಂಧ ಇಲ್ಲದಂತೆ ಪರೀಕ್ಷೆ ಬರೆಯುತ್ತಿದ್ದ ಕೆಲ ವಿದ್ಯಾರ್ಥಿಗಳು. ಕಾಪಿ ಮಾಡುತ್ತಿರುವುದು ತಿಳಿದರೂ ಕಂಡೂ ಕಾಣದಂತೆ ಓಡಾಡುತ್ತಿದ್ದ ಮೇಲ್ವಿಚಾರಕರು.

ನನ್ನದೋ ತಪ್ಪು ಎನಿಸಿದ್ದನ್ನು ಖಂಡಿಸುವ ಗುಣ, ನೇರ ಮಾತು, ಆಗೆಲ್ಲ ಸಿಟ್ಟೂ ಜಾಸ್ತಿನೇ ಇತ್ತು. ( ಈಗ ಜೀವನ ಸಿಟ್ಟು ಕಡಿಮೆ ಮಾಡಿಸಿದೆ). ಇದನ್ನೆಲ್ಲ ನೋಡುತ್ತ ಸುಮ್ಮನೇ ಕೂರುವುದು ನನ್ನಿಂದ ಆಗಲಿಲ್ಲ. ಅಲ್ಲಿಯೇ ಓಡಾಡುತ್ತಿದ್ದ ಮೇಲ್ವಿಚಾರಕರಿಗೆ ಇದೇನು ಸರ್ ಹೀಗೆಲ್ಲ ಮಾಡುತ್ತಾ ಇದ್ದರೂ ನೀವು ಸುಮ್ಮನೆ ಇದ್ದೀರಾ? ಎಂದಿದ್ದೆ. ಅವರೂ ಆಗಷ್ಟೇ ಅದೆಲ್ಲ ಕಂಡಂತೆ ನಟಿಸಿ ಒಂದೆರಡು ಮಾತು ಹೇಳಿ ಸುಮ್ಮನಾದರು. ಅಷ್ಟಕ್ಕೇ ಯಾರು ಸುಮ್ಮನಾದರೋ ಬಿಟ್ಟರೋ ಗೊತ್ತಿಲ್ಲ. ನಾನು ಮೇಲ್ವಿಚಾರಕರಿಗೆ ತಿಳಿಸಿದ್ದೇನೆ, ಅವರು ನೋಡಿಕೊಳ್ಳುತ್ತಾರೆ ಎನ್ನುವ ನೆಮ್ಮದಿಯಲ್ಲಿ ಪರೀಕ್ಷೆ ಬರೆಯುವುದನ್ನು ಮುಂದುವರಿಸಿದೆ.

 

ಫೋಟೋ ಕೃಪೆ : educationworld

ಇದೇ ರೀತಿ ಪಕ್ಕದ ಕೊಠಡಿಗಳಲ್ಲು ನಡೆದಿದೆ. ಅಲ್ಲಿದ್ದ ನಮ್ಮ ಶಾಲೆಯ ಮತ್ತೊಬ್ಬ ಹುಡುಗನೂ ನನ್ನಂತೆಯೇ ಮಾತನಾಡಿದ್ದಾನೆ.

ನಾವಿಬ್ಬರೂ ಹೀಗೆ ಮಾತನಾಡಿದ್ದು ಅಂದೇ ಪರೀಕ್ಷಾ ಕೇಂದ್ರದಲ್ಲಿ ಹೆಚ್ಚು ಕಡಿಮೆ ಎಲ್ಲರಿಗೂ ತಿಳಿಯುವಂತೆ ಆಗಿತ್ತು. ಅಂದೇ ನಮ್ಮ ಶಾಲೆಯ ಗುರುಗಳು ನಮ್ಮಿಬ್ಬರನ್ನು ಕರೆದು ಇದೆಲ್ಲ ನಮ್ಮ ಕೈ ಮೀರಿದ್ದು, ನಾವು ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ನೀವು ಪರೀಕ್ಷೆಗೆ ತೊಂದರೆ ಮಾಡಿಕೊಳ್ಳಬೇಡಿ. ಸಮಾಧಾನ ಚಿತ್ತದಿಂದ ಓದಿ ಪರೀಕ್ಷೆ ಬರೆಯಿರಿ ಎಂದು ಒಂದಿಷ್ಟು ಬುದ್ದಿ ಹೇಳಿದ್ದರು.
ಇದು ಅಂದಿಗೆ ನಿಲ್ಲಲಿಲ್ಲ. ಪರೀಕ್ಷೆ ನಡೆಯುವಷ್ಟು ದಿನವೂ ಮುಂದುವರೆದೇ ಇತ್ತು. ನಾವು ಪ್ರತಿ ದಿನವೂ ಹೇಳುವುದು, ಒಂದೆರಡು ಬಾರಿ ಸಿಟ್ಟು ಅಸಹನೆಯಿಂದ ಮೇಲಿನವರೆಗೆ ತಿಳಿಸುವೆವು ಎಂದೂ ಕೂಗಾಡಿದ್ದು ಇತ್ತು. ಆದರೂ ಇದೆಲ್ಲ ಪ್ರತೀ ವರ್ಷ ನಡೆಯುತ್ತಿದ್ದರಿಂದ ಅಲ್ಲಿನ ಮೇಲ್ವಿಚಾರಕರು ತಲೆ ಕೆಡಿಸಿಕೊಳ್ಳಲಿಲ್ಲ. ಬದಲಿಗೆ ನಿಮ್ಮಷ್ಟಕ್ಕೆ ನೀವು ಬರೆಯಿರಿ, ಬೇರೆಯವರ ಉಸಾಬರಿ ನಿಮಗೆ ಬೇಡ ಎನ್ನುವ ಅರ್ಥದ ಮಾತುಗಳನ್ನು ಆಡಿದ್ದರು.ಇಷ್ಟೆಲ್ಲ ಅದ ಮೇಲೆ ನಮ್ಮಿಬ್ಬರನ್ನು ಬೇರೆ ಶಾಲೆಯ ವಿದ್ಯಾರ್ಥಿಗಳು ಅದರಲ್ಲೂ ಕಾಪಿ ಮಾಡುತ್ತಿದ್ದವರು ಹೇಗೆ ನೋಡುತ್ತಿದ್ದರು ಎಂದರೆ ನಾವೇ ಏನೋ ಮಾಡಬಾರದ ಕೆಲಸ ಮಾಡುತ್ತಿದ್ದೇವೆ ಅನ್ನುವಂತೆ ನೋಡುತ್ತಿದ್ದರು ಹಾಗೂ ದ್ವೇಷಿಸಲು ಆರಂಭಿಸಿದ್ದರು. ಕೊನೆ ಕೊನೆಗೆ ಇದು ಎಲ್ಲಿಗೆ ಮುಟ್ಟಿತ್ತು ಎಂದರೆ ನಮ್ಮಿಬ್ಬರಿಗೂ ಅಪ್ಪ, ಅಮ್ಮ ಬೆಳಗ್ಗೆ ಹೊರಡುವಾಗ ಹುಷಾರು, ಆದಷ್ಟೂ ಒಟ್ಟಿಗೆ ಹೋಗಿ ಬನ್ನಿ (ನಾವಿಬ್ಬರೂ ನಮ್ಮ ಪರಿಚಯದವರು ಒಬ್ಬರ ಮನೆಯಲ್ಲಿಯೇ ಇದ್ದೆವು) ಯಾರಾದರೂ ನಿಮ್ಮಿಬ್ಬರಿಗೂ ಹೊಡೆದಾರು, ಯಾರು ಏನಾದ್ರೂ ಮಾಡಿಕೊಳ್ಳಲಿ ನೀವು ಸುಮ್ಮನೆ ಇದ್ದು ಬಿಡಿ ಎಂದು ಹೇಳಿ ಪರೀಕ್ಷೆಗೆ ಕಳುಹಿಸುತ್ತಿದ್ದರು.

ಇದರಿಂದ ಪರೀಕ್ಷಾ ಕೇಂದ್ರದಲ್ಲಿ ಏನಾದರೂ ಬದಲಾವಣೆ ಆಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮಿಬ್ಬರಿಗೂ ಪರೀಕ್ಷೆ ಬರೆಯುವುದರಲ್ಲಿ ಮನಸ್ಸು ನಿಲ್ಲದೆ ನಾವು ನಿರೀಕ್ಷಿಸಿದಷ್ಟು ಅಂಕಗಳೂ ಬರಲಿಲ್ಲ, ಶಾಲೆಯ ಗುರುಗಳು ನಮ್ಮಿಂದ ನಿರೀಕ್ಷಿಸುತ್ತಿದ್ದ ಫಲಿತಾಂಶ ಶಾಲೆಗೆ ತಂದುಕೊಡುವಲ್ಲಿ ಸೋತೆವು ಎನ್ನುವುದು ಮಾತ್ರ ಸತ್ಯ.

ಈಗ ಅವನು ಶಿವಮೊಗ್ಗದಲ್ಲಿ ಪೇಪರ್ ಒಂದರ ಸಂಪಾದಕನಾಗಿದ್ದಾನೆ. ಕಳೆದ ತಿಂಗಳು ಯಾವುದೋ ಕಾರಣಕ್ಕೆ ನಾವು ಶಿವಮೊಗ್ಗಕ್ಕೆ ಹೋಗಿದ್ದಾಗ ಅವನನ್ನು ಭೇಟಿ ಆದಾಗ ಇದನ್ನೆಲ್ಲ ಜ್ಞಾಪಿಸಿಕೊಂಡೆವು.


  • ವಸಂತ ಗಣೇಶ್ (ಸಾಹಿತಿಗಳು, ಲೇಖಕರು,ಕವಿಯತ್ರಿ), ಬೆಂಗಳೂರು 

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW