6
ಮೋಡಗಳು ಈಗ ಇನ್ನೂ ಗಾಢವಾಗಿದೆ…ಚಂದ್ರನೆಷ್ಟೆ ತಿಣುಕಿದರೂ ಕಾಣನು…ಕವಿ ಬೆಂಶ್ರೀ ರವೀಂದ್ರ ಅವರು ಬರೆದ ಕವಿತೆಯ ಸುಂದರ ಸಾಲುಗಳು ಓದುಗರ ಮುಂದಿದೆ, ಮುಂದೆ ಓದಿ…
ಮರಳಿ ಬಂದಿದೆ ಹುಣ್ಣಿಮೆ
ಇಂದು ಬುದ್ದಪೂರ್ಣಿಮೆ
ಅಕಾಲವೃಷ್ಟಿಯ ಕಾಳಮೇಘಗಳು ಅಡ್ಡಬಂದಿಹುದು ಗೌತಮ
ಅವುಗಳನು ತಿರಿದು ಚೆಲ್ಲುವೆಯಾ
ಬೆಳದಿಂಗಳ ಚಂದ್ರಮ
ಪ್ರೇಮಿಗಳಿನ್ನೂ ಲಲ್ಲೆಗರೆಯಬೇಕಿದೆ
ದೇವತೆಗಳಿಗೆ ಸೋಮರಸ ಗೌತಮ
ಬುಡ್ಡಿದೀಪ ಎಣ್ಣೆಯಿಲ್ಲದೆ ನಂದಿದೆ
ಕಾನನದಲಿ ಕತ್ತಲಾವರಿಸಿದೆ ಚಂದ್ರಮ
ಹುಡುಕು ಎಂದಷ್ಟೆ ಹೇಳಿ
ಪ್ರಶ್ನೆಗಳಿಗೆ ನಿರುತ್ತರ ಗೌತಮ
ಧ್ಯಾನಿಸೆಂದು ಮೌನಕ್ಕೆ ಜಾರಿ
ಮುರಿದೆಯೇನು ತರತಮ
ಕಾಡಹಾದಿಯ ಹೆಜ್ಜೆಹೆಜ್ಜೆಗೂ
ಅಂಗುಲಿಮಾಲರು; ಅಂಗುಲಿಯೇಕೆ
ಬುರುಡೆಯನಾಡಿ ಬುರುಡೆಯೆತ್ತುವ
ಬುರುಡೆಮಾಲರಿಲ್ಲಿ ಗೌತಮ
ಅಂದೂ ಇದ್ದರು ಮುಂದೂ ಇರುತ್ತಾರೆ
ನರರಕ್ತ ಬಸಿವ ಹಪಾಹಪಿಗಳು
ಅವರ ಬಳಿ ಎಲ್ಲಕೂ ಉತ್ತರವಿದೆ
ನಿನ್ನ ಹಾದಿ ಬಲು ದೂರವಿದೆ
ಮೋಡಗಳು ಈಗ ಇನ್ನೂ ಗಾಢವಾಗಿದೆ
ಚಂದ್ರನೆಷ್ಟೆ ತಿಣುಕಿದರೂ ಕಾಣನು
ಮಳೆ ರಭಸದಲಿ ಬರಲಿದೆ
ನದಿಯಲ್ಲಿ ಕೆನ್ನೀರು ಅಬ್ಬರಿಸಲಿದೆ
ಮರಳಿ ಬಂದಿದೆ ಹುಣ್ಣಿಮೆ
ಇಂದು ಬುದ್ದಪೂರ್ಣಿಮೆ
ಕಾಳಮೇಘಗಳು ಚಂದ್ರನನ್ನು
ಕವಿಚಿವೆ ಇಂದವನು ಕಾಣುವುದಿಲ್ಲ.
ಮುಂದೆ…… ಗೊತ್ತಿಲ್ಲ.
- ಬೆಂಶ್ರೀ ರವೀಂದ್ರ (ಹಿರಿಯ ಸಾಹಿತಿಗಳು, ಕವಿ, ಲೇಖಕರು, ಚಿಂತಕರು), ಬೆಂಗಳೂರು