‘ತಲೆದಂಡ’ ನೋಡಿದ್ರಾ? – ಶಾಲಿನಿ ಹೂಲಿ ಪ್ರದೀಪ್ಸಂಚಾರಿ ವಿಜಯ ಅವರ ‘ತಲೆದಂಡ’ ಸಿನಿಮಾ ನೋಡಿದಾಗ ಕೇವಲ ವ್ಯಕ್ತಿಯನ್ನಷ್ಟೇ ಕಳೆದುಕೊಂಡಿಲ್ಲ, ದೊಡ್ಡ ಕಲಾವಿದನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿತು ಎನ್ನುವ ನೋವು ಉಳಿದುಕೊಳ್ಳುತ್ತದೆ. ಇದ್ದಾಗ ಕಲಾವಿದನ ಕಲೆಗೆ ಬೆಲೆ ಕೊಟ್ಟರೆ ಕನ್ನಡ ಸಿನಿಮಾ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ ಎನ್ನುವುದು ನನ್ನ ಅನಿಸಿಕೆ, ಮುಂದೆ ಓದಿ…

ಶಾಲೆಯಲ್ಲಿ ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಎಂದು ಮೂರು ಕಾಲದ ಬಗ್ಗೆ ಶಿಕ್ಷಕರು ಹೇಳಿಕೊಟ್ಟಿದ್ದರು. ಅದರಲ್ಲಿ ಬೇಸಿಗೆಕಾಲ, ಏಪ್ರಿಲ್- ಮೇ ತಿಂಗಳೆಂದರೆ ಮಕ್ಕಳಿಗೆ ಬಲು ಪ್ರೀತಿ. ಪುಸ್ತಕವನ್ನು ಎಲ್ಲೋ ಮೂಲೆಯಲ್ಲಿ ಬಿಸಾಕಿದರೆ ಮುಗಿತು ಮತ್ತೆ ನೋಡುತ್ತಿದ್ದದ್ದು ಶಾಲೆ ತೆರೆದಾಗಲೇ. ಆ ರಣ ರಣ ಬಿಸಿಲಿನಲ್ಲಿ ಬೀದಿ ಬೀದಿ ಸುತ್ತೊಂದು ಆನಂದ ನೀಡುತ್ತಿತ್ತು. ಅದು ನಮ್ಮ ಬಾಲ್ಯ.

ಮೊನ್ನೆ ಧಾರಾಕಾರವಾಗಿ ಬೀಳುತ್ತಿದ್ದ ಮಳೆಯನ್ನು ಕಿಟಕಿಯಲ್ಲಿ ನೋಡುವಾಗ ನಮ್ಮ ಬೇಸಿಗೆ ರಜಾ ದಿನಗಳು ನೆನಪಾಯಿತು. ಇಂದಿನ ಮಕ್ಕಳಿಗೆ ಬೇಸಿಗೆ, ಮಳೆಗಾಲ  ಎರಡು ಒಂದೇ ಆಗಿಹೋಗಿದೆ.  ಮನೆಯಿಂದ ಹೊರಗೂ ಹೋಗಲಾಗದೆ, ನಾಲ್ಕು ಗೋಡೆಗಳ ಮಧ್ಯೆ ತಮ್ಮ ರಜೆ ಕಳೆದರಲ್ಲ ಎಂದು ನನಗೆ ಬೇಸರವಾಯಿತು. ಆಧುನೀಕರಣವಾದಂತೆ ಮರಗಳನ್ನು ಕಡೆಯುತ್ತಾ ಹೋದ ಮನುಷ್ಯ, ಇಂದು ಪ್ರಕೃತಿಯ ವಿಕೋಪಕ್ಕೆ ತುತ್ತಾಗಿದ್ದಾನೆ. ಯಾವಾಗೆಂದರೆ ಅವಾಗ ಮಳೆ, ಬಿಸಿಲು ಶುರುವಾಗಿ ಹೋಗಿದೆ.

ಇದರ ಮಧ್ಯೆ ಈ ಸನ್ನಿವೇಶಕ್ಕೆ ತಕ್ಕಂತೆ ಸಿನಿಮಾಮೊಂದನ್ನು ನೋಡಿದೆ. ಅದರ ಹೆಸರು “ತಲೆದಂಡ”. ಸಂಚಾರಿ ವಿಜಯ ಅಭಿನಯದ ಚಿತ್ರ.

ಸಂಚಾರಿ ವಿಜಯ ಅವರ ನಟನೆ ಬಗ್ಗೆ ಕೊನೆಯಲ್ಲಿ ಹೇಳಿದರೆ ಈ ಬರಹಕ್ಕೆ ಅರ್ಥವಿಲ್ಲ. ಏಕೆಂದರೆ ಕತೆಯ ಮುಖ್ಯ ಆಕರ್ಷಣೆಯೇ ಅವರ ನಟನೆ. ಎಂತಹ ಅದ್ಬುತ ಕಲಾವಿದ. ಸಿನಿಮಾ ಉದ್ದಕ್ಕೂ ಇದು ಸಂಚಾರಿ ವಿಜಯಾ???… ಇದು ಸಂಚಾರಿ ವಿಜಯಾ???… ಎನ್ನುವ ಪದೇ ಪದೇ ಪ್ರಶ್ನೆಗಳು ಪ್ರೇಕ್ಷಕನಲ್ಲಿ ಮೂಡುವಂತೆ ಮಾಡುತ್ತದೆ.

ಒಬ್ಬ ಬುದ್ದಿಮಾಂದ್ಯ ಹುಡುಗ ಗಿಡ, ಮರದ ಮೇಲಿಟ್ಟಿರುವ ಪ್ರೀತಿಯ ಸುತ್ತ ಹೆಣೆದ ನೈಜ್ಯ ಘಟನೆಯಾಧರಿತ ಈ ‘ತಲೆದಂಡ’…ಆ ಹುಡುಗನ ಹೆಸರು ಕುನ್ನೆ ಗೌಡ.

ಸಿನಿಮಾ ಶುರುವಾದಾಗ ಆಸ್ಪತ್ರೆಯಲ್ಲಿ ಕುನ್ನೆ ಗೌಡನ ತಾಯಿಗೆ ಮಾನಸಿಕ ವೈದ್ಯರ ಗುಂಪೊಂದು ಪ್ರಶ್ನೆ ಕೇಳುತ್ತಾರೆ. ‘ನಿಮ್ಮ ಮಗ ಹುಟ್ಟಿದಾಗಿನಿಂದಲೂ ಪೆದ್ದನಾ?’ ಎಂದಾಗ ಆ ತಾಯಿ ನೀಡುವ ಉತ್ತರ  ‘ಹುಟ್ಟಿದ ಮಕ್ಕಳೆಲ್ಲ ಪೆದ್ದರಾ…? ನನ್ನ ಮಗಿಗೆ ದನಾ ಬಡಿದಂಗೆ ಬಡಿದ್ರಲ್ಲಾ ಆ ಪೊಲೀಸ್ ಪ್ಪ ಅವರು ಬುದ್ದಿವಂತರಾ???… ಎಂದಾಗ ಅಲ್ಲಿ ನಿಶಬ್ದ ವಾತಾವರಣ ಕವಿಯುತ್ತದೆ.

ಫೋಟೋ ಕೃಪೆ : zeenews.india

ಕಾಡುಗಳ್ಳರು ಮರ ಕಡೆಯಲು ಬಂದಾಗ ಇದೇ ಕುನ್ನೆ ಗೌಡ ಅವರಿಗೆ ದುಃಸ್ವಪ್ನವಾಗಿ ನಿಲ್ಲುತ್ತಾನೆ. ಮರಕ್ಕೆ ಕೊಡಲಿ ಬಿದ್ದಾಗ ಅದನ್ನು ನೋಡಿ, ಅದಕ್ಕೆ ಅರಿಶಿನ ಹಚ್ಚಿ ಬಿಕ್ಕಿ ಬಿಕ್ಕಿ ಅಳುವ ದೃಶ್ಯ ಎಲ್ಲರ ಕಣ್ಣಲ್ಲೂ ನಿರೀಳಿಸುತ್ತದೆ.

ಊರಿಗೆ ರಸ್ತೆ ಮಾಡಬೇಕೆಂದು ಅಧಿಕಾರಿಗಳು ಸರ್ವೆ ಮಾಡಲು ಬರುತ್ತಾರೆ. ಆಗ ರಸ್ತೆಗೆ ಅಡ್ಡ ಬರುವ ಮರಗಳನ್ನು ಕಡೆಯಲು ಸೂಚಿಸಿದಾಗ ಇದೆ ಹುಡುಗ ಅಧಿಕಾರಿಗೆ ಬುದ್ದಿ ಹೇಳಲು ಮುಂದಾಗುತ್ತಾನೆ. ‘ಮರ ಕಡದ್ರೆ ಮಳೆ ಬರೋಲ್ಲ… ಕುಡಿಯೋಕೆ ನೀರಿರೋಲ್ಲ…’ ಅಂದಾಗ  ಇಲ್ಲಿ ಬುದ್ದಿಮಾಂದ್ಯಾರು ಯಾರು ?. ಪರಿಸರದ ಬಗ್ಗೆ ಕಾಳಜಿ ತೋರಿಸುವ ಕುನ್ನೇಗೌಡನಾ? ಅಥವಾ ಬುದ್ದಿಯಿದ್ದು, ಮರವನ್ನು ನಿರ್ದಾಕ್ಷಿಣ್ಯವಾಗಿ ಕಡೆಯುವಾ ಆ ವ್ಯಕ್ತಿಯಾ? …ಹೀಗೆ ಪ್ರಶ್ನೆಗಳು  ಪ್ರೇಕ್ಷಕನ ಆತ್ಮಸಾಕ್ಷಿಯನ್ನು ಕೆಣಕುತ್ತದೆ.

ರಸ್ತೆಬೇಡ, ಮರಬೇಕು… ಎಂದು ಹೋರಾಡುವ ಆ ಮುಗ್ಧ ಹುಡುಗ ಕೊನೆಗೆ ಪ್ರಧಾನ ಮಂತ್ರಿಗೆ ಬೇರೆಯವರ ಕಡೆಯಿಂದ ಪತ್ರ ಬರೆಸುತ್ತಾನೆ. ಉತ್ತರಕ್ಕಾಗಿ ಸೀತೆ ರಾಮನಿಗೆ ಅಶ್ವಥ್ ವೃಕ್ಷದ ಕೆಳಗೆ ಕಾಯುವಂತೆ ಈ ಹುಡುಗ ಮರಕ್ಕೆ ತಗಲಿ ಹಾಕಿದ ಅಂಚೆ ಪೆಟ್ಟಿಗೆ ಕೆಳಗೆ ಕಾಯುತ್ತಾ ಕೂರುವುದನ್ನು ನೋಡುವಾಗ ಹೃದಯ ತುಂಬಿ ಬರುತ್ತದೆ. ಕೊನೆಗೆ ರಾಜಕಾರಣಿಗಳ ಸ್ವಾರ್ಥಕ್ಕೆ ಈ ಹುಡುಗ ತಲೆದಂಡನಾಗುತ್ತಾನೆ. ಇತ್ತಕಡೆ ಪತ್ರ ಓದಿದ ಪ್ರಧಾನಿ ಮಂತ್ರಿಗಳು ಕುನ್ನೇಗೌಡನ ಪರಿಸರ ಕಾಳಜಿಗೆ ಗೌರವಕೊಟ್ಟು ಮರಗಳನ್ನು ಕಡೆಯದಂತೆ ಆದೇಶ ನೀಡುತ್ತಾರೆ. ಕುನ್ನೇಗೌಡನ ಮರಗಳು ಉಳಿಯುತ್ತದೆ. ಆದರೆ ಮರಗಳನ್ನು ಪ್ರೀತಿಸುವ ಹೃದಯ ಇಲ್ಲವಾಗುತ್ತದೆ.

ಫೋಟೋ ಕೃಪೆ : google

ಜಿಂಕ್- ಚಾಕ್ ಸಿನಿಮಾವನ್ನು ಇಷ್ಟಪಡುವ ಜನರಿಗೆ ಇಂತಹ ಸಿನಿಮಾ ಇಷ್ಟವಾಗುವುದಿಲ್ಲ. ಹಾಗಾಗಿ ಸಿನಿಮಾದ ಕತೆಯನ್ನು ಈ ಲೇಖನದಲ್ಲಿ ಪೂರ್ತಿಯಾಗಿ ಹೇಳಿಬಿಟ್ಟಿದ್ದೀನಿ. ಈ ಸಿನಿಮಾದಲ್ಲಿ ಆಡಂಬರವಿಲ್ಲ, ಅಬ್ಬರಗಳಿಲ್ಲ. ಸೈಲೆಂಟ್ ಆಗಿ ಎಲ್ಲರ ಮನಸ್ಸನ್ನು ಕದಿಯುವಂತಹ ಚಿತ್ರ.  ಅಲ್ಲಲ್ಲಿ ನಾಟಕೀಯ ದೃಶ್ಯಗಳಿವೆ. ಸಂಚಾರಿ ವಿಜಯ ಅವರ ನಟನೆ, ಕಥಾವಸ್ತುವಿನಿಂದ ಅದಕ್ಕೆಲ್ಲಾ ಮಾಫಿ ಮಾಡಬಹುದು .

ತಾರಾಬಳಗದಲ್ಲಿ ಮಂಡ್ಯ ರಮೇಶ್ ಇದ್ದು, ಒಬ್ಬ ಹಾಸ್ಯನಟ ಖಳನಾಯಕನಾದರೆ ಹೇಗೆ ಸಮರ್ಥವಾಗಿ ನಿಭಾಯಿಸಬಲ್ಲ ಎನ್ನುವುದನ್ನು ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿ ತೋರಿಸಿದ್ದಾರೆ. ಅದು ರಂಗಭೂಮಿಗಿರುವಂತಹ ಶಕ್ತಿ ಎಂತಲೂ ಹೇಳಬಹುದು.ಈ ಸಿನಿಮಾದಲ್ಲಿ ಮಂಗಳಾ, ಬಿ ಸುರೇಶ, ಸುಮಂತೆಂದ್ರ ಸೇರಿದಂತೆ ಬಹುತೇಕವಾಗಿ ರಂಗಭೂಮಿ ಕಲಾವಿದರೇ ಇದ್ದು, ಪಾತ್ರಕ್ಕೆ ಜೀವ ತುಂಬಿದ್ದಾರೆ.  ‘ತಲೆದಂಡ’ ನಿರ್ದೇಶಕ ಪ್ರವೀಣ್ ಕೊಪ್ಪಿಕರ್ ಎನ್ನುವುದಕ್ಕಿಂತ ಒಳ್ಳೆ ಕತೆಗೆ ನಿರ್ದೇಶಕ ಎಂದರೆ ಉತ್ತಮ. Cammerial ಸಿನಿಮಾ ಮಧ್ಯೆ ಸಾಮಾಜಿಕ ಕಾಳಜಿ ಚಿತ್ರ ಮಾಡುವ ನಿರ್ದೇಶಕರು ಸಿಗುವುದು ಬಹಳವೇ ಅಪರೂಪ.  ಮೇಕಪ್ ಕೂಡಾ ಸಿನಿಮಾದಲ್ಲಿ ಕೇಂದ್ರ ಬಿಂದುವಾಗಿ ಗೆದ್ದಿದೆ. ಅಶೋಕ ಕಶ್ಯಪ್ ಅವರ ಕ್ಯಾಮೆರಾ ಚಳಕದ ಬಗ್ಗೆ ಎರಡು ಮಾತಿಲ್ಲ.

ಸಂಚಾರಿ ವಿಜಯ ಬಗ್ಗೆ ಕೊನೆಯದಾಗಿ ಹೇಳುವುದಾದರೆ ‘ನಾನು ಅವನಲ್ಲ ಅವಳು’, ‘ಪುಕ್ಸಟ್ಟೆ ಲೈಫು’, ‘ತಲೆದಂಡ’ ಸಿನಿಮಾದಲ್ಲಿ ಅವರ ನಟನೆ ನೋಡಿದ ಮೇಲೆ ಅನಿಸುವುದು ಇಷ್ಟೇ ‘ರಾಷ್ಟ್ರ ಪ್ರಶಸ್ತಿ’ ಸುಮ್ಮನೆ ಅವರನ್ನು ಹುಡುಕಿಕೊಂಡು ಹೋಗಿಲ್ಲ. ಶಕ್ತಿ ಮೀರಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರು ಬದುಕಿದ್ದಾಗ ಅವರ ಬೆಲೆ ಗೊತ್ತಾಗಲಿಲ್ಲ ಎನ್ನುವ ಬೇಸರ. ಬದುಕಿದ್ದರೆ ಪ್ಯಾನ್ ಇಂಡಿಯಾದಲ್ಲಿ ಮತ್ತೊಬ್ಬ ಕನ್ನಡದ ನಟನನ್ನು ನೋಡಬಹುದಿತ್ತೇನೋ ಅನ್ನಿಸುವುದುಂಟು …

Miss You ಸಂಚಾರಿ ವಿಜಯ…


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW