ಸುಪ್ರಸಿದ್ಧ ಪೋಲಿಶ್ ಕವಿ ತಾದ್ಯೂಜ಼್ ರೋಸೆವಿಕ್ಸ್ ನ ಎರಡು ಕವಿತೆಗಳನ್ನು ಕವಿ ಮೇಗರವಳ್ಳಿ ರಮೇಶ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮುಂದೆ ಓದಿ.
ತತ್ವಜ್ನಾನಿಯ ಕಲ್ಲು
ಈ ಕವಿತೆಯನ್ನು
ಮಲಗಿಸ ಬೇಕಿದೆ ನಾವು.
ಅದು ತಾತ್ವಿಕವಾಗಲು
ಪ್ರಾರಂಭಿಸುವ ಮೊದಲು.
ಅದು ಅಭಿನಂದನೆಗಳಿಗಾಗಿ
ಗಾಳ ಹಾಕುವ ಮೊದಲು.
ಕರೆಯಲ್ಪಟ್ಟಿತು ಅದು ಬದುಕಿಗೆ
ಮರೆವಿನೊಂದು ಕ್ಷಣದಲ್ಲಿ.
ಸೂಕ್ಷ್ಮ ಸಂವೇದಿಯದು ಪದಗಳಿಗೆ
ನೋಟ ಹರಿಸುತ್ತದೆ ಸುತ್ತ ಮುತ್ತ
ಹುಡುಕುತ್ತಾ ಸಹಾಯಕ್ಕಾಗಿ
ತತ್ವಜ್ನಾನಿಯ ಕಲ್ಲನ್ನು.
ಓ, ದಾರಿಹೋಕನೇ ತ್ವರಿತಗೊಳಿಸು
ಓ, ದಾರಿಹೋಕನೇ ತ್ವರಿತಗೊಳಿಸು
ನಿನ್ನ ಹೆಜ್ಜೆಗಳನ್ನು.
ಎತ್ತಬೇಡ ಕಲ್ಲನ್ನು.
ಅಲ್ಲಿ ಖಾಲಿಯಾದ ಕವಿತೆ
ನಗ್ನ ಕವಿತೆ
ಬೂದಿಯಾಗುವುದು.
ಕವಿತೆ: ಫಿಲಾಸಫರ್ಸ್ ಸ್ಟೋನ್
ಪದಗಳು
ಸುಂದರ ಯುವ ಬಾಯಿಗಳಿಂದ
ಪದಗಳು ಬಳಸಲ್ಪಟ್ಟಿವೆ.
ಚ್ಯುಯಿಂಗ್ ಗಂ ನ ಹಾಗೆ ಜಗಿಯಲ್ಪಟ್ಟಿವೆ.
ಚ್ಯುಯಿಂಗ್ ಗಂ ನ ಹಾಗೆ ಜಗಿಯಲ್ಪಟ್ಟಿವೆ.
ಜಗಿಜಗಿದು ಬಿಳಿ ಬಿಳೀ ಗುಳ್ಲೆಯಾಗಿಸಲ್ಪಟ್ಟಿವೆ.
ರಾಜಕಾರಿಣಿಗಳಿಂದ ದುರ್ಬಲಗೊಳಿಸಲ್ಪಟ್ಟಿವೆ.
ಇವು ಉಪಯೋಗಕ್ಕೆ ಬರುತ್ತವೆ –
ಹಲ್ಲನ್ನು ಬಿಳಿಯಾಗಿಸಲು
ಹುಳುಕು ರಂಧ್ರಗಳನ್ನು ಸ್ವಚ್ಚಗೊಳಿಸಲು.
ನಾನು ಹುಡುಗನಾಗಿದ್ದಾಗ
ಒಂದು ಪದ, ಒಂದೇ ಒಂದು ಪದ
ಗಾಯಗಳನ್ನು ವಾಸಿಮಾಡಬಲ್ಲುದಾಗಿತ್ತು.
ಪ್ರೀತಿಪಾತ್ರರಿಗೆ
ನೀಡಬಹುದಾಗಿತ್ತು.
ಈಗಿವು ದುರ್ಬಲವಾಗಿವೆ
ವೃತ್ತಪತ್ರಿಕೆಗಳ ಪದಗಳಲ್ಲಿ
ಸುತ್ತಿಡಲ್ಪಟ್ಟಿವೆ, ಇನ್ನೂ ವಿಷಭರಿತವಾಗಿವೆ
ಗಬ್ಬುವಾಸನೆ ಹೊರಸೂಸುತ್ತಿವೆ
ಇನ್ನಷ್ಟು ಗಾಯ ಮಾಡುತ್ತಿವೆ.
ಅಡಗಿಕೊಂಡು ಇವು –
ತಲೆಗಳೊಳಗೆ
ಹೃದಯಗಳೊಳಗೆ
ಯುವತಿಯರ ದಿರಿಸಿನೊಳಗೆ
ಪವಿತ್ರ ಗ್ರಾಂಥಗಳೊಳಗೆ
ಸ್ಫೋಟಿಸುತ್ತವೆ ಮತ್ತು
ಕೊಲ್ಲುತ್ತವೆ.
ಕವನ: ವರ್ಡ್ಸ್
ಕನ್ನಡಕ್ಕೆ: ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)
