‘ವಕ್ಷಸ್ಥಲ’ ಕಾದಂಬರಿ ಪರಿಚಯ

ಕಾದಂಬರಿಗಾರ್ತಿ ಆಶಾ ರಘು ಅವರ ‘ವಕ್ಷಸ್ಥಲ’ ಕಾದಂಬರಿ ಕುರಿತು ಹಿರಿಯ ಸಾಹಿತಿಗಳಾದ ತೊಂಟದಾರ್ಯ ಸಂಪಿಗೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ… 

ಪುಸ್ತಕ : ವಕ್ಷಸ್ಥಲ
ಲೇಖಕರು : ಆಶಾ ರಘು
ಪ್ರಕಾರ : ಕಾದಂಬರಿ

ವಕ್ಷ ಸ್ಥಲ‌‌ ಓದಿ ಮುಗಿಸಿದೆ. ಇದ್ದಕ್ಕಿದ್ದ ಹಾಗೆ‌ ಈಗ ಬರುತ್ತೇನೆಂದು ಹೇಳಿ ಹೋದ ಗಂಡ ಮರಳಿ ಬಾರದ ಊರಿಗೆ ಹೋದರೆ ಪತ್ನಿಯ ಸ್ಥಿತಿ ಹೇಗಿರಬೇಡ ? ಅವಳ ಯಾತನೆ ಅವಳನ್ನು ತಮ್ಮ ಬದುಕಿನ ಅವಲೋಕನ ಮಾಡಿಕೊಳ್ಳುವ ಜೊತೆಗೇ ಮಾನಸಿಕ ಉದ್ರೇಕಕ್ಕೆ ಈಡು ಮಾಡಿ ಅವನಿಗಾಗಿ‌ ಹುಡುಕುತ್ತಾ ಹೊರಡುವ , ಅವನನ್ನು ಹುಡುಕಲೇ ಬೇಕು , ಹುಡುಕಿ ಅವನೊಡನೆ ಸೇರಲೇ ಬೇಕು ಎಂದು ‌ಮುಗ್ಧೆಯಂತೆ ಅರಸುತ್ತಾ , ಅಸಹಾಯಕತೆಗೆ ಈಡಾದಾಗ ದೇವರನ್ನು ಯಾಚಿಸುವ ಸಹಜ ಸ್ವಭಾವ , ಅವಳಂತೆ ವಿರಹಾಗ್ನಿಗೆ ಬಲಿಯಾಗಿದ್ದ ದೇವತೆಗಳ ಬದುಕನ್ನೂ ನೆನೆಯುತ್ತಾ ಸಾಗಲು ಮತ್ತು ದೇವರ ಸನ್ನಿಧಿಯಲ್ಲೆ ಅವನೊಡನೆ ಒಂದಾಗುವ ಘಟನಾವಳಿಗಳ ಸರಪಳಿಗಳನ್ನೇ ತುಂಬಿಕೊಂಡಿದೆ , ಈ‌ ವಕ್ಷ ಸ್ಥಲ ಕಾದಂಬರಿ.

ಪ್ರಶ್ನೆ ಮಾಡದೆ ಸುಮ್ಮನೆ ಭಾವವನ್ನು ಗ್ರಹಿಸುತ್ತಾ ಓದಿದರೆ ಆನಂದ ನೀಡುತ್ತದೆ. ಅದಕ್ಕಾಗಿ‌ ಕಾದಂಬರಿ ಪತ್ನಿ ಪತಿಯರ ವಿಚಾರಗಳ ಸಂಗತಿಗಳನ್ನು ಅಕ್ಕ ಪಕ್ಕ ಜೋಡಿಸುತ್ತಾ ಅವರ ಮನಸ್ಸು‌ಅನಾವರಣ‌ ಗೊಳಿಸಲು ಪತ್ನಿಗೆ ಒಂದು ಅಜ್ಜಿಯನ್ನೂ , ಪತಿಗೆ ಅಜ್ಜನನ್ನೂ ಜೊತೆ ಮಾಡಿಸಿ ನಡೆಸುತ್ತಾರೆ ಲೇಖಕಿ.

ಲೇಖಕಿ‌ ಬರೆಯುತ್ತಿರುವ ಕಾಲದಲ್ಲಿ ಅವರ ಪರಿಸ್ಥಿತಿ ಮತ್ತು ಮನಸ್ಥಿತಿ ಗೊತ್ತಿದ್ದವರಿಗಂತೂ ಇದರಲ್ಲಿ ಬರುವ ಕಾಲ್ಪನಿಕತೆ ಹಿಂದೆ ಅಡಗಿರುವ‌ ವಿರಹದ ಉರಿ , ಪ್ರೇಮದ ಉತ್ಕಟತೆ , ಬದುಕಿನ ಬವಣೆ ಘರ್ಷಣೆ ಸರಸ ವಿರಸ ಗಳು ಅನಾವರಣಗೊಳ್ಳುತ್ತವೆ.

ಇದರಲ್ಲಿ ಬರುವ ಪೌರಾಣಿಕ , ಕಾಲ್ಪನಿಕ ಘಟನೆಗಳನ್ನು ಅತಾರ್ಕಿಕ , ಅತಿ ಮಾನುಷ , ಅತೀಂದ್ರಿಯ ಸಂಗತಿ ಗಳೆಂದು‌‌ ತಳ್ಳಿ ಹಾಕದೆ ಅವುಗಳು ತಮ್ಮ ಒಡಲಲ್ಲಿ ಇಟ್ಟುಕೊಂಡಿರುವ
ನಿಜ ಸಂಗತಿಗಳ ಕಡೆ ಮನ ಹಾಯಿಸಿದರೆ , ಕಾದಂಬರಿಕಾರರ ಆಶಯ‌ ನೆನಪಿಸಿಕೊಂಡರೆ , ವಿರಹಿಯ ನೋವಿನ ಧ್ವನಿಗಳು ಕೇಳಿಸುತ್ತವೆ. ಇದೆಲ್ಲೊ ಕಂತೆ ಪುರಾಣ ಎನ್ನುವುದು ಹೋಗಿ ಅವೂ ವಿರಹಾಗ್ನಿಯ ನಂದಿಸಲು ಬಂದಿರುವ ಶಮನಗಳು ಎಂದು ಅರಿವಾಗಿ ದೈವ‌ ಜೀವದ ಸಂಬಂಧ ‌ಬೆಸುಗೆ ಹಾಕಿಕೊಂಡು ಓದುಗನಿಗೂ ಮನ ಮುಟ್ಟುತ್ತವೆ ಮತ್ತು ಅವಾಸ್ತವ ಅತಾರ್ಕಿಕ ಎನ್ನಬಹುದಾದ ಎಲ್ಲವನ್ನೂ ಮನ್ನಿಸಿ ಮುಂದೆ ಓದುವಂತಾಗುತ್ತದೆ.

 

ಮಾನವೀಯ ಅನುಕಂಪೆ ಓದುಗನಲ್ಲಿ ಇದ್ಧರೆ ಕಾದಂಬರಿ ‌ಓದಲು ಕುಳಿತರೆ ಸಮಯ ಜಾರುವುದು ಗೊತ್ತಾಗುವುದಿಲ್ಲ. ನಿಜ. ಇಂತಹವನ್ನು ಬರೆಯುವಾಗ ಮನೆಯಲ್ಲಿ ಯಾವುದೋ ಕಷ್ಟಗಳ ನಿವಾರಣೆಗಾಗಿ‌ ಸತ್ಯ‌ ನಾರಾಯಣ ಪೂಜೆ ಮಾಡಿಸುವ ಹಾಗೆ ಅಥವಾ ಇನ್ನೂ ಹೆಚ್ಚಿನ‌ ರೀತಿಯಲ್ಲಿ ಈ ಕಾದಂಬರಿ ಓಘ ವಸ್ತು ಇವೆ. ಅವನ್ನು‌ ಕೇವಲ ಬಹಿರಂಗದ ವಾಸ್ತವತೆಯಲ್ಲಿ ನೋಡದೆ , ಅವುಗಳ ಅಂತರಂಗವನ್ನೂ ಕಾಣಲು ಸಾಧ್ಯವಾದರೆ ಕಾದಂಬರಿಯ ವೈಶಿಷ್ಟ್ಯತೆ ಕಾಣುತ್ತದೆ.

ಒಟ್ಟಾರೆ ಇದೊಂದು ಕ್ರೂರ ವಾಸ್ತವತೆಯನ್ನು ಎದುರಿಸುವ ತಂತ್ರವಾಗಿ ಬರೆದ , ಮಾನವ ಬದುಕಿನ ವಿವಿಧ ಮುಖಗಳನ್ನು ತೋರಿಸುತ್ತಾ , ಮನಸಿಗೆ ಮುದ‌ ನೀಡುತ್ತಲೇ , ನೈಜ ಅನ್ಯೋನ್ಯ ದಾಂಪತ್ಯದ ಸೊಗಡನ್ನು ಬೀರುತ್ತಲೇ , ದೇವರುಗಳನ್ನೂ ಮಾನವರ ಮಟ್ಟಕ್ಕೆ ಇಳಿಸಿ ನಮ್ಮ ನೋವುಗಳನ್ನು ಅವರಿಗೂ ಕೊಡಿಸಿ ಅವರ ನಿಲುವುಗಳಿಂದ ನಮ್ಮ ನೋವಿಗೆ ಸಾಂತ್ವನ‌ ನೀಡುತ್ತಾ ಸಾಗುವ ದಾಂಪತ್ಯ‌‌ ಗೀತೆಯಾಗಿ , ಸಾಗುವ ಮನ ಮಿಡಿಯುವ ಕಾದಂಬರಿಯಾಗಿದೆ.

ಆಶಾ ರಘು ಅವರು ತಮ್ಮ ಮನಸ್ಸನ್ನು ತುಂಬಾ ಹಿಡಿತದಲ್ಲಿ ಇಟ್ಟುಕೊಂಡು ತಮ್ಮ ಬರವಣಿಗೆಯ ಪ್ರತಿಭೆ ಹರಿಸಿದ್ದಾರೆ. ಅವರು ಬೇಗ ಈ ವಿರಹ ಯಾತನೆಯಿಂದ ಹೊರಬಂದು ಮತ್ತಷ್ಟು ಉತ್ಕೃಷ್ಟ ಕೃತಿಗಳನ್ನು ರಚಿಸಲಿ ಎಂದು ಬಯಸುತ್ತೇನೆ.


  •  ಸಂಪಿಗೆ ತೋಂಟದಾರ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW