ಕಾಶಿ ಅನುಭವ (ಭಾಗ೭) – ಡಾ.ಪ್ರಕಾಶ ಬಾರ್ಕಿ



ಕಾಶಿಯ ಪುಣ್ಯಭೂಮಿಯಲ್ಲಿ ಯಾರಾದರೂ ಪ್ರಾಣ ತ್ಯಜಿಸಿದರೆ ಅಥವಾ ಅಂತಿಮ ಸಂಸ್ಕಾರ ನೆರವೇರಿಸಿದರೆ ಅವರ ಆತ್ಮಕ್ಕೆ ಶಾಂತಿ ಲಭಿಸಿ, ಮೋಕ್ಷ ಪ್ರಾಪ್ತಿಯಾಗುವುದಂತೆ. ಆದ್ದರಿಂದಲೆ ಕಾಶಿಯನ್ನು “ಮೋಕ್ಷ ನಗರಿ” ಎನ್ನುವುದು. ಮೋಕ್ಷಕ್ಕೂ ಮುನ್ನ ಅಂತಿಮ ತಂಗುದಾಣ ಇದಾಗಿದ್ದು, ಡಾ.ಪ್ರಕಾಶ ಬಾರ್ಕಿ ಅವರ ಲೇಖನಿಯಲ್ಲಿ ಮೋಕ್ಷಕ್ಕೂ ಮುನ್ನ ಅಂತಿಮ ತಂಗುದಾಣ, ಮುಂದೆ ಓದಿ…

Hotel Salvation,  Death hotel ,ಸಾವಿನ ಮನೆ.

ಸಪ್ತ ಪುರಿಗಳಲ್ಲಿ ಒಂದಾದ ಕಾಶಿ ಶಿವನಿಗೆ ಅತ್ಯಂತ ನೆಚ್ಚಿನ ಸ್ಥಳ. ಸನಾತನ ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಈ ಕ್ಷೇತ್ರ ಪವಿತ್ರ ಪುಣ್ಯಭೂಮಿ, ಇಲ್ಲಿ ಯಾರಾದರೂ ಪ್ರಾಣ ತ್ಯಜಿಸಿದರೆ ಅಥವಾ ಅಂತಿಮ ಸಂಸ್ಕಾರ ನೆರವೇರಿಸಿದರೆ ಅವರ ಆತ್ಮಕ್ಕೆ ಶಾಂತಿ ಲಭಿಸಿ, ಮೋಕ್ಷ ಪ್ರಾಪ್ತಿಯಾಗುವುದಂತೆ. ಆದ್ದರಿಂದಲೆ ಕಾಶಿಯನ್ನು “ಮೋಕ್ಷ ನಗರಿ” ಎನ್ನುವುದು. ಪ್ರವಾಸದಲ್ಲಿದ್ದಾಗ ಆಧ್ಯಾತ್ಮಿಕತೆಯ ಕಂಪು ಈ ನಗರದ ತುಂಬ ಪಸರಿಸಿರಿವುದು ಅನುಭವಕ್ಕೆ ಬರುತ್ತೆ.

ಫೋಟೋ ಕೃಪೆ : Al Jazeera

ಕಾಶಿಯಲ್ಲಿಯೆ ತಮ್ಮ ಕೊನೆಯ ದಿನಗಳನ್ನು, ಕ್ಷಣಗಳನ್ನು ಕಳೆದು, ಇಲ್ಲಿಯ “ಮಣಿಕರ್ಣಿಕಾ ಘಾಟ್”ನಲ್ಲಿ ಚಿತಾಭಸ್ಮವಾಗಿ ಗಂಗೆ ಒಡಲು ಸೇರಬೇಕು ಎನ್ನುವುದು ಹಲವರ ಬಯಕೆ ಅಥವಾ ಅಂತಿಮ ಆಸೆ, “ಸಾವಿಗೆ ಸನಿಹವಾದೇವು..!!” ಎಂದೇನಿಸಿದಾಗ ಕಾಶಿಗೆ ದೌಡಾಯಿಸಿ ಬಿಡುವರು ಯಮನ ಆಗಮನಕ್ಕೆ ಕಾತರಿಸಿ.

ಇನ್ನೂ….

ಫೋಟೋ ಕೃಪೆ : Viator

ದೇಹ ಕಾಯಿಲೆಗೆ ತತ್ತರಿಸಿ, ಜೀವ ಹಿಂಡತೊಡಗಿದಾಗ, ಹಾಸಿಗೆ ಕಚ್ಚಿಕೊಂಡ ದೇಹವನ್ನು ಯಾವ ಕ್ಷಣಕ್ಕಾದರೂ ಸಾವು ದಡ್ಡನೆ ನುಂಗಿ ಹಾಕಬಹುದು. ಇಂಥವರ ಆಸೆಯೂ “ಕಾಶಿಯ ಮೋಕ್ಷ”ವಾಗಿದ್ದರೆ, ಕಾಶಿಯಲ್ಲಿ ಪ್ರಾಣ ತ್ಯಜಿಸುವ ಕೊನೆಯ ಯಾತನಾಮಯ ದಿನಗಳನ್ನು ನೂಕಲು 12 ರೂಮುಗಳ ವ್ಯವಸ್ಥಿತ ಕಟ್ಟಡವಿದೆ.

ಇದು ಸಾವಿನ ಮನೆ ಅಥವಾ ಮೋಕ್ಷಕ್ಕೂ ಮೊದಲೇ ಸಿಗುವ “ತಂಗುದಾಣ”ದಂತೆ ಭಿಮ್ಮನೆ ಬಿಗಿದುಕೊಂಡು ನಿಂತಿದೆ. ಜನರು ಇಲ್ಲಿಗೆ ಬರುವುದೆ ಪ್ರಾಣ ತ್ಯಜಿಸಲು, ಮೋಕ್ಷ ಪಡೆಯಲು. ಆತ್ಮವು ಜನನ ಮತ್ತು ಮರಣದ ಅಂತ್ಯವಿಲ್ಲದ ಚಕ್ರದಿಂದ ಹೊರಬರಲು.

ಕಾಶಿಯಲ್ಲಿ ಹೀಗೊಂದು “ಸಾವಿನ ಮನೆ” ಇರುವಿಕೆ ವಿಷಯ ಬಹು ಜನರಿಗೆ ಹೊಸದು.

ನಾನು ಕಾಶಿಯಲ್ಲಿದ್ದಾಗ ಒಂದು ದಿನ ಇಲ್ಲಿಯೇ ತಂಗಿದ್ದೆ.

ಕಾಶಿಯ ಮುಖ್ಯ ಚೌಕವಾದ (Circle) ಗೋದೌಲಿಯಾ (Godwilia) ಹತ್ತಿರದ ಒಂದು ಇಕ್ಕಟ್ಟಾದ ರಸ್ತೆಯಲ್ಲಿ ರಸ್ತೆಗೆ ವಿರುದ್ದ ದಿಕ್ಕಿಗೆ ದೊಡ್ಡದಾದ ಹಳೆಯ ಬೃಹತ್ ಕಟ್ಟಡ ನಮ್ಮನ್ನು ಎವೆಯಿಕ್ಕದೆ ನೋಡೊತ್ತಾ ನಿಂತತೆ ಭಾಸವಾಗುತ್ತೆ.

ಅದು……

ಫೋಟೋ ಕೃಪೆ : homegrown

“ಕಾಶಿ ಲಾಭ ಮುಕ್ತಿ ಭವನ” Kashi Labh Mukti Bhawan

ಎರಡು ಅಂತಸ್ತಿನ ಹಳೆಯ ಕಟ್ಟಡ. ಕಿರ್ರೇನ್ನುವ ಗೇಟ್ ಸರಿಸಿ ಒಳಗೆ ಅಡಿಯಿಟ್ಟಾಗ “ಕಟ್ಟಡದ” ಎದುರಿಗೆ ಹಲವು ಹಿರಿಯ ಜೀವಗಳು ಬಿಸಿಲಿಗೆ ಮೈಯೊಡ್ಡಿ ಕೊನೆಯ ಬಾರಿ ಬಿಸಿಲು ಕಾಯಿಸುತ್ತಿರುವಂತೆ ಕೂತಿದ್ದವು.

ಸಾವಿರಾರು ಜನರು ಕೊನೆಯಿಸಿರೆಳೆದ, ಹಲವರ ಸಾವಿನ ಕೊನೆಯ ಆರ್ತನಾದಕ್ಕೆ ಕಿವಿಯಾದ ಬೃಹತ್ ವಿಷಾದದ ಕಟ್ಟಡವಿದು.

ತನ್ನೊಳಗೆ ಸಾವಿರಾರು ಜನರ ಸಾವು ನೋವುಗಳನ್ನು ಅದುಮಿಟ್ಟುಕೊಂಡು ಈಗಲೂ ನಿಟ್ಟುಸಿರು ಬಿಡದೆ ಮುಗುಮ್ಮನೆ ನಿಂತ ಮೋಕ್ಷದ ತಾಣ. ಒಂದಿನಿತೂ ಬೇಸರಿಸಿಕೊಳ್ಳದೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರಿಗೆ “ಬದುಕಿನ ಒಳನೋಟವನ್ನು, ಜೀವನದ ಸತ್ಯವನ್ನು ಕ್ಷಣಾರ್ಧದಲ್ಲಿ ಅರಿವಿಗೆ ತರುವ ಸ್ಥಳ.

ಸಾವಿನ ಕುಣಿಕೆ ಕೊರಳಿಗೆ ಸುತ್ತಿಕೊಂಡಾಗಲೆ ಅನೇಕರು ಸಾವಿರಾರು ಕಿಲೋಮೀಟರ್‌ಗಳಷ್ಟು ದೂರದಿಂದ ಪ್ರಯಾಣಿಸಿ, ಕೆಲವೊಮ್ಮೆ ವಿದೇಶದಿಂದ ವಿಮಾನವೇರಿ ಬರುತ್ತಾರೆ. ಭಾರತದ ವಿವಿಧ ರಾಜ್ಯದ ಹಳ್ಳಿಯಿಂದ ಸಹ ಕಾರಿನಲ್ಲಿ ಪ್ರಯಾಣಿಸಿ “ಮುಕ್ತಿ ಭವನಕ್ಕೆ” ದೌಡಾಯಿಸುವರು.

ಫೋಟೋ ಕೃಪೆ : orissaPost

ಜರ್ಜರಿತ ಕೃಶ ದೇಹದ, ಸಾವಿನ ಸನಿಹ ತಲುಪಿದ, ಮೋಕ್ಷ ಬಯಸಿ ಬಂದ ವೃದ್ಧ ಜೀವಗಳು, ಸಾವಿನ ಹಾಸಿಗೆ ಹಿಡಿದ ರೋಗಿಗಳು, ನಿವೃತ್ತ ಜೀವಿಗಳು ಪ್ರಾಣ ತ್ಯಾಗದ ಮುನ್ನ ತಮ್ಮ ಮಕ್ಕಳು ಅಥವಾ ಸಂಬಂಧಿಕರ ಜೊತೆ ಅಥವಾ ಒಬ್ಬರೆ ಇಲ್ಲಿಗೆ ಬಂದು ತಂಗುತ್ತಾರೆ. ಇದೋ ಇವರ ಅಂತಿಮ ಯಾತ್ರೆ, ಕೊನೆಯ ವಾಸ. ಇಲ್ಲಿನ ಸಾವು ಸಾವಲ್ಲ, ಶೋಕವಲ್ಲ. ಅದು ಸಂಭ್ರಮ. ಭುವಿಗೆ ವಿದಾಯ ಹೇಳಿ ಮೋಕ್ಷದೆಡೆಗೆ ನಡೆಯುವ ಆಚರಣೆ. ಹುಟ್ಟು ಸಾವಿನ ನಿರಂತರ ಚಕ್ರದಿಂದ ಶಾಶ್ವತವಾಗಿ ಮುಕ್ತಗೊಳ್ಳುವ ಸಂಭ್ರಮ.

ಮೋಕ್ಷವು ಅಂತಿಮ ಸ್ವಾತಂತ್ರ್ಯ ಮತ್ತು ಸಾವಿನ ನಂತರದ ವಿಮೋಚನೆಯ ಪರಿಕಲ್ಪನೆಯಾಗಿದೆ. ಎಲ್ಲಾ ಭೌತಿಕ ಸುಖಗಳನ್ನು ತ್ಯಜಿಸಿ ಸ್ವಯಂ ಅಥವಾ ಆತ್ಮದೊಂದಿಗೆ ಒಂದಾದಾಗ ಮೋಕ್ಷವನ್ನು ಪಡೆಯಬಹುದು ಎಂಬುದು ಹಿಂದೂ ಧರ್ಮದ ನಂಬಿಕೆ. ಸಾವಿನಲ್ಲಿ ಮೋಕ್ಷವನ್ನು ಪಡೆಯುವುದು ಒಬ್ಬನನ್ನು ಜೀವನ ಮತ್ತು ಮರಣದ ಚಕ್ರದಿಂದ ವಿಮುಕ್ತಗೊಳಿಸುತ್ತದೆ ಮತ್ತು ಆತ್ಮವನ್ನು ಶಾಶ್ವತವಾಗಿ ಮುಕ್ತಗೊಳಿಸುತ್ತದೆ ಎಂಬುದು ನಂಬಿಕೆ.

ಮೂಲತಃ ಹರಿರಾಮ್ ಗೋಯೆಂಕಾ ಅವರ ಒಡೆತನದ ಕಟ್ಟಡವನ್ನು, ಜಯ್ ದಯಾಳ್ ದಾಲ್ಮಿಯಾ ಅವರು ಖರೀದಿಸಿ ” ದಾಲ್ಮಿಯಾ ಚಾರಿಟೇಬಲ್ ಟ್ರಸ್ಟ್” ಅಡಿಯಲ್ಲಿ ಸೇರಿಸಿದರು. 1908 ರಲ್ಲಿ ನಿರ್ಮಿಸಲಾದ ಕಟ್ಟಡವಾದರೂ 1950ರ ದಶಕದಲ್ಲಿ “ಮೋಕ್ಷದ ಭವನ”ವಾಗಿ ಬಾಗಿಲು ತೆರೆಯಿತು. ಕಾಶಿಯಲ್ಲಿಯೇ ಸಾವು ಬಯಸಿ ಬರುವ ಕೊನೆಗಾಲದ ದೇಶ-ವಿದೇಶಿ ಶಿವಭಕ್ತರಿಗೆ ನಿರ್ಮಿಸಿದ ಆಶ್ರಯವಿದು.

ಫೋಟೋ ಕೃಪೆ : orissaPost

ಹಳೆಯ ಗೇಟ್ ತೆಗೆದು ಒಳಗೆ ನಡೆಯುತ್ತಿದ್ದಂತೆ ಸಿಗುವ ಒಂದಿಷ್ಟು ಬಯಲು. ಎದುರಿಗೆ “ರಹಸ್ಯ, ದುಗುಡ ದುಮ್ಮಾನ ತುಂಬಿದ ಕಟ್ಟಡ. ಒಳಗಡಿಯಿಟ್ಟರೆ… ಎಡ ಬದಿಗೆ “ವ್ಯವಸ್ಥಾಪಕರ ಕೋಣೆ”. ಮುಂದೆ ನಡೆದು ಎರಡನೆ ಹೊಸ್ತಿಲು ದಾಟಿದರೆ “ಚಿಕ್ಕ ದೇವರ ಕೋಣೆ”.

ಸದಾ “ಓಂ ನಮಃ ಶಿವಾಯ” ಎಂಬ ನಿನಾದ ನಿಧಾನಕ್ಕೆ ಕಟ್ಟಡದ ತುಂಬ ಮಾರ್ದನಿಸುತ್ತೆ. ಇಲ್ಲಿ ನಿತ್ಯ ಪೂಜಾ ಕೈಂಕರ್ಯ ದಿನಕ್ಕೆರಡು ಬಾರಿ ನೆರವೇರುವುದು. ಮೋಕ್ಷಕ್ಕಾಗಿ ಪರಿತಪಿಸುವ ವೃದ್ಧ ಜೀವಿಗಳ “ಆಶಯ ಈಡೇರಿಕೆಯಾಗಲಿ” ಎಂದು ಸದಾ ಪ್ರಾರ್ಥಿಸಲಾಗುತ್ತೆ. ಇಲ್ಲಿ ಪ್ರಾಣ ತ್ಯಜಿಸುವುದೇ ಒಂದು ಸುಯೋಗ.

ದಿನಂಪ್ರತಿ ಬೆಳಿಗ್ಗೆ ಪುರೋಹಿತರಿಂದ “ವೇದ-ಘೋಷಗಳೊಂದಿಗೆ” ಸುಮಾರು ನಾಲ್ಕು ತಾಸು ನಡೆಯುವ ಪೂಜೆ. ಗಂಟೆ, ಶಂಖ, ಜಾಗಟೆ, ಡಮರುಗದ ಅಲೆಗಳು ದೈವಿಕ ಶಕ್ತಿ ಜಾಗೃತಗೊಳಿಸುತ್ತವೆ. ಆರತಿಯೊಂದಿಗೆ ಸಂಸ್ಕೃತ ಶ್ಲೋಕ, ಭಕ್ತಿ ಗೀತೆ ಸ್ವರಗಳ ಅಲೆಗಳು ತೇಲುತ್ತಾ ಕಟ್ಟಡದ ವಾತಾವರಣದ ತುಂಬಾ “ಧನಾತ್ಮಕ ಶಕ್ತಿ” ಉಕ್ಕಿ ಹರಿಯುತ್ತಿರುವುದು ಭಾಸವಾಗುತ್ತೆ. ಸಾವಿನ ಆಗಮನಕ್ಕೆ “ಶಬರಿ”ಯಂತೆ ಕಾಯುತ್ತಿರುವ ವೃದ್ಧ ಜೀವಿಗಳಿಗೆ.



ತಮ್ಮ ಪ್ರೀತಿಪಾತ್ರರು ಶಾಶ್ವತವಾಗಿ ಇಲ್ಲವಾಗುತ್ತಿರುವರು ಅಥವಾ ಮೋಕ್ಷವೇರುತ್ತಿರುವರೆಂಬ ಸಂದಿಗ್ಧ ಸ್ಥಿತಿಯಲ್ಲಿರುವ “ಸಂಬಂಧಿಕರ” ಮನಸ್ಸಿಗೆ ಸಾಂತ್ವನದ ಕ್ಷಣಗಳಿವು.

ಇಲ್ಲಿನ ಪ್ರತಿ ರೂಮು ಗಾತ್ರದಲ್ಲಿ ಮಧ್ಯಮವಾದವುಗಳು. ಎರಡು ಜನ ನಿರಾಳವಾಗಿ ಉಸಿರಾಡಬಹುದು. ವಿಷಾದದ ಮಂದ ಬೆಳಕು ಕೋಣೆಯ ತುಂಬಾ ಹರಿಸುವ ಕಿಟಕಿಗಳು ಸದಾ “ಸ್ವರ್ಗ ದ್ವಾರದಂತೆ” ತೆರೆದುಕೊಂಡಿರುತ್ತವೆ. ಭವನದ ತುಂಬ ದುಃಖದ ಮಬ್ಬು ವಾತಾವರಣ. ಉರಿಯುವ ವಿದ್ಯುದ್ದೀಪಗಳ ಮಬ್ಬುಗತ್ತಲಿನ ವಿಷಾದ ನೋಟಗಳು. ಒಳ ನುಸುಳುವ ಭಾರ ಉಸುರಿನ ಗಾಳಿ. ಸಾವಿನ ಮನೆಗೆ ವಿಲಕ್ಷಣವಾಗಿ ಹೊಂದಿಕೊಳ್ಳುವ ಒಳ ಪರಿಸರ.

ಯಮನ ಆಗಮನ ಬಯಸುತ್ತಾ ರೂಮಿನ ಛಾವಣಿಯೆಡೆಗೆ ದೃಷ್ಟಿಯಿಟ್ಟು ನಿಸ್ತೇಜಗೊಂಡು ಮಲಗಿದವರ ಅಂತರಾಳದ ವೇದನೆಗೆ ಕಿವಿಯಾಗಿ, ಪರಿಪರಿಯಾಗಿ ಸಾಂತ್ವನ ಹೇಳುವ ಗೋಡೆಗಳು. ದೃಷ್ಟಿ ಬತ್ತುವ ಮುನ್ನ ಕತ್ತಲಾಗುವ ಕೋಣೆಗಳು. ಸಾಯುವವರಿಗೆ ಸ್ವರ್ಗ. ಮರಣಶಯ್ಯೆಯಲ್ಲಿರುವವರನ್ನು ಸುಲಭವಾಗಿ “ಮಣಿಕರ್ಣಿಕಾ ಘಾಟ್’ನತ್ತ ಪ್ರಯಾಣಿಸಲು ಅಣಿಯಾಗಿಸುತ್ತವೆ.
ಇಲ್ಲಿಗೆ ಬರುವ ಪ್ರತಿಯೊಬ್ಬ ಅತಿಥಿಗೆ “ವಸತಿ” ನೀಡಲು ಕೆಲವು ಷರತ್ತುಗಳಿವೆ.

ಸಾವಿಗೆ ಸನೀಹವಾದವರಿಗೆ ಮಾತ್ರ ಅವಕಾಶ.

ಫೋಟೋ ಕೃಪೆ : orissaPost

ಅತಿಥಿಗಳಿಗೆ ಪ್ರಾಣ ತ್ಯಜಿಸಲು ಕನಿಷ್ಠ 15 ದಿನಗಳಿಂದ ಗರಿಷ್ಠ 20 ದಿನಗಳ ಅವಕಾಶ ಮಾತ್ರ ನೀಡಲಾಗುತ್ತೆ. ಒಂದು ವೇಳೆ ಈ ನಿರ್ಧಿಷ್ಟ ಅವಧಿಯಲ್ಲಿ ಸಾವು ಸಂಭವಿಸದಿದ್ದರೆ ಅವರಿಗೆ ತೆರವುಗೊಳ್ಳುವಂತೆ ಸೌಮ್ಯವಾಗಿ ಸೂಚಿಸಲಾಗುತ್ತೆ. ಸಾವು ಇನ್ನೇನು ಸನಿಹವೇ ಸುಳಿಯುತ್ತಿದೆ ಎನಿಸಿದರೆ ಇನ್ನೊಂದಿಷ್ಟು ದಿನ ಇರಿಸಿಕೊಳ್ಳಲಾಗುತ್ತೆ. ಆದರೆ ಇಲ್ಲಿಗೆ ಬಂದ ಬಹುಪಾಲು ಜನ ಮೋಕ್ಷದೆಡೆಗೆ ನಡೆದಿದ್ದಾರೆ.

“ಅತಿಥಿಗಳಿಗೆ” ಪ್ರಸಾದ ವ್ಯವಸ್ಥೆಯಿದೆ, ಅನ್ನ ಬಿಟ್ಟವರಿಗೆ ನಿರಂತರವಾಗಿ “ಗಂಗಾ ತೀರ್ಥ” , ತುಳಸಿ ಜಲ ನೀಡಲಾಗುತ್ತೆ. ಇವರಿಗೆ ಶುಲ್ಕದ ರೂಪದಲ್ಲಿ 20 ರೂಪಾಯಿ ಪಡೆಯಲಾಗುತ್ತೆ, ಅದು ವಿದ್ಯುದ್ದೀಪ, ಫ್ಯಾನ್’ಗಳ “ವಿದ್ಯುತ್ ಬಿಲ್” ಪಾವತಿಸಲು. ಬಡವರಿದ್ದರೆ ಅದೂ ಉಚಿತ.

ಅತಿಥಿಗಳು ಮತ್ತು ಜೊತೆಗಿನ ಸಂಬಂಧಿಕರಿಗೆ ಮೂಲಭೂತ ಸೌಕರ್ಯಗಳನ್ನ ಉಚಿತವಾಗಿ ನೀಡಲಾಗುತ್ತೆ.

ಮುಕ್ತಿ ಭವನದ ಪರಿಕಲ್ಪನೆಯು ಹಳೆಯ ಕಾಲದ ಕಾಶಿಯನ್ನು ಹೋಲುತ್ತದೆ. ಹಿಂದಿನ ಕಾಲದಲ್ಲಿ ಜನರು ಕಾಶಿಗೆ ಯಾತ್ರೆಗೆ ಹೊರಡುತ್ತಿದ್ದಾರೆ ಎಂದು ಹೇಳಿದಾಗ, ಅವರು ತಮ್ಮ ಉಳಿದ ಜೀವನವನ್ನು ಮೋಕ್ಷ ಅಥವಾ ಮೋಕ್ಷದ ಭರವಸೆಯಲ್ಲಿ ಕಳೆಯುತ್ತಾರೆ ಎಂದು ಭಾವಿಸಲಾಗಿತ್ತು.

2016 ರಲ್ಲಿ ಬಿಡುಗಡೆಯಾದ ಮುಕ್ತಿ ಭವನ (Hotel salvation) ಹಿಂದಿ ಚಲನಚಿತ್ರ ಒಮ್ಮೆ ವಿಕ್ಷಿಸಿ. “ಕಾಶಿ ಲಾಭ ಮುಕ್ತಿ ಭವನ”ದ ಸಂಪೂರ್ಣ ಚಿತ್ರಣ, ಅಭಿಲಾಷೆ, ಆಶಯ ಮನದಟ್ಟಾಗಲು.
ಒಟ್ಟಾರೆಯಾಗಿ ಹೇಳುವುದಾದರೆ “ಮುಕ್ತಿ ಭವನ”ವು ಕಾಶಿಯಲ್ಲಿ ಕೊನೆಯುಸಿರೆಳೆಯ ಬಯಸುವವರಿಗೆ ಕೆಲದಿನ ಸ್ಥಳ ಒದಗಿಸುತ್ತದೆ. ಇಲ್ಲಿ ಸಹಜವಾಗಿ ಪ್ರಾಣ ತ್ಯಜಿಸುವವರಿಗೆ ಮಾತ್ರ. ಪ್ರಾಣ ತ್ಯಾಗದ ನಂತರ ಮಣಿಕರ್ಣಿಕಾ ಘಾಟ್’ನಲ್ಲಿ ಚಿತೆಗೆ ಅರ್ಪಿಸಿ, ಗಂಗೆಯ ಒಡಲು ಸೇರಿಸಲಾಗುತ್ತೆ.

ನೀವೊಮ್ಮೆ ಮುಕ್ತಿ ಭವನಕ್ಕೆ ಭೇಟಿ ಕೊಡಿ, ಅಲ್ಲಿನ ಕೋಣೆಗಳ ಗಾಢ ಮೌನಕ್ಕೆ ಕಿವಿಯಾಗಿ. ಹುಟ್ಟು, ಬದುಕು, ಸಾವಿನ ಮರ್ಮ ಅರಿಯಲು. ನಿಮ್ಮಲ್ಲಿ ಆಂತರಿಕವಾಗಿ ಕೆಲ

ಬದಲಾವಣೆಗಳಾಗುವುದನ್ನು ಅನುಭವಿಸಿ.

“ಜೈ ಭೋಲೆನಾಥ…


  • ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ

5 1 vote
Article Rating

Leave a Reply

2 Comments
Inline Feedbacks
View all comments

[…] ಕಾಶಿ ಅನುಭವ (ಭಾಗ ೭) […]

[…] ಕಾಶಿ ಅನುಭವ (ಭಾಗ ೭) […]

All Articles
Menu
About
Send Articles
Search
×
2
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW