ಪಶುವೈದ್ಯರಿಗೆ ಎದುರಾಗುವ ಸವಾಲುಗಳು



ಕೆಲವೊಮ್ಮೆ ಎಂತಹ ಸಂದಿಗ್ಧ ಪರಿಸ್ಥಿತಿಗಳು ಪಶುವೈದ್ಯರ ಮುಂದೆ ಎದುರಾಗುತ್ತವೆ ಎಂಬುದಕ್ಕೆ ಇತ್ತೀಚೆಗೆ ಡಾ.ಯುವರಾಜ್ ಹೆಗಡೆ ಅವರು ಚಿಕಿತ್ಸೆ ನೀಡಿದ ಎಮ್ಮೆಯ ಕತೆಯನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ಮುಂದೆ ಓದಿ…

2019 ,ಜುಲೈ 13 ರಾತ್ರಿ 7.30 ರ ಸಮಯ. ಮಲೆನಾಡಿನ ಜಡಿ ಮಳೆಗೆ ಹಾಕಿದ ರೈನ್ ಕೋಟ್ ಲೆಕ್ಕಕ್ಕೇ ಬರದೆ ಮೈಯೆಲ್ಲಾ ಒದ್ದೆಯಾಗಿ, ಅವತ್ತಿನ ಎಲ್ಲಾ ಕೆಲಸ ಮುಗಿಸಿದೆ ಸಾಕಪ್ಪ ಇನ್ನು ಮನೆಗೆ ತೆರಳೋಣ ಎಂದುಕೊಂಡಿದ್ದಷ್ಟೇ… ಮೊಬೈಲ್ ರಿಂಗಾಯಿತು. ಸಾಮಾನ್ಯವಾಗಿ ಇಷ್ಟೊತ್ತಿಗೆ ಕರೆ ಮಾಡುವುದು ನನ್ನ ಪತ್ನಿ ನವ್ಯ. ಮಳೆಯಲ್ಲಿ ಎಲ್ಲಿದ್ದೀರಿ?. ಮನೆಗೆ ಬರಬಾರದೆ, ಸೀಮೆಗೆ ಯಾರಿಗೂ ಇಲ್ಲದ ಕೆಲಸ ನಿಮ್ಮೊಬ್ಬರಿಗೆ ಇರೋದ ? ಮನೆಗೆ ಬನ್ನಿ, ಹುಷಾರು… ಜೋರು ಮಳೆ ಇದೆ. ಪಾಪು ಕೇಳುತ್ತಿದ್ದಾಳೆ ನೋಡಿ ….. ಅನ್ನೋದು ಮಾಮೂಲಿ.

ಮೊಬೈಲ್ ತೆಗೆಯೋದೆ ಬೇಡ ಅಂದುಕೊಂಡವನು ಇರಲಿ ಎಂದು ನೋಡಿದರೆ ” ಸುರಾನಿಯ ಬೋಜಪ್ಪ” ನವರ #ಫೋನು. ಸಾ… ನಮ್ಮನೆ ಎಮ್ಮೆಗೆ ಯಾರೋ ರಸ್ತೆಯಲ್ಲಿ ಆಕ್ಸಿಡೆಂಟ್ ಮಾಡಿದ್ದಾರೆ. ಸರ್… ಸ್ವಲ್ಪ ಗಾಯವಾಗಿದೆ ಎಂದರು. ಈಗ ಎಲ್ಲಿದೆ ಎಮ್ಮೆ ಎಂದೆ . ಸಾರ್…ಈಗ ತಾನೆ ಆಗಿರೋದು. ರಸ್ತೆಯ ಮೇಲೆ ಇದೆ ….ಬಂದೋಗಿ ಸಾ… ಎಂದಾಗ ಒಲ್ಲದ ಮನಸ್ಸಿನಿಂದಲೇ ಹಾ… ಎಂದಿದ್ದೆ. ನೋಡಿ , ಎಮ್ಮೇನ ತಗೊಂಡು ಮನೆಗೆ ಹೋಗಿ. ದಾರಿ ಮೇಲೆ ನಾನು ಟ್ರೀಟ್ಮೆಂಟ್ ಮಾಡಲ್ಲ, ನಾನು ನಿಮ್ಮ ಊರಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದ್ದೀನಿ. ಮಳೆ ಜಾಸ್ತಿ ಇದೆ. ನಿಮ್ಮ ಮನೆಗೆ ಬರೋದು 8.30 ಆಗಬಹುದು ಎಂದಾಗ ಏನೋ ಮಾಡಿ ಸಾ…ಎಂದು ಫೋನಿಟ್ಟರು ಬೋಜಪ್ಪ. ಆ ಕ್ಷಣದಲ್ಲಿ ಎಮ್ಮೆಗೆ ಎಲ್ಲೆಲ್ಲಿ ಗಾಯವಾಗಿದೆ ಎಂದು ಕತ್ತಲೆಯಲ್ಲಿ ಅವರಿಗೂ ಕಂಡಿರಲಿಲ್ಲ. ಒಟ್ನಲ್ಲಿ ಡಾಕ್ಟರ್ ಬಂದು ಇಂಜೆಕ್ಷನ್ ಮಾಡಿದರೆ ಸಾಕು ಎಂಬಂತಾಗಿತ್ತು .

ಗುಡುಗು ಸಹಿತ ಮಳೆ, ಒದ್ದೆಯಾಗಿದ್ದ ದೇಹ, ಮುಖಕ್ಕೆ ಮೊಳೆಗಳಂತೆ ರಭಸವಾಗಿ ಬಡಿಯುತಿದ್ದ ಹನಿಗಳು, ಕಣ್ಣಿಗೆ ರಾಚುತಿದ್ದ ಎದುರುಗಡೆ ಬರುವ ವಾಹನಗಳ ಲೈಟ್ ಬೆಳಕು, ದಿನವಿಡೀ ಕೆಲಸದ ಆಯಾಸ ……. ಎಲ್ಲವನ್ನೂ ಸಹಿಸುತ್ತ ಯಾಕಪ್ಪಾ… ಬೇಕಿತ್ತು ಈ ಉದ್ಯೋಗ ಎಂದುಕೊಂಡೇ ರಾತ್ರಿ 8.30 ಕ್ಕೆ ಸುರಾನಿ ಬೋಜಪ್ಪನ ಮನೆ ತಲುಪಿದ್ದೆ.

ಆದರೆ ಅಲ್ಲಿ ನೋಡಿದಾಗಲೇ ತಿಳಿದಿದ್ದು ನಿಜವಾದ ಪರಿಸ್ಥಿತಿ. #ಅಪಘಾತಕ್ಕೆ ತುತ್ತಾದ ಎಮ್ಮೆಯ ಟಾರು ರಸ್ತೆಯಲ್ಲಿ ಐದಾರು ಮೀಟರ್ ವರೆಗೆ ಎಳೆದೊಯ್ದಿದ್ದರೆ, ಹಿಂಬಾಗ ಆಕೃತಿಯನ್ನೇ ಕಳೆದುಕೊಂಡಿತ್ತು. ಬಾಲದ ಬುಡ ಕಳಚಿ ಬಂದು, ಬೆನ್ನಹುರಿಯಿಂದ ಸಂಪರ್ಕ ಕಳೆದುಕೊಂಡಿತ್ತು. ರಕ್ತಸ್ತ್ರಾವ ಇನ್ನೂ ಕಡಿಮೆಯಾಗಿರಲಿಲ್ಲ. ಹತ್ತು ನಿಮಿಷ ಏನೂ ಮಾತನಾಡಲಾಗಲಿಲ್ಲ ನನಗೆ. ಏಕೆಂದರೆ ದೂರದಲ್ಲೇಲ್ಲೋ ಕೆಲಸ ಮುಗಿಸಿ ಮನೆಗೆ ಹೊರಟವನು ಹಠಾತ್ತಾಗಿ ಇಲ್ಲಿಗೆ ಬಂದವನ ಬಳಿ ಇನ್ನೇನು ಇದ್ದೀತು ಹೇಳಿ. ಆ ಎಮ್ಮೆಗೆ ಮುಖ್ಯವಾಗಿ ಗಾಯಕ್ಕೆ ಹೊಲಗೆ ಮಾಡಬೇಕಿತ್ತು.ಆದರೆ ಅದೇ ನನ್ನ ಬಳಿ ಇರಲಿಲ್ಲ. ಅಷ್ಟರಲ್ಲಿ ಅಲ್ಲಿ ಸೇರಿದ್ದವರಲ್ಲಿ ಮಂದಿಗೊಬ್ಬರಂತೆ ಶುರುಮಾಡಿಕೊಂಡಿದ್ದರು. ಸಾ…. ಇಷ್ಟೊತ್ತಿಗೆ ನೀವೆ ಸಿಗೋದು ಅಂತ ಫೋನ್ ಮಾಡಿದ್ವಿ, ಈ ಕೆಲಸ ನಿಮ್ಮ ಕೈಲಿ ಬಿಟ್ರೆ ಇನ್ಯಾರೂ ಮಾಡಲ್ಲ ಬುಡಿ ಸಾ…. ಅಲ್ಲ ಆ ಡ್ರೈವರ್ ಕೆಂಪು ಕಾರಂತೆ, ಕಾರ್ನವನು ಗುದ್ದಿ ಹಾಗೆ ಓಡೋಗೋದ, ನಿಲ್ಲಿಸಿದ್ರೆ ನಾವೇನು ಹೊಡೀತಿದ್ವ, ……. ಸಿಕ್ಕಬೇಕಿತ್ತು ಎಮ್ಮೆಗೆ ಆದಂಗೆ ಅವನಿಗೂ ಆಗಿರೋದು, ಪಕ್ಕದ ಮನೆ ಮಹೇಶ ಇದ್ದಿದ್ರೆ ಬಿಡ್ತಿರ್ಲ ಇವತ್ತು ಬೆರಸಿಕೊಂಡು ಓಡಿ ಹಿಡಿದು ತರ್ತಿದ್ದ ಇವತ್ತು ಡ್ರೈವರ್ ನ …ಬೋ…ಮಗ. ಅಂತ ಗುಣಗಾನ ನಡೀತಿತ್ತು.



ಈಗ ಹೊಲಗೆ ಇಲ್ಲ ಎಂದರೆ ಆ ಡ್ರೈವರ್ ಮೇಲಿನ ಸಿಟ್ಟೆಲ್ಲಾ ನನ್ನ ಮೇಲೆ ತಿರುಗೀತು ಎಂದು, ಮೊದಲು ಆಂಟಿಬಯೋಟಿಕ್ ಗಳು, ನೋವುನಿವಾರಕ #ಇಂಜೆಕ್ಷನ್ ಗಳನ್ನು ಕೊಟ್ಟ ನಂತರ , …ನಿದಾನವಾಗಿ ಬೋಜಪ್ಪ ಹೊಲಗೆ ಹಾಕೋಕೆ ಮರಗಟ್ಟಿಸುವ ಇಂಜೆಕ್ಷನ್ ಬೇಕಪ್ಪ. ಎಲ್ಲೋ ಹಳ್ಳಿಯಲ್ಲಿ ಇದ್ದವನು ರಾತ್ರಿ ನೇರವಾಗಿ ನಿಮ್ಮ ಮನೆಗೆ ಬಂದಿದೀನಿ. ಈಗ ಸದ್ಯಕ್ಕೆ ಅದಕ್ಕೆ ಬಟ್ಟೆ ಕಟ್ಟಿ, ಸುತ್ತಲಿನ ಜಾಗ ಸ್ವಚ್ಚವಾಗಿಡಿ, ನಾಳೆ ಬೆಳಿಗ್ಗೆ ಎಲ್ಲಾ ವ್ಯವಸ್ಥಿತವಾಗಿ ಮಾಡೋಣ. ಎಮ್ಮೆ 8 ತಿಂಗಳು ಗಬ್ಬ ಬೇರೆ ಇದೆ ಎಂದೆ. ಆ…ಏನ್ ಸಾ. ನಮ್ಮ ಎಮ್ಮೆ 8 ತಿಂಗಳು ಗಬ್ಬನಾ. ಅರೆರೆ ಇದು ಗಬ್ಬ ಆಗದೆ 3 ವರ್ಷ ಆಗಿತ್ತು ಎಂದವರೇ ನೋವಿನಲ್ಲೂ ಖುಷಿಯ ವಿಷಯ ಕೇಳಿ, ಆಯ್ತು ಸಾ … ಈಗ ಹಾಗೇ ಮಾಡಿ ನಿಮಗೆಲ್ಲಾ ಗೊತ್ತಿರ್ತದೆ ಬಿಡಿ ಎಂದವರೇ ನನ್ನ ಬೀಳ್ಕೊಟ್ಟರು.

ಅಂತೂ ಬೋಜಪ್ಪನವರನ್ನು ಸಮಾಧಾನ ಮಾಡಲು ಯಶಸ್ವಿಯಾದ ನಾನು ಮರುದಿನ ಬೆಳಿಗ್ಗೆ ಹೋಗಿ ಗಾಯವನ್ನು ಸ್ವಚ್ಛಗೊಳಿಸಿ ಹೊಲಗೆ ಮಾಡಿದೆ. ನಿರಂತರ 7 ದಿನಗಳ ಕಾಲ ಚಿಕಿತ್ಸೆ ಮಾಡಿ, ಎಲ್ಲವನ್ನೂ ಮೂಲ ಸ್ವರೂಪಕ್ಕೆ ತಂದೆ. 15 ದಿನಗಳ ನಂತರ ಹೊಲಗೆ ತೆಗೆದಾಗ ಬೋಜಪ್ಪ, ಸಾ …. ಆವತ್ತು ಇಷ್ಟೆಲ್ಲಾ ಗಾಯವಾಗಿದ್ದು ಇದೇ ಎಮ್ಮೆಗಾ ಅನ್ನೋದು ಡೌಟು ಬರೋ ಹಾಗೆ ಕೂಡಿಸಿ ಸರಿ ಮಾಡಿ ಕೊಟ್ರಲ್ಲ ಸಾರ್. ಗಬ್ಬಕ್ಕೂ ಏನೂ ತೊಂದರೆ ಆಗಲಿಲ್ಲ. ನಿಮ್ಮ #ಕೈಗುಣ ಸಾ…ಎಂದು ದಂಪತಿಗಳಿಬ್ಬರೂ ಹರಸಿ ಬೀಳ್ಕೊಟ್ಟರು.ನಮ್ಮ ಪಶುವೈದ್ಯರು ಇಂಥಹ ಅದೆಷ್ಟು ಪರಿಸ್ಥಿತಿಯನ್ನು ಎದುರಿಸಿದ್ದಾರೋ….ನೀವೆಲ್ಲರೂ ಕೂಡ ಬೋಜಪ್ಪನವರಂತೆ ಪರಿಸ್ಥಿತಿಯನ್ನು ಅರ್ಥೈಸಿ ಕೊಂಡು, ಸಮಾಧಾನ ವಹಿಸಿದರೆ ಕೆಲಸವೂ ಯಶಸ್ವಿಯಾಗುವುದು ಅಲ್ಲವೇ ಸ್ನೇಹಿತರೇ?

ಅಂತೂ ಆ ಸಂದಿಗ್ಧ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಸಮಾಧಾನವೂ ದೊರೆಯಿತು. ಇತ್ತೀಚೆಗೆ ಬೇಟಿ ನೀಡಿದಾಗ ಎಮ್ಮೆ ಆರೋಗ್ಯವಾಗಿದೆ. ಇನ್ನೇನು ತಿಂಗಳ ಒಳಗೆ ಕರು ಹಾಕುವಹಾಗಿದೆ.


  • ಡಾ.ಯುವರಾಜ್ ಹೆಗಡೆ (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW