ಆ ದಿನಗಳಲ್ಲಿ ಇಡೀ ಹಳ್ಳಿಯೇ ಜಾನಪದ ಸೊಗಡು ಸಂಪತ್ತಿನಿಂದ ಬೀಗುತ್ತಿತ್ತು.ವರ್ಷಕ್ಕೊಂದೆರೆಡು ಬಾರಿ ಜಾತ್ರೆಗಳು, ಬಯಲಾಟಗಳು, ಸಂತೆಯಲ್ಲಿ ಹೊಟ್ಟೆಪಾಡಿಗಾಗಿ ಬರುತ್ತಿದ್ದ ಹಾವಾಡಿಗರು, ಸುಂದರ ನೆನಪುಗಳಿದ್ದವು ಆದರೆ ಬರುಬರುತ್ತಾ ಆ ಹಳ್ಳಿಗಳು, ಕಳ್ಳುಬಳ್ಳಿಗಳು ಬದಲಾಗುತ್ತಾ ಹೋದವು, ಹಳ್ಳಿಬದುಕಿನ ಸುಂದರ ನೆನಪನ್ನುಲೇಖಕರು ಡಿ. ರಾಮನಮಲಿ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಏಳೆಂಟು ದಶಕಗಳ ಹಿಂದೆ ಭಾರತದ ಹಳ್ಳಿಗಳೆಂದರೆ ಕನಿಷ್ಠ ಇಪ್ಪತ್ತು ಮನೆಗಳಿಂದ ಹಿಡಿದು ನೂರಿನ್ನೂರು ಮನೆಗಳ ಕೂಡುವಿಕೆಯಿಂದ ಸೇರಿದ್ದ ಜನ ಸಮೂಹ. ಇಕ್ಕಟ್ಟಾದ ಒತ್ತೊತ್ತಾದ ಮನೆಗಳಲ್ಲಿ ಅನ್ಯೋನ್ಯವಾಗಿ ನೆಮ್ಮದಿಯಿಂದ, ವಸುದೈವ ಕುಟುಂಬಕಂ ಎಂದು ಬಾಳುತ್ತಿದ್ದ ಜನಪದರು. ಅದು ಅಂದಿನ ಹಳ್ಳಿ ಎಂಬ ಸಾರ್ವಕಾಲಿಕ ಸತ್ಯ, ಮತ್ತು ಪಟ್ಟಣಗಳನ್ನು ಅಭಿವೃದ್ಧಿ ಪಡಿಸುತ್ತಿದ್ದ ತಾಣ. “ಈ ದೇಶದ ಸಂಸ್ಕೃತಿ ಹಳ್ಳಿಗಳಲ್ಲಿದೆ” ಎಂದು ಗಾಂಧೀಜಿ ಹೇಳಿದ್ದರು. ಇಲ್ಲಿಯ ಸಂಸ್ಕೃತಿ ನೀವು ಪಾಶ್ಚಾತ್ಯ ದೇಶಗಳಲ್ಲಿಯೂ ನೋಡಿರಲಾರಿರಿ. ನಶಿಸಿಸಿ ಉಳಿದಿರುವ ಕಲೆಯ ಜಾಡನ್ನು ನೀವು ಅಲ್ಲಿ ಕಾಣುತ್ತೀರಿ ಎಂದು ಅಭಿಪ್ರಾಯ ಪಟ್ಟಿದ್ದರು. ಹಳ್ಳಿಯ ಹೆಸರುಗಳೆ ವೈವಿಧ್ಯಮಯವಾಗಿರುತ್ತಿದ್ದವು. ಬೆಣ್ಣಿಹಳ್ಳಿ, ತೂಲಹಳ್ಳಿ, ಕೂಲಹಳ್ಳಿ, ಸಾಸ್ವಿಹಳ್ಳಿ, ಸಾಲ್ಮೂರಹಳ್ಳಿ, ಕೆಸರಹಳ್ಲಿ, ನಾಗತಿಹಳ್ಳಿ, ತಂಬ್ರಹಳ್ಳಿ, ಬೊಮ್ಮನಹಳ್ಳಿ, ಹೀಗಿ ಸಾಗುತ್ತದೆ ಹಳ್ಳಿಗಳ ಹೆಸರಿನ ನಾಗಾಲೋಟ. ಹಳ್ಳಿಯೆಂಬ ಪೂರ್ವಾರ್ಧದಲ್ಲಿ ಅದರ ಚರಿತ್ರೆಯ ನಿಗೂಢವೇ ಅಡಗಿರುತ್ತದೆ, “ಹಳ್ಳಿ ಹಳ್ಳಿಗಳೆಂದು ಬೀಳುಗಳೆವರು ಕಣ್ಣು ಕಾಣದ ನಗರಿಗರು” ಎಂದು ಹಳ್ಳಿಗಳೆಂದರೆ ಮೂಗುಮುರಿಯುವ ಪ್ಯಾಟಿ ಜನಕ್ಕೆ ಹೇಳಬೇಕಾಗುತ್ತದೆ.

ಫೋಟೋ ಕೃಪೆ : google
ಇಂದಿಗೆ ನೂರು ನೂರೈವತ್ತು ವರ್ಷಗಳ ಹಿಂದೆ ಹಳ್ಳಿ ಎಂದರೆ ಗುಡಿಸಲು ಮತ್ತು ಮಣ್ಣಿನ ಮೇಲ್ಮುದ್ದಿಯ ಅಂಕಣ ಮನೆಗಳಾಗಿದ್ದವು. ಆರ್ ಸಿಸಿ. ಮನೆಗಳು ಇಡೀ ಹಳ್ಳಿಯಲ್ಲಿ ಒಂದೆರಡು ಮಾತ್ರ ಇರುತ್ತಿದ್ದವು. ಮನೆಗಳನ್ನು ಬಿಟ್ಟರೆ ಮಾಧ್ಯಮಿಕ ಶಾಲೆ, ಅಥವಾ ಪ್ರಾಥಮಿಕ ಶಾಲೆ, ಅಂಚೆ ಕಛೇರಿ, ಸರಕಾರಿ ಆಸ್ಪತ್ರೆ ಇರುತ್ತಿದ್ದವು. ಇಡೀ ಹಳ್ಳಿಗೆ ಆಂಜನೇಯ ದೇವಸ್ಥಾನ, ಊರಮ್ಮನ ದೇವಸ್ಥಾನ ಜೊತೆಗೆ ಇನ್ನೊಂದೆರಡು ದೇವಸ್ಥಾನಗಳಿರುತ್ತಿದ್ದವು. ಎರಡು ಹೆಚ್ಚೆಂದರೆ ಮೂರು ಕಿರಾಣಿ ಅಂಗಡಿಗಳು ಒಂದು ಸಣ್ಣ ಬಟ್ಟೆ ಅಂಗಡಿ ಮತ್ತು ಮೂರ್ನಾಲ್ಕು ಚಹದಂಗಡಿಗಳು ಇದ್ದೇ ಇರುತ್ತಿದ್ದವು.

ಫೋಟೋ ಕೃಪೆ : deccanchronicle
ಹಳ್ಳಿಯ ಎಲ್ಲಾ ಜನರು ರೈತಾಪಿಗಳೇ ಆಗಿದ್ದರು. ರೈತರಲ್ಲದವರು ಕೃಷಿಕೂಲಿ ಕಾರ್ಮಿಕರು, ಇತರೆ ಶ್ರಮಿಕ ವರ್ಗದವರು ಜೀವಿಸುತ್ತಿದ್ದರು. ಹಳ್ಳಿಗೆ ಒಂದು ಕ್ಷೌರದಂಗಡಿ, ಬೀಸುವ ಗಿರಣಿ ಅಂಗಡಿ ಬೇಡವೇ? ಅವು ಹಳ್ಳಿಯ ಭಾಗವಾಗಿದ್ದವು. ಹಳ್ಳಿಯಿಂದ ಹಳ್ಳಿಗೆ ಅಂದಿನ ಸಂಪರ್ಕ ಸಾಧನವೆಂದರೆ ಕಾಲ್ನಡಿಗೆಯೇ ಪ್ರಮುಖವಾಗಿತ್ತು. ಜಾತ್ರೆ ಮತ್ತು ವಿಶೇಷ ಸಂದರ್ಭ ಇದ್ದರೆ ಎತ್ತಿನ ಬಂಡಿಗಳ ಮೂಲಕ ಹೋಗುತ್ತಿದ್ದರು. ಪೇಟೆಗೆ ಹೋಗಲು ದಿನಕ್ಕೊಂದೆರಡು ಹಳೆ ಬಸ್ಸುಗಳು ಬಂದು ಹೋಗುತ್ತಿದ್ದವು. ಹಳ್ಳಿಯಲ್ಲಿ ಇಬ್ಬರು ಮೂವರು ಧಣಿಗಳು ಇರುತ್ತಿದ್ದರು. ಅವರು ನಾಲ್ಕೆತ್ತಿನ, ಎಂಟೆತ್ತಿನ ಕಮತದ ಜೊತೆಗೆ ಬಡ್ಡಿ ಬಾಚಿ ವ್ಯವಹಾರ ಮಾಡುತ್ತಿದ್ದರು. ಯಾರಿಗಾದರು ಸಾಲ ಕೊಡುವಾಗ ಪ್ರಾಂಸರಿ ನೋಟು ಬರೆಸಿಕೊಂಡು ಕೊಡುತ್ತಿದ್ದರು. ಸಹಿ ಮಾಡಲು ಬರದ ಅನಕ್ಷರಸ್ತರಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಿದ್ದರು. ಇದಕ್ಕಾಗಿ ಆಧುನಿಕ ಪ್ಯಾಡ ಇರುತ್ತಿರಲಿಲ್ಲ. ಬಂಡಿಗಾಲಿಗೆ ಹಚ್ಚುತ್ತಿದ್ದ ಕೀಲೆಣ್ಣಿ ಹೆಬ್ಬೆಟ್ಟಿಗೆ ಸವರಿ ಪ್ರಾಂಸರಿ ನೋಟಿನ ಮೇಲೆ ಒತ್ತಿಸಿಕೊಳ್ಳುತ್ತಿದ್ದರು.

ಫೋಟೋ ಕೃಪೆ : Hindustan Times
ಇಡೀ ಹಳ್ಳಿಯಲ್ಲಿ ಸ್ವಲ್ಪ ಶ್ರೀಮಂತರೆನಿಸಿಕೊಂಡವರ ನಾಲ್ಕೈದು ಸೈಕಲ್ಲುಗಳಿರುತ್ತಿದ್ವು. ಮತ್ತು ಒಂದು ಪಟಪಟಿ ಇದ್ದರೆ ಅಪರೂಪ ಎಂದೇ ಹೇಳಬಹುದು. ಸೈಕಲ್ಲು ನಿರ್ವಹಣೆಗಾಗಿ ಸೈಕಲ್ ಷಾಪು ಬೇಡವೇ? ಅದು ಇರುತ್ತಿತ್ತು. ಶ್ರೀಮಂತರೆನಿಸಿಕೊಂಡವರ ಮನೆಯಲ್ಲಿ ಬೆರಳೆಣಿಕಿಯಷ್ಟು ಫಿಲಿಪ್ಸ, ಮರ್ಫಿ ರೆಡಿಯೋಗಳು ಸುದ್ದಿ ಬಿತ್ತರಿಸಲಿಕ್ಕೆ ಇರುತ್ತಿದ್ದವು. ಹಳ್ಳಿಯ ಎಲ್ಲಾ ರೈತಾಪಿ ಜನರು ಮಳೆ ಎಂಬ ದೇವರನ್ನೇ ಆಶ್ರಯಿಸಿ ಒಕ್ಕಲುತನ ಮಾಡುತ್ತಿದ್ದರೆ, ಎಲ್ಲಿಯೋ ಒಂದೆರಡು ತೆರೆದ ಭಾವಿಯಿಂದ ಕಪಿಲೆ ಮೂಲಕ ಮೂರ್ನಾಲ್ಕು ಎಕರೆ ನೀರಾವರಿ ಮಾಡಿಕೊಂಡಿರುತ್ತಿದ್ದರು.
ವರ್ಷಕ್ಕೊಂದೆರೆಡು ಬಾರಿ ಜಾತ್ರೆ ಜರುಗುತ್ತಿದ್ದವು. ಜಾತ್ರೆಯ ಸಂದರ್ಭದಲ್ಲಿ ಎರಡು ನಾಟಕ ಮತ್ತು ಬಯಲಾಟಗಳು ಮನೋರಂಜನೆಯನ್ನು ಒದಗಿಸುತ್ತಿದ್ದವು. ಆ ಸಂದರ್ಭದಲ್ಲಿಯೇ ಕರಿಯ ದಿವಸ ಕುಸ್ತಿ ಪಂದ್ಯಾಟಗಳು ಜರುಗುತ್ತಿದ್ದವು. ಅನೇಕ ಹಳ್ಳಿಗಳಲ್ಲಿ ಮೂರ್ನಾಲ್ಕು ಗರಡಿ ಮನೆಗಳಿರುತ್ತಿದ್ದವು. ಇಲ್ಲಿಯೂ ಎಂಟ್ಹತ್ತು ಕುಸ್ತಿ ಪಟುಗಳು ತಯಾರಾಗುತ್ತಿದ್ದರು. ಕುಸ್ತಿ ಪಂದ್ಯಾಟಗಳೆಂದರೆ ಗ್ರಾಮೀಣ ಜನರಿಗೆ ಬಲು ಹುರುಪು. ಎರಡು ಮೂರು ವರ್ಷಕ್ಕೊಮ್ಮೆ ಸರ್ಕಸ್ ಕಂಪನಿ ಬಂದು ರಂಜಿಸುತ್ತಿತ್ತು. ಜಾತ್ರೆ ಬಿಟ್ಟರೆ ಹಳ್ಳಿಗಳಲ್ಲಿ ಜಾತ್ಯಾತೀತವಾಗಿ ಆಚರಿಸುವ ಹತ್ತು ದಿನಗಳ ಮೊಹರಂ ಎಲ್ಲರಿಗೂ ಹಬ್ಬವಾಗಿಯೂ ಜಾನಪದ ಕಲೆಗಳ ಕಬ್ಬವಾಗಿಯೂ ಗ್ರಾಮೀಣ ಭಾಗದ ಜನರ ಹೃದಯದ ಕೊಂಡಿಯಾಗಿತ್ತು.

ಫೋಟೋ ಕೃಪೆ : prokerala.
ಆ ದಿನಗಳಲ್ಲಿ ಇಡೀ ಹಳ್ಳಿಯೇ ಜಾನಪದ ಸೊಗಡು ಸಂಪತ್ತಿನಿಂದ ಬೀಗುತ್ತಿತ್ತು. ವಾರಕ್ಕೊಮ್ಮೆ ಸಂತೆಯಲ್ಲಿ ಹೊಟ್ಟೆಪಾಡಿಗಾಗಿ ಬರುತ್ತಿದ್ದ ಹಾವಾಡಿಗರು, ಜರಬುರು ದುರುಗಿಯವರು, ಮಂಗಳವಾರ, ಶುಕ್ರವಾರ ಮನೆ ಮನೆಗೆ ಪಡ್ಲಿಗಿ ಹಿಡಿದು ಬರುತ್ತಿದ್ದ ಜೋಗಮ್ಮನವರು, ವರ್ಷಕ್ಕೊಂದು ಬಾರಿ ಬಂದು ತಿಂಗಳುಗಟ್ಟಲೆ ತಮ್ಮ ಕಲೆ ಪ್ರದರ್ಶಿಸುತ್ತಿದ್ದ ಹಗಲು ವೇಷಗಾರರು ಠಿಕಾಣಿ ಹಾಕುತ್ತಿದ್ದರು. ಬೆಳ್ಳಂಬೆಳಗ್ಗೆ ತನ್ನ ಶಂಖ ಗಂಟೆ ನಾದಗಳಿಂದ ಹಾಡುತ್ತಾ ಬರುತ್ತಿದ್ದ ಗಳಗಳ ಸಿದ್ದಯ್ಯ, ಆನಂತರ ಬರುತ್ತಿದ್ದ ಜೋಗಯ್ಯನವರು ಓಣಿಗೆ ಬಂದು ಮನೋರಂಜನೆ ಒದಗಿಸುತ್ತಿದ್ದ ಕಾಡು ಸಿದ್ದಯ್ಯನವರು, ತಮ್ಮ ಕಲೆಗಳ ಪ್ರದರ್ಶನ ಮಾಡಿ ಗ್ರಾಮೀಣರನ್ನು ರಂಜಿಸುತ್ತಿದ್ದರು. ತಂಬೂರಿ ಹಿಡಿದು ಬರುತ್ತಿದ್ದ ದಾಸಪ್ಪನವರು ಶಂಖ ಊದುತ್ತಾ ಬರುವ ದಾಸಪ್ಪನವರು ಎಣ್ಣೆ ಜೋಗಪ್ಪನವರು ಭಿಕ್ಷೆಯನ್ನರಸಿ ಬರುತ್ತಿದ್ದರು. ಗಂಗೆ ಗೌರಮ್ಮ ಜೂಜನಾಡುವರು ಎಂದು ಜನಪದ ಹಾಡು ಹೇಳುವ ಹೆಂಗಸರು, ಆರಾರು ಬೋಡಮ್ಮನವರು ಆಗಾಗ ಕಾಣಿಸಿಕೊಳ್ಳುತ್ತಿದ್ದರು. ದೊಂಬರಾಟದವರು, ಮೋಡಿಗಾರರು ಹೊಟ್ಟೆ ಹೊರೆಯಲು ಬರುತ್ತಿದ್ದರು. ಹುಣ್ಣಿಮೆ ಹಬ್ಬಗಳಲ್ಲಿ ಕೋಲಾಟ, ಡೊಳ್ಳು ಕುಣಿತಗಳ ಭರ್ಜರಿ ಆರ್ಭಟ ಮೈನವಿರೇಳಿಸುತ್ತಿತ್ತು.
ನಾಗರಪಂಚಮಿಯಂತು ಯುವಕರಿಗೆ ನಾನಾ ಸ್ಪರ್ಧಿಗಳಿಗೆ ಆಡಂಬೋಲವಾಗಿದ್ದರೆ, ಮಹಿಳೆಯರಿಗೆ ಜನಪದ ಹಾಡುಗಳ ಜೀಕುವ ಉಯ್ಯಾಲೆ ಆಗಿರುತ್ತಿತ್ತು. ಇವಲ್ಲದೆ ಕಾರಹುಣ್ಣಿಮೆಯಂದು ಕರಿ ಹರಿಯುವುದು ಗೆದ್ದ ಎತ್ತನ್ನು ಮೆರವಣಿಗೆ ಮಾಡುತ್ತಿದ್ದರು. ದಸರೆ, ದೀಪಾವಳಿ, ಉಗಾದಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದರು.

ಫೋಟೋ ಕೃಪೆ : google
ಐವತ್ತು ಅರವತ್ತರ ದಶಕದಲ್ಲಿ ಶೌಚಾಲಯಗಳು ಇನ್ನೂ ಹಳ್ಳಿಗಳನ್ನು ಆವರಿಸದಿದ್ದ ಕಾಲದಲ್ಲಿ ಎಲ್ಲರೂ ತಮ್ಮ ದೇಹ ಬಾಧೆ ತೀರಿಸಿಕೊಳ್ಳಲು ನೀರು ತುಂಬಿದ ಚರಿಗೆಯನ್ನು ಹಿಡಿದುಕೊಂಡು ಊರ ಹೊರಗಿನ ಕಳ್ಳಿಸಾಲುಗಳ ಮರೆ ಆಶ್ರಯಿಸಿಕೊಳ್ಳಬೇಕಾಗಿತ್ತು. ಹೀಗಾಗಿ ಬೆಳಗ್ಗೆನೆ ಒಬ್ಬರನ್ನೊಬ್ಬರು ನೋಡುವ ಸಂದರ್ಭ ಬಂದು, “ಎದ್ರೇನಪಾ, ಎದ್ವೆಪಾ ಎದ್ರ್ಯಾ” ಎನ್ನುವ ಶುಭ ಮುಂಜಾನೆಯ ವಿನಿಮಯ ಮತ್ತು ಯೋಗಕ್ಷೇಮ ವಿಚಾರಗಳ ತಾಣ ಆಗಿರುತ್ತಿತ್ತು. ಹೆಣ್ಣುಮಕ್ಕಳಿಗಂತೂ ಮನೆಯ ಸುಖದುಖ ತೋಡಿಕೊಳ್ಳುವ ಸಂದರ್ಭ ಆಗಿತ್ತು. ಆಗಿನ್ನು ದೂರದರ್ಶನ ವಕ್ಕರಿಸಿರಲಿಲ್ಲ. ಮೊಬೈಲ ಎಂಬ ಬಹುರೂಪಿಯ ಅವಾಂತರ ಅದೇನೆಂಬುದು ಗೊತ್ತೇ ಇದ್ದಿಲ್ಲ .ಭಾನುವಾರಕ್ಕೊಮ್ಮೆ ಬರುವ ಇಪ್ಪತ್ತು ನಿಮಿಷಗಳ ಚಲನಚಿತ್ರ ಗೀತೆ ಕೇಳಲು ರೇಡಿಯೋ ಇದ್ದ ಸ್ನೇಹಿತರ ಮನೆಯಲ್ಲಿ ಜಮಾಯಿಸುತ್ತಿದ್ದೆವು. ಬೆಳದಿಂಗಳ ಸಮಯದಲ್ಲಿ ರೈತಾಪಿ ಜನರು, ಯುವಕರು ರಾತ್ರಿ ಹುಡ್ತಿತಿ, ಚಡುಗುಡು, ಕಿಳ್ಳೆಪಟ್ಟಿ, ಕಬಡ್ಡಿ ಆಡುತ್ತಿದ್ದರು. ಹುಡುಗರು ಲಗೋರಿ, ಗೋಲಿ, ಬುಗುರಿ, ಚಿಣ್ಣಿದಾಂಡು, ಐಸ್ ಪೈಸ್ ಕುಂಟಾಬಿಲ್ಲೆ, ಕಣ್ಣಾಮುಚ್ಚಾಲೆ ಆಡುತ್ತಿದ್ದರು.
ಬಡತನವೇ ಮೈವೆತ್ತಂತಿಂದ್ದ ಹಳ್ಳಿಗಳಲ್ಲಿ ಸಾಂಸ್ಕೃತಿಕ ಧೀಮಂತಿಕೆ ಢಾಳಾಗಿ ಕಾಣುತ್ತಿತ್ತು. ಅಂದು ಎಲ್ಲರ ಕೈಯಲ್ಲಿ ದುಡ್ಡೇ ಇರುತ್ತಿರಲಿಲ್ಲ. ವಾರಕ್ಕೊಮ್ಮೆ ಸಂತೆಯ ಸಂದರ್ಭದಲ್ಲಿ ಮಾತ್ರ ಅವರು ಸಂಪಾದಿಸಿದ ಹಣ ತರಕಾರಿಕೊಳ್ಳಲು, ದಿನಸಿ ಖರಿದಿಸಲು ವಿನಿಮಯವಾಗುತ್ತಿತ್ತು. ರೈತರು ಆಹಾರಕ್ಕಾಗಿ ಬೇಕಾಗುವ ಜೋಳ, ಸಜ್ಜೆ, ನವಣೆ ದ್ವಿವಳ ಧಾನ್ಯಗಳನ್ನು ಹೊಲದಿಂದಲೇ ಸಂಗ್ರಹಿಸಿಕೊಳ್ಳುತ್ತಿದ್ದರು. ಕಬ್ಬಿನ ಗಾಣದಿಂದ ಬೆಲ್ಲ ಸಂಗ್ರಹಿಸಿಕೊಳ್ಳುತ್ತಿದ್ದರು. ಹಣದ ವಹಿವಾಟು ಬಿಲ್ ಕುಲ್ ಕಡಿಮೆ ಎಂದೇ ಹೇಳಬಹುದು. ಬಹಳಷ್ಟು ಗ್ರಾಮೀಣರು ಅಣ್ಣ,ತಮ್ಮ, ಮಾವ ಅಳಿಯ, ಸಣಪ್ಪ ದೊಡ್ಡಪ್ಪ, ಅತ್ತಿ ಸೊಸೆ, ಬಾಂಧವ್ಯೆದಿಂದ ಬೆಸಗೊಂಡಿದ್ದರು. ವಿಶೇಷ ಸಂದರ್ಭಗಳನ್ನು ಹೊರತಪಡಿಸಿದರೆ “ಹೊಲ ಬಿಟ್ಟರೆ ಮನಿ, ಮನಿ ಬಿಟ್ಟರೆ ಹೊಲ” ಎನ್ನುವ ಮಣ್ಣಿನ ಮಕ್ಕಳು ಗ್ರಾಮೀಣರಾಗಿದ್ದರು. ಇಡೀ ಹಳ್ಳಿಯ ಚೆಕ್ಕುಬಂದಿಯೆಂದರೆ ಹಳ್ಳಿಯ ಸುತ್ತಮುತ್ತಲಿರುವ ತಿಪ್ಪೆಗುಂಡಿಗಳು. ಇವು ರೈತರ ಹೊಲದ ಕಸುವುಗೊಳಿಸುವ ಆಧಾರಗಳಾಗಿದ್ದವು.

ಇಂಥಪ್ಪ ಭೇದ ಭಾವವಿಲ್ಲದ ವರ್ಣಾನಾತೀತವಾದ ಹಳ್ಳಿಗಳು ತೊಂಬತ್ತರ ದಶಕದ ನಂತರ ಇಂದಿನವರೆಗೆ ಅಲ್ಲಾವುದ್ದೀನನ ಅದ್ಭುತ ದೀಪದ ಹಾಗೆ, ಅಭಿವೃದ್ಧಿ ಎಂಬ ಬದಲಾವಣೆಯ ಬಿರುಗಾಳಿಗೆ ತತ್ತರ ಬಿತ್ತರಗೊಂಡಿವೆ. ನೂರಿನ್ನೂರು ಇದ್ದ ಮನೆಗಳು ನಾಲ್ಕಂಕೆಯನ್ನು ದಾಟಿ ದಾಂಗುಡಿ ಇಟ್ಟಿವೆ. ದೀಪ ಹಚ್ಚಿ ಹುಡುಕಲು ಅಥವಾ ಸಂಶೋಧನೆ ಮಾಡಲು ಈಗ ಗುಡಿಸಲು ಮನೆಗಳಿಲ್ಲ. ಅಂಕಣದ ಮನೆಗಳೆಲ್ಲವೂ ವಾಸ್ತುವನ್ನಾಧರಿಸಿದ ಆರ್ ಸಿಸಿ ಮನೆಗಳಾಗಿ ಎಲ್ಲವೂ ಶೌಚಾಲಯ ಸೌಲಭ್ಯ ಹೊಂದಿವೆ. ಕೇವಲ ಪ್ರಾಥಮಿಕ ಶಾಲೆಯಿದ್ದ ಹಳ್ಳಿ ಈಗ ಪ್ರೌಢಶಾಲೆ, ಮತ್ತು ಪದವಿಪೂರ್ವ ಕಾಲೇಜ ಸೌಲಭ್ಯ ಹೊಂದಿವೆ. ಜೊತೆಗೆ ವೃತ್ತಿ ನಿರತ ತರಬೇತಿ ಕೇಂದ್ರ ಮತ್ತು ಖಾಸಗಿ ಸಂಸ್ಥೆಗಳ ಶಾಲೆಗಳು ತಲೆ ಎತ್ತಿವೆ. ಕೇವಲ ಮಳೆಯಾಶ್ರಿತವಾಗಿದ್ದ ಭೂಮಿಗಳು ಏತ ನೀರಾವರಿಯಿಂದ ಬೋರವೆಲಗಳ ನೆರವಿನಿಂದ ಬರಗಾಲದಿಂದ ಸ್ವಲ್ಪ ಮುಕ್ತಿ ಹೊಂದಿವೆ ಎನ್ನಬಹುದು. ಹೀಗಾಗಿ ಎರಡೆರಡು ಬೆಳೆ ತೆಗೆಯುವದರಿಂದ ಬೆಳೆಗಳ ಆವಕ ಹೆಚ್ಚಾಗಿದೆ. ಫಿರ್ಕಾದಂತಹ ಹಳ್ಳಿಯಲ್ಲಿ ಹತ್ತನ್ನೆರಡು ದಲ್ಲಾಳಿ ಅಂಗಡಿಗಳು ತಲೆ ಎತ್ತಿವೆ.
ರೈತರಿಗೆ ರಸಗೊಬ್ಬರ, ಬೀಜ, ಕ್ರಿಮಿನಾಶಕ ಔಷಧ ಪೂರೈಸಿ ಕಟಾವು ಆದನಂತರ ಅವರ ಬೆಳೆಗಳನ್ನು ಖರೀದಿ ಮಾಡುತ್ತವೆ. ಈಗ ಸುಮಾರು ಹತ್ತು ದೊಡ್ಡ ಕಿರಾಣಿ ಅಂಗಡಿಗಳು, ಅಷ್ಟೇ ಸಣ್ಣ ಕಿರಾಣಿ ಅಂಗಡಿಗಳಿವೆ. ಬ್ರೆಡ್ಡನ್ನೆ ಕಾಣದಿದ್ದ ಊರಲ್ಲಿ ಈಗ ನಾಲ್ಕು ಬೇಕರಿ ಅಂಗಡಿಗಳು ಬಂದು ಕುಳಿತಿವೆ. ಪಾನಪ್ರಿಯರ ದಾಹ ತಣಿಸಲು ಒಂದು ವ್ಯವಸ್ಥಿತ ಗಡಂಗು ಪ್ರಾರಂಭವಾಗಿದೆ. ತೊಂಬತ್ತು ದಶಕದವರೆಗೆ ಎರಡು ಮೊಪೆಡ್ ಎರಡು ಸುಜುಕಿಗಳಿದ್ದ ಹಳ್ಳಿಯಲ್ಲಿ ಈಗ 200 ಕಾರುಗಳು, 300 ದ್ವಿಚಕ್ರ ವಾಹನಗಳಿವೆ. ನಗರ ಪ್ರದೇಶಗಳಲ್ಲಿ ಎಲ್ಲರ ಮನೆ ಮುಂದೆ ಕಾರುಗಳಿರುವಂತೆ ಹಳ್ಳಿಗಳಲ್ಲಿ ಎಲ್ಲರ ಮನೆ ಮುಂದೆ ಟೂವೀಲರಗಳು ರಾರಾಜಿಸುತ್ತವೆ. ಇಷ್ಟು ವಾಹನಗಳಿಗೆ ಇಂಧನ ಪೂರೈಸಲು ಎರಡು ಬಂಕುಗಳು ಬಂದಿವೆ. ವಾಹನಗಳ ಮುತುವರ್ಜಿಗೆಂದು ಹತ್ತಾರು ಮೆಕ್ಯಾನಿಕ ಷಾಪುಗಳು ತೆರೆದಿವೆ.
ಎಲ್ಲಿಂದ ಬಂದವೋ ಇದಿಮಾಯೆಯಂತೆ! 90 ರ ದಶಕದಲ್ಲಿ ಕಡ್ಡಿ ಪೆಟ್ಟಿಗೆ ಆಕಾರವಿದ್ದ ಮೊಬೈಲುಗಳು ನಾನಾ ರೀತಿಯ ರೂಪಾಂತರಹೊಂದಿವೆ. ಈಗ ಅಂಗೈ ಅಗಲದ ಟಚ್ ಸ್ರೀನ ಮೊಬೈಲಗಳು ಎಲ್ಲರ ಕೈಯಲ್ಲಿ ವಿಜೃಂಭಿಸುತ್ತ ಆಧುನಿಕ ಭಸ್ಮಾರರಂತೆ ಕಾಲವನ್ನು ಅಣಕಿಸುತ್ತವೆ. ದನಗಾಹಿ, ಕುರಿಗಾಹಿ, ಕೃಷಿ ಕೂಲಿಕಾರರಿಂದ ಎಲ್ಲಾ ವರ್ಗದವರ ಕೈಯಲ್ಲಿ ಮೊಬೈಲ ಬಂದು ವಿನಾಕಾರಣ ಸಮಯ ವ್ಯರ್ಥ ಮಾಡಿಕೊಳ್ಳುವ ಫೋಬಿಯಾ ಆಗಿದೆ. ಇವುಗಳು ನಿರ್ವಹಣೆಗಾಗಿ ನಾಲ್ಕು ದಿಕ್ಕಿನಲ್ಲಿ ದಿಕ್ಪಾಲಕರಂತೆ ಮುಗಿಲಿಗೆ ತಲೆ ಎತ್ತಿರುವ ಟವರುಗಳು ನಿಂತಿವೆ. ದೂರದರ್ಶನಗಳಂತು ಎಲ್ಲರ ಮನೆಯನ್ನಲಂಕರಿಸಿವೆ. ಚಿಟ್ಟು ಹಿಡಿಸುವ ಧಾರಾವಾಹಿಗಳು ತಲೆ ಕೆಡಿಸುವ ಸುದ್ದಿ ವಾಹಿನಿಗಳಿಂದ ವೀಕ್ಷಕರು ಕಂಗಾಲಾಗಿದ್ದರೂ ಈ ಮಾಯಾ ಪೆಟ್ಟಿಗೆಯ ಮೋಡಿಗೆ ಫಿದಾ ಆಗಿದ್ದಾರೆ. ಜಲ್ಲಿ ಕಾಣದ ರಸ್ತೆಗಳು ಸಿ.ಸಿ. ರಸ್ತೆಯಾಗಿ ಪರಿವರ್ತಿತವಾಗಿವೆ.

ಫೋಟೋ ಕೃಪೆ : wikipedia.
ಒಂದು ಕಾಲದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರನ್ನು ಊರಿನ ಹಿರಿಯರೆಲ್ಲರೂ ಸೇರಿ ಒಮ್ಮತದ ಆಯ್ಕೆ ಮಾಡಿ ನಂತರ ಛೇರಮನ್ನರನ್ನು ಮಾಡುತ್ತಿದ್ದರು. ಈಗ ಆ ಕಾಲ ಹೋಗಿ ನಗರಗಳ ರಾಜಕೀಯ ಹಳ್ಳಿಗೂ ಕಾಲಿರಿಸಿ ವಾರ್ಡಿನ ಸದಸ್ಯರ ಆಯ್ಕೆಗೂ ಮತದಾರರಿಗೆ ನಾನಾ ಆಮಿಷ ಒಡ್ಡಿ ಜಯಿಸಬೇಕಾಗಿದೆ. ಅಂದು ಕಾಂಗ್ರಸ ಬಿಟ್ಟರೆ, ಸ್ವತಂತ್ರ ಪಕ್ಷ ಎಂದು ಇರುತ್ತಿದ್ದ ವಾತಾವರಣ ಹೋಗಿ ಈಗ ಎಲ್ಲಾ ಪಕ್ಷಗಳ ರಾಜಕೀಯ ಹಳ್ಳಿಯನ್ನು ಹದಗೆಡಿಸುತ್ತದೆ. ಎಲ್ಲರ ಕೈಯಲ್ಲಿ ಈಗ ಹಣ ಚಲಾವಣೆ ಆಗುತ್ತಿರುವುದರಿಂದ ಎರಡು ಬ್ಯಾಂಕುಗಳು ಇವೆ. ಕೂಲಿಕಾರರು, ಕೃಷಿ ಕಾರ್ಮಿಕರು ಎಲ್ಲರೂ ಬ್ಯಾಂಕಿಗ ವ್ಯವಹಾರ ಮಾಡುತ್ತಾರೆ. ಎ.ಟಿ.ಎಂ, ಪ್ರತಿಯೊಬ್ಬರ ಜೇಬಿನಲ್ಲಿದೆ. ಆನಲೈನ ವ್ಯವಹಾರ ಹಾಸುಹೊಕ್ಕಾಗಿದೆ. ಸರಕಾರಿ ಆಸ್ಪತ್ರೆ, ಪಶು ಆಸ್ಪತ್ರೆ, ಕೃಷಿ ಕೇಂದ್ರ, ನಾಡಕಛೇರಿ ಎಲ್ಲವೂ ಬಂದು ಮಾದರಿ ಹಳ್ಳಿಗಳಾಗಿವೆ. ಔಷಧಿಗಾಗಿ ತಾಲೂಕು ಕೇಂದ್ರ ಅಲೆಯುವುದು ತಪ್ಪಿ ಹಳ್ಳಿಗಳಲ್ಲಿಯೇ ಈಗ ಒಂದೆರಡು ಮೆಡಿಕಲ ಷಾಪ್ ತೆರೆದಿವೆ. ಕೆಲ ಖಾಸಗಿ ವೈದ್ಯರು ವೃತ್ತಿ ನಡೆಸುತ್ತಿದ್ದಾರೆ.
ಹಳ್ಳಿಗಳೆಂಬ ಅಭಿದಾನ ಹೊತ್ತು ಏನೆಲ್ಲಾ ಆಧುನಿಕತೆಯ ಬದಲಾವಣೆಗೆ ಒಳಗಾಗಿದ್ದರೂ ತಲತಲಾಂತರದಿಂದ ಬಚ್ಚಿಟ್ಟುಕೊಂಡಿರುವ ಕಳ್ಳುಬಳ್ಳಿಯ ಸಂಬಂಧ ಬಿಟ್ಟುಕೊಟ್ಟಿಲ್ಲ. ಇತ್ತೀಚೆಗೆ ನಗರಗಳ ನಾಗರೀಕತೆಯ ಛಾಯೆ ಆವರಿಸಿದ್ದರೂ ಇಲ್ಲಿ ಪ್ರೀತಿ, ಪ್ರೇಮಕ್ಕೇನೂ ಕಡಿಮೆಯಾಗಿಲ್ಲ. ಅಕ್ಕಪಕ್ಕದ ಮನೆಯವರೆಲ್ಲರೂ ಯಾವುದೇ ಜಾತಿಯಿರಲಿ ಪ್ರೀತಿ ಮತ್ತು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಹಿಂದಿನಂತೆಯೇ ಹಬ್ಬ ಹರಿದಿನಗಳಲ್ಲಿ ಭಾವೈಕ್ಯತೆ ಮೆರೆಯುತ್ತಿದ್ದಾರೆ. ಎಲ್ಲಾ ಜಾತಿ ಜನಾಂಗದವರಿದ್ದರೂ, ಜಾತಿಯ ಅಮಲು ಹೆಚ್ಚಾಗಿ ಕಾಣುವುದಿಲ್ಲ. ಹೀಗಾಗಿ ಕೋಮುಸಾಮರಸ್ಯ ಇಲ್ಲಿ ಸದಾ ಮಿಡಿಯುತ್ತಿರುತ್ತದೆ. ಯಾವುದೇ ಚುನಾವಣೆಗಳು ಬಂದರೂ ಯಾವುದೇ ಪಕ್ಷಗಳಲ್ಲಿದ್ದರೂ ಯುವಕರು, ಚುನಾವಣೆ ಆದ ಮರುದಿನವೆ ಹೆಗಲಮೇಲೆ ಕೈ ಹಾಕಿಕೊಂಡು ಚಹಾ ಹೋಟೆಲಗಳಗೆ ಹೋಗುತ್ತಾರೆ. ಚುನಾವಣಾ ದ್ವೇಷಕ್ಕೆ ಯಾರೂ ಬಲಿಯಾಗುವುದಿಲ್ಲ. ಏಕೆಂದರೆ ದಿನಾಪ್ರತಿ ಒಬ್ಬರ ಮುಖ ಒಬ್ಬರು ನೋಡಬೇಕು. ನಗರದ ನಾಯಕರು ಬಂದು ಹಚ್ಚುವ ರಾಜಕೀಯ ದೊಂಬರಾಟವನ್ನು ಗ್ರಾಮೀಣರು ಅಷ್ಟಾಗಿ ಸಿರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ನಗರ ಪ್ರದೇಶಗಳಲ್ಲಿ ಯಾರಾದರೂ ಸತ್ತರೆ ಕೆಟ್ಟರೆ ಅಕ್ಕಪಕ್ಕದವರು ಕ್ಯಾರೇ ಎನ್ನವುದಿಲ್ಲ. ಹಳ್ಳಿಗಳಲ್ಲಿ ಯಾರೇ ಇಹಲೋಕ ತ್ಯಜಿಸಿದರೆ ಎಲ್ಲಾ ಜಾತಿ ಜನಾಂದವರು ಬಂದು ಅಂತಿಮ ದರ್ಶನ ಪಡೆಯುತ್ತಾರೆ. ಬಹಳಷ್ಟು ಜನರು ಅಂತ್ಯ ಸಂಸ್ಕಾರದಲ್ಲು ಭಾಗವಹಿಸುತ್ತಾರೆ. ಗ್ರಾಮೀಣರು ಇದನ್ನು ತಪ್ಪದೆ ನಡೆಸಿಕೊಂಡು ಬಂದಿದ್ದಾರೆ. ಮಾನವೀಯತೆಯ ತುಡಿತ ಇನ್ನೂ ಇಲ್ಲಿ ಜೀವಂತವಾಗಿದೆ.

ಫೋಟೋ ಕೃಪೆ : chaha
ದಸರೆ ಹಬ್ಬ (ಬನ್ನಿ ಮುಡಿಯುವುದು) ದಂದು ಗ್ರಾಮೀಣ ಜನರು ಚಿಕ್ಕವರು ದೊಡ್ಡವರೆನ್ನದೆ ಬನ್ನಿ ತೆಗೆದುಕೊಂಡು ಎಲ್ಲರ ಮನೆಮನೆಗೆ ಹೋಗಿ ಬನ್ನಿ ಕೊಟ್ಟು ಚಿಕ್ಕವರು ದೊಡ್ಡವರಿಗೆ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಳ್ಳುವ ಪರಂಪರೆ ಆಧುನಿಕತೆಯ ಭರಾಟೆಯಲ್ಲೂ ಜೀವಂತವಾಗಿದೆ. ಈ ಸಂಪ್ರದಾಯ ಇಂದಿಗೂ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಹಳ್ಳಿಗಳಲ್ಲಿ ಯಾವುದಾದರೂ ದೇವಸ್ಥಾನದಲ್ಲಿ ಭಜನೆ ಮಾಡುತ್ತಾರೆ. ಅನೇಕ ತತ್ವಪದಗಳನ್ನು, ಶರಣರ ವಚನಗಳನ್ನು, ಬೇರೆ ಕಡೆ ಪ್ರಸಿದ್ಧವಾದ ಹಾಡುಗಳನ್ನು ಏಳೆಂಟು ಜನರು ಕೂಡಿಕೊಂಡು ತಾಸೆರಡು ತಾಸು ಭಜನೆ ಮಾಡುತ್ತಾರೆ. ಕೆಲವು ಪಕ್ಕವಾದ್ಯಗಳಾದ ಕೈಪೆಟ್ಟಿಗೆ, ತಬಲಾ, ಕೈತಾಳಗಳೊಂದಿಗೆ ಹಾಡುತ್ತಿದ್ದರು. ಇಂಥ ಸಂದರ್ಭದಲ್ಲಿ ಎಲ್ಲಾ ಜಾತಿ ಜನಾಂಗದವರು ಸೇರಿರುತ್ತಿದ್ದರು. ಕೈಪೆಟ್ಟಿಗೆಯನ್ನು ನಬೀಸಾಬ ನುಡಿಸುತ್ತಿದ್ದರೆ, ಡಗ್ಗ ಮಡಿವಾಳರ ಸಿದ್ದಪ್ಪ ಬಾರಿಸುತ್ತಿದ್ದ. ಹೀಗೆ ಭಜನೆ ಮಾತ್ರ ಅನೇಕತೆಯಲ್ಲಿ ಏಕತೆ ಬಿಂಬಿಸುವ ಜನಪದರ ಮಾರ್ಗವಾಗಿತ್ತು.
ಜಾತ್ರೆಗಳ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಬಯಲು ನಾಟಕ ಪ್ರದರ್ಶಿಸುತ್ತಿದ್ದರು. “ಕನಕಾಂಗಿ ಕಲ್ಯಾಣ” “ಕುರುಕ್ಷೇತ್ರ” “ಬಬ್ರುವಾಹನ ಕಾಳಗ” ಇತ್ಯಾದಿ ಪ್ರಸಂಗಗಳು. ಬಯಲಾಟಗಳಲ್ಲಿಯೂ ಅರ್ಜುನನ ಪಾತ್ರ ಹುಸೇನಸಾಬ ಮಾಡುತ್ತಿದ್ದರೆ, ಕರ್ಣನ ಪಾತ್ರ ಪೀರಸಾಬ ಮಾಡುತ್ತಿದ್ದ. ಧರ್ಮರಾಯನ ಪಾತ್ರ ಮಡಿವಾಳರ ನಿಂಗಜ್ಜ, ಮತ್ತು ಭೀಮನ ಪಾತ್ರವನ್ನು ಸಾಳೇರ ಹನುಮಂತಪ್ಪ ಮಾಡುತ್ತಿದ್ದ. ಅಡ್ಡಸೋಗು ಹಾಕಿ ಜನರನ್ನು ರಂಜಿಸುತ್ತಿದ್ದ ಶೀಗನಹಳ್ಳಿ ಬಾಲಪ್ಪ (ಬಾಲೇಸಾಬ) ಸಾರಥಿ ಪಾತ್ರದಲ್ಲಿ ವಿಶಿಷ್ಟವಾಗಿ ಮಾತುಗಾರಿಕೆ ಪ್ರದರ್ಶಿಸುತ್ತಿದ್ದ. ಇವರಲ್ಲಿ ಹಲವರು ಅನಕ್ಷರಸ್ತರಾಗಿರುತ್ತಿದ್ದರು. ಅವರು ಡೈಲಾಗುಗಳನ್ನು ಇನ್ನೊಬ್ಬರಿಂದ ಹೇಳಿಸಿಕೊಂಡು ಕಲಿತು , ಅಚ್ಚುಕಟ್ಟಾಗಿ ಮಾತುಗಳನ್ನು ಹೇಳುತ್ತಿದ್ದರು. ಅದಕ್ಕಾಗಿ ಅಲ್ಲವೇ ಕವಿರಾಜ ಮಾರ್ಗದಲ್ಲಿ ಜನಪದರ ಬಗ್ಗೆ ಹೇಳಿರುವುದು.
“ ಪದನರಿದು ನುಡಿಯಲುಂ ನುಡಿ
ದುದನರಿದಾರಯಲು ಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುರಿತೋ
ದದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್”
ಗ್ರಾಮೀಣ ಜನಪದರು ಅನೇಕ ಆಧುನಿಕತೆಯ ಬದಲಾವಣೆಯಲ್ಲೂ ತಮ್ಮ ಒಡನಾಟವನ್ನು ಎಲ್ಲ ಜನಾಂಗಗಳ ಜೊತೆ ಕರುಳು ಬಳ್ಳಿಯ ಸಂಬಂಧವನ್ನು ಬೆಸಗೊಳಿಸುತ್ತಾರೆಯೇ ಹೊರತು ಹರಿಯಗಡಿಯುವುದಿಲ್ಲ.
“ಮುಸಲ್ಮಾನನರು ಮಸೀದಿಗೆ, ಹಿಂದು ಹೋಗುವನು ದೇಗುಲಕೆ
ದೇವನಿರುವನು ತಾ ದೇಹದೊಳಗೆ ದ್ವಾರ ತಿಳಿಯದಿವರಿಗೆ”
ಎನ್ನುವ ಸಂತ ಕಬೀರರ ತತ್ವ ಚಿಂತನೆಯನ್ನು ಗ್ರಾಮೀಣರು ಯಾವಾಗಲೂ ನೆಚ್ಚಿಕೊಂಡು ನಮ್ಮ ದೇಶದ ಸಂಸ್ಕೃತಿ ಇರುವುದು ಹಳ್ಳಿಗಳಲ್ಲಿ ಎಂದು ಗಾಂಧೀಜಿ ಹೇಳಿರುವ ಮಾತನ್ನು ಅಕ್ಷರಶಹ ಪಾಲಿಸುತ್ತಿದ್ದಾರೆ.
- ಡಿ. ರಾಮನಮಲಿ (ಕಿರು ಪರಿಚಯ : ಡಿ ರಾಮನಮಲಿ ತಂಬ್ರಹಳ್ಳಿ , ಹಿರಿಯ ಸಾಹಿತಿ, 2 ಕಥಾ ಸಂಕಲನ ,2 ಪ್ರಬಂಧ ಸಂಕಲನ ,2ಕವನ ಸಂಕಲನ 1 ಅನುವಾದಿತ ಕಥಾ ಸಂಕಲನ , ಕನ್ನಡ ಶಾಹಿರಿಗಳು ಇತ್ತಿಚೆಗೆ ಹತ್ತು ಪುಸ್ತಕಗಳು ಪ್ರಕಟಣೆಯಾಗಿವೆ, 3 ಬಾರಿ ಸಂಕ್ರಮಣ ಸಾಹಿತ್ಯ ಪ್ರಶಸ್ತಿ ವಿಜೇತ ,ಹರಪನಹಳ್ಳಿ ಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಭಾಜನರಾಗಿರುವೆ. ವಾಸ ಹರಪನಹಳ್ಳಿ.)
