‘ವಿಷಾದಗಾಥೆ’ ಕೃತಿ ಪರಿಚಯ – ಪಾರ್ವತಿ ಜಗದೀಶ್

ಡಿ. ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರ ‘ವಿಷಾದಗಾಥೆ’ ಕೃತಿಯಲ್ಲಿನ ಪ್ರತಿ ಕವಿತೆಯು ನೂರಾರು ರೀತಿಯಲ್ಲಿ ಧ್ವನಿಸಿ ಓದುಗರ ನೋವಿಗೆ ಮದ್ದಾಗಲಿವೆ. ಪಾರ್ವತಿ ಜಗದೀಶ್ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ ಪರಿಚಯ : ವಿಷಾದಗಾಥೆ
ಲೇಖಕರು : ಡಿ. ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ
ಪ್ರಕಾಶಕರು : ಯಾಜಿ ಪ್ರಕಾಶನ ಹೊಸಪೇಟೆ
ಬೆಲೆ : 150 ರೂಪಾಯಿ
ಪುಟಗಳು : 96.

ಮುಖಪುಟದಲ್ಲಿ, ಹಾಗೂ ಪುಸ್ತಕ ಅವಲೋಕನದಲ್ಲಿ ಆತ್ಮೀಯ ಸ್ನೇಹಿತರು ಆದಂತಹ ಗುರು ಸಮಾನರು ಡಿ. ಬಿ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಅವರು ಪ್ರೀತಿ ಪೂರ್ವಕವಾಗಿ ಕಳಿಸಿಕೊಟ್ಟ ಪುಸ್ತಕ ಇಂದೇ ಬಂದು ತಲುಪಿದ್ದು.ಅದೇಕೋ ಗೊತ್ತಿಲ್ಲ ಪುಸ್ತಕದಲ್ಲಿಯ ಮುಖಪುಟದಲ್ಲಿಯ ಗುರುಗಳ ಪಟ ತೀರದ ನೋವುಗಳನ್ನೇ ಹಾಸಿ ಹೊದ್ದು ಮಲಗಿದ ಗುರುಗಳ ಮುಖ ಚಹರೆಯೇ ನೂರು ವಿಷಾದ ಕಥೆಗಳನ್ನು ಹೇಳುವಂತಿದೆ. ಅಷ್ಟು ಮಾತ್ರವಲ್ಲ ಪುಸ್ತಕ ಬಂದ ತಕ್ಷಣವೇ, ಬಿಟ್ಟು ಬಿಡದೇ, ಒಂದೇ ಗುಕ್ಕಿನಲ್ಲಿ ಓದಿಸಿಕೊಂಡ ಕೃತಿ. ಮೂಲತಃ ನಾಟಕಕಾರರು, ಕಲಾವಿದರು, ಕವಿಗಳು, ಸಾಹಿತಿಗಳು, ಸಾಹಿತ್ಯ ಪೋಷಕರು, ಕಲಾಪೋಷಕರು ಆದಂತಹ Swamy Mahamane ಗುರುಗಳ ವಿಷಾದಗಾಥೆ ಮನುಕುಲದ ನೋವಿಗೆ ಮದ್ದಾಗುವ ಕವಿತೆಗಳು ಅನ್ನುವುದರಲ್ಲಿ ಸಂಶಯವೇ ಇಲ್ಲ.ನನಗೂ ಬದುಕಿನಲ್ಲಿ ಎದುರಾದ ತಿರುವುಗಳಿಗೆ ಮೂರು ದಿನಗಳಿಂದ ಮನನೊಂದು ವಿಷಾದ ಭಾವ ಆವರಿಸಿದ ಹಿನ್ನೆಲೆಯಲ್ಲಿ ಕೃತಿಯ ಓದು ತುಸುವೇ ನಿರಾಳ ಭಾವ ತುಂಬಿತು ಅನ್ನುವುದು ಸುಳ್ಳಲ್ಲ.

ಕೃತಿಗೆ ಗಾಥೆಗಳ ಸಂಕಲನ ಅಂದಿದ್ದಾರೆ ಲೇಖಕರು. ಇದೊಂದು ವಿಶೇಷ, ವಿಶಿಷ್ಟ ರೀತಿಯ ಕೃತಿ ರಚನಾ ಪ್ರಯೋಗ.ಇದರ ಪ್ರತಿ ಗಾಥೆಯಲ್ಲಿಯೂ, ಮೂರು ಮೂರು ಸಾಲಿನ ಎರಡು ಪಾದಗಳ ಆರು ಸಾಲಿನ ಕೇವಲ ಹದಿನೆಂಟೇ ಪದಗಳ ಒಂದು ಗಾಥೆ. ಕವಿತೆಯ ಒಂದು ಮತ್ತು ನಾಲ್ಕನೇ ಸಾಲಿನಲ್ಲಿ ಎರಡೆರಡೆ ಪದ, ಎರಡು ಮತ್ತು ಐದನೇ ಸಾಲಿನಲ್ಲಿ ಮೂರೇ ಮೂರು ಪದ ಹಾಗೂ ಮೂರು ಮತ್ತು ಆರನೇ ಸಾಲಿನಲ್ಲಿ ನಾಲ್ಕೇ ನಾಲ್ಕು ಪದಗಳಿಂದ ರಚಿತವಾದ ಈ ಕವಿತೆಗಳು ಅವರದ್ದೇ ಆದ ಪ್ರತ್ಯೇಕ ಚೌಕಟ್ಟಿನ ಅಡಿಯಲ್ಲಿ ವಿಶೇಷ ರೀತಿಯಲ್ಲಿ ರಚಿಸಲ್ಪಟ್ಟಿವೆ. ಜೊತೆಗೆ ಪ್ರತಿ ಕವಿತೆಗೂ ಆಕರ್ಷಣೀಯ Zabiulla M Asad ಅವರು ರಚಿಸಿದ ರೇಖಾ ಚಿತ್ರಗಳು ಇವೆ. ಇಲ್ಲಿಯ ಯಾವ ಕವಿತೆಗಳಿಗೂ ಶೀರ್ಷಿಕೆ ಇಲ್ಲ ಓದಿದ ಕವಿತೆ ಒಂದಲ್ಲ ಒಂದು ರೀತಿಯ ವಿಷಾದ ಭಾವ ಸೂಚಕವಾಗಿವೆ. ಇವು ಇತರೆ ಕಾವ್ಯ ಪ್ರಕಾರಗಳಾದ ಚುಟುಕು, ಹಾಯ್ಕ, ತಂಕಾ, ಝನ್, ಹನಿಗವಿತೆ, ಕಿರುಕವಿತೆ, ತ್ರಿಪದಿ, ಚೌಪದಿ, ಷಟ್ಪದಿ ರುಬಾಯಿ ಇವುಗಳ ಯಾವ ಹೋಲಿಕೆಯೂ ಇಲ್ಲದ ಅಂತರಾತ್ಮದ ಪ್ರೇರಣೆಗೆ ಒಳಪಟ್ಟು ಸ್ವತಂತ್ರವಾಗಿ ರಚಿಸಲ್ಪಟ್ಟ ಕವಿತೆಗಳಾಗಿವೆ. ಈ ಕವಿತೆಗಳಿಗೆ ಕತ್ತಲೆ, ಬೆಳಕು, ನಕ್ಷತ್ರ, ಸುಮ, ದುಂಬಿ, ಹುಟ್ಟು, ಸಾವು, ಕವಿತೆ, ಮೌನ, ಉಸಿರು, ಇವುಗಳನ್ನೇ ಮುಖ್ಯ ವಿಷಾದ ಪ್ರೇರಕಗಳಂತೆಯೂ, ಪ್ರತಿಮೆಗಳಂತೆಯೂ ಬಳಕೆ ಮಾಡಿಕೊಂಡಿದ್ದಾರೆ.

ಅಂತೆಯೇ ಪ್ರತಿಗಾಥೆಯಲ್ಲೂ ವಿಷಾದ ಇಣುಕಿ ನೋಡಿ ಕೃತಿಯ ಹೆಸರು ಅನ್ವರ್ಥಕ ಭಾವ ಮೂಡಿಸುತ್ತದೆ.. ಅಷ್ಟೇ ಅಲ್ಲ ಕೊನೆಗೆ ಬದುಕೆಂದರೆ ಇಷ್ಟೇ…. ಇದರ ಹೊರತಾಗಿ ಬೇರೇನೂ ಇಲ್ಲ ಅನ್ನುವ ವಿಷಾದ ಭಾವ ಆವರಿಸಿ ಕೊಂಡು ಬಿಡುತ್ತದೆ.

ಕವಿತೆಗಳಲ್ಲಿ ಅನೂಹ್ಯ ಭಾವಗಳಿವೆ, ಅವ್ಯಕ್ತ ಅಭಿವ್ಯಕ್ತಿಗಳಿವೆ, ಬದುಕಿನಲ್ಲಿ ಕಂಡುಂಡ ಕಹಿ ಸತ್ಯಗಳ ಅನಾವರಣಗಳಿವೆ, ನೋವು ಸಂಕಟ, ವೇದನೆಗಳ ಸಹಚಾರ್ಯ ಇದೆ. ಮೇಲಾಗಿ ಇವು ಯಾವುದೋ ಕಾವ್ಯ ಪ್ರಕಾರದ ನಿಬಂಧನೆಗಳಿಗೆ ಒಳಪಡದೆ ಆಡು ಮಾತಿನ ಲಯದ, ಅನುಭವದ ಮೂಸೆಯಲ್ಲಿ ಆದ್ದಿ ತೆಗೆದ ಸಾಲುಗಳ ತುಂತುರು ಸಿಂಚನವಿದೆ. ಹಾಗಾಗಿಯೇ ಈ ಎಲ್ಲಾ ಗಾಥೆಗಳಲ್ಲಿಯೂ ಪ್ರಸ್ತುತ ವಿದ್ಯಮಾನಗಳ ಕಟು ವಾಸ್ತವ ಅನಾವರಣಗೊಳಿಸುವಲ್ಲಿ ಯಾವ ಬಿಡೆಯಿಲ್ಲದೆ ನಿರ್ಭಿಡೆಯಿಂದ ಕತ್ತಿಯ ಅಲುಗಿನಷ್ಟೇ ಮೊನಾಚಾದ ಕವಿತೆಗಳು ಲಗುವಾಗಿ ಒಮ್ಮೆ ಎಲ್ಲರನ್ನೂ ಒಮ್ಮೆ ಸವರುತ್ತವೆ.ಕೃತಿಯಲ್ಲಿ ಒಟ್ಟು ಸರಿ ಸುಮಾರು 170 ವಿಷಾದಗಾಥೆಗಳು ಇವೆ. ಎಲ್ಲವೂ ಒಂದಕ್ಕಿಂತ ಒಂದು ಅರ್ಥಪೂರ್ಣ ಆದರೂ ಇಲ್ಲಿ ಮುನ್ನುಡಿ, ಹಾಗೂ ಇತರೆ ಸಾಹಿತಿಗಳು ವಿವರಿಸಿದ ಕವಿತೆ ಬಿಟ್ಟು ನನಗೆ ಇಷ್ಟವಾದ ನಾಲ್ಕು ಕವಿತೆಗಳ ಅಲ್ಪ ವಿವರಣೆ ಕೊಡ್ತೀನಿ.

ಗಂಟಲು ಒಣಗಿದೆ
ಸಪ್ತ ಸಾಗರವೇ ಮುಂದಿದೆ
ಆದರೆ ಕುಡಿಯಲು ಆಗುತ್ತಿಲ್ಲ!
ಒದ್ದಾಡುತ್ತಿದೆ ಹಕ್ಕಿ
ಹತ್ತಿ ಉರಿಯುತ್ತಿದೆ ದಡ
ಅಯ್ಯೋ, ಅಯ್ಯೋ ಕುದಿಯುತ್ತಿದೆ ಕಡಲು!

ಎಂತಹ ವಿಷಾದತೆ ಇದೆ ಈ ಸಾಲುಗಳಲ್ಲಿ! ಬಾಯಾರಿಕೆ ತಣಿಸಲು ಬೊಗಸೆ ನೀರಷ್ಟೇ ಸಾಕು. ಆದರೆ ಸಪ್ತ ಸಾಗರವೇ ಕಣ್ಣ ಮುಂದಿದ್ದರೂ ಕುಡಿಯಲು ಆಗುತ್ತಿಲ್ಲ ಇದು ವಿಷಾದವಲ್ಲದೆ ಇನ್ನೇನು? ಕಡಲ ದಡವೇ ಹತ್ತಿ ಉರಿದರೆ ದಡದಲ್ಲಿರುವ ಹಕ್ಕಿ ಒದ್ದಾಡದೆ ಇರಲು ಸಾಧ್ಯವೇ?

ಸುಟ್ಟು ಬಿಡುತ್ತೇನೆ
ನೀ ನನಗೆ ಕೊಡುವ ಕೋಟಲೆಗಳ
ಬರೆವ ಕವಿತೆಗಳ ಬಾಣಗಳಾಗಿಸಿ!
ಪಾಷ0ಡಿ ವಿಧಿಯೇ
ತೊಡೆ ತಟ್ಟಿ ನಿಲ್ಲು
ಬಾ ನಿನ್ನಿಂದ ಬರೆಯಲಾದಿತೇ ಕವಿತೆಯ.!

ಇಲ್ಲಿ ಕವಿಯು ವಿಧಿಗೆ ಮೊನಾಚಾಗಿ ವ್ಯಂಗ್ಯ ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಕವಿ ಮನಸು ತನ್ನ ಕವಿತೆಗಳ ಮೂಲಕವೇ ಎಲ್ಲವನ್ನು ದಕ್ಕಿಸಿಕೊಳ್ಳುತ್ತದೆ ಅನ್ನುವುದಕ್ಕೆ ಈ ಗಾಥೆ. ಹೇ, ವಿಧಿಯೇ ನೀ ಕೊಡುವ ಎಲ್ಲ ಕಷ್ಟ ಕೋಟಲೆಗಳನ್ನೂ ನನ್ನ ಕವಿತೆಗಳ ಬಾಣದಲ್ಲೆ ಸುಟ್ಟು ಹಾಕಿ ಎದುರಿಸಿ ನಿಲ್ಲಬಲ್ಲೆ. ನನ್ನಂತೆ ನೀ ಕವಿತೆ ಬರೆಯಬಲ್ಲೆಯಾ ಎಂದು ಪ್ರಶ್ನೆ ಮಾಡುವ ಮೂಲಕ ಕವಿತೆಯ ತಾಕತ್ತು ವಿವರಿಸಿದ್ದಾರೆ.

ಸಾವಿನ ದಲ್ಲಾಳಿಯೇ
ಇಲ್ಲಿ ಎಲ್ಲವೂ ಖಾಲಿಯಾಗಿದೆ
ನಿನಗೆ ಮತ್ತೇನು ಕೊಡಲೋ ತಂದೆ!
ಅಂಗಡಿ ಮುಚ್ಚುತ್ತಿದ್ದೇನೆ
ಇರು…ಏನಾದರಿದ್ದರೆ ನೋಡುತ್ತೇನೆ
ಉಸಿರಿಲ್ಲದ ಹೆಸರೊಂದು ಒದ್ದಾಡುತ್ತಿದೆ ಕೊಡಲೇ.!

ಬದುಕಿನ ವ್ಯಾಪಾರದಲ್ಲಿ ಅಂಗಡಿ ಮುಚ್ಚುವ ಸಮಯದಲ್ಲಿ ಸಾವಿನ ದಲ್ಲಾಳಿ ಅಂಗಡಿಗೆ ಎಡತಾಕಿದ್ದಾನೆ. ಕೊಡಲು ಏನೂ ಉಳಿದಿಲ್ಲವಾದರೂ ಉಸಿರೇ ಇಲ್ಲದ ಹೆಸರು ಒಂದು ಒದ್ದಾಡುತ್ತಿದೆ ಅದನ್ನೇ ಕೊಡಲೇ ಅನ್ನುತ್ತಾರೆ. ಈ ಗಾಥೆ ಓದಿದಾಗ ಕ್ಷಣ ಕಾಲ ಮೈ ಜುಮ್ ಎಂದಿದ್ದು ಸತ್ಯ. ಉಸಿರೇ ನಿಂತ ಮೇಲೆ ಹೆಸರಿಗೆ ಯಾವ ಬೆಲೆ? ಆಟಗಾಯಿಸಿ ಬಂದ ನಿಂತ ಸಾವಿನ ದಲ್ಲಾಳಿಗೆ ಅದೇ ಕೊನೆಯ ಕೊಡು ಕೊಳ್ಳುವಿಕೆ ಅಲ್ಲವೇ.?

ಒಂಟಿ ಮರ
ಬಟಾ ಬಯಲಿನಲಿ ನಿಂತಿದೆ
ಎಲೆಯುದುರಿ ಮರ ಬೋಳು ಬೋಳು!
ಮರ ವ್ಯಂಗ್ಯವಾಡಿತು
ಬಯಲೇ ನೀನೇಕೆ ಬೋಳು
ಬಯಲೆಂದಿತುಬೋಳಾದ ನೀ ಜೊತೆಯಾಗಿರುವೆಯಲ್ಲ.

ಎಷ್ಟೊಂದು ಮಾರ್ಮಿಕ ಧ್ವನಿ ಇದೆ ಈ ಕವಿತೆಯಲ್ಲಿ. ತಮ್ಮದೇ ಹಾಸಿ ಹೊದೆಯುವಷ್ಟು ಇದ್ದರೂ ಬೇರೆಯವರನ್ನು ವ್ಯಂಗ್ಯ ಮಾಡುವುವರ ಕುರಿತು ಹೇಳಿದಂತಿದೆ. ಎಲೆಯುದುರಿ ಬೋಳಾದ ಮರ ತಾನೇ ಬಯಲಿನ ಆಶ್ರಯದಲ್ಲಿರುವುದನ್ನೇ ಮರೆತು ಬಯಲಿಗೇ ವ್ಯಂಗ್ಯವಾಡುತ್ತಿದೆ ನೀನೇಕೆ ಬೋಳು ಎಂದು ಬಯಲು ಅಷ್ಟೇ ತಣ್ಣನೆಯ ಉತ್ತರ ನಿನಗೆ ಜೊತೆಯಾಗಲೆಂದು. ಕೊನೆಯದಾಗಿ ಇನ್ನೊಂದು ಕವಿತೆ.

ಇಡೀ ವಿಶ್ವ
ಘಳಿಗೆಯಾದರೂ ಮೌನ ವಹಿಸಬೇಕು
ಕೇಳಿಸಿಕೊಳ್ಳಬೇಕು ಈ ಇಳೆಯ ಮಾತನು!
ಆಲಿಸಬೇಕು ನಾವು
ಭುವಿಯ ನೋವು ಸಂಕಟಗಳ
ಮನದೊಳಗೆ ಇಳಿದಾವು ಅವಳ ವೇದನೆಗಳು.!

ಭೂಮಿ ಕ್ಷಮಯಾ ಧರಿತ್ರಿ ತತ್ವ ಸಹಿಶ್ಣೆ ಹಾಗಂತ ಅವಳೂ ಒಬ್ಬ ಹೆಣ್ಣಲ್ಲವೇ? ಅವಳಿಗೂ ನೋವು, ಸಂಕಟ, ವೇದನೆಗಳು ಇರುವುದಿಲ್ಲವೇ ಸಹಿಸುತ್ತಾಳೆ ಅಂತ ಬರೀ ನೋವುಗಳನ್ನೇ ನೀಡುವ ನಾವು ಒಮ್ಮೆಯಾದರು ಮೌನವಹಿಸಿ ಅವಳ ದುಃಖದ ನಿಟ್ಟುಸಿರಿಗೆ ಕಿವಿಯಾಗಬೇಕಿದೆ ಆದಾಗ ಮಾತ್ರವೇ ಬೇರೆಯವರ ಕಷ್ಟ ಅರ್ಥವಾಗಲು ಸಾಧ್ಯ.

ಹೀಗೆ ಪ್ರತಿ ಕವಿತೆಯ ನೂರಾರು ರೀತಿಯಲ್ಲಿ ಧ್ವನಿಸಿ ಓದುಗರ ನೋವಿಗೆ ಮದ್ದಾಗಲಿ, ಕೃತಿ ಹೆಚ್ಚು, ಹೆಚ್ಚು ಓದುಗರಿಗೆ ತಲುಪಲಿ ಅನ್ನುವ ಸದಾಶಯಗಳೊಂದಿಗೆ ಸ್ವಾಮಿ ಮಹಾಮನೆ ಗುರುಗಳಿಗೆ ಪುಸ್ತಕ ಅವಲೋಕನ ಮಾಡಲು ನನಗೆ ಕೃತಿ ಕಳಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ…


  • ಪಾರ್ವತಿ ಜಗದೀಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW