‘ವಿಶ್ವಮಾನವ’ ಕವನ – ಇರ್ಫಾನ್. ಹಸನ್ ಕುಟ್ಟಿ 



‘ಕೊರೋನ ವೈರಸ್’ ನಮ್ಮ ‘ಆರೋಗ್ಯ’ವನ್ನು ಕಸಿದುಕೊಂಡಿದೆ. ಆದರೆ ಈ ‘ಕೋಮು ವೈರಸ್’ ನಮ್ಮ ‘ಮಾನಸಿಕ ನೆಮ್ಮದಿ’ಯನ್ನು ಕಸಿದು ಕೊಳ್ಳು(ಲ್ಲು)ತ್ತಿದೆ. ಸಾವು-ನೋವು ಆರ್ಥಿಕ ಸಂಕಷ್ಟಗಳ ನಡುವೆ ಪರಸ್ಪರ ಕೆಸರೆರಚಾಟ ಬೇಕಾ?.

ವಿಷಕಾರುವ ಮತಿ ಕೆರಳುವ
ಮಾತು ಬಿಡು ಮಾನವ.‌.
ದ್ವೇಷ ರೋಷ ಹರಡುವ
ಭ್ರಾಂತಿ ಬಿಡು ಮಾನವ..

ಬದುಕಿನಲ್ಲಿ ಅಳವಡಿಸು ದೈವತತ್ವ
ಅರಿತರೆ ನೀನು ಅದರ ಮಹತ್ವ
ಸರ್ವೇಜನೋ ಸುಖಿನೋಭವ..

ಸರ್ವರ ಹಿತವನ್ನು ಬಯಸಿದಾಗ
ನೀನಾಗುವೆ ಸಂಪೂರ್ಣ ಮಾನವ
ಎಲ್ಲರನ್ನು ಸಮನಾಗಿ ಕಂಡಾಗ
ನೀನಾಗುವೆ ಪರಿಪೂರ್ಣ ವಿಶ್ವಮಾನವ

ಒಳಿತು ಮಾಡು ಮಾನವ
ಅರಿತು ಬಾಳು ಮಾನವ..

ಪೌರುಷದಿ ಮೆರೆದವರು ಮಣ್ಣಾದರು
ನಿನ್ನ ಮುಖವಾಡದ ಪೊರೆಯ ಕಳಚು ಇನ್ನಾದರೂ
ಬಿಟ್ಟು ಬಿಡು ನಾನೆಂಬ ಅಹಂಕಾರದ ಮಾತು
ಚಿತೆಗೇರುವ ಮುನ್ನಾ ಬದಲಾದರೆ ಒಳಿತು

ಭಯಂಕರ ಬಲಾಢ್ಯ ನೀನೆಂದು
ಪಡಬೇಡ ಅಪರಿಮಿತ ಖುಷಿ
ಸಣ್ಣದಾಗಿ ಅಕ್ಷೀ ಎಂದು ಸೀನಿದಾಗ
ಹಾರಬಹುದು ನಿನ್ನ ಪ್ರಾಣಪಕ್ಷಿ

ಸುಂದರ ತ್ವಚೆ ಸೌಂದರ್ಯದ ನಿನ್ನ ದೇಹ
ಸತ್ತ ಮೇಲೆ ಬರಿಯ ಕೊಳೆತು ನಾರೋ ದೇಹ
ಆಸ್ತಿ ಮೇಲೆ ಆಸ್ತಿ ಮಾಡಿ ಕೂಡಿಡುವ ಮೋಹ
ಕಡಲ ನೀರನೆಲ್ಲ ಕುಡಿದು ಮಾಡಿದರೂ ಸ್ವಾಹ
ತಣಿಯಲ್ಲ ಅತಿಯಾಸೆಯ ಬಾಯಾರಿಕೆ ದಾಹ

ಪರರ ಬದುಕುವ ಹಕ್ಕನ್ನು ಕಸಿದು ತೋರಿದರೆ ದರ್ಪ
ನಿನ್ನ ಶವವನ್ನು ಕುಟುಕುವುದು ಚೇಳು ವಿಷಕಾರಿ ಸರ್ಪ
ಅರಿತರೆ ನೀನು ಒಳಿತು ಕೆಡುಕಿನ ನಡುವಿನ ಮರ್ಮ
ಹೆಚ್ಚು ಹೆಚ್ಚು ಮಾಡುವೆ ಬದುಕಿನಲ್ಲಿ ಪುಣ್ಯಕರ್ಮ

ನ್ಯಾಯ ನೀತಿ ಧರ್ಮ ಆಗಿರಲಿ ನಿನ್ನ ಗೆಳೆಯ
ಮಾನವೀಯ ಮೌಲ್ಯಗಳೇ ಸಹೃದಯಿಗಳ ಇನಿಯ
ಭಗವಂತ ಬರುತ್ತಾನೆ ಹೃದಯವಂತರ ಸನಿಹ
ಕೇಳಿ ಬದಲಾಗು ವಿಶ್ವಮಾನವ ಸಂದೇಶದ ಧ್ವನಿಯ.

ಬದುಕಿನಲ್ಲಿ ಅಳವಡಿಸು ದೈವತತ್ವ
ಅರಿತರೆ ನೀನು ಅದರ ಮಹತ್ವ
ಸರ್ವೇಜನೋ ಸುಖಿನೋಭವ..


  • ಇರ್ಫಾನ್. ಹಸನ್ ಕುಟ್ಟಿ

 

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading