‘ತಪ್ಪನ್ನು ಮುಚ್ಚಿಡಬೇಡಿ’ ಜೀವನದೊಂದು ಪಾಠ – ಆರ್. ಪಿ. ರಘೋತ್ತಮ



‘ತಪ್ಪು ಮಾಡುವುದು ಸಹಜ, ತಿದ್ದಿ ನಡೆಯುವುದು ಮನುಜ’ ಎನ್ನುವ ಮಾತು ಪ್ರತಿಯೊಬ್ಬರೂ ಅರ್ಥಯಿಸಿಕೊಂಡರೆ ಜೀವನದಲ್ಲಿ ಅವಮಾನ, ಮುಜುಗುರಕ್ಕೆ ದಾರಿ ಇರುವುದಿಲ್ಲ ಎನ್ನುತ್ತಾರೆ ಲೇಖಕರು.ಮುಂದೆ ಓದಿ…

ನಮಗೆ ನಾಲ್ಕನೆಯ ತರಗತಿಯವರೆಗೂ ಪೆನ್ಸಿಲ್ಲಿನಲ್ಲೇ ಬರೆಯಬೇಕೆಂಬ ನಿರ್ಬಂಧವಿತ್ತು. ಐದನೆಯ ತರಗತಿಯಿಂದ ಪೆನ್ನಿನಲ್ಲಿ ಬರೆಯಲು ಪ್ರಾರಂಭಿಸಿದೆವು. ಪೆನ್ನಿನಿಂದ ಹಾಳೆಯ ಮೇಲೆ ಬರೆಯಲು ಪ್ರಾರಂಭಿಸಿದ ಹೊಸತರಲ್ಲಿ ನಾನು ತುಂಬಾನೇ ತಪ್ಪುಗಳನ್ನು ಮಾಡುತ್ತಿದ್ದೆ. ಒಂದೊಂದು ತಪ್ಪು ಮಾಡಿದಾಗಲೂ ಅವುಗಳನ್ನು ಅಳಿಸಲು ತುಂಬಾ ಹೆಣಗಾಡುತ್ತಿದ್ದೆ. ತೀರಾ ಕಷ್ಟವಾಗುತ್ತಿತ್ತು.

ಅಧ್ಯಾಪಕರಿಗೆ ತೋರಿಸುವ ಮುನ್ನ ನನ್ನ ತಪ್ಪುಗಳನ್ನು ಮರೆಮಾಚಲು, ಅದಕ್ಕೆ ಸೀಮೆಸುಣ್ಣದ ಪುಡಿಯನ್ನು ಹಚ್ಚಿ ತಪ್ಪು ಕಾಣದಂತೆ ಮಾಡುತ್ತಿದ್ದೆ. ಆದರೆ ನನ್ನ ತಪ್ಪನ್ನು ತುಂಬಾ ಹೊತ್ತು ಮುಚ್ಚಿಡಲು ಸೀಮೆಸುಣ್ಣದ ಪುಡಿ ಸೋಲುತ್ತಿತ್ತು. ಆನಂತರ ಸೀಮೆಸುಣ್ಣದ ಪುಡಿಯ ಬದಲಿಗೆ, ತಪ್ಪುಗಳಾದ ಕಡೆ ಎಂಜಲನ್ನು ಹಚ್ಚಲು ಪ್ರಾರಂಭಿಸಿದೆ. ಎಂಜಲು ಸೀಮೆಸುಣ್ಣದ ಪುಡಿಗಿಂತ ಚೆನ್ನಾಗಿ ಕೆಲಸ ಮಾಡುತ್ತಿತ್ತು, ಆದರೆ ಕೆಲವೊಮ್ಮೆ ಪುಸ್ತಕದ ಹಾಳೆಯನ್ನು ತೂತು ಮಾಡಿಬಿಡುತ್ತಿತ್ತು.

ಪುಸ್ತಕವನ್ನು ತೀರಾ ಗಲೀಜಾಗಿಟ್ಟುಕೊಂಡಿದ್ದೇನೆ ಎಂದು ನನ್ನ ಮೇಷ್ಟ್ರುಗಳು ನನ್ನನ್ನು ಶಿಕ್ಷಿಸಲು ಆರಂಭಿಸಿದರು. ನನಗಿದು ತೀರಾ ಮುಜುಗರಕ್ಕೆ ಈಡು ಮಾಡುತ್ತಿತ್ತು. ನಾನು ಪ್ರಯತ್ನಿಸುತ್ತಿದ್ದುದು ನನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳುವುದಕ್ಕೆ. ಆದರೆ ಅದೇ ಬಹುದೊಡ್ಡ ತಪ್ಪಾಗಿ ಮಾರ್ಪಾಟಾಗುತ್ತಿತ್ತು.

ಇಂತಹ ದಿನಗಳಲ್ಲಿ ನನಗೊಬ್ಬ ಹೃದಯವಂತ ಗುರುಗಳು ಸಿಕ್ಕರು. ನನ್ನನ್ನು, ನಾನು ಮಾಡುತ್ತಿದ್ದ ತಪ್ಪುಗಳನ್ನು, ಅವನ್ನು ಮುಚ್ಚಿಡಲು ನಾನು ಮಾಡುತ್ತಿದ್ದ ಹರಸಾಹಸವನ್ನು ಸೂಕ್ಷ್ಮವಾಗಿ ಗಮನಿಸಿ “ಮುಂದಿನ ಸಲ ನೀನು ತಪ್ಪು ಮಾಡಿದಾಗ ಅದನ್ನು ಅಳಿಸಿ ಸರಿಪಡಿಸಲು ಹೋಗಬೇಡ, ತಪ್ಪಿನ ಮೇಲೆ ಒಂದು ಕಾಟು ಹಾಕಿ (ಹೊಡೆದುಹಾಕಿ), ಮುಂದೆ ಸಾಗು. ನೀನು ತಪ್ಪನ್ನು ಅಳಿಸಲು ಹೋದಷ್ಟೂ ನಿನ್ನ ಪುಸ್ತಕವನ್ನು ಹಾಳು ಮಾಡಿಕೊಳ್ಳುತ್ತೀಯ” ಅಂದರು.



ಅದಕ್ಕೆ ನಾನು “ನನ್ನ ತಪ್ಪುಗಳನ್ನು ಬೇರೆಯವರು ನೋಡುವುದು ನನಗೆ ಇಷ್ಟವಾಗುವುದಿಲ್ಲ, ಹಾಗಾಗಿಯೇ ನಾನು ಅದನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತೇನೆ” ಅಂದೆ.

ಅದಕ್ಕೆ ನನ್ನ ಪ್ರೀತಿಯ ಗುರುಗಳು ನಸುನಕ್ಕು ಹೇಳಿದರು “ನಿನ್ನ ತಪ್ಪುಗಳನ್ನು ನೀನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಬೇಡ. ನೀನು ಬಯಸಿದಷ್ಟೂ, ಅದು ಹೆಚ್ಚು ಜನರಿಗೆ ತಿಳಿಯುತ್ತದೆ. ಹಾಗಾಗಿ, ಮಾಡಿದ ತಪ್ಪನ್ನು ಮುಚ್ಚಿಡಲು ಪ್ರಯತ್ನಿಸದೆ, ತಪ್ಪಿನ ಮೇಲೆ ಒಂದು ಕಾಟು ಹಾಕಿ (ಹೊಡೆದುಹಾಕಿ), ಮುಂದೆ ಸಾಗು” ಅಂದರು.

ನನ್ನ ಗುರುಗಳು ಅಂದು ಹೇಳಿದ ಆ ಮಾತುಗಳು ತುಂಬಾ ಮೌಲ್ಯಯುತವಾದ ಮಾತುಗಳು. ಸರಿಯಾಗಿ ಯೋಚಿಸಿದರೆ, ಅದನ್ನು ನಮ್ಮ ಜೀವನಕ್ಕೂ ಅನ್ವಯಿಸಿಕೊಳ್ಳಬಹುದು.
ನಾವೆಲ್ಲರೂ ನಮ್ಮ ಜೀವನದಲ್ಲಿ ಅನೇಕ ತಪ್ಪುಗಳನ್ನು ಮಾಡಿರುತ್ತೇವೆ. ಹಾಗೆಯೇ ಅದು ಬೇರೆಯವರಿಗೆ ತಿಳಿಯದಿರಲಿ ಎಂದು ತುಂಬ ಎಚ್ಚರಿಕೆ ವಹಿಸಿರುತ್ತೇವೆ. ಆದರೆ ನಾವು ಅಂದುಕೊಂಡಂತೆ ಏನೂ ಆಗುವುದಿಲ್ಲ. ನಾವು ತಪ್ಪನ್ನು ಮುಚ್ಚಿಡಬೇಕೆಂದು ಹೋರಾಡಿದಷ್ಟೂ, ಜಗತ್ತಿನೆದುರು ಬೆತ್ತಲಾಗಿ ನಗೆಪಾಟಲಿಗೀಡಾಗಿರುತ್ತೇವೆ.

ನಾವು ಮಾಡಿದ ತಪ್ಪು ನಮ್ಮ ಗುರುವಾಗಬೇಕೇ ಹೊರತು, ನಮಗೊಂದು ಪಾಠವಾಗಬೇಕೇ ಹೊರತು, ಎಂದೂ ನಮ್ಮ ಬಲಹೀನತೆಯಾಗಬಾರದು. ನಮ್ಮ ಮುಂದಿನ ಅಭಿವೃದ್ಧಿಗೆ ತಡೆಗೋಡೆಯಾಗಬಾರದು. ಮಾಡಿದ ತಪ್ಪುಗಳನ್ನು ಮುಚ್ಚಿಡಲು ಪ್ರಯತ್ನಿಸದೆ, ಅದರಿಂದ ಪಾಠ ಕಲಿತು ಮುಂದೆ ಸಾಗೋಣ; ಜಯಶಾಲಿಗಳಾಗೋಣ.

ನೀವೇನಂತೀರಿ?


  • ಆರ್. ಪಿ. ರಘೋತ್ತಮ (ಲೇಖಕರು, ಚಿಂತಕರು)

0 0 votes
Article Rating

Leave a Reply

1 Comment
Inline Feedbacks
View all comments

[…] ಪೋಲೆಂಡ್ ದೇಶದ ಖ್ಯಾತ ಪಿಯಾನೋ ವಾದಕ ಮತ್ತು #ಸಂಗೀತ ಸಂಯೋಜಕ. 1860ರಲ್ಲಿ ಜನಿಸಿದ […]

All Articles
Menu
About
Send Articles
Search
×
1
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW