ವಿಶ್ವಮಾನ್ಯ ವಿಶ್ವವಂದಿತ ವಿಶ್ವೇಶ್ವರಯ್ಯನವರು.

ನಾಡು ಕಂಡಂತಹ ಹೆಮ್ಮೆಯ ವ್ಯಕ್ತಿ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಆಂಧ್ರಪ್ರದೇಶದ ಮೋಕ್ಷಗುಂಡಂನಲ್ಲಿ 1860 ಸೆಪ್ಟೆಂಬರ್‌ 15ರಂದು ಜನಿಸಿದರು. ಇಂದು ಅವರ ಹುಟ್ಟುಹಬ್ಬ. ಅವರ ಸಾಧನೆಯ ಇಣುಕು ನೋಟವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ ಸೌಮ್ಯ ಸನತ್ ಅವರು, ತಪ್ಪದೆ ಮುಂದೆ ಓದಿ…

ಜಗತ್ತಿನ ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ ಗುಡಿಸು. ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಷ್ಕ್ರಿಯವಾಗಿರುವ ಸಾಧನವಲ್ಲ. “ನಮ್ಮ ಡೆಸ್ಟಿನಿ, ನಮ್ಮ ವಿಧಿ – ಮನುಷ್ಯನ ಕೈಯಲ್ಲಿರುವ ಸಾಧನ” ಎಂದು ಹೇಳುತ್ತಿದ್ದವರು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.

ಅದು ನಿಜ ಕೂಡ ಹೌದು, ಮಾಡುವ ಕೆಲಸ ಯಾವುದಿದ್ದರೂ ಸರಿ ಅದನ್ನು ನಿಯತ್ತಿನಿಂದಲೇ ಮಾಡಬೇಕು. ಶಿಕ್ಷಣ ಅಥವಾ ಉದ್ಯೋಗಕ್ಕೂ ಇದು ಅನ್ವಯ. ಅದನ್ನು ಪ್ರೀತಿಸಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ತನ್ನ ಪರಿಶ್ರಮದಿಂದಲೇ ಕಲಿತು ಮೈಸೂರು ದಿವಾನರಾಗಿ “ಭಾರತ ರತ್ನ” ಪಡೆದ ಮೊದಲ ಕನ್ನಡಿಗರೆಂಬ ಕೀರ್ತಿಗಳಿಸಿದ ಇವರ ಸಾಧನೆ ಅಪಾರವಾದುದು. ಹಾಗೂ ನಮೆಗೆಲ್ಲರಿಗೂ ಪ್ರೇರಣಾದಾಯಕವಾದುದು.

ವಿಶ್ವೇಶ್ವರಯ್ಯನವರು ಹುಟ್ಟಿದ್ದು 1860 ಸೆಪ್ಟೆಂಬರ್‌ 15ರಂದು. ಹಿರಿಯರು ಆಂಧ್ರಪ್ರದೇಶದ ಮೋಕ್ಷಗುಂಡಂನವರು. ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದು ಚಿಕ್ಕಬಳ್ಳಾಪುರ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ವಿದ್ಯಾಭ್ಯಾಸ ಪೂರ್ತಿಗೊಳಿಸಲು ಕಷ್ಟಪಡುತ್ತಿದ್ದರು, ಬಳಿಕ ಸೋದರ ಮಾವನ ಸಹಾಯದಿಂದ ಬೆಂಗಳೂರಿನಲ್ಲಿ ಮನೆ ಪಾಠ ಮಾಡುತ್ತಾ ಶಿಕ್ಷಣ ಮುಂದುವರಿಸಿದರು.

ಫೋಟೋ ಕೃಪೆ : google

ಮೆಟ್ರಿಕ್‌ ಪರೀಕ್ಷೆಯಲ್ಲಿ ಮೈಸೂರು ಸಂಸ್ಥಾನಕ್ಕೆ ಮೊದಲಿಗರಾಗಿ ತೇರ್ಗಡೆ ಹೊಂದಿದ್ದ ಅವರು ಆ ಬಳಿಕ ಎಂಜಿನಿಯರಿಂಗ್‌ ಪದವಿಯನ್ನು ಪುಣೆಯಲ್ಲಿ ಗಳಿಸಿದರು. ತಮ್ಮ 24 ನೇ ವಯಸ್ಸಿನಲ್ಲಿ ಮುಂಬಯಿ ಪ್ರಾಂತ್ಯದ ಸಹಾಯಕ ಎಂಜಿನಿಯರ್‌ ಆಗಿ ವಿಶ್ವೇಶ್ವರಯ್ಯ ನೇಮಕಗೊಂಡರು. ಅವರ ಕಾರ್ಯ ಚತುರತೆ ಆರಂಭವಾದದ್ದು ಅಲ್ಲಿಂದಲೇ. ಮುಂದೆ ವಿದೇಶಗಳಲ್ಲೂ ತಮ್ಮ ನೈಪುಣ್ಯವನ್ನು ಒರೆಗೆ ಹಚ್ಚಿದರು. ಲಂಡನ್‌ನ ಏಡನ್‌ನಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅತ್ಯಂತ ಸಮರ್ಪಕವಾಗಿ ನಿರ್ಮಿಸಿಕೊಟ್ಟ ಕೀರ್ತಿ ಇವರದ್ದು.

ನಮ್ಮ ಚಿಕ್ಕಂದಿನಿಂದ ನಮ್ಮ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆ ಕಟ್ಟಿದ್ದು ಎಂದು ಜನ ಆಪ್ತವಾಗಿ ಕತೆ ಹೇಳುತ್ತಿದ್ದುದನ್ನು ಕೇಳಿ ಬೆಳೆದವರು ನಾವು. ಆ ಕಾಲಕ್ಕಾಗಲೇ ವಿಶ್ವೇಶ್ವರಯ್ಯ ದಂತಕತೆಯಾಗಿದ್ದರು. ಕಟ್ಟೆಯ ಮೇಲಿಂದ ಕೆಳಗೆ ತೆರೆದ ಬಾಗಿಲುಗಳಿಂದ ಭೋರ್ಗರೆದು ಹರಿಯುವ ಕಾವೇರಿಯ ನೀರನ್ನು ನೋಡುವುದೇ ಒಂದು ಅದ್ಭುತ ಅನುಭವವಾಗಿತ್ತು. ಬರಡು ನಾಡಾಗಿದ್ದ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ತಮ್ಮ ಸ್ವಂತ ನಗನಾಣ್ಯಗಳನ್ನು ಮಾರಿ ಕೃಷ್ಣರಾಜ ಸಾಗರವನ್ನು ಕಟ್ಟಿ ಲಕ್ಷಾಂತರ ಎಕರೆ ಭೂಮಿಗೆ ನೀರನ್ನುಣ್ಣಿಸುವ ಮೂಲಕ ನೀರಾವರೀ ಕೃಷಿಗೆ ನಾಂದಿ ಹಾಡಿದ ನಾಲ್ಮಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರ ಚಿತ್ರಗಳನ್ನು ಅಲ್ಲಿಯ ಗ್ರಾಮ ಗ್ರಾಮಗಳಲ್ಲಿಯೂ, ಪ್ರತೀ ಮನೆಮನೆಗಳಲ್ಲಿ ತಮ್ಮ ತಮ್ಮ ಕುಲದೇವತೆಗಳೊಂದಿಗೆ ಇಟ್ಟು ಪೂಜಿಸುವುದನ್ನು ಇಂದಿಗೂ ಸಹಾ ಕಾಣಬಹುದಾಗಿದೆ.

ವಿಶ್ವೇಶ್ವರಯ್ಯನವರ ಸಮಯಪ್ರಜ್ಞೆಯ ಬಗ್ಗೆ ಅದೆಷ್ಟೋ ಕತೆಗಳಿದ್ದವು. ಅವರ ಪ್ರಾಮಾಣಿಕತೆಯನ್ನು ಕುರಿತ ಮೋಂಬತ್ತಿಯ ಕತೆಯಂತೂ ಜನಜನಿತವಾಗಿತ್ತು. ವಿದ್ಯುಚ್ಚಕ್ತಿಯಿಲ್ಲದ ಆ ಕಾಲದಲ್ಲಿ ರಾತ್ರಿ ಹೊತ್ತು ಮೋಂಬತ್ತಿಗಳನ್ನು ಬಳಸಲಾಗುತ್ತಿತ್ತು. ವಿಶ್ವೇಶ್ವರಯ್ಯನವರು ಸರ್ಕಾರದ ಕೆಲಸ ಮಾಡುವ ತನಕ ಮಾತ್ರ ಸರಕಾರ ಕೊಟ್ಟ ಮೋಂಬತ್ತಿ ಬಳಸುತ್ತಿದ್ದರು. ಅದು ಮುಗಿದೊಡನೆ, ತಮ್ಮ ಸ್ವಂತ ಖರ್ಚಿನಲ್ಲಿ ಕೊಂಡ ಮೋಂಬತ್ತಿ ಹತ್ತಿಸುತ್ತಿದ್ದರು – ಈ ಕತೆಯನ್ನು ಅದೆಷ್ಟೋ ಜನರ ಬಾಯಲ್ಲಿ ಕೇಳುತ್ತಿದ್ದೆವು.

ಸರ್ ವಿಶ್ವೇಶ್ವರಯ್ಯ ಅವರ ಕೊಡುಗೆಗಳು :

* ಕೃಷ್ಣರಾಜಸಾಗರದ ನಿರ್ಮಾಣ.
* ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಚೇರಮನ್ನರಾಗಿ ಅದರ ಅಭಿವೃದ್ಧಿಗೆ ಕೊಡುಗೆ.
* ಮೈಸೂರು ಸಾಬೂನು ಕಾರ್ಖಾನೆಯ ಸ್ಥಾಪನೆ.
* ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ.
* ಮೈಸೂರು ಬ್ಯಾಂಕ್ ಸ್ಥಾಪನೆ.
* ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ.
* ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ.
* ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ.
* ಶ್ರೀ ಜಯಚಾಮರಾಜೇಂದ್ರ ವೃತ್ತಿಶಿಕ್ಷಣ ತರಬೇತಿ ಸಂಸ್ಥೆಯ ಸ್ಥಾಪನೆ.

ಕರ್ನಾಟಕದ ಹೊರತಾಗಿಯೂ ದೇಶ ವಿದೇಶಗಳಲ್ಲಿ ಅವರ ಸಾಮರ್ಥ್ಯವನ್ನು ಸದ್ಬಳಕೆಮಾಡಿಕೊಳ್ಳಲಾಯಿತು. ಚೀನ, ಜಪಾನ್, ಈಜಿಪ್ಟ್, ಕೆನಡಾ, ಅಮೆರಿಕಾ ಹಾಗು ರಷ್ಯಾ ದೇಶಗಳಿಗೆ ಭೇಟಿ ನೀಡಿದ್ದಲ್ಲದೇ ಅವರ ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿ ಭಾರತದ ಗೌರವವನ್ನು ವಿದೇಶಗಳಲ್ಲಿ ಎತ್ತಿಹಿಡಿದಿದ್ದಾರೆ.

ಫೋಟೋ ಕೃಪೆ : google

ನೂರಾ ಎರಡು ವರ್ಷಗಳ ತುಂಬು ಬದುಕನ್ನು ಕರ್ಮಯೋಗಿಯಂತೆ ಬಾಳಿದವರು ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಬದುಕಿಡೀ ನಾಡಿಗೆ ದುಡಿದು, ಸೇವೆ ಸಲ್ಲಿಸಿದ ನಮ್ಮ ನೆಲದ ಹೆಮ್ಮೆಯ ಈ ಭಾರತೀಯ, ತಮ್ಮ ಜೀವಿತಕಾಲದಲ್ಲಿಯೇ ದಂತಕತೆಯಾಗಿ ಜಗತ್ಪ್ರಸಿದ್ಧರಾದರು.

ಇಂದು ನಮ್ಮ ಕನ್ನಡದ ನೆಲ, ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ. ಇದರ ಬುನಾದಿಯಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ. ಅವರ ಪ್ರತಿಭೆಯನ್ನು ಮನಗಂಡು ಅವರೊಡನೆ ಸಹಕರಿಸಿದ, ಅವರ ಯೋಜನೆಗಳನ್ನು ಬೆಂಬಲಿಸಿದ ಮೈಸೂರು ಮಹಾರಾಜರು, ದಿವಾನರುಗಳ ಸಹಯೋಗವೂ ಇದೆ. ನಿಜವಾದ ಅರ್ಥದಲ್ಲಿ ವಿಶ್ವೇಶ್ವರಯ್ಯ ಆಧುನಿಕ ಮೈಸೂರಿನ ನಿರ್ಮಾಣದ ಭಾಗ್ಯವಿಧಾತ.

ಭಾರತದ ಇತಿಹಾಸದಲ್ಲಿಯೇ ವಿಶ್ವೇಶ್ವರಯ್ಯನವರಿಗೆ ಹೋಲಿಸುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ಸರ್ ಎಂ. ವಿ ಅವರ ಬದುಕು ಮತ್ತು ಸಾಧನೆಯನ್ನು ಜನ ಅರಿತಷ್ಟೂ ನಮ್ಮ ಎಳೆಯ ಪೀಳಿಗೆಯ ಎದುರು ಆದರ್ಶದ ಉದಾಹರಣೆಯೊಂದು ಪ್ರಜ್ವಲಿಸಿ ನಿಲ್ಲುತ್ತದೆ. ಲಂಚಕೋರತನ, ಲಾಭಕೋರತನದ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಮಾಜದಲ್ಲಿ ವಿಶ್ವೇಶ್ವರಯ್ಯ ಅವರ ಪ್ರಾಮಾಣಿಕ ನಿಸ್ವಾರ್ಥ ದುಡಿಮೆ ನಮಗೆ ಯಾವತ್ತಿಗೂ ದಾರಿದೀಪ.

ಈ ಮಹಾನ್ ಪ್ರೇರಕ ಶಕ್ತಿ, ಆದರ್ಶ, ಪ್ರಾಮಾಣಿಕತೆ, ಸಾಮರ್ಥ್ಯ, ಅದ್ಭುತಚೇತನಕ್ಕೆ ಅವರ ಜನ್ಮದಿನದಂದು ನನ್ನ ಸಾಷ್ಟಾಂಗ ಪ್ರಣಾಮಗಳು.


  • ಸೌಮ್ಯ ಸನತ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW