ಈಚಲುಹುಳದ (ಈಸುಳ್ಳಿ) ವರ್ಮಿ ಚಾಟ್ಸ್ – ಡಾ.ವಡ್ಡಗೆರೆ ನಾಗರಾಜಯ್ಯ



ಈಚಲುಹುಳ ಚಾಟ್ಸ್ ಇದು ಚೀನಿ ಆಹಾರವಲ್ಲ, ನಮ್ಮ ಆಹಾರ. ಇದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ತಿನ್ನಲು ರುಚಿ ಅನ್ನುವುದಕ್ಕಿಂತ ಪೌಷ್ಟಿಕ ಆಹಾರವಾಗಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಲೇಖಕರಾದ ಡಾ.ವಡ್ಡಗೆರೆ ನಾಗರಾಜಯ್ಯ ಅವರು ತಿಳಿಸಿ ಕೊಟ್ಟಿದ್ದಾರೆ. ಮುಂದೆ ಓದಿ…

ನಮ್ಮ ಗ್ರಾಮೀಣ ತಳಸ್ತರ ಜನರು ಸಸ್ಯಾಹಾರದೊಂದಿಗೆ, ಬೇಟೆಯಾಡಿ ಅಟ್ಟುಣ್ಣುವ ಮೊಲ, ಮುಂಗುಸಿ, ಆಮೆ, ಅಳಿಲು, ಉಡ, ಕಮ್ಮಾರ ಕಾಗೆ, ಸರ್ಲೆ ಹಕ್ಕಿ, ಕೊಕ್ಕರೆ, ನೀರುಕೋಳಿ, ಕಾಡುಕೋಳಿ, ಬುಲ್ಡೆಮುಳುಗ ಪಕ್ಷಿ, ಮೀನು, ಸೀಗಡಿ, ಕೆಂಜುಗ, ಏಡಿಕಾಯಿ, ಮಳೆಗಾಲದಲ್ಲಿ ಹುತ್ತದಿಂದ ಉಕ್ಕಿ ಬರುವ ಈಚಲು ಹುಳು (ಈಸುಳ್ಳಿ), ಹುತ್ತದ ಗೆಜ್ಜಲರಾಣಿ ಹುಳು (ತುಪ್ಪದ ಈಚಲು), ಹೊಲಗದ್ದೆಗಳಲ್ಲಿರುವ ತ್ವಾಡ, ಬೆಳ್ಳಿಲಿ, ಬಾರುಬೆಕ್ಕು, ಮನೆಬೆಕ್ಕು, ಹೊಲಗದ್ದೆಗಳ ಅಕ್ಕಡಿಸಾಲು ಗಿಡಗಳಲ್ಲಿ ಗೂಡು ಕಟ್ಟಿ ಜೀವಿಸುವ ಪುರ್ಲಕ್ಕಿ, ಪಾರಿವಾಳ, ಬೆಳವ, ಗದ್ದೆ ಮಿಡತೆ ಮುಂತಾದ ಸಣ್ಣ ಪುಟ್ಟ ಜೀವಿಗಳನ್ನು ಬೇಟೆಯಾಡಿ ತಿನ್ನುತ್ತಾರೆ.

ಫೋಟೋ ಕೃಪೆ : brianmarv

ಕೇರೆ ಹಾವಿನ ಬಾಡೆಸರನ್ನು ಬಿದಿರು ಗೊಟ್ಟದಲ್ಲಿ ತುಂಬಿ ಉಳುವ ದನಗಳಿಗೆ ಕುಡಿಸಿದ ಬಳಿಕ ಮಿಕ್ಕ ಮಾಂಸವನ್ನು ತಾವೂ ತಿಂದು ತಮ್ಮ ಬೇಟೆ ನಾಯಿಗಳಿಗೂ ತಿನ್ನಿಸುತ್ತಾರೆ. ಕೇರೆ ಹಾವಿನ ಬಾಡಾಮ್ರ ಕುಡಿದ ಹೋರಿಗಳು ಸುಂಕೇರಿ ಯಾವಾಗಲೂ ಸಿರಸಿರನೆ ಸಿರಗುಡತೊಡಗಿದರೆ, ಬೇಟೆ ನಾಯಿಗಳು ಮತ್ತು ಮಂದಬುದ್ಧಿಯವರು ಚುರುಕಾಗುತ್ತಾರೆ ಹಾಗೂ ಗಂಡಸರು ಸದಾ ಸಿಟ್ಟು ಕ್ವಾಪ ಕಾತಾಳ ಕ್ಯಾಣಗಳನ್ನು ಪ್ರದರ್ಶಿಸುವ ‘ಕಡಿದುಗಾರ ಗಂಡಸರು’ ಆಗುತ್ತಾರೆಂದು ನಂಬುತ್ತಾರೆ. ಕೇರೆ ಹಾವಿನ ಹುಳಿಸಾರನ್ನು ಮನುಷ್ಯರು ಸೇವಿಸುವುದನ್ನು ಆದಷ್ಟು ಅವಾಯ್ಡ್ ಮಾಡುತ್ತಾರೆ.

ಬೆಳವ, ಕೌಜಲ, ಪಾರಿವಾಳ, ಪುರ್ಲಕ್ಕಿ (ಪುರುಡಕ್ಕಿ) ಮುಂತಾದ ಸಣ್ಣ ಗಾತ್ರದ ಪಕ್ಷಿಗಳ ಮೊಟ್ಟೆಗಳನ್ನು ಸಗಣಿ ಉಂಡೆಯಲ್ಲಿಟ್ಟು ಬೆಂಕಿಯಲ್ಲಿ ಸುಟ್ಟು ತಿನ್ನುತ್ತಾರೆ. ಪೊದೆಗಿಡಗಳಿಂದ ಇದ್ದಕ್ಕಿದ್ದಂತೆ ಪುರ್ರನೆ ಹಾರುವ ಪುರುಡಕ್ಕಿಯನ್ನು ನೋಡಿದ ಕೂಡಲೇ, ‘ಪುರುಡಕ್ಕಿ ಪುರ್ರಂತು- ಮಾವನ ತರಡು ಜಲ್ಲಂತು’ ಎಂದು ಆ ಹಕ್ಕಿಯನ್ನು ಹಿಡಿಯಲು ಪ್ರಯತ್ನಿಸುತ್ತಾರೆ.

ಫೋಟೋ ಕೃಪೆ : forums.unrealengine

ಮುಂಗಾರು ಮಳೆಗಾಲದಲ್ಲಿ ಮಳೆ ಸುರಿದು ನಿಂತಾಗ, ಹುತ್ತದಿಂದ ಉಕ್ಕಿ ಹೊರಗೆ ಹಾರಿಹೋಗುವ ಈಚಲಹುಳುಗಳನ್ನು ರಾತ್ರಿ ವೇಳೆ ಸುಡಿಗೆ ಗರಿಗಳ ಜ್ವಾಲೆಗೆ ಆಕರ್ಷಿಸಿ ರೆಕ್ಕೆ ಸುಟ್ಟು ಹಿಡಿಯುತ್ತಾರೆ. . ಗೆದ್ದಲು ಜಾತಿಗೆ ಸೇರಿದ ಈಚಲ ಹುಳುಗಳನ್ನು ಇಂಗ್ಲೀಷಿನಲ್ಲಿ ‘ವಿಂಗ್ಡ್ ವೈಟ್ ಆ್ಯಂಟ್ಸ್’ ಅಥವಾ termites ಎಂದು ಕರೆಯುತ್ತಾರೆ. ಗೆದ್ದಲು ಹುಳುಗಳೇ ಬೆಳೆದು ರೆಕ್ಕೆ ಮೂಡಿ ಈಚಲು ಹುಳಗಳಾಗಿ ರೂಪಾಂತರವಾಗುತ್ತವೆ. ಹುತ್ತದ ತಳದಲ್ಲಿ ಈಚಲಹುಳಗಳ ಸಾಮ್ರಾಜ್ಯದ ಅಧಿಪತಿಯಾಗಿ ರಾಣಿಹುಳು ಅಥವಾ ತುಪ್ಪದ ರಾಣಿಹುಳ ಇರುತ್ತದೆ. ಇದರ ಸಣ್ಣ ತಲೆಯನ್ನು ಉಗುರಿನಿಂದ ಚಿವುಟಿ ತೆಗೆದೆಸೆದು ಇಡೀ ಉಂಡೆ ಹುಳುವನ್ನು ಒಮ್ಮೆಲೆ ಗಂಟಲಿನೊಳಗೆ ಇರಿಸಿಕೊಂಡು ಮಾತ್ರೆಯಂತೆ ನುಂಗಿಬಿಡುತ್ತಾರೆ. ಎಲ್ಲಾ ಕಾಲಗಳಲ್ಲೂ ಸಿಗುವ ಮೀನು ಸೀಗಡಿ ಏಡಿಕಾಯಿಗಳಂತೆ ಈಚಲು ಹುಳುಗಳು ಸದಾಕಾಲ ಸಿಗುವುದಿಲ್ಲ. ಇವು ಸಿಗುವುದು ಮುಂಗಾರಿನಲ್ಲಿ ಮಾತ್ರ. ಈಚಲು ಹುಳುಗಳು ಬೀದಿಗಳ ಕರೆಂಟ್ ಕಂಬದ ದೀಪದ ಬೆಳಕಿಗೆ ಆಕರ್ಷಿತವಾಗಿ ಗುಂಪುಗಳಲ್ಲಿ ಹಾರಿ ಬಂದು, ಅಪಾರ ಹುಳುಗಳು ದೀಪದ ಶಾಖಕ್ಕೆ ರೆಕ್ಕೆ ಕಳಚಿ ಬೀಳುತ್ತವೆ. ಹೀಗೆ ಬೀದಿ ದೀಪದ ಬೆಳಕಿಗೆ ಬರುವ ಹುಳುಗಳನ್ನು ಜನರು ತೆಂಗಿನಗರಿ ಅಥವಾ ಅಡಕೆ ಗರಿಗಳ ಸುಡಿಗೆ ಸೂಡುಗಳಿಂದ ತಮ್ಮತ್ತ ಸೆಳೆದು ಕಡ್ಡಿಪೊರಕೆಯಿಂದ ಗುಡಿಸಿ, ಮಡಕೆಗಳಿಗೆ ತುಂಬಿಕೊಂಡು, ಕಳಚಿದ ರೆಕ್ಕೆ ಕಸಕಡ್ಡಿ ಕೇರಿ ನೇರ್ಪು ಮಾಡಿಕೊಳ್ಳುತ್ತಾರೆ.

ಫೋಟೋ ಕೃಪೆ : prajavani

ಈಚಲಹುಳುಗಳನ್ನು ಬೇಟೆಯಾಡಲು ಅನೇಕ ತಂತ್ರಗಳನ್ನು ಅನುಸರಿಸಲಾಗುತ್ತದೆ. ಹುಳುಗಳಿರುವ ಹುತ್ತವನ್ನು ಹುಡುಕಿ ಕ್ವಾವೆಗಳನ್ನೆಲ್ಲಾ ಅಂಟು ಮಣ್ಣಿನಿಂದ ಮುಚ್ಚಿ ಮುದ್ರೆಮಾಡಿ ಹುತ್ತದ ತಳದಲ್ಲಿ ಒಂದೇ ಒಂದು ಕ್ಯಾವೆಯನ್ನು ಮಾತ್ರ ತೆರೆದಿರಿಸಿ, ತಂಗಡಿ ಗಿಡದ ಸೊಪ್ಪನ್ನು ಅಥವಾ ಲಕ್ಕಿಗಿಡದ ಸೊಪ್ಪನ್ನು ಹುತ್ತದ ಕ್ವಾವೆಗಳ ಮೇಲೆ ಮಂದವಾಗಿ ಹರಡಿ ಗಾಳಿ ಸುಳಿಯದಂತೆ ಹುತ್ತವನ್ನು ಮುಚ್ಚುತ್ತಾರೆ. ಹುತ್ತದ ಬುಡದಲ್ಲಿ ಮುಚ್ಚದೇ ತೆರೆದಿರಿಸಿರುವ ಕ್ಯಾವೆಯ ಹತ್ತಿರ 2X2 ಅಡಿಗಳಷ್ಟು ಗುಂಡಿಯನ್ನು ತೋಡಿ ಆ ಗುಂಡಿಯೊಳಕ್ಕೆ ಹುಳಗಳು ಹರಿದುಹೋಗುವಂತೆ ವ್ಯವಸ್ಥೆಮಾಡಿ ಗುಂಡಿಯ ಅರ್ಧ ಪ್ರಮಾಣ ನೀರುತುಂಬಿ ಮೇಲ್ಭಾಗಕ್ಕೆ ಅತ್ತಲಿತ್ತಲೂ ಅಡ್ಡಡ್ಡವಾಗಿ ಲಕ್ಕಿಸೊಪ್ಪು ಅಥವಾ ತಂಗಡಿ ಸೊಪ್ಪನ್ನು ಹರಡುತ್ತಾರೆ. ಹುಳುಗಳು ಆ ಸೊಪ್ಪಿನ ಕೆಳಕ್ಕೆ ಹರಿದುಬಂದು ಸೊಪ್ಪಿನ ಕಾವಿನಲ್ಲಿ ರೆಕ್ಕೆ ಕಳೆದುಕೊಂಡು, ಹಸಿ ಸೊಪ್ಪಿನ ಗಮಲಿಗೆ ಅಮಲೇರಿ ಗುಪ್ಪೆಯಾಗಿ ಗುಂಡಿಯೊಳಗೆ ಬಿದ್ದಿರುತ್ತವೆ.

ಫೋಟೋ ಕೃಪೆ : facebook

ಚಾಪೆಗಳ ಮೇಲೆ ಅಥವಾ ಹಾಸುಬಂಡೆಗಳ ಮೇಲೆ ಈ ಈಚಲು ಹುಳಗಳನ್ನು ಹರಡಿ ಬಿಸಿಲಿನಲ್ಲಿ ಎರಡು ದಿನ ಚೆನ್ನಾಗಿ ಒಣಗಿಸಿ ಮತ್ತೊಮ್ಮೆ ಕೇರಿ ಶುಚಿಗೊಳಿಸುತ್ತಾರೆ. ಒಲೆ ಮೇಲೆ ಹುರಿದ ಒಣ ಈಚಲು ಹುಳಗಳೊಂದಿಗೆ ಚಿನಕುರುಳಿ-ಎಳ್ಳು-ಕುಸುಬೆ- ಹುರಿದ ಹೆಸರುಕಾಳು- ಹುರಿದ ಅಲಸಂದೆಕಾಳು,ಜೋಳದ ಅವಲು, ಒಣಕೊಬ್ಬರಿ ತುರಿ- ಬೆಳ್ಳುಳ್ಳಿ- ಹುರಿಗಡಲೆ- ಹುರಿದ ಕಳ್ಳೇಬೀಜಗಳಿಗೆ ಉಪ್ಪು ಹಾಗೂ ಸ್ವಲ್ಪ ಖಾರದ ಪುಡಿ ಅಥವಾ ಕಾಳುಮೆಣಸಿನ ಪುಡಿ ಉದುರಿಸಿ ಒಲೆ ಮೇಲೆ ಖಾರಮಂಡಕ್ಕಿಯಂತೆ ಅಗ್ಗರಿಸಿ ‘ಕುರುಕ್ಲು’ ಕೈತಿಂಡಿ ತಯಾರಿಸಲಾಗುತ್ತದೆ. ಹುಳುಗಳಲ್ಲಿಯೇ ಎಣ್ಣೆ ಅಥವಾ ತುಪ್ಪ ಇರುವುದರಿಂದ ಒಗ್ಗರಣೆ ಹಾಕಿ ಅಗ್ಗರಿಸಲು ಪ್ರತ್ಯೇಕ ಎಣ್ಣೆ ಬಳಸುವ ಅಗತ್ಯವಿಲ್ಲ.

ಈ ಖಾದ್ಯವನ್ನು ಮಕ್ಕಳು ಹಿತವಾಗಿ ಸವಿಯುತ್ತಾರೆ. ರೊಟ್ಟಿಯೊಂದಿಗೆ ನೆಂಚಿಕೆಯಾಗಿ ಅಥವಾ ಟೈಂಪಾಸ್ ವರ್ಮಿ ಚಾಟ್ಸ್ ಆಗಿ ಬಳಕೆಯಾಗುವ ಇದು ಬಸುರಿ ಬಾಣಂತಿಯರಿಗೆ ಪೌಷ್ಟಿಕ ಆಹಾರವಾಗಿ ಒದಗುತ್ತದೆ. ನಮ್ಮ ಗ್ರಾಮೀಣ ಜನರು ಒಣ ಸೀಗಡಿಯಿಂದ ತಯಾರಿಸಿದ ಚಟ್ಣಿಪುಡಿ, ಹಸಿ ತೊಗರಿ ಕಾಳಿನೊಂದಿಗೆ ಏಡಿಕಾಯಿ ಹಾಕಿ ತಯಾರಿಸಿದ ಹುಳಿಸಾರು, ಸಸ್ಲು ಮೀನು – ಮಳ್ಳೆಮೀನು – ಕರಿಮೀನಿನ ಹುಳಿಸಾರು, ಏಡಿಕಾಯಿ ಸೂಪು ಮುಂತಾದ ರುಚಿಕರ ತಿನಿಸುಗಳನ್ನು ತಯಾರಿಸಿ ಪಾಂಗಿತವಾಗಿ ಸವಿಯುತ್ತಾರೆ. ಇಂತಹ ತಿನಿಸುಗಳು ‘ಜೀವಕ್ಕೆ ತಂಪು – ಜುಟ್ಟಿಗೆ ಭದ್ರ. In my childhood days, my mother Vaddagere Kadaramma was an expert in preparing this wormy chats, you know!’



ವಿಶೇಷ ಸೂಚನೆ : ಮಾಂಸಾಹಾರ ಪ್ರಿಯ ಬೇಟೆಗಾರರು ತಿನ್ನುವ ಕೆಲವು ಜೀವಿಗಳಿವು. ಮೀನು – ಸೀಗಡಿ- ಏಡಿಕಾಯಿ ಮುಂತಾದ ಕೆಲವು ಆಹಾರಕ್ಕೆಂದೇ ಸೀಮಿತವಾಗಿರುವ ಜೀವಿಗಳನ್ನು ತಿನ್ನುವ ಬಗ್ಗೆ ನಮ್ಮ ಆಕ್ಷೇಪವಿರಲಾರದು. ಆಮೆ, ಉಡ, ನರಿ, ತೋಳ, ಬಾರುಬೆಕ್ಕು, ಮುಂಗುಸಿ, ಬಾವಲಿ, ನವಿಲು, ಜಿಂಕೆ, ಕಡವೆ, ಕಾಡೆಮ್ಮೆ ಇನ್ನೂ ಮುಂತಾದ ಅಮೂಲ್ಯ ಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಅಪಾರ ಪ್ರಮಾಣದ ಕಾಡು – ಕಾಡುಪ್ರಾಣಿಗಳು ನಾಶವಾಗಿಹೋಗಿವೆ. ಇಷ್ಟೊಂದು ನಾಶದ ಬಳಿಕ ಜಾರಿಯಾಗಿರುವ ವನ್ಯಜೀವಿ ಸಂರಕ್ಷಣಾ ಕಾಯ್ದೆಯಿಂದಾಗಿ ಕೆಲವು ಅಮೂಲ್ಯ ಜೀವಿಗಳು ಉಳಿದುಕೊಂಡಿವೆ. ಹೀಗಿದ್ದೂ ಶ್ರೀಮಂತರು ಮತ್ತು ರಾಜಕಾರಣಿಗಳ ಶಾಮೀಲಾತಿಯಿಂದಾಗಿ ಅವರ ನಾಲಗೆ ರುಚಿ ಹಾಗೂ ಕಳ್ಳಸಾಗಾಣಿಕೆಗೆ ಈ ಜೀವಿಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಿದೆ. ಇವುಗಳನ್ನು ರಕ್ಷಿಸಬೇಕಾದದ್ದು ನಮ್ಮೆಲ್ಲರ ಹೊಣೆ ಎಂಬುದನ್ನು ಮರೆಯದಿರೋಣ.


  • ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು)

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW