ಎಪ್ರಿಲ್ ೩೦ ವಿಶ್ವ ಪಶುವೈದ್ಯರ ದಿನಪಶುವೈದ್ಯರ ಮಹತ್ವವನ್ನು ಜಗಕ್ಕೆ ಸಾರುವ ಉದ್ಧೇಶದಿಂದ ವಿಶ್ವ ಪಶುವೈದ್ಯರ ಸಂಘ ೨೦೦೦ ನೇ ಸಾಲಿನಿಂದ ಎಪ್ರಿಲ್ ೩೦ ವಿಶ್ವ ಪಶುವೈದ್ಯರ ದಿನ.ಎಂದು ಆಚರಿಸಲಾಗುತ್ತದೆ.ಈ ಸಂದರ್ಭದಲ್ಲಿ ಪಶುವೈದ್ಯರು ಎದುರಿಸುವ ಸವಾಲುಗಳನ್ನು ಖ್ಯಾತ ಪಶುವೈದ್ಯರಾದ ಡಾ.ಎನ್.ಬಿ.ಶ್ರೀಧರ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ವಿಶ್ವ ಪಶುವೈದ್ಯಕೀಯ ದಿನ ಮತ್ತು ಪಶುವೈದ್ಯರ ಸವಾಲುಗಳು ಮತ್ತು ಒಂದಿಷ್ಟು ಜವಾಬುಗಳು

ಎಪ್ರಿಲ್ ೩೦ ವಿಶ್ವ ಪಶುವೈದ್ಯರ ದಿನ. ಪಶುವೈದ್ಯರ ಮಹತ್ವವನ್ನು ಜಗಕ್ಕೆ ಸಾರುವ ಉದ್ಧೇಶದಿಂದ ವಿಶ್ವ ಪಶುವೈದ್ಯರ ಸಂಘ ೨೦೦೦ ನೇ ಸಾಲಿನಿಂದ ಈ ಆಚರಣೆ ಪ್ರಾರಂಭಿಸಿತು. ಪ್ರತಿ ವರ್ಷವೂ ಇರುವಂತೆ ಈ ವರ್ಷವೂ ಸಹ ಧ್ಯೇಯವಾಕ್ಯ “ಪಶುವೈದ್ಯಕೀಯ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವುದು”. ನಿಜ. ಇದು ಇಂದಿನ ಅವಶ್ಯಕತೆಯೂ ಸಹ ಹೌದು. ಕಠಿಣ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಪಶುವೈದ್ಯರಲ್ಲಿದ್ದರೂ ಸಹ ಅದನ್ನು ಇನ್ನೂ ಬಲಗೊಳಿಸುವ ಅವಶ್ಯಕತೆ ಇದೆ. ಎಲ್ಲಾ ವೃತ್ತಿಗಳಲ್ಲಿ ಇರುವಂತೆ ಪಶುವೈದ್ಯಕೀಯ ವೃತ್ತಿಯಲ್ಲಿಯೂ ಸಹ ಹೆಜ್ಜೆ ಹೆಜ್ಜೆಗೂ ಸಹ ಕಠಿಣ ಸವಾಲುಗಳಿವೆ. ದನ, ಕುರಿ, ಆಡು, ಹಂದಿ, ನಾಯಿ, ಕೋಳಿ, ಕುದುರೆ, ಒಂಟೆ, ಕತ್ತೆ, ಆನೆ, ಆಮೆ, ಹುಲಿ, ಸಿಂಹ, ಚಿರತೆ, ಮೀನು, ಹಕ್ಕಿ ಪಕ್ಷಿಗಳು, ಮೊಸಳೆ, ತಿಮಿಂಗಲ, ಹಾವು ಹೀಗೆ ಹೀಗೆ ಒಂದೇ ಎರಡೆ, ಸಮಸ್ಥ ಜೀವಕುಲದ ವೈವಿಧ್ಯಗಳ ವೈರುಧ್ಯಗಳ ನಡುವೆ ಅಧ್ಯಯನ ಮಾಡಿ ಅವುಗಳನ್ನು ಚಿಕಿತ್ಸೆ ಮಾಡುವುದು ಹಾಗಿರಲಿ, ಈ ಪದವಿಯನ್ನು ಮುಗಿಸುವುದೇ ದೊಡ್ಡ ಸವಾಲು. ಪದವಿ ಮುಗಿದ ಮೇಲೆ ವೃತ್ತಿ ಜೀವನ ಮತ್ತೊಂದು ದೊಡ್ಡ ಸವಾಲು. ಚಿಕಿತ್ಸೆ ಮಾಡುವ ಯಾವುದೇ ಜೀವ ಜಂತುಗಳು ಮಾತನಾಡುವುದಿಲ್ಲ, ಅವುಗಳನ್ನು ನೋಡಿಕೊಳ್ಳುವ ಹೊಣೆ ಹೊತ್ತಿರುವವರಿಗೆ ಲಕ್ಷಣಗಳೇ ಗೊತ್ತಿರುವುದಿಲ್ಲ. ಇದಕ್ಕಿಂತ ಕಠಿಣ ಸವಾಲು ಬೇಕೇ? ಇದರ ಜೊತೆಯಲ್ಲಿಯೇ ಈ ಪ್ರಾಣಿ ಸಮೂಹದಿಂದ ಮನುಷ್ಯರಿಗೆ ಬರುವ
ಹುಚ್ಚುನಾಯಿ ಕಾಯಿಲೆ, ಕ್ಷಯ, ಲೆಪ್ಟೊಸ್ಪೆರಾ, ಬ್ರುಸೆಲ್ಲೋಸಿಸ್ ಮತ್ತಿತರ ಅನೇಕ ರೋಗಗಳ ತಡೆಯೂ ಸಹ ಪಶುವೈದ್ಯರದೇ ಜವಾಬ್ಧಾರಿ.

ಚಿಕಿತ್ಸೆಯೊಂದೇ ಪಶುವೈದ್ಯರ ಕಾರ್ಯವಲ್ಲ. ಪಶುಪಾಲನೆಯೂ ಸಹ ಇವರ ಜೀವ ನಾಡಿ. ಸಾರ್ವಜನಿಕರ ಅದರಲ್ಲೂ ವಿಶ್ವದಾದ್ಯಂತ ೪೧೧ ಕಡುಬಡವರು ಅವರ ಹೊತ್ತಿನ ತುತ್ತಿನ ಚೀಲ ತುಂಬಿಸಲೂ ಸಹ ಅವಲಂಭಿಸಿರುವುದು ಪಶುಪಾಲನೆಯ ಮೇಲೆಯೇ! ಕರ್ನಾಟಕದಲ್ಲಿಯೇ ೫೦ ಲಕ್ಷ ಜನರು ಅದರಲ್ಲಿಯೂ ಭೂರಹಿತ ಕೃಷಿ ಕಾರ್ಮಿಕರು ಮೇಕೆ, ಹಸು, ಕುರಿ, ಕೋಳಿ, ಹಂದಿ ಸಾಕಣೆಯಂತ ಪಶುಪಾಲನೆ ಚಟುವಟಿಕೆಯಲ್ಲಿ ತೊಡಗಿರುವುದರಿಂದ ಇವರಿಗೆ ಸರಿಯಾಗಿ ಮಾರ್ಗದರ್ಶನ ಮಾಡಿ ಬದುಕು ಕಟ್ಟಿಕೊಳ್ಳಲು ಸಹಕರಿಸುವುದೂ ಸಹ ಪಶುವೈದ್ಯರ ಕೆಲಸ. ಅಕ್ಷರ ರಹಿತ ಜನರಿಗೆ ವೈಜ್ಞಾನಿಕ ತಿಳುವಳಿಕೆ ನೀಡಿ ಆಧುನಿಕ ರೀತಿಯಲ್ಲಿ ಪಶುಪಾಲನೆಯನ್ನು ಮಾಡಿಸುವುದು ಸಹ ಅತ್ಯಂತ ಕಠಿಣ ಕಾರ್ಯವೇ ಸರಿ.

ಬಿಡುವಿಲ್ಲದ, ವಿಶ್ರಾಂತಿಗೆ ಸಮಯವಿಲ್ಲದ, ಕುಟುಂಬದ ಜೊತೆ ಸಮಯ ಕಳೆಯಲು ಸಮವಲ್ಲದ ಬದುಕು ಬಹುತೇಕ ವೃತ್ತಿಪರ ಪಶುವೈದ್ಯರದು. ವೃತ್ತಿಯಲ್ಲಿ ತೊಡಗಿ ವೈಯಕ್ತಿಕ ಬದುಕಿಗೆ, ಕುಟುಂಬಕ್ಕೆ ಸಮಯ ಕೊಡಲಾಗದೇ ತೊಳಲುವ ಬದುಕು ಅನೇಕ ಪಶುವೈದ್ಯರದು. ಇದೇ ಪಾಪ ಪ್ರಜ್ಞೆಯಿಂದ ಬಳಲುವುದು ಅವರ ನಿರಂತರ ಬವಣೆ. “ವೀಕೆಂಡ್” ಸಂಸ್ಕತಿಯ ಗಂಧಗಾಳಿಯೇ ಗೊತ್ತಿರದ ಸ್ಥಿತಿ ಬಹುತೇಕ ಪಶುವೈದ್ಯರದು. ಕುಟುಂಬದ ಜೊತೆ ಪ್ರವಾಸಕ್ಕೆ ಹೊರಟ ಸಮಯದಲ್ಲಿಯೇ ತುರ್ತು ಚಿಕಿತ್ಸೆಗೆ ಕರೆಯುವ ರೈತರ ಕರೆಗೆ ಓಗೊಡುವುದೋ, ಕಟ್ಟಿಕೊಂಡು ಜೀವನ ಪರ್ಯಂತ ಜೊತೆಯಲ್ಲಿರಲು ನಂಬಿಕೊAಡು ಬಂದವರ ಕರೆಗೆ ಓಗೊಡುವುದೋ ಗೊತ್ತಾಗಿ ಕೊನೆಗೆ ವೃತ್ತಿ ಬದುಕಿಗೇ ಅಂಟಿಕೊಳ್ಳುವ ಅನಿವಾರ್ಯತೆ ಅವರದು. ಇದೂ ಸಹ ಅತ್ಯಂತ ಕಠಿಣ ಸವಾಲೇ ಸರಿ.

 

ಬೆರಳೆಣಿಕೆಯ ಕೆಲವೇ ಜನರನ್ನು ಹೊರತು ಪಡಿಸಿದರೆ ಕರ್ನಾಟಕದಲ್ಲಿರುವ ಬಹುತೇಕ ಪಶುವೈದ್ಯರು ಸರ್ಕಾರಿ ಉದ್ಯೋಗದಲ್ಲಿರುವವರು. ಉದ್ಯೋಗ ಸಂಬAಧಿ ಒತ್ತಡ ನಿರ್ವಹಣೆ, ಪಶುಚಿಕಿತ್ಸೆಗಾಗಿ ಪಶುಪಾಲಕರ ಬಾಗಿಲಿಗೇ ನಿರಂತರ ಪ್ರಯಾಣ, ಹೊತ್ತಿಲ್ಲದ ಹೊತ್ತಿಗೆ ಊಟ, ಎಷ್ಟು ಮಾಡಿದರೂ ತಲುಪದ ಗುರಿ, ಗುರಿ ಸಾಧನೆಯ ಅನಿವಾರ್ಯತೆಗಾಗಿ ಮೇಲಾಧಿಕಾರಿಗಳ ನಿರಂತರ ಒತ್ತಡ, ದತ್ತಾಂಶಗಳನ್ನು ಗಣಕೀಕರಣಗೊಳಿಸುವ ಕೆಲಸವಲ್ಲದ ಕೆಲಸಗಳು ಪಶುವೈದ್ಯರನ್ನು ಹೈರಾಣಗೊಳಿಸಿವೆ ಎಂಬುದು ನಿಜ. ಕಠಿಣ ಮಾರ್ಗದಲ್ಲಿ ಅನಿವಾರ್ಯ ಆಯ್ಕೆಯಾದ ದ್ವಿಚಕ್ರದಲ್ಲಿ ಪ್ರಯಾಣಿಸುವಾಗ ಒದಗಿದ ಅಪಘಾತಕ್ಕೆ ಅನೇಕ ಅಪಘಾತಕ್ಕೆ ಅನೇಕ ಪಶುವೈದ್ಯರು ಜೀವ ತೆತ್ತಿದ್ದಾರೆ. ಪ್ರಾಣಿಗಳಿಗೆ ಪಶುವೈದ್ಯರು ಅವುಗಳ ಒಳಿತಿಗೆ ಚುಚ್ಚುಮದ್ದು ಇತ್ಯಾದಿ ನೀಡುತ್ತಾರೆ ಎಂಬುದು ತಿಳಿದಿರುತ್ತದೆಯೇ? ಅವುಗಳ ನೈಸರ್ಗಿಕವಾದ ಪ್ರತಿಕ್ರಿಯೆಯಾದ ಒದೆಯುವುದು, ಹಾಯುವುದು, ಕಚ್ಚುವುದು, ತಿವಿಯುವುದು, ಗುದ್ದುವುದು, “ಅವು ಸಾದು, ಏನೂ ಮಾಡಲ್ಲ” ಎಂಬ ಮಾಲಕರ ನಿರ್ಲಕ್ಷ÷್ಯ ಇತ್ಯಾದಿಗಳಿಂದ ಅನೇಕ ಪಶುವೈದ್ಯರು ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ನೋವನ್ನು ಅನುಭವಿಸುತ್ತಿರುವುದು ಅನೇಕರಿಗೆ ತಿಳಿಯದ ವಿಚಾರ. ಇದೂ ಸಹ ಒಂದು ಕಠಿಣ ಸವಾಲು.
“ಆಕಳು ಎಷ್ಟು ದಿನದಿಂದ ಮೇವು ತಿನ್ನುತ್ತಿಲ್ಲ? ಜ್ವರವಿತ್ತೆ? ಹಿಂಡಿಯಲ್ಲಿ ಬದಲಾವಣೆಯಾಗಿದೆಯೇ? ಹೊರಗೆ ಮೇಯಲು ಬಿಟ್ಟಿದ್ದಾರೆಯೇ? ನಿಯಮಿತವಾಗಿ ಮೇಯುವ ಸ್ಥಳದಲ್ಲಿ ಬದಲಾವಣೆಯಾಗಿದೆಯೇ? ಹೊಸ ರೀತಿಯ ಆಹಾರವನ್ನು ತಿನ್ನಲು ನೀಡಲಾಗಿದೆಯೇ? ವಿಷಪ್ರಾಶನದ ಬಗ್ಗೆ ಸಂಶಯವೇ? ಇತ್ಯಾದಿ ಪ್ರಶ್ನೆಗಳಿಗೆ ಗೋಪಾಲಕರಲ್ಲಿ ಉತ್ತರವೇ ಇರುವುದಿಲ್ಲ.

ಅರ್ಧಮರ್ಧ ಉತ್ತರ, ನಿಜವಲ್ಲದ ವಿಷಯಗಳು, ಕೆಲವೊಮ್ಮೆ ಸುಳ್ಳುಗಳು ಇವೆಲ್ಲಾ ಪಶುವೈದ್ಯರಿಗೆ ರೋಗ ಪತ್ತೆ ಮಾಡಲು ಅತ್ಯವಶ್ಯಕ. ಕೆಲವೊಮ್ಮೆ ಆಳುಗಳ ಮೇಲೆಯೇ ಅವಲಂಭಿತವಾದ ಪಶುಪಾಲನೆಯಾದರಂತೂ ಪ್ರತಿಯೊಂದಕ್ಕೂ ಸಹ ಆಳುಗಳು ಹೇಳಿದ ಉತ್ತರಗಳನ್ನೇ ಪಶುವೈದ್ಯರು ರೋಗಪತ್ತೆಗೆ ಅವಲಂಭಿಸಬೇಕಾಗುತ್ತದೆ. ನಿಜ. ಗೋಪಾಲಕರ ಸಹಕಾರವಿಲ್ಲದೇ ರೋಗಪತ್ತೆ ಅತ್ಯಂತ ಕಠಿಣ. ಪಶು ಮಾತನಾಡುವುದಿಲ್ಲ. ಮಾಲಕರಿಗೆ ಗೊತ್ತಿರುವುದಿಲ್ಲ. ಇದರಿಂದ ಅನೇಕ ಸಲ ಚಿಕಿತ್ಸೆಯಲ್ಲಿ ಎಡವಟ್ಟಾಗುವ ರೋಗ ನಿರ್ಧಾರವೇ ತಪ್ಪಾಗುವ ಸಾಧ್ಯತೆ ಇದೆ. ರೋಗ ಪತ್ತೆಯಲ್ಲಿ ರೋಗಲಕ್ಷಣ, ಅದರ ವೃತ್ತಾಂತ, ಮೇವು ತಿನ್ನುವ ಪ್ರಮಾಣ, ಇತ್ಯಾದಿಗಳ ಎಲ್ಲಾ ವಿವರಗಳು ಬೇಕಾಗುತ್ತವೆ. ಪಶುವೈದ್ಯರು ಪಶುಗಳ ಚಿಕಿತ್ಸೆಗೆ ಬಂದಾಗ ಪಶುವಿನ ಅದರ ಸವಿವರವಾದ ವೃತ್ತಾಂತವನ್ನು, ಗಮನಿಸಿದ ರೋಗಲಕ್ಷಣಗಳನ್ನು ಪಶು ಪಶುವೈದ್ಯರೊಂದಿಗೆ ಹಂಚಿಕೊ0ಡರೆ ರೋಗಪತ್ತೆ ಬಹಳ ಸುಲಭವಾಗಿ ಪಶು ಬೇಗ ಚಿಕಿತ್ಸೆಗೆ ಸ್ಪಂಧಿಸಿ ಸುಧಾರಿಸಿಕೊಳ್ಳುತ್ತದೆ. ಅದಕ್ಕೆ ಪಶು ಪಾಲನೆಯಲ್ಲಿ ಒಂದಿಷ್ಟು ನಿಯಮ ಅಳವಡಿಸಿಕೊಂಡರೆ ರೋಗ ಪತ್ತೆ ಸುಲಭ.

 • ಪಶುಚಿಕಿತ್ಸೆಗೆ ಸಂಬ0ಧಿಸಿದ0ತೆ ಒಂದು ೧೦೦ ಪೇಜಿನ ಪುಸ್ತಕವನ್ನು ಮನೆಯಲ್ಲಿಡಿ. ಇದರಲ್ಲಿ ಪ್ರತೀ ಹಸುವಿಗೂ ಸಹ ೫-೧೦ ಪುಟ ಮೀಸಲಿಡಿ. ಇದರಲ್ಲಿ ಜಾನುವಾರಿಗೆ ಸಂಬಂಧಿಸಿದ ಎಲ್ಲಾ ವಿವರಗಳೂ ಇರಲಿ. ಉದಾಹರಣೆಗೆ ಕರುವೊಂದು ಹುಟ್ಟಿದರೆ ಅದಕ್ಕೆ ಒಂದು ಹೊಸ ಪುಟ ತೆರೆದು ಅದಕ್ಕೆ ನಾಮಕರಣ ಮಾಡಿ ನಮೂದಿಸಿ. ಹುಟ್ಟಿದ ದಿನಾಂಕ, ಅದರ ತಾಯಿಯ ವಿವರ, ಕೊಡಿಸಿದ ವೀರ್ಯದ ವಿವರ, ಹುಟ್ಟಿದಾಗಿನ ಅಂದಾಜು ತೂಕ, ಏನಾದರೂ ತೊಂದರೆಯಾದಲ್ಲಿ ಅದರ ವಿವರ, ಜಂತು ನಾಶಕ ಹಾಕಿದ ದಿನಾಂಕ ಹಾಗೂ ಇನ್ನಿತರ ವಿವರಗಳು ಇರಲಿ. ಅದಕ್ಕೆ ನೀಡುವ ಹಾಲಿನ ಪ್ರಮಾಣ, ತಿಂಡಿಯ ವಿವರ ಇತ್ಯಾದಿಗಳೂ ಇದ್ದರೆ ಒಳಿತು. ನಂತರ ಅದು ಬೆದೆಗೆ ಬಂದ ದಿನಾಂಕ, ಕೃತಕ ಗರ್ಭಧಾರಣೆಯ ದಿನಾಂಕ ಇತ್ಯಾದಿಗಳು ಸೇರುತ್ತಾ ಹೋಗುತ್ತವೆ. ಅದರಲ್ಲಿರುವ ಭಾಷೆ ಸರಳ ಮತ್ತು ಸ್ಪಷ್ಟವಾಗಿರಲಿ. ಮುಖ್ಯವಾಗಿ ಯಾವುದೇ ಕಾಯಿಲೆಗೆ ಚಿಕಿತ್ಸೆ ನೀಡಿದರೆ ಚಿಕಿತ್ಸೆ ನೀಡಿದವರಿಂದ ಏನು ಚಿಕಿತ್ಸೆ ನೀಡಿದೆ ಎಂಬುದನ್ನು ಅದೇ ಪುಸ್ತಕದಲ್ಲಿ ಬರೆಸಿ. ತನ್ನ ಜಾನುವಾರಿಗೆ ಯಾವ ಚಿಕಿತ್ಸೆ ನೀಡಿದೆ ಎಂಬುವುದರ ಬಗ್ಗೆ ರೈತರಿಗೆ ಅರಿವು ಇರುವುದು ಒಳಿತು.
 • ಹಸುವಿನ ಅನಾರೋಗ್ಯದ ಹಿನ್ನೆಲೆಯ ಬಗ್ಗೆ ವೈದ್ಯರಿಗೆ ಸಂಪೂರ್ಣ ಮಾಹಿತಿ ಕೊಡಿ. ಸುಳ್ಳು ಹೇಳಬೇಡಿ, ಏನನ್ನೂ ಮುಚ್ಚಿಡಬೇಡಿ. ಇದು ರೋಗ ಪತ್ತೆ ಮಾಡಲು ಬಹಳ ಅಗತ್ಯ.
 • ಸಾಕಬೇಕಾದ ಪಶುಗಳ ತಳಿ ಆಯ್ಕೆ ಮಾಡುವ ಸಮಯದಲ್ಲಿ ಸಾಕುವ ಉದ್ದೇಶ ಬಹಳ ಮುಖ್ಯ. ಇದರಲ್ಲಿ ಪಶುವೈದ್ಯರ ಸಲಹೆ ಮುಖ್ಯವೇ ಹೊರತು ಇತರರ ಅಭಿಪ್ರಾಯ ಮುಖ್ಯವಲ್ಲ. ನಂತರ ತೊಂದರೆ ಅನುಭವಿಸುವಾಗ ಪಶುವೈದ್ಯರು ಸಹಾಯಕ್ಕೆ ಬರಬಹುದೇ ವಿನ: ಉಚಿತವಾಗಿ ನೀಡಿದ ಸಲಹೆ ಕೊಟ್ಟ ಇತರರಲ್ಲ.
 •  ತಜ್ಞ ಪಶುವೈದ್ಯರಿಂದ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆಯುತ್ತಿರುವಾಗ ಅವರ ಮೇಲೆ ಸಂಪೂರ್ಣ ನಂಬಿಕೆ ಹಾಗೂ ವಿಶ್ವಾಸ ಇಡಬೇಕು. ತಮ್ಮ ಹಸುವಿಗೆ ಇವರು ನೀಡುವ ಚಿಕಿತ್ಸೆಯಿಂದ ರೋಗ ಖಂಡಿತ ಗುಣವಾಗುತ್ತದೆ ಎಂಬ ಪರಿಪೂರ್ಣ ವಿಶ್ವಾಸವು ರೈತನಲ್ಲಿದ್ದರೆ ನಿಶ್ಚಯವಾಗಿಯೂ ಚಿಕಿತ್ಸೆ ಫಲಕಾರಿಯಾಗುತ್ತದೆ. ರೈತನು ಅನುಮಾನಿಸುತ್ತಲೇ ವೈದ್ಯರಿಂದ ಚಿಕಿತ್ಸೆ ಪಡೆದರೆ, ಅಲ್ಲಿ ಚಿಕಿತ್ಸೆಗೆ ಸೂಕ್ತ ವಾತಾವರಣವೇ ನಿರ್ಮಾಣವಾಗದೇ ವೈದ್ಯರಿಗೂ ಮುಕ್ತ ಮನಸ್ಸಿನಿಂದ ಚಿಕಿತ್ಸೆ ಕೈಗೊಳ್ಳಲು ಸಾಧ್ಯವಾಗದಿರಬಹುದು.
 • ಚಿಕಿತ್ಸೆಯ ಸಂದರ್ಭದಲ್ಲಿ ಜಾನುವಾರುಗಳನ್ನು ನಿಯಂತ್ರಿಸಿ ಹಿಡಿದುಕೊಳ್ಳಲು ವೈದ್ಯರು ಹೇಳಿದ ಕ್ರಮವನ್ನು ಪಾಲಿಸಿ. ನಾಟಿ ಹಸುಗಳು ಮತ್ತು ನಾಟಿ ಎಮ್ಮೆಗಳು ವೈದ್ಯರನ್ನು ಕಂಡು ಬೆದರುತ್ತವೆ. ಹಾಯಲು, ಒದೆಯಲು ಬರಬಹುದು. ಇಂತಹ ದನಗಳಿಗೆ ಚುಚ್ಚುಮದ್ದು ನೀಡುವಾಗ ಹಗ್ಗಗಳಿಂದ ಸರಿಯಾಗಿ ಬಂಧಿಸಿ ಹಿಡಿದುಕೊಳ್ಳಿ. ‘ಇದು ಏನು ಮಾಡಲ್ಲ ಡಾಕ್ಟೆçÃ, ನೀವು ಮುಂದೆ ಬಂದು ಇಂಜೆಕ್ಷನ್ ಕೊಡಿ’ ಎನ್ನಬೇಡಿ. ಆ ಹಸುವಿಗೆ ನೀವು ರೂಢಿಯಿರಬಹುದು. ಆದರೆ ವೈದ್ಯರು ಹೊಸಬರೇ. ಅವರಿಗೆ ದೈಹಿಕ ಪೆಟ್ಟು ಉಂಟಾಗದAತೆ ಕಾಳಜಿ ವಹಿಸಿ. ಪಶುವೈದ್ಯರಿಗೆ ದೈಹಿಕ ಧಕ್ಕೆಯಾದರೆ ಸಾರ್ವಜನಿಕರಿಗೆ ಬಹಳ ತೊಂದರೆ.ವೈದ್ಯರನ್ನು ಮನೆಗೆ ಚಿಕಿತ್ಸೆಗಾಗಿ ಕರೆಸುವುದಿದ್ದಲ್ಲಿ ಅವರಿಗೆ ‘ಇದೇ ಹೊತ್ತಿಗೆ ಬನ್ನಿ’ ಎಂದು ನಿರ್ಬಂಧ ಹಾಕಬೇಡಿ. ಅವರಿಗೆ ನಿಮ್ಮಂತೆಯೇ ಹಲವಾರು ಜನರ ಕರೆಗೆ ಸ್ಪಂದಿಸಬೇಕಾಗುತ್ತದೆ. ನಿಮ್ಮ ಕರೆಯ ತುರ್ತು ಅಗತ್ಯತೆಯನ್ನಾಧರಿಸಿ ಅವರು ಭೇಟಿ ನೀಡುತ್ತಾರೆ.
 • ವೈದ್ಯರನ್ನು ಮನೆಗೆ ಕರೆಸಬೇಕಾದಾಗ ಅವರು ಬರುವ ಸಮಯದಲ್ಲಿ ಮನೆಯಲ್ಲಿಯೇ ಇರಿ. ಅನಿವಾರ್ಯ ಸಂದರ್ಭದಲ್ಲಿ ಬೇರೆ ವ್ಯಕ್ತಿಗಳಿಗೆ ಅಥವಾ ಕೂಲಿಯಾಳುಗಳಿಗೆ ವೈದ್ಯರು ಬರುವ ವಿಷಯ ತಿಳಿಸಿ ಪರ್ಯಾಯ ವ್ಯವಸ್ಥೆ ಮಾಡಿ. ಅವರು ಬಂದಾಗ ನೀವೇ ಮನೆಯಲ್ಲಿಲ್ಲದಿದ್ದರೆ ಶೋಭೆಯಲ್ಲ.
 • ವೈದ್ಯರನ್ನು ಮನೆಗೆ ಕರೆಸಬೇಕಾದಾಗ ಪರೀಕ್ಷಿಸಬೇಕಾದ ಜಾನುವಾರು ಕೊಟ್ಟಿಗೆ/ಹಟ್ಟಿಯಲ್ಲೇ ಇರುವಂತೆ ನೋಡಿಕೊಳ್ಳಿ. ವೈದ್ಯರನ್ನು ಬರಲು ಹೇಳಿ ಹಸುವನ್ನು ಹೊರಗೆ ಬಿಟ್ಟು ಬಿಟ್ಟರೆ ಇದು ವೈದ್ಯರೆಡೆಗೆ ಮತ್ತು ಹಸುವಿನೆಡೆಗೆ ನಿಮ್ಮ ನಿರ್ಲಕ್ಷö್ಯವನ್ನು ತೋರಿಸುತ್ತದೆ. ವೈದ್ಯರು ಮನೆಗೆ ಬಂದ ನಂತರ ಹಸು ಎಲ್ಲಿದೆ ಎಂದು ಹುಡುಕಿಕೊಂಡು ಹೊರಡಬೇಡಿ.
 • ಫೋನಿನಲ್ಲೇ ಎಲ್ಲಾ ವಿಚಾರಗಳ ಚರ್ಚೆ ಬೇಡ. ವಿವರವಾದ ಮಾಹಿತಿ ಬೇಕಾದಲ್ಲಿ ವೈದ್ಯರನ್ನೇ ಖುದ್ದಾಗಿ ಸಂಪರ್ಕಿಸಿ. ಫೋನ್ ಸಂಭಾಷಣೆ ಸಂಕ್ಷಿಪ್ತವಾಗಿರಲಿ.
 • ಸಾಧ್ಯವಾದ ಮಟ್ಟಿಗೆ ಪದೇ ಪದೇ ವೈದ್ಯರನ್ನು ಬದಲಾಯಿಸಬೇಡಿ. ಒಬ್ಬರೇ ವೈದ್ಯರಾದರೆ ನಿಮ್ಮ ಕೊಟ್ಟಿಗೆಯಲ್ಲಿ ಬರಬಹುದಾದ ಕಾಯಿಲೆಗಳು, ಪರಿಣಾಮ ಬೀರುವ ಔಷಧಿಗಳು, ನಿಮ್ಮ ನಿರ್ವಹಣಾ ಪದ್ಧತಿಗಳ ಬಗ್ಗೆ ಪೂರ್ಣ ಅರಿವು ಅವರಿಗೆ ಇರುವುದರಿಂದ ಚಿಕಿತ್ಸೆ ಸುಲಭ.
 • ವೈದ್ಯರು ಮನೆಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಅತಿಯಾದ ಒತ್ತಾಯದಿಂದ ಅತಿಥಿ ಸತ್ಕಾರ ಮಾಡಬೇಡಿ. ಅತಿಯಾದ ನಿರ್ಬಂಧದಿAದ ಅವರಿಗೆ ಕಿರಿಕಿರಿಯಾಗುತ್ತದೆ. ಅವರ ಸಮಯವನ್ನು ವಿಚಾರಿಸಿಕೊಂಡು ಹೆಚ್ಚು ಕಾಲಯಾಪನೆ ಮಾಡದೆ ಸಂದರ್ಭಕ್ಕೆ ಅನುಗುಣವಾಗಿ ಲಘು ಉಪಹಾರ ನೀಡಿ. ಮಲೆನಾಡು ಭಾಗದಲ್ಲಿ ಚಿಕಿತ್ಸೆ ನೀಡಲು ಬೇಕಾದ ಸಮಯಕ್ಕಿಂತ ಅತಿಥಿ ಸತ್ಕಾರಕ್ಕೇ ಹೆಚ್ಚಿನ ಸಮಯ ಬೇಕಾಗುತ್ತದೆ ಎಂಬುದು ಹಲವು ಪಶು ವೈದ್ಯರ ಅನಿಸಿಕೆ.
 • ಕೊಟ್ಟಿಗೆಯ ಉಸ್ತುವಾರಿಯನ್ನು ಮನೆಯ ಮಹಿಳೆಯರು ವಹಿಸಿಕೊಂಡಾಗ ಸ್ವಾಭಾವಿಕವಾಗಿಯೇ ಅವರಲ್ಲಿ ಇರುವ ಮಾತೃಪ್ರೇಮ ಮತ್ತು ಚಿಕ್ಕ ಚಿಕ್ಕ ವಿಷಯಗಳನ್ನು ಅಲಕ್ಷಿಸದೇ ಗಮನ ನೀಡುವಂತಹ ಗುಣಗಳು ಹೈನುಗಾರಿಕೆಗೆ ಅತ್ಯಂತ ಅವಶ್ಯಕ. ಮಹಿಳೆಯರ ಮೇಲ್ವಿಚಾರಣೆಯಲ್ಲಿ ನಡೆಯುವ ಹೈನುಗಾರಿಕೆಯು ಯಶಸ್ಸನ್ನು ಸಾಧಿಸುವ ಸಾಧ್ಯತೆ ಹೆಚ್ಚು ಎಂಬುದು ಅನೇಕ ಪಶುವೈದ್ಯರ ಅನುಭವದ ಮಾತು.
 • ಕೆಲವು ಪ್ರದೇಶಗಳಲ್ಲಿ ವೈದ್ಯರು ರೈತನ ಮನೆಗೇ ಹೋಗಿ ಚಿಕಿತ್ಸೆಯನ್ನು ಇಲ್ಲವೇ ಕೃತಕ ಗರ್ಭಧಾರಣೆಯ ಸೇವೆಯನ್ನೋ ನೀಡಬೇಕಾಗುತ್ತದೆ. ಹೀಗೆ ಅವರು ಮನೆಗೆ ಬಂದಾಗ ಚಿಕಿತ್ಸೆಗೆ ಬೇಕಾದಂತಹ ಬಿಸಿ ನೀರು, ಸೋಪು, ಟವೆಲ್ಲುಗಳನ್ನು ಮತ್ತು ಜಾನುವಾರುಗಳ ನಿಯಂತ್ರಣಕ್ಕೆ ಬೇಕಾದ ಹಗ್ಗದಂತಹ ಸಾಧನಗಳನ್ನು ತಯಾರಾಗಿ ಇಟ್ಟುಕೊಳ್ಳಿ. ವೈದ್ಯರು ಬಂದ ನಂತರ ಇವುಗಳಿಗಾಗಿ ತಡಕಾಡಬೇಡಿ. ಅವರ ಸಮಯ ಅತ್ಯಮೂಲ್ಯ ಎಂಬುದನ್ನು ಅರಿತುಕೊಳ್ಳಿ. ಅವರು ನಿಮ್ಮ ಜಾನುವಾರಿಗೆ ಚಿಕಿತ್ಸೆ ನೀಡುವಂತೆ ಇತರರ ಜಾನುವಾರಿಗೂ ಸಹ ಚಿಕಿತ್ಸೆ ನೀಡಬೇಕೆಂಬುದು ಗಮನದಲ್ಲಿರಲಿ.
 • ವೈದ್ಯರು ತಿಳಿಸಿದ ಔಷಧೋಪಚಾರಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ಅವರು ನೀಡಿದ ಔಷಧಗಳನ್ನು ಹೇಳಿದ ರೀತಿಯಲ್ಲಿಯೇ ಪಶುವಿಗೆ ನೀಡಬೇಕು. ‘ಅಬ್ಬಾ ಇಷ್ಟು ಮಾತ್ರೆ ನೀಡಬೇಕೇ? ಹೀಟಲ್ಲವೇ? ಬಹಳ ಹೆಚ್ಚಾಗಲಿಲ್ಲವೇ’ ಎಂದು ಯೋಚಿಸಿ ಎರಡೇ ಮಾತ್ರೆ ನೀಡಬೇಡಿ. ಇದು ತಪ್ಪು.
 • ‘ಇಂತಹದೇ ರೀತಿಯ ಚಿಕಿತ್ಸೆ ನೀಡಿ’ ಎಂದು ವೈದ್ಯರನ್ನು ಒತ್ತಾಯಿಸಬಾರದು. ಇಂಜೆಕ್ಷನ್ ನೀಡುವ ಸಂದರ್ಭದಲ್ಲಿ ‘ಮಾತ್ರೆ ಸಾಕಾಗದೇ’ ಎಂದೋ, ಮಾತ್ರೆ ನೀಡಿದರೆ ‘ಡಾಕ್ಟೆç, ಇದಕ್ಕೆ ಇಂಜೆಕ್ಷನ್ನೇ ಕೊಟ್ಟುಬಿಡಿ’ ಎಂದು ಹೇಳಬಾರದು. ಯಾವುದು ನೀಡಿದರೆ ಸೂಕ್ತ ಎಂಬುದು ವೈದ್ಯರಿಗೆ ಚೆನ್ನಾಗಿ ಗೊತ್ತಿರುತ್ತದೆ. ನಿರ್ಧಾರ ಅವರಿಗೇ ಬಿಡಿ.
 • ಬದಲಿ ಔಷಧಗಳನ್ನು ಉಪಯೋಗಿಸಬಾರದು. ವೈದ್ಯರು ನೀಡಿದ ಔಷಧವನ್ನು ಬದಲಿಸಿ ‘ಔಷಧ ಅಂಗಡಿಯವನು ಹೇಳಿದ’ ಎಂತಲೋ, ‘ಪಕ್ಕದ ಮನೆಯವರು ಹೇಳಿದರು’ ಎಂತಲೋ ಬೇರೆ ಔಷಧ ಒಯ್ಯಬೇಡಿ.
 • ಎಲ್ಲಕ್ಕಿಂತ ಮುಖ್ಯವಾಗಿ ತಜ್ಞ ಪಶುವೈದ್ಯರಿಂದ ಚಿಕಿತ್ಸೆ ಪಡೆಯುವ ಹಕ್ಕು ನೀವು ಸಾಕಿದ ಪ್ರಾಣಿಗಿದೆ. ಅದರ ಜೀವವನ್ನು ಅರೆ ಬರೆ ತಿಳಿದವರ ಕೈಯಲ್ಲಿ ಇಡುವುದು ನೈತಿಕ ಅಧ:ಪತನ.
  ಸಧ್ಯಕ್ಕೆ ಇಷ್ಟು ಸಾಕು. ವಿಶ್ವ ಪಶುವೈದ್ಯರ ದಿನದಂದು ಶುಭಕೋರುವವರು ಅನೇಕ ಜನ. ಅವರಿಗೆಲ್ಲಾ ಧನ್ಯವಾದಗಳು. ಅದರಲ್ಲಿಯೂ ಸಹ ಗೋಪಾಲಕರು ಒಂದಿಷ್ಟು ಅಂಶಗಳನ್ನು ಗಮನಿಸಿಕೊಂಡರೆ ಪಶುವೈದ್ಯರ ಸವಾಲುಗಳು ಒಂದಿಷ್ಟು ಕಡಿಮೆಯಾದಾವು. ಗಮನಿಸಿಕೊಳ್ಳದಿದ್ದರೆ ಮುಂದಿನ ವಿಶ್ವಪಶುವೈದ್ಯರ ದಿನಕ್ಕೆ ಇದೇ ಧ್ಯೇಯ ಖಾಯಂ ಆಗುವುದರಲ್ಲಿ
  ಸಂಶಯವಿಲ್ಲ. ಆಗದಿರಲಿ.

 • ಡಾ. ಎನ್.ಬಿ.ಶ್ರೀಧರ
  ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
  ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
  ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW