ಅಮೆರಿಕದ ಕೊನೆಯ `ಕಾಡು ಮನುಷ್ಯ’ – ಶಶಿಧರ ಹಾಲಾಡಿಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ಮ್ಯೂಸಿಯಂನ ಉದ್ಯೋಗಿಯಾಗಿ ಪರಿವರ್ತನೆ ಹೊಂದಿದ ಅಮೆರಿಕದ ಕೊನೆಯ `ಕಾಡು ಮನುಷ್ಯ’, ‘ಯಾಹಿ ಬುಡಕಟ್ಟಿನ ಕೊನೆಯ ವ್ಯಕ್ತಿ’ ಇಶಿಯು, ಹೊರಜಗತ್ತಿನ ಕಣ್ಣಿನಲ್ಲಿ ಒಂದು `ಮ್ಯೂಸಿಯಂ ಪೀಸ್’ ಆಗಿದ್ದ ಎಂದರೆ ತಪ್ಪಾಗದು. ಇಶಿಯ ಕುರಿತು ಸಾಕಷ್ಟು ರೋಚಕ ವಿಷಯಗಳನ್ನು ಖ್ಯಾತ ಅಂಕಣಕಾರ ಶಶಿಧರ ಹಾಲಾಡಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಅಮೆರಿಕದಲ್ಲಿ ಅದಾಗಲೇ ನಾಗರಿಕತೆ ಆವರಿಸಿದ್ದ ಕಾಲ ಅದು. ಇಪ್ಪತ್ತನೆಯ ಶತಮಾನದ ಮೊದಲ ಭಾಗ. ೨೯ ನೆ ಆಗಸ್ಟ್ ೧೯೧೧ ರ ಒಂದು ಬೆಳಗು. ಕ್ಯಾಲಿಫೋರ್ನಿಯಾದ ಒರೋವಿಲ್ಲೆ ಪಟ್ಟಣದ ಹೊರವಲಯದಲ್ಲಿ ಒಬ್ಬ ಮೂಲನಿವಾಸಿ, ಹಸಿದು ನಿಂತಿದ್ದ. ಪಟ್ಟಣದ ಷರೀಫ್‌ ನಿಗೆ ಸುದ್ದಿ ಹೋಯಿತು. ಆತ ತನ್ನ ಸಿಬ್ಬಂದಿ ಮತ್ತು ಗನ್ ಹೊಂದಿದ್ದ ಪೊಲೀಸರೊಂದಿಗೆ ಹೋಗಿ ನೋಡಿದರೆ, ಈ ವ್ಯಕ್ತಿ ನಸುನಗುತ್ತಾ, ಅಸಹಾಯಕನಾಗಿ ನಿಂತಿದ್ದ. ನೋಡಿದ ತಕ್ಷಣ ಗೊತ್ತಾಗುತ್ತಿತ್ತು, ಆತನೊಬ್ಬ ಮೂಲನಿವಾಸಿ ಮತ್ತು ಹಸಿವಿನಿಂದ ಬಳಲಿಹೋಗಿದ್ದ ಎಂದು. ತಕ್ಷಣ ಅವನ ಕೈಗೆ ಕೋಳ ಹಾಕಿ ಜೈಲಿಗೆ ಹಾಕಲಾಯಿತು.

‘ನಿನ್ನ ಹೆಸರೇನು?’ ಎಂದು ಕೇಳಿದಾಗ, ಆ ವ್ಯಕ್ತಿ ಹೇಳಿದ `ನನಗೆ ಹೆಸರಿಲ್ಲ. ಏಕೆಂದರೆ, ನನ್ನನ್ನು ಹೆಸರಿಟ್ಟು ಕರೆಯುವ ನನ್ನ ಕುಲದ ಯಾರೂ ಬದುಕುಳಿದಿಲ್ಲ’. ಅವನ ಕುಲದ ಪದ್ಧತಿಯ ಪ್ರಕಾರ, ಅವರ ಹೆಸರನ್ನು ಸ್ವತಃ ಅವರೇ ಹೇಳುವಂತಿಲ್ಲ. ಬೇರೆಯವರು ಪರಿಚಯ ಮಾಡಿಕೊಟ್ಟಾಗ ಮಾತ್ರ ವ್ಯಕ್ತಿಯ ಹೆಸರು ಹೊರ ಜಗತ್ತಿಗೆ ಗೊತ್ತಾಗುತ್ತದೆ. ಆ ಮೂಲನಿವಾಸಿಯ ಕುಲದವರು ಬೇರಾರೂ ಬದುಕಿ ಉಳಿಯದೇ ಇರುವುದರಿಂದಾಗಿ, ಆತನ ನಿಜವಾದ ಹೆಸರು ಶಾಶ್ವತವಾಗಿ ಇತಿಹಾಸದ ಗರ್ಭದಲ್ಲಿ ಹೂತುಹೋಯಿತು.

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮಾನವಶಾಸ್ತ್ರ ತಜ್ಞರು ಅವನನ್ನು ತಮ್ಮ ವಶಕ್ಕೆ ಪಡೆದುಕೊಂಡು, ಅವನ ಕುಲವನ್ನು ಮೇಲ್ನೋಟದಿಂದ ಪತ್ತೆ ಹಚ್ಚಿ, ಅವನಿಗೊಂದು ಹೆಸರು ಕೊಟ್ಟರು. `ಇಶಿ’. ಇಶಿ ಎಂದರೆ ಅಮೆರಿಕದ ಯಾನಾ ಇಂಡಿಯನ್ ಭಾಷೆಯಲ್ಲಿ `ಮಾನವ’ ಎಂದರ್ಥ.

ಫೋಟೋ ಕೃಪೆ : google

ಇಶಿಯನ್ನು ಕ್ಯಾಲಿಫೋರ್ನಿಯಾದ ಜೈಲಿನಲ್ಲಿ ಪತ್ತೆ ಹಚ್ಚಿದ ಅಮೆರಿಕದ ಪತ್ರಕರ್ತರು ಅವನಿಗೆ `ಅಮೆರಿಕದ ಕೊನೆಯ ಕಾಡು ಮನುಷ್ಯ’ ಎಂಬ ಹೊಸ ಹೆಸರು ಕೊಟ್ಟು, ಕಾಡುಪ್ರದೇಶದಲ್ಲಿ ಬದುಕುಳಿದಿರುವ ಕೊನೆಯ ಅಮೆರಿಕನ್ ಇಂಡಿಯನ್ ಎಂದು ವ್ಯಾಪಕ ಪ್ರಚಾರ ಮಾಡಿದರು. ಅವನು ಎಲ್ಲಿ ಹೋದರೂ ಹಿಂಬಾಲಿಸಿ, ಫೋಟೋ ಬರೆದು `ಸ್ಟೋರಿ’ ಮಾಡಿದರು. ಇತ್ತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮಾನವಶಾಸ್ತ್ರ ತಜ್ಞರು, ಅವನ ಗೆಳೆತನ ಬೆಳೆಸಿ, ಯಾನಾ ಬುಡಕಟ್ಟು ಜನಾಂಗದ ಸಂಸ್ಕೃತಿಯ ವಿವರಗಳನ್ನು ಕಲೆಹಾಕತೊಡಗಿದರು. ಏಕೆಂದರೆ, ಆ ಬುಡಕಟ್ಟಿನ ಯಾಹಿ ಕವಲಿನ ಕೊನೆಯ ವ್ಯಕ್ತಿಯೇ ಇಶಿ. ಇಶಿಯನ್ನು ವಿಶ್ವವಿದ್ಯಾನಿಲಯದ ಮ್ಯೂಸಿಯಂನಲ್ಲಿ ಇರಿಸಿಕೊಂಡು, ಅವನಿಗೊಂದು ಕೆಲಸ ಕೊಟ್ಟರು. ೧೯೧೬ರ ತನಕ ಬದುಕಿದ್ದ ಇಶಿಯು, ಅವರ ಅಧ್ಯಯನಕ್ಕೆ ಅನುಕೂಲವಾಗುವಂತೆ, ತನಗೆ ಗೊತ್ತಿದ್ದದ್ದೆಲ್ಲವನ್ನೂ ಅವರಿಗೆ ತಿಳಿಸಿದ.

ಇಶಿಯು ಆ ಕುಲದ ಕೊನೆಯ ವ್ಯಕ್ತಿ ಹೇಗಾದ? ಸುದ್ದಿದಾಹದ ಅಮೆರಿಕನ್ ಜನರ ದೃಷ್ಟಿಯಲ್ಲಿ `ಕೊನೆಯ ಕಾಡು ಮನುಷ್ಯ’ ಎಂಬ ಬಿರುದನ್ನು `ಇಶಿ’ಗೆ ಏಕೆ ಕೊಡಲಾಯಿತು? ಇವೆಲ್ಲಾ ವಿವರಗಳನ್ನು ಹುಡುಕುತ್ತಾ ಹೋದರೆ, ಅಮೆರಿಕದ ರಕ್ತ ಚರಿತ್ರೆಯ ಹಾಳೆಗಳು ಒಂದೊಂದಾಗಿ ಹೊರಬರುತ್ತವೆ, ಇನ್ನೂ ಅಲ್ಲಿನ ರಕ್ತದ ಕಲೆಗಳು ಆರಿಲ್ಲವೇನೋ ಎಂಬಂತಹ ಹಸಿ ಹಸಿ ವಿವರಗಳು ತಲ್ಲಣವನ್ನು ಹುಟ್ಟಿಸುತ್ತವೆ. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಅಮೆರಿಕದ ಯುರೋಪಿಯನ್ ಮೂಲದ ಬಿಳಿ ಜನರು, ಸ್ಥಳೀಯ ಇಂಡಿಯನ್‌ರನ್ನು ಪ್ರಾಣಿಗಳಂತೆ ಬೇಟೆಯಾಡಿ, ಇಡೀ ಕುಲವನ್ನೇ ನಾಶ ಮಾಡಿದ `ಹತ್ಯಾಕಾಂಡ’ ಅಥವಾ ಜಿನೋಸೈಡ್ ಕಥನಗಳು ಬಿಚ್ಚಿಕೊಳ್ಳುತ್ತವೆ.

ಫೋಟೋ ಕೃಪೆ : google

ಇಶಿ ಎಂಬ ಅಮೆರಿಕದ ಕೊನೆಯ `ಕಾಡು ಮನುಷ್ಯ’ನು ಅಲ್ಲಿನ ಯಾಹಿ ಬುಡಕಟ್ಟಿಗೆ ಸೇರಿದವನು. ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿ ಯಾನಾ ಭಾಷೆಯನ್ನಾಡುವ ನಾಲ್ಕು ಬುಡಕಟ್ಟುಗಳಿದ್ದವು. ಉತ್ತರ ಯಾನಾ, ಮಧ್ಯ ಯಾನಾ, ದಕ್ಷಿಣ ಯಾನಾ ಮತ್ತು ಯಾಹಿ. ಸಾ.ಶ.೧೭೭೦ರ ಹೊತ್ತಿಗೆ ಯಾನಾ ಜನಸಂಖ್ಯೆ ೧೫೦೦ ಆಗಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಈ ಸಂಖ್ಯೆ ೩೦೦೦ಕ್ಕೆ ಏರಿತ್ತು. ಅಮೆರಿಕದ ಕ್ಯಾಲಿಫೋರ್ನಿಯಾ ಸುತ್ತಮುತ್ತಲಿನ ವಿಶಾಲ ಬಯಲು, ಕಾಡುಪ್ರದೇಶವೇ ಅವರ ವಾಸಸ್ಥಳ. ಅದು ಸುಮಾರು ೨೪೦೦ ಚದರ ಮೈಲಿ ವಿಸ್ತೀರ್ಣದ ಬೆಟ್ಟ, ಗುಡ್ಡ, ತೊರೆ, ಹುಲ್ಲುಗಾಲುಗಳಿಂದ ತುಂಬಿತ್ತು. ನಿರಂತರವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತಿದ್ದ ಯಾನಾ ಬುಡಕಟ್ಟು ಜನರು ಬೇಟೆಯಾಡಿ, ಹಣ್ಣು ಮತ್ತು ಗಡ್ಡೆಗಳನ್ನು ತಿಂದು ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು.

ಇವರ ಪೈಕಿ ಯಾಹಿ ಬುಡಕಟ್ಟಿಗೆ ಸೇರಿದವರ ಸಂಖ್ಯೆ ಸುಮಾರು ೪೦೦ ಮಾತ್ರ. ಇವರ ವಿಶೇಷತೆ ಎಂದರೆ, ತಮ್ಮದು ಎಂದು ಗುರುತಿಸಿಕೊಂಡ ಬೆಟ್ಟ ಗುಡ್ಡ ಪ್ರದೇಶಗಳನ್ನು ಯಾವ ಕಾರಣಕ್ಕೂ ಇತರರಿಗೆ ಬಿಟ್ಟುಕೊಡುತ್ತಿರಲಿಲ್ಲ. ಅದಕ್ಕಾಗಿ ಬಿಲ್ಲು, ಬಾಣ ಉಪಯೋಗಿಸಿ ಯುದ್ಧ ಮಾಡುತ್ತಿದ್ದರು. ಚಿನ್ನವನ್ನು ಹುಡುಕುತ್ತಾ ಬಂದ ಅಮೆರಿಕದ ಬಿಳಿಯರು ಕ್ಯಾಲಿಫೋರ್ನಿಯಾದ ಇವರ ಜಾಗದ ಮೇಲೆ ಕಣ್ಣು ಹಾಕಿದಾಗ, ಯಾಹಿ ಜನರ ಸಂತತಿಗೆ ಕುತ್ತು ಬಂತು. ಬಿಳಿಯರನ್ನು ಇವರು ಇಷ್ಟ ಪಡುತ್ತಿರಲಿಲ್ಲ. ಆದರೆ, ಬಿಳಿ ಜನರ ಬಳಿ ಬಂದೂಕುಗಳಿದ್ದವು, ಇವರ ಬಳಿ ಇರಲಿಲ್ಲ.

ಫೋಟೋ ಕೃಪೆ : google

ಅಷ್ಟೆ, ಕಥೆ. ಅಮೆರಿಕದ ಸೈನ್ಯ, ಪೊಲೀಸರು ಮತ್ತು ಕೌಬಾಯ್‌ಗಳು ಯಾಹಿ ಜನರ ನೆಲೆಗಳ ಮೇಲೆ ದಾಳಿ ಮಾಡತೊಡಗಿದರು. ಬಿಲ್ಲು ಬಾಣ ಹಿಡಿದು ಎದುರಿಸುತ್ತಿದ್ದ ಯಾಹಿ ಜನರ ಮೇಲೆ ಗುಂಡು ಚಲಾಯಿಸಿ, ಮನಬಂದಂತೆ ಸಾಯಿಸಿದರು. ಕ್ಯಾಲಿಫೋರ್ನಿಯಾದಲ್ಲಿ ಚಿನ್ನ ದೊರೆಯುತ್ತದೆ ಎಂದು ಕಂಡುಕೊಂಡ ಬಿಳಿಯರು, ಅಲ್ಲಿಗೆ ಬಂದೂಕುಗಳೊನೆ ಬಂದರು. ಇದು ೧೮೫೦-೧೯೦೦ರ ನಡುವೆ ನಡೆದದ್ದು. ಇದೇ ಸಮಯದಲ್ಲಿ ನಮ್ಮ ದೇಶದಲ್ಲಿ ಬಿಳಿಯರ ವಸಾಹತುಶಾಹಿ ಆಡಳಿತದ ವಿರುದ್ಧ ಪ್ರಥಮ ಸ್ವಾತಂತ್ರö್ಯ ಸಂಗ್ರಾಮ ನಡೆಯುತ್ತಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕ್ಯಾಲಿಫೋರ್ನಿಯಾ ಸುತ್ತ ಮುತ್ತ, ಬಿಳಿಯರಿಗೆ ವಿಶೇಷ ಪ್ರತಿರೋಧ ಇರಲಿಲ್ಲ. ಇಂಡಿಯನ್ ಜನರ ಬಳಿ ಇದ್ದ ಆಯುಧಗಳೆಂದರೆ ಬಿಲ್ಲು ಮತ್ತು ಬಾಣ ಮಾತ್ರ. ಸ್ಥಳೀಯ ಇಂಡಿಯನ್ ಜನರನ್ನು ಸಾಯಿಸುವುದೇ ಅಮೆರಿಕದ ಸೈನ್ಯ ಮತ್ತು ಕೌಬಾಯ್‌ಗಳ ಕೆಲಸವಾಗಿತ್ತು.

ಅಮೆರಿಕದ ಸೈನ್ಯವೇ ನಡೆಸುತ್ತಿದ್ದ ಈ ಕೊಲೆಗಳನ್ನು `ಜಿನೋಸೈಡ್’ ಎಂದು ನಂತರ ಗುರುತಿಸಲಾಗಿದೆ. ಎಥ್ನಿಕ್ ಕ್ಲೀನ್ಸಿಂಗ್ ಎಂದೂ ಕರೆಯಲಾಗಿದೆ. ಅಮೆರಿಕದ ಸೈನ್ಯ ಮತ್ತು ಆ ಪ್ರದೇಶಗಳಲ್ಲಿ ಸೆಟಲ್ ಆಗಬಯಸಿದ್ದ ಬಿಳಿಯರು ತಂಡ ಕಟ್ಟಿಕೊಂಡು, ಇಂಡಿಯನ್ ವಾಸಸ್ಥಳದ ಮೇಲೆ ದಾಳಿ ಮಾಡಿ, ಅಮಾಯಕರನ್ನು ಸಾಯಿಸುತ್ತಿದ್ದರು. ಪ್ರತಿ ತಿಂಗಳೂ ದಾಳಿ, ಪ್ರತಿ ತಿಂಗಳೂ ಸಾವು. ಒಮ್ಮೊಮ್ಮೆ ಅಮೆರಿಕ್ ಇಂಡಿಯನ್ ದಾಳಿಗೆ ಒಬ್ಬಿಬ್ಬರು ಬಿಳಿಯರ ಸಾಯುತ್ತಿದ್ದರು, ಅದಕ್ಕೆ ಪ್ರತೀಕಾರವಾಗಿ ನೂರಾರು ಇಂಡಿಯನ್‌ರನ್ನು ಗುಂಡಿಟ್ಟು ಸಾಯಿಸಲಾಗುತ್ತಿತ್ತು.

೧೮೬೫ರಲ್ಲಿ ರಾಬರ್ಟ್ ಆ್ಯಂಡರ್‌ಸನ್ ಎಂಬಾತನ ನೇತೃತ್ವದಲ್ಲಿ ಬಂದೂಕು ಹಿಡಿದ ಬಿಳಿಯರು ಯಾಹಿ ಜನರ ಮೇಲೆ ದಾಳಿ ಮಾಡಿ, ಸುಮಾರು ೭೦ ಜನರನ್ನು ಸಾಯಿಸಿದರು. ಅದಾಗಲೇ ಹಸಿವು, ಬಡತನದಿಂದ ನರಳುತ್ತಿದ್ದ ಯಾಹಿ ಜನರ ಒಟ್ಟು ಸಂಖ್ಯೆ ೧೦೦ಕ್ಕಿಂತ ಕಡಿಮೆ ಸಂಖ್ಯೆಗೆ ಇಳಿಯಿತು. ೬ ಆಗಸ್ಟ್ ೧೮೬೫ರ ನಸುಕಿನಲ್ಲಿ ಮತ್ತೊಮ್ಮೆ ಬಿಳಿಯ ಬಂದೂಕುಧಾರಿಗಳು ಯಾಹಿ ಜನರ ಗ್ರಾಮದ ಮೇಲೆ ಎರಗಿದರು. ಕಣಿವೆಯ ಕೊರಕಲಿನಲ್ಲಿ ನಿದ್ರಿಸಿದ್ದ ಯಾಹಿ ಜನರ ಮೇಲೆ ಗುಂಡು ಹಾರಿಸಿ, ೧೭ ಜನರನ್ನು ಸಾಯಿಸಲಾಯಿತು. ೧೮೬೭ರಲ್ಲಿ ಮಿಲ್ ಕ್ರೀಕ್ ಎಂಬಲ್ಲಿ ಗುಹೆಯೊಂದರಲ್ಲಿ ಅಡಗಿದ್ದ ಯಾಹಿ ಜನರನ್ನು ಪತ್ತೆ ಹಚ್ಚಿ, ೩೩ ಜನರನ್ನು ಕೊಲ್ಲಲಾಯಿತು. ೧೮೭೧ರಂದು ನಾಲ್ವರು ಕೌಬಾಯ್‌ಗಳು ಕಿಂಗ್ಸಲೇ ಗುಹೆಯಲ್ಲಿ ೩೦ ಜನ ಯಾಹಿಗಳನ್ನು ಗುಂಡಿಟ್ಟು ಸಾಯಿಸಿದರು. ಆಗಿನ ಕಾಲದಲ್ಲಿ ಯಾಹಿ ಮತ್ತು ಇತರ ಇಂಡಿಯನ್‌ರನ್ನು ನಿರ್ನಾಮ ಮಾಡುವುದೇ ಅಮೆರಿಕದ ಸೈನ್ಯದ ಅಂದಿನ ಆದ್ಯ ಕರ್ತವ್ಯ ಎನಿಸಿತ್ತು. ೧೮೦೦ರ ಸಮಯದಲ್ಲಿ ಕ್ಯಾಲಿಫೋರ್ನಿಯಾ ಸುತ್ತಮುತ್ತ ಸುಮಾರು ೩,೦೦,೦೦೦ ಜನ ಸ್ಥಳೀಯ ಇಂಡಿಯನ್ ಇದ್ದರು. ೧೯೦೦ರ ಸಮಯಕ್ಕೆ ಅವರಲ್ಲಿ ಬದುಕಿ ಉಳಿದದ್ದು ೨೦,೦೦೦ ಮಾತ್ರ. ಸ್ಥಳೀಯ ಇಂಡಿಯನ್ ಜನಾಂಗವನ್ನು ನಾಶಪಡಿಸಿ, ಆ ಜಾಗದ ಒಡೆತನವನ್ನು ಬಿಳಿಯರಿಗೆ ಕಲ್ಪಿಸಿಕೊಡುವ ಈ ಅಭಿಯಾನದಲ್ಲಿ ದೊಡ್ಡ ಯಶಸ್ಸು ದೊರಕಿತು.

ಫೋಟೋ ಕೃಪೆ : amazon

ಇವೆಲ್ಲಾ ದಾಳಿಯಿಂದ ತಪ್ಪಿಸಿಕೊಂಡು ಸಣ್ಣ ಸಂಖ್ಯೆಯ ಯಾಹಿ ಜನರು ಬದುಕಿ ಉಳಿದಿದ್ದರು. ೧೮೬೫ರ ತ್ರೀ ನೋಲ್ಸ್ ಹತ್ಯಾಕಾಂಡದಲ್ಲಿ ೪೦ ಜನ ಯಾಹಿ ಜನರು ಮೃತಪಟ್ಟಾಗ, ೩೩ ಜನ ಬದುಕುಳಿದಿದ್ದು, ಅವರೆಲ್ಲರೂ ಬೆಟ್ಟ ಗುಡ್ಡಗಳನ್ನು ಸೇರಿದರು. ಮುಂದಿನ ೪೪ ವರ್ಷಗಳ ಕಾಲ ಆ ತಂಡ ನಾಗರಿಕ (ಬಿಳಿ) ಜಗತ್ತಿನ ಕಣ್ತಪ್ಪಿಸಿ ಓಡಾಡುತ್ತಿತ್ತು. ಕ್ರಮೇಣ ಅವರಲ್ಲಿ ಹೆಚ್ಚಿನವರು ಸತ್ತು, ನಾಲ್ವರು ಮಾತ್ರ ಬದುಕಿ ಉಳಿದಿದ್ದು, ಅವರಲ್ಲಿ ಇಶಿಯೂ ಒಬ್ಬ. ಇದು `ಇಶಿ’ಯ ಕುಟುಂಬದ ರಕ್ತಸಿಕ್ತ ಕಣ್ಣೀರ ಕಥೆ.

೧೯೦೮ರಲ್ಲಿ ಬಿಳಿಯರ ಒಂದು ಸರ್ವೇ ತಂಡವು, ನಾಲ್ವರು `ಆದಿವಾಸಿ’ಗಳನ್ನು ಆಕಸ್ಮಿಕವಾಗಿ ಕಂಡಿತು. ಇವರೇ, ಇಶಿ, ಆತನ ಮಾವ, ಆತನ ತಂಗಿ ಮತ್ತು ತಾಯಿ. ಬಿಳಿಯರ ಸರ್ವೇ ತಂಡವನ್ನು ಕಂಡ ತಕ್ಷಣ, ಇಶಿ, ಮಾವ ಮತ್ತು ತಂಗಿ ತಪ್ಪಿಸಿಕೊಂಡು ಕಾಡುಪ್ರದೇಶ ಹೊಕ್ಕರು. ವಯಸ್ಸಾಗಿದ್ದ ತಾಯಿಯು ಹೊದಿಕೆಯೊಂದನ್ನು ಹೊದ್ದು ಅಡಗಿ ಕುಳಿತಳು. ಕೆಲವು ಸಮಯದ ನಂತರ ಇಶಿ ವಾಪಸಾದ. ಆದರೆ ಮಾವ ಮತ್ತು ತಂಗಿ ವಾಪಸಾಗಲೇ ಇಲ್ಲ. ಅವರು ಎಲ್ಲಿ ಹೋದರೋ ಇಂದಿಗೂ ತಿಳಿಯದು. ಕೆಲವೇ ದಿನಗಳಲ್ಲಿ ಇಶಿಯ ತಾಯಿಯು ಅನಾರೋಗ್ಯದಿಂದ ಸತ್ತುಹೋದಳು.
ಈಗ ಇಶಿ ಒಬ್ಬಂಟಿಯಾದ. ನಂತರದ ನಾಲ್ಕು ವರ್ಷ ಆತ ಕಾಡು ಮೇಡು ಅಲೆಯತೊಡಗಿದ. ಎಲ್ಲೆಲ್ಲಿ ಬಿಳಿ ಜನರು ಸೆಟಲ್ ಆಗಿದ್ದರೋ ಆ ಜಗತ್ತಿನಿಂದ ದೂರ ಉಳಿದ, ನಾಗರಿಕ ಜಗತ್ತಿನ ಕಣ್ತಪ್ಪಿಸಿಕೊಂಡು ಸುತ್ತಾಡಿದ. ಆದರೆ, ಆತನಿಗೆ ಆಹಾರ ಹುಡುಕುವುದೇ ಕಷ್ಟ ಎನಿಸತೊಡಗಿತು. ಆಗ ಅವನಿಗೆ ಸುಮಾರು ೫೦ ವರ್ಷ ವಯಸ್ಸು. ಕೊನೆಗೆ, ತನ್ನ ಕುಲದ ನಂಬಿಕೆಗಳಿಗೆ ಬದ್ಧನಾಗಿ ಉಳಿಯುವುದು ಇಶಿಗೆ ಕಷ್ಟವಾಯಿತು. ಏಕಾಂಗಿಯಾಗಿ ಕಾಡು ಪ್ರದೇಶದಲ್ಲಿ ಓಡಾಡುವುದು ದುಸ್ತರವಾಗಿ, ೨೯ ಆಗಸ್ಟ್ ೧೯೧೧ರಂದು ಒರೋವಿಲಿ ಪಟ್ಟಣದ ಹೊರವಲಯದಲ್ಲಿ ಸುಮ್ಮನೆ ಬಂದು ನಿಂತ. ಅಲ್ಲಿ ವಾಸವಿದ್ದ ಬಿಳಿ ಜನರ ಕಣ್ಣಿಗೆ ಬಿದ್ದ. ಪಟ್ಟಣದ ಷರೀಫ್ ಅವನನ್ನು ಬಂಧಿಸಿ, ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯಕ್ಕೆ ಹಸ್ತಾಂತರ ಮಾಡಿದ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರ ಮ್ಯೂಸಿಯಂನ ಉದ್ಯೋಗಿಯಾಗಿ ಪರಿವರ್ತನೆ ಹೊಂದಿದ ಇಶಿಯು, ಹೊರಜಗತ್ತಿನ ಕಣ್ಣಿನಲ್ಲಿ ಒಂದು `ಮ್ಯೂಸಿಯಂ ಪೀಸ್’ ಆಗಿದ್ದ ಎಂದರೆ ತಪ್ಪಾಗದು. ಆಫ್ರಿಕಾದ ಬುಡಕಟ್ಟು ಜನರನ್ನು ಜೂಗಳಲ್ಲಿ, ಮ್ಯೂಸಿಯಂಗಳಲ್ಲಿ ಬಂಧಿಸಿಟ್ಟು ಪ್ರದರ್ಶಿಸುವ ಯುರೋಪಿಯನ್ ಮತ್ತು ಅಮೆರಿಕನ್ ಚಾಳಿಯು ಸಾಕಷ್ಟು ಕುಖ್ಯಾತ. ಆದ್ದರಿಂದ, ಇಶಿಯನ್ನುನೋಡಲು, ಅಮೆರಿಕದ ಕೊನೆಯ `ಕಾಡು ಮನುಷ್ಯ’ನ ದರ್ಶನ ಮಾಡಲು ಅಮೆರಿಕದ ನಾಗರಿಕರು ಬರುತ್ತಿದ್ದರು! ಅದೇನೇ ಇದ್ದರೂ, ಅವನ ಜತೆ ಸ್ನೇಹ ಬೆಳೆಸಿದ ವಿಶ್ವವಿದ್ಯಾಲಯದ ಮಾನವಶಾಸ್ತ್ರಜ್ಞರು, ಯಾಹಿ ಬುಡಕಟ್ಟು ಜನರ ಸಂಸ್ಕೃತಿಯ ವಿವರಗಳನ್ನು ಕಲೆಹಾಕಿದರು. ತಮ್ಮವರು ಬಿಲ್ಲು ಬಾಣ ಮಾಡುವ ಕಲೆಯನ್ನು ಆತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಹೇಳಿಕೊಟ್ಟ. ಆದರೆ, ಅದಾಗಲೇ ಆ ಬುಡಕಟ್ಟು ಸಂಸ್ಕೃತಿ ಅವನತಿಯಲ್ಲಿತ್ತು. ಇಶಿಯು ತನ್ನ ಬಾಂಧವರೊಡನೆ ಕಾಡುಪ್ರದೇಶದಲ್ಲಿ ೪೪ ವರ್ಷ ಅಡಗಿ ಕುಳಿತಿದ್ದಾಗ, ಇದ್ದಬದ್ದ ಪದ್ಧತಿಗಳು ಬಹುಪಾಲು ಮರೆತುಹೋಗಿದ್ದವು.

ಫೋಟೋ ಕೃಪೆ : google

೧೯೧೫ರಲ್ಲಿ ಆತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಜತೆ ಮೂರು ತಿಂಗಳು ವಾಸಿಸಿದ್ದ. ಜೀವಮಾನವಿಡೀ ನಾಗರಿಕ ಜಗತ್ತಿನ ಸಂಪರ್ಕಕ್ಕೆ ಬಾರದೇ ಇದ್ದುದರಿಂದ, ಆತನಲ್ಲಿ ಸಾಮಾನ್ಯ ರೋಗಗಳಿಗೂ ಪ್ರತಿರೋಧ ಶಕ್ತಿ ಇರಲಿಲ್ಲ. ಆದ್ದರಿಂದ, ನಾಗರಿಕರೊಡನೆ ಒಡನಾಡಿದ ತಕ್ಷಣ ಅವನನ್ನು ನಾನಾ ರೀತಿಯ ಕಾಯಿಲೆಗಳು ಕಾಡಿದವು. ಪ್ರಾಧ್ಯಾಪಕರು ಚಿಕಿತ್ಸೆ ಕೊಡಿಸಿದರು. ಬಿಳಿ ಜನರ ಸಂಪರ್ಕಕ್ಕೆ ಬಂದು ನಾಲ್ಕು ವರ್ಷಗಳ ಕಾಲ ಬದುಕಿದ್ದ ಇಶಿಯು, ೨೫ ಮಾರ್ಚ್ ೧೯೧೬ರಂದು ಕ್ಷಯರೋಗದಿಂದ ನಿಧನವಾದ.

ಅಮೆರಿಕದ ಕೊನೆಯ `ಕಾಡು ಮನುಷ್ಯ’, ಇಶಿಯ ಕುರಿತು ಪುಸ್ತಕಗಳು ಬಂದಿವೆ, ಸಿನಿಮಾಗಳು ಆಗಿವೆ. ಕ್ಯಾಲಿಫೋರ್ನಿಯಾದ ಪ್ರದೇಶದಲ್ಲಿ ಮತ್ತು ಅಮೆರಿಕದ ಇತರ ಕಡೆ ಬಿಳಿಯ ಜನರು ಅಮೆರಿಕನ್
ಇಂಡಿಯನ್‌ರ ಮೇಲೆ ನಡೆಸಿದ ನಿರಂತರ ದಬ್ಬಾಳಿಕೆ, ಕೊಲೆ, ಕ್ರೌರ್ಯವನ್ನು ಈಚಿನ ದಿನಗಳಲ್ಲಿ ಗುರುತಿಸಲಾಗಿದ್ದು, ಅದನ್ನು ಜಿನೊಸೈಡ್ ಅಥವಾ ಹತ್ಯಾಕಾಂಡ ಎಂದು ಹೆಸರಿಸಲಾಗಿದೆ. ನಮ್ಮ ದೇಶದಲ್ಲಿ ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ನಂತರ, ಬ್ರಿಟಿಷ್ ಸರಕಾರವು ನೇರವಾಗಿ ಆಡಳಿತವನ್ನು ಕೈಗೆತ್ತಿಕೊಂಡು, ಸ್ವಾತಂತ್ರö್ಯ ಹೋರಾಟವನ್ನು ಹತ್ತಿಕ್ಕುತ್ತಿರುವ ಸಮಯದಲ್ಲೇ, ದೂರದ ಅಮೆರಿಕದಲ್ಲಿ ಬಿಳಿಯರ ಸೈನ್ಯವು ಸ್ಥಳೀಯ ಇಂಡಿಯನ್ ಜನಾಂಗವನ್ನು ಬಂದೂಕಿನಿಂದ ಬೇಟೆಯಾಡಿ, ಸಾಯಿಸುತ್ತಿತ್ತು.ಒಂದು ಜನಾಂಗವನ್ನು, ಸಂಸ್ಕೃತಿಯನ್ನು ನಾಶ ಮಾಡಬಹುದೇ ಎಂಬ ಪ್ರಶ್ನೆಗೆ ಯಾಹಿ ಬುಡಕಟ್ಟಿನ ಅವನತಿಯ ವಿವರ ಉತ್ತರವಾಗಬಹುದು. ನಿರಂತರವಾಗಿ ಬಿಳಿ ಜನರ `ಜಿನೋಸೈಡ್’ಗೆ ಗುರಿಯಾದ ಯಾಹಿ ಬುಡಕಟ್ಟು, ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ನಶಿಸಿ ಹೋಯಿತು. ಆ ಬುಡಕಟ್ಟಿನ ಕೊನೆಯ ವ್ಯಕ್ತಿ ಇಶಿಯು, ಸಮಸ್ತ ಅಮೆರಿಕನ್ ಇಂಡಿಯನ್ ಬುಡಕಟ್ಟು ಜನರ ಅವನತಿಯ ಪ್ರತೀಕವಾಗಿ ಕಾಣುತ್ತಾನೆ.

*****

ಟಿಪ್ಪಣಿ: ‘ಇಶಿ’ ಎಂಬಾತ ಕೊನೆಯ ರೆಡ್ ಇಂಡಿಯನ್ (ಗುಡ್ಡಗಾಡಿನಲ್ಲಿದ್ದ) ಎಂದು ಪ್ರಚಾರವಾಗಿದ್ದರೂ, ಇತರ ರೆಡ್ ಇಂಡಿಯನ್ ಜನಾಂಗದವರು ಅಲ್ಲಲ್ಲಿ ಇದ್ದು, ಕೊನೆಗೆ ಮುಖ್ಯವಾಹಿನಿಯಲ್ಲಿ ಸೇರಿಹೋದರು. ಇಶಿ ಕುರಿತು ಪುಸ್ತಕ ಹೊರಬಂದು, ಸಿನಿಮಾ ತಯಾರಾಗಿದ್ದರಿಂದ, ಆತ ಕೊನೆಯ ರೆಡ್ ಇಂಡಿಯನ್ ಎಂದು ಮಾಧ್ಯಮಗಳಲ್ಲಿ ಪ್ರಚುರಗೊಂಡ. 1916ರಷ್ಟು ಈಚೆಗೆ ಇಂತಹ ವ್ಯಕ್ತಿಯೊಬ್ಬ ಆಧುನಿಕ ಅಮೆರಿಕದಲ್ಲಿದ್ದ ಎಂಬುದೇ ಇಂದು ವಿಸ್ಮಯಕಾರಿಯಾಗಿ ಕಾಣುತ್ತದೆ.


  • ಶಶಿಧರ ಹಾಲಾಡಿ  (ಖ್ಯಾತ ಕಾದಂಬರಿಕಾರರು, ಕತೆಗಾರರು, ಪತ್ರಕರ್ತರು)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW