ಎತ್ತರದ ಬಯಲು ಪ್ರದೇಶದಲ್ಲಿ ಉಕ್ಕುವ ನೀರು ವಿಸ್ಮಯವನ್ನು ಹುಟ್ಟಿಸುತ್ತದೆ. ಲೇಖಕ ನೆಂಪೆ ದೇವರಾಜ್ ಅವರ ತೋಟದ ಮೇಲಿನ ಧರೆಯ ಒಳಗಿಂದ ದಾರಿ ಮಾಡಿಕೊಂಡು ನೀರು ಉಕ್ಕುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ,
ಕಾಲು ಹಾಕಿದಲ್ಲೆಲ್ಲ ನೀರೋ ನೀರು. ಬೀಳಬಾರದ ಕಡೆಗಳಲ್ಲೆಲ್ಲ ನೀರೋ ನೀರು. ಆಕಾಶ ಭೂಮಿ ಒಂದಾಗಿ ಮೋಡಗಳು ಕವುಚಿಕೊಂಡಿವೆ.ಕತ್ತಲೋ ಕತ್ತಲು. ಬಾವಿಗಳೂ ನೆಲವೂ ಒಂದಾಗಿವೆ. ಕೆಲವು ತೆರೆದ ಬಾವಿಗಳಿಂದ ನೀರು ಉಕ್ಕಿ ಹರಿಯುತಿದೆ.ಆಗಸ್ಟ್ ಕೊನೆಯ ದಿನಗಳಲ್ಲಿ ಕಾಣಬೇಕಾದ್ದನ್ನೆಲ್ಲ ಈ ಮಳೆ ಜುಲೈ ಮೊದಲ ವಾರದಲ್ಲೇ ಮುಗಿಸಿದೆ.(ಈ ಆರೇಳು ವರುಷಗಳಲ್ಲಿ ಆಗಸ್ಟ್ ಬಂದರೂ ಬಾವಿಗಳು ತುಂಬಿರಲಿಲ್ಲ) ಕೈಕಾಲುಗಳು ಮೆತ್ತಗಾಗಿ ಕಾಲಿಗೆ ನಾಚಿಕೆ ಮುಳ್ಳು ಹೊಕ್ಕರೂ ಯಮ ಯಾತನೆಯಾಗುವಷ್ಟು ಅಂಗಾಲು ಮೆತ್ತಗಾಗಿವೆ.ನಿರ್ಲಕ್ಷ್ಯಕ್ಕೊಳಗಾಗಾಬೇಕಾಗಿದ್ದ ಮುಳ್ಳುಗಳು ಸರಾಗವಾಗಿ ಕಾಲೊಳಗೆ ಹೊಕ್ಕು ತಮ್ಮ ಕೆಲಸ ಮುಗಿಸುತ್ತಿವೆ.
ನೀರ್ಗುಳ್ಳೆಗಳ ಕಾಲ ಮುಗಿದು ಬೆರಳುಗಳು ಬೆಳ್ಳಗಾಗಿ ಮೇಲ್ಪದರವನ್ನು ಕಳೆದುಕೊಂಡಿವೆ. ಇಂತಹ ಸಂದರ್ಭದಲ್ಲೆ ಈ ಜಲ ಒಡೆಯುವುದು. ಮೊನ್ನೆ ಗೆಳೆಯ ಶಿವಾನಂದ ಜಲ ಒಡೆದಿರುವ ಫೋಟೋ ಬೇಕು ಕಳುಹಿಸುತ್ತೀಯ ಎಂದಾಗಲೆ ಜಲ ಒಡೆವ ಬಗ್ಗೆ ಯೋಚಿಸ ಹತ್ತಿದೆ. ಜುಲೈ ಮಧ್ಯದಲ್ಲೆ ಜಲ ಒಡೆದು ನೀರು ಬುದ ಬುದನೆ ದುಮ್ಮಿಕ್ಕುವ ಪರಿಗಳು ಎಲ್ಲೆಡೆ ದೊರೆಯುತ್ತಿವೆ. ನೀರಿಂಗಿಸುವ ಹೊಸ ಆಲೋಚನೆಗಳಿಗೆ ಈ ವರ್ಷದ ಮಳೆ ಕಿಲುಬು ಕಾಸಿನ ಬೆಲೆಯನ್ನೂ ನೀಡದೆ ಧೋ ಎನ್ನತೊಡಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ಜೂನ್ ನಲ್ಲಿ ಬಂದ ಮಳೆಯಿಂದಲೆ ಪುಳಕಿತರಾಗಿ ಮಳೆ ಸವಿಯಲು ಆಗುಂಬೆ-ಹುಲಿಕಲ್ ನಂತಹ ದಟ್ಟಾರಣ್ಯದಲ್ಲಿ ನಿಂತು ಮನತುಂಬಿಸಿಕೊಂಡು ಬಂದವರೀಗ ನಿರಂತರ ಮಳೆಯ ಆರ್ಭಟ ನೋಡಿ ಭಯಂಕರವಾಗಿ ರೇಜಿಗೆ ಬಿದ್ದು ಶಾಪ ಹಾಕತೊಡಗಿದ್ದಾರೆ.
‘ಹಡ್ಡೆಯ ಬದಿಗೆ ಹೇಲು ಉಚ್ಚೆಗೆ ಹೋಗಲೂ ಬಿಡುತ್ತಿಲ್ಲ’ ಎಂಬ ಹಳೆಯ ಕಾಲದವರ ಮಳೆಗಾಲದ ಘೋಷಣೆಗಳು ಮತ್ತೆ ಮರು ಹುಟ್ಟು ಪಡೆಯತೊಡಗಿವೆ.ಒಗೆದು ಹಾಕಿದ ಬಟ್ಟೆಗಳು ತಿಂಗಳಾದರೂ ಒಣಗದೆ ‘ಚಿಬ್ಬಿ’ ಹತ್ತ ತೊಡಗಿವೆ.’ಚಿಬ್ಬಿ’ ಎಂಬ ಪದ ಮರೆತೇ ಹೋಗಿತ್ತು.ಈಗ ಚಾಲ್ತಿಗೆ ಬರತೊಡಗಿದೆ. ಕಾಚಾಗಳಂತೂ ಒಣಗಲು ಹತ್ತಾರು ದಿನಗಳನ್ನೆ ತೆಗೆದುಕೊಳ್ಳತೊಡಗಿವೆ. ಮುರದ ಒಲೆ, ಹುರುಳಿ ಒಲೆ, ಬಚ್ಚಲು ಒಲೆಗಳು ಮಾಯವಾಗಿರುವ ಮಲೆನಾಡಲ್ಲಿ ಕಟ್ಟಿಗೆ ಬೆಂಕಿ ತಾಗಿಸಿಕೊಳ್ಳದ ಅಂಡರ್ವೇರ್ಗಳು ಭಯಂಕರ ಯಾತನೆಗೊಳಗಾಗಿವೆ. ಮೊದಲಾದರೆ ಚಡ್ಡಿ ಕಾಚಾಗಳು ಒಣಗದಿದ್ದರೂ ಶಕ್ತಿ ಮೀರಿ ಹಿಂಡಲ್ಪಟ್ಟ ಚಡ್ಡಿಗಳನ್ನು ಕಡುಬಿನ ಸರಗೋಲಿನ ಮೇಲೋ, ಕಂಬಳಿ ಒಣಗಿಸುವ ಬಲುಗಿನ ಮೇಲೋ ಇಟ್ಟು ಗರಿಗುಟ್ಟಿಸುತ್ತಿದ್ದೆವು. ಆದರೀಗ ಅಂತಹ ಒಲೆಗಳೇ ಮಾಯವಾಗಿವೆ.ಗ್ಯಾಸಿನ ಸಿಲಿಂಡರುಗಳು ತಮ್ಮ ತೀಕ್ಷ್ಣ ಬೆಂಕಿಯನ್ನು ಹೊರಗೆಲ್ಲೂ ಬಿಟ್ಟಕೊಡಲಾರದಷ್ಟು ಸ್ವಾರ್ಥೀಗಳಾಗಿರುವುದರಿಂದ ರಣಚಂಡಿಯಾದ ಕೈಕಾಲುಗಳಿಗೇ ಬೆಂಕಿ ನೀಡಲಾರವು. ಇನ್ನು ತಂಡಿ ಯೆದ್ದ ವಸ್ತ್ರಗಳಿಗೆ ತಮ್ಮ ಬೆಂಕಿ ನೀಡಬಲ್ಲವೆ? ಈ ವರ್ಷದ ಮಲೆನಾಡ ಮಳೆ ಹಳೆಯ ನೆನಪುಗಳನ್ನು ತರುತ್ತಾ ಹೊಟ್ಟೆಯುರಿಸುವಷ್ಟರ ಮಟ್ಟಿಗೆ ಹೊಯ್ದು ಹೈರಾಣಾಗಿಸುತ್ತಿದೆ.
ಈಗಾಗಲೆ ನೂರಿಂಚು ದಾಟಿರುವ ಮಳೆಯಲ್ಲಿ ಜಲಧಾರೆಯು ಉಕ್ಕುವ ಪರಿಗೆ ರಸ್ತೆಗಳೂ ಹೊರತಲ್ಲ.’ಜಲ ಒಡೆದರೆ ಮಾತ್ರ ಮಳೆಗಾಲ’ ಎಂದು ಹಿರಿಯರು ಬಲವಾಗಿ ನಂಬಿದ್ದ ಕಾಲಕ್ಕೆ ಮತ್ತೆ ಮರು ಹುಟ್ಟು ಸಿಕ್ಕಿದೆ. ಎತ್ತರದ ಬಯಲು ಪ್ರದೇಶದಲ್ಲಿ ಬುದ ಬುದನೆ ಉಕ್ಕುವ ನೀರು ವಿಸ್ಮಯ ಸೃಷ್ಟಿಸುತ್ತಿದೆ. ಮಳೆ ನಿಂತು ಹದಿನೈದು ಇಪ್ಪತ್ತು ದಿನಗಳವರೆಗೂ ತನ್ನ ಹರಿವನ್ನು ಬಿಟ್ಟುಕೊಡಲಾರದು. ಅಲ್ಲಲ್ಲಿ ಸಣ್ಣ ಸಣ್ಣ ಕಾಲುವೆಯಾಗಿ ತನ್ನ ದಾರಿಯನ್ನು ಕಂಡುಕೊಳ್ಳುತ್ತಾ ಹೋಗುವುದನ್ನು ಬಿಸಿಲಲ್ಲೂ ಫಳ ಫಳ ಹೊಳೆಯುವುದನ್ನು ನೋಡಬಹುದು. ಜಲ ಒಡೆಯಿತೆಂದರೆ ಮಾತ್ರ ಸಮೃದ್ದಿ. ಆದರೆ ಅಡಿಕೆ ತೋಟದಲ್ಲುಂಟಾಗುತ್ತಿರುವ ಕೊಳೆಯ ರೋಗಕ್ಕೂ ಜಲ ಒಡೆಯುವ ಪರಿಗೂ ನಿಕಟ ಬಾಂದವ್ಯವಿದೆ.
ನಮ್ಮ ತೋಟದ ಮೇಲಿನ ಧರೆಯ ಒಳಗಿಂದ ದಾರಿ ಮಾಡಿಕೊಂಡು ನೀರು ಉಕ್ಕುತ್ತಿರುವ ಬಗೆಯ ಫೋಟೊವೊಂದನ್ನು ಹಾಕಿದ್ದೇನೆ.
- ನೆಂಪೆ ದೇವರಾಜ್ (ಲೇಖಕರು, ಪತ್ರಕರ್ತರು), ತೀರ್ಥಹಳ್ಳಿ