‘ಎಲ್ಲೆಗಳ ದಾಟಿದವಳು’ ಕೃತಿ ಪರಿಚಯ : ಆಶ್ರಿತ ಕಿರಣ್ (ಆಕೆ)

ಶೃತಿ ಬಿ.ಆರ್ ಅವರ ‘ಎಲ್ಲೆಗಳ ದಾಟಿದವಳು’ ಸಣ್ಣಕಥೆಗಳು ಮನಸ್ಸಿನಾಳವನ್ನು ಬೇಗ ತಲುಪುತ್ತದೆ. ಕತೆ ಓದಲು ಪ್ರಾರಂಭಿಸಿದರೆ ಕಾದಂಬರಿ ಓದಿದಂತೆ ಕಥಾಸಂಕಲನ ಓದಿ ಮುಗಿಸಿದರೆ ಪುಸ್ತಕ ಗೆದ್ದಂತೆ. ಸಣ್ಣ ಕಥೆಗಳ ಮೂಲಕ ಆಳವಾದ ವಿಚಾರವನ್ನು ತೆರೆದೆಡುವ ಕಥಾಸಂಕಲನಗಳು ಜನರನ್ನು ಬೇಗ ಆಕರ್ಷಿಸುತ್ತದೆ. ಈ ಕೃತಿಯ ಕುರಿತು ಆಶ್ರಿತ ಕಿರಣ್ (ಆಕೆ) ಅವರು ತಮ್ಮ ಅಭಿಪ್ರಾಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕದ ಹೆಸರು : ಎಲ್ಲೆಗಳ ದಾಟಿದವಳು
ಲೇಖಕರು : ಶೃತಿ ಬಿ.ಆರ್.
ಪ್ರಕಾಶಕರು. : ಜೇರುಂಡೆ ಪುಸ್ತಕ
ಪುಟಗಳ ಸಂಖ್ಯೆ : 88
ಪುಸ್ತಕದ ಬೆಲೆ. : 110/-

ಲೇಖಕರ ಪರಿಚಯ :

ಮೂಲತಃ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರಾದ ಶ್ರುತಿ ಬಿ. ಆರ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕೆ.ಎ.ಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಹಲವಾರು ಲೇಖನಗಳು, ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ “ಜೀರೋ ಬ್ಯಾಲೆನ್ಸ್” ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಡಿಸಿ ಅನಂತಸ್ವಾಮಿ ದತ್ತಿ ಪ್ರಶಸ್ತಿಯ ಜೊತೆಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ದೊರೆತಿದೆ..ಇದರ ಜೊತೆಗೆ ಇನ್ನು ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರ ಕೈ ಸೇರಿದೆ. “ಎಲ್ಲೆಗಳ ದಾಟಿದವಳು” ಇವರ ಮೊದಲ ಕಥಾಸಂಕಲನವಾಗಿದೆ.

ಈ ಕಥಾಸಂಕಲನದಲ್ಲಿ ಒಟ್ಟು 9 ಕಥೆಗಳಿವೆ. ಇಲ್ಲಿನ ಕಥೆಗಳು ಲೇಖಿಕಯ ಕಲ್ಪನೆಯಲ್ಲಿ ಮೂಡಿ ನಮ್ಮನ್ನು ಕಲ್ಪನೆಗೆ ತಳ್ಳದೆ ಆಲೋಚನೆಗೆ ನೂಕುತ್ತದೆ. ಕಥೆಯ ಎಳೆ ಸಣ್ಣದೆನಿಸಿದರು ಕತೆಯ ಮೂಲಕ ಸಮಾಜಕ್ಕೆ ಸಂದೇಶಗಳಿವೆ. ಎಚ್ಚೆತ್ತುಕೊಳ್ಳುವ ವಿಚಾರಗಳಿವೆ. ತಿದ್ದಿಕೊಳ್ಳಬೇಕಾದ ಸಂಗತಿಗಳಿವೆ.

  • ಬಡ್ಡಿ ವ್ಯವಹಾರದಲ್ಲಿ ಸೋತು ಕೈ ಸುಟ್ಟುಕೊಂಡರೂ ತಿದ್ದಿಕೊಳ್ಳದ ಮನಸ್ಥಿತಿಗಳು ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿದೆ. ದಿನನಿತ್ಯ ಈ ವ್ಯವಹಾರದ ಬಗ್ಗೆ ಕೇಳುತ್ತೇವೆ. ಇದೇ ವಿಚಾರವನ್ನು ಮುಖ್ಯ ವಸ್ತುವನ್ನಾಗಿಸಿಕೊಂಡ ಕಥೆಯೇ ” ದೇವರು ಬಂತು.” ಕಥೆಯ ಮುಖ್ಯ ಪಾತ್ರವಾದ ಗೀತಾ ಅನುಭವಿಸುವ ಮಾನಸಿಕ ಹಿಂಸೆ ಹಾಗು ಅವಳು ಸಿಲುಕುವ ಮೂಡನಂಬಿಕೆಯ ಜಾಲದ ಬಗ್ಗೆ ಇಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

  • ಮನೆಯಲ್ಲಿ ಒಂಟಿಯಾಗಿದ್ದ ಸತ್ಯನಾರಾಯಣರು ಒಂಟಿತನ ಮರೆಯಲು ಮನೆಯಿಂದ ಹೊರಗೆ ಬಂದು ಓಡಾಡಿಕೊಂಡು ಕಾಲ ಕಳೆಯುತ್ತಿರುತ್ತಾರೆ. ಮಕ್ಕಳು ದೂರವಿದ್ದರೂ ಜೀವನದಲ್ಲಿ ಸಂತೋಷವಾಗಿರುತ್ತಾರೆ. ಕರೋನಾ ಎನ್ನುವ ಮಹಾಮಾರಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಉಳಿಯುವಂತೆ ಮಾಡುತ್ತದೆ. ಲಾಕ್ ಡೌನ್ ಸಮಯದಲ್ಲಿ ಮನೆಯ ಬೀದಿಯಲ್ಲಿ ನಾಯಿಗಳಿಗೆ ಊಟ ಹಾಕಲು ಬರುತ್ತಿದ್ದ ದ್ಯಾವಮ್ಮನನ್ನು ಬಾರದೆ ಇರುವಂತೆ ತಡೆಯಲು ವಾಗ್ವಾದ ಮಾಡಿ ಕೊನೆಗೆ ದ್ಯಾವಮ್ಮನ ನಾನ್ ವೆಜ್ ಬಿರಿಯಾನಿ ತಂಟೆ ಬೇಡವೆಂದು ಸುಮ್ಮನಾಗುತ್ತಾರೆ. ಸದಾ ತಕರಾರು ಮಾಡುವ ವ್ಯಕ್ತಿ ಮನೆಯಿಂದ ಹೊರಗೆ ಬಾರದೆ ಇದ್ದಾಗ ಅವನನ್ನು ಮಾತಾಡಿಸಲು ದ್ಯಾವಮ್ಮ ನಿರ್ಧರಿಸುತ್ತಾಳೆ. ಮಾಂಸಾಹಾರಿ ದ್ಯಾವಮ್ಮನನ್ನು ಸಸ್ಯಹಾರಿ ಸತ್ಯನಾರಾಯಣ ಮಾತನಾಡಿಸುತ್ತಾರೆಯೇ ಎನ್ನುವುದೇ “ದ್ಯಾವಮ್ಮನೂ… ಸತ್ಯನಾರಾಯಣನೂ… ” ಎನ್ನುವ ಕಥೆಯ ಎಳೆ. ಇಲ್ಲಿ ಮನುಷ್ಯತ್ವದ ಬೆಲೆ ,‌ ಒಂಟಿತನದ ಪರಾದಟ ಕರೋನಾ ಕಾಲದ ಜೀವನವನ್ನು ಚೆನ್ನಾಗಿ ನಿರೂಪಿಸಿದ್ದಾರೆ.
  • “ಎಲ್ಲೆಗಳ ದಾಟಿದವಳು” ಎನ್ನುವ ಕಥೆಯ ವ್ಯಾಪ್ತಿ ವಿಶಾಲವಾದದು. ಅಜ್ಜಿ ಹಾಗು ಮೊಮ್ಮಗಳ ಸಂಭಾಷೆಯ ರೂಪದಲ್ಲಿರುವ ಈ ಕಥೆಯಲ್ಲಿ ಅಜ್ಜಿಯು ತನ್ನ ಅಜ್ಜಿಗೆ ಸಂಬಂಧಿಸಿದ ವಿಚಾರವನ್ನು ತಿಳಿಸುತ್ತಾ ತನ್ನ ದೊಡ್ಡಮ್ಮನ ಬದುಕನ್ನು ತೆರೆದಿಡುತ್ತಾಳೆ. ‌ ಇಲ್ಲಿ ಪ್ರೀತಿ, ದ್ವೇಷ, ವಿರೋಧ,ತುಂಟತನ ಎಲ್ಲವೂ ಇದೆ. ಸಂಕಲನದಲ್ಲಿ ಬಹಳಾ ವಿಭಿನ್ನವಾದ ಕಥೆ ಇದು. ” ನಾನು ಬೂಬಮ್ಮ ಆಗಿದ್ದೀನಿ. ಶಿವ ತೋರ್ಸಿದ ದಾರಿಲ್ಲೇ ನೆಡೆದಿದಿನಿ” ಎನ್ನುವ ದೊಡ್ಡಮ್ಮನ ವಾಕ್ಯವನ್ನು ಅಜ್ಜಿ ನೆನಪಿಸಿಕೊಂಡು ಕಂಬನಿ ಹರಿಸುತ್ತಾಳೆ. ಇದರ ಹಿಂದಿನ ಕಥೆ ಕುತೂಹಲದ ಜೊತೆಗೆ ಯೋಚನೆಗೆ ನೂಕುತ್ತದೆ. ಕಥೆಯ ಸಾರ, ನಿರೂಪಣೆ ಎರಡು ಸೊಗಸಾಗಿ ಮೂಡಿದೆ.
  • “ಅವಳು ಮತ್ತು ಹದಿನೈದು ಕಣ್ಣುಗಳು” ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಬಂದು ಸೇರಿದ ಗಂಡ ಹೆಂಡತಿ ಎರಡು ಮಕ್ಕಳ ಸುತ್ತ ಸುತ್ತುವ ಕತೆ. ಅಸಹಾಯಕತೆ, ಕಾಡುವ ಅಸುರಕ್ಷತೆ ನೆಮ್ಮದಿಯ ಜೀವನ ನಡೆಸಲು ತೊಡಕಾಗಿ ನಲುಗುವ ಹೆಣ್ಣೊಬ್ಬಳ ಮನದ ವ್ಯಥೆಯನ್ನು ಇಲ್ಲಿ ಕಾಣಬಹುದು. ವರುಷ ಮೊವತ್ತಾದರು ಮೈನೆರೆಯದ ಹೆಣ್ಣೊಬ್ಬಳು ಮನೆಯ ಒಳಗೆ ಹಾಗು ಹೊರಗೆ ಯಾವ ರೀತಿಯ ನೋವು ಅವಮಾನವನ್ನು ಅನುಭವಿಸುತ್ತಾಳೆ ? ಕೊನೆಗೆ ಅವಳ ಜೀವನ ಏನಾಗುತ್ತದೆ ಎನ್ನುವುದನ್ನು ಬಹಳಾ ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿರುವ ಕಥೆ “ಕೆಂಪಾದವೋ ಎಲ್ಲಾ…ಕೆಂಪಾದವೋ “.
  • “ಧಾರೆ” ಎನ್ನುವ ಕತೆಯಲ್ಲಿ ಸಂಸಾರಕ್ಕಾಗಿ ದುಡಿಯುವ ಸುನಂದಮ್ಮ ತನ್ನ ಬೇಜವಾಬ್ದಾರಿ ಗಂಡನ ವರ್ತನೆಯಿಂದ ನೊಂದು ಹೋಗಿರುತ್ತಾಳೆ. ಮಕ್ಕಳನ್ನು ಅವರ ಕಾಲ ಮೇಲೆ ನಿಲ್ಲುವಂತೆ ಮಾಡಲು ಶ್ರಮಪಟ್ಟಿರುತ್ತಾಳೆ. ಮಕ್ಕಳ ಮದುವೆಗೂ ಕೂಡ ಗಂಡನನ್ನು ಕಾಯದೆ ಅಣ್ಣ ಅತ್ತಿಗೆಯ ಕೈಯಿಂದ ಧಾರೆ ಎರೆಸಿರುತ್ತಾಳೆ. ಬದುಕಿನ ದಾರಿ ಸುಖವಾಗಿದೆ ಎಂದು ಅನಿಸುವ ವೇಳೆಗೆ ಮೊಮ್ಮಗಳ ಮದುವೆಗೆ ವರನ ಆಗಮನವಾಗುತ್ತದೆ. ವರನ ಮನೆಯವರು ಸುನಾಂದ ಅವರ ಪತಿಯೇ ಮದುವೆಯ ಉಸ್ತುವಾರಿ ವಯಿಸಬೇಕು ಎಂದಾಗ ನೊಂದುಕೊಳ್ಳುತ್ತಾಳೆ. ಒಪ್ಪಿಕೊಳ್ಳಲು ಅವಳ ಮನ ಹಿಂಜರಿಯುತ್ತದೆ. ಮುಂದೇನು ಎನ್ನುವುದು ಓದಿದರೆ ಚೆನ್ನ.

ಮುಖ್ಯ ಅಂಶಗಳು

  • ಕಥೆಗಳು ಸರಳವಾಗಿ ಅರ್ಥವಾಗುವಂತಿದೆ.
  • ಪಾತ್ರಗಳ ಪೋಷಣೆ ಹಾಗು ಸಂಭಾಷಣೆ ಸೊಗಸಾಗಿ ಮೂಡಿಬಂದಿದೆ
  • ವಿಷಯವನ್ನು ಎಲ್ಲೂ ಎಳೆದಾಡದೆ ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಲಾಗಿದೆ.

  • ಆಶ್ರಿತ ಕಿರಣ್ (ಆಕೆ)

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW