87 ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ನಾನು ವೇದಿಕೆ ಹತ್ತಿದಾಗ ಮುಂದಿನ ಕಾರ್ಯಕ್ರಮದ ಸನ್ಮಾನಿತರಾಗಲೇ ಆಗಮಿಸಿದ್ದರು. ಮೊದಲು ನಿಗದಿಯಾದ 3 ನಿಮಿಷಗಳು ಕಡಿತವಾಗಿ ಒಂದು ನಿಮಿಷ ನಂತರ ಒಂದು ಪ್ಯಾರಾಕ್ಕೂ ಇಳಿಯಿತು. ಲಕ್ಷಾಂತರ ಜನ ಬರುವ ಇಂಥ ಕಡೆ, ನೂರಾರು ಗಣ್ಯಾತಿಗಣ್ಯರು ಬರುವ ಇಂಥ ಕಡೆ, ಸಾವಿರಾರು ಕಾರ್ಯಕರ್ತರು ದುಡಿಯುವ ಇಂಥ ಸಮಾರಂಭಗಳಲ್ಲಿ ಅಲ್ಲಲ್ಲಿ ಲೋಪಗಳು ಸಹಜ. ನೂತನ ದೋಶೆಟ್ಟಿ ಅವರ ಅನುಭವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
87 ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ 8 ದಿನಗಳ ಮೊದಲು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕರೆ ಮಾಡಿದ ಅಲ್ಲಿನ ಸಿಬ್ಬಂದಿ ,” ನೀವು ಮಹಿಳಾ ವಿಶೇಷ ಕವಿಗೋಷ್ಠಿಯಲ್ಲಿ ದಿನಾಂಕ 20ರಂದು ಪ್ರಧಾನ ವೇದಿಕೆಯಲ್ಲಿ ಇದ್ದೀರಿ” ಬನ್ನಿ ಎಂದರು. ಕಛೇರಿಗೆ ಗೌರವಯುತವಾಗಿ ಆಮಂತ್ರಣವನ್ನು ತಲುಪಿಸಿದರು.
ಶುಕ್ರವಾರ, 20ರಂದು ರೈಲಿನಲ್ಲಿ ಅದೇ ವೇದಿಕೆಯಲ್ಲಿ ಕವಿತಾ ವಾಚನಕ್ಕೆ ಬಂದಿದ್ದ ಲಲಿತಾ ಹೊಸಪ್ಯಾಟಿಯವರು ಜತೆಯಾದದ್ದು ದಾರಿಯ ಖುಷಿಗೆ ಕಾರಣವಾಯ್ತು. ಸಮ್ಮೇಳನದ ಜಾಗಕ್ಕೆ ತಲುಪುವುದು ಅಂದು ಅಷ್ಟು ಸುಲಭವಾಗಿರಲಿಲ್ಲ. ಸುಮಾರು ಮುಕ್ಕಾಲು ಕಿ. ಮೀ. ದೂರದಲ್ಲಿ ಆಟೋದಿಂದ ಇಳಿದು ಜನಜಂಗುಳಿಯ ನಡುವೆ, ನೆತ್ತಿಯ ಸುಡುಬಿಸಿಲಲ್ಲಿ ನಾವು ಹೆಜ್ಜೆ ಹಾಕಿದೆವು. ಸಮಾನಾಂತರ ವೇದಿಕೆಯ ಸಮೀಪ ಬಂದಾಗ ಕಾಲು ಹಾಕಲು ಜಾಗವಿರದಷ್ಟು ಜನರನ್ನು ಅಲ್ಲಿಂದ ಕಣ್ಣು ಹಾಯುವವರೆಗೂ ಕಂಡು ಅವರನ್ನು ಸರಿಸಿಕೊಂಡು ವೇದಿಕೆಯನ್ನು ತಲುಪುವುದಾದರು ಹೇಗೆ ಎಂದು ದಿಗಿಲಾದದ್ದು ನಿಜ. ಪಕ್ಕದ ಸಾಲು ಮಳಿಗೆಗಳಲ್ಲಿ ನೊಂದಾಯಿತರು ಬ್ಯಾಗ್ ಪಡೆಯಲು ಕಿಕ್ಕಿರಿದು ನೆರೆದಿದ್ದರೆ ನಾವು ವೇದಿಕೆ ತಲುಪುವ ಪ್ರಯತ್ನದಲ್ಲಿ ಮುಂದುವರೆದೆವು. ಅಂತೂ ತಲುಪಿದಾಗ ಸಣ್ಣ ಯುದ್ಧವನ್ನು ಗೆದ್ದ ಹಾಗಾಗಿತ್ತು.
ಪ್ರಧಾನ ವೇದಿಕೆಯ ಹಿಂಭಾಗ ಸೊಗಸಾದ ಊಟದ ವ್ಯವಸ್ಥೆ ಆಮಂತ್ರಿತರಿಗೆ. ಅನೇಕ ಹಿರಿ – ಕಿರಿಯ ಸ್ನೇಹಿತರು, ಆಹ್ವಾನಿತ ಹೊರನಾಡ ಕನ್ನಡಿಗರು, ಆಹ್ವಾನಿತ ಗಣ್ಯರನ್ನು ಇಲ್ಲಿ ಭೇಟಿಯಾಗಲು ಸಾಧ್ಯವಾಯಿತು.

ಫೋಟೋ ಕೃಪೆ : google
ಬೆಳಗಿನ ಕಾರ್ಯಕ್ರಮಗಳು ಮುಗಿಯುವುದು ತಡವಾದಂತೆ ಗೋಷ್ಠಿಗಳ ಸಮಯ ಮುಂದುವರೆಯುತ್ತಾ ಹೋಗಿ 4.30 ಕೆ ನಿಗದಿಯಾಗಿದ್ದ ನಮ್ಮ ಗೋಷ್ಠಿ 6.45ಕ್ಕ ಆರಂಭವಾಯಿತು. ಅದರ ಮೊದಲು ಮಂಡ್ಯ ಜಿಲ್ಲೆಗೆ ಕೊಡುಗೆ ನೀಡಿದ ಮಹನೀಯರ ಕುರಿತು ಚಿನ್ನಸ್ವಾಮಿ ಸೋಸಲೆ, ಗಜಾನನ ಶರ್ಮ ಸೊಗಸಾಗಿ ಮಾತಾಡಿದರು. ನಂತರದ ದಿವ್ಯಾಂಗ ದೃಷ್ಠಿ ಚೇತನರ ಕವಿಗೋಷ್ಠಿಯಲ್ಲಿ ಮನವನ್ನು ತಟ್ಟುವ ಅನೇಕ ವಿಚಾರಗಳು ಕವಿತೆಗಳಲ್ಲಿ ಪ್ರಕಟವಾದವು.
ನಾವು ವೇದಿಕೆ ಹತ್ತುವಾಗ ಮುಂದಿನ ಕಾರ್ಯಕ್ರಮದ ಸನ್ಮಾನಿತರಾಗಲೇ ಆಗಮಿಸಿದ್ದರು. ಆ ಕಾರಣದಿಂದ ವೇದಿಕೆಯ ಮೇಲೆ ಆಸೀನರಾದ ಸುತ್ತೂರು ಶ್ರೀಗಳು, ಗದಗದ ಶ್ರೀಗಳ ಜೊತೆ ಕುಳಿತು ನಾವು ಕವಿತೆ ಓದಿದೆವು. ಮೊದಲು ನಿಗದಿಯಾದ 3 ನಿಮಿಷಗಳು ಕಡಿತವಾಗಿ ಒಂದು ನಿಮಿಷ ನಂತರ ಒಂದು ಪ್ಯಾರಾಕ್ಕೂ ಇಳಿಯಿತು. ಇದು ಕವಿಗೋಷ್ಠಿಗಳಲ್ಲಿ ಹೊಸದೇನಲ್ಲ. ಕವಿತೆಗಳಿಗೆ ಕತ್ತರಿ ಹಾಕುವಷ್ಟು ಸುಲಭವಾಗಿ ಬೇರೆಯಾದಕ್ಕೆ ಹಾಕುವುದು ಕಷ್ಟ. ಹಾಗಾಗಿ ಇಲ್ಲಿ ಕತೆಗಳನ್ನು ಬಹುಶಃ ಸೇರಿಸುವುದಿಲ್ಲ. ಲಾವಣ್ಯಪ್ರಭ ಹಾಗೂ ಸವಿತಾ ಮಾತುಗಳ ಮುನ್ನುಡಿ, ಬೆನ್ನುಡಿಗಳು ಚೆನ್ನಾಗಿದ್ದವು. ನಂತರ ಸನ್ಮಾನ ಕಾರ್ಯಕ್ರಮ. ಇದಕ್ಕೆ ಆಹ್ವಾನಿತರಾಗಿ ಬಂದಿದ್ದ ಪರಿಚಿತರಾದ ಡಾ.ಜನಾರ್ಧನ ಭಟ್ಟರು ಭೇಟಿಯಾದರು.
ತದನಂತರದ ರಾಜೇಶ್ ಕೃಷ್ಣನ್ ಹಾಗೂ ಸಾಧು ಕೋಕಿಲ ಅವರ ಗಾಯನ ಗೋಷ್ಠಿಗೆ ಸರ್ಕಾರಿ ವಾಹನಗಳಲ್ಲಿ ಪರಿವಾರಗಳು ತುಂಬಿ ತುಳುಕುತ್ತ ಬಂದವು. ಮರುದಿನ ಬೆಳಗಿನ ನೆಲ – ಜಲ ಕುರಿತಾದ ವಿಚಾರ ಮಂಡನೆಯಲ್ಲಿ ಕೃಷ್ಣ ಕೊಲ್ಹಾರ ಕುಲಕರ್ಣಿ, ಏ ಬಿ ಪಾಟೀಲರು, ತಿಮ್ಮೇಗೌಡರು, ಕ್ಯಾಪ್ಟನ್ ರಾಜಾರಾವ್ ಅವರನ್ನು ಕೇಳುವ ಭಾಗ್ಯ ದೊರೆಯಿತು. ನಂತರದ ಸಾಹಿತ್ಯ – ರಾಜಕೀಯ ಗೋಷ್ಠಿಯಲ್ಲಿ ಬಿ ಎಲ್ ಶಂಕರ್, ಅನ್ನದಾನಿ, ರವೀಂದ್ರ ರೇಷ್ಮೆ ಯವರ ಮಾತುಗಳಿಗೆ ಕಿವಿಗೊಟ್ಟೆವು. ಪುಸ್ತಕ ಮಳಿಗೆಗಳಲ್ಲಿ ಗಿಜಿಗುಟ್ಟುವ ಜನ. ಕಾಲು ಹಾಕುವುದೇ ಕಷ್ಟವಾಗಿತ್ತು. ಆದರೂ ಸುತ್ತಾಡಿ ಬಂದೆ.
ಇಷ್ಟೆಲ್ಲ ಒಳ್ಳೆಯದರ ನಡುವೆಯೂ ಎರಡು ದಿನಗಳಲ್ಲಿ ಗೌಜು, ಗದ್ದಲಕ್ಕೆ ಮನಸ್ಸು ಸೋತು ಹೋದಂತ್ತಿತ್ತು. ಮಾರನೇ ದಿನ ಉಳಿಯಲಾರದೇ ಹಿಂದಿರುಗಿದೆ. ಲಕ್ಷಾಂತರ ಜನ ಬರುವ ಇಂಥ ಕಡೆ, ನೂರಾರು ಗಣ್ಯಾತಿಗಣ್ಯರು ಬರುವ ಇಂಥ ಕಡೆ, ಸಾವಿರಾರು ಕಾರ್ಯಕರ್ತರು ದುಡಿಯುವ ಇಂಥ ಸಮಾರಂಭಗಳಲ್ಲಿ ಅಲ್ಲಲ್ಲಿ ಲೋಪಗಳು ಸಹಜ. ಅದು ಊಟ ಸಿಗದಿರುವುದಿರಬಹುದು, ಪಾಸ್ ಸಿಗದ ಗೊಂದಲವಿರಬಹುದು, ಪೊಲೀಸರ ಗದರುವಿಕೆಯಿರಬಹುದು, ವಸತಿ ಇತ್ಯಾದಿ ವ್ಯವಸ್ಥೆ ಸಮರ್ಪಕವಾಗಿಲ್ಲದಿರಬಹುದು, ಓಡಾಟಕ್ಕೆ ವಾಹನ ಸೌಕರ್ಯ ನೀಡಲಾರದ ಕಾರಣವಿರಬಹುದು.

ಭಾಷಣ, ಕವಿತೆಗಳ ಸಮಯ ಕಡಿತ ಮಾಡಿದ್ದಿರಬಹುದು, ಆಹ್ವಾನಿತ ಭಾಷಣಕಾರರು, ಕವಿಗಳ ಬಗೆಗಿನ ವೈಯುಕ್ತಿಕ ಅಸಮ್ಮತಿ .. .ಇಂಥ ಹತ್ತಾರು ದೋಷಗಳನ್ನು ಪಟ್ಟಿ ಮಾಡುವುದು ಸಲೀಸು. ಆದರೆ ಈ ಗಾತ್ರದ ಸಮ್ಮೇಳನಗಳನ್ನು ಮಾಡುವುದು ಸುಲಭವಲ್ಲ. ಇಲ್ಲಿ ಆಯೋಜಕರನ್ನು ಮರೆತು ನಮ್ಮ ಭಾಷೆ, ನೆಲದ ಪ್ರೀತಿಗಾಗಿ ಅವುಗಳನ್ನು ಕಡೆಗಣಿಸುವುದು ಕನ್ನಡತನ, ಸಹೃದಯತೆ.
ದಶಕಗಳ ಹಿಂದೆ ಬೆಂಗಳೂರಿನಲ್ಲಿ ಸಮ್ಮೇಳನ ನಡೆದಾಗ ನಾ ಡಿಸೋಜ ಅವರು ಗೋಷ್ಠಿಯೊಂದರ ಅಧ್ಯಕ್ಷರಾಗಿ ಆಹ್ವಾನಿತರಾಗಿದ್ದರು. ನಿಗದಿತ ಸಮಯಕ್ಕಿಂತ ತಡವಾದಾಗ ಅವರು ತಮ್ಮ ಶ್ರೀಮತಿಯವರೊಂದಿಗೆ ಕೊಠಡಿಯ ಹೊರಗೆ ವಿನಮ್ರವಾಗಿ ಕುಳಿತಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ. ಅವರ ಬಳಿ ಹೋಗಿ ”ಸರ್, ನೀವು ಇಲ್ಯಾಕೆ ಕುಳಿತಿದ್ದೀರಿ ಎಂದೆ. ‘ಅಲ್ಲಿರುವವರಿಗೆ ನನ್ನ ಪರಿಚಯವೇ ಇಲ್ಲ ಎಂದು ಇಬ್ಬರೂ ಮುಸಿನಕ್ಕರು. ಆಗ ನಾನು ಅಲ್ಲಿನವರೊಬ್ಬರಿಗೆ ಇವರು ಮುಂದಿನ ಗೋಷ್ಠಿಯ ಅಧ್ಯಕ್ಷರು. ಇವರನ್ನು ಒಳಗೆ ಕೂರಿಸಿ’… ಎಂದಾಗ ಅವರು ಬೇಡವೆಂದು ಸನ್ನೆ ಮಾಡಿದರು. ಅಂಥ ಧೀಮಂತರು ಅಂದು ನನಗೆ ಕಲಿಸಿದ್ದು ಸಣ್ಣ ಪುಟ್ಟ ಗೊಣಗಾಟವನ್ನು ಮಾಡಿ ಘನತೆ ಕಳೆದುಕೊಳ್ಳಬಾರದು ಎಂದು. ಅದನ್ನು ನಾನು ಎಲ್ಲ ಸಮ್ಮೇಳನಗಳ ಸಂದರ್ಭದಲ್ಲೂ ನೆನಪಿಸಿಕೊಳ್ಳುತ್ತೇನೆ.
- ನೂತನ ದೋಶೆಟ್ಟಿ – ಆಕಾಶವಾಣಿ ಸಹಾಯಕ ನಿರ್ದೇಶಕಿ, ಕರು, ಲೇಖಕಿ, ನಿರೂಪಕಿ
