ಆಹಾರದಲ್ಲಿನ ರುಚಿಕರ ಪುಡಿಯ ಮಹಿಮೆ

ಉತ್ತರ ಪ್ರದೇಶದಲ್ಲಿ ಅಡುಗೆ ಮಾಡುತ್ತಿದ್ದ ಆ ಹುಡುಗ ಚನ್ನಾಗಿ ಅಡುಗೆ ಮಾಡುತ್ತಿದ್ದರಿಂದ ಊರಿಂದ ಊರಿಗೆ ಬಂದ. ಕೈತುಂಬಾ ಸಂಬಳ ಬರುತ್ತಿತ್ತು ಆದರೆ ಮಾಲೀಕರು ಅವನಿಗೆ ಆಹಾರದಲ್ಲಿ ರುಚಿ ಬರುವಂತೆ ಒಂದು ಪುಡಿ ಸೇರಿಸಲು ಬಲವಂತ ಮಾಡಿದಾಗ ಅವನು ವಿರೋಧಿಸಿದ ಮುಂದೇನಾಯಿತು ರೂಪೇಶ್ ಪುತ್ತೂರು ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…

ಟ್ರೇನಿನ S4 ಬೋಗಿಯ 5ನೇ ಸೀಟು ಹೋಗಿ ಕೂತೆ. ಕಂಪಾರ್ಟ್ ಮೆಂಟಲ್ಲಿ ಅಕ್ಕ ಪಕ್ಕ ಕೂರಬೇಕಾದ ಯಾರೂ ಬಂದಿರಲಿಲ್ಲ. ಕಿಡಕಿ ತೆರೆದೆ. ಕುಳಿತು ಬ್ಯಾಗಿನಿಂದ ಸ್ವಲ್ಪ ನೀರು ಕುಡಿಯೋಣ ಅಂತ ಬಗ್ಗಿದ್ದೆ.. ಟಪಕ್ ಅಂತ ಒಂದು ಮೊಬೈಲ್ ಮೇಲಿಂದ ಬಿತ್ತು !!! ಯಾಕೋ ನನ್ನ ಸಮಯ ಸರಿ ಇತ್ತು ತಲೆಗೆ ಬಿದ್ದಿಲ್ಲ. ಮೇಲೆ ಅಪ್ಪರ್ ಬರ್ತಿನಲ್ಲಿ ಆಗಲೇ ಒಬ್ಬ ಕೂತಿದ್ದಾನೆ!!!

“ಮಾಫ್ ಕಿ ಜಿಯೇ (ಕ್ಷಮಿಸಿ) ಜರಾ ಹಾತ್ ಫಿಸಲ್ಕರ್ ಗಿರ್ ಗಯಾ(ಸ್ವಲ್ಪ ಕೈತಪ್ಪಿ ಬಿತ್ತು)” ಅಂದ.

ನಾನು ಅವನನ್ನು ನೋಡಿದೆ 20-24ರ ಹರೆಯದ ಹುಡುಗ. ಕೂಡಲೇ ನನ್ನ ನೋಡಿ ಅವನು ” ಸೋರಿ ಅಣ್ಣಾ ಗೊತ್ತಿಲ್ಲದೆ ಆಯ್ತು…” ಎಂದು ಕನ್ನಡದಲ್ಲಿ ನುಡಿದ. ಆ ಕನ್ನಡದಲ್ಲಿ ಗೊತ್ತಾಯ್ತು ಅವನು ಕನ್ನಡಿಗನಲ್ಲ ಆದರೂ ಕನ್ನಡ ಮಾತನಾಡುತ್ತಿದ್ದಾನಲ್ಲ….ಅವನಿಗೆ ನಾನು ಮೊಬೈಲ್ ಎತ್ತಿ ಕೊಟ್ಟೆ.

ಹಿಂದೆ ಟ್ರೈನ್ ಪಯಣದಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಪರಿಚಯ ಪಟ್ಟು ಮಾತನಾಡಿ ಆಪ್ತರಾಗುತ್ತಿದ್ದರು. ಆದರೆ ಈ ನಡುವೆ ಮೊಬೈಲ್ ಬಂದ ಮೇಲೆ ನಡೆಯಲ್ಲ ಎಂದು ಹಲವರು ಹೇಳಿದ್ದುಂಟು. ತಾನಾಯ್ತು ತನ್ನ ಮೊಬೈಲ್ ಆಯ್ತು. ಆದರೆ ನನ್ನ ಮೊಬೈಲು ಕಳೆದ ಕೆಲವು ದಿನದಿಂದ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಸಮಯ ತಳ್ಳಲು ಹೇಗಾದರು ಎಲ್ಲರೊಂದಿಗೆ ಮಾತನಾಡಬೇಕು ಎಂದು ನಿರ್ಧರಿಸಿದೆ.

ಅವನನ್ನೇ ಮೊದಲ ದಾಳವಾಗಿ ನೋಡೋಣ ಎಂದು ಪರೀಕ್ಷೆ ತೊಡಗಿದೆ. ಹೆಸರು ?ಎಲ್ಲಿ ಊರು ?ಕರ್ನಾಟಕದಲ್ಲಿ ಎಲ್ಲಿ ಕೆಲಸ ? ….. ಅಷ್ಟರಲ್ಲಿ ಉತ್ತರಿಸುತ್ತಾ ಅವನು ಕೆಳಗೆ ಇಳಿದೇ ಬಿಟ್ಟ.

ಲಲಿತ್ ಕುಮಾರ್ ಕುಶಲ್, ಇಂದೋರಿನ ಬುದನೀಯ ನಿವಾಸಿ, ಬೆಂಗಳೂರಿನ ಒಂದು ಟ್ರಕ್/ಲಾರಿಯಲ್ಲಿ ಡ್ರೈವರ್…. ಮೈಸೂರಿನಲ್ಲೇ ಅದರ ಗೋಡೌನ್, ಜಾಸ್ತಿ ಮೈಸೂರಿನಲ್ಲೇ ಇರೋದು. ಅವನು ಕಥೆ ಹೇಳತೊಡಗಿದ ನನಗೆ ಅದೇ ಬೇಕಿತ್ತು …

” ನನಗೆ ಬಾಲ್ಯದಲ್ಲಿ ಪಾಕ ಎಂದರೆ ತುಂಬಾ ಇಷ್ಟ , ಆರನೇ ತರಗತಿಯಲ್ಲಿರುವಾಗ, ಶಾಲೆ ಬಿಟ್ಟು ಬೀದಿ ಬದಿಯಲ್ಲಿ ಪಾರೋಟ,ಚಪಾತಿ ಮಾಡುವ ಅಂಗಡಿಯಲ್ಲಿ ಸೇವಕನಾಗಿ ಕೆಲಸ ಮಾಡಿದೆ. ನಂತರ ಹದಿನೈದನೇ ವಯಸ್ಸಿನಲ್ಲಿ ಸ್ವಂತವಾಗಿ ಒಂದು ಬೀದಿ ಹೋಟೆಲ್ ಸುರು ಹಚ್ಚಿದೆ. ನನ್ನ ಮೊದಲ ಯಜಮಾನ ಯಾನೆ ಪಾಕಗುರುಗಳ ಅಂಗಡಿ ಬಿಟ್ಟು ಜನ ನನ್ನಲ್ಲಿ ಬರಲು ಶುರುವಾದರು. ಒಂದು ದಿನ ಪಾಕಗುರು ಮನೆಗೆ ಬಂದು ನನ್ನ ತಾಯಿಯಲ್ಲಿ – ಕುಶಾಲನನ್ನು ಇಂದೋರಿಗೆ ಹೋಗಿ ಯಾವುದಾದರೂ ಬೀದಿಯಲ್ಲಿ ಹೊಟೆಲ್ ಮಾಡಲು ಹೇಳಿ. ಅವನು ಸುರು ಮಾಡಿದ ಮೇಲೆ ನನಗೆ ವ್ಯಾಪಾರ ಕಡಿಮೆಯಾಗಿ ಮನೆಯಲ್ಲಿ ತುಂಬಾ ಕಷ್ಟ ಆಗುತ್ತಿದೆ.- ಎಂದು ನಿವೇದಿಸಿದರು. ಅಂದು ನಾನು ಕೆಲಸ ಮುಗಿಸಿ ಬಂದು ಎಂದಿನಂತೆ ಲಾಭಾಂಶದ ದುಡ್ಡು ತಾಯಿಗೆ ಕೊಟ್ಟಾಗ ತಾಯಿ. ನೋಡಪ್ಪಾ ನಿನ್ನ ಅಡುಗೆ ಗುರು ಬಂದಿದ್ದರು. ….. ಎಂದು ವಿವರಿಸಿ, ನೀನು ಗುರುವಿಗೆ ದಕ್ಷಿಣೆ ಎಂದು ತಿಳಿದು ಇಂದೋರಿಗೆ ಹೋಗ್ಬಿಡು ಅಲ್ಲಿ ಸುರು ಮಾಡು ಎಂದು ಒತ್ತಿ ಹೇಳಿದರು. ತಾಯಿಯ ಮನಸ್ಸು ವೇದನಿಸಬಾರದು ಎಂದು ನಾನು , ನನ್ನ ಬೀದಿ ಗಾಡಿಯನ್ನು , ಇಂದೋರಿಗೆ ಹೋಗುವ ಲಾರಿಯಲ್ಲಿ ಹಾಕಿ ಹೋದೆ. ಇಂದೋರಿನಲ್ಲಿ ಚೆನ್ನಾಗಿ ವ್ಯಾಪಾರ ನಡೆಯಿತು ನಡೆಯುತ್ತಿತ್ತು . ವಾರಕ್ಕೊಮ್ಮೆ ಬುದನಿಯ ಬಂದು ತಾಯಿಗೆ ದುಡ್ಡು ಕೊಟ್ಟು ಮರಳುತ್ತಿದ್ದೆ.

ಒಂದು ದಿನ ಒಬ್ಬ ನನ್ನಲ್ಲಿ ಬೆಂಗಳೂರಿಂದ ಬಂದ ಮಿತ್ರ , ತಿಂಡಿ ತಿನ್ನುತ್ತಾ, ಅವನ ಮೊಬೈಲಿನಲ್ಲಿ ಬೆಂಗಳೂರಿನಲ್ಲಿ ನಾರ್ಥ್ ಇಂಡಿಯನ್ ಫುಡ್ ಮಾಡುವ ಅಡುಗೆಯವನಿಗೆ ಒಳ್ಳೆ ಸಂಬಳ ಎಂದು ತೋರಿದ. ನಾನು ಈ ಬೀದಿಯಲ್ಲಿ ವ್ಯಾಪಾರ, MLA, Town member, police.. ಗಳಿಗೆ ಲಂಚ ಕೊಟ್ಟು ಹೆದರಿ ಕೆಲಸ ಮಾಡೋದಕ್ಕಿಂತ ಬೆಂಗಳೂರೇ ಸೈ ಎಂದು, ಅವನ ಸಹಾಯದಿಂದ ಬೆಂಗಳೂರಿಗೆ ಬಂದು ಒಂದು ಹೋಟೆಲ್ ಸೇರಿದೆ. ….

ಕೈ ತುಂಬಾ ಸಂಬಳ , ಸಂಜೆ ಆರು ಗಂಟೆಯಿಂದ ರಾತ್ರಿಯೆಲ್ಲಾ ಕೆಲಸ. ತಂಗಲು ಎಸಿ ಕೋಣೆ. ನಾಲ್ಕು ದಿನದಲ್ಲಿ ನನಗೆ ತುಂಬಾ ಶಭಾಷ್ಗಿರಿ ಸಿಕ್ತು. ಆದರೆ ಅವರು ಅದೇನೋ ರುಚಿ ಬರುವ ಹುಡಿ ಸ್ವಲ್ಪ, ಒಂದೇ ಒಂಚೂರು ಪಾಕದಲ್ಲಿ ಬೆರೆಸಲು ನನಗೆ ಬಲವಂತ ಮಾಡುತ್ತಿದ್ದರು. ಹಾಲಿನ ಪುಡಿಯಂತಿದ್ದ ಅದು ಒಂದು ಮುಷ್ಟಿ ಬಾಯಿಗೆ ಹಾಕಿ ನೋಡಿದರೆ ನಾಲಿಗೆ ಗಲ್ಲ ಮರಗಟ್ಟುವಂತಾಗುತ್ತಿತ್ತು. ಇದೇನಿರಬಹುದು? ಎಂದು ಅದೇ ಪುಡಿಯ ಎರಡು ಸ್ಪೂನ್ ಅತ್ಯಂತ ಸ್ವಲ್ಪ, ಎರಡು ಪೀಸು ಗೋಬಿ ಹಾಕಿ , ನಿತ್ಯ ಸಂದರ್ಶಕನಾದ ಒಂದು ಬೆಕ್ಕಿಗೆ ತಿನ್ನಿಸಿದೆ ಅದು ತಿಂದು ಸ್ವಲ್ಪ ದೂರ ನಡೆದು, ಅಲ್ಲೇ ಬಿದ್ದೂ , ನಂತರ ಎದ್ದು ನಡೆಯುತ್ತಿತ್ತು!!!

ನಾನು ಆಗ ಹುಡಿ ಹಾಕಿ ಪಾಕ ಮಾಡಲ್ಲ ಎಂದೆ. ಜಗಳವಾಯಿತು ಅವರು ಥಳಿಸಿದರು, ಒಂದು ರೂಮಿನಲ್ಲಿ ಕೂಡಿ ಹಾಕಿದರು.


  • ರೂಪೇಶ್ ಪುತ್ತೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading