ಮನುಕುಲ ಕಂಡ ಅತ್ಯುತ್ತಮ ಸಿನಿಮಾ ನಿರ್ದೇಶಕ ಜಪಾನಿನ ಅಕಿರಾ ಕುರೋಸಾವಾನ ಬಹುಚರ್ಚಿತ ಚಲನಚಿತ್ರ ‘ಡ್ರೀಮ್ಸ್’ ಕೊನೆಯ ಭಾಗದಲ್ಲಿ ಹಳ್ಳಿಯ ಚಿತ್ರಣವೊಂದಿದೆ. ತಪ್ಪದೆ ಮುಂದೆ ಓದಿ …
ಅಲ್ಲಿ ಹೊಳೆಯ ಬದಿಯಲ್ಲಿ ಗಾಳಿ ಗಿರಣಿಯನ್ನು ದುರಸ್ತಿ ಮಾಡುತ್ತಿರುವ ಅಜ್ಜನ ಜೊತೆ ಅಲ್ಲಿಗೆ ಬಂದ ಯುವಕನೊಬ್ಬ ನಡೆಸುವ ಸಂಭಾಷಣೆ ಹೀಗಿದೆ :
ಯುವಕ: ‘ಈ ಹಳ್ಳಿಯ ಹೆಸರೇನು?’
ಅಜ್ಜ: ‘ಹಳ್ಳಿಗೆ ಹೆಸರೇ ಇಲ್ಲ. ಇದನ್ನು ಬರೀ ಹಳ್ಳಿ ಅಂತ ಕರೀತೇವೆ.’ ಕೆಲವರು ಇದನ್ನು ನೀರಿನ ಗಿರಣಿ ಹಳ್ಳಿ ಅಂತ ಕರೀತಾರೆ.
ಯುವಕ: ‘ಎಲ್ಲರೂ ಇಲ್ಲೇ ವಾಸ ಮಾಡಿದ್ದೀರಾ?’
ಅಜ್ಜ: ‘ಇಲ್ಲ. ಎಲ್ಲರೂ ಅವರವರ ಜಾಗದಲ್ಲೇ ಇದ್ದಾರೆ.’
ಯುವಕ: ‘ಇಲ್ಲಿ ವಿದ್ಯುಚ್ಛಕ್ತಿ ಇಲ್ಲವೆ?’
ಅಜ್ಜ: ‘ಅದರ ಅಗತ್ಯವೇ ಇಲ್ಲ. ಜನರಿಗೆ ಅನುಕೂಲವೇ ಮುಖ್ಯ.’
ಯುವಕ: ‘ಮತ್ತೆ? ಬೆಳಕಿಗೆ ಏನು ಮಾಡ್ತೀರ?’
ಅಜ್ಜ: ‘ನಮ್ಮ ಹತ್ರ ಬೀಜದ ಎಣ್ಣೆ ದೀಪಗಳಿವೆ. ಮೋಂಬತ್ತಿಗಳಿವೆ.’
ಯುವಕ: ‘ಆದ್ರೆ ರಾತ್ರಿ ತುಂಬಾ ಕತ್ತಲು ಇರುತ್ತಲ್ಲ?’
ಅಜ್ಜ: ‘ಹೌದು. ರಾತ್ರಿ ಅಂದ್ರೆ ರಾತ್ರಿ ಥರಾನೇ ಇರಬೇಕಲ್ಲ?’ ರಾತ್ರಿಯೂ ಯಾಕೆ ಹಗಲಿನ ಥರ ಪ್ರಖರವಾಗಿರಬೇಕು ? ಹಾಗೆ ರಾತ್ರಿಯೂ ಬೆಳಕಿನಿಂದ ಕೂಡಿದ್ರೆ ನಿನಗೆ ನಕ್ಷತ್ರಗಳನ್ನು ನೋಡೋದಕ್ಕೇ ಆಗಲ್ಲ.’
ಯುವಕ: ‘ನಿಮ್ಮಲ್ಲಿ ಭತ್ತ ಬೆಳಿತೀರಿ. ಅದರ ಉಳುಮೆಗೆ ಟ್ರಾಕ್ಟರ್ ಇಲ್ಲವಲ್ಲ?’
ಅಜ್ಜ: ‘ನಮಗೆ ಟ್ರಾಕ್ಟರ್ ಬೇಡವೇ ಬೇಡ. ನಮ್ಮ ಬಳಿ ದನಗಳಿವೆ, ಕುದುರೆಗಳಿವೆ’
ಯುವಕ: ‘ನೀವು ಇಂಧನಕ್ಕಾಗಿ ಏನು ಮಾಡ್ತೀರಿ ಮತ್ತೆ?’
ಸಿನೆಮಾ ನಿರ್ದೇಶಕ ಜಪಾನಿನ ಅಕಿರಾ ಕುರೋಸಾವಾನ (ಫೋಟೋ ಕೃಪೆ :google)
ಅಜ್ಜ: ‘ಸಾಮಾನ್ಯವಾಗಿ ಉರುವಲು ಸುಡ್ತೀವಿ. ಮರ ಕಡಿಯಬೇಕು ಅಂತ ನಮಗೆ ಅನ್ನಿಸಿಲ್ಲ. ಆದರೆ ತಾನಾಗೇ ಬಿದ್ದ ಮರಗಳು ನಮಗೆ ಸಾಕು. ನಾವು ಅದನ್ನೇ ಕತ್ತರಿಸಿ ಉರುವಲಾಗಿ ಬಳಸ್ತೇವೆ. ನೀನು ಸೌದೆಯನ್ನು ಇದ್ದಿಲಾಗಿ ಮಾಡಿದರೆ ಇಡೀ ಕಾಡು ಕೊಡೋ ಶಕ್ತಿಯನ್ನು ಒಂದೇ ಮರದಿಂದ ಪಡೆಯಬಹುದು. ಹೌದು, ಸೆಗಣಿಯೂ ಒಳ್ಳೇ ಇಂಧನವೇ. ನಾವು ಮನುಷ್ಯನ ಹಾಗೆ ಬದುಕೋದಕ್ಕೆ ಪ್ರಯತ್ನಿಸ್ತೇವೆ. ‘ನಾವು ಪ್ರಕೃತಿಯ ಭಾಗ ಅನ್ನೋದನ್ನ ಜನ ಮರೆತ್ತಿದ್ದಾರೆ. ಪ್ರಕೃತಿನ ನಾಶ ಮಾಡ್ತಾ ಇದ್ದಾರೆ. ಈ ಪ್ರಕೃತಿ ಮೇಲೇ ಅವರ ಬದುಕು ನಿಂತಿದೆ. ಅದರಲ್ಲೂ ವಿಜ್ಞಾನಿಗಳು ತಾವೇನೋ ವಿಶೇಷವಾದದ್ದನ್ನೇ ಮಾಡ್ತಿದ್ದೀವಿ ಅಂತ ಹೇಳ್ತಾರೆ. ಅವರೇನೋ ಜಾಣರಿರಬಹುದು. ಆದರೆ ಅವರಲ್ಲಿ ಬಹಳಷ್ಟು ಜನರಿಗೆ ಪ್ರಕೃತಿಯ ಹೃದಯವೇ ಅರ್ಥ ಆಗೋದಿಲ್ಲ. ಜನರಿಗೆ ಅಸಂತೋಷ ಆಗೋ ವಸ್ತುಗಳನ್ನೇ ಯಾವಾಗ್ಲೂ ಸಂಶೋಧಿಸ್ತಾರೆ. ಅಂಥವರನ್ನು ಕೆಲವರು ಆರಾಧಿಸ್ತಾರೆ. ಆದ್ರೆ ಅದರಿಂದ ಪರಿಸರ ನಾಶವಾಗ್ತಿದೆ. ಶುದ್ಧ ಗಾಳಿ ಮತ್ತು ಶುದ್ಧ ನೀರನ್ನು ಕೊಡೋದು ಈ ಮರಗಳು, ಈ ಹುಲ್ಲುಗಳು…. ಆದರೆ ಈಗ ಎಲ್ಲವೂ ಕಲುಷಿತವಾಗಿ ಮನುಷ್ಯರ ಹೃದಯಗಳೂ ಕಲುಷಿತವಾಗಿವೆ.
ಯುವಕ: ‘ಮಕ್ಕಳು ಹೊಳೆಗೆ ಹೂವು ಹಾಕ್ತಾ ಇದ್ದಾರಲ್ಲ….. ಇವತ್ತೇನು ಏನೋ ಸಂಭ್ರಮಾಚರಣೆ ಇದ್ದಂತಿದೆ?’
ಅಜ್ಜ: ‘ಇಲ್ಲ, ಇವತ್ತು ಶವಸಂಸ್ಕಾರ ನಡೀತಿದೆ. ಖುಷಿಯಿಂದ ನಡೀತಿರೋ ಕಾರ್ಯಕ್ರಮ . ಚೆನ್ನಾಗಿ ಕೆಲಸ ಮಾಡಿ, ದೀರ್ಘಕಾಲ ಬದುಕಿ ಆಮೇಲೆ ವಂದನೆ ಸ್ವೀಕರಿಸೋದು ಒಳ್ಳೇದೇ. ಇಲ್ಲಿ ದೇಗುಲವೂ ಇಲ್ಲ, ಅರ್ಚಕರೂ ‘ಇಲ್ಲ. ನಾವೆಲ್ಲಾ ಸೇರಿ ಮೃತ ಹಿರಿಯರನ್ನು ಗುಡ್ಡದ ಮೇಲೆ ಒಯ್ಯುತ್ತೇವೆ. ಇವತ್ತು ಒಬ್ಬ ಮಹಿಳೆಯ ಅಂತ್ಯಸಂಸ್ಕಾರ ನಡೀತಿದೆ. ‘ನೀನು ನನ್ನ ಕ್ಷಮಿಸಬೇಕು. ನಾನೂ ಆ ಮೆರವಣಿಗೆಯಲ್ಲಿ ಸೇರ್‍ಕೋಬೇಕು. ನಿಜ ಹೇಳ್ಬೇಕಂದ್ರೆ…. ಅವಳು ನನ್ನ ಮೊದಲ ಪ್ರೇಯಸಿ. ನನ್ನ ಹೃದಯವನ್ನು ಚೂರು ಮಾಡಿ ಬೇರೊಬ್ಬನನ್ನು ಮದುವೆಯಾದಳು.’
ಯುವಕ: `ಅಂದಹಾಗೆ, ನಿನ್ನ ವಯಸ್ಸೆಷ್ಟು?’
ಅಜ್ಜ: `ನೂರಕ್ಕೆ ಮೂರು ಸೇರಿಸು. ಬದುಕಿಗೆ ಪೂರ್ಣವಿರಾಮ ಕೊಡೋ ಹೊತ್ತು. ಜೀವನ ಕಷ್ಟ ಅಂತ ಕೆಲವರು ಹೇಳ್ತಾರೆ. ಅದೆಲ್ಲ ಬರೀ ಮಾತು. ಸಜೀವವಾಗಿರೋದು ನಿಜಕ್ಕೂ ಒಳ್ಳೇದು. ಹಾಗಿರೋದೇ ಅತ್ಯಂತ ಕುತೂಹಲಕರ.’
ಅಜ್ಜನ ಉತ್ತರಗಳಲ್ಲಿ ನಮ್ಮ ಬದುಕಿನ ಅರ್ಥ ಅಡಗಿದೆಯಲ್ಲವೆ ?
- ಸಂಗ್ರಹ : ಮನು ಎಚ್ ಎಸ್ ಹೆಗ್ಗೋಡು