‘ಅಕ್ಕ ಅನು’ ಸಮಾಜ ಸೇವೆಗೆ – ಶಾಲಿನಿ ಹೂಲಿ ಪ್ರದೀಪ್



”ಕನ್ನಡ ಬೆಳೆಸುವುದೆಂದರೆ ಹೋರಾಟವಲ್ಲ, ಕನ್ನಡದವರಿಗೆ ಮೊದಲು ಕೆಲಸ ಕೊಡಬೇಕು, ಕನ್ನಡ ಶಾಲೆಗಳು ಉಳಿಯಬೇಕು” ಅಕ್ಕ ಕನ್ನಡತಿ ಅನು ಅವರ ಮಾತಿದು, ಅತಿ ಸಣ್ಣ ವಯಸ್ಸಿನಲ್ಲಿ ಸಮಾಜದ ಒಳಿತಿಗಾಗಿ ಮಿಡಿಯುತ್ತಿರುವ ಹೃದಯವಿದು. ಮುಂದೆ ಓದಿ ಅಕ್ಕ ಕನ್ನಡತಿ ಅನು ಅವರ ಸಾಧನೆಯ ಕಿರುಪರಿಚಯ.

ಹೆಣ್ಣು ತಲೆತಗ್ಗಿಸಿ ಮೂರು ಗಂಟು ಹಾಕಿಸಿಕೊಂಡರೆ ಒಂದು ಮನೆಗೆ ಮಾದರಿಯಾಗಬಲ್ಲಳು, ಅದೇ ಹೆಣ್ಣು ತಲೆಯೆತ್ತಿ ನಿಂತರೆ ಇಡೀ ಸಮಾಜಕ್ಕೆ ಉತ್ತಮ ಮಾದರಿಯಾಗಬಲ್ಲಳು. ಮದುವೆ ಎನ್ನುವ ಮೂರೂ ಅಕ್ಷರದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದು ಸೇರಿದ ಅಕ್ಕ ಕನ್ನಡತಿ ಅನು ಅವರ ಕತೆಯಿದು.

ತಮ್ಮ ನಿಸ್ವಾರ್ಥ ಸಮಾಜ ಸೇವೆಯಿಂದ ಸೋಷಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಅಕ್ಕ ಕನ್ನಡತಿ ಅನು, ೫೨ ಶಾಲೆಗಳಿಗೆ ಬಣ್ಣ ಹಚ್ಚಿದ್ದಾರೆ, ೧೦ಕ್ಕೂ ಹೆಚ್ಚು ದೇವಾಲಯಗಳಿಗೆ ಪುನರ್ಚೆತನ ಗೊಳಿಸಿದ್ದಾರೆ, ೬ ಬಾವಿಗಳನ್ನೂ ಶುದ್ಧಗೊಳಿಸಿದ್ದಾರೆ. ರಾಜ್ಯದ ಬೀದರ್, ಹುಬ್ಬಳ್ಳಿ , ಯಾದಗಿರಿ, ಕಲಬುರ್ಗಿ, ರಾಯಚೂರು ಜಿಲ್ಲೆಗಳಲ್ಲಿ ಸ್ವಚ್ಛತಾ ಅಭಿಯಾನ ಮಾಡುವುದರ ಮೂಲಕ ಯುವ ಪೀಳಿಗೆಗೆ ಒಳ್ಳೆ ಮಾದರಿಯಾಗಿದ್ದಾರೆ. ಇದು ಅನು ಅವರ ಸಮಾಜಸೇವೆಯ ಕಿರುನೋಟ.

ಅನು ಅವರು ರಾಯಚೂರು ಜಿಲ್ಲೆಯ, ಸಿಂಧನೂರು ತಾಲ್ಲೂಕಿನ ಚಿಕ್ಕಬೇರಿಗಿ ಎನ್ನುವ ಪುಟ್ಟ ಗ್ರಾಮದಲ್ಲಿ ಹುಟ್ಟಿಬೆಳೆದರು. ಅಕ್ಕ ಎನ್ನಿಸಿಕೊಳ್ಳುವಷ್ಟು ಹಿರಿಯ ವಯಸ್ಸು ಅವರದಲ್ಲವಾದರೂ, ಜನ ಪ್ರೀತಿಯಿಂದ ಇಟ್ಟಂತಹ ಹೆಸರು ‘ಅಕ್ಕ ಕನ್ನಡತಿ ಅನು’. ಅವರಿಗೆ ಅಕ್ಕ ಅನು ಎಂದರೆಯೇ ಸಂತೋಷ.

ಅಪ್ಪ-ಅಮ್ಮ ಭೂತಾಯಿಯನ್ನೇ ನಂಬಿಕೊಡಿರುವ ರೈತರು. ನಾಲ್ಕು ಜನ ಹೆಣ್ಣು ಮಕ್ಕಳಲ್ಲಿ ಮೂರನೆಯವರೇ ಅನು. ಮನೆಯಲ್ಲಿ ಮದುವೆಗೆ ಬಲವಂತ ಹೆಚ್ಚಾದಾಗ ಹೇಳದೆ ಕೇಳದೆ ಹುಟ್ಟೂರನ್ನು ಬಿಟ್ಟು ಬೆಂಗಳೂರಿಗೆ ಬಂದು ಸೇರಿದರು. ಮಹಾರಾಣಿ ಕಾಲೇಜಿನಲ್ಲಿ ಬಿ ಎ ಓದುತ್ತಲೇ ಸಮಾಜ ಮುಖಿ ಕೆಲಸಗಳತ್ತ ಕೈ ಜೋಡಿಸಿದರು. ತಮ್ಮದೇಯಾದ ಸಣ್ಣದೊಂದು ತಂಡವನ್ನು ಕಟ್ಟಿ , ಆ ತಂಡದ ಮೂಲಕ ಸಮಾಜದ ಕೆಲಸಗಳಿಗೆ ಕೈ ಜೋಡಿಸುತ್ತಾ ಬಂದಿದ್ದಾರೆ. ಅಳಿವಿನಂಚಿನಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳು ಉಳಿಸುವ ನಿಟ್ಟಿನಲ್ಲಿ ತಮ್ಮ ತಂಡದ ಜೊತೆಗೂಡಿ ಶಾಲೆಗಳಿಗೆ ಬಣ್ಣ ಹಚ್ಚುವುದು, ಚರಂಡಿಗಳನ್ನು ಶುಚಿ ಮಾಡುವುದು ಮಾಡುತ್ತಾರೆ. ಸ್ವಚ್ಛ, ಸುಂದರ ಶಾಲೆಗಳಿದ್ದರೆ ಮಕ್ಕಳಿಗೆ ಓದುವಲ್ಲಿ ಆಸಕ್ತಿ ಮೂಡುತ್ತದೆ ಮತ್ತು ಸರ್ಕಾರಿ ಶಾಲೆಗಳು ಉಳಿಯುವುದು ಎನ್ನುತ್ತಾರೆ ಅನು.

ಶಾಲೆಗಳ ಜೊತೆಗೆ ಹಳ್ಳಿ ಹಳ್ಳಿಗಳಿಗೆ ಹೋಗಿ ಅಲ್ಲಿಯ ಪಾಳು ಬಿದ್ದ ಕೆರೆ, ಬಾವಿ, ಚರಂಡಿಗಳನ್ನು ಶುದ್ದಿ ಮಾಡುತ್ತಾ ಹಳ್ಳಿಗರಲ್ಲಿ ಸ್ವಚ್ಛತೆಯ ಬಗ್ಗೆ ಮಹತ್ವವನ್ನು ಸಾರುತ್ತಿದ್ದಾರೆ.  ಹಳ್ಳಿಗಳಲ್ಲಿ ಸ್ವಚ್ಛ ಮಾಡುವ ಸಂದರ್ಭದಲ್ಲಿ ಒಮ್ಮೊಮ್ಮೆ ಹಳ್ಳಿಗರು ಅರ್ಥ ಮಾಡಿಕೊಂಡು ಅವರು ಕೂಡಾ ಕೈ ಜೋಡಿಸುತ್ತಾರೆ, ಇದರಿಂದ ನಮ್ಮ ಕೆಲಸ ಬೇಗ ಮುಗಿಯುತ್ತದೆ. ಇನ್ನು ಕೆಲವು ಕಡೆ ನಮ್ಮ ತಂಡಗಳು ಬಣ್ಣ ಹಚ್ಚುವಾಗ, ಸ್ವಚ್ಛ ಮಾಡುವಾಗ ಊರಿನವರು ಕೈ ಕಟ್ಟಿಕೊಂಡು ನಿಂತು ನೋಡುತ್ತಾರೆ, ಅದರಿಂದ ನನಗೇನು ಬೇಸರವಿಲ್ಲ. ಆದರೆ ನಮ್ಮದು ಸಣ್ಣ ತಂಡ ಬಣ್ಣ ಹಚ್ಚಿ, ಸ್ವಚ್ಛ ಮಾಡಲು ಸಾಕಷ್ಟು ಸಮಯ ತಗೆದುಕೊಳ್ಳುತ್ತದೆ, ಆಗ ಬೇರೆಡೆ ಹೋಗಲು ತಡವಾಗುತ್ತದೆ ಎಂದು ನಗುತ್ತಾ ಉತ್ತರಿಸುತ್ತಾರೆ.

This slideshow requires JavaScript.

‘ಸಾಯುವ ಮೊದಲು ಸಮಾಜಕ್ಕೆ ನನ್ನದೇನಾದರೂ ಕೊಡುಗೆ ಕೊಡಬೇಕು ಎನ್ನುವ ನಿಟ್ಟಿನಲ್ಲಿ ನಾನು ೧೮ ವರ್ಷವಿದ್ದಾಗಲೇ ಸಮಾಜಕಾರ್ಯಕ್ಕೆ ಇಳಿದೆ. ನನ್ನ ಕೆಲಸವನ್ನು ನೋಡಿ ಜನ ಪ್ರೀತಿಯಿಂದ ಮೆಚ್ಚಿಕೊಂಡರು, ಅದರ ಬಗ್ಗೆ ಸಂತೋಷವಿದೆ. ಆದರೆ ಮೊದಮೊದಲು ಜನ ನನ್ನನ್ನು ನೋಡಿ ಪ್ಯಾಂಟ್ ಶರ್ಟ್ ಹಾಕ್ತಾಳೆ, ಬೈಕ್ ಓಡಿಸ್ತಾಳೆ , ಹುಡುಗರ ಜೊತೆ ಗಂಡುಬೀರಿಯಂತೆ ಓಡಾಡುತ್ತಾಳೆ ಅಂತೆಲ್ಲ ಆಡಿಕೊಳ್ಳುತ್ತಿದ್ದರು, ಅಷ್ಟೇ ಅಲ್ಲದೆ ಮಗಳಿಗೆ ಮದುವೆ ಮಾಡುವ ವಯಸ್ಸಿನಲ್ಲಿ ಹೀಗೆ ಅಡ್ಡಾಡೋಕೆ ಬಿಟ್ಟಿದ್ದೀಯಲ್ಲ ಅಂತ ಅಪ್ಪನಿಗೆ ಅವರಿವರು ಹೀಯಾಳಿಸುತ್ತಿದ್ದರು. ಆ ಚುಚ್ಚು ಮಾತುಗಳಿಂದ ನಮ್ಮ ತಂದೆ ಮೂರೂ ತಿಂಗಳು ನನ್ನ ಜೊತೆ  ಮಾತು ಬಿಟ್ಟಿದ್ದರು’ ಎಂದು ಹೇಳುವಾಗ ಅನು ಅವರ ಕಣ್ಣಂಚಿನಿಂದ ನೀರು ಹರಿಯಿತು.

(ಅಪ್ಪನ ಜೊತೆ ಅನು)

‘ಕೆಲವು ಕಡೆ ಎಲ್ಲ ರೀತಿಯ ವ್ಯವಸ್ಥೆಗಳಿರುವುದಿಲ್ಲ, ಮೇಲೆ ಹತ್ತಿ ಬಣ್ಣ ಬಳಿಯಬೇಕಾಗುತ್ತದೆ, ಚರಂಡಿಗಳಲ್ಲಿ ಇಳಿದು ಸ್ವಚ್ಛ ಮಾಡಬೇಕಾಗುತ್ತದೆ, ಹೀಗಿರುವಾಗ ಸೀರೆ ಉಟ್ಟು ಕೆಲಸ ಮಾಡುವುದು ಕಷ್ಟವಾಗುತ್ತದೆ’ ಎಂದು ತಮ್ಮ ಉಡುಪುಗಳ ಬಗ್ಗೆ ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕುತ್ತಾರೆ.

‘ಕೋರನಾ ಬಂದ ಮೇಲೆ ಕಾಲೇಜ್ ನ ತರಬೇತಿಗಳು ಆನ್ಲೈನ್ ನಲ್ಲೆ ನಡೆಯುತ್ತಿದ್ದರಿಂದ ಸಮಾಜಸೇವೆಯತ್ತ ಹೆಚ್ಚು ಗಮನ ನೀಡಲು ಸಹಾಯವಾಯಿತು. ಈಗ ಬಿಎ ಕೂಡಾ ಮುಗಿಯಿತು,  ಡಿವೈಎಸ್ಪಿ ಆಗಬೇಕು ಎನ್ನುವ ಕನಸ್ಸನ್ನು ಕಟ್ಟಿಕೊಂಡಿದ್ದೇನೆ. ನನ್ನ ಉಸಿರಿರುವವರೆಗೂ ಸಮಾಜಮುಖಿ ಕೆಲಸಗಳನ್ನುಮಾಡುತ್ತಲೇ ಇರುತ್ತೇನೆ. ಈ ಸಂದರ್ಭದಲ್ಲಿ ಇನ್ನೊಂದು ಮುಖ್ಯವಾದ ಮಾತೊಂದು ಹೆಣ್ಮಕ್ಕಳಿಗೆ ಹೇಳಲೇಬೇಕು,  ಊರು ಬಿಟ್ಟು ಬಂದ ಮಾತ್ರಕ್ಕೆ ಅಡ್ಡದಾರಿ ಹಿಡಿದು ಅಪ್ಪ ಅಮ್ಮನ ಮಾನ ಮರಿಯಾದೆಯನ್ನು ಹರಾಜು ಹಾಕಬೇಡಿ’ ಎಂದು ಬುದ್ದಿ ಮಾತ್ತೊಂದು ಅಕ್ಕ ಕನ್ನಡತಿ ಹೇಳುತ್ತಾರೆ.



‘ ನನ್ನನ್ನಷ್ಟೇ ಬೆಳೆಸಬೇಡಿ, ನನ್ನ ಜೊತೆಗೆ ನನ್ನ ಜೊತೆಗಿದ್ದವರೂ ಬೆಳೆಯಬೇಕು… ಮುಂದೊಂದು ದಿನ ನನ್ನನ್ನು ನೋಡಿ ನಾವು ಹಿಂದೆ ಉಳೆದುಬಿಟ್ಟೆವು ಎನ್ನುವ ಭಾವನೆ ಅವರಲ್ಲಿ ಮೂಡಬಾರದು’ ಎನ್ನುವ ಕಿವಿ ಮಾತನ್ನು ಕೂಡಾ ಯುವ ಜನಕ್ಕೆ ಹೇಳುತ್ತಾರೆ. ಯಾರುಬೇಕಾದರೂ ಸಮಾಜಸೇವೆ ಮಾಡಬಹುದು ಆದರೆ ಮನಸ್ಸಿರಬೇಕಷ್ಟೆ. ಎಲ್ಲರೂ ಕೈ ಸೇರಿಸಿದರೆ ಮಾತ್ರ ಉತ್ತಮ ಸಮಾಜವನ್ನು ಕಟ್ಟಬಹುದು ಎನ್ನುತ್ತಾ ತಮ್ಮ ಮನದಾಳದ ಮಾತನ್ನು ಅನು ಬಿಚ್ಚಿಡುತ್ತಾರೆ.

ಸ್ವಚ್ಛತೆಯ ಅಭಿಯಾನದ ಜೊತೆಗೆ ಜನರ ನೋವಿಗೂ ಸ್ಪಂದಿಸುತ್ತಿರುವ ಅನು ಅವರಿಗೆ ಆಕೃತಿಕನ್ನಡ ಅಭಿನಂದಿಸುತ್ತದೆ.ಮತ್ತು ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತದೆ.


  • ಶಾಲಿನಿ ಹೂಲಿ ಪ್ರದೀಪ್

4 4 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW