ಟಿ ಪಿ ಉಮೇಶ್ ಒಳ್ಳೆಯ ಕವಿಯಾಗಿ, ಮಾದರಿ ಶಿಕ್ಷಕರಾಗಿ, ಆ ಕಾರಣಕ್ಕೇ ರಾಷ್ಟ್ರಪ್ರಶಸ್ತಿಯನ್ನೂ ಪಡೆದು ಶೈಕ್ಷಣಿಕ ಜೀವಂತಿಕೆಯಲ್ಲಿ ಉಸಿರಾಡುವ ಜೀವಿ.’ಅಳಿಗೊಂಡಿಹರೆಂದು ಅಂಜಲದೇಕೆ?’ ಗೆ ಸಾಹಿತಿಗಳಾದ ಚಂದ್ರಶೇಖರ ತಾಳ್ಯ ಅವರು ಮುನ್ನುಡಿಯನ್ನು ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…
ಹೊಳಲ್ಕೆರೆ ಅರಿವಿನ ಬೀಜಗಳಂತಹ ಅಕ್ಷರಗಳನ್ನು ಅರೆಯಾಗದಂತೆ ಬಳಸಿರುವ ಲೇಖನಗಳು
ಉಮೇಶ್ ನಾ ದಿನ ಕಾಣುವ ಹುಡುಗ. ಹಳ್ಳಿಮೇಷ್ಟ್ರು. ಅಪಾರ ಸಾಹಿತ್ಯ ಪ್ರೇಮಿ. ಹಳೆಗನ್ನಡದಿಂದ ಹೊಸಗನ್ನಡದವರೆಗೂ ನಿರರ್ಗಳವಾಗಿ ಮಾತನಾಡಬಲ್ಲ ವಾಗ್ಮಿ. ಕಾವ್ಯದಲ್ಲೇ ಬಹಳ ಸೃಜನಶೀಲ ಕೃಷಿ ಮಾಡಿರುವನು. ಈಗ ತಾನು ಆಗಾಗ ಪತ್ರಿಕೆಗಳಿಗೆ ಬರೆದ ಅಲ್ಲಲ್ಲಿ ಶೈಕ್ಷಣಿಕ, ಸಾಹಿತ್ಯಿಕ ವೇದಿಕೆಗಳಲ್ಲಿ ನೀಡಿದ ಉಪನ್ಯಾಸಗಳ ಮತ್ತು ಕೆಲ ಕೃತಿಗಳಿಗೆ ತಾನು ಸಾಹಿತ್ಯಾಸಕ್ತನಾಗಿ ಬರೆದ ಮುನ್ನುಡಿಗಳನ್ನ ಅಳಿಗೊಂಡಿಹರೆಂದು ಅಂಜಲದೇಕೆ ಎಂಬ ಕೃತಿಯಲ್ಲಿ ಕ್ರೋಢೀಕರಿಸಿ ನೀಡಿದ್ದಾರೆ. ಒಂದು ಓದಿಗೆ ದಕ್ಕುವಂತ ಲೇಖನಗಳಂತೆ ಕಂಡರು ಚಿಂತನೆಗೆ ಹಚ್ಚುವ ಹಲವು ಲೇಖನಗಳಿವೆ. ಅವರ ಅಪಾರ ಅಧ್ಯಯನಶೀಲತೆ ಹಾಗು ಸಮಾಜದ ಅವಲೋಕನ ಮಾದರಿ ಇಲ್ಲಿನ ಲೇಖನಗಳಲ್ಲಿ ಹರಳುಗಟ್ಟಿದೆ.

ಬುದ್ಧನ ಕುರಿತ ರೋಹಿಣಿಯಲ್ಲಿ ಕೊಚ್ಚಿ ಹೋದ ಬುದ್ಧನ ನಗು ಲೇಖನ ಬಹುತೇಕರು ಸಾಂಪ್ರದಾಯಿಕವಾಗಿ ತಿಳಿದಂತೆ ರೋಗಿ ಮುದಿತನ ಸಾವಿನ ಸಂದರ್ಭ ಕಂಡು ಗೌತಮನ ಮನ ಮರುಗಿ ಬುದ್ಧತ್ವ ಪಡೆಯಲು ದುಃಖದ ಕಾರಣ ಹುಡುಕಲು ಹೊರಟ ಎಂಬುದಾಗಿದೆ. ಆದರೆ ಮಿಜ ಬೇರೆಯದೇ ಇದೆ. ರೋಹಿಣಿ ನದಿಗಾಗಿ ನಡೆದ ಕಲಹದಿಂದ ಬುದ್ಧನ ಮನ ಕರಗಿದ ವಿಚಾರ ಬೆಳಕು ಕಾಣಿಸಿದ್ದಾರೆ. ಸಂಬಂಧಗಳ ವ್ಯಾಮೋಹಕ್ಕೆ ಒಳಗಾಗಿ ನದಿ ನೀರ ಹಂಚಿಕೆಯ ಮುಲಾಜಿಗೆ ಒಳಗಾಗದ ಅವನ ಮಾನವೀಯತೆ ಅನಾವರಣಗೊಳಿಸಿದ್ದಾರೆ. ತಂದೆ ತಾಯಿಯರ ಗೌರವಕ್ಕಾಗಿ ಜನರ ಸಮಾನತೆಯ ಸಿದ್ಧಿಗಾಗಿ ರಾಜ್ಯ ಬಿಟ್ಟು ಹೊರಟ ಗೌತಮ ಸಿದ್ಧಿ ಪಡೆದು ಬುದ್ಧನಾಗುವ ಪರಿಯ ಮನಮಿಡಿಯುವಂತೆ ಚಿತ್ರಿಸಿದ್ದಾರೆ. ಸತ್ಯಕ್ಕೆ ನಿಷ್ಟ ಬರಹಗಳೇ ಇಲ್ಲಿವೆ. ಕಾರ್ಮಿಕರ ದಿನದ ಗಾಥೆ ಇರಬಹುದು ಮಹಿಳಾ ದಿನದ ಚರಿತ್ರೆ ಇರಬಹುದು ತಲಸ್ಪರ್ಶಿ ಅಧ್ಯಯನದಿಂದ ಕಂಡುಬಂದ ವಿಚಾರಗಳ ಮುಂದಿರಿಸಿದ್ದಾರೆ.
ಓದು ಪೀಳಿಗೆಯಿಂದ ಪೀಳಿಗೆಗೆ ಸಾಗುವ ಪರಿ ಅನನ್ಯವಾದುದು. ಅದು ಭೀಕರ ಚಂಡಮಾರುತವಲ್ಲ. ಮೆಲ್ಲನೆ ಬೀಸುವ ಸುಳಿಗಾಳಿ. ಭೋರೆಂದು ಬೀಳುವ ಜಲಪಾತವಲ್ಲ. ನಿಧಾನ ನಿನಾದಗೈಯುತ ಹರಿವ ನದಿ. ಯಾವುದು ದಿಢೀರನೆ ಪರಿವರ್ತನೆಗೆ ಒಳಗಾಗುವುದಿಲ್ಲ. ಬರಹವೂ ಅಷ್ಟೇ. ಸಾವಿರಾರು ವರ್ಷಗಳ ತಪಸ್ಸಿನ ಶ್ರಮದ ಫಲ ಅದು. ನೂರಾರು ದ್ರಷ್ಟಾರರ ಮೂಲಕ ಸಾವಿರಾರು ಕಾವ್ಯ ಗದ್ಯ ಲಾಕ್ಷಣಿಕ ಬರಹಗಾರರ ಮೂಲಕ ಪುಟಗೊಂಡು ಬಂದಿದೆ. ಬರಹ ಬಲ್ಲವ ಬರೆಯುತ್ತಲೇ ಇರಬೇಕು. ಇದು ಒಂದು ರೀತಿ ಎರಡಲಗಿನ ಕತ್ತಿಯಂತೆ. ಬಳಸಿದಷ್ಟು ಮೊನಚು. ಬಳಸದಿದ್ದರೆ ತುಕ್ಕು. ಮತ್ತೊಂದು ದೃಷ್ಟಿಕೋನದಿ ಬಳಸಿದರೆ ಬಲವಾಗುವುದು ಇಲ್ಲದಿದ್ದರೆ ನಮ್ಮನ್ನೇ ದುರ್ಬಲವಾಗಿಸುವುದು. ಆವಾಹನೆ ಪಡೆಯುವುದು.

ಬರಹಕ್ಕೆ ಬದುಕಿದ ಮಹನೀಯರು ಬಹಳ. ಮುದ್ದಣ ಮೂವತ್ತು ವರ್ಷಗಳಷ್ಟರ ಆಯಸ್ಸಲ್ಲೇ ಕನ್ನಡ ಭಾಷೆಯ ಮುಂಗೋಳಿಯಾದ. ಪಾಶ್ಚಾತ್ಯ ಸಾಹಿತಿಗಳಲ್ಲಿ ಕೀಟ್ಸ್ ಯೇಟ್ಸ ಭೈರನ್ ಅಲ್ಪಾಯುಷಿಗಳೆ. ಅವರ ಸಾಹಿತ್ಯ ಸತ್ವ ಅಪಾರವಾದುದು. ಕಾವ್ಯದಲ್ಲು ಗದ್ಯದಲ್ಲು ಸೈ ಎನಿಸಿಕೊಂಡವರು ಕುವೆಂಪು ಮಾಸ್ತಿ ಅನಂತಮೂರ್ತಿ ಗೋಕಾಕರಿದ್ದಾರೆ. ದೇವನೂರು ಮಹದೇವರು ಕಾವ್ಯಾತ್ಮಕ ಗದ್ಯದ ಲಯದಲ್ಲಿ ಬರೆದು ಕೀರ್ತಿ ಪಡೆದಿದ್ದಾರೆ. ಬರಗೂರು ರಾಮಚಂದ್ರಪ್ಪ, ಎಸ್.ಜಿ.ಸಿದ್ಧರಾಮಯ್ಯ ಮುಂತಾದವರು ಕಾವ್ಯದ ಜೊತೆ ಕತೆ ಕಾದಂಬರಿಯಲ್ಲು ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಉಮೇಶ್ ಈ ನಿಟ್ಟಿನಲ್ಲಿ ಯೋಚಿಸುತ್ತ ಇನ್ನು ಆಳ ಅಧ್ಯಯನಗಳ ಮುಖೇನ ಹಾಗು ತನ್ನ ಅಗಾಧ ಹಳ್ಳಿ ಪರಿಸರದ ನಿತ್ಯ ಜೀವನಾನುಭವಗಳ ಮೂಲಕ ನಮಗೆ ಇನ್ನಷ್ಟು ಗದ್ಯ ಕೃತಿಗಳ ನೀಡುವಂತಾಗಲಿ.
ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುವ, ಸಂತೋಷಕ್ಕೆ ಸಂಭ್ರಮಿಸುವ, ಕೆಡುಕಿಗೆ ಮರುಗುವ, ಪ್ರಗತಿಪರ ಶಿಕ್ಷಣಕ್ಕೆ, ಭಾಷೆಯ ಭವಿಷ್ಯಕ್ಕೆ, ಒಳ್ಳೆಯ ಕಾವ್ಯಕ್ಕೆ ನಿರ್ಮಲವಾಗಿ ಮಿಡಿಯುವ ಸೂಕ್ಷ್ಮ ಮನಸೊಂದು ಇಲ್ಲಿನ ಎಲ್ಲ ಬರಹಗಳ ಹಿಂದಿದೆ. ಮಹಿಳಾಪರ ದನಿ, ಪರಿಸರದ ಬಗೆಗಿನ ಅಪೂರ್ವ ಕಾಳಜಿ, ಮುನ್ನೊಟಕ್ಕೆ ಒದಗಿ ಬರುವ ಚಿಂತನೆಯೂ ಇಲ್ಲಿದೆ. ಬುದ್ಧ, ಬಸವರ ತ್ಯಾಗ, ಅವರ ತಾತ್ವಿಕ ಆದರ್ಶದ ಅವಸಾನ ವಿಷಾದಭರಿತವಾಗಿ ಮೂಡಿ ಬಂದಿದೆ. ಇತಿಹಾಸ ಪ್ರಜ್ಞೆಯನ್ನೊಳಗೊಂಡು ಸಾಮಾಜಿಕ, ಮನೋವೈಜ್ಞಾನಿಕ ನೋಟವನ್ನೊಳಗೊಂಡಂತೆ ಇಲ್ಲಿನ ಚಿಂತನ ಕ್ರಮ ಚಲನಶೀಲವಾಗಿದೆ.
ಟಿ ಪಿ ಉಮೇಶ್ ಒಳ್ಳೆಯ ಕವಿಯಾಗಿ, ಮಾದರಿ ಶಿಕ್ಷಕರಾಗಿ, ಆ ಕಾರಣಕ್ಕೇ ರಾಷ್ಟ್ರಪ್ರಶಸ್ತಿಯನ್ನೂ ಪಡೆದು ಶೈಕ್ಷಣಿಕ ಜೀವಂತಿಕೆಯಲ್ಲಿ ಉಸಿರಾಡುವ ಜೀವಿ. ಆದುದರಿಂದಲೇ ‘ಅಳಿಗೊಂಡಿಹರೆಂದು ಅಂಜಲದೇಕೆ?’ ಲೇಖನ ಬರಹಗಳಿಗೆ ಅನುಭವದ ಲೇಪನವೂ ಇದ್ದು ಸಾಮಾಜಿಕ ಬೆಳವಣಿಗೆಯ ಮುನ್ನೋಟಕ್ಕೂ ಒದಗಿ ಬರುವಂತಿವೆ. ಅವರು ಕ್ರಿಯಾಶೀಲವಾಗಿ ಇನ್ನಷ್ಟು ದೃಢ ಹೆಜ್ಜೆಗಳನ್ನಿಡಲಿ ಎಂದು ಹಾರೈಸುವೆ.
- ಚಂದ್ರಶೇಖರ ತಾಳ್ಯ
