‘ಏಳು ಬೀಳು ನೀನೆ ಉಂಡು ತುಪ್ಪದನ್ನ ಉಣಿಸಿದೆ’…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿ ಬಂದ ಸುಂದರ ಸಾಲುಗಳಿವು, ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…
ಜನ್ಮದಾತೆ ಅನ್ನದಾತೆ
ಪೊರೆದ ನನ್ನ ಮಾತೆಯೆ
ಹಾಲನುಣಿಸಿ ಬೆಳಕನಿಳಿಸಿ
ಬೆಳೆಸಿದಂತ ತಾಯಿಯೆ
ನಡೆಯುವಾಗ ಬೀಳದಂತೆ
ಕೈಯ ಹಿಡಿದು ನಡೆಸಿದೆ
ನುಡಿಯುವಾಗ ತೊದಲದಂತೆ
ಮೊದಲ ಮಾತು ಕಲಿಸಿದೆ
ಏಳು ಬೀಳು ನೀನೆ ಉಂಡು
ತುಪ್ಪದನ್ನ ಉಣಿಸಿದೆ
ಕೇಳದೇನೆ ಕೂಳು ಕೊಟ್ಟು
ನನ್ನ ನೀನು ಬೆಳೆಸಿದೆ
ಹಟವ ಮಾಡುತಿರಲು ನಾನು
ಮುದ್ದು ಮಾಡಿ ಕರೆಯುವೆ
ಕೆನ್ನೆ ಸವರಿ ಅಳುವ ಮರೆಸಿ
ಪ್ರೀತಿಯಿಂದ ಬಳಸುವೆ
ಕ್ಷಣವು ನಾನು ಕಾಣದಿರಲು
ದುಃಖದಲ್ಲಿ ಮಿಡಿಯುವೆ
ಕಣವು ನೀನೆ ನನ್ನ ಒಳಗು
ದುಡಿದು ನಿನ್ನ ಸಾಕುವೆ
ಮುಪ್ಪು ನಿನಗೆ ಬಂದರೂನು
ಅಪ್ಪಿ ನಿನ್ನ ಸಲಹುವೆ
ಕಣ್ಣ ರೆಪ್ಪೆ ಬಳಸುವಂತೆ
ಸೇವೆಯಲ್ಲಿ ಬೆರೆಯುವೆ.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು), ಬೆಂಗಳೂರು