ರಜನಿ ಭಟ್ ಕಲ್ಮಡ್ಕ ಅವರ ‘ಸಂಧ್ಯಾದೀಪ’ ಕಾದಂಬರಿ ಚೊಚ್ಚಲ ಕಾದಂಬರಿಯಾಗಿದ್ದು, ಸಾಕಷ್ಟು ರೋಚಕತೆಯಿಂದ ತುಂಬಿದೆ. ಓದುಗರನ್ನು ಸೆಳೆದಿಡುವ ಶಕ್ತಿ ಈ ಪುಸ್ತಕದಲ್ಲಿದ್ದು, ಎಲ್ಲರೂ ಓದಬಹುದಾದಂತಹ ಪುಸ್ತಕ. ಪುಸ್ತಕದ ಕುರಿತು ನಾನು ಬರೆದ ನಾಲ್ಕು ಸಾಲುಗಳು ನಿಮ್ಮ ಮುಂದಿದೆ…
ಪುಸ್ತಕ : ಸಂಧ್ಯಾದೀಪ
ಲೇಖಕಿ : ರಜನಿ ಭಟ್ ಕಲ್ಮಡ್ಕ
ಪ್ರಕಾಶನ : ನಿಮ್ಮ ಪುಸ್ತಕ ಪ್ರಕಾಶನ
ಪುಟಗಳು : ೧೮೫
ಬೆಲೆ : ೧೭೦ ರೂಪಾಯಿ
ಲೇಖಕ ರಾಘವೇಂದ್ರ ಇನಾಂದಾರ್ ಅವರು ನನ್ನ ವಿಳಾಸ ಕೇಳಿದಾಗ ಯಾಕೆ ? ಏನು?ಎತ್ತ? ಏನನ್ನು ಕೇಳದೆ ನನ್ನ ವಿಳಾಸವನ್ನು ಕಳುಹಿಸಿದೆ. ಮುಂದೆ ನಾಲ್ಕು ದಿನದಲ್ಲಿ ನನ್ನ ಮನೆಗೊಂದು ಕೊರಿಯರ್ ಬಂತು, ಆ ಕವರ್ ನಲ್ಲಿ ಒಂದು ಕಾದಂಬರಿ ಪುಸ್ತಕವಿತ್ತು. ಕಪ್ಪು ಬಣ್ಣದ ಮೇಲೆ ಮಲೆನಾಡಿನ ಒಂದು ಸುಂದರವಾದ ದೇವಸ್ಥಾನ, ಅದರ ಕೆಳಗೆ ಒಂದು ನಂದಾ ದೀಪ ಚಿತ್ರ. ಜೊತೆಗೆ ಸಂಧ್ಯಾ ದೀಪ ಎನ್ನುವ ಕಾದಂಬರಿಯ ಹೆಸರು ಮತ್ತು ಲೇಖಕಿ ರಜನಿ ಭಟ್ ಕಲ್ಮಡ್ಕ ಅವರ ಹೆಸರಿತ್ತು. ಪುಸ್ತಕದ ವಿನ್ಯಾಸವೇ ಒಂದು ರೀತಿಯ ಕುತೂಹಲವನ್ನು ಹುಟ್ಟಿಸಿತು ಮತ್ತು ಮಲೆನಾಡಿನಲ್ಲಿ ಹುಟ್ಟುವ ಕತೆಯೆಂದು ನಾನು ಊಹಿಸಿದೆ. ಅದರಂತೆ ಮಲೆನಾಡಿನ ಕತೆಯೇ ಆಗಿತ್ತು.
ಪುಸ್ತಕ ಓದುವ ಮೊದಲು ಎಲ್ಲರ ಮುಂದೆ ನನ್ನ ಅಭಿಪ್ರಾಯವನ್ನು ತಪ್ಪದೆ ಹಂಚಿಕೊಳ್ಳುವೆ, ಆದರೆ ತಡವಾಗಬಹುದು ಎಂದು ಹೇಳಿಕೊಂಡಿದ್ದೆ, ಅದರಂತೆ ಅಭಿಪ್ರಾಯ ಹಂಚಿಕೊಳ್ಳಲು ತಡವಾಯಿತು ನಿಜ, ಆದರೆ ಪುಸ್ತಕವನ್ನು ಓದಲು ತಡಮಾಡಲಿಲ್ಲ. ಅಷ್ಟು ಸುಲಲಿತವಾಗಿ ಕತೆ ಓದಿಸಿಕೊಂಡು ಹೋಯಿತು. ಕತೆ ಓದುತ್ತಾ ಹೋದಂತೆ ಲೇಖಕಿ ರಜನಿಯವರ ತಲೆಯಲ್ಲಿ ಎಷ್ಟೆಲ್ಲಾ ವಿಚಾರಗಳು ಹರಿದಾಡಿವೆಯಲ್ಲ ಎನ್ನುವುದು ಕೂಡಾ ಆಶ್ಚರ್ಯವೂ ಆಯಿತು.
ಕತೆ ಶುರುವಾಗುವುದೇ ಶಾಲೆಯ ಒಂದು ವಿಚಿತ್ರ ಘಟನೆಯಿಂದ, ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಕಾಮತ್ ರು ಜವಾನ ಅಯ್ಯಪ್ಪನಿಗೆ ಏಳನೆಯ ತರಗತಿ ಬಾಗಿಲನ್ನು ತಪ್ಪದೆ ಬೀಗ ಜಡಿಯುವಂತೆ ಆಜ್ಞೆ ನೀಡಿರುತ್ತಾರೆ. ಅದರಂತೆ ಜವಾನ ಪ್ರತಿನಿತ್ಯ ಬೀಗ ಹಾಕುತ್ತಿರುತ್ತಾನೆ, ಆದರೆ ಮರುದಿನವೆಂದರೆ ಆ ತರಗತಿಯ ಬಾಗಿಲು ತೆರೆದೇ ಇರುತ್ತದೆ, ಅದು ಯಾರು ತಗೆಯುತ್ತಾರೆ? ಎನ್ನುವ ನಿಗೂಢತೆಯನ್ನು ಕಾದಂಬರಿಯ ಕೊನೆಯಲ್ಲಿ ಲೇಖಕಿ ಹೇಳುತ್ತಾರೆ. ಕುತೂಹಲದಿಂದ ಕಾದಂಬರಿ ಪುಟವನ್ನು ತಿರುವುತ್ತಾ ಹೋದಾಗ ಓದುಗರಿಗೆ ಪರಿಚಯವಾಗುವುದೇ ಕಾದಂಬರಿಯ ಕಥಾನಾಯಕಿ ಶಾಂಭವಿ. ಶಾಂಭವಿಯು ಶ್ರೀನಿವಾಸ್ ಅವರ ಮಡದಿ ಮತ್ತು ಶಿಕ್ಷಕಿ. ಇವರ ಜೊತೆ ಹಿರಿ ಜೀವ ಶ್ರೀನಿವಾಸ್ ಅವರ ತಾಯಿ ರುಕ್ಮಿಣಿ ಕೂಡಾ ಇರುತ್ತಾರೆ. ಕತೆ ಮುಖ್ಯವಾಗಿ ಶಾಂಭವಿಯ ಸುತ್ತಲೂ ಹೋಗುತ್ತದೆ. ಅತ್ತೆಗೆ ಆಗಾಗ ಒಂದು ರೀತಿಯ ಕೆರೆತ, ಅದು ಸಾಮಾನ್ಯವಾದ ಕೆರೆತವಲ್ಲ ಹಳೆಯ ನೆನೆಪಿನ ಕೆರೆತ, ಅದನ್ನು ಮಗ ಶ್ರೀನಿವಾಸ್ ರೇ ಬಗೆಹರಿಸಬೇಕು.ಅಮ್ಮ ಮಗನ ಮಧ್ಯೆ ನಿಗೂಢ ರಹಸ್ಯವಿದೆ.
ಮನೆಯ ಉಪ್ಪರಿಗೆಯಲ್ಲಿ ಶಾಂಭವಿಗೆ ಕಂಡ ಬೆಳಕು ಶಾಲೆಯಲ್ಲಿಯಲ್ಲೂ ಕಾಣಿಸುತ್ತದೆ, ಆ ಬೆಳಕಿನ ಹಿಂದೆ ಕಂಡವಳು ಯಾರು? ಮತ್ತೊಂದು ಕೌತುಕ. ಈ ಚಕ್ರವ್ಯೂಹವನ್ನು ಬೇಧಿಸಲು ಮಗ ಮನೋಜ್ ನ ಆಗಮನವಾಗುತ್ತದೆ.
ಆನಂದ ಭಟ್ಟರು, ಅಜ್ಜ ನರಸಿಂಹ ಕಾಮತ್, ಶ್ರೀಲತಾ, ಸಂಧ್ಯಾ ಹೀಗೆ ಒಂದೊಂದಾಗಿ ಪಾತ್ರಗಳು ಅನಾವರಣಗೊಳ್ಳುತ್ತಾ ಹೋಗುತ್ತದೆ. ಕತೆಯ ಕೊನೆಯವರೆಗೂ ‘ಸಂಧ್ಯಾ ದೀಪ’ ಹೆಸರಿನ ಸುತ್ತ ಕುತೂಹಲವನ್ನು ಕಾಯ್ದುಕೊಳ್ಳುವಲ್ಲಿ ಲೇಖಕಿ ರಜನಿಯವರು ಯಶಸ್ವಿಯಾಗಿದ್ದಾರೆ.
ಕಾದಂಬರಿ ಓದುವಾಗ ಪಾತ್ರಗಳು ನಮ್ಮನ್ನು ಆವರಿಸಿಕೊಳ್ಳುತ್ತದೆ. ಮಲೆನಾಡನ್ನು ಸುತ್ತಿ ಬಂದ ಅನುಭವ, ರಾತ್ರಿಯ ಹೊತ್ತು ಓದುವಾಗ ಮನೆಯ ಕಿಟಕಿ ಬಾಗಿಲು ಸದ್ದಾದರೂ ಮನಸ್ಸು ಸೂಕ್ಷ್ಮವಾಗಿ ಬೆಚ್ಚಿ ಬೀಳುತ್ತದೆ. ಪತ್ತೇದಾರಿ, ಕುತೂಹಲ, ಪ್ರೀತಿ, ಸಿಟ್ಟು, ಮತ್ಸರ ಎಲ್ಲವನ್ನು ಕತೆಯಲ್ಲಿ ಚೆನ್ನಾಗಿ ಹೆಣೆದಿದ್ದಾರೆ.
ಇದು ರಜನಿ ಭಟ್ ಕಲ್ಮಡ್ಕ ಅವರು ಚೊಚ್ಚಲ ಕಾದಂಬರಿಯಾಗಿದ್ದು, ಮೊದಲ ಪ್ರಯತ್ನದಲ್ಲಿಯೇ ಕಾದಂಬರಿಯನ್ನು ರಹಸ್ಯಭರಿತವಾಗಿ ಬರೆದದ್ದು ಅವರ ಸಾಹಸವೇ. ಭವಿಷ್ಯತ್ತಿನಲ್ಲಿ ಭರವಸೆಯ ಕಾದಂಬರಿಗಾರ್ತಿಯಾಗಿ ನಿಲ್ಲುವಲ್ಲಿ ಎಲ್ಲಿಯೂ ಅವರು ಎಡುವಿಲ್ಲ.
ರಜನಿ ಭಟ್ ಕಲ್ಮಡ್ಕ ಅವರಿಂದ ಇನ್ನಷ್ಟು ಕತೆ, ಕಾದಂಬರಿಗಳು ಹೊರಬರಲಿ ಎಂದು ಆಕೃತಿಕನ್ನಡದಿಂದ ಶುಭ ಹಾರೈಸುತ್ತೇನೆ…
- ಶಾಲಿನಿ ಹೂಲಿ ಪ್ರದೀಪ್