ಅಮ್ಮನಿಗಾಗಿ ವೀಲ್ ಚೇರ್ ಬಂದಿತ್ತು…?

ಲವಲವಿಕೆಯಿಂದ ಇದ್ದ ಅಮ್ಮ, ವೀಲ್ ಚೇರ್ ನಲ್ಲಿ ಇನ್ನಷ್ಟು ದಿವಸ ನಮ್ಮೊಂದಿಗೆ ಇರುತ್ತಾಳೆ ಎಂದು ಭಾವಿಸಿದ್ದೆ. ಆದರೆ ಅಂದು ಆಗಿದ್ದೆ ಬೇರೆ, ಅದು…ಅದು…ಮುಂದೆ ಓದಿ, ಯಾಕೂಬ್ ಖಾದರ್ ಗುಲ್ವಾಡಿ ಅವರು ಅಮ್ಮನ ಮೇಲೆ ಬರೆದ ಭಾವುಕ ಲೇಖನ.

ಅಮ್ಮ ಇನ್ನು ನನ್ನನ್ನು ಯಾವತ್ತೂ ಕೂಗಲಾರರು ಅಂತ ಒಪ್ಪಿಕೊಳ್ಳಲಾಗುತ್ತಿಲ್ಲ. ಫಾತಿಮ ಬೆಳಿಗ್ಗೆ ಫೋನ್ ಮಾಡಿ ಅಮ್ಮನಿಗೆ ತುಂಬ ಹುಷಾರಿಲ್ಲ ನೀವು ಊರಿಗೆ ವಾಪಸ್ ಬಂದು ಬಿಡಿ ಎಂದಿದ್ದಳು. ನಾನು ಅಗತ್ಯ ಕೆಲಸದ ನಿಮಿತ್ತ ಆಗಷ್ಟೇ ಬೆಂಗಳೂರಿಗೆ ತಲುಪಿದ್ದೆ. ಆ ಇಡಿ ದಿನ ಬೆಳಿಗ್ಗೆಯಿಂದ ಸಂಜೆ ತನಕ ಮೆಜೆಸ್ಟಿಕ್ ನ ಹೊಟೇಲ್ ಅಡೋರದ ಕೊಠಡಿಯೊಂದರಲ್ಲಿ ಒತ್ತಡದಿಂದ ಒದ್ದಾಡುತ್ತಿದ್ದೆ. ಕಾರಣ ಊರಿಗೆ ಹೋಗಲು ಬೆಳಿಗ್ಗೆ ಬಸ್ಸಿನ ವ್ಯವಸ್ಥೆ ಇಲ್ಲ ಹಾಗಾಗಿ ರಾತ್ರಿ 10 ಗಂಟೆಯ ಬಸ್ಸಿಗೆ ಹೋಗುವವನಿದ್ದೆ. ಈ ಮಧ್ಯೆ ಅಮೇರಿಕಾದಿಂದ ಬಂದಿದ್ದ ಆತ್ಮೀಯರಾದ ಡಾ. ಹಳೆಕೋಟೆ ವಿಶ್ವಾಮಿತ್ರ ಅವರು ಬೆಂಗಳೂರಿನಲ್ಲಿರುವ ವಿಷಯ ತಿಳಿದು ಅವರನ್ನು ಭೇಟಿ ಮಾಡಿ ಒಂದಷ್ಟು ಸಮಯ ಕಳೆದುದರಿಂದ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ರಾತ್ರಿ 10 ಗಂಟೆಗೆ ಮೆಜಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್‌ ಎರಡರಲ್ಲಿ ಬಸ್ಸು ಹತ್ತಿ ಕುಳಿತವನಿಗೆ ಮನಸ್ಸಿನ ಆಲೋಚನೆಗಳು ಹಿಡಿತಕ್ಕೆ ಸಿಗಲೇ ಇಲ್ಲ. ಕಳೆದ ಏಳೆಂಟು ತಿಂಗಳಿಂದ ಅಮ್ಮನಿಗೆ ಹುಷಾರಿಲ್ಲದ ಸಮಯದಲ್ಲೆಲ್ಲ ನನಗೆ ತಕ್ಷಣಕ್ಕೆ ರಕ್ತದೊತ್ತಡ ಮತ್ತು ನನ್ನ ಡಿಫ್ರೇಶ್ಯನ್ನು ಎರಡು ಹಳಿ ತಪ್ಪುತ್ತಿತ್ತು. ಸಹಜ ಸ್ಥಿತಿಗೆ ತರಲು ಬಹಳಷ್ಟು ಒದ್ದಾಡುತ್ತಿದ್ದೆ. Usual tactics ಬಳಸಿ ಅದನ್ನು ಓಡಿಸಲು ಪ್ರಯತ್ನಿಸುತ್ತಿದ್ದೆ. ಏನೇ ಆದರು ಮನಸ್ಸು ಮಾತ್ರ ತನ್ನ ಡಿಫ್ರೆಶ್ಯನ್ ನ ಡೆಪ್ತ್ ಗಳಿಂದ ಹೊರಬರುತ್ತಿರಲಿಲ್ಲ. ಹಾಗಾಗಿ ಗೆಳೆಯರಾದ ಡಾ.ಪ್ರಕಾಶ ತೊಳಾರ್ ಅವರಿಗೆ ಫೋನ್ ಮಾಡಿ ಸ್ವಲ್ಪ ಮಟ್ಟಿನ ಪರಿಹಾರ ಕಂಡುಕೊಳ್ಳುತ್ತಿದ್ದೆ. ಈ ತರಹದ ಒತ್ತಡದಲ್ಲಿರುವಾಗ ಮನಸ್ಸಿನಲ್ಲಿ ನೂರೆಂಟು ಆಲೋಚನೆಗಳು ಓಡಾಡುವುದು ಸಹಜ. ಜೊತೆಗೆ ಪದೆ ಪದೇ ಎದೆ ಬಡಿತ ಅದಕ್ಕಾಗಿ ನೀರು ಕುಡಿಯುತ್ತಿದ್ದೆ. ಬಸ್ಸು ಹತ್ತಿದ ನಂತರ ರಾತ್ರಿ 12.30 ರ ಒಳಗೆ ಫಾತಿಮಾಳಿಂದ ಅರ್ಧ ಗಂಟೆಗೊಮ್ಮೆ ಫೋನ್ ಬರುತ್ತಿತ್ತು ? ಸಮಾಧಾನಿಸುತ್ತಿದ್ದಳು, ಧೈರ್ಯ ತುಂಬುತ್ತಿದ್ದಳು ಜೊತೆಗೆ ಅಮ್ಮನ ಒದ್ದಾಟ, ನರಳಾಟ ಕೂಡ ಹೇಳುತ್ತಿದ್ದಳು. 12.45 ಕ್ಕೆ ಅಣ್ಣ ಫೋನ್ ಮಾಡಿ ಅಮ್ಮ ನಮ್ಮನ್ನೆಲ್ಲ ಬಿಟ್ಟು ಹೋದರು ಅಂದ…!?

ಆ ರಾತ್ರಿ ಬಸ್ಸಿನ ನನ್ನ ಪಕ್ಕದ ಸಿಟಿನಲ್ಲಿ ಯಾರೂ ಇರಲಿಲ್ಲ ನಾನೊಬ್ಬನೆ ಕುಳಿತಿದ್ದೆ. ಪಕ್ಕದಲ್ಲಿರುವ ಯಾರಿಗೂ ಕೇಳಿಸದ ಹಾಗೆ ಬರುವ ದು:ಖ ವನ್ನು ಒತ್ತಿ ಹಿಡಿದು ಒಂದೇ ಸಮನೆ ಅತ್ತು ಬಿಟ್ಟೆ ರಾತ್ರಿ ಎಷ್ಟು ಹೊತ್ತೊ ಗೊತ್ತಿಲ್ಲ ಅಳುತ್ತಲೆ ಇದ್ದೆ. ಬಸ್ಸಿನ ಗಾಜಿನ ಕಿಟಕಿಯಿಂದ ಆ ರಾತ್ರಿಯ ಕತ್ತಲನ್ನು ಇಣುಕಿ ನೋಡಲು ಭಯ. ಅಮ್ಮ ತನ್ನ ಬದುಕಿನ 87 ವರ್ಷಗಳನ್ನು ತುಂಬ ಸಾಹಸಮಯವಾಗಿ ಕಷ್ಟದಿಂದ ಕಳೆದಿದ್ದರು.

ಅಮ್ಮನಿಗೆ ಆಸೆ ಅಂತ ಇದ್ದದ್ದು ಪವಿತ್ರ” ಹಜ್ ” ಯಾತ್ರೆ ಮಾಡಬೇಕನ್ನುವುದು ಅದಕ್ಕಾಗಿ ಅಣ್ಣ ತಯಾರಿ ಕೂಡ ಮಾಡಿಕೊಂಡಿದ್ದ ಆದರೆ ಈ ಕೊರೋನ ಅದಕ್ಕೆ ಬಿಡಲಿಲ್ಲ. ಆದರೆ 2018 ರಲ್ಲಿ ನಾನು ಅಮ್ಮ ಮತ್ತು ಹೆಂಡತಿ ಪವಿತ್ರ” ಉಮ್ರ” ಯಾತ್ರೆಯಲ್ಲಿ ಮೆಕ್ಕ ಮದೀನಕ್ಕೆ ಹೋಗಿದ್ದೆವು. ಅದಕ್ಕೂ ಮೂರು ವರ್ಷ ಮೊದಲು ಅಮ್ಮ ನಮ್ಮ ಸಂಬಂಧಿಕರ ಜೊತೆಗೆ ಉಮ್ರ ಯಾತ್ರೆ ಅಲ್ಲದೆ ಅಜ್ಮೀರ್ ದರ್ಗಾ ಕ್ಕೂ ಹೋಗಿ ಬಂದಿದ್ದರು.

ಮಕ್ಕಳೆಂದರೆ ಅಮ್ಮನಿಗೆ ತುಂಬಾ ಪ್ರೀತಿ ಆದರೂ ಅವರ ಆರು ಮಕ್ಕಳಲ್ಲಿ ಕೊನೆಯ ಮಗನಾದ ನನಗಾದರು ವಿದ್ಯಾಭ್ಯಾಸ ಕೊಡಿಸಬೇಕು ಅನ್ನೋದು ಅಮ್ಮ ಮತ್ತು ಅಪ್ಪನ ಕನಸಾಗಿತ್ತು ಆದರೇ ಕಿತ್ತು ತಿನ್ನುವ ನಮ್ಮ ಬಡತನದ ಮುಂದೆ ನನ್ನ ವಿದ್ಯಾಭ್ಯಾಸವು ಕೇವಲ ಪ್ರಾಥಮಿಕ ವಿದ್ಯಾಭ್ಯಾಸಕಷ್ಟೆ ಸೀಮಿತವಾಯಿತು.

ಅಮ್ಮ ನಮ್ಮನ್ನು ಸಾಕಲು ಪಟ್ಟ ಕಷ್ಟದ ಪ್ರತಿ ಕ್ಷಣವು ನನಗೆ ನೆನಪಿದೆ. ಅಮ್ಮ ಪ್ರತಿ ದಿನ ಬೆಳಗಿನ ಜಾವದ  “ಸುಬುಹಿ ನಮಾಝ್ ” ನ ನಂತರ ನನ್ನೊಂದಿಗೆ ಒಂದಷ್ಟು ಹೊತ್ತು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದರು. ಬತ್ತ ಬೆಳೆಯಲು ನಮ್ಮದು ಅಂತ ಸ್ವಂತ ಜಾಗ ಅಂತ ಇದ್ದದ್ದು ಬಹಳ ಕಡಿಮೆ ಹಾಗಾಗಿ ಬೇರೆಯವರ ಭೂಮಿಯಲ್ಲಿ ಗೇಣಿ ಕೊಟ್ಟು ಬತ್ತ ಬೆಳೆಯುತ್ತಿದ್ದೆವು. ಅಲ್ಲದೆ ಊಟಕ್ಕೆ ಎಷ್ಟು ಕಷ್ಟ ಎಂದರೆ ಬತ್ತದ ಗದ್ದೆಯಲ್ಲಿ ಕೊಯ್ಲು ಆದ ನಂತರ ಉಳಿದ ಕದ್ರ್  (ಬತ್ತದೆ ತೆನೆ ) ಮತ್ತು ಗೆಣಸಿನ ಬೇರು ಬೇಯಿಸಿ ಕೊಡುತ್ತಿದ್ದರಂತೆ.

ನಮ್ಮದು ಬತ್ತದ ಕೃಷಿಯ ಜೊತೆಗೆ ಹುರಿ ಹಗ್ಗ ತಯಾರಿಸುವ ಕುಟುಂಬ. ಅಪ್ಪ ಮತ್ತು ಅಮ್ಮ ತೆಂಗಿನ ಕಾಯಿಯ ಸಿಪ್ಪೆ ಸುಳಿದು ನಮ್ಮೂರಿನ ” ಕುಬ್ಜ” ನದಿಯ ಕೆಸರಲ್ಲಿ ಅದನ್ನು ನೆನಸಿಟ್ಟು ಅದು ಕೊಳೆತ ನಂತರ ಅದರ ಸಿಪ್ಪೆಯನ್ನು ಸುಳಿದು (ಮರದ ರಾಟೆ) ಯ ಮೂಲಕ ಹುರಿ ಹಗ್ಗ ಮಾಡುತ್ತಿದ್ದರು ಬಾವಿಯ ಹಗ್ಗ, ಕೈಯಲ್ ಬಳ್ಳಿ ,ದಾಂಬು , ಮುಂತಾದ ವಸ್ತುಗಳನ್ನು ಮಾಡಿ ಹಳ್ಳಿಗಳಿಗೆ ಮತ್ತು ಕುಂದಾಪುರ ಸಂತೆಗೆ ಹೋಗಿ ಅಪ್ಪ ಮಾರಿ ಬರುತ್ತಿದ್ದರು ಅಮ್ಮ ಅದಕ್ಕೆ ಸಹಾಯ ಮಾಡುತ್ತಿದ್ದರು. ಅದರಲ್ಲಿ ಬಂದ ಹಣವೇ ನಮ್ಮ ಕುಟುಂಬದ ಮೂಲ ಆದಾಯವಾಗಿತ್ತು. ಅವರ ಬದುಕಿನ ಪ್ರತಿ ಕ್ಷಣದ ಕಷ್ಟವು ನನ್ನ ಬದುಕಿಗೆ ಪ್ರೇರಣೆಯಾಗಿದೆ.

ಅಮ್ಮ ಈ 87 ವರ್ಷಗಳಲ್ಲಿ ಯಾವುದೇ ರೀತಿಯ ಕಾಯಿಲೆಯಿಂದ ಒದ್ದಾಡಿದ್ದು ನಾ ನೋಡಿಲ್ಲ. 12 ವರ್ಷಗಳಿಂದ ಅಧಿಕ ರಕ್ತದೊತ್ತಡಕ್ಕಾಗಿ amlodac 5 ಮಾತ್ರೆಯೊಂದಿತ್ತು. 8 ತಿಂಗಳ ಹಿಂದೆ ಹೆಮ್ಮಾಡಿಯ ಅಮ್ಮನ ಮೂಲ ಮನೆಗೆ ಹೋಗಿದ್ದಾಗ ಬೆಳಗ್ಗಿನ ಜಾವ ತಲೆ ನೋವು ಕಾಣಿಸಿಕೊಂಡದ್ದು ನೆಪ ಅಷ್ಟೆ. ಕುಂದಾಪುರದ ಪರಿಚಯದ ವೈದ್ಯರಿಗೆ ತೋರಿಸಿ ಕೆಲವು ಸ್ಕ್ಯಾನಿಂಗ್ ಮಾಡಿದಾಗ ವರ್ಷದ ಕಾರಣಕ್ಕೆ ಕೆಲವು ಮಾಮೂಲಿ ತೊಂದರೆಯಿದೆ ಯಾವುದೆ ಕಾರಣಕ್ಕೂ ಒಬ್ಬರನ್ನು ಓಡಾಡಲು ಬಿಡಬೇಡಿ ಎಂದಿದ್ದರು.

ಒಂದು ವೇಳೆ ಬಿದ್ದಲ್ಲಿ ಸೈಡ್ ಎಫೆಕ್ಟ್ ಆಗುವ ಸಂಭವ ಹೆಚ್ಚು ಎಂದಿದ್ದರು. ಬೆಳಗ್ಗೆ ನಾನು ತಿಂಡಿ ತಿನ್ನುವಾಗ ಅಮ್ಮ ನನ್ನ ಹತ್ತಿರ ಬಂದು ಕೂರೂವುದು ವಾಡಿಕೆ ಆದರೆ ಆ ದಿನ ಪ್ಲಾಸ್ಟಿಕ್ ಕುರ್ಚಿ ಎಳೆಯುವಾಗ ಮುಗ್ಗರಿಸಿದರು ” ದೇವರ ದಯೆ” ಅಲ್ಲೆ ಇದ್ದ ನಾನು ನೆಲಕ್ಕೆ ಬೀಲದ ಹಾಗೆ ನೋಡಿಕೊಂಡೆ ಆದರೆ ಆ ದಿನ ಅಮ್ಮ ಮಾಡಿದ್ದು ನೋಡಿದರೆ ? ಹಾಗಾಗಿ ಮುಂದೆ ನಾವು ಜಾಗ್ರತೆ ವಹಿಸಿದ್ದೆವು. ಆದರು ಈ ಏಳೆಂಟು ತಿಂಗಳಲ್ಲಿ ಅನೇಕ ಸಲ ತಲೆ ಸುತ್ತು ಬಂದು ಅಮ್ಮ ಬಿದ್ದಾಗ ನಾವು ಯಾರಾದರೂ ಪಕ್ಕದಲ್ಲೆ ಇರುತ್ತಿದ್ದೆವು.

ಮೊನ್ನೆ ನಾನು ಬೆಂಗಳೂರಿಗೆ ಹೋಗುವ ಎರಡು ದಿನ ಮೊದಲು 8 ದಿನ ಕುಂದಾಪುರದ ಮಿತ್ರ ವೈದ್ಯರಾದ ಡಾ. ಆದರ್ಶ ಹೆಬ್ಬಾರ ಅವರ ಆಸ್ಪತ್ರೆಯಲ್ಲಿದ್ದ ಅಮ್ಮನನ್ನು ಡಿಸ್‌ಚಾರ್ಜ್ ಮಾಡಿ ಹೋಗಿದ್ದೆ ? ಯಾವ ಕಾರಣಕ್ಕೊ ಏನೊ ಬೆಂಗಳೂರಿಗೆ ಹೊರಡುವ ವಿಷಯ ಅಮ್ಮನಿಗೆ ಹೇಳಿರಲಿಲ್ಲ. ಆದರೆ ಹೊರಡುವ ಮೊದಲು ಅಮ್ಮನನ್ನು ತುಂಬಾ ಹೊತ್ತು ದಿಟ್ಟಿಸಿ ನೋಡಿದ್ದೆ, ಕೆನ್ನೆ ಸವರಿದ್ದೆ, ಹಣಿಗೆ ಮುತ್ತಿಕ್ಕಿದ್ದೆ . ವೈದ್ಯರ ಸಲಹೆಯಂತೆ ಆಸ್ಪತ್ರೆಯಿಂದ ಬಂದ ಅಮ್ಮನಿಗೆ ಮನೆಯಲ್ಲಿ ನಡೆದಾಡಲು ಕಷ್ಟ ಆಗುತ್ತದೆ ಎಂಬ ಕಾರಣಕ್ಕೆ ಆತ್ಮೀಯರಾದ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಅವರಲ್ಲಿ ಒಂದು ವೀಲ್ ಚೇರ್ ಗಾಗಿ ಮನವಿ ಮಾಡಿದ್ದೆ . ಹಾಗಾಗಿ ಜುಲೈ 16 ರಂದು ಕುಂದಾಪುರದ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಯಕರ ಶೆಟ್ರು ಫೋನ್ ಮಾಡಿ ನಿಮ್ಮ ಅಮ್ಮನಿಗೆ ವೀಲ್ ಚೇರ್ ರೆಡಿ ಇದೆ ಎಂದರು!.

ವಿಪರ್ಯಾಸವೆಂದರೆ ವೀಲ್ ಚೇರ್ ನಲ್ಲಿ ಕೂತು ಲವಲವಿಕೆಯಿಂದ ಓಡಾಡ ಬೇಕಿದ್ಧ ಅಮ್ಮ ಒಂದು ದಿನ ಮೊದಲೇ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರು. ನಿಜಕ್ಕೂ ಅಮ್ಮ ನನ್ನೊಂದಿಗೆ ಮಾತಾಡದೆ, ನನಗೆ ಹೇಳದೆ ಹೋಗುವುದಿಲ್ಲ ಅಂದುಕೊಂಡಿದ್ದೆ. ಈಗ ಅಮ್ಮ ನಮ್ಮೊಂದಿಗಿಲ್ಲ. ಸಾವು ಅಂತಿಮ ವಾದುದ್ದೆ ಅದು ಸತ್ಯವು ಹೌದು. ನಿನ್ನೆ ಮಳೆಯ ಕಾರಣಕ್ಕೆ ಮನೆಯಲ್ಲಿ ಒಬ್ಬನೆ ಮಲಗಿದ್ದಾಗ ಮುಟ್ಟಿ ಎಬ್ಬಿಸಿತ್ತು ದು:ಖ.

ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ… ಎಷ್ಟು ಹೊತ್ತೊ ಗೊತ್ತಿಲ್ಲ……

ಈಗ ಮನೆಯ ಪ್ರತಿ ಮೂಲೆಯು ಅಮ್ಮನನ್ನು ನೆನಪಿಸುತ್ತದೆ.


  • ಯಾಕೂಬ್ ಖಾದರ್ ಗುಲ್ವಾಡಿ (ಹಲವಾರು ವರ್ಷಗಳಿಂದ ಕನ್ನಡ ಸಾಹಿತ್ಯ, ಸಿನಿಮಾ, ಸಂಸ್ಕೃತಿ, ಭಾಷೆ, ಬರವಣಿಗೆ, ಸಮಾಜ ಸೇವೆ, ಅಭಿನಯ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು. ಬರೆದ ಕೃತಿಗಳು ಅಂಡಮಾನ್ ಮತ್ತು ಸುನಾಮಿ, ನನ್ನ ಫಾರೀನ್ ಟೂಟಿಂಗ್ ಟಾಕೀಸ್. ‘ಆ 90 ದಿನಗಳು” ಎಂಬ ಸಿನಿಮಾ ನಿರ್ದೇಶನ ಮಾಡಿದ್ದು, ಹಲವಾರು ಸಾಕ್ಷ್ಯ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW