‘ಅಂತರಪಟ’ ಪುಸ್ತಕ ಪರಿಚಯ

‘ಅಂತರಪಟ’ ಉದಯೋನ್ಮುಖ ಲೇಖಕಿ ಉಷಾ ರವಿ ( ಜ್ಞಾನ ಧಾರೆ ) ವಿರಚಿತ ಚೊಚ್ಚಲ ಕೃತಿ. ಕೃತಿಯಲ್ಲಿ ಸರಳ ಭಾಷೆ ಜೊತೆಗೆ ಅಲ್ಲಲ್ಲಿ ಪ್ರಾದೇಶಿಕ ಹಳ್ಳಿ ಭಾಷಾ ಶೈಲಿಯ ಸೊಗಡಿದೆ. ಲೇಖಕಿ ಪಾರ್ವತಿ ಜಗದೀಶ್ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ,ತಪ್ಪದೆ ಮುಂದೆ ಓದಿ…

ಸಾಮಾನ್ಯವಾಗಿ ಪುಸ್ತಕ ಹೊರನೋಟಕ್ಕೆ ಸಂಪೂರ್ಣ ಅರ್ಥವಾಗಲಾರದು.ಯಾವ ಪುಸ್ತಕವೇ ಇರಲಿ ಅದರಲ್ಲಿರುವ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿದಾಗಲೇ ಅದರ ಬಗ್ಗೆ ಅರಿವಾಗುತ್ತೆ. ಓದುವಾಗ ಅದರಲ್ಲಿ ಕೆಲವು ಸಂತೋಷದ, ನೋವಿನ ಘಟನೆಗಳು ಕಾಣಬಹುದು ಆಗ ನಾವು ಹೇಗೆ ಸ್ಪಂದಿಸಬೇಕು?ಇದಕ್ಕೆ ನಮ್ಮ ಭಾರತೀಯ ಚಿಂತನೆಯಲ್ಲಿ ಸಾಕ್ಷೀಭಾವ ಎನ್ನುತ್ತಾರೆ. ಬದುಕಿನಲ್ಲಿ ನಡೆಯುವ ಘಟನೆಗಳಿಂದ ನಮ್ಮನ್ನು ಪ್ರತ್ಯೇಕಿಸಿಕೊಂಡು, ಅವುಗಳನ್ನು ಸಾಕ್ಷಿಯಂತೆ ನೋಡತೊಡಗಿದರೆ, ಅವು ನಮ್ಮ ಮೇಲೆ ಅತಿಯಾದ ಪರಿಣಾಮಗಳನ್ನು ಮಾಡಲಾರವು. ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಭಾವೋದ್ವೇಗಗಳು ಬರುತ್ತವೆ. ಅವುಗಳೊಡನೆ ನಾವು ತಾದಾತ್ಮ್ಯ ಹೊಂದಿದಾಗ ಅವು ಮತ್ತಷ್ಟು ಪ್ರಬಲವಾಗುತ್ತವೆ.

ನಮ್ಮಲ್ಲಿ ಯಾವಾಗ ಎಂತೆಂಥ ಆಲೋಚನೆಗಳು ಬರುತ್ತವೆ, ಯಾವ ಭಾವವಿಕಾರಗಳು ಏಳುತ್ತವೆ ಎಂಬುದರ ಅರಿವೇ ಇರುವುದಿಲ್ಲ. ಭಾವಪ್ರವಾಹದಲ್ಲಿ ಇರುವವರೆಗೆ ನಮಗೆ ಪ್ರವಾಹದ ದಿಶೆ, ವೇಗ ತಿಳಿಯಲಾರದು. ಪ್ರವಾಹದಿಂದ ಹೊರಗೆ ಬಂದು ನಿಂತಾಗ, ಅದರ ಗತಿಯನ್ನು ನೋಡುವುದರೊಂದಿಗೆ, ಅದರ ಪರಿಣಾಮದಿಂದ ತಪ್ಪಿಸಿಕೊಳ್ಳಬಹುದು. ಇದೇ ಸಾಕ್ಷೀಭಾವ. ನಾವು ಘಟನೆಗಳಲ್ಲಿ ಪಾತ್ರವಾಗದೆ, ಸಾಕ್ಷಿಯಂತೆ ನಿಂತು ನೋಡಿದಾಗ ಮನಸ್ಸಿನ ತೊಳಲಾಟ ಕಡಿಮೆಯಾಗಿ ಅದು ಶಾಂತವಾಗುತ್ತದೆ. ಹೀಗೆ ನನ್ನ ಬದುಕಿನ ಕೆಲವು ಘಟನೆಗಳನ್ನು ಪುಸ್ತಕ ಓದಿನೊಂದಿಗೆ ಸಮೀಕರಿಸಲು ಪ್ರಯತ್ನ ಮಾಡಿ,ಪಾತ್ರಗಳೊಂದಿಗೆ ಸಾಕ್ಷಿ ಭಾವದಲ್ಲೇ ಓದಿನ ಕೃತಿ ಅಂತರಪಟ.

‘ಅಂತರಪಟ’ ಉದಯೋನ್ಮುಖ ಲೇಖಕಿ ಉಷಾ ರವಿ ( ಜ್ಞಾನ ಧಾರೆ ) ವಿರಚಿತ ಚೊಚ್ಚಲ ಕೃತಿ. ಇದೊಂದು ಸರಳ ಕೌಟುಂಬಿಕ ಪ್ರಧಾನವಾದ ಸಾಮಾಜಿಕ ಕೃತಿ. ಕೃತಿಯಲ್ಲಿ ಸರಳ ಭಾಷೆ ಜೊತೆಗೆ ಅಲ್ಲಲ್ಲಿ ಪ್ರಾದೇಶಿಕ ಹಳ್ಳಿ ಭಾಷಾ ಶೈಲಿಯ ಸೊಗಡಿದೆ. ಕುಟುಂಬ ಪ್ರಧಾನ ಕಥಾ ವಸ್ತು ಹೊಂದಿದ ಮೇಲೆ ಅಲ್ಲಿ ಭಾವ ಪ್ರಧಾನ, ಹಾಗೇ ಬಾಂಧವ್ಯ ಪ್ರಧಾನವಾಗಿರಲೇಬೇಕು ಅಲ್ವಾ?. ಹಾಗೆಯೇ ಇಲ್ಲಿಯ ಕಥೆಯಲ್ಲಿನೂ ನೂರಾರು ಪಾತ್ರಗಳ ವಿವಿಧ ಭಾವನೆಗಳ ತಾಕಲಾಟಗಳಿವೆ, ಅದರಲ್ಲಿ ಮಾತು, ಮೌನ, ತುಂಟಾಟ, ಗಾ0ಭೀರ್ಯ, ಜಲಸಿ ಪ್ರವೃತ್ತಿ, ಅತೀ ಆತ್ಮಾಭಿಮಾನ, ಜೀವನ ಪ್ರೀತಿ, ಆಸೆ, ನಿರೀಕ್ಷೆ, ನಿರ್ಲಿಪ್ತತೆ, ಪ್ರಕೃತಿ ಪ್ರೀತಿ,ನಿಸ್ವಾರ್ಥ ಪ್ರೀತಿ,ಸೋದರ ಬಾಂಧವ್ಯ ಹೀಗೆ….. ಒಂದೊಂದು ಭಾವನೆಗಳು ಕನಿಷ್ಠ ಒಂದು ಪಾತ್ರದ ಮೂಲಕ ಒಂದೊಂದು ಭಾವನೆಗಳು ಹೊರಹೊಮ್ಮಿವೆ.

ಕೆಲವು ಪಾತ್ರಗಳನ್ನು ಓದುತ್ತಾ ಹೋದಂತೆ, ಆ ಪಾತ್ರಗಳೇ ನಾವಾಗಿದ್ದರೆ, ಅಥವಾ ಅಂತಹದೊಂದು ಪಾತ್ರ ನಮ್ಮ ಜೀವನ ಕಥೆಯಲ್ಲೂ ಇದ್ದಿದ್ದರೆ ಅನಿಸುವುದು ಸುಳ್ಳಲ್ಲ. ಹೀಗೆ ಅನಿಸಿದ ಪಾತ್ರಗಳಲ್ಲಿ ನನ್ನ ಜೀವನಕ್ಕೂ ಬಹಳ ಹತ್ತಿರದ ಪಾತ್ರ ಅನಿಸಿದ್ದು ವಿಶ್ವ, ಪಲ್ಲವಿ, ಚಂದ್ರಯ್ಯ, ಪಾರ್ವತಮ್ಮ, ಹಾಗೂ ಪ್ರೀಯ ಪಾತ್ರಗಳು. ವಿಶ್ವನಂತೆ ನನ್ನಣ್ಣ, ಪ್ರೀಯಳಂತೆ ತಾಯ್ಮನ ನನ್ನ ಅತ್ತಿಗೆದು. ಹಾಗೇ ನನ್ನ ಚಿಕ್ಕಮ್ಮ, ಚಿಕ್ಕಪ್ಪ ಕೂಡ ಥೇಟ್ ಪಾರ್ವತಮ್ಮ, ಚಂದ್ರಯ್ಯರಂತೆ.

ಬಾಂಧವ್ಯಗಳನ್ನು ಕಟ್ಟಬಾರದು, ಬಂಧಿಸಬೇಕು ಕಟ್ಟುವುದು, ಬಂಧಿಸುವ ಎರಡರ ಅರ್ಥವೂ ಒಂದೇ ಅನಿಸಬಹುದು ಮೇಲ್ನೋಟಕ್ಕೆ.ಆದ್ರೆ ಕಟ್ಟಿದ ಬಾಂಧವ್ಯಗಳಿಗೆ ಆಯುಷ್ಯ ಕಡಿಮೆ ಬಂಧಿಸಿದ ಬಾಂಧವ್ಯಗಳು ಬಹು ಕಾಲ ಬಾಳುತ್ತವೆ.

ಅಂತಹ ಹಲವಾರು ಬಾಂಧವ್ಯಗಳು ಭಾವನೆಗಳಲ್ಲಿ ಬಂಧಿಯಾಗಿವೆ ಈ ಕೃತಿಯಲ್ಲಿ. ಚಂದ್ರಯ್ಯ, ಪಾರ್ವತಮ್ಮ ದಂಪತಿಗಳಿಗೆ ಒಬ್ಬ ಮಗ ಪ್ರಮೋದ, ಮಗಳು ವಿನುತಾ, ಚಂದ್ರಯ್ಯನ ಒಬ್ಬಳೇ ತಂಗಿ ಪ್ರಭಾವತಿ ಹೆರಿಗೆಯ ನಾಲ್ಕೇ ದಿನಕ್ಕೆ ತೀರಿಹೋದ ನಂತರ ಆಕೆಯ ಮಗು ವಿಶ್ವನಿಗೆ ನಿಸ್ವಾರ್ಥ ತಾಯಿ, ತಂದೆ ಪ್ರೀತಿ ಧಾರೆ ಎರೆದು ಸ್ವಂತ ಮಗನಂತೆ ಬೆಳಿಸಿದ ಆ ದಂಪತಿಗಳ ಮಾನವೀಯತೆಗೆ ಬೆಲೆ ಕಟ್ಟಲಾದೀತೆ? ಒಂದೇ ತಾಯಿಯ ಮಕ್ಕಳು ಅಲ್ಲದೇ ಹೋದರೂ ವಿಶ್ವ ಮತ್ತು ಪ್ರಮೋದ್ ರಲ್ಲಿಯ ಆತ್ಮೀಯ ಭಾವನೆಗಳು ನಮ್ಮ ಸೋದರ ಬಾಂಧವ್ಯಗಳಲ್ಲೂ ಕಂಡಿದ್ದೇನೆ. ಆದರೆ ಅದಕ್ಕೆ ವ್ಯತಿರಿಕ್ತ ಸ್ವಭಾವ ವಿನುತಾಳದ್ದು. ಅದೇನೇ ಇರಲಿ ಅವಳ ಪಾತ್ರದ ಮೂಲಕ ಒಂದು ಸಂದೇಶದ ಸ್ಪಷ್ಟತೆ ಇದೆ. ಯಾವುದೂ ಶಾಶ್ವತವಲ್ಲ ಕಾಲ ನಿರ್ಣಯಕ್ಕೆ ಎಲ್ಲರೂ ತಲೆ ಬಾಗಲೇಬೇಕು ಅಂತ. ಯಾವ ಒಂದು ಸೌಂದರ್ಯದ ಕಾರಣದಿಂದ ಅಹಂಕಾರ ವೃದ್ಧಿಸಿಕೊಂಡು ಇತರರನ್ನು ಉಪೇಕ್ಷೆ ಮಾಡಿದ್ದಳೋ, ಅದೇ ಸೌಂದರ್ಯದಿಂದಲೇ ಅವಳ ಅಹಂಕಾರ ಮಣ್ಣು ಮುಕ್ಕಿಸುತ್ತದೆ. ಕಾಲವೇ ಎಲ್ಲವನ್ನೂ ಸರಿ ಮಾಡುವ ಹೊಣೆ ಹೊತ್ತಿರುವಾಗ ಹುಲು ಮಾನವರು ನಾವೇನೇ ಮಾಡಿದರೂ ತಪ್ಪಿಸಿಕೊಳ್ಳಲು ಆಗಲ್ಲ. ಕಾಲಕ್ಕೆ ಕಾಲಾವಕಾಶ ಕೊಟ್ಟು ಕಾಯಬೇಕು ಅಷ್ಟೇ..

ಇನ್ನು ಜ್ಯೋತೆಕ್ಕ, ಭೀಮಣ್ಣರಂತ ಪಾತ್ರಗಳು ಇಂದಿನ ದಿನಕ್ಕೆ ಬಹಳ ವಿರಳ ಅಂತಾನೆ ಹೇಳಬಹುದು. ಅಲ್ಲಿ ಅವರು ಪೂರ್ವಿಕರಿಂದಲೂ ಹೊಲದಲ್ಲಿ ನಿಸ್ವಾರ್ಥವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರ ಫಲವಾಗೆ ಅವರು ಅಲ್ಲಿ ಕೇವಲ ಕೆಲಸಗಾರರಾಗಿರದೆ ಆ ಕಥೆಯಲ್ಲಿನ ಒಂದು ಬಾಂಧವ್ಯವಾಗಿ, ಒಬ್ಬರು ಆತ್ಮೀಯ ಬಂಧುಗಳಾಗಿ ಚಿತ್ರಿತರಾಗಿದ್ದಾರೆ.

ಕಥೆಯ ಆರಂಭದಲ್ಲಿ ಬರುವ ಸುಂದರ ಜೋಡಿ ಅಭಯ್ ಹಾಗೂ ಶಾರ್ವರಿ ಜೀವನದ ಸನ್ನಿವೇಶ ಓದಿ ಅಭಯ್ ಪಾತ್ರ ಮನಸಿಗೆ ಹತ್ತಿರವಾಗುವ ಮೊದಲೇ ಕಥೆಯಿಂದ ನಿರ್ಗಮನವಾಗುತ್ತದೆ. ಅವರಿಬ್ಬರ ಸುಮಧುರವಾದ ದಾಂಪತ್ಯ ಜೀವನ ಇನ್ನೂ ಸ್ವಲ್ಪ ಓದಿಗೆ ಬೇಕಿತ್ತು ಅನಿಸಿತು.

ಅಭಿಯ ನಿರ್ಗಮನದ ನಂತರವೇ ವಿಶ್ವನ ಪಾತ್ರ ಹೆಚ್ಚು ತೆರೆದುಕೊಳ್ಳುತ್ತಾ ಹೋಗುತ್ತೆ ಅದು ಅವನದೇ ಡೈರಿ * ಮೌನ ಗೊಂಬೆ * ಓದಿನ ಮುಖಾಂತರ. ಇಲ್ಲಿ ಹಲವಾರು ಪಾತ್ರಗಳ ನೇರ ಪರಿಚಯ ಮಾಡದೇ ಡೈರಿ ಮೂಲಕ ಪರಿಚಯ ಮಾಡಿಸಿದ್ದು ಲೇಖಕಿಯ ಸೃಜನಶೀಲತೆ ತೋರಿಸುತ್ತೆ. ಬರವಣಿಗೆಯಲ್ಲಿ ಹೊಸತನವಿದೆ ಅನಿಸಿತು.

ಡೈರಿಯ ಮೂಲಕ ಅಲ್ಲಿಯ ಪ್ರತಿ ಪಾತ್ರಗಳು ಮನಸಿಗೆ ಅಚ್ಚಾಗಿ ಕೂರುತ್ತವೇ. ಅದರಲ್ಲಿ ಪ್ರೀಯ ಪಾತ್ರವೊಂದು ವಿಶೇಷ ಪಾತ್ರ. ಆ ಪಾತ್ರ ಸರಳ, ಸ್ವಾಭಿಮಾನ, ಸ್ವಾವಲಂಬನೆಯ ಪ್ರತೀಕದ ಹೆಣ್ಣು ಪ್ರೀಯ. ಆಕೆಯ ಅಂತಹ ಸ್ವಾಭಿಮಾನ ಬದುಕು ಆಕೆಯ ತಾಯಿಯಿಂದ ಬಂದ ಬಳುವಳಿ ಆಕೆ ತಾಯಿಯೂ ಗಂಡ ಬಿಟ್ಟರೂ ಸ್ವಾಭಿಮಾನ ಬಿಡದೇ ಇದ್ದೋಬ್ಬ ಮಗಳ ಶ್ರೇಯಸ್ಸಿಗಾಗೇ ಬದುಕಿದವಳು. ಅದೇ ಸ್ವಾಭಿಮಾನವೇ ಪ್ರೀಯಳಲ್ಲೂ ಇದ್ದದ್ದು. ತಾಯಿಯ ಒಳ್ಳೆ ಗುಣದ ಫಲವೋ ಅವಳ ಸಾವಿನ ನಂತರ ಮಗಳ ಜೀವನ ವಿಶ್ವನೊಂದಿಗೆ ಮದುವೆ ಆಗುವ ಮೂಲಕ ಒಂದೊಳ್ಳೆ ನೆಲೆ ಕಾಣುತ್ತೆ. ಆದರೆ ಬದುಕಿನ ಅನಿರೀಕ್ಷಿತ ತಿರುವುಗಳಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಅಂತೆಯೇ ಪ್ರೀಯ, ವಿಶ್ವರ ಸುಂದರವಾದ ದಾಂಪತ್ಯ ಯಾನದಲ್ಲಿ ಒಂದು ಅನಿರೀಕ್ಷಿತ ತಿರುವು ಬಂದು ವಿಶ್ವನ ಜೀವನವೇ ಬೆಂಗಾಡಿನ ಮರಳುಭೂಮಿಯಂತಾಗುತ್ತೆ. ಹಾಗಾದ್ರೆ ಆ ಅನಿರೀಕ್ಷಿತ ತಿರುವು ಏನು? ಅನ್ನುವ ಕುತೂಹಲ ನಿಮಗಿದ್ದರೆ ಕೃತಿ ಓದಿ.

ಕಾಲ ಎಂದಿಗೂ ನಿಂತ ನೀರಲ್ಲ ಹರಿಯುತ್ತಲೇ ಇರುತ್ತೆ ಇಲ್ಲಿಯೂ ಕೂಡ ವಿಶ್ವನ ಮರುಭೂಮಿಯಲ್ಲಿ ಹೂವು ಅರಳುವ ಸಮಯ ಬರುತ್ತೆ. ಬೇಸತ್ತ ಬದುಕಿಗೆ ತಂಪನ್ನೀವ ಮನ ಮುದಗೊಳಿಸುವ ಒಂದು ಸನ್ನಿವೇಶ ಅಂತರಪಟ ಸರಿಯುವ ಸಂದರ್ಭ. ಆ ಸನ್ನಿವೇಶಕ್ಕೆ ಸಾಕ್ಷಿ ಯಾಗಿ ತೆರೆ ಮರೆಯಲ್ಲಿ ಕಾರ್ಯ ನಿರ್ವಹಿಸಿದವರು ಚಿರು, ಪ್ರಮೋದ್, ಅಜ್ಜಮ್ಮ, ಜ್ಯೋತೆಕ್ಕ, ಭೀಮಣ್ಣ, ಪಲ್ಲವಿ, ಪಾರ್ವತಮ್ಮ, ಚಂದ್ರಯ್ಯ. ಅದರಲ್ಲೂ ಚಿರು, ಪ್ರಮೋದ್ ಪ್ರಮುಖ ಪಾತ್ರಧಾರಿಗಳು. ಚಿರು ಒಬ್ಬ ಅನಾಥ ತಂದೆ, ತಾಯಿ ಪ್ರೀತಿ ಕಾಣದೇ ಬೆಳೆದು ಸುಮಾಳನ್ನು ಪ್ರೀತಿಸಿದಾಗ ಅವನು ಅನಾಥನೆಂಬ ಕಾರಣಕ್ಕೆ ಮೊದಲು ಅವನ ಪ್ರೀತಿಗೆ ಸುಮಾ ತಂದೆ ಒಪ್ಪದೇ ಇದ್ದಾಗ, ಅಭೀ, ಶಾರ್ವರಿಯರ ಬೆಂಬಲದಿಂದಲೇ ಇಬ್ಬರ ಮದುವೆಯಾಗಿ ಅವರದು ಸುಖಿ ಸಂಸಾರ ಜೊತೆಗೊಬ್ಬ ಮಗ ಅಗಸ್ತ್ಯ. ಮದುವೆ ಆದಾಗಿಂದಲೂ ಶಾರ್ವರಿಯನ್ನೇ ತನ್ನ ಒಡ ಹುಟ್ಟಿದ ಅಕ್ಕಳನ್ನು ಕಂಡು ಅದೇ ಭಾವನೆಯಲ್ಲೆ ಅವಳ ಶ್ರೇಯಸ್ಸಿಗಾಗೇ ತುಡಿಯುವ ಮನಸ್ಥಿತಿಯುಳ್ಳವ ಚಿರು. ಪ್ರಾಣದಂತಿದ್ದ ಗೆಳೆಯ ಅಭಯ್ ನ ಅಕಾಲಿಕ ಮರಣದಿಂದ ವೈಧವ್ಯ ಪ್ರಾಪ್ತಿಯಾದ ಶಾರ್ವರಿಗೆ ಹೊಸ ಜೀವನ ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕ ನಿಸ್ವಾರ್ಥ ಪ್ರಯತ್ನ ಮಾಡಿ ತನ್ನ ಗೆಳೆಯನಿಗೆ ಸಾಯುವ ಮೊದಲು ಕೊಟ್ಟ ಭಾಷೆಯನ್ನು ಪೂರ್ಣಗೊಳಿಸುತ್ತಾನೆ.ಅದರಂತೆ ಪ್ರಮೋದ್ ಕೂಡ ತನ್ನ ಒಡ ಹುಟ್ಟಿದ ತಂಗಿಗಿಂತಲೂ ಹೆಚ್ಚಾಗಿ ಪ್ರೀತಿಸಿದ ಪ್ರಿಯಾಳಿಗೆ ಕೊಟ್ಟ ಭಾಷೆಯನ್ನು ಇವರಿಬ್ಬರ ಅಂತರಪಟ ಸರಿಸುವ ಮೂಲಕ ನೆರೆವೇರಿಸುತ್ತಾರೆ.

ಕಥೆಯಲ್ಲಿ ಲೇಖಕಿ ಅಲ್ಲಲ್ಲಿ ಬದುಕಿನ ಮೌಲ್ಯಗಳನ್ನು ಸಂದರ್ಭ, ಹಾಗೂ ಸನ್ನಿವೇಶಕ್ಕೆ ತಕ್ಕಂತೆ ತನ್ನದೇ ನಿಲುಮೆಗಳನ್ನು ನೇರವಾಗಿ ವ್ಯಕ್ತಪಡಿಸದೆ ಆಯಾಯ ಪಾತ್ರಗಳ ಮೂಲಕ ಹೇಳಿಸಿದ್ದು ಲೇಖಕಿಯ ಜಾಣ್ಮೆ ತೋರಿಸುತ್ತೆ. ಅಲ್ಲಲ್ಲಿ ಕೆಲವು ಪ್ರಸಿದ್ಧ ಸಾಹಿತಿಗಳ ಪ್ರಸಿದ್ಧ ಕೃತಿಗಳ ಕೆಲವು ಸಾಲುಗಳನ್ನು ನೆನಪಿಗೆ ತರುತ್ತೆ. ಉದಾಹರಣೆ ಸಂಬಂಧಗಳ ಕುರಿತು ಹೇಳುವಾಗಿನ ಸಾಲುಗಳು ವಂಶವೃಕ್ಷದ *ಎಷ್ಟು ದಿನದ ಋಣಾನುಬಂಧವೋ ಅಷ್ಟೇ ದಿನ ಪ್ರತಿಯೊಬ್ಬರೂ ನಮ್ಮ ಜೊತೆಗೆ ಇರ್ತಾರೆ ಅದು ಮುಗಿದ ಮೇಲೆ ದೂರ ಹೋಗ್ತಾರೆ.ಕೆಲವರು ಸತ್ತು ಹೋದರೆ, ಕೆಲವರು ದೂರ ಹೋಗ್ತಾರೆ.ಅದನ್ನೇ ನಾವು ಯಾವಾಗಲೂ ಸ್ವೀಕರಿಸಬೇಕು ಅದಕ್ಕಾಗಿ ನಾವು ದುಃಖಿಸಬಾರದು. ಈ ಸಾಲುಗಳನ್ನು ನೆನಪಿಸಿತು. ಹಾಗೇ ಪುಸ್ತಕ ಓದುವಲ್ಲಿ ವಿಶ್ವ ಹೇಳಿದ ಮಾತುಗಳು ಡ್ರಿಂಕ್ಸ್ ಮತ್ತು ಡ್ರಗ್ಸ್ ಗಿಂತಲೂ ಪುಸ್ತಕಗಳು ನೋವು ಮರೆಸುವ ಸಾಧನ ಅನ್ನುವ ಸಾಲುಗಳು ಭೈರಪ್ಪನವರ ದೂರ ಸರಿದರು ಕೃತಿಯ
ಜೀವನದಲ್ಲಿ ನಿರಾಶರಾದವರೂ ಸಾಮಾನ್ಯವಾಗಿ ಮದ್ಯಪಾನದಲ್ಲಿ ಮರೆಯುತ್ತಾರಂತೆ ಅದರ ಬದಲು ಅವರು ನನ್ನಂತೆ ಕುಳಿತು ಯಾಕೆ ಓದಬಾರದು? ಸುರಾದೇವಿ, ಸರಸ್ವತಿ ಇಬ್ಬರಲ್ಲಿಯೂ ಒಂದೇ ಗುಣವಿದೆ ನಮಗೆ ಮರೆಯುವ ಶಕ್ತಿ ಕೊಡುವುದು. ಸಾಲು ನೆನಪಿಸಿತು. ಅದೇನೇ ಇರಲಿ ಲೇಖಕಿಯ ಹೊಸತನ ನಿರೂಪಣಾ ಶೈಲಿ ಪಕ್ವ,ಪ್ರಬುದ್ಧ ಬರಹ ಇಷ್ಟವಾಯಿತು. ಸಾರಾಗವಾಗಿ ಓದಿಸಿಕೊಂಡು ಹೋಗುವ ಕೃತಿ. ಕೃತಿ ಓದಿಲ್ಲವಾದರೆ ನೀವೊಮ್ಮೆ ಓದಿ….

ಲೇಖಕಿಯ ಇನ್ನೂ ಹೆಚ್ಚು ಕೃತಿ ಸಾರಸ್ವತ ಲೋಕದಲ್ಲಿ ಪ್ರಕಟಣೆಗೊಂಡು ಕೃತಿ ಯಶೋಭಿವೃದ್ಧಿ ಹೊಂದಲಿ ಅನ್ನುವ ಶುಭ ಹಾರೈಕೆಗಳೊಂದಿಗೆ. ಹೊಸಬರನ್ನು ಪ್ರೋತ್ಸಾಹಿಸಲೆಂದೆ ಅವರಿಂದ ಕೃತಿ ಖರೀದಿಸಿ, ನನ್ನಂತಹ ಓದಿನ ಆಸಕ್ತಿ ಉಳ್ಳವರಿಗೆ ಕೃತಿ ಕಳುಹಿಸಿ ಓದಿಸುವ ಮೌನಿ ಸರ್ ಗೆ ಧನ್ಯವಾದಗಳು.


  • ಪಾರ್ವತಿ ಜಗದೀಶ್ – ಲೇಖಕಿ, ಹಾವೇರಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW