ಯಾವ ಮೋಹನ ಮುರಲಿ ಮನ ತಣಿಸೀತು ನಲ್ಲೆ, ನಿನ್ನ ದನಿಯೇ ಇಲ್ಲದೀ ಬಾಳಿನಲಿ…ಹೆಚ್. ಪಿ. ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಯಾವ ಹಸಿರು ತಲೆಯೆತ್ತಿ ನಕೀತು ನಲ್ಲೆ
ನೀ ಇಲ್ಲದೀ ಎದೆಯ ಬೆಂಗಾಡಿನಲ್ಲಿ
ಯಾವ ಕೋಗಿಲೆ ಬಂದು ಕೂಗೀತು ಹೇಳೆ
ನೀ ಇಲ್ಲದೀ ಒಂಟಿ ತಾಣದಲಿ!!
ಯಾವ ಮೋಹನ ಮುರಲಿ ಮನ ತಣಿಸೀತು ನಲ್ಲೆ
ನಿನ್ನ ದನಿಯೇ ಇಲ್ಲದೀ ಬಾಳಿನಲಿ
ಯಾವ ನಂದನ ನನ್ನ ಸೆಳೆದೀತು ಹೇಳೆ
ನಿನ್ನ ಚಿತ್ರವೇ ಕಣ್ಣ ತುಂಬಿರುವಲ್ಲಿ!!
ಯಾವ ಭರವಸೆಯ ಬೆಳಕು ಹರಿದೀತು ನಲ್ಲೆ
ನೀ ಇಲ್ಲದೀ ಬದುಕ ಕತ್ತಲಿನಲ್ಲಿ
ಯಾವ ಹೊಂಗನಸ ಚಿಗುರು ಮೂಡೀತು ಹೇಳೆ
ನೀ ಇಲ್ಲದೀ ಎದೆಯ ಬನದಲ್ಲಿ!!
ಯಾವ ಗುರಿಯ ದಾರಿ ಹೊಳೆದೀತು ನಲ್ಲೆ
ನೀ ಇಲ್ಲದೀ ಬಾಳ ಪಯಣದಲ್ಲಿ
ಯಾವ ಸ್ಫೂರ್ತಿಯ ಚಿಲುಮೆ ಉಕ್ಕೀತು ಹೇಳೆ
ಬತ್ತಿದೀ ಮನದ ಕೊಳದಲ್ಲಿ!!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
