ಅಪ್ಪ ಮತ್ತು ಬೈಕ್ ನ ಕತೆ – ಚಿತ್ರಾ ಚಂದ್ರು



ಇಂದು ಕಾರುಗಳದೇ ಕಾರುಬಾರು. ಆದರೆ ಅದೊಂದು ಕಾಲವಿತ್ತು. ಬೈಕ್ ನಲ್ಲಿ ಓಡಾಡೋದೇ  ಒಂದು ಸಂತೋಷ, ಸಂಭ್ರಮ. ಬೈಕ್ ನಲ್ಲಿ ಓಡಾಡುವಾಗ ನಡೆದ ಸಣ್ಣ ಸಣ್ಣ ಘಟನೆಗಳು ಇಂದಿಗೂ ಖುಷಿ ಕೊಡುತ್ತವೆ. ಆ ಸುಮಧುರ ನೆನಪುಗಳನ್ನು ಲೇಖಕಿ ಚಿತ್ರಾ ಚಂದ್ರು ಅವರು ಈ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ನೀವು ಬೈಕ್ ನಲ್ಲಿ ಓಡಾಡಿದ ಸವಿ ಸವಿ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ…

ನಮ್ಮ ಹಳ್ಳಿಗೆ ಆಗೊಂದು ಈಗೊಂದು ಬಂದರುಂಟು ಇಲ್ಲದಿದ್ದರೆ ಇಲ್ಲ ಎನ್ನುವಂತೆ ಬರುತ್ತಿದ್ದ ಬಸ್ ಗಳ ಕಾಟಕ್ಕೆ ಬೇಸತ್ತು ಅಪ್ಪನಿಗೆ ಅನಿಸಿದ್ದು ಒಂದು ಬೈಕ್ ಬೇಕು ಅಂತ.

ಸರಿ ಬೈಕು ಬಂದಾಯಿತು ಅಪ್ಪನಿಗೆ ಚಿಕ್ಕಪ್ಪ ಒಬ್ಬರಿಂದ ಟ್ರೈನಿಂಗು ಆಯಿತು. ನಮ್ಮನೆ ಹೊಂಡದಲ್ಲಿದ್ದ ಕಾರಣ ಅಪ್ಪನಿಗೆ ಮನೆಯ ಅಂಗಳದಿಂದಲೇ ಹಿಂಬದಿ ಸವಾರರನ್ನು ಕರೆದೊಯ್ಯಲು ಆಗುತ್ತಿರಲಿಲ್ಲ. ಅಪ್ಪನ ಜೊತೆ ಹೋಗಬೇಕಾದರೆ ಮುಂದೆ ಹೋಗಿ ಗೇಟು ತೆರೆದು ಅಪ್ಪನ ಸವಾರಿ ಮುಂದೆ ಹೋದಮೇಲೆ ಗೇಟು ಹಾಕಿ ಮನೆಯ ಮೇಲ್ಭಾಗದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಓಡಿ ಹೋಗಿ ಬೈಕ್‌ ಏರಬೇಕಿತ್ತು.

ಫೋಟೋ ಕೃಪೆ : medium

ನಲವತ್ತರ ಆಸುಪಾಸಿನಲ್ಲಿ ಬೈಕು ಕಲಿತಿದ್ದ ಅಪ್ಪನಿಗೆ ಅಂತಹ ಕಾನ್ಫಿಡೆನ್ಸ್ ಇರಲಿಲ್ಲ. ಮೊದಲೇ ಕಾಡುದಾರಿ  ತಿರ್ಕಾಸ್ ಗಳಿಂದ ಕೂಡಿದ ದಾರೀಲಿ ಧುತ್ತೆಂದು ಎದುರಿನಿಂದ ಬರುವ ವಾಹನಗಳಿಂದ ಅಪ್ಪ ಗಲಿಬಿಲಿಗೊಳ್ಳುತ್ತಿದ್ದದ್ದು ಹೌದು. ಕೊಪ್ಪ ಗೆ ಹೋಗಬೇಕಾದರೆ ಮಧ್ಯೆ ಸಿಗುವ ಗಣಪತಿಕಟ್ಟೆಯ ಗಣಪತಿಯ ಹೊಟ್ಟೆಯ ಹಾಗಿದ್ದ ಉಬ್ಬನ್ನು ಹಿಂಬದಿ ಸವಾರರ ಸಮೇತ ಹತ್ತಿಸಲು ಅಪ್ಪನಿಗೆ ಪ್ರಯಾಸವೆನಿಸಿ ನಮ್ಮನ್ನು ಇಳಿದುಕೊಳ್ಳಿ ಎನ್ನುತ್ತಿದ್ದರು. ನಾವು ಬೈಕಿನ ಹಿಂದೆ ಏದುಸಿರು ಬಿಡುತ್ತಾ ಓಡಿ ಹೋಗಿ ಪುನಃ ಹತ್ತಿಕೊಳ್ಳಬೇಕಿತ್ತು. ಸಾಲದಕ್ಕೆ ಅಪ್ಪನಿಗೆ ಬೈಕಿನ ಸ್ಪೀಡು ಅರುವತ್ತು ಕಿಲೋಮೀಟರ್ ದಾಟಿದರೆ ಮಾತ್ರ ಬ್ಯಾಲೆನ್ಸ್ ಸಿಗುತ್ತಿತ್ತು. ನಿಧಾನಕ್ಕೆ ಹೋಗಲು ಬರುತ್ತಲೇ ಇರಲಿಲ್ಲ. ದಾರಿಲಿ ನೋಡಿದವರೆಲ್ಲ ಸಿಕ್ಕಾಗ ನರಸಿಂಹ ಅಣ್ಣ ಎಂಥ ಫಾಸ್ಟ್ ಹೋಗ್ತಾರೆ!! ಅನ್ನೋರೇ.

ಹೀಗೆ ಅಪ್ಪ ಒಮ್ಮೆ ನಮ್ಮತ್ತೆ ಮಗಳನ್ನು ೫.೬ ಕಿಲೋಮೀಟರ್ ದೂರದ ಅವರ ಮನೆಗೆ ಬೈಕಿನಲ್ಲಿ ಬಿಟ್ಟು ಬರುವ ಪ್ರಸಂಗ ಬಂತು ಅವಳಿಗೂ ಖುಷಿ ಮಾವನ ಜೊತೆ ಬೈಕಿನಲ್ಲಿ ಸವಾರಿ ಅಂತ ಅವರ ಮನೆಯ ಸಮೀಪದಲ್ಲೇ ಒಂದು ದೊಡ್ಡ ಕೆರೆ, ಅದನ್ನ ಬಳಸಿದ ದೊಡ್ಡ ತಿರ್ಕಾಕಾಸು ಇದೆ. ಸಾಲದ್ದಕ್ಕೆ ಅವಾಗೆಲ್ಲಾ ದೊಡ್ಡ ದೊಡ್ಡ ಜಲ್ಲಿಕಲ್ಲಿನ ರಸ್ತೆ. ಅಪ್ಪನ ಸ್ಪೀಡಿಗೆ ಬೈಕಿನ ಚಕ್ರ ಕಲ್ಲೊಂದರ ಮೇಲೆ ಉರುಳಿದಾಗ ಹಿಂದೆ ಕೂತಿದ್ದ ಮಲ್ಲಿಗೆ ತೂಕದ ರೇಕು ಕೆಳಕ್ಕೆ ಜಾರಿ ಬಿದ್ದಿದ್ದಳು!!! ಇದರ ಪರಿವೇ ಇಲ್ಲದೆ ಅಪ್ಪ ಗಾಡಿ ನಿಲ್ಲಿಸಿದ್ದು ಅತ್ತೆ ಮನೆಯ ಗೇಟಿನ ಮುಂದೆ. ಇಳಿಯೆ ರೇಕು ಅಂದಾಗ ಹಿಂದಿನಿಂದ ಉತ್ತರವೇ ಬಾರದಿದ್ದಾಗ ತಿರುಗಿ ನೋಡಿದ ಅಪ್ಪನಿಗೆ ಆಗಲೇ ಅರಿವಾಗಿದ್ದು. ಮತ್ತೆ ಗಾಡಿ ತಿರುಗಿಸಿ ವಾಪಸು ಹೋದರೆ ರೇಕು ಮೆಲ್ಲಗೆ ನಡೆದು ಬರುತ್ತಿದ್ದಳಂತೆ ಅವಳನ್ನು ಹತ್ತಿಸಿಕೊಂಡು ಹೋದರಂತೆ. ಹೀಗೆ ಅಪ್ಪನ ಬೈಕಿನ ಕತೆಗಳು ಸಾಕಷ್ಟಿವೆ.

ಒಂದು ಸಲ ನಮ್ಮ ಚಿಕ್ಕಪ್ಪ ಒಬ್ಬರೇ ತೀರ್ಥಳ್ಳಿಗೆ ಹೋಗಿ ನಮ್ಮೂರಿನ ಕೊನೆಯ ಬಸ್ ಹತ್ತಿ ಟಿಕೀಟು ಮಾಡಿಸಿ ಕೂತಿದ್ದರು. ಅಕಸ್ಮಾತ್ ಬಸ್ ಸ್ಟ್ಯಾಂಡಿಗೆ  ಬೈಕಿನಲ್ಲಿ ಬಂದ ಅಪ್ಪ ಅವರನ್ನು ಕಂಡು ಹೇ ಬಾರೋ ನನ್ ಜೊತೆ ಅರ್ಧ ಗಂಟೆಗೆ ಮನೆಗೆ ಹೋಗಬಹುದು ಅಂತ ಹೇಳಿ ಟಿಕೇಟು ಕ್ಯಾನ್ಸಲ್ ಮಾಡಿಸಿ ಬಸ್ಸಿನಿಂದ ಇಳಿಸಿಕೊಂಡು ಬಸ್ ಸ್ಟ್ಯಾಂಡ್ ನಲ್ಲೇ ಇದ್ದ ಹೋಟೆಲ್ ನಲ್ಲಿ ಕಾಫಿ ಕುಡಿದು ಅಪ್ಪ ಬೈಕ್ ಸ್ಟಾರ್ಟ್ ಮಾಡಿದ್ರು ಚಿಕ್ಕಪ್ಪ ಇನ್ನೇನು ಬಲಗಾಲು ಎತ್ತಿ ಹಿಂಬದಿ ಕೂತುಕೊಳ್ಳಲು ರೆಡಿ ಆಗಿದ್ದಷ್ಟೇ ಅಪ್ಪಾ ಆಕ್ಸಿಲರೇಟರ್ ಕೊಟ್ಟಿದ್ದೆ ರೊಯ್… ಅಂತಾ ಹೊರಟೆ ಹೋಗಿಬಿಟ್ಟರಂತೆ!!! ಚಿಕ್ಕಪ್ಪ ಎತ್ತಿದ ಕೈ ಕಾಲು ಕೆಳಗಿಟ್ಟು ೫ ನಿಮಿಷ ಕಾದಿದ್ದೇ ಬಂತು ವಾಪಸ್ಸು ಬರ್ತಾರೆ ಅಂತ ಬರದೆ ಇದ್ದದ್ದು ನೋಡಿ ಬಸ್ಸಿಗೆ ಕಾದು ಹೋಗುವ ಅಂದ್ರೆ, ಅಲ್ಲಿ ಬಸ್ಸು ಹೋಗಿಯಾಗಿತ್ತು.



ಕೊನೆಗೆ ಗಡಿಕಲ್ಲಿಗೆ ಬರುವ ಬಸ್ಸಿಗೆ ಬಂದು ಅಲ್ಲಿಂದ ೩ ಕಿಲೋಮೀಟರ್ ನಡೆದು ಮನೆಗೆ ಬಂದರಂತೆ. ಇದಕ್ಕೆಲ್ಲ ಮಾರನೆ ದಿನ ನಮ್ಮನೆಗೆ ಬಂದು ನಮ್ಮ ಹತ್ರ ಚಿಕ್ಕಪ್ಪ ಹೇಳ್ತಾ ಇದ್ದರೆ ಅಲ್ಲೇ ಪೇಪರ್ ಓದುತ್ತಿದ್ದ ಅಪ್ಪ ಕುರುವಳ್ಳಿ ಬಂದಾಗ ಗೊತ್ತಾಯಿತು. ಇವನಿಲ್ಲ ಹಿಂದೆ ಅಂತ!! ಅಯ್ಯ ಹೆಂಗೋ ಬರ್ತಾನೆ ಅಂತ ಬಂದು ಬಿಟ್ಟೆ ಅನ್ನೋದ ಕೂಲಾಗಿ.


  • ಚಿತ್ರಾ ಚಂದ್ರು

5 3 votes
Article Rating

Leave a Reply

1 Comment
Inline Feedbacks
View all comments
Murali

ಮೂರ್ತಿಗಳು (ind suzuki!)ನಿನಗೆ ಸ್ಕೂಲ್ ಗೆ ಲೇಟಾದಾಗ ಬೈಕ್ನಲ್ಲಿ ತಂದು ಬಿಡುತ್ತಾ ಇದ್ದಿದ್ದು ನನಗೆ ನೆನಪಿದೆ..
ಬರಹ ಚನ್ನಾಗಿದೆ..👌

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW