“ಮದ್ದು ಹಾಕುವುದು” ಎಂದರೇನು? – ಡಾ.ಪ್ರಕಾಶ ಬಾರ್ಕಿ



ಮದ್ದು ಹಾಕುವುದು ಅದೊಂದು ತರಹದ Slow poison (ನಿಧಾನ ವಿಷ). ಮತ್ತೂಬ್ಬರ ಹೊಟ್ಟೆಗೆ ಹೇಗಾದರೂ ಸೇರಿಸಿದರೆ ಮುಗಿಯಿತು. ಅದನ್ನೆ “ಮದ್ದು ಹಾಕುವುದು” ಅಂತಾರೆ. ಊಟ, ತಿಂಡಿ ಅಥವಾ ಪಾನೀಯದಲ್ಲಿ ಒಂದೆರಡು ಹನಿ ಸೇರಿಸಿ ನಂಬಿಕಸ್ಥರೆ ನೀಡುವುದು ವಿಪರ್ಯಾಸ.

“ಮದ್ದು”, “ಮದ್ದು ಹಾಕುವುದು”, “ಕೈ ವಿಷ”, “ಕೈ ಮಸಕು”, “ಮಾಟ ಮಾಡಿಸಿ ಹೊಟ್ಟೆಗೆ ಹಾಕೋದು”, “ಮರ್ದು” ಮುಂತಾದ ನಾನಾ ನಾಮಧೇಯದಿಂದ ಕುಖ್ಯಾತವಾದ “ನಿಧಾನ ವಿಷ” ಹಾಕುವ ಪದ್ಧತಿ.

ಮೊದಲೆಲ್ಲ ಕೆಲವು ಮನೆತನಗಳಲ್ಲಿ (ಮಲೆನಾಡ ಕೆಲ ಮನೆತನ) ಮಾತ್ರ “ಬ್ರಹ್ಮ ರಹಸ್ಯ”ದಂತೆ ಗುಪ್ತವಾಗಿದ್ದ ಪದ್ಧತಿ ಆಮೇಲಾಮೇಲೆ ಅರ್ಧ ಭಾರತವನ್ನೆ ಆವರಿಸಿಬಿಟ್ಟಿತು.
ಈಗಲೂ “ಮದ್ದಿ”ನ ಆರ್ಭಟ ಜೋರಾಗಿದೆ.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಬೆಳೆದವರಾದರೆ ಈ ಕರಾಳ ಪದ್ಧತಿ ಗೊತ್ತಿರತ್ತೆ. ಪಟ್ಟಣದಲ್ಲಿನ ಹಲವರಿಗೆ ಅರಿಯದ ವಿಷಯವಿದು. ಕೆಲವರು ಇದು ಕೇವಲ ಭ್ರಮೆ, ಸುಳ್ಳು ಎಂಬ ವಾದ ಮುಂದಿಡುತ್ತಾರೆ. ಅದು ಅವರವರ ಅನುಭವ.

ಇಂದು “ಮದ್ಧು” ಹಾಕುವುದರ ಹಿಂದಿನ ಕಾರಣ ಮತ್ಸರ, ದ್ವೇಷ, ಹೊಟ್ಟೆಕಿಚ್ಚು, ಇನ್ನೊಬ್ಬರ ಸಂತೋಷವನ್ನು ಸಹಿಸದ ವಿಕೃತ ಮನಸ್ಥಿತಿ, ಮತ್ತೊಬ್ಬರು ಪೂರ್ತಿ ಹಾಳಾಗಿ ಹೋಗಲಿ ಅನ್ನುವ ದುಷ್ಟ ಮನಸ್ಸು. ನಕಾರಾತ್ಮಕ ಭಾವನೆಗಳು ತಾರಕಕ್ಕೆ ಹೋಗಿ ತಡೆಯಲಾಗದಾಗ ಮನುಷ್ಯ “ಬೆನ್ನಿಗೆ ಚೂರಿ” ಹಾಕುವಂತೆ “ಮದ್ದು ಹಾಕು”ತ್ತಾರೆ. ಗೊತ್ತೆ ಆಗುವದಿಲ್ಲ.
ಮದ್ದು ಹಾಕಿಸಿಕೊಂಡವರು ಸಂಕಟ ಪಡುತ್ತಿದ್ದರೆ ಮದ್ದು ಹಾಕಿದವರು ವಿಕೃತಾನಂದ ಅನುಭವಿಸುತ್ತಿರುತ್ತಾರೆ.

ಮದ್ದು ಹಾಕುವುದು ಅಂದರೆ Slow poison ಕೊಟ್ಟಂತೆ ಅದು ಒಮ್ಮೇಲೆ ತನ್ನ ದುಷ್ಪರಿಣಾಮ ತೋರುವುದಿಲ್ಲ ತಿಂಗಳಾನುಗಟ್ಟಲೆ ಸಮಯದ ನಂತರ ಒಂದೊಂದು “ಲಕ್ಷಣ”ಗಳು ಕಾಣಸಿಗುತ್ತವೆ.
ಇಂಥವರ ಮನೆಯಲ್ಲೇ ತಿಂದದ್ದು, ಇಂಥವರೆ ಹಾಕಿದ್ದು, ಇಂಥದರಲ್ಲಿಯೇ ಸೇರಿಸಿದ್ದರು ಅಂತ ಗೊತ್ತಾಗುವುದೇ ಇಲ್ಲ. ಇದೇ ಒಂದು ಭಂಡ ಧೈರ್ಯದಿಂದ “ಮದ್ಧು ಹಾಕುವರು”. ನೆನಪಿರಲಿ ನಿಮ್ಮ ನಂಬಿಕಸ್ಥರು ಎನಿಸಿಕೊಂಡ ಹಿತಶತೃಗಳ ಕೈವಾಡವಿದು.

(ಸಾಂದರ್ಭಿಕ ಚಿತ್ರ )

ಮದ್ದು ಹಾಕುವುದು ಪ್ರಚಲಿತಕ್ಕೆ ಬಂದದ್ದು: 

ಮದ್ಧು ಹಾಕುವುದು ಪ್ರಚಾರಕ್ಕೆ ಬಂದಿದ್ದು ಕೇವಲ ನಮ್ಮ ಶತೃಗಳನ್ನ ನಾಶಮಾಡಲು. ದುಷ್ಟರ ಶಿಕ್ಷೆಗಾಗಿ, ಶಿಷ್ಟರ ರಕ್ಷಣೆಗಾಗಿ ನಮ್ಮ ಗುರು ಹಿರಿಯರು, ಸಿದ್ದರು ಸಾಮಾನ್ಯ ಜನರಿಗಾಗಿ ದಯಪಾಲಿಸಿದ್ದು. ಆದರೆ ಇದು ಇಂದಿನ ದಿನಗಳಲ್ಲಿ “ದುರುಪಯೋಗ” ಆಗುತ್ತಿರುವುದು ಖೇದಕರ.

ಕೆಲವು ಹಿರಿಯ ತಲೆಗಳ ಮಾಹಿತಿಯಂತೆ ಇದು ಬ್ರೀಟಿಷರನ್ನು ಕೊಲ್ಲಲು ಜನಸಾಮಾನ್ಯರು ಬಳಸುವ ತಂತ್ರವಾಗಿತ್ತು.

ಸ್ವತಂತ್ರ ಪೂರ್ವದಲ್ಲಿ ಊರ ತಪಾಸಣೆಗೆ ಬರುವ “ಬ್ರಿಟಿಷ್”ರಿಗೆ ಕುಡಿಯಲು ನೀಡುತ್ತಿದ್ದ ಪಾನಕ, ತಿನ್ನುವ ಪದಾರ್ಥಗಳಲ್ಲಿ “ಮದ್ಧು” ಸೇರಿಸಿ ಕೊಡುತ್ತಿದ್ದರು, ಬ್ರಿಟಿಷರೂ ಏನೂ ಸಂಶಯಿಸದೆ ಸೇವಿಸಿ ಹೊರಡುತ್ತಿದ್ದರು.

ಕೆಲ ತಿಂಗಳುಗಳ ನಂತರ ಹೊಟ್ಟೆ ನೋವು, ತೀವ್ರ ವಾಂತಿ, ನಿಶ್ಯಕ್ತಿ ಮುಂತಾದ ಹಲವು ಕಾರಣಗಳಿಂದ ಸತ್ತ ಪ್ರಕರಣಗಳು ವರದಿಯಾಗುತ್ತಿದ್ದವು.
ನಂತರ ಮನೆ ಹೊಕ್ಕ ದರೋಡೆಕೋರರಿಗೆ, ದುಷ್ಟ ಆಡಳಿತಗಾರರಿಗೆ, ವೈರಿಗಳಿಗೆ ಬಳಸುತ್ತಿದ್ದರು.

ಇದು ಮೊದಲು ಹೆಚ್ಚು ಪ್ರಚಲಿತದಲ್ಲಿದ್ದದ್ದು ಮಲೆನಾಡಿನಲ್ಲಿ, ಅದು ಕೇವಲ ಕೆಲವರಿಗೆ ತಿಳಿದ ಪದ್ಧತಿ. ಮುಂದೆ ಹಲವು ಮನೆತನಗಳಲ್ಲಿ ಅದು ಸಂಪ್ರದಾಯದಂತೆ ಮಾರ್ಪಾಡಾಯಿತು. “ಕೆಟ್ಟದ್ದು ಬೇಗ ಬೆಳೆಯುವುದು” ಎಂಬಂತೆ ಮದ್ದು ಹಾಕುವುದನ್ನು ಸುಮಾರು ಜನ ಬಳಕೆಗೆ ತಂದರು.

ನಂತರ ಇಂದಿಗೂ ಅದು ದುರುಪಯೋಗ ಆಗುತ್ತಿದೆ. ಮತ್ಸರ ಕಕ್ಕುವ ಹಿಂದಿನ ಬಾಗಿಲ ಮಾರ್ಗವಾಗಿ.



ಮದ್ದು ತಯಾರಿಸುವ ಪದ್ಧತಿ : 

ಸರಿಸೃಪಕ್ಕೆ ಸೇರಿದ ಹಲವು ಜೀವಿಗಳು ಉದಾ: ಹಾವು, ಹಲ್ಲಿ, ಗೋಸುಂಬೆ ಮುಂತಾದವುಗಳನ್ನು ಸಾಯಿಸಿ, ಬಾಲಕ್ಕೆ ದಾರ ಕಟ್ಟಿ ನೇತುಹಾಕುವರು. ನಂತರ ಕೊಳೆತ ಅವುಗಳ ದೇಹದಿಂದ ತೊಟ್ಟಿಕ್ಕುವ ದ್ರವವನ್ನು ಪಾತ್ರೆಯಲ್ಲಿ ಸಂಗ್ರಹಿಸುವರು. (ಹೀಗಾಗಿ ಗೋಸುಂಬೆಗಳು ಅಳಿವಿನಂಚಿಗೆ ಹೋಗಿವೆ)

ಹಾಗೆ ಸಂಗ್ರಹಿಸಿದ ದ್ರವವನ್ನ ಶೀಶೆಯಲ್ಲಿ ಶೇಖರಿಸಿ ಇಟ್ಟಿರುತ್ತಾರೆ. ತಿನ್ನುವ ಪದಾರ್ಥದಲ್ಲಿ ಒಂದೆರಡು ಹನಿ ಸೆರಿಸಿಕೊಟ್ಟರಾಯಿತು. ತಿಂದವನು ಹಲವು ಕಾಯಿಲೆಯ ಲಕ್ಷಣಗಳಿಂದ ನರಳುವುದು ಖಚಿತ.
ಇದು ನಮ್ಮ ಶತೃಗಳನ್ನ ಯುದ್ಧ ಮಾಡದೆ ಕೊಲ್ಲುವ ಪದ್ಧತಿ. (ಇದು ಪ್ರಚಲಿತದಲ್ಲಿರುವ ವಿಷಯ ಆದರೆ ಮದ್ಧು ತಯಾರಿಸುವುದು ಗುಪ್ತವಾಗಿದೆ)

ಹಲವು ಪಂಡಿತರ ಪ್ರಕಾರ ಮದ್ದು ಹಾಕಿದ ಎರಡ್ಮೂರು ತಿಂಗಳು ನಂತರವೇ ದುಷ್ಪರಿಣಾಮಗಳು ಕಾಣಿಸುವುದಂತೆ ಈ ಎಲ್ಲ ವಿಚಾರ ದಿಟ ಎಂದು ಉಡುಪಿಯ ಸದ್ಯ ಹೊಳೆನರಸೀಪುರದಲ್ಲಿ “ಸರ್ಕಾರಿ ಆಯುರ್ವೇದ ವೈದ್ಯರಾಗಿರುವ” ಹಿರಿಯ ಸ್ನೇಹಿತರಾದ ಡಾ.ಜಯಂತ ಆಚಾರ್ಯ ತಿಳಿಸಿದರು. ಹಲವು ರೋಚಕ ಮಾಹಿತಿಗಳನ್ನು ಸಹ ನೀಡಿದರು. ಇಲ್ಲಿಗೆ ನಾನು ಹಿರಿಯರಿಂದ ಸಂಗ್ರಹಿಸಿದ ಮಾಹಿತಿ ತಪ್ಪಿಲ್ಲ ಅನಿಸಿತು.

ಮದ್ದು ಹಾಕಿದ್ದನ್ನ ಪರೀಕ್ಷಿಸುವ ವಿಧಾನ: 

ಸಂಶಯ ಬಂದ ವ್ಯಕ್ತಿಯು ೧೫ – ೨೦ ಕೆಂಪನೆಯ ಹುರುಳಿ ಕಾಳನ್ನು ತನ್ನ ಮೂತ್ರದಲ್ಲಿ ರಾತ್ರಿ ಪೂರ್ತಿ ನೆನೆ ಹಾಕಬೇಕು. ಮಾರನೆಯ ದಿನ ಹುರುಳಿ ತೆಗೆದು ೧೦ ನಿಮಿಷ ಪೇಪರ್ ಮೇಲೆ ಒಣ ಹಾಕಬೇಕು. ಕಪ್ಪಗಾದರೆ “ಮದ್ದು ಹಾಕಿದ್ದು” ಖಚಿತ.

ಇನ್ನೊಂದು ಪದ್ಧತಿ ಪ್ರಕಾರ ವ್ಯಕ್ತಿಯ ಅಂಗೈಯಲ್ಲಿ ನೀರು ಹಿಡಿಯಬೇಕು, ನಂತರ ಅದರಲ್ಲಿ ಒಂದೆರಡು ಹನಿ ಹರಳೆಣ್ಣೆ ಬಿಟ್ಟು ನೋಡಿ. ಹರಳೆಣ್ಣೆ ಮುಳುಗಿದರೆ “ಮುದ್ದು” ಪ್ರಯೋಗವಾಗಿದೆ ಎಂದರ್ಥ. ಇನ್ನೂ ಹಲವು ವಿಧಾನಗಳು ಜನಮಾನಸದಲ್ಲಿ ಪ್ರಚಲಿತ ಇವೆ.

ಫೋಟೋ ಕೃಪೆ : inspirityoga (ಸಾಂದರ್ಭಿಕ ಚಿತ್ರ )

ಮದ್ದು ತೆಗೆಯುವ ಪದ್ಧತಿ :

ಬಹು ಪ್ರಚಲಿತಕ್ಕೆ ಬಂದ “ಮದ್ದು ಹಾಕುವ” ಪದ್ಧತಿ ಬೆಳೆಯುತ್ತಾ ಸಾಗಿದಂತೆ, ಮದ್ದು ತೆಗೆಯುವ ಪದ್ಧತಿಯು ಜಾರಿಗೆ ಬಂದಿತು. ಇದು ಇಂದಿಗೂ ಕೆಲವೇ ಮನೆತನಗಳಲ್ಲಿ ಗುಪ್ತವಾಗುಳಿದ ವಿದ್ಯೆ. ಮದ್ದು ತೆಗೆಯುವವರು ಕೆಲವು ಗಿಡಮೂಲಿಕೆಗಳ ರಸ ಅಥವಾ ಪುಡಿಯನ್ನ ನೀರಿನಲ್ಲಿ ಅಥವಾ ಹಾಲಿನಲ್ಲಿ ಮಿಶ್ರಣ ಮಾಡಿ ಕುಡಿಸಿ, ಬಿಸಿಲಿಗೆ ಮೈಯೊಡ್ಡಲು ತಿಳಿಸುವರು. ನಂತರ ಒಂದರ್ಧ ಗಂಟೆಯಲ್ಲಿ ವಾಂತಿ ಅಥವಾ ಭೇದಿ ಶುರುವಾಗುತ್ತೆ. ಇದರ ಮೂಲಕ ಮುದ್ದೆಯಾಗಿ, ನೀರಾಗಿ, ವಿಚಿತ್ರ ಬಣ್ಣ ಬಣ್ಣದ ವಾಂತಿ ಅಥವಾ ಭೇದಿ ಅಥವಾ ಎರಡರ ಮೂಲಕ “ಮದ್ಧು” ಹೊರಹೋಗುವುದು. ಹಲವು ಮನೆತನಗಳಲ್ಲಿ ಹಣ ಬಯಸುವುದಿಲ್ಲ ಕೇವಲ ತೆಂಗಿನಕಾಯಿ, ಹಣ್ಣು, ಅಡಿಕೆ-ಎಲೆ ಮತ್ತು ತಮ ಕೈಲಾದಷ್ಟು “ದಕ್ಷಿಣೆ” (11 ರೂಪಾಯಿಯಿಂದ ಶುರುವಾಗಿ) ನೀಡಿದರಾಯಿತು.

ಈ ಢಾಳಾದ ನಂಬಿಕೆಯನ್ನು ಬಂಡವಾಳವಾಗಿಸಿಕೊಂಡ ಕೆಲ ಕಪಟಿಗರು, ವಾಂತಿಯಲ್ಲಿ ತಿಂದದ್ದೇ ಬೀಳುವುದು ಎಂದು ನಂಬಿಸಿ ವಾಂತಿ ಮಾಡಿದ ಪಾತ್ರೆಯಲ್ಲಿ ಕಣ್ತಪ್ಪಿಸಿ ಕೆಲವು ಪದಾರ್ಥಗಳನ್ನ ಹಾಕಿ, “ಈ ಪದಾರ್ಥದಲ್ಲಿ ಮದ್ಧು ಹಾಕಿ ಕೊಟ್ಟಿದ್ದು, ಅದು ಜೀರ್ಣವಾಗದೆ ಹಾಗೇ ಬಿದ್ದಿದೆ ನೋಡು” ಎಂದು ನಂಬಿಸಿ “ಹಣ” ಮಾಡಿಕೊಳ್ಳುವರು.

ಇನ್ನು ಕೆಲವರು ಮಂತ್ರ ಹಾಕಿ, ಹೊಕ್ಕಳು ಮೂಲಕ “ಮದ್ದು” ತೆಗೆಯುವೆ ಅಂತ ನಂಬಿಸಿ, ಹೊಟ್ಟೆಯ ಮೇಲೆ ಪಾತ್ರೆ ಇಟ್ಟು ಮಂತ್ರ ಹಾಕುವರು ನಂತರ ಇದರಿಂದ ಆಹಾರ ಪದಾರ್ಥ ಹೊರತೆಗೆದು “ಇದರಲ್ಲಿಯೇ ಮದ್ದು ಹಾಕಿದ್ದು” ಎನ್ನುವರು. ಇದು ಸಹ ವಂಚನೆ.

ಇಂಥವರಿಂದಲೇ ನಮ್ಮ ಭಾರತೀಯ ಅತ್ಯದ್ಭುತ ವಿಜ್ಞಾನ ಪದ್ಧತಿಯಾದ “ಮದ್ಧು” ಬಗ್ಗೆ ಅಪನಂಬಿಕೆ ಹುಟ್ಟಲು ಕಾರಣವಾಯಿತು. ವಂಚನೆಗೆ ಒಳಗಾದವರು ವಾಸಿಯಾಗದಿದ್ದಾಗ “ಮದ್ದು” ಕೇವಲ ಭ್ರಮೆ ಮತ್ತು ಮನಃಶಾಂತಿ ಅಷ್ಟೇ ಎಂದು ಮತ್ತೆ ವೈದ್ಯರ ಮೊರೆ ಹೋಗುವುದಿದೆ. ಆದ್ದರಿಂದಲೇ ಹಲವರು ಇದು ಕೇವಲ ಭ್ರಮೆ,ಸುಳ್ಳು, ಮೋಸ ಅಂತಾ ವಾದಿಸುವುದು. ಅನುಭವಕ್ಕೆ ಬರದವರೂ ಸಹ ಹಾಗೇ ವಾದಿಸುವುದುಂಟು.

ಫೋಟೋ ಕೃಪೆ : theculturetrip (ಸಾಂದರ್ಭಿಕ ಚಿತ್ರ )

ಮದ್ಧು ಹಾಕುವ ಪದ್ಧತಿಯ ಇತಿಹಾಸ : 

ಮದ್ದು ಹಾಕು ಅಥವಾ ಕೈವಿಷದ ಬಗ್ಗೆ ಅಧ್ಯಯನಕ್ಕೆ ಇಳಿದಾಗ ಗೋಚರವಾಗಿದ್ದು ಇದೊಂದು ಭಾರತೀಯರ ಪುರಾತನ ಅತ್ಯದ್ಭುತ ವಿಧಾನ ಅಂತ.
ಮದ್ಧಿಡುವುದು ಅಥರ್ವಣ ವೇದದಲ್ಲಿ ಬರುವ ಮಾಟ ಮಂತ್ರದ ಭಾಗವಾದ ತಂತ್ರದ ಒಂದು ವಿಧಾನವಂತೆ.

ನಾನು “ಆಯುರ್ವೇದ ಗ್ರಂಥ”ಗಳನ್ನ ತಡಕಾಡಿದಾಗ ದೊರೆತಿದ್ದು “ಗರವಿಷ” (ಕೃತ್ರಿಮ ವಿಷ)ದ ಮಾಹಿತಿ.
ಚರಕ ಸಂಹಿತೆ, ಸುಶ್ರುತ ಸಂಹಿತೆ, ಅಷ್ಟಾಂಗ ಹೃದಯ ಮುಂತಾದ ಹಲವು ಗ್ರಂಥಗಳಲ್ಲಿ ವಿವರಿಸಿದ್ದಾರೆ.

ಅಂದಿನ “ಗರವಿಷ”ವೇ ಇಂದು “ಮದ್ಧು” ಎಂದು ಹೆಸರು ಬದಲಾಯಿಸಿಕೊಂಡಿದೆ. ಗರವಿಷ ಅಥವಾ “ಮದ್ಧು” ತಯಾರಿಕೆ, ಬಳಕೆ ಮತ್ತು ಚಿಕಿತ್ಸೆಯ ಬಗ್ಗೆ ಉಲ್ಲೇಖಿಸಿದ್ದಾರೆ. ನಮ್ಮ ದೇಹದಲ್ಲಿಯೇ ಉತ್ಪತಿ ಯಾಗುವ ಅಂಶಗಳಿಂದಲೇ 99% ಜನರು “ಮದ್ದು” ತಯಾರಿಸುತ್ತಾರೆ, 1% ಮಾತ್ರ ವಿಷಜಂತುಗಳಿಂದ.

ನಮ್ಮ ದೇಹದಲ್ಲಿ ಉತ್ಪಾದನೆಯಾಗುವ ಬೆವರು, ಮುಟ್ಟಾದ ರಕ್ತ, ಉಗುರು, ಕೂದಲು ಮುಂತಾದ ನಿಷ್ಪ್ರಯೋಜಕ, ಕಲ್ಮಷ ಅಂಶಗಳಿಂದ, ಕೆಲ ಭಸ್ಮಗಳಿಂದ, ಕಡಿಮೆ ಶಕ್ತಿಯ ವಿಷಕಾರಕಗಳು, ಅಪಾಯಕಾರಿ ಆಹಾರ ಪದಾರ್ಥಗಳ ಮಿಶ್ರಣ ಅಥವಾ ಅವುಗಳಷ್ಟನ್ನೆ ಬಳಸಿ “ಮದ್ದು” ತಯಾರಿಸುವರು.

ಮದ್ದು ತಯಾರಿ ಮತ್ತು ಪ್ರಯೋಗ ಕೇವಲ ಶತ್ರುನಾಶದ ಉದ್ದೇಶದಿಂದ ಮಾತ್ರ.
ಭಾರತೀಯರ ಅದ್ಭುತ ವಿಧಾನ ಮತ್ತು ವಿಜ್ಞಾನವಿದು.

ಈ “ಮದ್ಧು” ಸೇವಿಸಿದ ತಕ್ಷಣವೆ ದುಷ್ಪ್ರಭಾವ ಬೀರುವುದಿಲ್ಲ. ಕಾಲಾನಂತರ ಒಂದೊಂದೆ ಲಕ್ಷಣಗಳು ಕಂಡು ಭೀಕರ ಕಾಯಿಲೆಗಳಾವವು. ಅಲಕ್ಷಿಸದೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಬೇಕು. ಇಲ್ಲವಾದರೆ ಸಾವು ಹತ್ತಿರಕ್ಕೆ ನುಸುಳಬಹುದು.

ಫೋಟೋ ಕೃಪೆ :keckmedicine (ಸಾಂದರ್ಭಿಕ ಚಿತ್ರ )

ಗರ ವಿಷಸೇವನೆಯ ಲಕ್ಷಣಗಳು : 
ಆಯುರ್ವೇದ ಗ್ರಂಥಗಳಲ್ಲಿ ಮದ್ಧು ಹಾಕಿಸಿಕೊಂಡವರಿಗೆ ಕಾಲಾನಂತರ ಕಂಡುಬರುವ ಲಕ್ಷಣ ಅಥವಾ ಕಾಯಿಲೆಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದಾರೆ.

  • ರಕ್ತಹೀನತೆ.
  • ಬೇಗನೆ ದೇಹದ ತೂಕ ಕಡಿಮೆಯಾಗುವುದು
  • ಅಜೀರ್ಣ, ಹಸಿವಿನ ತೊಂದರೆ.
  • ಹೃದಯ ಬಡಿತ ಹೆಚ್ಚಳ.
  • ಹೊಟ್ಟೆಯುಬ್ಬರ
  •  ಕೈ ಮತ್ತು ಪಾದದ ಬಾವು
  •  ಪದೇ ಪದೇ ಬೇದಿ.
  • ವಾಂತಿ
  • ಮತ್ತೆ ಮತ್ತೆ ಕಾಡುವ ಜ್ವರ.
  • ವಿಲಕ್ಷಣ ಸುಸ್ತು

ಮುಂತಾದ ಲಕ್ಷಣಗಳು ಕಂಡುಬಂದರೆ ಅನುಭವಿ ಆಯುರ್ವೇದ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುವುದು ಉತ್ತಮ. ಮೇಲಿನ ಲಕ್ಷಣಗಳನ್ನ ಗಮನಿಸಿದರೆ ದೇಹದ ಹಲವು ಅಂಗಗಳ ಕಾರ್ಯಕ್ಷಮತೆ ಕುಂಟಿತಗೊಂಡು ಬರುವ ತೊಂದರೆಗಳು ಅನಿಸುತ್ತೆ. ಲಿವರ್, ಕಿಡ್ನಿ, ಹೃದಯದ ಮೇಲೆ ದುಷ್ಪರಿಣಾಮ (Adverse effect)ದ ಪ್ರಭಾವ ಎಂದು ಗೋಚರಿಸುತ್ತೆ. ಹೆಚ್ಚಿನ ಸಂಶೋಧನೆಗಳ ಅವಶ್ಯಕತೆ ಮೆಲ್ನೋಟಕ್ಕೆ ಕಂಡುಬರುವುದು.

ಫೋಟೋ ಕೃಪೆ :kannadaworld (ಸಾಂದರ್ಭಿಕ ಚಿತ್ರ )

ಗರವಿಷ_ಚಿಕಿತ್ಸೆ : 

  • ವಮನ ಚಿಕಿತ್ಸೆ (ವಾಂತಿ ಮಾಡಿಸುವುದು): ತಾಮ್ರ ಭಸ್ಮವನ್ನು ಜೇನು ತುಪ್ಪದ ಜೊತೆ ಕೊಟ್ಟು ವಾಂತಿ ಮಾಡಿಸುವರು. ( ವೈದ್ಯರು ಹಲವು ಗಿಡಮೂಲಿಕೆಗಳನ್ನು ಜೊತೆ ಬಳಸುವರು).
  • ವಿಷನಾಶ ಮಾಡಲು ಮತ್ತು ಸಂಪೂರ್ಣ ಹೊರಹಾಕಲು “ಸುವರ್ಣ ಭಸ್ಮ” ನೀಡುವರು. ಗರವಿಷಕ್ಕೆ ಸುವರ್ಣ ಭಸ್ಮ ಅತ್ಯುತ್ತಮ ಔಷಧಿ.
  • ಎಮ್ಮೆಯ ತುಪ್ಪದಲ್ಲಿ ನಾಗದಂತಿ(Croton oblongifolius), ತ್ರಿವೃತ್ತ್(operculina turpethem), ಸ್ನುಹಿ ಕ್ಷೀರ(Euphorbia nerifolia) , ಮಧನಫಲ(Randia dumetorum) , ಗೋ ಮೂತ್ರದ ಜೊತೆ ಕುದಿಸಿ ಸೇವಿಸುವುದರಿಂದ ಗರವಿಷ ಸಂಪೂರ್ಣ ವಾಸಿಯಾಗುವುದು ಎಂದು “ಚರಕ ಸಂಹಿತೆ” ಯಲ್ಲಿ ತಿಳಿಸಲಾಗಿದೆ‌.ಇಲ್ಲಿ ಕೇವಲ ವೈದ್ಯ ಚರಕ ಋಷಿಗಳು ತಿಳಿಸಿದ್ದನ್ನ ಸ್ಫುಟವಾಗಿ ಉಲ್ಲೆಖಿಸಿರುವೆ. ಇನ್ನೂ ಆಯುರ್ವೇದದ ಘಟಾನುಘಟಿ ವೈದ್ಯರು ಮತ್ತು ಗ್ರಂಥಗಳಾದ ಸುಶ್ರುತ, ವಾಗ್ಭಟ, ಚಕ್ರಪಾಣಿ, ಯೋಗರತ್ನಾಕರ, ಭಾವಪ್ರಕಾಶ, ಶಾರಂಗದರ, ಮಾಧವ ನಿಧಾನ ಮುಂತಾದವರು “ಗರವಿಷ”ದ ಬಗ್ಗೆ, ಚಿಕಿತ್ಸೆ ಬಗ್ಗೆ ವೈವಿಧ್ಯತೆ ಹೊಂದಿದ್ದಾರೆ. ಗರವಿಷ ಅರ್ಥೈಸಿಕೊಳ್ಳಲು ಇನ್ನೂ ಹೆಚ್ಚಿನ ಓದು-ಬರಹ ಬೇಕು. ಇಲ್ಲಿ ಕೇವಲ ಮೇಲಿನ ಪದರ ಹೆಕ್ಕಿದ್ದೇನೆ.

ಒಟ್ಟಾರೆಯಾಗಿ ಹೇಳುವುದಾದರೆ “ಗರವಿಷ” ಅಥವಾ “ಮದ್ಧು ಹಾಕುವುದು” ಭಾರತೀಯ ವಿಜ್ಞಾನದ ಅಮೋಘ, ದಿವ್ಯ ವಿಜ್ಞಾನ. ಅರ್ಥೈಸಿಕೊಳ್ಳಲು ಈಗಿನ ನಮ್ಮ ಸಂಪೂರ್ಣ ಜ್ಞಾನವೂ ಸಾಲದು, ಇನ್ನೂ ಹೆಚ್ಚು ಹೆಚ್ಚು ಸಂಶೋಧನೆಗಳಾದಲ್ಲಿ ನಮ್ಮ ಜ್ಞಾನದ ಮರ್ಮ ಅರಿಯಬಹುದು.

“ಮದ್ಧು ಹಾಕುವ” ಪದ್ಧತಿ ನಮ್ಮ ರಕ್ಷಣೆಗಿರುವ, ಶತೃಗಳನ್ನ ಯುದ್ಧ ಮಾಡದೆ ಸೆದೆಬಡಿಯುವ ತಂತ್ರ.



ಆಧುನಿಕವಿ ಜ್ಞಾನ ವಿಶ್ಲೇಷಣೆ :

ಗರವಿಷ ಅಥವಾ ಕೈಮದ್ದು (Antigen_ಪ್ರತಿಜನಕ=ರೋಗಕಾರಕ ) ಅತೀವ ಕಡಿಮೆ ವಿಷ, ಶಕ್ತಿ, ಕಡಿಮೆ ತೂಕದ ಕಣ(Low molecular weight) ಹೊಂದಿರುವುದರಿಂದ, ಸೇವಿಸಿದ ನಂತರ ದೇಹದ ಪ್ರತಿರೋಧಕ ವ್ಯವಸ್ಥೆ ಪ್ರತಿಕಾಯಗಳನ್ನು(Antibody) ಉತ್ಪಾದನೆ ಮಾಡಲು ಶಕ್ತಿಯುತವಾಗಿರಲ್ಲ.

ಕೈಮದ್ದು(Antigen) ಮತ್ತೊಂದು ಪ್ರೋಟಿನ್(carrier Protien) ಜೊತೆ ಸೇರಿದ ಮೇಲೆನೆ ದೇಹದಲ್ಲಿ ಪ್ರತಿಕಾಯಗಳು (Antibody) ಉತ್ಪಾದನೆಯಾಗುವುದು. ಆದ್ದರಿಂದ ಗರವಿಷವನ್ನ Hapten (ಪ್ರತಿಕಾಯಗಳನ್ನ ಉತ್ಪಾದಿಸಲಾಗದ ಸೂಕ್ಷ್ಮ ವಿಷ ಅಥವಾ ಪದಾರ್ಥ ಆದರೆ ರೋಗಕಾರಕ ಶಕ್ತಿ ಹೊಂದಿರುತ್ತದೆ) ಅಂತ ಕರೆಯಲಾಗತ್ತೆ. ಆದ್ದರಿಂದಲೇ ಗರವಿಷ ಸೇವನೆಯ ಹಲವು ದಿನಗಳ ನಂತರವೆ ಲಕ್ಷಣಗಳು ಗೋಚರಿಸುವುದು. ಈ ಒಂದು ಸಂಪೂರ್ಣ ಪ್ರಕ್ರೀಯೆಗೆ Hapten – carrier adduct ಅಂತ ಊ‌ಹಿಸಲಾಗಿದೆ.

Hapten molecule(ಗರವಿಷ)+ ಪ್ರೋಟಿನ್( carrier protein) = Antibody (ಪ್ರತಿಕಾಯ)

[ಹೆಚ್ಚು ತಿಳಿಯಲು ಓದಿ.👇 https://www.ncbi.nlm.nih.gov/pmc/articles/PMC5954249/ ]

ನಾನು ಕೇವಲ ಕುತೂಹಲದಿಂದ ಅಧ್ಯಯನ ಮಾಡಿ ಸಂಗ್ರಹಿಸಿದ ಲೇಖನವಿದು ಮತ್ತು ನನ್ನ ಅನುಭವಕ್ಕೆ ಬಂದಿರುವುದರಿಂದ ಇಷ್ಟುದ್ದ ಬರೆದು ಸಾದರಪಡಿಸುತ್ತಿದ್ದೇನೆ. ಇತ್ತಿತ್ತಲಾಗಿ “ಕೈ ಮದ್ದು” ಬಳಕೆ ಕಡಿಮೆಯಾಗಿದೆ ಎಂಬುದು ಕೆಲವರ ಊಹೆಯಿದೆ.


  • ಡಾ.ಪ್ರಕಾಶ ಬಾರ್ಕಿ, ಕಾಗಿನೆಲೆ.

2.3 3 votes
Article Rating

Leave a Reply

1 Comment
Inline Feedbacks
View all comments
ಎಂ,ಆರ್. ನಾಗರಾಜ್

ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು,ಹಿತಶತೃಗಳಿಂದ ಆಗುವ ಅನಾಹುತಗಳ ಬಗ್ಗೆ ಎಚ್ಚರವಾಗಿರಬೇಕು.

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW