ದಯವಿಟ್ಟು ಬಾ ಅಪ್ಪಾ… – ವಿನಾಯಕ ಅರಳಸುರಳಿ

ಅಪ್ಪ ಈಗ ಶಾಶ್ವತವಾಗಿ ನಿದ್ರೆಯಲ್ಲಿದ್ದಾನೆ. ನಾನು ಮಾತ್ರ ಅತೃಪ್ತ ಆತ್ಮದಂತೆ ಅವನು ಕುಳಿತ, ಓಡಾಡಿದ, ಅವನ ಶವವ ಮಲಗಿಸಿದ ಹಾಗೂ ಕೊನೆಗೆ ಅವನನ್ನು ಸುಟ್ಟ ಜಾಗಗಳಿಗೆಲ್ಲಾ ಹೋಗಿ ಹೋಗಿ ಬರುತ್ತಿದ್ದೇನೆ. ಸತ್ತವರ ಆತ್ಮ ಕೆಲ ದಿನಗಳ ಕಾಲ ಇಲ್ಲೇ ಅಲೆಯುತ್ತಿರುತ್ತದಂತೆ. ಈ ಜಾಗಗಳ ಪೈಕಿ ಎಲ್ಲೋ ಒಂದು ಕಡೆ, ಒಂದೇ ಒಂದು ಸಲ ಅಪ್ಪ ಕಾಣುತ್ತಾನೇನೋ, ನನ್ನೊಟ್ಟಿಗೆ ಮಾತಾಡುತ್ತಾನೇನೋ ಎಂದು ಕಾಯುತ್ತಿದ್ದೇನೆ. ಊಹ್ಞೂಂ.. ಎಲ್ಲೂ ಇಲ್ಲ.. ಅಪ್ಪ ಇನ್ನೆಂದೂ ಬರುವುದಿಲ್ಲ..ವಿನಾಯಕ ಅರಳಸುರಳಿ ಅವರ ಭಾವನಾತ್ಮಕ ಬರಹವನ್ನು ತಪ್ಪದೆ ಓದಿ…

ಅದು ಕಳೆದ ವರ್ಷ ಪಿತೃ ಪಕ್ಷದ ಅಮವಾಸ್ಯೆಯ ದಿನ. ಆಪರೇಷನ್ ಆಗಿ ವರ್ಷಾರು ತಿಂಗಳು ಕಳೆದಿತ್ತು. ಅಪ್ಪ ಸುಧಾರಿಸಿಕೊಂಡಿದ್ದ. ತೊದಲು ತೊದಲು ಮಾತಾಡುತ್ತಿದ್ದ. ಕುಂಟುತ್ತಾ ನಡೆಯುತ್ತಿದ್ದ. ನನ್ನ ಪೂರ್ತಿ ಹೆಸರು ಹೇಳಲಾಗದೆ ಅಣ್ಣ ಅಣ್ಣ ಎನ್ನುತ್ತಿದ್ದ. ನಾನೇನಾದರೂ ಅವನನ್ನು ಬಿಟ್ಟು ತೀರ್ಥಹಳ್ಳಿಗೆ ಹೊರಟರೆ “ಬೇಗ ಬಾ..ಕಾಯ್ತಾ ಇರ್ತೀನಿ” ಎಂದು ಬಿಕ್ಕುತ್ತಿದ್ದ.

 

ಆ ದಿನ ಎಂದಿನಂತೆಯೇ ಎದ್ದವನನ್ನು ಬಾತ್ರೂಮಿಗೆ ನಡೆಸಿಕೊಂಡು ಹೋಗಿ ಮುಖ ತೊಳೆಸಿ, ತಿಂಡಿಗೆ ಕೂರಿಸಿ, ಮಾತ್ರೆ ತಿನ್ನಿಸಿ, ವಾಕಿಂಗ್ ಮಾಡಿಸಿ ಅವನ ಎಂದಿನ ಮಂಚದ ಮೇಲೆ ಕೂರಿಸಿದ್ದೆ. ಅಮ್ಮ ತನ್ನ ಗೆಳತಿಯ ಮನೆಗೆ ಹೊರಟಿದ್ದಳು. ಅವಳನ್ನು ಬೈಕಿನಲ್ಲಿ ಬಿಟ್ಟು ಬಂದೆ. ಮಧ್ಯಾಹ್ನ ಅಪ್ಪ ಎಂದಿನಂತೆ ಉಂಡು ಮಲಗಿದ. ಎದ್ದವನು “ಒಂದು ಲೋಟ ಚಾ” ಎಂದು ಕೇಳಿದ. ಮಾಡಿಕೊಟ್ಟೆ. ಕುಡಿದ. ಅಷ್ಟರಲ್ಲಿ ಅಮ್ಮ ತನ್ನ ಗೆಳತಿಯ ಜೊತೆ ಬಂದಳು. ನಾನು ಅಂಗಳದಲ್ಲಿ ಗೆಳೆಯ ನಂದೀಶ್ ಜೊತೆ ಮಾತಾಡುತ್ತಿದ್ದೆ. ಮಾತು ಮುಗಿಸಿ ಒಳಗೆ ಬಂದೆ. ಮಂಚದ ಮೇಲೆ ಕುಳಿತಿದ್ದ ಅಪ್ಪ ಯಾಕೋ ಹತ್ತಿರ ಕರೆದ. ತನ್ನ ಎಡಗೈಯಿಂದ ಬಲಗೈಯ ಕಡೆಗೆ ತೋರಿಸುತ್ತಾ ಏ ಏ ಅಮ್ಮ.. ಏ ಎಂದ. ಅಷ್ಟೇ.. ಅವನ ಮುಖ ಒಂದು ಕಡೆಗೆ ವಾಲಿತು. ಕುಳಿತಲ್ಲೇ ಕುಸಿದವನನ್ನು ಹಿಡಿದುಕೊಂಡೆ. ಫಿಟ್ಸ್ ಆರಂಭವಾಯಿತು. ಇಡೀ ದೇಹ ವಿಲಗುಟ್ಟತೊಡಗಿತು. ಯಾರ್ಯಾರೋ ಬಂದರು. ಏನೇನೋ ಮಾಡಿದರು. ಗಂಟೆ ಕಳೆದರೂ ಫಿಟ್ಸ್ ನಿಲ್ಲಲಿಲ್ಲ. ಆ್ಯಂಬುಲೆನ್ಸ್ ಕರೆಸಿ ತೀರ್ಥಹಳ್ಳಿಗೆ ಹೊರಟೆವು.

ಊಹ್ಞೂಂ.. ಮುಂದೆ ಹೇಳಲಾರೆ. ನಡುರಾತ್ರೆ ನಂಜಪ್ಪಕ್ಕೆ ದಾಖಲಿಸಿದ್ದು, ಅವರು ಸಿಟಿ ಸ್ಕ್ಯಾನ್ ಮಾಡದೇ ಕೋವಿಡ್ ಎಂದು ಮಾರನೇ ದಿನ ನಡುರಾತ್ರೆಯ ಹೊತ್ತಿಗೆ ಅರ್ಧಂಬರ್ಧ ಚಿಕಿತ್ಸೆ ಮಾಡಿ ಹಾಗೇ ಕಳಿಸಿದ್ದು, ರಾತ್ರೆ ಹನ್ನೆರೆಡಕ್ಕೆ ಮೆಗ್ಗಾನ್ ಗೆ ಹೋಗಿದ್ದು, ಅಲ್ಲಿನ ಅವ್ಯವಸ್ಥೆಯ ನೋಡಲಾಗದೆ ವೈದ್ಯರ ಜೊತೆ ಜಟಾಪಟಿಯಾಗಿ ಹೊಡೆಯಲೇ ಬಂದ ಅವನ ದುರ್ಮಾತುಗಳೆಲ್ಲವ ಸಹಿಸಿ ಅಲ್ಲಿಂದ ರಾತ್ರೆ ಒಂದು ಗಂಟೆಗೆ ಅಪ್ಪನನ್ನು ಎತ್ತಿಕೊಂಡು ಬಂದಿದ್ದು, ಮಾರನೇ ದಿನವೂ ಜ್ವರ ವಾಸಿಯಾಗದೆ ತೀರ್ಥಹಳ್ಳಿಗೆ ದಾಖಲಿಸಿದ್ದು, ರಾತ್ರೆ ಅಪ್ಪ ಪೈಪು ಕಿತ್ತುಕೊಂಡಾಗ ಅದನ್ನು ಹಾಕಿಕೊಡಿ ಅಂತ ಬಿಕ್ನಾಸಿ ನರ್ಸುಗಳ ಎದುರು ಬೇಡಿದ್ದು, ನರಳುವ ಅಪ್ಪನ ನೋಡಲಾಗದೆ ಸಹಾಯ ಕೇಳುತ್ತಾ, ರಾತ್ರೆಯಿಡೀ ನಿದ್ರೆಯಿಲ್ಲದೆ ಆಸ್ಪತ್ರೆಯ ಕಾರಿಡಾರುಗಳುದ್ದಕ್ಕೂ ಅಲೆದದ್ದು, ದಾರಿ ತಪ್ಪಿ ಶವಾಗಾರಕ್ಕೂ ಹೋಗಿದ್ದು..

ನಂತರ ಆದರ್ಶಕ್ಕೆ ಹೋಗಿದ್ದು, ಅಪ್ಪ ಹುಷಾರಾಗಿದ್ದು, ಹತ್ತೇ ದಿನಕ್ಕೆ ಮತ್ತೆ ಅವನಿಗೆ ಎಚ್ಚರ ತಪ್ಪಿದ್ದು, ಅವನ ಅರೆಪ್ರಜ್ಞೆಯ ದೇಹವ ಹೊತ್ತು ಕಿರಣ, ಸಿಟಿ, ಉದ್ಯಾವರ, ಆದರ್ಶ, ಮಣಿಪಾಲ್ ಆಸ್ಪತ್ರೆಗಳೆಲ್ಲದರಲ್ಲಿ ಒಟ್ಟು ನೂರಾ ನಲವತ್ಮೂರು ದಿನಗಳ ಕಳೆದಿದ್ದು, ಕೊನೆಗೂ ಅಪ್ಪ ಕಣ್ಣು ಬಿಟ್ಟುದ್ದು, ಮನೆಗೆ ಬಂದಿದ್ದು.. ಮತ್ತೆ ಎರೆಡೇ ತಿಂಗಳಿಗೆ ಅವನು ನನ್ನ ಬಿಟ್ಟು ಶಾಶ್ವತವಾಗಿ ಹೊರಟೇ ಹೋಗಿದ್ದು..

ಒಂದು ವರ್ಷವೇ ಕಳೆದುಹೋಗಿದೆ. ಇಂದಿನಂತೆಯೇ ಬೆಳಗಾಗಿದ್ದ ಕಳೆದ ವರ್ಷದ ಆ ದಿನ ಬೆಳಗ್ಗೆಯ ಹೊತ್ತಿಗೆ ನನಗೆ ಗೊತ್ತೇ ಇರಲಿಲ್ಲ, ಮಂಚದ ಮೇಲೆ ಮಗುವಿನ ಹಾಗೆ ಕುಳಿತು ತೊದಲು ತೊದಲು ಮಾತಾಡುತ್ತಾ ಅಣ್ಣ.. ಅಮ್ಮ… ಚಾ.. ಬಿಳೀ ಬೆಕ್ಕು ಎಂದೆಲ್ಲಾ ಮಗುವಿನ ಹಾಗೆ ಮಾತಾಡುತ್ತಿರುವ ನನ್ನ ಮುದ್ದು ಅಪ್ಪ ಮುಂದಿನ ವರ್ಷ ಈ ಹೊತ್ತಿಗೆ ಭೂಮಿಯ ಮೇಲೇ ಇರುವುದಿಲ್ಲ ಅಂತ. ಮತ್ತೆ ಫಿಟ್ಸು ಬಂದು ಬೀಳುವ ಮುನ್ನ ಅಪ್ಪ ಕಟ್ಟ ಕಡೆಯದಾಗಿ “ಅಣ್ಣಾ” ಎಂದು ನನ್ನನ್ನು ಕೂಗಿದ್ದ. ತನಗೇನೇ ಆದರೂ ಅಣ್ಣ ಕಾಪಾಡುತ್ತಾನೆ ಎಂಬ ಮುಗ್ಧ ನಂಬಿಕೆ ಅವನದಾಗಿತ್ತು. ಆದರೆ ಈ ಹತಾಶ ಮೂರ್ಖ ಮಗ ಮಾತ್ರ ಕೊನೆಗೂ ಸೋತುಬಿಟ್ಟ.

ನಿಮಗೆ ಗೊತ್ತಾ ಗೆಳೆಯರೇ? ಮೊನ್ನೆ ಅಪ್ಪನ ಅಸ್ತಿ ವಿಸರ್ಜನೆಗೆ ಹೋಗಿದ್ದೆ. ಎಲ್ಲವೂ ಮುಗಿದು ಕೈಯಲ್ಲಿದ್ದ ಅಪ್ಪನ ಕಟ್ಟಕಡೆಯ ಭೌತಿಕ ವಸ್ತುವಾದ ಅವನ ತಲೆಯ, ಎದೆಯ ಹಾಗೂ ಕಾಲಿನ ಮೂಳೆಯ ತುಣುಕುಗಳ ಶರಾವತಿಯ ಮಡಿಲಿಗೆ ಹಾಕುವ ಮುನ್ನ ಬೊಗಸೆಯಲ್ಲಿ ಹಿಡಿದು ಪ್ರೀತಿಯಿಂದೊಮ್ಮೆ ಕೇಳಿದೆ‌. “ಅಂತ ಅಪ್ಪಾ… ಬಾಬು ಮಾಡದಾ? ಹೋಗಿ ಬರ್ತೀಯಾ? ನಾನೂ ಬರ್ಲಾ?”

ನಿದ್ರೆ ಎಂದು ಹೇಳಲಾಗದ ಅಪ್ಪ ಅದಕ್ಕೆ ಬಾಬು ಎನ್ನುತ್ತಿದ್ದ‌. ಈಗವನು ಶಾಶ್ವತವಾಗಿ ನಿದ್ರೆಯಲ್ಲಿದ್ದಾನೆ. ನಾನು ಮಾತ್ರ ಅತೃಪ್ತ ಆತ್ಮದಂತೆ ಅವನು ಕುಳಿತ, ಓಡಾಡಿದ, ಅವನ ಶವವ ಮಲಗಿಸಿದ ಹಾಗೂ ಕೊನೆಗೆ ಅವನನ್ನು ಸುಟ್ಟ ಜಾಗಗಳಿಗೆಲ್ಲಾ ಹೋಗಿ ಹೋಗಿ ಬರುತ್ತಿದ್ದೇನೆ. ಸತ್ತವರ ಆತ್ಮ ಕೆಲ ದಿನಗಳ ಕಾಲ ಇಲ್ಲೇ ಅಲೆಯುತ್ತಿರುತ್ತದಂತೆ. ಈ ಜಾಗಗಳ ಪೈಕಿ ಎಲ್ಲೋ ಒಂದು ಕಡೆ, ಒಂದೇ ಒಂದು ಸಲ ಅಪ್ಪ ಕಾಣುತ್ತಾನೇನೋ, ನನ್ನೊಟ್ಟಿಗೆ ಮಾತಾಡುತ್ತಾನೇನೋ ಎಂದು ಕಾಯುತ್ತಿದ್ದೇನೆ. ಊಹ್ಞೂಂ.. ಎಲ್ಲೂ ಇಲ್ಲ.. ಅಪ್ಪ ಇನ್ನೆಂದೂ ಬರುವುದಿಲ್ಲ..

ಚಿಕ್ಕವನಿದ್ದಾಗ ಅಪ್ಪ ಒಮ್ಮೆ ಅಜ್ಜನ ಮನೆಗೆ ಹೊರಟಿದ್ದ. ಅವನ್ನನ್ನು ಎಂದೂ ಬಿಟ್ಟಿರದ ನಾನೂ ಅವನ ಜೊತೆ ಓಡಿದ್ದೆ. ಅವನ ಹಿಂದೆಯೇ ಇನ್ನೇನು ಬಸ್ಸು ಹತ್ತಬೇಕೆನ್ನುವಾಗ ಅಮ್ಮ ನನ್ನನ್ನು ಎಳೆದುಕೊಂಡಿದ್ದಳು. ಅಪ್ಪ ಒಬ್ಬನೇ ಹೋಗಿಬಿಟ್ಟಿದ್ದ. ಆ ದಿ‌ನವಿಡೀ ನಾನು ಒಂದೇ ದನಿಯಲ್ಲಿ ಅತ್ತಿದ್ದೆ: ಅಪ್ಪಾ.. ನಾನೂ ಬರ್ತೀನಿ.

ಇವತ್ತೂ ನಾನು ಅಳುತ್ತಿದ್ದೇನೆ. ಅದೇ ದನಿ.. ಅದೇ ಕಣ್ಣೀರು.. ಅಪ್ಪಾ.. ಒಮ್ಮೆ ಬಂದು ಬಿಡು. ಅಂದು ಹೋದವನು ಮಾರನೇ ದಿನ ಗಾಯತ್ರಿ ಬಸ್ಸಿಗೆ ಮರಳಿ ಬಂದೆಯಲ್ಲಾ? ಹಾಗೇ.. ನಿನಗೆ ನಿನ್ನಿಷ್ಟದ ಪೀಲೆ ಕೊಡಿಸುತ್ತೇನೆ. ನಿನ್ನನ್ನು ತೋಟದ ತುಂಬಾ ಓಡಾಡಿಸುತ್ತೇನೆ. ನಿನ್ನ ಪ್ರೀತಿಯ ರೇಡಿಯೋ ಹಾಡು ಕೇಳಿಸುತ್ತೇನೆ. ನಿನ್ನ ಮಡಿಲಿನಲ್ಲಿ ಮಲಗುತ್ತೇನೆ.
ದಯವಿಟ್ಟು ಬಾ ಅಪ್ಪಾ..


  • ವಿನಾಯಕ ಅರಳಸುರಳಿ – ಗುಬ್ಬಿಪುಕ್ಕ ಯೂಟ್ಯೂಬ್ ಚಾನೆಲ್ ನ ಸಂಸ್ಥಾಪಕರು, ಲೇಖಕರು.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW