ಕಣ್ಣಿಗೆ ಕಾಣುವ ದೇವರು….

ಕೋವಿಡ್ ಹೋಗಿಲ್ಲ, ಇನ್ನೂ ಇದೆ. ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ಕೋವಿಡ್ ನಿಂದ ನಲುಗಿದ ಕತೆಯನ್ನು ಅವರ ಧರ್ಮಪತ್ನಿ ಲೇಖಕಿ ಗಿರಿಜಾ ಶಾಸ್ತ್ರಿ ಅವರು ಬರೆದಿದ್ದಾರೆ, ಅದನ್ನು ಓದುವಾಗ ಗಂಟಲು ಬಿಗಿಯಿತು, ಮನಸ್ಸು ಭಾರವಾಯಿತು. ನೀವು ಕೂಡಾ ತಪ್ಪದೆ ಓದಿ …

“ನಮ್ಮನೇಗೆ ಬಂದುಬಿಡಿ ಆಂಟೀ, ಗೆಸ್ಟ್ ಗಳಿಗೆಂದೇ ಎರಡನೇ ಮಹಡಿಯಲ್ಲಿ ಪ್ರತ್ಯೇಕ ಮನೆ ಕಟ್ಸಿದ್ದೀವಿ” ಹೋಗದೇ ಗತ್ಯಂತರವೇ ಇರಲಿಲ್ಲ ಆದರೂ ಉಪಚಾರಕ್ಕೆನ್ನುವಂತೆ ” ನಿನ್ನ ಗಂಡನನ್ನು ಕೇಳಿದೆಯಾ ಅವರು ಏನಂತಾರೆ?”

“ಅವರಿಗೆ ಏನೂ ಪ್ರಾಬ್ಲಮ್ ಇಲ್ಲ ನೀವು ಬನ್ನಿ ಆಂಟಿ” ಧ್ವನಿಯಲ್ಲಿ ಉಪಚಾರದ ಸೋಗಿರಲಿಲ್ಲ ಪ್ರಾಮಾಣಿಕ ಕಕ್ಕುಲಾತಿ ಇತ್ತು.

ಅಮೇರಿಕಾದಿಂದ ಬಂದು ಇಪ್ಪತ್ತು ದಿನಗಳಾಗಿದ್ದವು ಅಷ್ಟೇ. ಅಷ್ಟರಲ್ಲಿ ಅಣ್ಣನ ಮೊಮ್ಮಗಳ ನಾಮಕರಣಕ್ಕೆಂದು ಬೆಂಗಳೂರಿಗೆ ಹಾರಿದ್ದೆವು. ಅಲ್ಲಿಗೆ ಹೋದ ಮರುದಿನವೇ ಗಂಡನಿಗೆ ನೆಗಡಿ ಖಾ…ಖೂ..ಶುರುವಾಯಿತು. “ಏ..ಒಂದು ಸಿಟ್ರೋಜಿನ್ ತೊಗೋಳ್ಳಿ ಸಾಕು ನೆಗಡಿಗೆಲ್ಲಾ ಯಾರಾದರೂ ಡಾಕ್ಟರ್ ಹತ್ತಿರ ಹೋಗ್ತಾರ?” ನಾದಿನಿಯ ಮನೆಗೆ ಹೋದಾಗ ಅವರ ಸೊಸೆ ಹೇಳಿದಳು. ಯಾಕೋ ನೆಗಡಿ ದುಮು ದುಮು ಹೆಚ್ಚಾಯಿತು. ಕಣ್ಷು ಕೆಂಪಾಗಿ ನೀರು ಸುರಿಯುತ್ತಿತ್ತು. ಎಲ್ಲರ ಮನೆಯಲ್ಲಿಯೂ ವೃದ್ಧರೂ ಎಳೆಯ ಮಕ್ಕಳು!!!

ಇನ್ನು ಅಣ್ಣ, ನಾದಿನಿ ಎಂದೆಲ್ಲ ಅವರ ಮನೆಗಳಲ್ಲಿ ಠಿಕಾಣಿ ಹೂಡುವುದು ಸರಿಯಲ್ಲ ಎನಿಸಿತು. ಅವರಿಗೆ ಇವರ ಮನೆ, ಇವರಿಗೆ ಅವರ ಮನೆ ಎಂದು ಸುಳ್ಳು ಹೇಳಿ ಜಾಗಖಾಲಿ ಮಾಡಿದೆವು. ಅಶೋಕ ಪಿಲ್ಲರ್ ಬಳಿ, ಲಾಲ್ ಬಾಗ್ ಎದುರಿಗೇ ಇರುವ ಒಂದು ಹೋಟೇಲ್ ಗೆ ನಮ್ಮ ವಾಸ್ತವ್ಯವನ್ನು ಬದಲಾಯಿಸಿದೆವು. ಬೆಳಿಗ್ಗೆ ಕಾಫಿ ಕುಡಿದು ಲಾಲ್ ಬಾಗ್ ವಾಯುವಿಹಾರಕ್ಕೆ ಹೊರಟರೆ ಎರಡು ಗಂಟೆಗಳ ಕಾಲ ಸುತ್ತಾಡಿ ಹೊಟೇಲ್ ಗೆ ಬಂದು, ಅವರು ಕೊಡುವ ಪೂರಕ ಉಪಹಾರವನ್ನು (complimentary break fast) ಗಡದ್ದಾಗಿ ಮೆದ್ದು. ಔಷಧಿ ಮಾತ್ರೆ ನುಂಗಿ ತಾಚಿ ಮಾಡಿದರೆ ಹನ್ನೆರೆಡು ಗಂಟೆ ಹೊಡೆಯುತ್ತಿತ್ತು. ಸ್ನಾನ ಮಾಡಿ ಮತ್ತೆ ಯಾವುದಾದರೂ ಅಮೃತ ತುಲ್ಯ ಹೋಟೇಲ್ ನಲ್ಲಿ ಭೋಜನ ಮಾಡಿ, ಮರಳಿ ಬಂದು ಮತ್ತೆ ಸ್ವಲ್ಪ‌ ಫೇಸ್ ಬುಕ್, ಓದು ಆನಂತರ ನಿದ್ದೆ. ಸಂಜೆ ಕಾಫಿ, ರಾತ್ರಿ ಊಟ ಎಂದು‌ ತಿರುಗಾಡುತ್ತಾ, ಜಯನಗರದ ನಾಲ್ಕನೇ ಬ್ಲಾಕ್ ಜಿಗಿ‌ಜಿಗಿಯಲ್ಲಿ ಷಾಪಿಂಗ್, ಮಸಾಲೆ ದೋಸೆ….ನಾವು ಮದುವೆಯಾದ ಹೊಸತರಲ್ಲೂ ಇಷ್ಟು ಆನಂದಭಾವಿಗಳಾಗಿ ಇದ್ದಿರಲಿಲ್ಲ.

ಈ ಕೋವಿಡ್ ಮುಂಡೇದು ಹೋಯಿತು ಎಂದುಕೊಂಡಿದ್ದೆನಲ್ಲ? ಘನಘೋರ ‘ಕಾಲ’ ಗೆದ್ದು ಬೀಗಿದ ಖಷಿ ನಖಶಿಖಾಂತ ಅಮರಿ ಕೊಂಡಿತ್ತಲ್ಲ? ಅಮೇರಿಕಾದಲ್ಲೂ ಹತ್ತಲಿಲ್ಲ!
‘ಹತ್ತೇರಿಕಿ ನೆಗೀತೀಯಾ? ಮಾಡ್ತೀನಿ ತಾಳು ನಿನಗೆ!’

‘ನೀವು ಕೋವಿಡ್ ಪಾಸಿಟಿವ್’ ಗಂಡನ ಮೊಬೈಲ್ ಗೆ ಸಂದೇಶ ಬಂದೇ ಬಿಟ್ಟಿತು. ಅಲ್ಲೇ ಇರುವ ಅಪೊಲೊ ಆಸ್ಪತ್ರೆಯಲ್ಲಿ ಹಿಂದಿನ ದಿನ ತಪಾಸಣೆ ಮಾಡಿಸಿದ್ದೆ.
ಯಾರಿಗೋ ಅಲ್ಲ, ತೀರ ಹತ್ತಿರದ ಬಂಧುಗಳಿಗೇ ಕೋವಿಡ್ ಆದಾಗಲೂ ‘ಸದ್ಯ ನನ್ನ ಗಂಡ, ಮಕ್ಕಳಿಗೆ ಆಗಲಿಲ್ಲವಲ್ಲ ಎಂಬ ಭಾವ ಒಳಗೇ ಸುಳಿದಿತ್ತಲ್ಲ ? ಎಂಥ ಕ್ರೌರ್ಯ! ಅದು ಸಹಜವೇ ಎನ್ನುವಂತೆ ಮಾಡಿಬಿಟ್ಟಿದೆಯಲ್ಲ ಈ ಮಾರಿ!!

ಮಾರನೆಯ ದಿನ ನಾನೂ ತಪಾಸು ಮಾಡಿಸಿಕೊಂಡೆ. ‘ನನ್ನದು ನೆಗೆಟಿವ್’! ಮತ್ತೆ? ಗಂಡ ಪಾಸಿಟಿವ್ ಆದರೆ ಹೆಂಡತಿ ನೆಗೆಟಿವ್ ಆಗಲೇ ಬೇಕಲ್ಲ?!

ಹೋಟೆಲ್ ಕೌಂಟರಿಗೆ ಹೋಗಿ ಎರಡು ಪ್ರತ್ಯೇಕ ಬೆಡ್ಡುಗಳಿರುವ ಕೋಣೆಗೆ ನಮ್ಮನ್ನು ವರ್ಗಾಯಿಸಬೇಕೆಂದು ಕೇಳಿಕೊಂಡೆ. ಅವನೂ ಒಪ್ಪಿಕೊಂಡ. ಆದರೆ ಸತ್ಯ ಮುಚ್ಚಿಡುವುದು ಹೊಣೆಗೇಡಿತನ ಎನಿಸಿತು. ನಿಜ ಹೇಳಿಬಿಟ್ಟೆ.

“ಬೆಳಿಗ್ಗೆಯೇ ಚೆಕ್ ಔಟ್ ಮಾಡಿಬಿಡಿ ಮೇಡಂ” ಉಲ್ಟಾ ಹೊಡೆದು ಬಿಟ್ಟ.

“ದೂರ ಕಾಯ್ದುಕೊಳ್ಳುವೆ, ಸ್ವಚ್ಚತೆ ಕಾಪಾಡಿಕೊಳ್ಳುವೆ ಎಂದು ಸ್ಯಾನಿಟೈಸರ್ ಬಾಟಲನ್ನು ಅವನ ಮೂತಿಗೇ ತಿವಿಯುವಂತೆ ಪರಿ ಪರಿಯಾಗಿ ಬೇಡಿಕೊಂಡೆ. ” ಕ್ಷಮಿಸಿ ಮೇಡಂ , ನಿಮ್ಮನ್ನು ಇರಿಸಿ ಕೊಂಡರೆ ನನ್ನ ಕೆಲಸ ಹೋಗತ್ತೆ”

ಅಕ್ಕಪಕ್ಕದ ಹೊಟೇಲ್ ಗಳು, ಓಯೋ ರೂಮ್ಸ್ ಎಲ್ಲಾ ಕಡೆ ಹೋಗಿ ಕೋವಿಡ್ ಪೇಷಂಟ್ ಇಟ್ಕೋತೀರ? ರೂಮೊಳಗೇ ಇರ್ತೀವಿ ಹೊರಗೆ ಖಂಡಿತಾ ಬರೋಲ್ಲ” ಎಲ್ಲ ಕಡೆಯಿಂದ ಬಂದ ಉತ್ತರ ‘ಇಲ್ಲ…. ಇಲ್ಲ.. ಸಾರಿ’ ಗೂಗಲ್ ನಲ್ಲಿ ಹುಡುಕಿದಾಗ ಕ್ವಾರೆಂಟೈನ್ ಹೋಟೆಲ್ಲುಗಳು ಇದ್ದವು. ಆದರೆ ಅವುಗಳನ್ನು ರದ್ದು ಮಾಡಲಾಗಿತ್ತು. ಕೋವಿಡ್ ಇಲ್ಲ ಅಂದಾಗ ಕ್ವಾರಂಟೈನ್ ಹೋಟೆಲ್ ಗಳಾದರೂ ಯಾಕೆ ಇದ್ದಾವು? ಬಾಲ ಸುಟ್ಟ ಬೆಕ್ಕಿನ ಹಾಗೆ pillar to post ಓಡಾಡುತ್ತಿದ್ದೆ. ಯಾರ‌್ಯಾರೋ ಪರಿಚಿತರಿಗೆ ಫೋನ್ ಮಾಡಿದೆ. ಅತಂತ್ರ ಸ್ಥಿತಿ. ಎಲ್ಲಿ ಹೋಗಲಿ ಏನು ಮಾಡಲಿ?

‘ ಟ್ಯಾಕ್ಸಿ ಮಾಡಿಕೊಂಡು ಬಂದು ಬಿಡು’ ಮುಂಬಯಿಂದ ಮಗ ಫೋನ್ ಮಾಡಿದ. ಇಪ್ಪತ್ತು ಸಾವಿರ ! ಮಾತಾಯಿತು. ಸರಿ ಬುಕ್ ಮಾಡಿದೆ. “ಮಧ್ಯದಲ್ಲಿ ಏನಾದರೂ ಆದರೆ?? ಅಷ್ಟು ದೂರ ನನಗೆ ಕಾರಿನ ಪ್ರಯಾಣ ಸಾಧ್ಯವೇ ಇಲ್ಲ. ಬೇಡ ಎಂದರೆ ಬೇಡ” ಗಂಡನ ಹಟಕ್ಕೆ ಮಣಿದು ಟ್ಯಾಕ್ಸಿ ಕ್ಯಾನ್ಸಲ್ ಮಾಡಿದೆ.

ಆಸ್ಪತ್ರೆಯಲ್ಲೇ ಕೆಲಸ ಮಾಡುವ ಭಾವನವರ ಮಗನಿಗೆ ಫೋನ್ ಮಾಡಿ ” ಬೇರೆ ಏನೂ ರಹಾ ಇಲ್ಲ…. ಯಾವುದಾದರೂ ಆಸ್ಪತ್ರೆ ಬುಕ್ ಮಾಡು ಇಬ್ಬರೂ ಸೇರಿ ಬಿಡುತ್ತೀವಿ ಎಂದಾಗ, ‘ನಮ್ಮ ಆಸ್ಪತ್ರೆಯಲ್ಲಿ ಬೆಡ್ ಖಾಲಿಯಿಲ್ಲ ಆಂಟಿ ನಂದಿನಿ ಲೇ ಔಟ್ ನಲ್ಲಿರುವ ಪರಿಚಿತರ ಆಸ್ಪತ್ರೆ ಇದೆ. ಮಾತಾಡ್ತೀನಿ ಹೋಗ್ತೀರಾ? ಎರಡು ದಿನ ಐ.ಸಿ.ಯು ನಲ್ಲಿಡ್ತಾರೆ ಅಷ್ಟೇ”
ಹೆಸರಿಗೆ ಕೋವಿಡ್ ಅಷ್ಟೇ! ಲಾಲ್ ಬಾಗಿನಲ್ಲಿ ಬೇಕಾದರೆ ಇನ್ನೂ ವಾಯು ವಿಹಾರ ಮಾಡುವಷ್ಟು ಫಿಟ್ ಆಗಿರುವ ನಾವು ದಿನಕ್ಕೆ ಹನ್ನೆರೆಡು ಸಾವಿರ ಕೊಟ್ಟು ಹಾಸಿಗೆಯ ಮೇಲೆ ಮಲಗುವುದೇ?

“ತಲೆ ಕೆಟ್ಟಿದೆಯಾ? ಆಸ್ಪತ್ರೆ ಸೇರಿದರೆ ಏನೇನೋ ಟೆಸ್ಟ್ ಮಾಡಿ ಇಲ್ಲದ ರೋಗ ತಗುಲಿ ಹಾಕ್ತಾರೆ. ಸುಮ್ನೆ ನನ್ನ ಮಾತು ಕೇಳು ಮುಂಬಯಿಗೆ ಬಂದು ಬಿಡು” ಮಗ ಎಗರಾಡುತ್ತಿದ್ದ. ಅಮೇರಿಕಾದ ‌ಮಗನಿಗೆ ವಿಷಯ ತಿಳಿಸಲಿಲ್ಲ.

ಅಪ್ಪ ಒಂದು ಗಾದೆ ಹೇಳುತ್ತಿದ್ದರು “ಊರೆಲ್ಲಾ ನೆಂಟರು ಉಣಬಡಿಸುವರಿಲ್ಲ” ನಮ್ಮನ್ನೂ ಸೇರಿಸಿಕೊಂಡಂತೆ ಕೋವಿಡ್ ಸಂದರ್ಭದಲ್ಲಿ ಮಾತ್ರ ಯಾವ ಕಾರಣಕ್ಕೂ ಈ ಗಾದೆಯನ್ನು ಅನ್ವಯಿಸಬಾರದು. ಗಾದೆಯನ್ನೇ ಸುಳ್ಳು ಮಾಡಿದ ಮಹಾಮಾರಿ ಇದು. ಇನ್ನೂ ತೊಲಗಿಲ್ಲ.

ಇನ್ನೊಂದು ಗಾದೆಯೂ ಇದೆ. “ಆಪತ್ತಿಗೆ ಆದವನೇ ನೆಂಟ!” ಕೋವಿಡ್ ಸಂದರ್ಭದಲ್ಲಿ ಆಪತ್ತಿಗೆ ನೆಂಟ ಆಗದಿದ್ದರೆ ಅದರ ಬಗ್ಗೆ ಖಂಡಿತಾ ಆಕ್ಷೇಪಣೆಯಿಲ್ಲ. ಆದರೆ ಆಪತ್ತು ಎಂದು ಗೊತ್ತಿದ್ದರೂ ತಮ್ಮ ರಕ್ಷಣೆಯನ್ನೂ ಗಮನಿಸದೇ out of the way ಬಂದು ಸಹಾಯ ಹಸ್ತ ನೀಡುತ್ತಾರಲ್ಲ! ಅವರು ಕೇವಲ ನೆಂಟರಲ್ಲ, ನಿಜವಾದ ದೇವರು!

ಅಂತಹ ದೇವರ ಸಾಕ್ಷಾತ್ಕಾರ ವಾಗಿದ್ದು ನನಗೆ ರಾಮಮೂರ್ತಿ ನಗರದ ಸ್ವಾತಿ ಮತ್ತು ಕುಮಾರಸ್ವಾಮಿಯವರ ಮನೆಯಲ್ಲಿ.

ಅಶೋಕ ಪಿಲ್ಲರ್ ಬಳಿ ಇರುವ ಹೊಟೇಲ್ ಚೆಕೌಟ್ ಮಾಡಿ ಜಯನಗರದ ನಾಲ್ಕನೇ ಬ್ಲಾಕ್ ನ ಇನ್ನೊಂದು ಹೊಟೇಲ್ ನಲ್ಲಿ ‘ಕೋವಿಡ್’ ಹೇಳದೆಯೇ ಕಳ್ಳತನದಿಂದ ಇದ್ದೆವು. ಎರಡು ದಿನಗಳೂ ಪಾಪಪ್ರಜ್ಞೆ ಚುಚ್ಚುತ್ತಿತ್ತು.

ಆಗ ಹೊಸಪೇಟೆಯಲ್ಲಿರುವ ಗೆಳತಿ ಸರಸ್ವತಿಯಿಂದ ಫೋನ್ ..ಅವರ ಅಣ್ಣನ ಮಗಳು ಸ್ವಾತಿಯ ಮನೆಯ ವಿಚಾರ ತಿಳಿಸಿ,‌ “ಎಲ್ಲಾ ಅನುಕೂಲವಾಗಿದೆ ನೀವು ಅಲ್ಲಿರಬಹುದು ಸಂಕೋಚ ಬೇಡ” ಎಂದರು. ಸರಸ್ವತಿ ಫೋನ್ ಇಡಲಿಕ್ಕಿಲ್ಲ ನಾವು ಗಂಟು ಮೂಟೆಕಟ್ಟಿ ಚೆಕೌಟ್ ಮಾಡಿಯಾಯಿತು. ರಾಮಮೂರ್ತಿ ನಗರದ ಸ್ವಾತಿಯ ಮನೆಯ ಮುಂದೆ ಇಳಿದಾಗ ಗಂಡ ಹೆಂಡತಿ ಇಬ್ಬರೂ ಓಡಿ ಬಂದು ನಮ್ಮ ‘ಬೋರಿ ಬಿಸ್ತರ್ ‘ಗಳಿಗೆ ಕೈಹಾಕಿದರು. ಅಂದು ಕನ್ನಡ ರಾಜ್ಯೋತ್ಸವ. ರಜಾದಿನ.

“ಅಯ್ಯೋ… ನೀವು ಮುಟ್ಟ ಬೇಡಿ” ಎಂದು ಅಂಗಲಾಚಿದರೂ “ಅದ್ರಲ್ಲೇನು …ಬಿಡಿ…ಆಂಟಿ ಸ್ಯಾನಿಟೈಸರ್ ಹಾಕಿಕೊಂಡರೆ ಆಯಿತು. ಎರಡು ಮಹಡಿ ಹತ್ತ ..ಬೇಕು ಬನ್ನಿ ” ಎಂದು ನಮ್ಮ ಸಾಮಾನುಗಳನ್ನು ತೆಗೆದುಕೊಂಡು ನಡೆದರು.

ಆಗಷ್ಟೇ ಗೃಹಪ್ರವೇಶವಾದ ಮನೆ. ಗೋಡೆಯಮೇಲೆ ಬರೆದ ಸ್ವಸ್ತಿ ವಚನವೂ ಅಳಿಸಿಲ್ಲ. ಅಷ್ಟರಲ್ಲೇ ಕೋವಿಡ್ ನ್ನು ಬರಮಾಡಿಕೊಂಡಿದ್ದರು ಮಕ್ಕಳು!!! ನನ್ನ ದೊಡ್ಡ ಮಗನಷ್ಟೇ ವಯಸ್ಸು ೩೬-೩೭.

ಒಳಗೆ ಕಾಲಿಟ್ಟಾಗ ಮಂಚದ ಮೇಲೆ ನೀಟಾಗಿ ಹಾಸಿದ ಹಾಸಿಗೆ ದಿಂಬು, ಅದರ ಕೆಳಗೆ ನನಗೆ ಪ್ರತ್ಯೇಕ ಹಾಸಿಗೆ ಹೊದಿಕೆ, ಚಾಪೆ. ಟೇಬಲ್ಲಿನ ಮೇಲೆ ಇಟ್ಟ ಬಿಸಿ ನೀರಿನ ಫ್ಲಾಸ್ಕ್, ಆಗಷ್ಟೇ ಸ್ವಚ್ಚ ಮಾಡಿದ ಬಚ್ಚಲು ಮನೆ. ಸ್ಟ್ಯಾಂಡಿನ ಮೇಲೆ ಸೋಪು, ಪೇಸ್ಟ್. ಅಡುಗೆ ಮನೆಯಲ್ಲಿ ಇಂಡಕ್ಷನ್ ಒಲೆ, ಶುದ್ಧನೀರಿನ ಆರೋ, ತಟ್ಟೆ ಲೋಟ ಚಮಚಗಳು! ಬಿಸ್ಕೀಟ್ , ಸೇಬಿನ ಹಣ್ಣು ಇತರ ತಿಂಡಿಗಳು. ಬದಿಗೆ ಒರೆಸುವ ಬಟ್ಟೆ!!

ಇಷ್ಟೆಲ್ಲಾ ವ್ಯವಸ್ಥೆ ಮಾಡಲು ಸ್ವಾತಿ ಪುಟ್ಟಿಗೆ ನಾನು ಕಾಲಾವಕಾಶವನ್ನೇ ಕೊಟ್ಟಿರಲಿಲ್ಲ. ತಾನೇ ಸ್ವತಃ ಗುಡಿಸಿ ಒರೆಸಿದ್ದಾಳೆ!!! ಜಯನಗರದಿಂದ ಹೊರಟ ನಮ್ಮ ಕ್ಯಾಬ್ ಅವರ ಮನೆ ತಲಪುವುದರೊಳಗೇ ಏನೆಲ್ಲ ಅಣಿಮಾಡಿಬಿಟ್ಟಿದೆ ಈ ಕೂಸು!!

“ಕುಡಿಯಲಿಕ್ಕೆ ಏನು ತೊಗೋಳ್ತೀರ ಆಂಟಿ” ಎಂದಳು. “ಊಟದ ಸಮಯ ಏನೂ ಬೇಡವೆಂದಾಗ” ಕೆಳಗೆ ಓಡಿ ಹೋಗಿ ಬಿಸಿ ಪೆಟ್ಟಿಗೆಯಲ್ಲಿ ಬಿಸಿ ಬಿಸಿ ಚಪಾತಿ, ಎಣಗಾಯಿ, ಅನ್ನ, ಸಾರು, ಮೊಸರು ಉಪ್ಪಿನಕಾಯಿ. ” ನೀವೇನು ಇಷ್ಟು ಕಡಿಮೆ ತಿಂತೀರ? ಸಂಕೋಚ ಮಾಡಿಕೊಳ್ಳಬೇಡಿ” ಬಡಿಸಲು ಅವಳು ಹತ್ತಿರ ಸರಿಯುವಾಗೆಲ್ಲಾ ನನಗೆ ಭಯ!! ದೂರ ಸರಿಯುತ್ತಿದ್ದೆ.
ರಾತ್ರಿ ಕುಮಾರ ಸ್ವಾಮಿ ತಾವೇ ಸ್ವತಃ ರಾಗಿಮುದ್ದೆ ಮಾಡಿ ತಂದರು. ಕುಮಾರಸ್ವಾಮಿ ಕೊಟ್ಟೂರಿನವರು. ಸ್ವಾತಿ ವಿಟ್ಲದವಳು. M.S.W ಓದುವಾಗ ಪರಿಚಯವಾಗಿ ಪ್ರೇಮಕ್ಕೆ ತಿರುಗಿ ಮದುವೆಯಾದವರು. ಇಬ್ಬರದೂ ಅಂತರ್ಜಾತಿ ವಿವಾಹ. ಆದರೂ ಜಾತಿಯ ವಾಸನೆ ಪರಸ್ಪರ, ಹತ್ತದಂತೆ, ‘ಬೆಸುಗೆ’ ತೋರದಂತೆ ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ಸಮರ್ಥ ಅವರ ಹನ್ನೆರಡು ವರುಷದ ಮಗ. ರೂಬಿಕ್ಯೂಬ್ ನ್ನು ನಿಮಿಷ ಮಾತ್ರದಲ್ಲೇ ಪೂರ್ಣಗೊಳಿಸುವ ಬುದ್ಧಿವಂತ. ನೀವು social work ಮಾಡಲು ಹೋದದ್ದಾ ಇಲ್ಲ ಪರ್ಸನಲ್ ವರ್ಕಿಗಾ ಎಂದು ಗಂಡ ತಮಾಷೆಮಾಡಿದಾಗ ಎಲ್ಲ ನಕ್ಕೆವು.

ಸ್ವಾತಿ ಬಳ್ಳಾರಿ ಕಡೆಯ ಅಡುಗೆ ಮಾಡುವುದನ್ನು ಚೆನ್ನಾಗಿ ಕಲಿತಿದ್ದಾಳೆ. ಅವಳು ಬಡಿಸಿದ ‘ಇಂಡಿ’, ‘ಉದಕ’ ಪರಮಾನ್ನವಾಗಿ ರುಚಿಸಿತು. ನಮ್ಮ ಅತಂತ್ರ ಸ್ಥಿತಿಗೆ ದೊರಕಿದ ಅನಿಯಂತ್ರಿತ ಪ್ರೇಮದ ರುಚಿ ಇದು.

ಬೆಳಿಗ್ಗೆ ಮಧ್ಯಾಹ್ನ ಸಂಜೆ ಸರಸ್ವತಿ ಫೋನ್ ಮಾಡಿ ನಮ್ಮ ಯೋಗಕ್ಷೇಮ ವಿಚಾರಿಸಿಕೊಳ್ಳುವಾಗ “ದ್ವೇಷವನ್ನು ಬೈದು ಜಗಳವಾಡಿ ತೀರಿಸಿಕೊಂಡು ಬಿಡಬಹುದು, ಏನೂ ಸಂಬಂಧವೇ ಇಲ್ಲದವರು ತೋರಿಸುವ ಪ್ರೀತಿಯನ್ನು ಮಾತ್ರ ತಡೆದುಕೊಳ್ಳಲು ಸಾಧ್ಯವಿಲ್ಲ. ನನಗಿಂದು ದೇವರ ಸಾಕ್ಷಾತ್ಕಾರವಾಯಿತು” ಎಂದಾಗ ” ಅಳಬೇಡಿ” ಎಂದು ಸಮಾಧಾನ ಮಾಡಿದರು.
ಚೆನ್ನೈ ನಲ್ಲಿ ಸೈಕ್ಲೋನ್! ಬೆಂಗಳೂರಿನಲ್ಲಿ ಮಳೆ , ವಿಪರೀತ ಚಳಿ. ಕಾಲ್ಗಳು ತಣ್ಣಗೆ ಕೊರೆಯುತ್ತಿದ್ದವು. ಸ್ವಾತಿ ಹೊರಗೆ ಹೋಗಿ ನಮ್ಮಿಬ್ಬರಿಗೂ ಕಾಲು ಚೀಲ ತಂದಳು, ‘ ಸ್ವೆಟರ್ ಗಳು ಇವೆ ಆದರೆ ನಾವು ಬಳಸಿದ್ದು. ಇಲ್ಲದಿದ್ದರೆ, ಹೊಸತು ತಂದು ಕೊಡಲಾ?’ ಎಂದು ಸಂಕೋಚದಿಂದ ಕೇಳಿದಳು.

“ಅಯ್ಯೋ! ಮಗಳ ಸ್ವೆಟರ್ ಹಾಕಿಕೊಳ್ಳುವುದಿಲ್ಲವಾ? ಅವುಗಳನ್ನು ಒಗೆಯಬಹುದಾ? ಹಾಗಾದರೆ ಕೊಡು. ಹೋಗುವಾಗ ಮಷೀನ್ ಗೆ ಹಾಕಿ ಹೋಗುತ್ತೇನೆ. ಮಗಳಿಗಿಂತ ಹೆಚ್ಚು ನೀನು” ಎಂದು ಹಾಕಿಕೊಂಡೆ ಮೈ ಬೆಚ್ಚಗಾಗಿ ನಿದ್ದೆ ಚೆನ್ನಾಗಿ ಬಂದಿತು.

ಸಂಜೆ ಆಫೀಸಿನಿಂದ ಬಂದ ಸ್ವಾಮಿ ‘ಎಷ್ಟು ಚಳಿ ಅಲ್ವಾ ಆಂಟಿ’ ಎಂದವರೇ ದೊಡ್ಡ ಬಾಣಲೆಯಲ್ಲಿ ಬೆಂಕಿ ಒಟ್ಟಿದರು. ಹೆಗ್ಗಿ ಕಾಯಿಸುವುದು ( Bon fire) ಎನ್ನುತ್ತೇವೆ ನಮ್ಮ ಕಡೆ. ಮರದ ಎಲೆಗಳು, ಪಾರ್ಸಲ್ ಪೆಟ್ಟಿಗೆಗಳ ತುಂಡುಗಳನ್ನು ಇದಕ್ಕೆಂದೇ ಒಟ್ಟುಮಾಡಿ ಇಟ್ಟಿದ್ದಾರಂತೆ. ಬೆಂಕಿ ಕಾಯಿಸುತ್ತಾ ಕೊಟ್ಟೂರ ಸಂಸ್ಕೃತಿ, ವಿಟ್ಲ, ಅಮೇರಿಕಾದ ಮಾತುಗಳು ಬಂದು ಹೋದವು. ಅಗ್ನಿದೇವ ಸಾಕ್ಷಿಯಾಗಿದ್ದ! ಬಿಸುಪೆಂದರೆ ಇದೇ! ವಿಭಿನ್ನ ಸಂಸ್ಕೃತಿಗಳು ಆಜುಬಾಜು ಕುಳಿತು ಇನ್ನಿಲ್ಲದಂತೆ ಬಿಚ್ಚಿಕೊಳ್ಳುವುದು!! ಮನುಷ್ಯ ಜಾತಿ ತಾನೊಂದೆ ವಲಂ! ಇದು ಅವರ ನಿಜವಾದ MSW.

ಸಮರ್ಥ ಕನ್ನಡ ಎಂದರೆ ಕೇವಲ ನವೆಂಬರ್ ಆವೇಶವಲ್ಲ ಎನ್ನುವ ಹಾಡನ್ನು ಹಾಡಿದ.

ಎರಡು ದಿನಗಳಲ್ಲಿ ಸ್ವಲ್ಪ ಚೇತರಿಕೆ ಕಂಡಿತು. ಔಷಧಿಯ ಮೊದಲ ಕೋರ್ಸ್ ಕೂಡ ಮುಗಿದಿತ್ತು.

ಮುಂಬಯಿಗೆ ಟಿಕೆಟ್ ಬುಕ್ ಮಾಡಲು ಸ್ವಾಮಿಯವರೇ ಸಹಾಯ ಮಾಡಿದರು. ನಾವು ಹೊರಡುವ ದಿನ ಅವರು ಆಫೀಸಿಗೆ ಹೋಗದೇ ನಮಗಾಗಿಯೇ ಮನೆಯಿಂದಲೇ ಕೆಲಸಮಾಡುವುದಾಗಿ ನಿರ್ಧರಿಸಿದ್ದರಂತೆ. ಮನೆಯ ಮುಂದೆ ಕ್ಯಾಬ್ ಬಂದಾಗ ನಮ್ಮ ಲಗ್ಗೇಜುಗಳನ್ನೆಲ್ಲಾ ಗಾಡಿಯೊಳಗೆ ಇರಿಸಿದರು. ಕಾರು ತಿರುಗುವವರೆಗೂ ಕೈ ಬೀಸುತ್ತಾ ಮರೆಯಾದರು. ದೇವರು ಮರೆಯಾದರು.


  • ಗಿರಿಜಾ ಶಾಸ್ತ್ರಿ – ಇಂಗ್ಲಿಷ್ ಉಪನ್ಯಾಸಕರು,ಲೇಖಕರು, ಮುಂಬೈ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW