ಅಪ್ಪಜ್ಜನಿಗೆ ಅಂದಿನ ಜನರಲ್ ಒಂದು ದೊಡ್ಡ ಕೋವಿಯನ್ನು ಉಡುಗೊರೆಯಾಗಿ ಕೊಟ್ಟಿದ್ದರು ಆದರೆ ಅದನ್ನು ಅಪ್ಪಜ್ಜ ಎಂದೂ ಉಪಯೋಗಿಸಲಿಲ್ಲ, ಬದಲಾಗಿ ಕಾಡಿನ ಜನರಿಗೆ ವಿದ್ಯಾಭ್ಯಾಸದ ನೀಡುವಂತೆ ಮನವಿ ಮಾಡಿದರು, ಅವರ ಮನವಿಗೆ ಒಪ್ಪಿ ಜನರಲ್ ಚಪ್ಪಾರಪಡವಿನಲ್ಲಿ ೭ನೇ ತರಗತಿಯವರೆಗೂ ಶಾಲೆ ಆರಂಭವಾಯಿತು.ಮುಂದೆ ಓದಿ ಅಪ್ಪಜ್ಜನಿಗೆ ಇದ್ದ ಕಾಡಿನ ಮೇಲಿನ ಪ್ರೀತಿ…
ಪ್ರಾಣಿಯ ಗುಣದೊಂದಿಗೆ ಸಾಮ್ಯತೆ ಇತ್ತು ಎಂಬುವುದು ಕಲ್ಲು ದೊಡ್ಡಮ್ಮನ ವಾದವಾಗಿತ್ತು. ಮುಂದುವರಿಸಿರುತ್ತೇನೆ.
ಅಪ್ಪಜ್ಜ ನೆಲೆಸಿದ್ದ ಪ್ರದೇಶದ ಹೆಸರು ಪೆರುಂಪಡುವಿನ ಒಳಗಿನ (ಅಂದಿನ ಒಳಕಾಡು) ಕರಿಪ್ಪಾಲ. ಆ ಮನೆಯಲ್ಲಿ ಬೆಳಿಗ್ಗೆ ಎಲ್ಲರಿಗೂ ತಾಮ್ರದ ಪಾತ್ರೆಯಲ್ಲಿ ಟೀ ಕಾಫಿ ಕೊಡುತ್ತಿರಲಿಲ್ಲ, ಒಂದು ರೀತಿಯ ಪಾನಕ ಕೊಡುತ್ತಿದ್ದರು. ಅದು ಬಿಸಿ ನೀರಿನಲ್ಲಿ ಕಾಳುಮೆಣಸು, ಜಜ್ಜಿದ ಶುಂಠಿ ರಸ ಹಾಗೂ ಕಾಡು ಜೇನುತುಪ್ಪ ಬೆರೆಸಿದ ಪಾನಕ. ಅದು ಕುಡಿದ ಮೇಲೆಯೇ ಎಲ್ಲರೂ ಅವರವರ ಕೆಲಸಕ್ಕೆ ಹೋಗೋದು. ಒಲೆಯ ಒಂದು ಭಾಗ ಅದಕ್ಕೆ ಸೀಮಿತ , ಬೆಳಗ್ಗೆ ಸೂರ್ಯೋದಯದವರೆಗೆ ಅಪ್ಪಜ್ಜಿ ಅದನ್ನು ಒಲೆಯ ಮೇಲೆ ತಾಜಾ ಬಿಸಿಯಾಗಿರಲು ಇಡುತ್ತಿದ್ದರು.ಸೂರ್ಯನ ಕಿರಣ ಕಂಡ ತಕ್ಷಣ ಯಾರು ಕುಡಿದರೋ ಕುಡಿದಿಲ್ಲವೋ- ಅದು ಒಲೆಯಿಂದ ಹೊರಗೆ ಇಡುತ್ತಾರೆ.

ಪೆರುಂಪಡವಿನ ದಕ್ಷಿಣ ಭಾಗದಲ್ಲಿ ಏರ್ಯಂ ಬೆಟ್ಟದ ತಪ್ಪಲಲ್ಲಿ ಒಂದು ಚಿಕ್ಕ ನದಿ, ಅದು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಅದರ ಇನ್ನೊಂದು ಮರುತೀರದ ದಡದ ವರೆಗೆ ಮುಸಲ್ಮಾನ ವ್ಯಾಪಾರಿಗಳು ಬರುತ್ತಿದ್ದರು. ಅಲ್ಲಿಗೆ ಹೋಗಲು ವರುಷಕ್ಕೊಂದು ಚಪ್ಪರದ ತರಹದ ಸೇತುವೆ ಮಾಡುತ್ತಿದ್ದರು. ಮಳೆಗಾಲ ಬಂದಾಗ ನದಿ ಉಕ್ಕಿ ಆ ಚಪ್ಪರದ ಸೇತುವೆ ಕೊಚ್ಚಿ ಹೋಗುತ್ತಿತ್ತು. ಆ ನದಿಯ ಒಂದು ಭಾಗ ಏರ್ಯಂ ಆದರೆ, ಚಪ್ಪರದ ಇನ್ನೊಂದು ಭಾಗದ ತೀರವನ್ನು ಚಪ್ಪಾರಪಡವು ಎಂದು ಕರೆಯಲಾಗಿತ್ತು. ಉಪ್ಪನ್ನು ಚಪ್ಪಾರಪಡವಿನಿಂದ ಗೋಣಿಯಲ್ಲಿ ಹೊತ್ತು ತರುತ್ತಿದ್ದರು.
ಒಂದು ಬಾರಿ, ಗಾಜಿನ ಲೋಟವನ್ನು ಮೊತ್ತಮೊದಲಾಗಿ ಚಪ್ಪಾರಪಡವಿನಿಂದ ಅಪ್ಪಜ್ಜ ಮನೆಗೆ ತಂದರು. ಎಲ್ಲರಿಗೂ ಮೊತ್ತಮೊದಲು ಕಂಡ ಆ ಪಾರದರ್ಶಕವಾದ ಲೋಟದಲ್ಲಿ ಬೆಳಗಿನ ಪಾನ್ಕಾ ಕುಡಿಯೋ ಆಸೆ. ಎರಡು ದಿನ ಕಳೆದಾಗ ಆ ಲೋಟ ಹೊಡೆದು ಹೋಯಿತು. “ಯಾರು ಒಡೆದಿದ್ದು” ಎಂದು ಅಪ್ಪಜ್ಜ ಕೇಳಿದಾಗ ಎಲ್ಲರೂ ಮೌನವಾದರು. ಮತ್ತೆ ಕಪ್ಪು ಮೆಣಸು, ಹೆಸರು ಕಾಳು ಗಳನ್ನು ಚಪ್ಪಾರಪಡವಿನಲ್ಲಿ ವಿನಿಮಯ ಮಾಡಿ ಇನ್ನೊಂದು ಗಾಜಿನ ಲೋಟ ತಂದರು. ಅಂದು ದೊಡ್ಡಪ್ಪ, ತಂದೆಯ ಇಬ್ಬರು ಅಕ್ಕ, ಅಪ್ಪ ನಾಲ್ವರನ್ನೂ ನಿಲ್ಲಿಸಿ ಅವರ ಮುಂದೆ ಹೊಸಾ ಗಾಜಿನ ಲೋಟ ಇಟ್ಟು. ರಪ ರಪನೇ ನಾಲ್ವರನ್ನು ಚೆನ್ನಾಗಿ ಹೊಡೆದು ” ಇದು ಈ ಲೋಟ ಒಡೆದರೆ ಮುಂಗಡ ಏಟು” ಎಂದರು.

ನಂತರ ತಿಂಗಳಿಗೊಂದು ಪ್ರಕಾರ ನಾಲ್ಕು ಹೊಸಾ ಗಾಜಿನ ಲೋಟ ತಂದರೂ, ಲೋಟದ ಮುಂದೆ ಇವರು ಸರದಿಯಂತೆ ನಿಂತು ಮುಂಗಡ ಏಟು ಪಡೆಯಬೇಕಾಗಿತ್ತು. ಅಪ್ಪಜ್ಜನ ಕೊನೆಗಾಲಗಳಲ್ಲಿ ಹಾಸಿಗೆ ಹಿಡಿದಿದ್ದರೂ, ಮನೆಯೊಳಗೆ ಅಪ್ಪಜ್ಜನ ಹೆಚ್ಚಿನ ಕಾಡಿನ ನಿಯಮಾವಳಿಗಳು ಅಪ್ಪಜ್ಜಿಗೆ ಜಾಸ್ತಿ ಸಂಕಷ್ಟ ತಂದು, ದೊಡ್ಡಪ್ಪ, ಕಲ್ಲು ದೊಡ್ಡಮ್ಮ, ಮೀನು ದೊಡ್ಡಮ್ಮ(1978ರಲ್ಲಿ ಅಸುನೀಗಿದರು, ನನಗೆ ಅಷ್ಟು ನೆನಪಿಲ್ಲ), ಅಪ್ಪ, ರೋಹಿ ಚಿಕ್ಕಮ್ಮ… ಇವರಿಗೆಲ್ಲಾ ತುಂಬಾ ಕಿರಿ ಕಿರಿ ಆಗಿತ್ತು. ಅಪ್ಪಜ್ಜನ ಕಿರಿ ಕಿರಿ-ಕಾನೂನು ಕಲ್ಲುದೊಡ್ಡಮ್ಮನಿಗೆ ಬೇಸರ ತಂದಿತ್ತು ಅದಕ್ಕಾಗಿರಬೇಕು ಅಪ್ಪಜ್ಜನ ಗುಣಗಳು ಬೇಟೆಯಾಡುವ ಕಾಡು ಪ್ರಾಣಿಯ ಗುಣದೊಂದಿಗೆ ಸಾಮ್ಯತೆ ಇತ್ತು ಎಂದು ನನಗೆ ಅವಾಗಾವಾಗ ಹೇಳುತ್ತಿದುದು. ದೊಡ್ಡಪ್ಪನೂ ಅಪ್ಪಜ್ಜನ ಬಗ್ಗೆ ” ಊರಿಗೆ ಉಪಕಾರಿ ಆದರೆ….ಮನೆಯಲ್ಲಿ ಕಾಡಿನ ನಿಯಮ” ದೊಡ್ಡಪ್ಪನ ಪ್ರಕಾರ, ಮರಣದ ಸಮಯದಲ್ಲಿ ಅಪ್ಪಜ್ಜನ ವಯಸ್ಸು 90ರ ಗಡಿ ದಾಟಿತ್ತು.ಇಂದು ದೊಡ್ಡಪ್ಪ 85ದಾಟಿದ್ದಾರೆ. ಪೋಸ್ಟ್ ಮಾಸ್ಟರ್ ಆಗಿ ನಿವೃತ್ತಿ ಹೊಂದಿದ ದೊಡ್ಡಪ್ಪ ಇವತ್ತೂ ತನ್ನ ಮನೆಯಿಂದ ಬೆಳಿಗ್ಗೆ ಆರು ಗಂಟೆಗೆ ನಡೆಯಲು ಹೋದರೆ, ಮರಳಿ ಬರುವುದು 10.30ಗೆ. ದೊಡ್ಡಪ್ಪ ತನ್ನ ಬಾಲ್ಯದಲ್ಲಿ ಅಪ್ಪಜ್ಜನೊಂದಿಗೆ ಕಾಡಿಗೆ ಹೋಗುತ್ತಿದ್ದರು. ಕಾಡಿನ ಕೋತಿ, ಗಿಳಿಗಳ, ಜಿಂಕೆ,ಹುಲಿ, ಸಿಂಹ,ನರಿ ….. ಗಳ ಶಬ್ದದ ಮರ್ಮ ಅಪ್ಪಜ್ಜ ಚೆನ್ನಾಗಿ ಅರಿತವರಾಗಿದ್ದರು. ಹುಲಿ ಸಿಂಹಗಳು ಹಸಿವಿನಿಂದ ಕೂಗುವ ಘರ್ಜನೆ, ತನ್ನ ಜೋಡಿಯನ್ನು ಕೂಗುವ ಘರ್ಜನೆ, ಧೈನೀಯತೆಯ-ನೋವಿನ ಘರ್ಜನೆ, ಅದೇ ರೀತಿ ಹಕ್ಕಿ ಇನ್ನಿತರ ಕಾಡು ಚರಾಚರಗಳ ಸದ್ದಿನ ಅರ್ಥ ಅಪ್ಪಜ್ಜನಿಗೆ ಕರತಲಾಮಲಕವಾಗಿತ್ತು.
ಅಪ್ಪಜ್ಜನನ್ನು ಅವರಪ್ಪ ಬಾಲ್ಯದಲ್ಲೇ ಬೇಟೆಯ ಪರಿಪಾಠದ ಬಗ್ಗೆ ಹೇಳಿಕೊಟ್ಟಿದ್ದರು. ಕಾಡಿನ ಕೆಲವು ಪ್ರಾಣಿಗಳನ್ನು ಬಿಟ್ಟು ಉಳಿದೆಲ್ಲವಕ್ಕೆ ಅಪ್ಪಜ್ಜ ಆ ಕಾಡಿನ ಹಿರಿಯ ಮನುಷ್ಯಪ್ರಾಣಿ ಆಗಿದ್ದರು. ಮಾಂಸಾಹಾರಿ ಪ್ರಾಣಿಗಳು ಬೇಟೆಯಾಡುವಾಗ ಅಪ್ಪಜ್ಜ ಸುಮ್ಮನೆ ನೋಡುತ್ತಿದ್ದರು. ಆಕ್ರಮಣವಾಗುವ ಪ್ರಾಣಿಯನ್ನು , ಆಕ್ರಮಣ ಮಾಡುವ ಪ್ರಾಣಿಯಿಂದ ರಕ್ಷಿಸುತ್ತಿರಲಿಲ್ಲ. ದೊಡ್ಡಪ್ಪ ಕೇಳಿದಾಗ ” ಪ್ರಕೃತಿ ನಮ್ಮ ನಮ್ಮ ಆಹಾರವನ್ನು ನಾವಾಗಿ ಕಾಣುವ ತಿನ್ನುವ ಜ್ಞಾನ ಎಲ್ಲಾ ಪ್ರಾಣಿಗಳೂ ಕೊಟ್ಟಿದೆ. ಅವರು ಬೇಟೆಯಾಡುವಾಗ ನಾನೂ, ನಾನು ಬೇಟೆಯಾಡುವಾಗ ಅವರೂ – ನನ್ನ ಆಹಾರವಾದ ಬೇಟೆಗೆ ಅಡ್ಡಿ ಪಡಿಸುವುದಿಲ್ಲ. ಅಡ್ಡಿ ಪಡಿಸುವುದು ಅಸಭ್ಯತೆ. ಅದು ಕಾಡಿನ ಅನಾದಿ ನಿಯಮ” ಎಂದಿದ್ದರಂತೆ. ನಂತರ ದೊಡ್ಡಪ್ಪ , ಅಪ್ಪ ಬೇಟೆಗೆ ಹೋಗುವಾಗ ಅದೇ ನಿಯಮ ಪಾಲಿಸುತ್ತಿದ್ದರು. ಕಾಡಿನಲ್ಲಿ ಅಪ್ಪಜ್ಜನ ಜೊತೆ ಓಡಾಡುವಾಗ, ಮಾಂಸಾಹಾರಿ ಪ್ರಾಣಿಗಳಾವುದೂ ಅವರನ್ನು ಆಕ್ರಮಿಸಿರಲಿಲ್ಲ. ಕಾರಣ ಅಪ್ಪಜ್ಜನನ್ನು ಆ ಕಾಡಿನ ಪ್ರಾಣಿಗಳಿಗೆ ಗೊತ್ತಿತ್ತು ಎನ್ನಬಹುದು. ಅಪ್ಪಜ್ಜ, ದೊಡ್ಡಪ್ಪ ,ಅಪ್ಪನ ಪ್ರಕಾರ ಪ್ರತೀ ಪ್ರಾಣಿಗೂ ಅದರದೇ ಆದ ಬುದ್ದಿ ಚಾಕಚಕ್ಯತೆ ಇದೆ. (ಇದರ ಬಗ್ಗೆ ನನ್ನ ಹಾಗೂ ತಂದೆಯ ಮಧ್ಯೆ ಚರ್ಚೆಯಾಗಿ, ನಂತರ ತಂದೆಯವರು ಅದನ್ನು ಪ್ರಾಯೋಗಿಕವಾಗಿ ತೋರಿಸಿ ನಾನು ಸೋತಿದ್ದೆ) ನೋಡಲು ಬಾಹ್ಯ ದೇಹದಾರ್ಢ್ಯ ಇಲ್ಲದಿದ್ದರೂ, ಅಪ್ಪಜ್ಜನ ದೈಹಿಕ ಬಲ ನನಗೂ ನಂಬಲು ಅಸಾಧ್ಯ. ಅದಕ್ಕೆ ಪ್ರತೀಕವಾಗಿ ಉದಾಹರಣೆ ಇಂದಿನ ಕಣ್ಣೂರು ಜಿಲ್ಲೆಗೆ ಸೇರಿದ ವೆಳ್ಳೋರ ಎಂಬ ಪೆರುಂಪಡವಿನ ಪಕ್ಕದೂರಿನ ಚೆಕ್ಕಿ ಕುಂಡು (ಅಂದಿನ ಘೋರವನದ ತಪ್ಪಲು ಪ್ರದೇಶ) ಪರಿಸರದ ಆದಿವಾಸಿಗಳು ನೀರು ಇಲ್ಲದೆ ಆತ ಪರಿಸರ ಬಿಟ್ಟು ಬೇರೆ ಕಾಡಿಗೆ ಹೋದರು. ಅವರನ್ನು ಹುಡುಕಿ ಅಪ್ಪಜ್ಜ ಆ ಕಾಡಿಗೆ ಹೋಗಿ ಅವರನ್ನು ಭೇಟಿಯಾಗಿ ಮರಳಿ ಬರಲು ವಿನಂತಿಸಿದರು. ಅವರು ಸಮಸ್ಯೆ ವ್ಯಕ್ತಪಡಿಸಿದರು. ಇದನ್ನು ಕೇಳಿ ಅಪ್ಪಜ್ಜ ಚೆಕ್ಕಿಕುಂಡು ಗೆ ಬಂದು , ಸ್ಥಳವನ್ನು ಗುರುತಿಸಿ, ಒಂಟಿಯಾಗಿ ಆ ಬಂಡೆಯನ್ನು ಸಲಾಕೆಯಿಂದ ಹೊಡೆದು, ಸುಮಾರು 40-45ಫೀಟ್ ಆಳದ ಬಾವಿಯನ್ನು ರಾತ್ರಿ ಹಗಲೆನ್ನದೆ ಸ್ವಂತ ಕೈಯಿಂದ ನೀರು ಸಿಗುವ ತನಕ ತೋಡಿದರು. ಅದುವೇ ನನ್ನ ಅಪ್ಪಜ್ಜನ “signature” ಎನ್ನಬಹುದು.

ಫೋಟೋ ಕೃಪೆ :google
ಇಂದೂ ಅದು ಆ ಬಾವಿ ಆ ಊರಲ್ಲಿ ಇದೆ. ಚೆಕ್ಕಿಕುಂಡುಗೆ ಅಲ್ಲಿನ ಮೂಲ ನಿವಾಸಿಗಳನ್ನು ಕರೆತಂದು ನೀರು ತೋರಿಸಿ “ಇಲ್ಲೇ ವಾಸಿಸಿ. ಇನ್ನು ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಬನ್ನಿ” ಎಂದು ಹೇಳಿ, ಕರಿಪ್ಪಾಲ ಮನೆಗೆ ಬರುವಾಗ ಅಪ್ಪಜ್ಜಿಗೆ ಅಪ್ಪಜ್ಜನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಬಾವಿ ತೋಡುವ ಹಂಗಿನಲ್ಲಿ ಎಲ್ಲಾ ಮರೆತು ಹತ್ತು ಹಲವು ದಿನ ಅವರು ಮನೆಗೆ ಬಂದಿರಲಿಲ್ಲ.
ಅಪ್ಪಜ್ಜನ ಬೇಟೆಯ ಕೋವಿ ಅವರೇ ನಿರ್ಮಿಸಿದ್ದಾಗಿತ್ತು. ಅದಕ್ಕೆ ಒಂದು ಸ್ಪ್ರಿಂಗ್. ಆ ಸ್ಪ್ರಿಂಗಿಗೆ ಒಂದು ಹಗ್ಗ , ಹಗ್ಗದ ತುದಿಯಲ್ಲಿ ಮೊನಚಾದ ಉದ್ದನೆಯ ಚೂಪಾದ ಈಟಿ. ಅದನ್ನು ತಿರುಗಿಸಿ ತಿರುಗಿಸಿ ಸ್ಪ್ರಿಂಗಿಗೆ ಒತ್ತಡಹಾಕಿ ಇಡುತ್ತಾರೆ. ಬೇಟೆಯ ಗುರಿಗೆ ಸರಿಯಾಗಿ ಮೊನೆಯನ್ನು ಇಟ್ಟ ಮೇಲೆ, ಸ್ಪ್ರಿಂಗನ್ನು ಒತ್ತಡ ರಹಿತ ಮಾಡಿದಾಗ, ಆ ಮೊನೆ ಹಗ್ಗದ ಜೊತೆ ಗುರಿ ತಲುಪುತ್ತದೆ. ಹಕ್ಕಿಗಳು ಇನ್ನಿತರ ಮರದಲ್ಲಿ ನಿಲ್ಲುವ- ಸಂಚರಿಸುವ ಪ್ರಾಣಿಗಳ ಸ್ವರದಿಂದ ತನ್ನ ಬೇಟೆ ಎಲ್ಲಿದೆ ಎಂದು ಅರಿತು ಗುರಿ ಹೂಡುವ ಒಂದು ತರಹದ ಶಬ್ದವೇದಿ ವಿದ್ಯೆ ಅಪ್ಪಜ್ಜನ ಮಾಂತ್ರಿಕತೆ ಆಗಿತ್ತು ಎಂದವರು ಕಪ್ಪಣ್ಣ.
ಕಪ್ಪಣ್ಣನಿಗೆ ಅಪ್ಪಜ್ಜನ ಬಗ್ಗೆ ಹೇಳಲು ಬಹಳಾ ಆತುರ ಯಾಕೆಂದರೆ ಕಪ್ಪಣ್ಣನವರ ತಂದೆ ಮತ್ತು ಚಿಕ್ಕಪ್ಪ ರವರು ಅಪ್ಪಜ್ಜನ ಜೊತೆ ಗರಿಷ್ಟ ಸಮಯ ಕಳೆದವರಾಗಿದ್ದರು. ಹೋಟೆಲ್ ಕಪ್ಪಣ್ಣ (ದೊಡ್ಡಪ್ಪನಿಗಿಂತ ಹಿರಿಯರು 2003ನಲ್ಲಿ ವಯಸ್ಸಾಗಿ ಮೃತರಾದರು)ಚಿಕ್ಕವರಿದ್ದಾಗ, ಸಂಜೆ ಹೊತ್ತು ಅವರ ತಂದೆ ಚಿಕ್ಕಪ್ಪ ನವರು ನನ್ನ ಅಪ್ಪಜ್ಜನ ಪರಾಕ್ರಮ ವಿವರಿಸುತ್ತಿದ್ದರಂತೆ. ಕಪ್ಪಣ್ಣನಿಗೆ ನನ್ನ ಅಪ್ಪಜ್ಜ ಒಂದು life long icon ಆಗಿದ್ದರು.
ಒಮ್ಮೆ ಕಾಡಿನಲ್ಲಿ ಹಿಂಗಾಲು ತೊಡೆ ಹಾಗೂ ಬಾಲದ ನಡುವೆ ಏಟಾದ ಆನೆಯನ್ನು ಗುಣಪಡಿಸಿ, ಅದನ್ನು ಆ ಆನೆಯ ದಿಂಡು/ ತಂದೆತಾಯಿ ಬರುವ ವರೆಗೆ ಅಪ್ಪಜ್ಜ ಕಾದರು. ಸುಮಾರು ಆರು ತಿಂಗಳು ದಿಂಡು/ ತಾಯಿ-ಆನೆ ಬಾರದೆ ಇದ್ದಾಗ, ಚಪ್ಪಾರಪಡವಿನ ಒಬ್ಬ ಹಾಜಿಗೆ ಅಪ್ಪಜ್ಜ ಆ ಆನೆಯನ್ನು ಸಾಕಲು ಕೊಟ್ಟರು. ಮನುಷ್ಯನ ಜೊತೆ ಮನೆಯಲ್ಲಿ ಪಳಗಿದ ಆನೆ ಅಥವಾ ಕಾಗೆ ಅಥವಾ ಕೆಲ ಕಾಡು ಪ್ರಾಣಿಯನ್ನು ಮತ್ತೆ ಅದರದೇ ಸಂಘ ಪುನಃ ಸ್ವೀಕರಿಸಲ್ಲ ಎಂಬ ಕಾರಣಕ್ಕೆ ಅಥವಾ ಮನುಷ್ಯನೊಂದಿಗೆ ಇದ್ದ ಪ್ರಾಣಿ ನಂತರ ಕಾಡಲ್ಲಿ ಅದರದೇ ಸಂಘ ದೊಂದಿಗೆ ಹೊಂದಿಕೊಳ್ಳಲು ಅಸಾಧ್ಯ ಎಂಬ ಅಪ್ಪಜ್ಜನ ಊಹಾನಿಯಮ ಅದನ್ನು ಹಾಜಿಗೆ ಕೊಟ್ಟಿರಬಹುದು. ಅಲ್ಲದೆ “ಕಾಡಿನ ಪ್ರಾಣಿಗಳನ್ನು ತನ್ನ ಮನೆಯಲ್ಲಿ ಇರಿಸುವುದು ಒಂದು ರೀತಿಯ ಕಾರಾಗೃಹ ಹಾಗೂ ನನ್ನ ಸೋಲಿನ ಪ್ರತೀಕ ” ಎಂಬುವುದು ಅಪ್ಪಜ್ಜನ ಕೆಲವು ಸ್ವಯಂಕಾನೂನುಗಳಲ್ಲಿ ಒಂದು. ಈ ಹಾಜಿಯವರೇ ನಂತರದ ದಿನಗಳಲ್ಲಿ, ಮೊತ್ತ ಮೊದಲು ಚಪ್ಪಾರಪಡವಿನಲ್ಲಿ , ಅಪ್ಪಜ್ಜನ ಆಶಯಕ್ಕೆ ಬೆಂಬಲವಾಗಿ ಶಾಲೆ ಪ್ರಾರಂಭಿಸಿದ್ದು.
ಕಣ್ಣೂರಿನ ಆಗಿನ ಆಂಗ್ಲ ಜನರಲ್ , ಚಪ್ಪಾರಪಡವು ನದಿ ದಾಟಿ ಕಾಡಿನ ಸೌಂದರ್ಯ ಸವಿಯುತ್ತಾ ಪೆರುಂಪಡವಿನ ಕಾಡಿನ ಜನರನ್ನು ಅವರ ಉಡುಗೆ-ತೊಡುಗೆಯನ್ನೂ ಕಂಡು ಚಕಿತನಾದ. ಅಲ್ಲಿ ಎರಡು ಪರ್ವತಗಳ ಮಧ್ಯದ ಕಂದಕದೊಳಗೆ ಬಿದ್ದು, ಜೊತೆಗೆ ಬಂದ ಸೈನಿಕರು ಶ್ರಮಿಸಿ ಮರಳಿದರು. ಅಂದು ಉಪ್ಪನ್ನು ಹೊತ್ತು ಹೋಗುತ್ತಿದ್ದ ಅಪ್ಪಜ್ಜನಿಗೆ ನರಿ- ಕತ್ತೆಕಿರುಬಗಳ ಊಳಿಡುವಿಕೆ ಕೇಳಿಸಿಕೊಂಡರು. ಊಳಿಡುವಿಕೆ ಕೆಲವೊಮ್ಮೆ ಬೆಲೆ ಪ್ರಾಣಿ ಬಿಟ್ಟು ಹೋದ ಎಂಜಿಲು ಮಾಂಸವಿದೆ ಎಂದು ಸೂಚಿಸಲು ಅಥವಾ ಎಲ್ಲರೂ ಸೇರಿ ಆಶ್ರಯ ಪಡೆಯಬಹುದು ಅಥವಾ ಹೊಸ ರೀತಿಯ ಆಹಾರವಿದೆ ಎಂಬ ಸೂಚನೆ. ಅದನ್ನು ಗುರುತಿಸಿದ ಅಪ್ಪಜ್ಜ , ಉಪ್ಪಿನ ಮೂಟೆ ದಾರಿಯಲ್ಲಿ ಇಟ್ಟು, ಊಳಿಡುವ ಕಡೆ ಹೋಗಿ, ಅವುಗಳನ್ನೆಲ್ಲಾ ಓಡಿಸಿ , ಕಂದಕದೊಳಗಿನ ಬಿಳಿ ಮನುಷ್ಯನನ್ನು ನೋಡಿದರು. ಅಪ್ಪಜ್ಜ ಎಲ್ಲಿ ಹೋಗುತ್ತಿದ್ದರೂ ತಾನೇ ನಿರ್ಮಿಸಿದ ಒಂದು ಬೇಟೆ ಹಗ್ಗ, ಕೊಳಿಕ್ಕೆ (hook), ಎರಡು ಬೆಂಕಿ ಕಲ್ಲು( ಆ ಕಲ್ಲುಗಳನ್ನು ಒಂದಕ್ಕೊಂದು ಒರಸಿದಾಗ ಬೆಂಕಿ ಬರುತ್ತಿತ್ತು. ಎಂದಾದರೂ ಕಾಡಿನಲ್ಲಿ ಸಿಕ್ಕಾಕಿಕೊಂಡರೆ ಬೆಂಕಿ ಹೊತ್ತಿಸಲು ಉಪಯೋಗಿಸುತ್ತಿದ್ದರು) ಒಂದು ಕೊಡಲಿ/ಪರಶು ಇರುತ್ತಿತ್ತು. ಈ ಸಲಕರಣೆಗಳಿಂದ ಆ ಬಿಳಿ ಮನುಷ್ಯನನ್ನು ರಕ್ಷಿಸಿ, ಮನೆಗೆ ಕರೆದುಕೊಂಡು ಹೋಗಿ ಕಾಡಿನ ವೈದ್ಯರಿಂದ ಔಷಧೋಪಚಾರ ಮಾಡಿಸಿದರು. ಕೆಲವು ವಾರದ ನಂತರ ಜನರಲರನ್ನು ಮರಳಿ ಚಪ್ಪಾರಪಡವಿಗೆ ಬಿಟ್ಟು ಬರುವಾಗ ಕಾಡಿನ ದಾರಿಯಲ್ಲಿ ಬಿಟ್ಟ ಉಪ್ಪಿನ ಮೂಟೆ ಅಪ್ಪಜ್ಜ ಮನೆಗೆ ತಂದರು.

ನಂತರ ಮತ್ತೊಮ್ಮೆ ಅಪ್ಪಜ್ಜನನ್ನು ಜನರಲ್ ಭೇಟಿಯಾಗಿ, ಒಂದು ದೊಡ್ಡ ಕೋವಿಯನ್ನು ಅಪ್ಪಜ್ಜನಿಗೆ ಉಡುಗೊರೆಯಾಗಿ ಕೊಟ್ಟರು, ಅದನ್ನು ಅಪ್ಪಜ್ಜ ಎಂದೂ ಉಪಯೋಗಿಸಲಿಲ್ಲ. ಕಾಡಿನ ಜನರಿಗೆ ವಿದ್ಯಾಭ್ಯಾಸದ ಪ್ರಾಮುಖ್ಯತೆಯನ್ನು ಆ ಜನರಲ್ ಮನಗಾಣಿಸಿದರು. ಅಪ್ಪಜ್ಜ , ಹಾಜಿ ಹಾಗೂ ಜನರಲ್ ಸೇರಿ ಚಪ್ಪಾರಪಡವಿನಲ್ಲಿ ಶಾಲೆ ೭ನೇ ತರಗತಿಯವರೆಗೂ ಆರಂಭವಾಯಿತು. ದೊಡ್ಡಪ್ಪ ಮೊದಲು ಸೇರಿದರು. ಶಾಲೆಗೆ ಬರುವ ಮಕ್ಕಳ ಜೊತೆ ಕಾಡುದಾರಿಯಲ್ಲಿ ಅಪ್ಪಜ್ಜ ಹೋಗುವುದಲ್ಲದೆ, ಯಾವ ರೀತಿ ಸುರಕ್ಷಿತವಾಗಿ ಕಾಡಿನೊಳಗೆ ನಡೆಯದಾಡಬೇಕು ಮುಂತಾದುವನ್ನು ಅಪ್ಪಜ್ಜ ಅಭ್ಯಾಸ ಮಾಡಿಸಿದರು. ಅದೂ ಅಲ್ಲದೆ ಶಾಲಾ ಮಕ್ಕಳಿಗೆ ಬೇಕಾದ ಮಧ್ಯಾಹ್ನದ ಮಾಂಸ ಅಪ್ಪಜ್ಜ ಬೇಟೆಯಾಡಿ ತಂದು ಕೊಡುತ್ತಿದ್ದರು. ಅದು ಕಡವೆ, ಜಿಂಕೆ, ಕಾಡೆಮ್ಮೆ, ಕಾಡುಕೋಣ,…. ಮುಂತಾದುವು. ಹಾಗೂ ಅಪ್ಪಜ್ಜ ಬೆಳೆಯುತ್ತಿದ್ದ ಧಾನ್ಯಗಳೂ.
ಕರಿಪ್ಪಾಲದ ದಕ್ಷಿಣ ಭಾಗ ಚಪ್ಪಾರಪಡವಿನಿಂದ ಉತ್ತರದ ಪೆರುಂಪಡವು ವರೆಗಿನ ಕಾಡು, ಪೂರ್ವದ ಆಲಕ್ಕೋಡಿನಿಂದ ಪಶ್ಚಿಮದ ಕೋಯಿಪ್ರಾ ವರೆಗಿನ ಕಾಡು ಅಪ್ಪಜ್ಜನಿಗೆ ಒಂತಾರ ಇಂದಿನ ಮಕ್ಕಳ ಅಂಗನವಾಡಿಯಂತೆ ಆಗಿತ್ತು. ಕೊಯಿಪ್ರಾ ಜೇನು ತುಪ್ಪದ ಎರಡನೇ ಸ್ಥಾನ ಹಾಗೂ ಬರೇ ಕಾಡು ಕೋಳಿಗಳು ಯಥೇಚ್ಛವಾಗಿ ಸಿಗುತ್ತಿತ್ತು. ನರಿ, ಗುಳ್ಳೆನರಿ,ಕಾಡುಪಾಪ ಇವೆಲ್ಲಾ ಅಲ್ಲೇ. ಜಾಸ್ತಿ ಜೇನು ಹಾಗೂ ಕರಡಿ ಇರುವ ಪ್ರದೇಶ ಆಲಕ್ಕೋಡ್. ಅಪ್ಪಜ್ಜನ ಸಮಯದಲ್ಲಿ ಸಿಂಹಗಳು ವಂಶನಾಶವಾಗಿ ಒಂದು ಉಳಿದಿತ್ತು.
ಚಪ್ಪಾರಪಡವಿನಲ್ಲಿ ಎಂಟನೇ ತರಗತಿ ಬಂದಿದ್ದು ಸುಮಾರು ವರುಷಗಳ ನಂತರ. ದೊಡ್ಡಪ್ಪ ೭ನೇ ತರಗತಿ ಓದುವಾಗ, ಟಪ್ಪಾಲು/ಅಂಚೆಯನ್ನು ಅಲ್ಲಿರುವ ಅಕ್ಕಪಕ್ಕದ ಗುಡ್ಡಗಾಡು ಪ್ರದೇಶದಲ್ಲಿ ತಲುಪಿಸಲು, ಕಾಡಿನಲ್ಲಿ ನಡೆಯುವ ಸಾಮರ್ಥ್ಯ ಇರುವ ಏಕೈಕ ವ್ಯಕ್ತಿ ದೊಡ್ಡಪ್ಪನಾದುದರಿಂದ ಹಾಗೂ ಆ ಸಮಯದಲ್ಲಿ ಅಪ್ಪಜ್ಜ ಸುಧೀರ್ಘ ಹಾಸಿಗೆ ಹಿಡಿದುದರಿಂದ ಆ ಕೆಲಸಕ್ಕೆ ದೊಡ್ಡಪ್ಪ ಸೇರಿದರು. ಕೆಲಸ ಮಾಡುತ್ತಲೇ ೭ನೇ ತರಗತಿ ಪಾಸಾದರು. ಅಪ್ಪ ಅಲ್ಲಿಯೇ ಕಲಿತು SSLC ಮೊದಲ ಬ್ಯಾಚ್ ಆಗಿ ಪಾಸಾದರು. ಇಂದೂ ಆ ಶಾಲೆಯ ಗೊಡೆಯಲ್ಲಿ ಅಪ್ಪನ ಬ್ಯಾಚು ರಾರಾಜಿಸುತ್ತಿದೆ.
ಜನರಲ್ ರವರ ಭೇಟಿ ಶಾಲೆ ತೆರೆಯಲು ಕಾರಣವಾಯಿತಾದರೂ, ಅಪ್ಪಜ್ಜನ ಕಾಡು ಕಣ್ಮರೆಯಾಗಲು ಅದು ಮೊದಲ ಹೆಜ್ಜೆಯಾಯಿತು.
ನಿಮ್ಮವ ನಲ್ಲ
*ರೂಪು*
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)
